Friday 28 March 2014

ಮರಣ ಸ್ವಪ್ನ



ಮರಣ ಸ್ವಪ್ನ:
ಸ್ವರ್ಗ ವಂಚಿತ ಶಾಪಗ್ರಸ್ಥ; ಪಾಪಗಳ ಹೊತ್ತ ತಪ್ಪಿತಸ್ಥ
ಸ್ವರ್ಗ ನರಕಗಳ ನಡುವಿನ ತ್ರಿಶಂಕು ಯಾತ್ರೆ
ಅತೋಭ್ರಷ್ಟ ತತೋ ಭ್ರಷ್ಟ; ಕಡು ಪಾಪಿ
ಪವಿತ್ರ ಪ್ರೇತಾತ್ಮವಾಗಲಿಚ್ಛಿಸುವವ
ರಣರಂಗದಿಂದ ಹಿಮ್ಮೆಟ್ಟಿದ ರಣಹೇಡಿ
ಮತ್ತೆ ಮರಳುವಾಸೆ ಮರಳಿ ಬಾರದ ಪ್ರಪಂಚಕ್ಕೆ
ಅಲ್ಲಿಂದಲೇ ಬಂದ ಶಾಶ್ವತದ ಮೂಲ ಮನೆಗೆ
ಬಂದವರೆಲ್ಲ ಮರು ಮಾತಿಲ್ಲದೆ ಹಿಂತಿರುಗುವಲ್ಲಿಗೆ
ಹತ್ಯೆಯಾದರೂ ಆತ್ಮ ಪುನೀತ…!
ನನ್ನ ಮೂಲ ಮನೆಯಲಿ ಕುಳಿತು ವೀಕ್ಷಿಸಿದರೆ,
ಸುದ್ದಿಗಳ ಪ್ರವಾಹದಲ್ಲಿ ನನ್ನ ಸಾವಿನ ವಿಧ್ಯಮಾನ-ದೂರದರ್ಶನದಿ
ಕೆಂಪುತುಟಿಯ ಆಡಿಸುತಾ ಲಲನೆ ಹೇಳಿದ ಶೋಕವಾರ್ತೆ
ನಾನು ಜನಪ್ರಿಯ, ಖ್ಯಾತ, ಮೇದಾವಿ…! ಹೌದೌದು
ನನ್ನ ಸಾವಿಗೆ ಹಲವು ಸಾವಿರ ಅಶೃತರ್ಪಣ
ನನ್ನ ಅನುಯಾಯಿಗಳ ಕಣ್ಣಲ್ಲಿ ದುಃಖದ ಪ್ರವಾಹ
ಉಮ್ಮಳಿಸಿ ಬರುವ ಅಳುವನ್ನು ಸೆರಗ ತುದಿಯಲಿ
ಒತ್ತಿ ಹಿಡಿವ ಮಾತೃ ಹೃದಯಿ ಅಮ್ಮಂದಿರು
ಮನಸಿನಾಳದಲ್ಲಿ ಹೆಪ್ಪುಗಟ್ಟಿರಬಹುದು ನೋವು
ಬಿಕ್ಕುವ ಧನಿಗಳ ಹಿಂದಿರುವ ವಿಷಾದಕ್ಕೆ ಕಾರಣ ನನ್ನ ಸಾವು
ನನ್ನ ಅಂತ್ಯಕ್ಕೂ ಈ ಮಂದಿ ಮರುಗುವರೇ…?
ನಾನು ಪಾಪಿ…!
ನನಗೆ ಈ ಮಟ್ಟಿನ ಅಭಿಮಾನಿಗಳಿದ್ದಾರಾ…?
ನಾನು ಗುರುತಿಸುವಲ್ಲಿ ಸೋತೆನೇ…?
ಇಷ್ಟಕ್ಕೂ ನನ್ನ ಆತ್ಮಹತ್ಯೆಗೆ ನಿಖರ ಕಾರಣವೇನು…?
ಬದುಕನೆದುರಿಸಲಾರದ ಹೇಡಿತನ…!
ಹೌದು ಜೀವನದ ಸವಾಲುಗಳಿಂದ ಪಲಾಯನವಾದ
ಯಾವುದೋ ಕ್ಯಾಮರ ಕಣ್ಣಲ್ಲಿ ಅಪ್ಪನ ಮುಖ
ಅವನು ಎಂದಿನಂತೆ ನಿರ್ಭಾವುಕ, ನಿರ್ಲಪ್ತ…..!
ಅಪ್ಪನ ಕಣ್ಣಲ್ಲಿ ನೀರಾಡುವುದಿಲ್ಲ;
ಜ್ವಾಲಾಮುಖಿಯ ಲಾವಾದಂತೆ ಒಳಗೆ ಕುದಿತ
ಆದರೆ ಹೆತ್ತವಳಾದ ಆ ಜೀವ…?
ಅದರ ಕಣ್ಣುಗಳಿಂದ ಧುಮ್ಮಿಕ್ಕುವ ಜಲಪಾತಕ್ಕೆ ತಡೆಯಿಲ್ಲ
ಸಾವಿಗಿಂತ ಪರ್ಯಾಯ ಇರಲಿಲ್ಲವೇ….?
ಮೊದಲ ಬಾರಿಗೆ ದುಡುಕಿನ ನಿರ್ಧಾರ ಕೆಡುಕೆನಿಸಿದೆ
ಆದರೆ ನಾನು ಮರಳಿ ಹೋಗದಷ್ಟು ದೂರ ಬಂದಾಯ್ತು
ಹಿಂದೆ ಹೋಗುವ ಮಾರ್ಗ…?
ಹುಡುಕಿದರೆ ಸಿಗಲಾರದು, ಅಡಿರಿದೆ ಕತ್ತಲು
ಪಶ್ಚಾತ್ತಾಪದ ಬೇಗುದಿ-
ಅಪ್ಪನ ತಣ್ಣಗಿನ ದುಃಖ, ಅಮ್ಮನ ಭೋರ್ಗರೆತ
ನನ್ನ ಹುಟ್ಟಿನ ಉದ್ದೇಶ, ಬದುಕಿದ್ದ ಅರ್ಥ
ಸಾವಿನ ಸಾರ್ಥಕ್ಯವೇನು…?
ಮೃತ್ಯು ದೇವತೆಗೆ ದೀರ್ಘದಂಡ ನಮಸ್ಕಾರ ಹಾಕಿದರೆ
ಬದುಕಿನ ದಾರಿಗೆ ಕರೆದೊಯ್ಯುವಳೇ…?
ನನಗೆ ಲೌಕಿಕ ಬದುಕು ಹಿಂತಿರುಗಿ ಬೇಕು
ನನಗೆ ಗತದ ಜೀವನ ಬೇಕು, ನನ್ನ ಜನ ಬೇಕು
ಅವರ ಸಾಂಗತ್ಯದ ಪ್ರೀತಿ ಬೇಕು
ಹಡೆದವಳ ಮಡಿಲಿನ ಬೆಚ್ಚಗಿನ ಬಿಸುಪು ಬೇಕು
ಪೋಷಕನ ಬಾಹುಗಳ ಅಪ್ಪುಗೆ ಬೇಕು
ಒಂದೇ ಸಮನೆ ಕಿರುಚಿದರೆ ಮೈದಡಿವಿ ಎಬ್ಬಿಸಿದ್ದು
ಮತ್ತದೇ ವಾತ್ಸಲ್ಯಮಯಿ ಜನನಿ ಆತಂಕದ ಕಂಗಳಿಂದ
-(ವಿಪ್ರವಿಶ್ವತ್)ವಿಶ್ವಾಸ್ ಭಾರದ್ವಾಜ್







No comments:

Post a Comment