Thursday 25 December 2014

ಕನ್ನಡಕ ಕಳೆದು ಹೋದ ಪ್ರಸಂಗ

ಕುಟಿಕಥೆಗಳು:
ಕನ್ನಡಕ ಕಳೆದು ಹೋದ ಪ್ರಹಸನ:
"ಇಲ್ಲೇ ಎಲ್ಲೋ ಇಟ್ಟಿದ್ದೆ.. ಕಾಣ್ತಿಲ್ಲ.. ಈ ಹಾಳದ್ದು ಮರೆವು ಬೇರೆ.. ಒಂಚೂರು ನೋಡಮ್ಮ ಎಲ್ಲಾದ್ರೂ ಕಾಣುತ್ತಾ.." ಸಿಡಿಮಿಡಿಗುಟ್ಟತ್ತಲೇ ಹುಡುಕುತ್ತಿದ್ದರು 60ರ ಅರೆಮರೆವಿನ ವೃದ್ಧೆ ಶಾಂತಮ್ಮ..
ಶಾಂತಮ್ಮನ ಮನಸಿನಲ್ಲಿ ಕನ್ನಡಕದ ಪೆಟ್ಟಿಗೆಯಲ್ಲಿ ತಮ್ಮ ಕನ್ನಡಕವೂ ಇದೆ ಅನ್ನುವ ನಂಬಿಕೆ.. ಕನ್ನಡಕ ಕಳೆದು ಹೋಗಿದೆ ಅಂತ ಅವರು ಹೇಳಲೇ ಇಲ್ಲ.. ಕೇವಲ ಕನ್ನಡಕದ ಬಾಕ್ಸ್ ಕಳೆದು ಹೋಗಿದೆ ಅಂತ ಹುಡುಕುತ್ತಲೇ ಇದ್ದಾರೆ..
"ಶಾಂತು ಕನ್ನಡಕದ ಬಾಕ್ಸ್ ಅಲ್ಲೆಲ್ಲೋ ಇದ್ಯಂತೆ ನೋಡ್ರೋ..!" ಶಾಂತಮ್ಮನ ಪತಿ ಶ್ಯಾಮರಾಯರು ದಿವಾನಖುರ್ಚಿಯಲ್ಲಿ ಕುಳಿತು ಆರ್ಡರ್ ಮಾಡಿದ್ರು..
"ಅತ್ತೆ ಕನ್ನಡಕದ ಬಾಕ್ಸ್ ಕಳ್ಕೊಂಡಿದ್ದಾರೆ..!" ಸೊಸೆಯಂದಿರು ಅತ್ತೆಯ ಕಷ್ಟವನ್ನು ಮನೆಯ ಸದಸ್ಯರಿಗೆ ಹೇಳುತ್ತಾ ಕನ್ನಡಕದ ಬಾಕ್ಸ್ ಹುಡುಕಲು ಮುಂದಾದ್ರು..
"ಏನು ಅಮ್ಮ ಕನ್ನಡಕದ ಬಾಕ್ಸ್ ಮಿಸ್ ಆಯ್ತಾ..?" ಮಗ ತರಾತುರಿಯಲ್ಲಿ ಅಮ್ಮನಿಗೆ ಹೆಲ್ಪ್ ಮಾಡಲು ಸಿದ್ಧನಾದ..
"ಅರೆ ಹೌದಾ! ದೊಡ್ಡಮ್ಮನ ಕನ್ನಡಕದ ಬಾಕ್ಸ್ ಕಳೆದು ಹೋಯ್ತಾ..?" ಶಾಂತಮ್ಮನ ಓರಗಿತ್ತಿಯ ಮಗನೂ ಅಖಾಡಕ್ಕೆ ಇಳಿದ..
"ಅತ್ತಿಗೆಯ ಕನ್ನಡಕದ ಬಾಕ್ಸ್ ಕಳೆದಕೊಂಡ್ರಾ..?" ಓರಗಿತ್ತಿ ಸುಲೋಚನಾಳ ಸಂಭ್ರಮವೂ ಹುಡುಕಾಟಕ್ಕೆ ಸೇರಿಕೊಳ್ತು..
ಕೊನೆಗೆ..
ಮುದ್ದು ಮೊಮ್ಮಗಳು ಪಾರಿ ಓಡಿ ಬಂದು ಶಾಂತಮ್ಮನ ಹೆಗಲಿಗೆ ಜೋತು ಬಿತ್ತು.. "ಏನಜ್ಜಿ ಎಲ್ಲಾ ಸೇರಿ ಹುಡುಕ್ತಾ ಇದ್ದೀರಾ..?"
"ಏನಿಲ್ಲಾ ಕಣೆ ನಿನ್ನ ಆಮೇಲೆ ಮುದ್ದು ಮಾಡ್ತೀನಿ ಮೊದಲು ಕನ್ನಡಕದ ಬಾಕ್ಸ್ ಕಳೆದುಹೋಗಿದೆ ಹುಡುಕಬೇಕು.."
"ಹೌದಾ ಅಜ್ಜಿ,,? ಅದ್ರಲ್ಲಿ ಏನಿತ್ತು.." ಪಾರಿಯ ಮುಗ್ದ ಪ್ರಶ್ನೆ..!
"ಕನ್ನಡಕ ಇತ್ತು ಕಣೆ.." ಶಾಂತಮ್ಮ ರೇಗುವ ಧ್ವನಿಯಲ್ಲಿ
"ಅಯ್ಯೋ ಅಜ್ಜಿ ಕನ್ನಡಕ ನಿನ್ನ ಕಣ್ಣಲ್ಲೇ ಇದ್ಯಲ್ಲ..!" ಪಾರಿ ಅಣಕಿಸುತ್ತಾ..
"ಅರೇ ಹೌದಲ್ವಾ..?" ಶಾಂತಮ್ಮ..
"ಅಮ್ಮಾ..! ಕಳೆದು ಹೋಗಿದ್ದು ಕನ್ನಡಕದ ಬಾಕ್ಸ್ ಅಂದೆ.. ಕನ್ನಡಕ ಅಂದಿದ್ರೆ ಆಗಲೇ ಹೇಳ್ತಾ ಇರಲಿಲ್ಲವಾ..? ಸುಮ್ಮನೆ ನಿನ್ನ ಮರೆವಿನ ದೆಸೆಯಿಂದ ಮನೆ ಮಂದಿನೆಲ್ಲಾ ಯಕ್ಷಗಾನ ಮಾಡಿಸಿಬಿಟ್ಟೆ ನೀನು.." ಮಗ ಗೊಣಗುತ್ತಾನೆ
-ವಿಶ್ವಾಸ್ ಭಾರದ್ವಾಜ್

No comments:

Post a Comment