Wednesday 10 December 2014

ಆತ್ಮ ಮುಕ್ತ



ಆತ್ಮ ಮುಕ್ತ
ಪಾಪದ ಮನುಷ್ಯ ಯಾರ ಉಸಾಬರಿಗೂ ಹೋದವನಲ್ಲ ತಾನಾಯ್ತು, ತನ್ನ ಪಾಡಾಯ್ತು ಅಂತಿದ್ದ. ಇಷ್ಟು ಬೇಗ ಹೋಗಬಾರದಿತ್ತು.  ಸಾಯೋ ವಯಸ್ಸೇ ಅಲ್ಲಬೇಸರದಲ್ಲಿ ಮಾತನಾಡುತ್ತಿದ್ದಿದ್ದು ದೊಡ್ಡ ಆಲದ ಮರದ ಶಂಕರಪ್ಪ.
ಅರೇ! ಅವರು ಮಾತನಾಡುತ್ತಿರುವುದು ತನ್ನ ಕುರಿತಾಗಿ. ಮುಖ ಬಾಡಿದೆ ತನ್ನ ಆತ್ಮೀಯ ಗೆಳೆಯರಲ್ಲಿ ನಿಗರ್ವಿ, ಸಾಧು ಮನುಷ್ಯ. ಕಡು ಮೌನಿಯಾದರೂ ಸ್ನೇಹ ಜೀವಿ. ತನ್ನ ಕುರಿತಾಗಿ ಏನೇನೋ ಬಡಬಡಿಸುತ್ತಿದ್ದಾರೆ ತಾನೆಲ್ಲಿ ಹೋಗಿದ್ದೇನೆ ? ತಾನು ಇಲ್ಲೇ ಇದ್ದೇನೆ. ಹೋಯ್ ಶಂಕರಣ್ಣ, ಎಂಥ ಮರಾಯ್ರೆ ಇದು ತಾನಿಲ್ಲೆ ಇಲ್ವೆ ? “ಕೂಗಿ ಹೇಳಬೇಕೆನಿಸಿತ್ತು.
ಹತ್ತಿರ ಹೋಗಿ ಕೂಗಿ ಹೇಳತೊಡಗಿದೆ ಎಡ-ಬಲ, ಹಿಂದೆ-ಮುಂದೆ, ಅರೆ ಎತ್ತ ಹೋದರೂ ಪಾರ್ಟಿ ನೋಡುತ್ತಲೇ ಇಲ್ಲ. ಏನಾಗಿದೆ ಇಲ್ಲಿ? ಎಲ್ಲ ಅಳುತ್ತಿದ್ದಾರೆ, ದುಃಖದಲ್ಲಿದ್ದಾರೆ, ತನ್ನ ಗುಣಗಾನ ಮಾಡುತ್ತಿದ್ದಾರೆ ಸಂತಾಪ, ವಿಷಾಧ ವ್ಯಕ್ತಪಡಿಸುತ್ತಿದ್ದಾರೆ, ತನ್ನ ಸಾಧನೆಗಳನ್ನು ವರ್ಣಿಸುತ್ತಿದ್ದಾರೆ. ಅರೆ! ಇದು ನಮ್ಮೂರಿನ ರುದ್ರಭೂಮಿಯ ಸ್ಥಳವಲ್ಲವೇ? ಅಲ್ಲಿ ನಿಂತಿರುವುದು ತನ್ನ ಮಗ ಇಂದ್ರಜಿತ್. ಮಟ್ಟಸವಾಗಿ ಉಟ್ಟಿರುವ ದಟ್ಟಿ ಪಂಚೆ, ಮೇಲೊಂದು ಪಾಣಿ ಪಂಚೆಯ ಉತ್ತರೀಯ, ಅರೆ, ಇದೇನಿದು ಸಂಪ್ರಧಾಯಗಳನ್ನೇ ನಂಬದವ ಜನಿವಾರವನ್ನು ತಿರುಗು ಹಾಕಿಕೊಂಡು ಪುರೋಹಿತರ ಬಳಿ ಏನು ಮಾಡುತ್ತಿದ್ದಾನೋ? ಜನಿವಾರ ಕಳಚಿದ್ದ. ಮತ್ತೆ ಯಾವಾಗ ತೊಟ್ಟುಕೊಂಡ..? ಮನೆಗೇ ಬರಲ್ಲ ಅಂತ ಮುನಿಸಿಕೊಂಡು ಬೆಂಗಳೂರು ಸೇರಿದ್ದವ, “ಮಗನೇ ನನ್ನ ಮೇಲೆ ಕೋಪ ಹೋಯ್ತಾ..?” ಹೆಗಲು ತಟ್ಟಿ ಸಮಾಧಾನ ಮಾಡುವ ಆಸೆ..ಇಲ್ಲ ಹೆಗಲು ಸಿಗುತ್ತಿಲ್ಲ. ತಬ್ಬಿಕೊಳ್ಳೋಣವೆಂದ್ರೆ ಅವನ ಬೆನ್ನು ಎಟುಕುತ್ತಿಲ್ಲ..
ಆಹಾ! ತನ್ನಂತೆಯೆ ತನ್ನ ಮಗ. ತಾನು ಯೌವನದಲ್ಲಿ ಹೀಗೆ ಇದ್ದೆನಲ್ಲ; ದಿಟ್ಟೊ ತನ್ನ ಪಡಿಯಚ್ಚು ತನ್ನ ಮಗ. ಗುಣದಲ್ಲಿಯೂ ಸಹ ತನ್ನಂತೆ ಸೌಮ್ಯ ಎಂದು ಜನ ಹೇಳುತ್ತಾರೆ. ಅಲ್ಲಿ ಹಿಂಬದಿಯಲ್ಲಿ ನಿಂತಿರುವುದು ತನ್ನ ಎರಡನೆಯ ಮಗ ವಿಶ್ವಜಿತ್.. ಅವನೇ ಮುಂಗೋಪಿ, ಹಠಮಾರಿ, ಥೇಟ್ ತನ್ನವಳಂತೆಯೇ. ಇಂದೆಕೋ ಮುಖ ಸಣ್ಣದಾಗಿಸಿಕೊಂಡಿದ್ದಾನೆ. ಅರೆ ಇವಳೆಲ್ಲಿ? ಕಾಣುತ್ತಿಲ್ಲ ಮಗಳು ವಂತಿಕ? ಅವಳು ಕಾಣುತ್ತಿಲ್ಲ. ಮುದ್ದಿನ ಮಗಳು ಅವಳು.. ಹೆಂಗಸರು ಏಕೆ ಬಂದಿಲ್ಲ? ಹೌದು ಮನೆಯಲ್ಲಿ ಸಹ ಎಲ್ಲ ಬಂಧುಮಿತ್ರರು ಸ್ನೇಹಿತರು ಬಂದಿದ್ದಾರೆ. ಆದರೆ ಯಾರು ಸಂಭ್ರಮದಿಂದಿಲ್ಲ ಎಲ್ಲರೂ ಬಾಡಿಹೋಗಿದ್ದಾರೆ, ದುಃಖದಿಂದಿದ್ದಾರೆ.
ಹೋಯ್ ಸುಬ್ಬಣ್ಣ ಎಂಥ ಮಾರಾಯ ಮೊನ್ನೆ ಅಡಿಕೆ ಸುಲಿಯಕ್ಕೆ ಬತ್ತಿ ಹೇಳಿ ಬರ್ಲೇ ಇಲ್ಲೆ”? ಅವನು ನೋಡಲೇ ಇಲ್ಲ. ನಿಜ ಸುಬ್ಬಣ್ಣನೇ ಅದು. ಆದರೆ ಮಾತನಾಡಿಸಿದರೆ ಮಾತನಾಡುತ್ತಿಲ್ಲ. ಏನಾಗಿದೆ? ಅವನು ನೆರೆಮನೆಯ ಗೆಳೆಯ ಅಡಿಕೆ ಸುಲಿಯುವಾಗ ಅದೆಷ್ಟು ಮಾತನಾಡುತ್ತಿದ್ದನು. ಎಷ್ಟೋ ಸಲ ಮೇಲೆ ಬಿದ್ದು ನನ್ನನ್ನು ಮಾತನಾಡಿಸಿ ಗೋಳು ಹೊಯ್ದುಕೊಂಡಿದ್ದು ಉಂಟು.. ಅಂತಹ ಅಸಾಮಿ ಇಂದು ತಿವಿದು ಮಾತನಾಡಿಸಿದ್ರೂ ಮಾತನಾಡುತ್ತಿಲ್ಲವೇಕೆ..?
ಅದೋ ಅಲ್ಲಿರುವುದು ಗುರುಗಳು ರಾಜಾರಾಮ್ ಭಟ್ರಲ್ಲವೆ? ಹೌದೇ ಹೌದು! ಅವರೆ, ತನಗೆ ಪಾಠ ಹೇಳಿಕೊಟ್ಟವರು.. ವೇದಾಧ್ಯಯನ ಮಾಡಿಸಿದವರು, ಪಿತೃ ಸಮಾನರು.. ಭಯಂಕರ ಕವಳದ ಮನುಷ್ಯ ಆದರೆ ಇಂದೇಕೊ ಕವಳ ಬಾಯಲ್ಲಿ ಇದ್ದ ಹಾಗೆ ಕಾಣ್ತಿಲ್ಲ.
ಅವ ಭಯಂಕರ  ಹಠವಾದಿ ಮಾರಾಯ, ಹಂಗೆಲ್ಲ ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸೋ ಮಾತೇ ಇಲ್ಲಾಗಿತ್ತು. ಹಂಗ್ ನೋಡಿದ್ರೆ ಕಣ್ಣೆದುರೇ ಇದ್ದಲ್ದಾ ಉದಾಹರಣೆ, ಎಮ್ಮೂರಿನ ಲಕ್ಷ್ಮಿನಾರಾಯಣ ದೇವಸ್ಥಾನ, ಅಷ್ಟಬಂಧ ಮಾಡಿಸ್ದ, ಚಂದ್ರಸಾಲೆ ಹಾಕ್ಸಿದ್ದ, ಕಳಶ, ಗೋಪುರ ಎಲ್ಲಾ ಖುದ್ದು ನಿಂತು ಮಾಡ್ಸಿದ್ದ ಮಾರಾಯ, ಈಗ ನಂಬಕ್ಕೆ ಆಗ್ತಲ್ಯೆ ಇಲ್ಲ ಹೇಳಿ”. ಮಾತುಗಳು ನಿರಂತರವಾಗಿ ಸಾಗುತ್ತಿತ್ತು ಮೇಲಿನ ಮನೆ ಶಂಭುಹೆಗಡೆ, ಕೆದ್ಲಯ್ಯ ಹೆಗಡೆ ಮಧ್ಯದಲ್ಲಿ. ಮತ್ತದೆ ತನ್ನದೇ ವಿಷ್ಯ ಅಲ್ಲಿ ಚರ್ಚೆಯಾಗುತ್ತಿದೆ.
ಇವರೆಲ್ಲ ಯಾಕೆ ಹೀಗೆ ವಿಷಣ್ಣರಾಗಿ ಮಾತನಾಡುತ್ತಿದ್ದಾರೆ?. ಇಷ್ಟಕ್ಕೂ ತನಗೇನಾಗಿದೆ? ತಾನೂ ಚೆನ್ನಾಗಿದ್ದೇನೆ ಎಂದು ಪದೇ ಪದೇ ಸಾರಿ ಹೇಳುತ್ತಿದ್ದರು ಈ ಜನಗಳು ತನ್ನನ್ನು ಗುರುತಿಸುತ್ತಿಲ್ಲ, ಮಾತಿಗೆ ಉತ್ತರಿಸುತ್ತಿಲ್ಲ.
ನಮ್ಮೂರಿನ ದುರಾಸೆ ಬಡ್ಡಿ ಮಗ ರಾಜಯ್ಯ ಹೆಗಡೆ ಬಂದ ಅನ್ಸುತ್ತೆ. ಅವನ ಪೆಟಾಲಂ ಸುತ್ತು ವರಿಯುತ್ತಿದ್ದಾರೆ. ಶುದ್ಧ ರೌಡಿಗಳು ಮುಂಡೇವು ಮಾಡಕ್ಕೆ ಕೆಲಸ ಇಲ್ಲ, ಅವರಿವರನ್ನು ಸುಲಿದೇ ಬದುಕಬೇಕು.. ಹುಟ್ಟಿದ್ದು ಬ್ರಾಹ್ಮಣರ ಜಾತಿಲಿ ಬದುಕ್ತಿರೋದು ಮಾತ್ರ ಅನಾಗರೀಕರ ತರ..ಅವಂಗೆ ಅಂಥ ಹೇಳ್ಕಳ ಸಮಸ್ಯೆ ಇರ್ಲೆ ಅಂತ ಕಾಣ್ತು ಮಾರಾಯ. ಒಂದು ತಿಂಗಳ ಹಿಂದೆ ಬೈಂದ, ಒಂದಷ್ಟು ಸಾಲ ಇದ್ದು ಹೇಳಿದ್ದ, ಆನೆ ನೋಡೊಕಾಗ್ದೆ 65 ಸಾವಿರ ರೂಪಾಯಿ ಕೊಟ್ಟಿದಿ”. ರಾಜಯ್ಯ ಹೆಗಡೆ ಗತ್ತಿನಿಂದ ಹೇಳಿಕೊಳ್ಳುತ್ತಿದ್ದಾನೆ. ತಾನ್ಯಾವಾಗ ಇವನ ಹತ್ರ ಸಾಲ ತಗಂಡಿದ್ದೀನಿ ಎಲಾ ಬಡ್ಡಿ ಮಗನೇ ತನ್ನ ಎದುರಲ್ಲಿ ಇಷ್ಟು ಸುಳ್ಳು ಹೇಳುವವನು ತಾನಿಲ್ದೆ ಇದ್ದಾಗ ಇನ್ನೆಷ್ಟು ಸುಳ್ಳು ಹೇಳ್ತಾನೋ ಏನೋ. ಹೋಯ್ ನಾನಿಲ್ಲೆ ಇದಿನೋ ಮಾರಾಯ, ಯಾವಾಗ ಎಂಗೆ ದುಡ್ಡು ಕೊಟ್ಟಿದ್ಯೋ”. ಕೊರಳ್ ಪಟ್ಟಿ ಹಿಡಿದು ಕೇಳಣಾ ಅಂತ ಹತ್ತಿರ ಹೋದೆ ಕೊರಳೇ ಸಿಕ್ತ ಇಲ್ಲ.. ಈಗ ಬಿಟ್ರೆ ನನ್ನ ಮಗನ ಬಳಿ ಸುಳ್ಳೇ ಸುಲಿಗೆ ಮಾಡಿ ಬಿಡ್ತಾನೆ.. ಆದರೆ ಯಾರು ತನ್ನ ಮಾತನ್ನು ಕೇಳುತ್ತಿಲ್ಲ. ಇದೇಕೆ ಹೀಗೆ.
ವೇದ ಮಂತ್ರ ತಾರಕಕ್ಕೆ ಏರುತ್ತಿದೆ. ಮಗ ಕುಂಭ ಹೊತ್ತು ಮೂರು ಬಾರಿ ಸುತ್ತುತ್ತಾ ಇದ್ದಾನೆ. ಅಲ್ಲೇನೆ ಕಟ್ಟಿಗೆ ರಾಶಿ ಇದ್ದ ಹಾಗೆ ತೋರುತ್ತಿದೆ ಒಡೆದು ಹಾಕಿದ ಕಟ್ಟಿಗೆ ರಾಶಿಗೆ ಬೆಂಕಿ ಕೊಡುತ್ತಿದ್ದಾನೆ ಎಣ್ಣೆ ಹೊಯ್ಯುತ್ತಿದ್ದಾರೆ ಕೆಲವರು. ಅರೇ ಇದು ಥೇಟ್ ಅಂತ್ಯ ಸಂಸ್ಕಾರದ ಕಾರ್ಯಕ್ರಮದಂತೆ ನಡೆಯುತ್ತಿದೆ ಆದರೆ ಯಾರ ಅಂತ್ಯ ಸಂಸ್ಕಾರ ತಾನಿನ್ನೂ ಸತ್ತಿಲ್ಲವಲ್ಲ. ಅಬ್ಬ ಬೆಂಕಿಯ ಝಳ ಉರಿ ಸಹಿಲಸಾಧ್ಯ.. ಅಬ್ಬಬ್ಬಾ ಬೆಂಕಿ ಧಗಧಗನೆ ಉರಿಯುತ್ತಿದೆ, ಚಿತೆ ಬೂದಿಯಾಗುತ್ತಿದೆ ಎಲ್ಲಾ ಹೊರಟಿದ್ದಾರೆ, ಬಾಯಾರಿಕೆಯಾಗುತ್ತಿದೆ ಹಸಿವಾಗುತ್ತಿದೆ, ಅರೆ ತನ್ನನ್ನು ಬಿಟ್ಟು ಎಲ್ಲಾ ಹಿಂದಿರಿಗುತ್ತಿದ್ದಾರೆ. ಮನೆಗೆ ಹೋಗಲೇ? ತನ್ನ ಮನೆಗೆ ತಾನು ಹೋಗಲು ಯಾರ ಅನುಮತಿ ಬೇಕು.
ಹೋಗುವೆನೆಂದರು ಹೋಗಲು ಸಾಧ್ಯವಾಗುತ್ತಿಲ್ಲ. ಈ ಸ್ಮಶಾನವೇ ಸುಖವೆನಿಸುತ್ತಿದೆ ಇಲ್ಲಿಂದ ಹೋಗುವ ಮನಸ್ಸಾಗುತ್ತಿಲ್ಲ, ಆಲದ ಬಿಳಲುಗಳು ಅಡ್ಡಗಟ್ಟುತ್ತಿವೆ. ಸುಸ್ತಾದರೂ ಮಲಗ ಕೊಡುತ್ತಿಲ್ಲ, ನೆಲದ ಮೇಲೆ ಕಾಲಿರಿಸಲು ಸಾಧ್ಯವಾಗುತ್ತಿಲ್ಲ, ಭಯಾನಕ ಹಸಿವು ನೀರಡಿಕೆಗಳು ಗೋಚರಿಸುತ್ತಿವೆ, ತನಗೇನಾಗಿದೆ ಗೊತ್ತಾಗುತ್ತಿಲ್ಲ, ಆಲದ ಮರದ ಬಿಳಲುಗಳ ಮೇಲೆ, ಹುಣಸೇ ಮರದ ಕೊಂಬೆಯ ಮೇಲೆ ನೇತಾಡುವ ಆಸೆಯಾಗುತ್ತಿದೆ. ಪಲ್ಲಂಗದಲ್ಲಿ ಬರುವ ನಿದ್ದೆ ಈ ಕೊಂಬೆಗಳ ಮೇಲೆ ಬರುತ್ತಿದೆ. ಇದೆಂತಹ ಸನ್ನಿವೇಶ..
ಮೊದಲ ಹಂತ ಮುಗಿದಿದೆ.. ವ್ಯವಸ್ಥಿತವಾಗಿ ದಶದಾನ, ಶವಪುಣ್ಯಹ, ಚಿತಾಪುಣ್ಯಹ ಅಥವಾ ಚಿತೆ ಶುದ್ಧಿ, ಅಗ್ನಿ ಸ್ಪರ್ಶಗಳು ಸಂಪೂರ್ಣವಾಗಿ ಆಗಿದೆ.  ಇಲ್ಲೇನಾಗುತ್ತಿದೆ ನನ್ನ ಅಸ್ಥಿತ್ವವೇನು ಅನ್ನೋದು ಮಾತ್ರ ಆದರೆ ಅನುಭವಕ್ಕೆ ನಿಲುಕುತ್ತಿಲ್ಲ.
ಎರಡನೇ ಹಂತದಲ್ಲಿ ಅಸ್ಥಿ ಸಂಚಯನವೂ ಮುಗಿದಿದೆ.. ಮೂರು ದಿನಗಳ ನಂತರ ಬೂದಿ ಮಗೆದಾಗಿದೆ ಈ ಮೂರು ದಿನಗಳಲ್ಲಿ ಹಸಿವು, ಬಾಯಾರಿಕೆಗಳು, ಅತೀವವಾಗಿ ಭಾದಿಸಿದೆ ಏನೊಂದೂ ಅರ್ಥವಾಗುತ್ತಿಲ್ಲ. ತನ್ನ ಮಗ ಏಳನೆ ದಿನಕ್ಕೆ ಕ್ರೀಯೆ ಹಿಡಿದಿದ್ದಾನೆ. ಒಂಬತ್ತನೇ ಮತ್ತು ನಾಲ್ಕನೇ ದಿನವೂ ಹಿಡಿಯಬಹದು ಅಂತಾರೆ ಈ ಅಪರ ಕ್ರಿಯೆಯನ್ನು.. ಹತ್ತನೇ ದಿನದಲ್ಲಿ ದಶಾಂಜಲಿ ಮುಗಿಯಿತು. ಘಟ್ಟದ ಮೇಲೆ ಅದನ್ನು ಧರ್ಮೋದಕ ಅಂತಾರೆ.. ಅಲ್ಲಿಗೆ ಒಟ್ಟಾರೆ ನಾಲ್ಕು ಹಂತಗಳು ಮುಗಿದಿದೆ. ಆದರೂ ಅನುಭವಕ್ಕೆ ಬರುತ್ತಿಲ್ಲ. ಈಗ ನಾನು ಯಾರು..? ನಾನೇನಾಗಿದ್ದೀನಿ..? ನನ್ನ ಮನೆ ಮಂದಿ, ಬಂಧು ಬಾಂದವರು, ಸ್ನೇಹಿತರು ಇಷ್ಟರು ಇವರೆಲ್ಲಾ ಯಾಕೆ ದೂರವಾಗಿದ್ದಾರೆ? ಬದುಕಿದ್ದಾಗ ಪ್ರೀತಿಸಿದ್ದವರು, ಗೌರವಿಸಿದವರು, ಮೆಚ್ಚುತ್ತಿದ್ದವರು ಇಂದು ಯಾರೂ ಇಲ್ಲ ಜೊತೆಗೆ..? ತಾನು ಅಕ್ಷರಶಃ ಏಕಾಂಗಿ..! ಧರ್ಮೇಚ, ಆರ್ಥೇಚ, ಕಾಮೇಚ ನಾತಿಚರಾಮಿ ಅನ್ನುವ ಮಂತ್ರ ಹೇಳಿ ಜೊತೆಯಲ್ಲಿ ಸಪ್ತಪದಿ ತುಳಿದ ಪತ್ನಿ ಇಲ್ಲ.. ಹೆಗಲ ಮೇಲೆ ಹೊತ್ತು ಸಂಸ್ಕಾರ ಕಲಿಸಿದ ಇಬ್ಬರು ಗಂಡು ಮಕ್ಕಳು, ಪ್ರೀತಿಯಿಂದ ಹೊತ್ತು ಬೆಳೆಸಿದ ಮಗಳು ಸಹ ಇಲ್ಲ.. ಎಲ್ಲವೂ ಗೊಂದಲಮಯವಾಗಿದೆ.. ಹಸಿವು, ನೀರಡಿಕೆ, ದಾಹ ಇಂಗುತ್ತಿಲ್ಲ. ಎಲ್ಲವೂ ಅಯೋಮಯ ಎನಿಸುತ್ತಿದೆ..
ಹನ್ನೊಂದನೆ ದಿನದಂದು ಅಪರ ಕರ್ಮಗಳು ಅಥವಾ ಬಜ್ಜ ಆರಂಭವಾಯಿತು. ಐದನೇ ಹಂತದಲ್ಲಿ ಏಕೋದಿಷ್ಟ ಅಂದರೆ ಪ್ರೇತ ಸಂಸ್ಕಾರವಾಯಿತು. ಈಗ ಐದು ಹಂತಗಳ ನಂತರ ಸ್ವಲ್ಪ ಸ್ವಲ್ಪವೇ ಅನುಭವಕ್ಕೆ ಬರುತ್ತಿದೆ..ಹೌದು! ತಾನು ಬದುಕಿಲ್ಲ, ಸ್ವಲ್ಪ ಅನುಮಾನಗಳಿವೆಯಾದರೂ ಸ್ಪಷ್ಟನೆ ದೊರಕಲಾರಂಭಿಸಿದೆ. ಮಕ್ಕಳಾದ ಇಂದ್ರಜಿತ್ ಮತ್ತು ವಿಶ್ವಜಿತ್‍ರಿಗೆ ಕೇಶ ಮಂಡನೆಯಾಗಿದೆ, ಹನ್ನೆರಡನೆಯ ದಿನ ಸಂಪಿಂಡಿಕರಣ ಆರನೆ ಹಂತ ಸಂಪೂರ್ಣವಾಯಿತು. ಈಗ ಸಂಪೂರ್ಣವಾಗಿ ಅನುಭವಕ್ಕೆ ಬಂದಿದೆ. ಅಂದು ರಾತ್ರಿ ಹೃದಯಾಘಾತವಾಯಿತು ಅತಿಯಾಗಿ ಎದೆನೋವು ಬಂದಿತು, ಹೊಟ್ಟೆಯಲ್ಲಿ ಅಸಾಧ್ಯ ಸಂಕಟವಾಯಿತು, ಒಂದೇ ಸಲಕ್ಕೆ ಬ್ರಹ್ಮರಂಧ್ರ ತೆರೆದಂತಾಯಿತು, ಅಲ್ಲಿಂದ ಎಲ್ಲವೂ ಅಸ್ಪಷ್ಟ ಆದರೆ ಈಗ ಗೊಂದಲಗಳ ನಿವಾರಣೆಯಾಗಿದೆ. ತನ್ನ ಅಸ್ಥಿತ್ವ ಮುಗಿದಿದೆ. ತನಗಿನ್ನು ಭೂಮಿಯ ಮೇಲೆ ಸ್ಥಳವಿಲ್ಲ ನೋವಾಗುತ್ತಿದೆ ಇಂದಿಗೆ ತಾನೂ ಸಹ ಅಸ್ಥಿತ್ವ ಕಳೆದುಕೊಂಡ ತನ್ನ ಅಪ್ಪ, ಅಜ್ಜ, ಮುತ್ತಜ್ಜ ಮುಂತಾದ ಪಿತೃಗಳ ಸಾಲಿಗೆ ಸೇರುತ್ತೇನೆ.
ಏಳನೇ ಹಂತ ಕೊನೆಯ ಹಂತ ಈ ಹದಿಮೂರನೇ ದಿನದಲ್ಲಿ ಪಿತೃ ಸಂತೃಪ್ತಿಗಾಗಿ ಹನ್ನೆರಡು ಬ್ರಾಹ್ಮಣರನ್ನು ಕರೆಸಿ ದ್ವಾದಶ ಆರಾಧನೆಯನ್ನು ನಡೆಸಲಾಗುತ್ತಿದೆ. ಹದಿನಾಲ್ಕನೆಯ ದಿನ ವೈಕುಂಠ ಸಮಾರಾಧನೆ.. ತನ್ನನ್ನು ವೈಕುಂಠಕ್ಕೆ ಕಳುಹಿಸುವುದು ಅಂದರೆ ತಾನೀಗ ಪ್ರೇತಾತ್ಮಗಳ ಸಾಲಿಂದ ದೇವಾತ್ಮಗಳ ಸಾಲಿಗೆ ಸೇರಿದೆ. ಏಳು ಹಂತಗಳು ಪೂರ್ಣವಾದ ನಂತರ ತನ್ನನ್ನು ಭೂಮಿಯಿಂದ ಬೀಳ್ಕೊಡಲಾಗುತ್ತದೆ. ತಾನು ಹೋಗಲೇ ಬೇಕು. ಮಗ ಪುರೋಹಿತರ ಅಣತೆಯಂತೆ ಸಕಲ ಕ್ರಿಯಾ ಕರ್ಮಗಳ ವಿಧಾನಗಳನ್ನು ನಿರ್ವಿಘ್ನವಾಗಿ, ಸಾದ್ಯಾಂತ್ಯವಾಗಿ ಮತ್ತು ಸಾಂಗೋಪವಾಗಿ ನೆರವೇರಿಸಿದ್ದರಿಂದ ತಾನೂ ಯಾವುದೋ ಸಮಸ್ಯೆಯಾಗದೆ ಹೊರಡುತ್ತಿದ್ದೇನೆ. ಎಲ್ಲಾ ಬಂಧನಗಳನ್ನು ಕಳಚಿಕೊಂಡು ಮುಕ್ತಿ ಗಳಿಸಿಕೊಂಡು ಲೋಕದ ಋಣ ತೀರಿಸಿಕೊಂಡು ಹೋಗುತ್ತಿದ್ದೇನೆ. ವಿಶ್ವನಾಥ ಶರ್ಮ ಎಂಬ ತನ್ನ ಹೆಸರು ಇನ್ನು ಮುಂದೆ ನೆನಪು ಮಾತ್ರ. ಬೆತ್ತಲೆಯಾಗಿ ಬಂದಿದ್ದ ತಾನೂ ಬೆತ್ತಲೆಯಾಗಿ, ಏನೊಂದು ತೆಗೆದುಕೊಳ್ಳದೆ ಖಾಲಿ ಹಸ್ತದಿಂದ ಗಳಿಸಿಕೊಂಡ ಪುಣ್ಯಗಳ ಜೊತೆ ಮಾತ್ರ ಹೊರಡುತ್ತಿದ್ದೇನೆ.
                                                                                                                       -ವಿಪ್ರವಿಶ್ವತ್, (ವಿಶ್ವಾಸ್ ಭಾರದ್ವಾಜ್)

No comments:

Post a Comment