Thursday 25 December 2014

ಈ ಸಲವೂ ಶೂ ಕೊಳ್ಳಲಾಗಲಿಲ್ಲ

ಕುಡಿಕಥೆಗಳು:
ಈ ಸಲವೂ ಶೂ ಕೊಳ್ಳಲಾಗಲಿಲ್ಲ:
ಈ ಸಲ ಹೊಸ ಶೂಗಳನ್ನು ಕೊಂಡುಕೊಳ್ಳಬೇಕು ಅಂತ ಅಂದುಕೊಂಡ..
ಕಳೆದ ಮೂರು ವರ್ಷಗಳಿಂದಲೂ ಹಾಗೇ ಅಂದುಕೊಳ್ಳುತ್ತಲೇ ಇದ್ದಾನೆ ಅವನು..
ಅಡಿಕೆ ಕೊಯ್ಲು ಮುಗಿಸಿ, ಮಂಡಿಗೆ ಅಡಿಕೆ ಸಾಗಿಸಿ, ಹಣ ಬಂದು ಬ್ಯಾಂಕಿಗೆ ಬಿದ್ದ ದಿನ ಕೊಂಡುಕೊಳ್ಳಲೇ ಬೇಕು ಅನ್ನುವ ಅತಿಯಾದ ತುಡಿತ ಅವನಿಗೆ..
ಹೊಸದೊಂದು ಜೊತೆ ನೈಕಿ ಸ್ಪೋರ್ಟ್ಸ್ ಶೂ, ರಿಬಾಕ್ ಲೆದರ್ ಶೂ ಮತ್ತೊಂದು ಜೊತೆ ಬಾಟಾ ಕಂಫರ್ಟ್ ಚಪ್ಪಲಿ ಕೊಂಡುಕೊಳ್ಳಬೇಕು.. ಸ್ಪೋರ್ಟ್ಸ್ ಶೂಗೆ 5 ಸಾವಿರ, ಲೆದರ್ ಶೂಗೆ 2 ಸಾವಿರ ಚಪ್ಪಲಿಗೆ ಮತ್ತೊಂದು.. ಒಟ್ಟು ಎಂಟತ್ತು ಸಾವಿರ ಆದ್ರೂ ಬೇಕು..
ಈ ಸಲ ಏನಾದರಾಗಲಿ ಕೊಂಡುಕೊಳ್ಳಬೇಕು ಅಂದುಕೊಳ್ಳುತ್ತಾನೆ..
ಅಷ್ಟರಲ್ಲಿ ಪೇಟೆಯ ಕೋ ಆಪರೇಟಿವ್ ಬ್ಯಾಂಕಿನ ಕ್ಲರ್ಕ್ ಫೋನ್ ಮಾಡಿದ್ದ "ಸಾ, ಬಡ್ಡಿ ಇಷ್ಟಿಷ್ಟಿಷ್ಟಾಗಿದೆ ಸಾ, ಮ್ಯಾನೇಜರ್ ನಿಮ್ಮ ಬೈಗುಳ ನನ್ನ ಮೇಲೆ ಹಾಕ್ತಾನೆ ಸಾ..ಬೇಗ ಕಟ್ಟಿಬಿಡಿ ಸಾ.."
ಓಹ್! ಅಕ್ಕನಿಗೆ ಮದುವೆ ಮಾಡಿ ವರ್ಷ 5 ಆಯಿತು.. ಬಳಿಕ ಅವಳ ಬಸುರಿ-ಬಯಕೆ, ಸೀಮಂತ.. ಅಕ್ಕನ ಮೊದಲ ಮಗಳ, ಎರಡನೇ ಮಗನ ಬಾಣಂತನ ಮಾಡಿಸಿದ್ದು, ಆಮೇಲೆ ತೊಟ್ಟಿಲು ಕಳಿಸೋ ಶಾಸ್ತ್ರ, ಎರಡಕ್ಕೂ ಅನ್ನಪ್ರಾಶನ, ನಾಮಕರಣ, ಅಕ್ಷರಾಭ್ಯಾಸ, ಚಂಡಿಕೆ.. ಮತ್ತಷ್ಟು ಸಾಲ.. ಪ್ರತಿ ಸಲ ಅಡಿಕೆ ಮಂಡಿಗೆ ಹಾಕಿದ ದುಡ್ಡು ಕೈಗೆ ಬಂದಾಗ ಈ ಸಾಲಗಳಿಗೇ ಸರಿ ಹೋಗುತ್ತೆ ಇನ್ನೆಲ್ಲಿ ನೈಕಿ, ರಿಬಾಕ್, ಬಾಟಾ..?
ಈ ಸಲ ಕೊಳ್ಳಲೇಬೇಕು ಅನ್ನುವ ದೃಢ ಸಂಕಲ್ಪ ನೆನಪಾಯಿತು.. ಒಮ್ಮೆ ತನ್ನ ಕಾಲು ನೋಡಿಕೊಂಡ, ಹಾವಾಯಿ ಚಪ್ಪಲಿ ಕೊಂಚ ಮಟ್ಟಿಗೆ ಚೆನ್ನಾಗೇ ಇದೆ ಅನ್ನಿಸಿತು ಅವನಿಗೆ..ಈ ಮಳೆಗಾಲ ಕಳೆಯಲು ಇದು ಸಾಕು,, ಶೂ ಮುಂದಿನ ಬಾರಿ ಕೊಂಡರಾಯ್ತು ಅಂದುಕೊಂಡು ಗುಮಾಸ್ತನಿಗೆ ತಿರುಗಿ ಫೋನ್ ಹಾಯಿಸಿದ.. "ನಾಳೆ ಬಂದು ಬಡ್ಡಿ ಕಟ್ತೀನಿ ಅಂತ ಹೇಳು ಮ್ಯಾನೇಜರ್ ಸಾಹೇಬ್ರಿಗೆ.."

No comments:

Post a Comment