Tuesday, 30 December 2014

ಹ್ಯಾಮ್ಲೆಟ್ ನಾಟಕದ ವಿಮರ್ಷೆ

ಅತೃಪ್ತ ಆತ್ಮದ ಅಸ್ತ್ಯವ್ಯಸ್ತ ಸ್ಥಿತಿಯಲ್ಲಿ ತನ್ನ ಭಗ್ನ ದೇಹಕ್ಕೆ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ:
ಅತೃಪ್ತ ಆತ್ಮ ಹೊಂದಿದ ಅಸ್ತ್ಯವ್ಯಸ್ತ ಸ್ಥಿತಿಯಲ್ಲಿ ತನ್ನ ಭಗ್ನ ದೇಹಕ್ಕೆ ಕತ್ತಿಯಲ್ಲಿ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ..
ಶೇಕ್ಸ್ಪಿಯರ್ನ ಅತ್ಯಂತ ಜನಪ್ರಿಯ ನಾಟಕ ಹ್ಯಾಮ್ಲೆಟ್ ಉಪಸಂಹಾರಗೊಳ್ಳುವುದು ಹೀಗೆ.. ರಾಮಚಂದ್ರ ದೇವ ಕನ್ನಡಕ್ಕೆ ತಂದ ಹ್ಯಾಮ್ಲೆಟ್ಗೆ ಹೊಸ ಪರಿಕಲ್ಪನೆ ನೀಡಿ ರಂಗದ ಮೇಲೆ ತಂದಿದ್ದರು ನಿರ್ದೇಶಕ ಅವಿನಾಶ್ ಷಟಮರ್ಶನ.. ಹನುಮಂತ ನಗರದ ಕೆ.ಹೆಚ್ ಕಲಾಸೌಧದಲ್ಲಿ ಹ್ಯಾಮ್ಲೆಟ್ ದೀರ್ಘ 2 ಗಂಟೆಗಳ ಕಾಲ ಪ್ರೇಕ್ಷಕರನ್ನು ಖುರ್ಚಿಯ ತುದಿಯಲ್ಲಿ ತಂದು ಕೂರಿಸಿದ್ದ..
ಶೇಕ್ಸ್ ಪಿಯರ್ನ ಉಳಿದ ದುರಂತ ನಾಟಕಗಳಂತೆ ಹ್ಯಾಮ್ಲೆಟ್ ನಲ್ಲೂ ಹಲವು ದುರಂತದ್ದೇ ಆಯಾಮಗಳಿವೆ.. ತಂತ್ರ-ಕುತಂತ್ರ-ಷಡ್ಯಂತ್ರಗಳ ರಾಜಕಾರಣದಲ್ಲಿ ಹ್ಯಾಮ್ಲೆಟ್ ನ ನವಿರಾದ ಪ್ರೀತಿಯೂ ಬಣ್ಣ ಕಳೆದುಕೊಳ್ಳುತ್ತದೆ.. ಕಿರೀಟಕ್ಕಾಗಿ ರಾಣಿಗಾಗಿ ತನ್ನ ಅಪ್ಪನ ಕೊಲೆಯಾಯಿತು ಅನ್ನುವ ಸಂಗತಿ ಗೊತ್ತಾದ ಕೂಡಲೆ ಹ್ಯಾಮ್ಲೆಟ್ ನ ಮನಸಿನಲ್ಲಿ, ಹ್ಯಾಮ್ಲೆಟ್ ನ ಚಿತ್ತದಲ್ಲಿ, ಹ್ಯಾಮ್ಲೆಟ್ ಪ್ರಜ್ಞೆ ಹಾಗೂ ಪ್ರಕೃತಿಯಲ್ಲಿ ಉಂಟಾಗುವ ಬಹುವಿಧದ ಬದಲಾವಣೆಗಳು ಎಳ್ಳಷ್ಟೂ ವ್ಯೆತ್ಯಾಸವಿಲ್ಲದಂತೆ ರಂಗಪ್ರಯೋಗಗೊಂಡಿದೆ.. ಕಥೆಗೆ ತಿರುವು ನೀಡುವ ಹ್ಯಾಮ್ಲೆಟ್ ತಂದೆಯ ಪ್ರೇತ ರಂಗದ ಮೇಲೆ ಮೂರ್ನಾಲ್ಕು ಸುತ್ತು ತಿರುಗಿ ಪ್ರೇಕ್ಷಕರ ಮನಸಿನಲ್ಲಿ ಅಚ್ಚೊತ್ತುತ್ತದೆ..
ಪ್ರಿನ್ಸ್ ಹ್ಯಾಮ್ಲೆಟ್ ತನ್ನನ್ನು ನಿರ್ವಂಚನೆಯಿಂದ ಪ್ರೀತಿಸುತ್ತಾನೆ.. ಇದಕ್ಕಾಗಿ ಆತ ಸ್ವರ್ಗದಲ್ಲಿರುವ ಪವಿತ್ರ ಶಕ್ತಿಗಳ ಮೇಲೆ ಆಣೆ ಮಾಡಿ ಹೇಳಿದ ಅನ್ನುವ ನಂಬುಗೆಯ ಸಮರ್ಥನೆ ನೀಡುವ ಒಫೀಲಿಯಾಳಿಗೆ, ಅವಳ ತಂದೆ ಪೋಲೋನಿಯಸ್ ನೀಡುವ ಉತ್ತರ ಅದು ಗುಬ್ಬಚ್ಚಿಗಳನ್ನು ಹಿಡಿಯುವ ಬಲೆ.. ಇಲ್ಲಿ ಒಫೀಲಿಯಾಳ ಪ್ರೀತಿ ಅಮಾಯಕ ಎಂದು ಬಯಸುವ ಪೋಲೋನಿಯಸ್ ಪ್ರಿನ್ಸ್ ಹ್ಯಾಮ್ಲೆಟ್ನನ್ನು ಮೋಸಗಾರ ಎಂದು ಅಂದಾಜಿಸುತ್ತಾನೆ.. ಇಂತಹ ಹಲವು ಸನ್ನಿವೇಶಗಳನ್ನು ಹಾಗೂ ಸಂಭಾಷಣೆಗಳನ್ನು ನಾಟಕದಲ್ಲಿ ಯಶಸ್ವಿಯಾಗಿ ತೋಗಿಸಿಕೊಂಡು ಹೋಗಲಾಗಿದೆ..
ಯಾವ ವಿಷ ಸರ್ಪ ತನ್ನನ್ನು ಕಚ್ಚಿತೋ ಅದೇ ವಿಷ ಸರ್ಪ ಈಗ ಡೆನ್ಮಾರ್ಕ್ ನ ಸಿಂಹಾಸನದಲ್ಲಿ ಕುಳಿತಿದೆ.. ರಾಣಿಯನ್ನು ಮೋಹ ಪರವಶಗೊಳಿಸಿ ಕಿರೀಟ ತೊಟ್ಟಿದೆ.. ಈ ಸಂಚಿಗೆ ತಾನು ಬಲಿಯಾದೆ. ಈ ಸೇಡಿಗೆ ನೀನು ತಕ್ಕ ಪ್ರತ್ಯುತ್ತರ ನೀಡು ಅಂತ ಆದೇಶ ನೀಡುವ ಭೂತ, ಹ್ಯಾಮ್ಲೆಟ್ ನ ತಂದೆ ಡೆನ್ಮಾರ್ಕ್ ನ ಮಾಜಿ ಪ್ರಭು.. ಅತ್ತ ಕ್ಲಾಡಿಯಸ್ ಅನ್ನುವ ಹೊಸ ಅರಸ ಡೆನ್ಮಾರ್ಕ್ ನ ಸಿಂಹಾಸನವನ್ನು ಅಲಂಕರಿಸುತ್ತಿರುತ್ತಾನೆ.. ನಿನ್ನೆಯವರೆಗೂ ನನ್ನ ಅತ್ತಿಗೆಯಾದ ಗರ್ಟ್ರೂಡ್ ಇಂದು ನನ್ನ ರಾಣಿ ಎಂದು ಹಿಗ್ಗುವ ಕ್ಲಾಡಿಯಸ್ ಹಾವು ಕಡಿದು ಸತ್ತ ಅಣ್ಣನ ಸಾವಿಗೆ ಸಂತಾಪಿಸಿ ಗರ್ಟ್ರೂಡ್ ಳ ಕೈ ಚುಂಬಿಸುತ್ತಾನೆ.. ಈ ಎರಡೂ ದೃಶ್ಯಗಳನ್ನು ಒಂದೇ ವೇದಿಕೆಯಲ್ಲಿ ಒಂದೇ ಸಂದರ್ಭದಲ್ಲಿ ಪ್ರದರ್ಶಿಸಿದ್ದು ನಾಟಕದ ಗಾಂಭೀರ್ಯತೆಯನ್ನು ಹೆಚ್ಚಿಸಿ ಕಥೆಯ ನಿರೂಪಣೆಯನ್ನು ಸುಗಮಗೊಳಿಸಿತು..
ತೋಟದಲ್ಲಿ ಅಸ್ವಸ್ಥನಾಗಿ ಮಲಗಿದ್ದ ಗಂಡ, ತನ್ನ ಕಾಲದ ಬಳಿಕ ನೀನು ಬೇರೆ ಗಂಡನನ್ನು ಹುಡುಕಿಕೋ ಅಂದಾಗ ನಾನು ನಿಮ್ಮ ಹೊರೆತು ಬೇರೆ ಗಂಡನ ಕಲ್ಪನೆ ಮಾಡಿಕೊಂಡರೆ ನನ್ನ ಈ ಬದುಕಿಗೆ ಸ್ವರ್ಗದ ಶಕ್ತಿಗಳ ಶಾಪವಿರಲಿ ಎಂದು ವಿದೇಯ ಮಾತುಗಳನ್ನಾಡಿದ್ದು ಗರ್ಟ್ರೂಡ್ ಗೆ ಮರೆತೇ ಹೋಗಿರುತ್ತದೆ. ಇದೇ ಸಂದರ್ಭದಲ್ಲಿ ಸಂಚು ಹೂಡಿದ್ದ ಚಿಕ್ಕಪ್ಪನ ಕ್ರೂರ ನಿರ್ಧಾರಕ್ಕೆ ಕುದಿಯುವ ಹ್ಯಾಮ್ಲೆಟ್ ತನ್ನ ತಾಯಿಯ ನಡತೆಯ ಬಗ್ಗೆಯೂ ಅಸಹ್ಯಿಸಿಕೊಳ್ಳುತ್ತಾನೆ.. ತಂದೆಯ ತಿಥಿಗೆ ಮಾಡಿದ್ದ ಅಡುಗೆ ಖಾಲಿಯಾಗುವ ಮೊದಲೇ ತಾಯಿಯ ಇನ್ನೊಂದು ಮದುವೆಯ ಭೋಜನ ತಯಾರಾಗುತ್ತಿದೆ ಎನ್ನುವ ಹ್ಯಾಮ್ಲೆಟ್ ನ ವ್ಯಂಗ್ಯದ ಮಾತು ಈ ದೃಶ್ಯಕ್ಕೆ ಬೌದ್ದಿಕ ಶ್ರೀಮಂತಿಕೆ ಒದಗಿಸುತ್ತದೆ..
ತಂದೆಯ ಸಾವಿನ ಹಿಂದಿದ್ದ ಸಂಚನ್ನು ಅರಿತ ಹ್ಯಾಮ್ಲೆಟ್ ಆ ಕ್ಷಣದಲ್ಲಿ ಅನುಭವಿಸುವ ಚಿತ್ರಹಿಂಸೆ, ಸೇಡಿನ ಉರಿ, ಪ್ರತೀಕಾರ ಜ್ವಾಲೆ, ವಿಶ್ವಾಸ ದ್ರೋಹದ ಕಂಪನ, ಪಿತೃ ವಾಕ್ಯ ಪರಿಪಾಲನೆಯ ಕರ್ತವ್ಯ ಇವೆಲ್ಲವೂ ಯಥಾವತ್ತು ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದ ಹಿಂದಿನ ರಂಗಪ್ರಯೋಗಗಳಂತೆ ಮೂಡಿಬಂದಿದೆ.. ತಂತ್ರಕ್ಕೊಂದು ಪ್ರತಿತಂತ್ರ ಹಣೆವ ಹ್ಯಾಮ್ಲೆಟ್ ಪ್ರಯತ್ನದ ಹಿಂದಿನ ತಲ್ಲಣ, ಹೆಣಗಾಟ ಹಾಗೂ ಒದ್ದಾಟಗಳು ನಾಟಕದ ಕೆಲವು ದೃಶ್ಯಗಳಲ್ಲಿ ಮನೋಜ್ಞವಾಗಿ ಮೂಡಿಬಂದಿದೆ
ವಿಟ್ಟಿನ್ ಬರ್ಗ್ ವಿಶ್ವವಿದ್ಯಾನಿಲಯದಿಂದಲೂ ಹ್ಯಾಮ್ಲೆಟ್ ನ ಒಡನಾಡಿಯಾದ ಹೊರೋಷಿಯೋಗೆ ಹ್ಯಾಮ್ಲೆಟ್ ನ ಅಂತರಾಳದ ವೇದನೆ ಅರ್ಥವಾಗುತ್ತದೆ.. ಹುಚ್ಚನಂತೆ ನಟಿಸಿ ಸೇಡು ತೀರಿಸಿಕೊಳ್ಳುವ ತನ್ನ ಕಾರ್ಯತಂತ್ರವನ್ನು ಹ್ಯಾಮ್ಲೆಟ್ ಹೊರೋಷಿಯೋ ಬಳಿ ಹೇಳಿಕೊಳ್ಳುವ ಪ್ರಸಂಗ ಇಡೀ ಪ್ರಸಂಗಕ್ಕೆ ಜೀವಂತ ಸಾಕ್ಷಿಯೊಂದರ ಸೃಷ್ಟಿಯಂತೆ ಗೋಚರಿಸುತ್ತದೆ.. ಕೊನೆಗೆ ಹ್ಯಾಮ್ಲೆಟ್, ಒಫೀಲಿಯಾ, ಕ್ಲಾಡಿಯಸ್, ಗರ್ಟ್ರೂಡ್, ಪೋಲೋನಿಯಸ್, ಲಾರ್ಟೆಸ್ ಎಲ್ಲರೂ ಸತ್ತಾಗ ಇಡೀ ವೃತ್ತಾಂತಕ್ಕೆ ಸಾಕ್ಷಿಯಾಗಿ ಉಳಿಯುವ ಏಕೈಕ ವ್ಯೆಕ್ತಿ ಹೊರೋಷಿಯೋ ಮಾತ್ರ.
.
ಹ್ಯಾಮ್ಲೆಟ್ ನಲ್ಲಿ ಉತ್ಸಾಹದ ಕಾರಂಜಿ ಚಿಮ್ಮಿ ಉಕ್ಕುವ ತಾರುಣ್ಯವಿತ್ತು.. ಡೆನ್ಮಾರ್ಕ್ ನ ಉತ್ತರಾಧಿಕಾರಿ ಎನ್ನುವ ಹಮ್ಮಿತ್ತು.. ಯುದ್ದ ರಾಜ್ಯಾಡಳಿತ, ಅಧಿಕಾರ ಮುಂತಾದ ಮಹತ್ವಾಕಾಂಕ್ಷೆಗಳಿದ್ದವು, ಮುಖ್ಯವಾಗಿ ಒಫೀಲಿಯಾಳ ಒಲವಿನ ಬಂಧನದಲ್ಲಿ ಅರ್ಪಿಸಿಕೊಂಡು ಧನ್ಯತೆ ಪಡೆವ ಹೆಬ್ಬಯಕೆಯಿತ್ತು.. ಒಫೀಲಿಯಾಳ ಹೆಜ್ಜೆ ಸದ್ದುಗಳ ಆಲಿಸುವ, ಅವಳು ಬರುವ ದಾರಿಯ ಅವಲೋಕಿಸುವ, ಅವಳ ಕಂಗಳನ್ನು ದಿಟ್ಟಿಸುವ, ಅವಳ ಸ್ಪರ್ಷಕ್ಕಾಗಿ ಹಾತೊರೆವ ಸ್ಪಷ್ಟ ತುಡಿತಗಳಿದ್ದವು..
ತಂದೆಯ ದುರಂತ ಸಾವು, ಅದರ ಹಿಂದಿನ ಷಡ್ಯಂತ್ರ, ಕುಯುಕ್ತಿಯ ರಾಜಕಾರಣ, ಅಮ್ಮ ಗರ್ಟ್ರೂಡ್ ಎಸಗುವ ದ್ರೋಹ, ಚಿಕ್ಕಪ್ಪ ಕ್ಲಾಡಿಯಸ್ ನ ಹೀನ ದುರಾಸೆ ಕೇವಲ ಹ್ಯಾಮ್ಲೆಟ್ ನ ಯೌವನದ ಭಾವಗಳನ್ನು ಮಾತ್ರ ಕೊಲ್ಲುತ್ತಾ ಹೋಗುವುದಿಲ್ಲ, ಜೊತೆಗೆ ಆತನ ನೆಮ್ಮದಿ, ಪ್ರೀತಿ, ಕೊನೆಗೆ ಒಫೀಲಿಯಾಳ ಪ್ರೇಮದ ಆರಾಧನೆಯನ್ನೂ ಪ್ರತಿಕ್ಷಣ ನಾಶಪಡಿಸುತ್ತಾ ಹೋಗುತ್ತದೆ.. ಹ್ಯಾಮ್ಲೆಟ್ ಹುಚ್ಚನ ನಟನೆ ಮಾಡುತ್ತಾನೋ ಅಥವಾ ನಿಜವಾಗಿಯೂ ಹುಚ್ಚನಾಗಿಬಿಟ್ಟಿದ್ದಾನೋ ಅನ್ನುವಷ್ಟರ ಬದಲಾವಣೆ ಆತನ ವ್ಯೆಕ್ತಿತ್ವದಲ್ಲಾಗುತ್ತದೆ.. ಇದನ್ನು ರಾಜ ಕ್ಲಾಡಿಯಸ್, ರಾಣಿ ಗರ್ಟ್ರೂಡ್, ಸಿಂಹಾಸನದ ನಿಷ್ಟ ಪೋಲೋನಿಯಸ್ ನಂಬುತ್ತಾರೆ ಆದರೆ ಕೊನೆಗೆ ಒಫೀಲಿಯಾಳೂ ಹ್ಯಾಮ್ಲೆಟ್ ಗೆ ಹುಚ್ಚು ಹಿಡಿದಿದೆ ಅನ್ನುವ ಅನುಮಾನ ಕಾಡುತ್ತದಾ ಎನ್ನುವಲ್ಲಿಯೇ ಶೇಕ್ಸ್ ಪಿಯರ್ ನ ಸಾಹಿತ್ಯಕ ಮಾಂತ್ರಿಕತೆ ಕಾಣುತ್ತದೆ..
ನಾಟಕದ ಮಧ್ಯೆ ಬರುವ ನಾಟಕಕಾರರ ಪಾತ್ರ ಹ್ಯಾಮ್ಲೆಟ್ ಕಥೆಗೆ ತಾರ್ಕಿಕ ಅಂತ್ಯ ಒದಗಿಸುವ ಮಾಧ್ಯಮವಾಗುತ್ತದೆ.. ಅಂತ್ಯದಲ್ಲಿ ಹ್ಯಾಮ್ಲೆಟ್ ನ ಸೂಚನೆಯಂತೆ ಅವನ ತಂದೆಯ ಸಾವಿನ ಪ್ರಸಂಗವನ್ನು ಅಭಿನಯಿಸುವ ಈ ಮೂಲಕ ಕ್ಲಾಡಿಯಸ್, ಗರ್ಟ್ರೂಡ್ ರ ಆತ್ಮಸಾಕ್ಷಿಯನ್ನು ಕಲಕುವ, ಕೊನೆಗೆ ಪ್ರತ್ಯುತ್ತರ ತೀರಿಸಿಕೊಳ್ಳಲು ಹಚ್ಚುವ ಕಿಡಿಯಂತೆ ಗೋಚರಿಸುತ್ತದೆ..
ನಿಜಕ್ಕೂ ಹ್ಯಾಮ್ಲೆಟ್ ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿತು.. ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ಬೆಳಕು, ಹಿನ್ನಲೆ ಸಂಗೀತ, ನಿರೂಪಣೆ, ಅಭಿನಯ, ಪರಿಕಲ್ಪನೆ ಎಲ್ಲದರಲ್ಲೂ ಶ್ರದ್ಧೆಯಿತ್ತು.. ರಂಗದ ಮೇಲೆ ಆಗಾಗ ಕೆಲವು ತಾಂತ್ರಿಕ ದೋಷಗಳು ಕಂಡುಬಂದವಾದರೂ ಅದರಿಂದ ಪ್ರದರ್ಶನದ ಔಟ್ ಪುಟ್ ಗೇನೂ ಸಮಸ್ಯೆಯಾಗಲಿಲ್ಲ.. ಕೆಲವು ಪಾತ್ರದಾರಿಗಳ ಅಭಿನಯ ಸಪ್ಪೆ ಅನ್ನಿಸುವಂತಿತ್ತು ಆದರೆ ಮುಖ್ಯ ಪಾತ್ರಿದಾರಿಗಳ ಮನೋಜ್ಞ ಅಭಿನಯ ಆ ನ್ಯೂನ್ಯತೆಯನ್ನು ಮರೆಯಾಗಿಸಿತು.. ಹ್ಯಾಮ್ಲೆಟ್ ಪಾತ್ರದಾರಿಯಾಗಿ ಮಹೇಶ್ ಅಭಿನಯ ಅತ್ಯುತ್ತಮವಾಗಿತ್ತು.. ಉಳಿದ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.. ಇನ್ನುಳಿದಂತೆ ನಾಟಕಕಾರ್ತಿಯಾಗಿ ಮಧ್ಯೆ ಕಾಣಿಸಿಕೊಳ್ಳುವ ಪ್ರಿಯ ನಟನಳ ನಟನೆ ಹಾಗೂ ಆಂಗಿಕ ಅಭಿನಯ ಹಿಂದಿಗಿಂತ ಉತ್ತಮಗೊಂಡಿದೆ.. ನಾಟಕದ ನಡುವೆ ಹಿನ್ನೆಲೆ ಧ್ವನಿಯಲ್ಲಿ ಮಾತನಾಡುವ ಅವಿನಾಶ್ ನಟನೆಯ ಸೂಕ್ಷ್ಮದ ಬಗ್ಗೆ ನೀಡುವ ಖಡಕ್ ಎಚ್ಚರಿಕೆ ಹ್ಯಾಮ್ಲೆಟ್ ನ ಹೊಸ ಪ್ರಯೋಗ.. ರಂಗಾಸಕ್ತರು ಒಮ್ಮೆ ನೋಡಲೇಬೇಕಾದ ನಾಟಕ ಹ್ಯಾಮ್ಲೆಟ್, ಆದರೆ ಅಸಲಿಗೆ ಯುವರಾಜ ಹ್ಯಾಮ್ಲೆಟ್ ನ ಉದ್ದೇಶ ಈಡೇರುತ್ತದಾ..? ಒಫೀಲಿಯಾಳ ನಿರ್ವಂಚಕ ಪ್ರೀತಿಗೆ ಇದೇ ಅಂತ್ಯ ಸಿಗಬೇಕಿತ್ತಾ ಅನ್ನುವ ಅಭಿಪ್ರಾಯ ಯಾರಿಗಾದರೂ ಮೂಡದೇ ಇರಲಾರದು..
-ವಿಶ್ವಾಸ್ ಭಾರದ್ವಾಜ್
No comments:

Post a Comment