Thursday 25 December 2014

ಬ್ಯಾಂಕ್ ಲೋನ್ ಆಫರ್ ಕುಡಿಕಥೆ

ಕುಡಿಕಥೆಗಳು:
ಬ್ಯಾಂಕ್​ ಲೋನ್ ಆಫರ್:
ಕೆಂಪು ತುಟಿಯ ಲೇಡಿ ಆ್ಯಂಕರ್ ಕೇಳಿದಳು.. "ನಿಮ್ಮ ಬ್ಯಾಂಕ್ ಹೇಗೆ ಉಳಿದ ಬ್ಯಾಂಕ್ ಗಳಿಗಿಂತ ಡಿಫರೆಂಟ್..?"
ಆ ಕಮರ್ಷಿಯಲ್ ಸ್ಪಾನ್ಸರ್ಡ್ (ಪ್ರಾಯೋಜಿತ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆ ಬ್ಯಾಂಕ್ ನ ನಿರ್ದೇಶಕ ಹೇಳಿದ.. "ನೋಡಿ ನಮ್ಮದು ಗ್ರಾಹಕರ ತೃಪ್ತಿಯನ್ನೇ ಮೂಲೋದ್ದೇಶವನ್ನಾಗಿ ಇಟ್ಟುಕೊಂಡು ಸೇವೆ ಒದಗಿಸುವ ಬ್ಯಾಂಕ್.. ನಮ್ಮ ಅಜೆಂಡಾ ಕೂಡಾ ಅದೇ ಆಗಿದೆ.. ಕನ್ಸ್ಯೂಮರ್ ಸ್ಯಾಟಿಸ್ ಫ್ಯಾಕ್ಷನ್ ಈಸ್ ಅವರ್ ಮೈನ್ ಮೋಟೋ.."
"ಸ್ವಲ್ಪ ಬಿಡಿಸಿ ಹೇಳಿ.. ಉಳಿದ ಬ್ಯಾಂಕ್ಗಳು ನೀಡದ ಯಾವ ಸೌಕರ್ಯಗಳನ್ನು ನಿಮ್ಮ ಬ್ಯಾಂಕ್ ಗ್ರಾಹಕರಿಗೆ ನೀಡುತ್ತದೆ.." ಅವಳು ಮತ್ತೆ ಕೇಳಿದಳು..
"ಲಾಂಗ್ ಟರ್ಮ್ ಹಾಗೂ ಶಾರ್ಟ್ ಟರ್ಮ್ ಲೋನ್ ಕೊಡ್ತೀವಿ.." ಆತ ಹೇಳಿದ
"ಈ ಲೋನ್ ಗಳನ್ನು ದೇಶದ ಎಲ್ಲಾ ಬ್ಯಾಂಕ್ಗಳೂ ನೀಡ್ತಾವೆ ಅಲ್ವಾ..?" ಅವಳು ಥಟ್ ಅಂತ ಕೇಳಿದ್ಳು..
"ನೋಡಿ.. ನಾವು ಗ್ರಾಹಕರಿಗೆ ಕಡಿಮೆ ಬಡ್ಡಿಧರದಲ್ಲಿ ಸಾಲ ನೀಡ್ತೀವಿ.." ಆತ ಹೇಳಿದ
"ಅದು ಈಗೀಗ ಎಲ್ಲಾ ಬ್ಯಾಂಕ್ ಗಳಲ್ಲೂ ಸಿಕ್ತಾ ಇದೆ.." ಅವಳು ಮತ್ತೆ ಕ್ರಾಸ್ ಕ್ವಶ್ಚನ್ ಮಾಡಿದ್ಳು
"ಹೌದು! ಆದ್ರೆ ಈ ಡಾಕ್ಯುಮೆಂಟೇಶನ್, ಅದೂ ಇದೂ ಅಂತ ನೂರಾರು ತಾಪತ್ರಯಗಳಿರ್ತಾವಲ್ವಾ,,? ಅದ್ಯಾವುದು ನಮ್ಮ ಬ್ಯಾಂಕ್ನಲ್ಲಿ ಇಲ್ಲ.. ಗ್ರಾಹಕರಿಗೆ ತಲೆ ನೋವು ತರುವ ದಾಖಲಾತಿಗಳನ್ನು ನಾವು ಕೇಳುವುದೂ ಇಲ್ಲ.." ಆತ ಗಂಭೀರವಾಗಿ ಮಾತನಾಡುತ್ತಿದ್ದ
ಅಂತೂ ಕೊನೆಗೆ ಪ್ರೋಗ್ರಾಮ್ ಮುಗಿಯಿತು..
ಸ್ಟೂಡಿಯೋ ಇಂದ ಹೊರಗೆ ಬಂದ ನಿರ್ದೇಶಕನಿಗೆ ಆ ಆ್ಯಂಕರ್.. "ಅಂದ ಹಾಗೆ, ಸಾರ್ ನಂಗೆ ನಿಮ್ಮ ಬ್ಯಾಂಕ್ ನಲ್ಲಿ ಲೋನ್ ಸಿಗಬಹುದಾ..? ಶಾರ್ಟ್ ಟರ್ಮ್ ಲೋನ್, ಕಡಿಮೆ ಇಂಟರೆಸ್ಟ್ ಇರೋ ಅಂತದ್ದು.. ತಲೆ ನೋವು ತರಿಸುವ ಡಾಕ್ಯುಮೆಂಟೇಶನ್ ಇಲ್ಲದ್ದು.."
"ಓಹ್! ಸಾರಿ ಮೇಡಂ.. ನೀವು ಮೀಡಿಯಾ ಅಲ್ವಾ.. ನಮ್ಮ ಬ್ಯಾಂಕಿಂಗ್ ಯೂನಿಯನ್ ನಲ್ಲಿ ಪ್ರೆಸ್ ಹಾಗೂ ಮೀಡಿಯಾದವರಿಗೆ ಲೋನ್ ನೀಡಬಾರದು ಅಂತ ರೆಸಲ್ಯೂಷನ್ ಆಗಿಬಿಟ್ಟಿದೆ.. ಬೇರೆ ಯಾರಾದ್ರೂ ನಿಮ್ ಫ್ಯಾಮಿಲಿ ಮೆಂಬರ್ ಹೆಸರಲ್ಲಿ ನೀಡಬಹುದು.."
"ಹಾಗಿದ್ರೆ ನನ್ನ ಗಂಡನ ಹೆಸರಲ್ಲಿ ಸಾಲ ಸಿಗಬಹುದಾ..? ಅವರು ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಕೆಲಸ ಮಾಡ್ತಿದ್ದಾರೆ. ಸಬ್ ಇನ್ಸ್ ಪೆಕ್ಟರ್..!"
"ಓಹ್! ಎಗೈನ್ ಸಾರಿ ಮೇಡಂ ನಮ್ಮಲ್ಲಿ ಪೊಲೀಸ್ ಡಿಪಾರ್ಟ್ ಮೆಂಟ್ಗೆ ಸಹ ಸಾಲ ಕೊಡುವಂತಿಲ್ಲ.."
"ನಮ್ಮ ಅತ್ತೆಯ ಹೆಸರಲ್ಲಿ ಸಾಧ್ಯ ಆಗುತ್ತಾ.. ಅವ್ರು ಅಡ್ವಕೇಟ್..!"
"ಯು ಮೀನ್ ಲಾಯರ್..? ಮತ್ತೆ ಸಾರಿ ಕೇಳ್ಕೊಳ್ತಾ ಇದ್ದೀನಿ.. ಈ ಪ್ರೆಸ್, ಪೊಲೀಸ್, ಲಾಯರ್ ಬಿಟ್ಟು ಬೇರೆ ಯಾರಾದ್ರೂ ಇದ್ದಾರಾ ಮನೆಯಲ್ಲಿ.. ಈ ಮೂರು ವಿಭಾಗಗಳಿಗೆ ಸಾಲ ಕೊಡಬಾರದು ಅಂತ ಸ್ಟ್ರಿಕ್ಟ್ ಆಗಿ ರೂಲ್ಸ್ ಮಾಡಿದ್ದಾರೆ.."
"ನಮ್ಮ ಮಾವನವರು ರಿಟೈರ್ಡ್ ಸ್ಕೂಲ್ ಟೀಚರ್.. ಹಾಳಾಗಿ ಹೋಗ್ಲಿ ಅವರ ಹೆಸರಿಗಾದ್ರೂ ಲೋನ್ ಸಿಗತ್ತೇನ್ರಿ..?" ಅವಳ ಸಹನೆ ಮೀರಿತ್ತು..
"ರಿಟೈರ್ಡ್ ಟೀಚರ್ ಅಂದ್ರೆ, ಈಗ ಕೆಲಸದಲ್ಲಿ ಇಲ್ಲ ಅಲ್ವಾ..? ರಿಯಲಿ ಸಾರಿ ಮೇಡಂ.. ನಿಜ ಬೇಸರ ಆಗ್ತಿದೆ ಆದ್ರೆ ವರ್ಕಿಂಗ್ ನಲ್ಲಿ ಇರೋರಿಗೆ ಮಾತ್ರ ಲೋನ್ ಸಿಗತ್ತೆ.. ನಿವೃತ್ತಿ ಹೊಂದಿದವರಿಗೆ ಕೊಡೊಕೆ ಆಗಲ್ಲ.."
"ನಿಮ್ಮ ಬ್ಯಾಂಕಿನ ಉದ್ದೇಶ ಹಾಗೂ ಗುರಿ.. ಅದೇನೋ ಅಂದ್ರಲ್ಲ.." ಅವಳು ಕೇಳಿದ್ಳು..
"ಅದೇ ಮೇಡಂ ಗ್ರಾಹಕರ ತೃಪ್ತಿ ಹಾಗೂ ಸಮಾಧಾನ.." ಪೆಚ್ಚು ಮುಖದಲ್ಲಿ ಉದ್ಘರಿಸಿದ ನಿರ್ದೇಶಕ.. ಆದ್ರೆ ಅದು ಆಫ್ ದ ರೆಕಾರ್ಡ್ ಆಗಿತ್ತು..

No comments:

Post a Comment