Thursday 25 December 2014

ಕೊನೆಗೂ ಅವಳೇನೋ ಬಂದಳು.. ಮುಂದೆ..?

ಕುಡಿ ಕಥೆಗಳು:
ಕೊನೆಗೂ ಅವಳೇನೋ ಬಂದಳು.. ಮುಂದೆ..?
ಅವಳಿಗಾಗಿ ಆತ ಕಾಯುತ್ತಲೇ ಇದ್ದ.. ಅದೇ ಪಾರ್ಕಿನ ಬೆಂಚಿನ ಮೇಲೆ.. ಕೆಲ ಹೊತ್ತು ಉತ್ಸಾಹದಿಂದ ಕಾಯುವ ಆತ ಕೊನೆಗೆ ನಿರಾಸೆಯ ಭಾವದಿಂದ ತಲೆ ತಗ್ಗಿಸಿ ಕುಳಿತುಬಿಡುತ್ತಿದ್ದ..
ಅವಳು ಇಂದಲ್ಲ ನಾಳೆ ಬಂದೇ ಬರ್ತಾಳೆ ಅನ್ನುವ ಗಟ್ಟಿ ನಂಬಿಕೆ ಅವನದ್ದು..
ಬಳಿಕ ಇದು ನಿತ್ಯದ ಅಭ್ಯಾಸವಾಗಿ ಹೋಯ್ತು ಅವನಿಗೆ.. ಒಂದು ನಿರ್ದಿಷ್ಟ ಸಮಯ ಗೊತ್ತು ಮಾಡಿಕೊಂಡು ಪಾರ್ಕ್ ಕಟ್ಟೆಯ ಬೆಂಚು ಕಾಯಿಸಲು ಶುರು ಮಾಡಿದ..
ಅವನು ಆ ಪಾರ್ಕ್ಗೆ ಬರುವ ಸಂಜೆಯ 5 ಗಂಟೆ ಪಾರ್ಕ್ ಕಸ ಗುಡಿಸುವ ಹೆಂಗಸಿಗೆ, ಬುಟ್ಟಿ ಪಾನಿಪುರಿ ಮಾಡುವ ಬಿಹಾರಿ ಹುಡುಗನಿಗೆ, ನಿತ್ಯವೂ ತಪ್ಪಿಸದೇ ಜಾಗ್ ಮಾಡುವ ಅಥ್ಲಿಟ್ಗೆ, ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಅಂತ ಹಾಡು ಹೇಳುವ ಆರ್ಎಸ್ಎಸ್ ನವರಿಗೆ, ಲಾಫಿಂಗ್ ಕ್ಲಬ್ನ ವಯೋವೃದ್ಧರಿಗೆ, ಕೈನಲ್ಲೊಂದು ಜರ್ಮನ್ ಶಫರ್ಡ್ ನಾಯಿ ಹಿಡಿದು ವಾಕಿಂಗ್ ನೆಪದಲ್ಲಿ ದೇಹ ಕರಗಿಸುವ ಮಧ್ಯವಯಸ್ಸಿನ ಆಂಟಿಯರಿಗೆ ಸೇರಿದಂತೆ ಆ ಪಾರ್ಕ್ನ ಅನೂಹ್ಯ ಒಡನಾಟ ಇಟ್ಟುಕೊಂಡ ನೂರಾರು ಮಂದಿಗೆ ಟೈಮ್ ಟೇಬಲ್ ಆಯಿತು..
ಈ ಮಧ್ಯೆ ಸಾಕಷ್ಟು ಬದಲಾವಣೆಗಳಾದವು..
ಜನರೇಷನ್ಗಳು ಬದಲಾದವು.. ಪಾರ್ಕ್ಗೆ ಬರುವ ಮಂದಿ ಬದಲಾದರು.. ಪಾನಿಪುರಿ ಮಾರುವ ಬಿಹಾರಿಯೂ ಬದಲಾದ ಅವನ ಬದಲಿಗೆ ಮತ್ತೊಬ್ಬ ಬಂದ..
ಕ್ರಿಕೆಟ್ ಆಡುತ್ತಿದ್ದ ಮಕ್ಕಳು ದೊಡ್ಡವರಾಗಿ ಕೆಲಸಕ್ಕೆ ಸೇರಿಕೊಂಡರು..ಕೆಲವರಿಗೆ ಮದುವೆಯೂ ಆಯಿತು.. ಇನ್ನೂ ಕೆಲವರಿಗೆ ಮಕ್ಕಳಾಯಿತು.. ಆಂಟಿಯರು ಮುದುಕಿಯರಾಗಿ ಲಾಫಿಂಗ್ ಕ್ಲಬ್ಗೆ ಹೊಸ ಮೆಂಬರ್ ಆದ್ರು..
ತಮ್ಮ ಪತ್ನಿಯೊಂದಿಗೆ ವಾಕಿಂಗ್ ಬರುವ ಹೊಸ ಜವ್ವನಿಗರು, ಮಕ್ಕಳನ್ನು ಆಡಿಸಲು ಕರೆತರುವವರು ಎಲ್ಲರೂ ಆತನ ಬದುಕಿನಲ್ಲಿ ಬದಲಾವಣೆ ಆಗದೇ ಇದ್ದುದ್ದ ಕಂಡು ಆಶ್ಚರ್ಯಗೊಂಡರು..
ಒಬ್ಬಾತ ದೈರ್ಯ ಮಾಡಿ ಒಂದಿನ ಕೇಳಿದ..
"ಅಜ್ಜಾ, ನೀನು ಯಾಕೆ ಹೀಗೆಯೇ ಇದ್ದೀಯಾ..? ನಿಂಗೆ ಲೈಫ್ ಬೋರ್ ಬರಲ್ವಾ..?" ಆತ ಇನ್ನೂ ಏನೇನೋ ಪ್ರಶ್ನಿಸಿದ ಅದ್ಯಾವುದು ಈತನ ಗಮನಕ್ಕೆ ಬರಲಿಲ್ಲ..
ಆದರೆ ಅವನು ಅಜ್ಜಾ ಅಂದಿದ್ದು ಮಾತ್ರ ಇವನ ಕಿವಿಗೆ ತಾಗಿತು.. ತಾನು ವೃದ್ಧನಾದರೂ ಅವಳಿನ್ನೂ ಬಂದಿಲ್ಲವಾ ಅಂದುಕೊಳ್ಳುತ್ತಾ ಅತ್ತ ತಿರುಗಿ ನೋಡಿದ..
ಅಲ್ಲಿ...
ಲಾಫಿಂಗ್ ಕ್ಲಬ್ನಲ್ಲಿ ಅವಳು ಕಂಡಂತಾಯಿತು.. ದಿಟ್ಟಿಸಿ ನೋಡಿದ .. ಹೌದು ಅದೇ ಚಹರೆ, ಆದ್ರೆ ಮುಖದಲ್ಲಿ ನೆರಿಗೆ ಬಿದ್ದಿದೆ.. ಅವನು ಎಷ್ಟೇ ಮುದಿಬಿದ್ದರೂ ಅವಳ ಗುರುತನ್ನು ಮರೆಯಲಾರ.. ಹೌದು ಅದು ಅವಳೇ,, ಆದರೆ ಅವಳ ಜೊತೆಯಲ್ಲೊಬ್ಬ ಮುದುಕ ಇದ್ದ, ಅವರಿಬ್ಬರೂ ಮಗುವೊಂದರ ಜೊತೆ ಆಡುತ್ತಿದ್ದರು..
"ಓಹೋ! ಮದುವೆಯಾಗಿ, ಮಗನಾಗಿ ಕೊನೆಗೆ ಮೊಮ್ಮಗುವೂ ಆಗಿ ಪಾರ್ಕಿಗೆ ಆಡಲು ಕರೆತಂದಿದ್ದಾಳೆ.." ಆದರೇನಂತೆ ಇಷ್ಟು ವರ್ಷ ಕಾದಿದ್ದಕ್ಕೆ ಕೊನೆಗೂ ಇದೇ ಪಾರ್ಕ್ಗೆ ಬಂದಳಲ್ಲ ಅದೇ ಸಂತೋಷ ಅಂತ ಮನಸಿನಲ್ಲಿ ಅಂದುಕೊಂಡವನೇ ಅಲ್ಲಿಂದ ಎದ್ದ..
ತನ್ನ ಕಾಯುವಿಕೆ ಹುಸಿ ಹೋಗಲಿಲ್ಲ ಅನ್ನುವ ಸಾರ್ಥಕತೆ ಅವನ ಮುಖದಲ್ಲಿತ್ತು..

No comments:

Post a Comment