Tuesday 30 December 2014

ದೇವರು ಕಾಣೆಯಾದ ಕುಡಿಕಥೆ

ಕನಸುಗಳಲ್ಲೂ ಕಾಮಿಡಿ ಹಾಗೂ ಟ್ರಾಜಿಡಿಗಳಿವೆ.. ಇದು ಕೇವಲ ಕನಸು ಮಾತ್ರ.. ಇದನ್ನು ಓದಿದ ಮೇಲೆ ಈ ಕನಸು ಕಾಮಿಡಿಯೋ ಟ್ರಾಜಿಡಿಯೋ ನೀವೇ ನಿರ್ಧರಿಸಿ..
ಅದೊಂದು ದಿವ್ಯ ಕನಸು..
ಆ ರಾತ್ರಿ ಬಿದ್ದ ಕನಸಿನಲ್ಲಿ ವಿಶ್ವದ ಎಲ್ಲಾ ಮೂಲೆಗಳಲ್ಲಿದ್ದ ಮಂದಿರಗಳು, ಮಸೀದಿಗಳು, ಚರ್ಚುಗಳು ದಿಢೀರ್ನೆ ಮಾಯವಾಗಿಬಿಟ್ಟಿದ್ದವು..
ಅವುಗಳನ್ನು ಯಾರೋ ಕಿತ್ತು ಹೊತ್ತು ಒಯ್ದಂತೆ ಅಲ್ಲಿ ಖಾಲಿ ಜಾಗಗಳು ಮಾತ್ರ ಉಳಿದಿದ್ದವು..
ಏಕಾಏಕಿ ರಾತ್ರೋ ರಾತ್ರಿ ಸಂಭವಿಸಿದ ಈ ಘಟನೆಗೆ ವಿಶ್ವವೇ ಬೆಚ್ಚಿಬಿದ್ದಿತ್ತು..
ಆಶ್ಚರ್ಯ, ವಿಸ್ಮಯ, ಕೌತುಕ, ವಿಚಿತ್ರ, ಭಯ, ಆತಂಕ, ದುಗುಡ, ದುಃಖ, ಬೇಸರ, ಹತಾಶೆ, ಅಸಮಧಾನ, ವೇದನೆ, ಗಾಬರಿ ಎಲ್ಲ ಭಾವಗಳಿಗೂ ಈ ಘಟನೆಯ ನಂತರ ಅಸ್ತಿತ್ವ ಸಿಕ್ಕಿಬಿಟ್ಟಿತ್ತು..
ಎಲ್ಲಾ ಧರ್ಮಗಳ ಮೂಲಸ್ಥಾನ ಕಳೆದು ಹೋಗಿದ್ದು ಹೇಗೆ ಎಂದು ಆಶ್ಚರ್ಯ, ಸೋಜಿಗ, ವಿಸ್ಮಯ, ಕೌತುಕ..
ಮಠ, ಮಂದಿರ, ಮಸೀದಿ, ಚರ್ಚುಗಳ ನಾಪತ್ತೆಯ ಪರಮ ವಿಚಿತ್ರ ಘಟನೆ ಹೇಗಾಯ್ತು ಅನ್ನುವ ಹಲವು ಭಗೆಯ, ಹಲವು ಕೋನದ, ಹಲವು ಆಯಾಮದ ತರ್ಕಗಳು ಶುರುವಾಯ್ತು..
ಮುಂದೇನು..? ದೇವರು, ಸೃಷ್ಟಿಕರ್ತ, ಕರುಣಾಮಯಿ ಮುನಿಸಿಕೊಂಡಿದ್ದಾನೇನೋ ಅನ್ನುವ ಭಯ, ಆತಂಕ, ದುಗುಡ, ಗಾಬರಿ..
ಇನ್ನು ಮುಂದೆ ಆರಾಧಿಸಲು ಸ್ಥಳವೇ ಇಲ್ಲವಲ್ಲ ಅನ್ನುವ ಬೇಸರ, ಹತಾಶೆ, ಅಸಮಧಾನ..
*****
ಇದು ಹಿಂದೂಗಳ ಕೃತ್ಯವೇ..? ಮುಸಲ್ಮಾನರ ಧರ್ಮಾಂದ ದುರುಳತನವೇ ಅಥವಾ ಕ್ರಿಶ್ಚಿಯನ್ನರ ಮತಾಂತರದ ಹುನ್ನಾರವೇ..?
ಹೀಗಂತ ಬೇರೆ ಬೇರೆ ಧರ್ಮಗಳ ರಕ್ಷಕ ಸಂಘಟನೆಗಳು ಸಭೆ ಸೇರಿ ಗಂಭೀರವಾಗಿ ಚರ್ಚೆ ನಡೆಸಿದವು..
ಈ ನಡುವೆ ಸಿಖ್, ಪಾರಸಿ, ಜೋರಾಸ್ಟ್ರಿಯನ್, ಬೌದ್ಧ, ಜೈನ ಮುಂತಾದ ಸಣ್ಣ ಪುಟ್ಟ ಧರ್ಮಗಳದ್ದೂ ಪ್ರಾರ್ಥನಾ ಮಂದಿರಗಳು ಕಣ್ಮರೆಯಾಗಿವೆ ಅನ್ನುವ ಬ್ರೇಕಿಂಗ್ ನ್ಯೂಸ್ ಬಿತ್ತರಿಸತೊಡಗಿದ್ದವು 24/7ರ ಟಿವಿ ಮಾಧ್ಯಮಗಳು..
ಇದು ಶೈತಾನ್ ನ ಕೆಲಸ ಅಂತ ಯಾರೋ ಮಂತ್ರವಾದಿ ಹೇಳಿಕೆ ನೀಡಿಬಿಟ್ಟ..
ಈ ಹಿನ್ನಲೆಯಲ್ಲಿ ದೇಶ ವಿದೇಶಗಳ ವಿಶಾಲವಾದ ಶಾಲಾ ಕಾಲೇಜುಗಳ ಬಯಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಶುರುವಾಯ್ತು..
ಹಿಂದೂಗಳು ಬಯಲಿನಲ್ಲೇ ಶತ್ರು ಉಚ್ಛಾಟನೆ ಯಾಗ, ಅರಿ ನಿಗ್ರಹ ಕೈಂಕರ್ಯ, ಸುದರ್ಶನ ಹೋಮ, ಅಘೋರ ಯಜ್ಞ ಮುಂತಾದ ಪೂಜಾ ವಿಧಿ ವಿಧಾನಗಳನ್ನು ಶುರು ಮಾಡಿದರು..
ಮುಸಲ್ಮಾನರು ಬಯಲಿನಲ್ಲೇ ಪಶ್ಚಿಮದ ಕಾಬಾದೆಡೆಗೆ ಮುಖ ಮಾಡಿ ಸಾಮೂಹಿಕ ನಮಾಜು ಮಾಡಿದರು..
ಇನ್ನು ಇಸಾಯಿಗಳು ತಾತ್ಕಾಲಿಕ ಕಟ್ಟೆಗಳನ್ನು ತಯಾರಿಸಿ ಅವುಗಳ ಮೇಲೆ ಕ್ಯಾಂಡೆಲ್ ಬೆಳಗಿಸಿ ವಿಶ್ವದ ನಿಷ್ಪಾಪಿ ಮಾನವರ ರಕ್ಷಣೆಗೆ ಮೊರೆ ಇಟ್ಟರು..
ಇವುಗಳನ್ನು ವೀಕ್ಷಿಸುತ್ತಲೇ ಇದ್ದ ಬುದ್ದಿಜೀವಿಗಳ ಸಮೂಹ ಹೊಸ ಧರ್ಮವೊಂದರ ಉದಯದ ಮುನ್ಸೂಚನೆಯಿದು.. ಮುಂದೆ ಹುಟ್ಟುವ ಹೊಸ ಧರ್ಮದಲ್ಲಿ ಕುರುಡು ಡಂಬಾಚಾರಗಳಿರುವುದಿಲ್ಲ; ಕೇವಲ ಶಾಂತಿ ಮಾತ್ರವೇ ಇರುತ್ತದೆ.. ಇದು ಆಗಿದ್ದು ಒಳ್ಳಯದೇ ಆಯಿತು ಅಂತ ಪ್ರಚಾರ ಶುರುವಿಟ್ಟರು..
ಇದೇ ವಿಚಾರದ ಒಂದು ಎಳೆಯನ್ನು ಇಟ್ಟುಕೊಂಡ ಕೆಲವರು ಜಗತ್ತನ್ನು ರಕ್ಷಿಸಲು ಹೊಸ ದೇವರು ಅವತಾರವೆತ್ತಲಿದ್ದಾನೆ.. ಹಾಗಾಗಿ ಹೀಗಾಗಿದೆ ಅನ್ನುವ ಹೊಸ ಕಥೆ ಹುಟ್ಟಿಸಿ ಗಾಳಿಗೆ ಹಾರಿ ಬಿಟ್ಟರು..
*****
ಇದು ಅನ್ಯಗ್ರಹ ಜೀವಿಗಳಾದ ಏಲಿಯನ್ ಗಳ ಕೃತ್ಯ ಅನ್ನುವ ಎಕ್ಸ್ ಪರ್ಟ್ ಒಪೀನಿಯನ್ ಕೊಟ್ಟಿತು ಯುನೆಸ್ಕೋದ ತಜ್ಞರ ತನಿಖಾ ತಂಡ..
ಹೌದೇ..! ಬೇರೆ ಗ್ರಹದ ಯು.ಎಫ್.ಓ ಜೀವಿಗಳು ಬಂದು ನಮ್ಮ ದೇವರ ಮಂದಿರವನ್ನು ಅಪಹರಿಸಿ ಒಯ್ದವೇ..? ಅವುಗಳಿಗೆ ನಮ್ಮ ಆಸ್ಥೆಯ ಕೇಂದ್ರದ ಅಗತ್ಯವೇನು..? ಹೀಗಂತ ಪ್ರಶ್ನಿಸಿತು ಸಂಪ್ರಧಾಯವಾದಿಗಳ ಸಮೂಹ..
ಈ ಬಗ್ಗೆ ಒಂದಷ್ಟು ಚರ್ಚೆಗಳಾಗುತ್ತಿದ್ದಂತೆ ಪ್ರಾಯಶಃ ಭೂಮಿಯ ಮೇಲಿನ ಮಠ, ಮಂದಿರ, ಮಸೀದಿ, ಚರ್ಚುಗಳ ವಾಸ್ತು ಶಿಲ್ಪವನ್ನು ಅಧ್ಯಯನ ಮಾಡುವ ಸಲುವಾಗಿ ಯಾವುದೋ ಅನ್ಯಗ್ರಹದ ಏಲಿಯನ್ಗಳು ಈ ಕೃತ್ಯ ಎಸಗಿರಬಹುದು ಅನ್ನುವ ಅಭಿಪ್ರಾಯಕ್ಕೆ ಪುಷ್ಟಿ ದೊರೆಯಿತು..
ದಿನ ದಿನಕ್ಕೂ ಪರಿಸ್ಥಿತಿ ಹದಗೆಡುತ್ತಿತ್ತು.. ಆದರೆ ತಾರ್ಕಿಕ ಅಂತ್ಯ ಕಾಣದ ಸಮಸ್ಯೆಯಾದ್ದರಿಂದ ಯಾರೂ ಯಾರ ಮೇಲೂ ಗೂಬೆ ಕೂರಿಸಲಾಗಲಿ, ಆಪಾದನೆ ಮಾಡುವುದಾಗಲೀ ಮಾಡಲಿಲ್ಲ..
*****
ಮೊದಲ ಕೆಲವು ದಿನ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಸಕಲ ನಾಟಕ ಸೂತ್ರಧಾರಿ ಕೃಷ್ಣ ಪರಮಾತ್ಮ, ಪ್ರಳಯ ತಾಂಡವದ ಮಹಾರುದ್ರ, ಆದಿಶಕ್ತಿ ಪರಾಶಕ್ತಿ ನವದುರ್ಗೆಯರು, ಲಕ್ಷ್ಮಿ, ಪಾರ್ವತಿಯರ ವಿವಿಧ ಸಹ ರೂಪಿಣಿ ದೇವತೆಗಳು, ಮುದ್ದಿನ ದೇವರುಗಳಾದ ಗಣೇಶ, ಅಯ್ಯಪ್ಪ, ಆಂಜನೇಯ.. ಸಾಯಿಬಾಬಾ, ರಾಘವೇಂಧ್ರ ಸ್ವಾಮಿ ಮುಂತಾದ ಅಸಂಖ್ಯ ದೇವರುಗಳ ಭಕ್ತಾದಿಗಳು ತಮ್ಮ ತಮ್ಮ ಇಷ್ಟ ದೇವರುಗಳನ್ನು ನೆನೆ ನೆನೆದು ಕೊರಗಿ ಕರಬಿ ಹಂಬಲಿಸಿ ಹೊರಳಾಡಿ ಅತ್ತು ಸುಸ್ತಾದರು.. ಮತ್ತೆ ಮತ್ತೆ ಭಗವದ್ಗೀತೆ, ಉಪನಿಷತ್ ಪಾರಾಯಣ ಪಠಿಸಿದರು.. ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಹನುಮಾನ್ ಚಾಲೀಸ, ರಾಮತಾರಕ ಮಂತ್ರ, ದುರ್ಗಾ ಸಪ್ತಶತಿ, ರುದ್ರ-ಚಮಕ ಪಾರಾಯಣ ಉರು ಹೊಡೆದರು..
ಇಸ್ಲಾಂ ಧರ್ಮೀಯರು ಅಲ್ಲಾನ ಕರುಣೆಯನ್ನು ನೆನದು ರೋಧಿಸಿದರು.. ಖುರಾನ್ ದಿವ್ಯವಾಣಿಯನ್ನು ಆಗಸಕ್ಕೆ ಕೇಳುವಂತೆ ಉಚ್ಚರಿಸಿ ಮೊರೆ ಇಟ್ಟರು..
ಇನ್ನು ಕ್ರೈಸ್ತರೂ ಸುಮ್ಮನಿರಲಿಲ್ಲ ಶಾಂತಿ ಧೂತ ಇಸಾಮಸಿಯ ಸಂದೇಶಗಳನ್ನು ನೆನಪು ಮಾಡಿಕೊಂಡರು.. ಪವಿತ್ರ ಬೈಬಲ್ನ್ನು ಅವುಚಿಕೊಂಡು ಮಣಿಗಳನ್ನು ಎಣಿಸುತ್ತಾ, ಯೇಸು ಕ್ರಿಸ್ತ ಶಿಲುಬೆಗೇರಿದ ಹಳೆಯ ನೆನಪಿನ ಬೆಳ್ಳಿಯ ಕ್ರಾಸ್ ಅನ್ನು ಎದೆಗೆ ಕಣ್ಣಿಗೆ ಪುನಃ ಪುನಃ ಒತ್ತಿಕೊಂಡರು..
ಇದೇ ರೀತಿ ಉಳಿದ ಧರ್ಮಗಳ ನಾಗರೀಕರು ತಮ್ಮ ತಮ್ಮ ಆರಾಧನೆಯ ಕ್ರಮವನ್ನು ಕೆಲ ದಿನ ಬಿಟ್ಟೂ ಬಿಡದೆ ನಿರಂತರವಾಗಿ ಮಾಡಿದರು..
ಕೊನೆಗೆ ಇವೆಲ್ಲಾ ನಿಧಾನವಾಗಿ ಕಡಿಮೆಯಾಗತೊಡಗಿತು.. ಎಲ್ಲ ಧರ್ಮದವರು ತಮ್ಮ ತಮ್ಮ ಧರ್ಮ ಹಾಗೂ ದೇವರುಗಳನ್ನು ಮರೆಯತೊಡಗಿದರು.. ಈಗ ಎಲ್ಲ ಸಮುದಾಯಗಳಿಗೂ ಹೊಸ ಭರವಸೆಯೊಂದು ಮೊಳಕೆ ಒಡೆತೊಡಗಿತು.. ಅದೇ ಹೊಸ ಧರ್ಮ ಹೊಸ ದೇವರು..
ಕೆಲವರು ಹೊಸ ದೇವರ ಕಲ್ಪನೆಗೆ ಜೀವ ತುಂಬತೊಡಗಿದರು.. ಇನ್ನೂ ಕೆಲವರು ಅದರ ಚಿತ್ರ ಬಿಡಿಸತೊಡಗಿದರು.. ಮತ್ತೆ ಕೆಲವರು ಆ ಹೊಸ ಭಗವಂತನ ಪ್ರತಿಮೆ ಕೆತ್ತತೊಡಗಿದರು..
ಹಿಂದೂಗಳು ಕಲಿಯುಗ ಅಂತ್ಯವಾಯ್ತು ಹೊಸಯುಗ ಪ್ರಾರಂಭ.. ವಿಷ್ಣುವಿನ ಹನ್ನೊಂದನೇ ಅವತಾರ ಶುರುವಾಗಲಿದೆ ಅನ್ನುವ ಭಜನೆ ಶುರು ಮಾಡಿದರು..
ಮುಸಲ್ಮಾನರು ಈ ಹೊಸ ದೇವರ ಉಗಮದ ಬಗ್ಗೆ ಪೈಗಂಬರರು ಖುರಾನ್ನಲ್ಲಿ ಹಿಂದೆಯೇ ಹೇಳಿದ್ದರು ಅನ್ನುವ ಹೇಳಿಕೆ ನೀಡತೊಡಗಿದರು..
ಇನ್ನು ಕ್ರಿಶ್ಚಯನ್ನರು ಸುಮ್ಮನಿರುತ್ತಾರಾ..? ಕ್ರಿಸ್ತನಿಗೆ ಮಗನಿದ್ದ ಅವನೇ ಈಗ ಮತ್ತೆ ಹುಟ್ಟಿ ತಂದೆಯ ದಿವ್ಯ ಸಂದೇಶಗಳನ್ನು ಪ್ರಚಾರ ಮಾಡಲಿದ್ದಾನೆ ಅನ್ನುವ ಸಮರ್ಥನೆಗೆ ನಿಂತರು..
ಇದೇ ರೀತಿ ತಮ್ಮದೊಂದು ದೇವರ ಹೆಸರನ್ನು ನಾಮಿನೇಟ್ ಮಾಡಲು ಉಳಿದ ಸಣ್ಣ ಪುಟ್ಟ ಧರ್ಮಗಳು ಸಿದ್ಧವಾದವು
ಇತ್ತ ಅಪಹೃತಗೊಂಡ ಮಠ, ಮಂದಿರ, ದೇವಾಲಯ, ಮಸೀದಿ, ಚರ್ಚು, ಬಸದಿ, ಸ್ತೂಪ ಮುಂತಾದ ಬ್ರಹ್ಮಾಂಡ ವಿಸ್ತಾರದ ಖಾಲಿ ಜಾಗವನ್ನು ನುಂಗಲು ಜಾಗತಿಕವಾಗಿ ರಿಯಲ್ ಎಸ್ಟೇಟ್ ಮಾಫಿಯ ತೆರೆಮರೆಯಲ್ಲಿ ಸ್ಕೆಚ್ ಹಾಕತೊಡಗಿದ್ದರು..
-ವಿಶ್ವಾಸ್ ಭಾರದ್ವಾಜ್..

No comments:

Post a Comment