Wednesday 10 December 2014

ಕಾಂಗ್ರೆಸ್ ಮರ ಕಥೆ



ಕಾಂಗ್ರೆಸ್ಮರ:
ಸೆಮಿನಾರ್ ಮುಗಿಸಿಕೊಂಡು ಹೊರಬಂದವನೇ ತನ್ನ ಆ್ಯಪಲ್ ಐಫೋನ್ನಲ್ಲಿದ್ದ ಅಮ್ಮನ ಮಿಸ್ ಕಾಲ್ ನೋಡಿಕೊಂಡ ಚೈತ್ರ ಪಲ್ಗುಣ. ಇವತ್ತು ಅಜ್ಜಯ್ಯನ ವೈಕುಂಠ ಸಮಾರಾಧನೆ ಅನ್ನೋದು ಮತ್ತೆ ನೆನಪಿಗೆ ಬಂತು. ಇದೊಂದು ಹಾಳು ಸೆಮಿನಾರ್ ಇಲ್ಲದೇ ಹೋಗಿದ್ದರೆ ಊರಿನಲ್ಲಿ ಅಜ್ಜಯ್ಯನನ್ನು ಸ್ವರ್ಗಕ್ಕೆ ಕಳಿಸಿಕೊಡಬಹುದಿತ್ತು ಅಂದುಕೊಂಡು ಚಡಪಡಿಸಿದ ಚೈತ್ರ.
ತಿರುಗಿ ಅಮ್ಮನ ನಂಬರ್​​ಗೆ ಡಯಲ್ ಮಾಡಿ ಮಾತನಾಡಿದ. ಅಮ್ಮ ಹೇಳಿದ್ದು ಕೇಳಿ ಕೊಂಚ ಆಶ್ಚರ್ಯ ತೋರ್ಪಡಿಸಿದ. ಅತ್ತಲಿಂದ ಅಮ್ಮ ಉಳಿದೆಲ್ಲಾ ವಿಷಯಗಳ ಜೊತೆ ಮನೆ ಹಿಂಬದಿಯ ತೋಟದಲ್ಲಿದ್ದ ಕಾಂಗ್ರೆಸ್ ಮರ ಇದ್ದಕಿದ್ದ ಹಾಗೆ ವಿನಾಕಾರಣ ಒಣಗಿ ತುಂಡಾಗಿ ಬೀಳುತ್ತಿದ್ದ ವಿಷಯ ಹೇಳುತ್ತಿದ್ದಳು. ಅದನ್ನು ಕೇಳಿಸಿಕೊಂಡು ಫೋನ್ ಕಟ್ ಮಾಡಿದ.
ಐಐಎಂಬಿ ಅಂಗಳದಲ್ಲಿ ಸೂರ್ಯ ಅಸ್ತಂಗಿಸುತ್ತಿದ್ದ ಕುರುಹಾಗಿ ಎಲೆಗಳ ಹಾಯ್ದು ಬೇಳುತ್ತಿದ್ದ ಹಳದಿ ಕಿರಣಗಳ ಪ್ರತಿಫಲನವಿತ್ತು. ಕಿರಣಗಳ ರಶ್ಮಿಯಲ್ಲಿ, ಬಿಳಿಯ ಹೂ ಬಿಡುತ್ತಿದ್ದ ತ್ಯಾಗರ್ತಿಯ ಮನೆ ಹಿಂಬದಿ ತೋಟದ ಕಣಗಿಲೆ ಮರ ನೆನಪಿಗೆ ಬಂತು..
ಬಿಳಿ ಹೂಗಳ ಕಳ್ಳಿ ವೃಕ್ಷ. ಪೊದೆಯಂತೆ ಅಗಲವಾಗಿ ಹರಡಿಕೊಂಡು ಬೆಳೆಯುತ್ತಿತ್ತು.. ಅದಕ್ಕೆ ಕಾಂಗ್ರೆಸ್ಮರ ಅಂತ ಅದ್ಯಾಕೆ ಹೆಸರು ಬಂದಿತೋ ಗೊತ್ತಿಲ್ಲ. ಪ್ರಾಯಶಃ ವಿಷಯ ಶ್ರೀರಾಮಜ್ಜಯ್ಯನಿಗೆ ಮಾತ್ರ ಗೊತ್ತಿತ್ತು.. ತೋಟದಲ್ಲಿದ್ದ ಎಲ್ಲಾ ಹಣ್ಣಿನ ಮರಗಳಿಗಿಂತ ರಾಮಜ್ಜಯ್ಯನಿಗೆ ಕಣಗಿಲೆ ಕಳ್ಳಿ ವೃಕ್ಷವೇ ಅಚ್ಚುಮೆಚ್ಚು..
ಅದೊಂದು ಮರ ಬಾಲ್ಯದಲ್ಲಿ ಎಲ್ಲರಿಗೂ ಸೂಜಿಗ, ಅಚ್ಚರಿ, ಕುತೂಹಲ ಹುಟ್ಟಿಸಿತ್ತು.. ಅದು ಬಿಳಿ ಹೂ ಬಿಡುತ್ತಿದ್ದಾಗ, ಹಸಿರು ಎಲೆಯೂ ಇರುತ್ತಿತ್ತು. ಒಂದು ಋತುವಿಲ್ಲಿ ಅದರ ಹೂಗಳೆಲ್ಲ ಉದುರಿ ಹೋದಾಗ ಎಲೆಗಳೂ ಇಲ್ಲದೆ ಬೋಳಾಗಿ ಕಾಣುತ್ತಿತ್ತು.. ಆಗ ಮರದಲ್ಲಿ ನಿಜವಾದ ವೈಭವ ಶುರು ಆಗುತ್ತಿತ್ತು..
ಊರಿನಲ್ಲಿದ್ದ ಉಳಿದ ಅದರ ಜಾತಿಯ ಮರಗಳು ಬೋಳು ಬೋಳಾಗಿ ಸಾವಿಗೆ ಹತ್ತಿರದಲ್ಲಿದ್ದ  ಹಣ್ಣು ಹಣ್ಣು ಮುದುಕನ ಬೋಡು ತಲೆಯಂತೆ ಕಾಣಿಸುತ್ತಿದ್ದವು.. ಆದರೆ ತೋಟದಲ್ಲಿದ್ದ ಕಾಂಗ್ರೆಸ್ಮರ ಮಾತ್ರ ಬಣ್ಣ ಬಣ್ಣದ ಟೇಪ್ಗಳನ್ನು ಕಟ್ಟಿಸಿಕೊಂಡು ಗ್ಲೋರಿಯಸ್ಕ್ವೀನ್ಆಗಿ ನಳನಳಿಸುತ್ತಿತ್ತು.. ಅದರ ಮೈ ತುಂಬಾ ಕೊಂಬೆ ಕೊಂಬೆಗಳಲ್ಲಿ ರಾಮಜ್ಜಯ್ಯ ವಿವಿಧ ಬಣ್ಣಗಳ ಟೇಪ್ಕಟ್ಟುತ್ತಿದ್ದರು.. ಬಹಳ ವರ್ಷಗಳ ಕಾಲ ಅಜ್ಜಯ್ಯ ಹಾಗೆ ಟೇಪ್ಗಳನ್ನು ಮರಕ್ಕೆ ಯಾಕೆ ಕಟ್ತಾರೆ ಅನ್ನೋದು ಮೊಮ್ಮಕ್ಕಳಿಗೆಲ್ಲಾ ತೀರದ ಕುತೂಹಲದ ವಿಷಯವಾಗಿತ್ತು..
ಕೊನೆಗೆ ಒಂದು ದಿನ ಅಜ್ಜಿ ಹೇಳಿದ್ದು, ಪ್ರತೀ ಕಾಂಗ್ರೆಸ್ನಾಯಕರ ಜನ್ಮದಿನಕ್ಕೆ ಅಜ್ಜ ಒಂದೊಂದು ಟೇಪ್ ಕಟ್ಟುತ್ತಿದ್ದರು.. ನೆಹರೂ, ಗಾಂಧಿ, ಇಂದಿರಮ್ಮ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ನಿಜಲಿಂಗಪ್ಪ, ದೇವರಾಜ್ ಅರಸು, ಕೊನೆಗೆ ಸೋನಿಯಾ ಗಾಂಧಿ ಬರ್ತ್ಡೇಗೂ ಅಜ್ಜಯ್ಯನಿಂದ ಮರಕ್ಕೆ ಟೇಪ್ ಟೈಯಿಂಗ್ ನಡೆಯುತ್ತಿತ್ತು.. ಅಜ್ಜಯ್ಯ ಮಹಾನ್ ಕಾಂಗ್ರೆಸ್ನಿಷ್ಠ.. ಬ್ರಿಟೀಶರ ಕಾಲದಲ್ಲಿ ಕಂದಾಯ ವಸೂಲಿ ಮಾಡುತ್ತಿದ್ದ ಪಟೇಲ ಅನ್ನುವ ಕಾರಣಕ್ಕೆ ಅಜ್ಜಯ್ಯನಿಗೆ ಊರಿನ ಸುತ್ತಮುತ್ತಾ ಬಾರಿ ಮರ್ಯಾದೆಯೂ ಇತ್ತು.. ಅಕ್ಕಪಕ್ಕದ ಹತ್ತು ಹಳ್ಳಿಗಳಲ್ಲಿ ಅಜ್ಜನ ಮಾತು ಕೇಳಿ ಓಟು ಹಾಕುವ ಸಾವಿರಾರು ಜನರಿದ್ದರು.. ಅಜ್ಜಯ್ಯನ ನಿಷ್ಠೆ ಎಷ್ಟಿತ್ತೆಂದರೆ ಕೊನೆಗೆ ಉಳುವವನೇ ಹೊಲದೊಡೆಯ ಅನ್ನುವ ಕಾನೂನು ಜಾರಿಗೆ ತಂದ ಇಂದಿರಾಗಾಂಧಿ, ದೇವರಾಜ್ ಅರಸು ವಿರುದ್ಧವೂ ಅಜ್ಜಯ್ಯ ಅಸಮಧಾನಗೊಂಡಿರಲೇ ಇಲ್ಲ..  ಕಾನೂನು ಜಾರಿಗೆ ಬಂದ ಕಾರಣ ಲ್ಯಾಂಡ್ಲಾರ್ಡ್ ಅಜ್ಜಯ್ಯನ 300 ಎಕೆರೆ ಹೊಲ, ತೋಟ, ಗದ್ದೆ ಮಂಗಮಾಯವಾಗಿತ್ತು..
ಅಂತ ಅಜ್ಜ ಕೊನೆ ಕೊನೆಗೆ ಅದೇಕೆ ಕಾಂಗ್ರೆಸ್ಮೇಲೆ ಮುನಿಸಿಕೊಂಡರೋ ಗೊತ್ತಿಲ್ಲ, ಮನೆಯಲ್ಲಿದ್ದ ಕಾಂಗ್ರೆಸ್ ಕಚೇರಿ ಮುಚ್ಚಲಾಯ್ತು.. ಅಜ್ಜಯ್ಯನಿಗೆ ಹತ್ತಿರದ ಗೆಳೆಯರಾಗಿದ್ದ ಸಾಗರದ ಎಂಎಲ್ ಮಾರಗೋಡು ಮುನಿಯಪ್ಪನ ಹತ್ತಿರವೂ ಅಜ್ಜಯ್ಯ ಚಾಳಿ ಬಿಟ್ಟುಬಿಟ್ಟರು. ಹಲವು ಸುತ್ತಿನ ರಾಜೀ ಸಂಧಾನವಾದ್ರೂ ಅಜ್ಜಯ್ಯನ ಕೋಪ ಮಾತ್ರ ಕಮ್ಮಿ ಆಗಲೇ ಇಲ್ಲ.. ಆಮೇಲೆ ಅಜ್ಜ ಕಾಂಗ್ರೆಸ್ಮರದ ಹತ್ತಿರ ಹೋಗೋದನ್ನೇ ಬಿಟ್ಟಿಬಿಟ್ಟರು..
ವಾಚ್ನಲ್ಲಿ ಸಮಯ ನೋಡಿದ ಚೈತ್ರ ಪಲ್ಗುಣ ಗಂಟೆ 7 ತೋರಿಸುತ್ತಿತ್ತು.. ಬಸ್ ಹಿಡಿದು ಊರಿಗೆ ಹೋಗಬೇಕು ಅನ್ನುವ ತುರ್ತು ಇದ್ದ ಕಾರಣ ಐಐಎಂಬಿಯ ಪ್ರೊಫೇಸರ್ಗೆ ವಿಶ್ ಮಾಡಿ ಅಲ್ಲಿಂದ ಹೊರಟು.. ಮೆಜೆಸ್ಟಿಕ್ನಲ್ಲಿ ಬಸ್ ಹತ್ತಿದ ಮೇಲೆ ಹಗಲಿನ ಆಯಾಸದಿಂದ ನಿದ್ದೆಗೆ ಕಣ್ಣೆಳೆಯತೊಡಗಿತು.. ಸ್ಲೀಪರ್ ಕೋಚ್ ರಾಜಹಂಸದಲ್ಲಿ ಮಲಗಿ ಕಣ್ಣು ಮುಚ್ಚಿಕೊಂಡ ಬಸ್ಸು ಸಾಗರದ ಕಡೆಗೆ ಓಡತೊಡಗಿತು..
                                         ****************
ಅದೆಲ್ಲಾ ಸರಿ, ಅಜ್ಜಯ್ಯ ಸಾಯುವ ದಿನ ಕತ್ತಿ ಹಿಡಿದು ಕಾಂಗ್ರೆಸ್ಮರದ ಹತ್ತಿರ ಯಾಕೇ ಹೋಗಿದ್ರು..? ಮನೆಗೆ ಬಂದಿದ್ದ ಕಾಳೇಶ್ವರ ದೇವಾಲಯದ ಅರ್ಚಕ ವೆಂಕಪ್ಪ ಭಟ್ಟರ ಹತ್ತಿರ ಕೇಳಿದ ಚೈತ್ರ..
ಮಾಣಿ, ನಿಮ್ಮಜ್ಜಯ್ಯನ ತೀರ ಹತ್ರದಿಂದ ನೋಡಿದವ ನಾನು.. ಗೊತ್ತಿದ್ದಾ ನಿಂಗೆ..? ಶ್ರೀರಾಮಚಂದ್ರ ರಾಯರು ಅಂದ್ರೆ ತ್ಯಾಗರ್ತಿ, ಬೆಳ್ಳಂದೂರು, ನೀಚಡಿ ಸೀಮೆಯಲ್ಲಿ ಹೆಸರುವಾಸಿ ಕಾಂಗ್ರೆಸ್ ಕಾರ್ಯಕರ್ತ, ಗೊತ್ತಿದ್ದಾ ನಿಂಗೆ..? ಎಷ್ಟು ಎಲೆಕ್ಷನ್ನಲ್ಲಿ ರಾಮಚಂದ್ರ ಕಾಂಗ್ರೆಸ್ಪರ ಕ್ಯಾನ್ವಾಸ್ ಮಾಡಿದ್ದ ಅಂತ ಗೊತ್ತಿದ್ದಾ ನಿಂಗೆ..? ಅಂತಹ ಮನುಷ್ಯಂಗೆ ಕಾಂಗ್ರೆಸ್ ಪೋಕರಿ ಮುಂಡೇವು ಹಾಗ್ ಮಾಡಬಹುದಾ..? ಬಾಯಲ್ಲಿದ್ದ ಕವಳ ತುಪ್ಪಿ ಬರಲು ಅಂಗಳಕ್ಕೆ ನಡೆದ್ರು ಭಟ್ಟರು..
ಅಮ್ಮ, ಭಟ್ಟರು ಎಲಡಿಕೆ ಉಗಿದ್ರು, ಕಾಫಿ ತಗೊಂಡ್ಬಾ ಭಟ್ಟರು ಕವಳ ಉಗಿಯುತ್ತಿದ್ದಂತೆ ಕಾಫಿ ಕೇಳ್ತಾರೆ ಅನ್ನೋದು ಗೊತ್ತಿದ್ದ ಚೈತ್ರ ಅಮ್ಮನಿಗೆ ಹುಕುಂ ಮಾಡಿದ.. ಕಾಫಿ ಕೊಟ್ಟರೆ ಭಟ್ಟರು ಮತ್ತೆ ಎಲಡಿಕೆ ಹಾಕ್ತಾರೆ ಅಜ್ಜಯ್ಯನ ಬಗ್ಗೆ ಇನ್ನಷ್ಟು ಮಾಹಿತಿ ನೀಡ್ತಾರೆ ಅನ್ನುವ ಆಸೆಯೂ ಅದರಲ್ಲಿತ್ತು..
ಅಮ್ಮ ತಂದು ಕೊಟ್ಟ ಕಾಫಿ ಕುಡಿದ ಭಟ್ಟರು ಮತ್ತೆ ವೀಳ್ಯದ ಎಲೆಯ ತುದಿ ಚಿವುಟಿ, ಗೋಟು ಅಡಿಕೆಯನ್ನು ಅಡಕತ್ತರಿಯಲ್ಲಿ ಕತ್ತರಿಸಿ, ಸುಣ್ಣದಲ್ಲಿ ಹೊಗೆಸೊಪ್ಪು ತೀಡುತ್ತಾ ಮಾತ್ತೆ ಮಾತಿಗೆ ಶುರು ಮಾಡಿದ್ರು ರಾಮಚಂದ್ರ ಏನಪ್ಪಾ ಅಂತದ್ದು ಕೇಳಿದ್ದು, ಎಂಎಲ್​​ ಸೀಟ್ ಕೇಳಿದ್ನಾ? ಎಂಪಿ ಸೀಟ್ ಕೇಳಿದ್ನಾ? ಅಥವಾ ಯಾವ್ದಾದ್ರೂ ರಸ್ತೆ ಕಾಂಟ್ರಾಕ್ಟ್ ಕೊಡಿ ಅಂತ ಕೇಳಿದ್ನಾ? ಏನೋ ಪಾಪ ಗುತ್ಯಮ್ಮ ಸಗಣಿ ಬಳ್ಕೊಂಡು ಓದಿಸಿದ ಅವಳ ಮಗ ರಾಘುಗೆ ಒಂದ್ ಸರ್ಕಾರಿ ಕೆಲಸ ಕೊಡಸಿ ಅಂತ ಕೇಳಿದ.. ಡಿಗ್ರಿ ಮಾಡ್ಕಂಡ್ ಹುಡುಗ, ಫೇಲ್ ಆದ ನಿಜ, ಒಂದ್ ಸಣ್ಣ ಗುಮಾಸ್ತನ ಕೆಲಸ ಕೊಡಸಕ್ಕೆ ಯೋಗ್ಯತೆ ಇರಲಿಲ್ಲೇನೋ ದೊಡ್ಡ ಮನುಷ್ಯ ಮಾರಗೋಡು ಮುನಿಯಪ್ಪಂಗೆ. ಹೋದಾಗೆಲ್ಲ ಎಂಥೆಂತದೋ ನೆಪ ಹೇಳಿದ, ಕೊನೆಗೆ ಅವನ ಪೆಟಾಲಂ ರಾಮಚಂದ್ರನ ಹತ್ರಾನೆ 2 ಲಕ್ಷ ಕೇಳಿದ್ದು ಗೊತ್ತಿದ್ರು ಸುಮ್ಮನೆ ಕುತ್ಕಂಡ. ಕಾಂಗ್ರೆಸ್ ಮುಂಡೇ ಮಕ್ಳು ಸಲ ಎಲೆಕ್ಷನ್ನಲ್ಲಿ ಹಂಗಿಂಗೆ ಸೋಲಲ್ಲ ನೋಡು.. ನಿಮ್ಮಜ್ಜಯ್ಯನ ಕಾಲದಲ್ಲಿದ್ದ ತತ್ವ ಸಿದ್ಧಾಂತ ಒಂದೂ ಇಲ್ಲ. ಎಲ್ಲ ಸೇರ್ಕಂಡು ದೇಶ ದೋಚ್ತಾ ಇದ್ದಾರೆ. ರಾಮಚಂದ್ರನಿಗೂ ಅವ್ರೇನು ಕಮ್ಮಿ ಅನ್ಯಾಯ ಮಾಡ್ಲಿಲ್ಲ ಗೊತ್ತಿದ್ದಾ ನಿಂಗೆ..? ವೆಂಕಪ್ಪ ಭಟ್ಟರಿಗೂ ಎಂಎಲ್ ಮಾರಗೋಡು ಮುನಿಯಪ್ಪನಿಗೂ ಎಣ್ಣೆ ಸೀಗೇಕಾಯಿ ಅನ್ನೋ ವಿಷ್ಯ ಗೊತ್ತಿದ್ದ ಚೈತ್ರ ಮಾತನಾಡದೆ ಕೇಳಿಸಿಕೊಳ್ಳತೊಡಗಿದ.. 
ಹಿತ್ಲ ತೋಟದಲ್ಲಿ ಕಾಂಗ್ರೆಸ್ ಮರ ಇದ್ದಲ್ಲ, ಅದ್ರ ಕಥೆ ಗೊತ್ತಿದ್ದಾ ಮಾರಾಯ. ಅದನ್ನು ರಾಮಚಂದ್ರ ಇಷ್ಟಪಟ್ಟಷ್ಟು, ತೋಟದ ಬಿಳುವ, ಬೊಕ್ಕೆ ಹಲಸು, ಚಂದ್ರಪೇರಲೆ, ರಸಪೂರಿ ಮಾವಿನ ಮರಾನೂ ಇಷ್ಟ ಪಡ್ಲಿಲ್ಲ ಗೊತ್ತಿದ್ದಾ ನಿಂಗೆ..? ಕಾಂಗ್ರೆಸ್ ಉಪದ್ವ್ಯಾಪಿಗಳ ಬರ್ತ್ಡೇಗೆ ಅಂತ ಟೇಪ್ಕಡ್ತಿದ್ದ.. ಅದಕ್ಕೆ ಕಾಂಗ್ರೆಸ್ ಮರ ಅಂತ ಹೆಸರಿಟ್ಟಿದ್ದು ಯಾರು ಅಂತ ಗೊತ್ತಿದ್ದಾ ನಿಂಗೆ..? ರಾಮಚಂದ್ರ ಇಲ್ಲೆಲ್ಲಾ ಫೇಮಸ್ಅಲ್ದಾ, ಒಂದ್ ಸಲ ಆಗಿನ ಸಿಎಂ ನಿಜಲಿಂಗಪ್ಪ ಇಲ್ಲಿಗೆ ಬಂದಿದ್ರು. ಆಗೆಲ್ಲಾ ನೀವ್ ಹುಟ್ಟಿರಲಿಲ್ಲ. ರಾಮಚಂದ್ರ ಮುಂದೆ ನಿಂತು ಇದೇ ತೋಟದಲ್ಲಿ ಕಣಗಿಲೆ ಮರದ ಕೆಳಗೆ ಅಡುಗೆ ಮಾಡಿಸಿ ಭರ್ಜರಿ ಊಟ ಹಾಕ್ಸಿದ್ದ.. ಅದಾದ್ ಮೇಲೆ ನೋಡು ಟೇಪ್ ಕಟ್ಟೋ ಖಯಾಲಿ ಅವನಿಗೆ ಹುಟ್ಟಿಕೊಂಡಿದ್ದು.. ಸಾಯೋ ಹಿಂದಿನ ದಿನ ಮಾರಗೋಡು ಮುನಿಯಪ್ಪನ ಜೊತೆ ಅದೆಂತ ಮಾತುಕಥೆ ಆಯ್ತೋ ಏನೋ, ರಾಮಚಂದ್ರ ದೇವಸ್ಥಾನಕ್ಕೆ ಬಂದಿದ್ದ. ವಿಪರೀತ ಟೆನ್ಷನ್ ಮಾಡ್ಕಂಡಿದ್ದ. ಕಾಂಗ್ರೆಸ್ ಮರನಾ ಬುಡ ಸಮೇತ ಕಡಿದು ಹಾಕ್ತೀನಿ, ಕೃತಜ್ಞತೆ ಇಲ್ದಿರೋ ಕೃತಘ್ನರು ಅಂತ ಬಾಯಿಗೆ ಬಂದ ಹಾಗೆ ಬಯ್ದ. ನಾನು ಕೂರಿಸ್ಕಂಡು ಮರಕ್ಕೂ ಮುಂಡೇ ಮಕ್ಳಿಗೂ ಎಂತದ್ದೋ ಸಂಬಂಧ ಅಂತ ಸಮಧಾನ ಮಾಡಿಸಿ ಕಳಿಸ್ದೆ.. ಅಂತೂ ಭಟ್ಟರು ವಿಷ್ಯಕ್ಕೆ ಬಂದ್ರು ಅಂತ ದೇಹ ಮುಂದೆ ಮಾಡಿ ಕಿವಿಯರಳಿಸಿ ಕೂತ ಚೈತ್ರ..
ಆದ್ರೆ ಅದ್ ಹೆಂಗೆ ಕಡಿಯಕ್ಕೆ ಆಗತ್ತೋ ಮಾರಾಯ.. ನಿಮ್ಮಜ್ಜಯ್ಯಂಗೆ ಮರ ಮುದ್ದು ನೋಡು, ಕಡಿಯಕ್ಕೆ ಅಂತ ಹೋಗಿದ್ದ, ಎಮೋಷನ್ ತಡಿಯಕ್ಕೆ ಆಗಿಲ್ಲ. ಹಂಗಾಗೆ ಕಾಂಗ್ರೆಸ್ ಮರದ ಕೆಳಗೆ ಎದೆ ಒಡ್ಕಂಡು ಪ್ರಾಣ ಬಿಟ್ಟ. ಸಾಯುವಾಗ ಅವ್ನ ಕಣ್ಣಲ್ಲಿ ನೀರಿತ್ತು ಗೊತ್ತಿದ್ದಾ ನಿಂಗೆ..? ನಿಟ್ಟುಸಿರು ಬಿಟ್ಟ ಭಟ್ಟರು ಮತ್ತೆ ಕವಳ ಉಗಿಯಲು ಅಂಗಳಕ್ಕೆ ನಡೆದ್ರು.. ಅಮ್ಮನಿಗೆ ಮತ್ತೆ ಕಾಫಿ ತರಲು ಹೇಳಲಾ ಅಂತ ಯೋಚಿಸತೊಡಗಿದ ಚೈತ್ರ..
                                         ****************
ವೈಕುಂಠ ಸಮಾರಾಧನೆ ಮುಗಿದು 8 ದಿನ ಕಳೆದಿತ್ತು.. ಅಜ್ಜಯ್ಯನ ಫೆವರೇಟ್ ಕಾಂಗ್ರೆಸ್ಮರ ಬದುಕಿಸುವ ಎಲ್ಲಾ ಪ್ರಯತ್ನಗಳೂ ಕೈ ಕೊಟ್ಟಿದ್ದವು. ಸಸ್ಯ ಸಂಶೋಧಕ ಗೆಳೆಯ ವಾಸುದೇವ್ ನಾಡಿಗ್ಗೆ ಕರೆ ಮಾಡಿದ್ದ ಚೈತ್ರ.. ಗಿಡಗಳಿಗೂ ಮನುಷ್ಯನ ಭಾವನೆ ಅರ್ಥ ಆಗುತ್ತೆ.. ಅವುಗಳೂ ಮನುಷ್ಯನ ಕರುಣೆ, ಪ್ರೀತಿ, ದುಃಖ ಅರ್ಥಮಾಡಿಕೊಳ್ತಾವೆ.. ನಿಮ್ಮಜ್ಜಯ್ಯ ಮರವನ್ನು ಪ್ರೀತಿಸಿದಷ್ಟೇ, ಮರವೂ ನಿಮ್ಮಜ್ಜಯ್ಯನನ್ನು ಪ್ರೀತಿಸಿತ್ತು.. ಪ್ರಾಯಶಃ ಮರ ಕಡಿಯಲು ಹೋದ ನಿಮ್ಮ ಅಜ್ಜಯ್ಯ ತನ್ನ ಕೈನಿಂದ ಸಾಧ್ಯ ಇಲ್ಲ ಅಂತ ಸಂಕಟ ಪಟ್ಟುಕೊಂಡಿದ್ದು ಮರದ ಸೂಕ್ಷ್ಮ ಭಾಗಕ್ಕೆ  ಅರಿವಾಗಿದೆ.. ಹಾಗಾಗಿ ಅದೂ ಕೂಡಾ ಕೊರಗುತ್ತಲೇ ಸೊರಗಲಾರಂಭಿಸಿದೆ ಅನ್ನುವ ವಿಚಿತ್ರ ನಂಬಲು ಸಾಧ್ಯವಿಲ್ಲದ ಅನಿಸಿಕೆಯ ವಿವರಣೆ ನೀಡಿದ್ದ ನಾಡಿಗ್..
ಟೀವಿಯಲ್ಲಿ ದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಬರ್ತಾ ಇತ್ತು.. ಕಾಂಗ್ರೆಸ್ಪಕ್ಷ ತನ್ನ ಎದುರಾಳಿ ಬಿಜೆಪಿಯ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲತೊಡಗಿತ್ತು.. 60 ವರ್ಷ ದೇಶವಾಳಿದ್ದ ರಾಷ್ಟ್ರೀಯ ಪಕ್ಷ ತನ್ನ ದುರಾಡಳಿತದ ಕಾರಣ ಜನರಿಂದ ತಿರಸ್ಕ್ರತಗೊಂಡಿತ್ತು.. ರಾಮಜ್ಜಯ್ಯ ಬದುಕಿದ್ದರೆ ಫಲಿತಾಂಶವೇ ಅವರನ್ನು ಸಾಯಿಸಿಬಿಡುತ್ತಿತ್ತೇನೋ ಅಂದುಕೊಂಡ ಚೈತ್ರ..
ಅಷ್ಟರಲ್ಲಿ ಒಳಗೆ ಕಾಲಿಟ್ಟ ವೆಂಕಪ್ಪ ಭಟ್ಟರು ನೋಡಿದ್ಯನೋ ಕಾಂಗ್ರೆಸ್ ಕಥೇನಾ..? ರಾಮಚಂದ್ರನ ಆತ್ಮಕ್ಕೆ ಈಗ ಶಾಂತಿ ಸಿಕ್ತು ನೋಡು ಅಂದು, ಎಲಡಿಕೆ ಹರಿವಾಣಕ್ಕೆ ಕೈ ಹಾಕಿದ್ರು.. ಹಿತ್ತಲಿನಿಂದ ಅಮ್ಮ ಕೂಗಿದ್ದು ಕೇಳಿ ಅತ್ತ ಹೋದ ಚೈತ್ರನಿಗೆ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು.. ಶ್ರೀರಾಮಚಂದ್ರ ಅಜ್ಜಯ್ಯನ ಮುದ್ದಿನ ಕಾಂಗ್ರೆಸ್ಮರ ಬುಡ ಸಹಿತ ಧರೆಗುರುಳಿತ್ತು.. ಅದರ ಬೇರುಗಳ ತಲೆ ಮೇಲಾಗಿ ಅಲ್ಲಿ ಕುಣಿ ಬಿದ್ದಿತ್ತು.. ಅಜ್ಜ ಕಟ್ಟಿದ್ದ ನೂರಾರು ಟೇಪ್ಗಳು ಗಾಳಿಗೆ ಹರಡಿ ಹೋಗಿದ್ದವು..
ಅಜ್ಜಯ್ಯನ ಆತ್ಮಕ್ಕೆ ನಿಜಕ್ಕೂ ಶಾಂತಿ ಸಿಗುತ್ತಾ ಈಗ.. ಯೋಚನೆಗೆ ಬಿದ್ದ ಚೈತ್ರ ಪಲ್ಗುಣ
                                                                          -ವಿಶ್ವಾಸ್ ಭಾರದ್ವಾಜ್ (ವಿಪ್ರವಿಶ್ವತ್)

No comments:

Post a Comment