Wednesday 10 December 2014

ಹೊಸ ಹುಟ್ಟು

ಹೊಸ ಹುಟ್ಟು:
ಶತಮಾನ ಸಹಸ್ರಮಾನಗಳ ಗಳಿಗೆಗಳು
ಉರುಳುರುಳಿ ಹೊರಳಿ ಕಳೆದರೂ
ಮತ್ತೆ ಹುಟ್ಟುತ್ತಲೇ ಇರುತ್ತದೆ
ಹೊಸ ಹುಟ್ಟು
ನಿನ್ನ ಹಂಗಿಗೆ ಕಾಯದೆ
ಜನಿಸುವ ಹುಟ್ಟಿಗೆ ವಿಶೇಷ ಉದರದ ಕಾಣ್ಕೆಯೇಕೆ

ನವನಿರ್ಮಾಣದ ಕನಸಿನ ತಳಪಾಯಕ್ಕೆ
ನಾಲೆಯ ನೀರನ್ನು ಮೊಗೆಮೊಗೆದು ಎರೆಯಬೇಕೆ
ನಾಳೆ ಮತ್ತೆ ಹೊಸ ಸೂರ್ಯ ಹುಟ್ಟುವ
ರವಿಯ ಉದಯಕ್ಕೆ ಮಹೂರ್ತ ನಿಗದಿ ನಿನ್ನಿಂದಲೇ
ಅನ್ನುವ ಹಮ್ಮು ನಿನಗೇತಕೆ ಮೂರ್ಖ
ಹಳೆಯ ನೀರು ಹಮ್ಮಿನಿಂದ ನಿಲ್ಲದೇ ಹರಿದು ಹೋದರೂ
ಹೊಸ ನೀರಿನ ಹರಿವಿಗೆ ಬರವೆಲ್ಲಿ ಮಂಕಾ
ಕದ ಮುಚ್ಚಿದ ನಿನ್ನೆ ಮೊನ್ನೆಗಳಿಗೆ, ಸಾಯುತಿರುವ ಇಂದಿಗೆ
ಶುಭ ವಿಧಾಯ ಹೇಳುತ್ತಲೇ ಪಾದ ಇಕ್ಕುತ್ತದೆ
ಹೊಸ ನಾಳೆ
ಹೊಸ ಹೊಸ ಉನ್ಮಾದ, ಉದ್ವೇಗ, ಉದ್ದೇಶಗಳೊಂದಿಗೆ
ಅವೇ ಹಳೆಯ ಡೊಂಕು, ಕೊಂಕು ಅವಾಂತರಗಳ ಕೊಂಡಿ
ಕೂಡಿಕೊಂಡು ಕಟ್ಟುತ್ತವೆ ಹೊಸ ವ್ಯವಸ್ಥೆಯ
ನವೀನ, ನೂತನ, ಕಾಯ್ದೆ ಕನವರಿಕೆ
ಚಳುವಳಿ, ಆಂದೋಲನಗಳ ಹೊಣೆಯ ಲೇಷವಿಲ್ಲದೆ
ತೆರೆದುಕೊಳ್ಳುತ್ತದೆ ಲೋಕತಂತ್ರ ಮತ್ತೊಂದು ಆಯಾಮ
ಹಳೆ ಮುದುಕಿಗೆ ಹೊಸ ಸೀರೆ ಕೊಡಿಸಿದ
ಹಿಗ್ಗು ಮಾತ್ರ ಗತಿಸುವ ಕಾಲರಾಯನಿಗೆ
ಹೊಸಹುಟ್ಟಿಗೆ ಸ್ವಾಗತಿಸುವ ಹೊಣೆ ನಿನಗೆ
-ವಿಶ್ವಾಸ್ ಭಾರದ್ವಾಜ್ (ವಿಪ್ರವಿಶ್ವತ್)
-------------------------------

No comments:

Post a Comment