Sunday 9 March 2014

ಆತ್ಮ ಸಖಿ:

ಆತ್ಮ ಸಖಿ:
ಅವಳು ಉಪಮೆಗೆ ತಕ್ಕಂತ ಭೂಮಿ ತೂಕದವಳು
ಅವಳು ಜನನಿ, ವಿಶ್ವ ರಹಸ್ಯ ಹೊತ್ತ ಮಹಾಯೋನಿ
ಒಡಲಲಿ ಅಡಗಿಸಿಕೊಂಡ ಅಗ್ನಿದಿವ್ಯ
ಮೊಗದಿ ಅರೆಕ್ಷಣ ಮಾಸದ ನಸುನಗೆ
ಬಿದ್ದ ಪುರುಷನ ಕೈ ಹಿಡಿದೆತ್ತುವ ಪ್ರಕೃತಿ
ಎತ್ತಿದನಂತರ ಮುಂಗೈ ಸವರಿದ ಭರವಸೆ
ಒಂದು ಕಿರುನಗೆಯಲ್ಲಿ ಅನಂತ ಮಹತ್ವಾಕಾಂಕ್ಷೆ
ದಿಗ್‍ದಿಗಂತದೆತ್ತರಕೆ ಏರಿ ನಿಲ್ಲುವ ಭಾವದ ಮಾಳಿಗೆ
ವಿಶ್ವಾಸದ ಗೋಡೆಗೆ ನಂಬಿಕೆಯ ತಳಪಾಯ
ವಿಧ ವಿಧದ ಹಲವು ಬಗೆ ಬಣ್ಣ ಬಳಿದು
ರವಿ ಸತ್ತು ಮಲಗುವ ಪ್ರತಿ ಸಂಜೆಯಲೂ
ಮತ್ತೆ ಮತ್ತೆ ನಿರ್ಮಿಸುತ್ತಾಳೆ ಕನಸಿನ ಆಶಾ ಗೋಪುರ
ಸಂಸಾರದ ಹೆಬ್ಬಾಗಿಲಲ್ಲಿ ಪ್ರೀತಿಯ ಗಂಟೆ;
ಕಟ್ಟುವಳು ಅಭಿಸಾರಿಕೆ ಆಸ್ಥೆಯಿಂದ
ಅಲ್ಲಿ ಸ್ತಭ್ದವಾಗಬೇಕು ಜಗ; ಜೋರ್ಗಾಳಿ ಸಹ ಬೀಸದಂತೆ
ಗಂಟೆ ಢಣ್ ಎಂದಾಗ ಮಾತ್ರ ವಾಸ್ತವ
ಇಲ್ಲವಾದರೆ ಅಗಂತುಕ ಲೋಕದಲ್ಲಿ ಸುದೀರ್ಘ ಪಯಣ
ಜೊತೆಯಲ್ಲಿ ಹೆಗಲು ತಬ್ಬಿ ನಡೆವ ಯಾಮಿನಿ
ಅಂತರಂಗ ಆತ್ಮ ಸಖಿಯೊಂದಿಗೆ ಕಲ್ಪನಾ ವಿಲಾಸ
ವಾತ್ಸಲ್ಯದ ಘಮ ಘಮಸಿವ ಪಾಯಸ
ಮಮತೆಯು ಹಾಲಿನಲಿ ಬೇಯಿಸುವ ಪರಮಾನ್ನ
ಪಾಕಶಾಲೆಯಲಿ ಪರಿಣಿತೆ ಪರಿಪೂರ್ಣ ಗೃಹಿಣಿ; ಅನ್ನಪೂರ್ಣೆ
ಸಾಕು ಸಾಕೆಂದರೂ ಬಡಿಸುವ ಕೈ ಹಿಂದೆ ಸರಿಯದು
ಆದಿತ್ಯರು ಸೇವಿಸಿದ್ದ ಅಮೃತ ಅವಳ ಕೈ ಅಡುಗೆ
ಅಕ್ಕರೆಯ ಅಪ್ಪುಗೆಯ ಅವಳಿಗೆ ಅಮಿತ ಆನಂದ
ವಿಸ್ತಾರ ಪ್ರಪಂಚದ ಅಧಮ್ಯ ಚೈತನ್ಯ ಶಕ್ತಿಯ ಮೂಲ ಅವಳು
ಮೊಗೆದಷ್ಟೂ ಉಕ್ಕಿ ಹರಿವ ಅನಿರ್ವಚನೀಯ ನೆಮ್ಮದಿಯ ಚಿಲುಮೆ
ತನ್ನ ಚೌಕಟ್ಟಿನೊಳಗೆ ಬಂಧಿ ಅವಳು -
ಧರೆಗಿಳಿದ ಶಾಪಗ್ರಸ್ತ ಗಂಧರ್ವಕನ್ಯೆ
ಕೊನೆ ಮೊದಲಿಲ್ಲದ ನಿರ್ವಹಿಪಳು ನಿರಂತರ ಸೇವೆ
ಅವಳು ಎಲ್ಲರ ಮಾತೆ, ಭೂಮಿತೂಕದ ಕ್ಷಮೆಯಾ ಧರಿತ್ರಿ
ಚಿರಂಜೀವಿಸಲಿ ಸರ್ವತ್ರ ಸೌಭಾಗ್ಯವತಿಯಾಗಿ
ನಿತ್ಯ ಸುಮಂಗಲಿ ಸತಿಸಹಗಮನೆ
ತನ್ನದೇ ಅಸ್ಥಿತ್ವವ ಮರೆತು ಬಾಳುವ ತ್ಯಾಗಿ
ಸಂಕಟಗಳ ನುಂಗಿಕೊಂಡು ನರಳುವ
ನೋವುಗಳ ಮರೆಮಾಚಿ ನಗುವ
ಒಡಲಿನಲ್ಲಿ ಅಗ್ನಿಪರ್ವತದ ಲಾವಾರಸವಡಗಿಸಿ ನೀರವ ಮೌನ ಧರಿಸುವ
ಅವಳು ಶೀತಲ ವಾಹಿನಿಯಂತೆ
ಅನವರತ ಸರಳ ಶೋಭಿತ ಶೋಡಷಿ
                                              -ವಿಶ್ವಾಸ್ ಭಾರದ್ವಾಜ್
(ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕೇವಲ ಅವಳೆನ್ನುವ ಆತ್ಮಸಖಿಗೆ ಅರ್ಪಿಸಲು ಬರೆದಿದ್ದು)











No comments:

Post a Comment