Thursday 25 December 2014

ಯಾಕೋ ಪ್ರಸಂಗ ಸರಿ ಬರಲಿಲ್ಲ ಕುಡಿಕಥೆ

ಕುಡಿಕಥೆಗಳು:
ಯಾಕೋ ಪ್ರಸಂಗ ಸರಿ ಬರಲಿಲ್ಲ:
ಧೀಂ ಧೀಂ ಧೀಂ ದಿತ್ತೈ ದಿದ್ದಿತೈ ತತ್ತೈ..
"ಸೈರಂಧ್ರಿ ಎಲ್ಲಿದ್ದಾಳೇ.. ಇವತ್ತು ಅವಳನ್ನು ನನ್ನ ಕೊರಳಿಗೆ ಮಾಲೆ ಹಾಕಿಕೊಳ್ಳದಿದ್ದರೇ ನಾನು ಕೀಚಕನೇ ಅಲ್ಲ.."
ರಂಗದಲ್ಲಿ ಕೀಚಕನ ವೇಷದಾರಿ ದ್ರೌಪತಿಯನ್ನು ಹುಡುಕುವ ಅಭಿನಯ ಮಾಡುತ್ತಿದ್ದ..
ಬೇಲಿ ಮೂಲೆಯಲ್ಲಿ ಕುಳಿತು ನಾಗಿಯನ್ನು ಕಾಯುತ್ತಿದ್ದ ಸುಬ್ಬಪ್ಪನಿಗೆ ಹತ್ತಿರದಲ್ಲೇ ಯಕ್ಷಗಾನದ ಚಂಡೇ ಸದ್ದು ಭಾಗವತರ ಪದ ಕೇಳಿಸುತ್ತಿತ್ತು..
ಕೀಚಕ ಸೈರಂಧ್ರಿಯನ್ನು ಹುಡುಕಲು ಹೋಗುತ್ತಿದ್ದಾನೆ ಅನ್ನುವ ಪದ ಅವನ ಕಿವಿಗೆ ಬಿತ್ತು.. ನಾಗಿ ಬರಲ್ಲ ನಾನೇ ಅವಳನ್ನು ಹುಡುಕಿಕೊಂಡು ಹೋಗಬೇಕು.. ಅವಳ ಕುಡುಕ ಅಪ್ಪ ಯಕ್ಷಗಾನ ಹರಕೆಯಾಟ ನೋಡಲು ಬಂದಿರ್ತಾನೆ.. ಈಗ ಮನೆಯಲ್ಲಿ ಅವಳೊಬ್ಬಳೇ ಇರ್ತಾಳೆ.. ಅವಳಿಗೆ ಬೇಲೆ ಸಾಲಿಗೆ ಬರಲು ಹೇಳಿದ್ದು ಹೌದಾದ್ರೂ, ಅವಳಿಗೆ ನಾಚಿಕೆ ಇರಬಹುದು.. ತಾನೇ ಹೋದರಾಯಿತು.. ಮನಸಿನಲ್ಲೇ ಹೀಗಂದುಕೊಂಡು ಕುಳಿತಲ್ಲಿಂದ ಎದ್ದ ಸುಬ್ಬಪ್ಪ..
ಮೀನುಗಾರರ ಓಣಿ ದಾಟಿ ಮುಂದೆ ಹೋದ.. ನಾಗಿಯ ಮನೆ ಬಾಗಿಲು ತೆರೆದೇ ಇತ್ತು.. ಸಣ್ಣಗೆ ಲಾಂದ್ರ ಉರಿಯುತ್ತಿತ್ತು.. ಸದ್ದು ಮಾಡದೇ ಒಳಗೆ ಅಡಿಯಿಟ್ಟ ಸುಬ್ಬಪ್ಪ.. ನಾಗಿ ಕಣ್ಣಲ್ಲೇ ಆಹ್ವಾನ ನೀಡಿದ್ದಳು..
ದೂರದಲ್ಲಿ ಯಕ್ಷಗಾನದ ಭಾಗವತಿಕೆ ಮುಂದುವರೆದಿತ್ತು.. ಅತ್ತ ರಂಗದ ಮೇಲೆ ಭೀಮ ಕೀಚಕರ ರಣ ಭೀಕರ ಯುದ್ಧ ಶುರುವಾದ ಬಗ್ಗೆ ತಾರಕ ಸ್ವರದಲ್ಲಿ ಭಾಗವತರು ಪದ ಹಾಡುತ್ತಿದ್ದರು..
ಚಂಡೆ ಧ್ವನಿ ಮುಗಿಲು ಮುಟ್ಟಿತ್ತು..
ಇತ್ತ, ಸುಬ್ಬಪ್ಪ-ನಾಗಿಯರ ಮಧ್ಯೆಯೂ ಕದನ ಏರ್ಪಟ್ಟಿತ್ತು.. ಇಲ್ಲಿ ಚಂಡೆ, ಭಾಗವತಿಕೆಗಳ ಅಬ್ಬರವಿರಲಿಲ್ಲ..
ಆದರೆ...
ಮನಸಿನಲ್ಲೇ ಸುಬ್ಬಪ್ಪ ಹೇಳಿಕೊಂಡ "ಯಾಕೋ ಪ್ರಸಂಗ ಸರಿ ಬರಲಿಲ್ಲ.."

No comments:

Post a Comment