Wednesday, 28 January 2015

ಬೋಸ್ ಟ್ರಿಬ್ಯೂಟ್

ಇಂದು ದೇಶದ ಚರಿತ್ರೆ ಕಂಡ ಅಪ್ರತಿಮ ದೇಶಭಕ್ತ ಯೋಧನ ಜನ್ಮದಿನ.. ಸ್ವರಾಜ್ಯ ಹಾಗೂ ಸ್ವಾತಂತ್ರ್ಯಕ್ಕಾಗಿ ಮಹಾಸಂಗ್ರಾಮ ಹುಟ್ಟುಹಾಕಿದ ಆ ಧೀಮಂತ ನಾಯಕ ಕೊನೆಗೂ ಅಸಂಖ್ಯ ಪ್ರಶ್ನೆಗಳನ್ನುಳಿಸಿ ಕಣ್ಮರೆಯಾದ.. ಆದರೆ ಅವರ ನೆನಪು ಎಂದಿಗೂ ಅಜರಾಮರ.. ಹೌದು! ಇಂದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕೋಲ್ಮಿಂಚು ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮಜಯಂತಿ.. ಈ ನಿಟ್ಟಿನಲ್ಲಿ ಒಂದ ಸಣ್ಣ ಟ್ರಿಬ್ಯೂಟ್ ಇದು..
ನೀವು ನನಗೆ ನಿಮ್ಮ ಬಿಸಿರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಅನ್ನುವ ಕೆಚ್ಚೆದೆಯ ಮಾತುಗಳನ್ನಾಡಿದ ನಿಜ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್.. ಅದು ಭಾರತದ ಸ್ವಾತಂತ್ರ್ಯ ಚಳುವಳಿ ಕಾವೇರುತ್ತಿದ್ದ ಪರ್ವ ಕಾಲವೂ ಹೌದು; ಇನ್ನೊಂದೆಡೆ ಬಲಕಳೆದುಕೊಂಡಿದ್ದ ಸತ್ಯಾಗ್ರಹದ ನಿರ್ವೀಯತೆಯಿಂದ ದೇಶದ ಪ್ರತಿಭಟನೆ ಮೂಲೆಗುಂಪಾಗುತ್ತಿದ್ದ ಕಾಲಘಟ್ಟವೂ ಹೌದು.. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡಿ ಅನ್ನುತ್ತಿದ್ದ ಗಾಂಧಿ ವಾದದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಕಷ್ಟ ಎಂದು ಮನಗಂಡಿದ್ದ ವಿಶಿಷ್ಟ ಹೋರಾಟಗಾರ ಸುಭಾಷ್ ಬಾಬು.. ಆಗ ಮೊಳೆತಿದ್ದೇ ಆಜಾದ್ ಹಿಂದ್ ಅನ್ನುವ ದೇಶಭಕ್ತರ ಸೈನ್ಯದ ಪರಿಕಲ್ಪನೆ..
ಕೋಲ್ಕಾತ್ತದ ನಿವಾಸದಲ್ಲಿ ಬಂಧಿಯಾಗಿದ್ದ ಸುಭಾಷ್ ಚಂದ್ರ ಬೋಸ್ ಮನಸಿನಲ್ಲಿದ್ದ ಅದಮ್ಯ ತುಡಿತ ಅಂದು ಯಾರಿಗೂ ಅರ್ಥವಾಗಿರಲಿಲ್ಲ.. ಹೊರಗಿನ ಪ್ರಪಂಚ ಸುಭಾಷ್ ಬೋಸ್ ಸನ್ಯಾಸತ್ವ ಸ್ವೀಕರಿಸಿದ್ದಾರೆ ಅಂತಲೇ ಭಾವಿಸಿತ್ತು.. ಆದರೆ ಬೋಸ್ ಮನೋವೇಗದಲ್ಲಿ ಆಫ್ಘಾನಿಸ್ತಾನದಲ್ಲಿ ನಿಂತು ಕಾಬೂಲ್ನಲ್ಲಿದ್ದ ಜಪಾನ್ ಹಾಗೂ ರಷ್ಯಾ ಎಂಬೆಸಿಯನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದರು.. ಅಲ್ಲಿಂದ ಶುರುವಾಗಿದ್ದು ಭಾರತದ ಚರಿತ್ರೆಯ ಮಹಾನ್ ದಂಡನಾಯಕನ ಅಸಲೀ ವಿಮೂಚನಾ ಸಂಘರ್ಷ..
ಪಾದರಸ ಕುಡಿದವರಂತೆ ಓಡಾಡಿದ ಸುಭಾಷ್ ಬೋಸ್ ಮಲಯ, ಸಿಂಗಾಪುರ, ಜಪಾನ್, ಜರ್ಮನಿ ಸುತ್ತಾಡಿದರು.. ಎರಡನೇ ವಿಶ್ವಯುದ್ಧದಲ್ಲಿ ಇಂಗ್ಲೆಂಡ್ ಹಾಗೂ ಮಿತ್ರರಾಷ್ಟ್ರಗಳ ಪರ ಯುದ್ದಖೈದಿಗಳಾಗಿದ್ದ ಭಾರತೀಯ ಯೋಧರನ್ನು ಸಂಪರ್ಕಿಸಿದರು.. ಅದೇ ಸೈನಿಕರನ್ನು ಬಳಸಿಕೊಂಡು ಹೊಸ ಸೈನ್ಯ ಕಟ್ಟಿದರು.. ಹಾಗೆ ನಿರ್ಮಾಣವಾದ ಪರಿಪೂರ್ಣ ಸೇನಾ ತುಕುಡಿಯೇ ಅಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ.. ಜಪಾನ್ ಸಹಯೋಗದೊಂದಿಗೆ ಭಾರತದ ಮೇಲೆ ಯುದ್ಧ ಸಾರಿದ್ದ ಬೋಸ್ ಬರ್ಮಾ ದಾಟಿದ್ದರು, ಚಲೋ ದಿಲ್ಲಿ ಅಂದಿದ್ದರು.. ಆದರೆ ಆಗ ವಿಶ್ವಯುದ್ದ ಸೋತ ಜಪಾನ್ ಕೈಚೆಲ್ಲಿದ್ದರಿಂದ ಐಎನ್ಎಗೆ ಹಿನ್ನಡೆ ಉಂಟಾಗಿತ್ತು.. ಆದರೆ ಸುಭಾಷ್ ಪ್ರಯತ್ನ ಬಿಟ್ಟಿರಲಿಲ್ಲ..ನಿಜಾರ್ಥದಲ್ಲಿ ಬ್ರಿಟೀಶ್ ರಾಜ್ ಆಡಳಿತ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸುವ ಹಿಂದೆ ಇದ್ದಿದ್ದು ಸುಭಾಷ್ ಬಾಬುವಿನ ಭಯವೇ ವಿನಃ ಗಾಂಧಿಯ ಸತ್ಯಾಗ್ರಹವಲ್ಲ ಅನ್ನುವ ಮಾತುಗಳಿವೆ..
ಸುಭಾಷ್ ಚಂದ್ರ ಬೋಸ್ ಓರ್ವ ದಣಿವರಿಯದ ದಂಡನಾಯಕ.. ಅದಮ್ಯ ಉತ್ಸಾಹವಿದ್ದ ಅಪರೂಪದ ಧೀಮಂತ ನಾಯಕ.. ಸಂಘಟನಾ ಚತುರ, ಶಿಸ್ತಿನ ಸರಳ ಜೀವಿ, ದೇಶಕ್ಕಾಗಿ ಐಸಿಎಸ್ ಹುದ್ದೆ ತ್ಯಾಗ ಮಾಡಿದ್ದ ದ್ಯೇಯೋದ್ಧಾತ.. ಕೊನೆಗೆ ಸುಭಾಷ್ ಬೋಸ್ರ ಸಾವೂ ಸಹ ಬೇಧಿಸಲಾಗದ ರಹಸ್ಯವಾಗೇ ಉಳಿಯಿತು.. ಆದ್ರೆ ಸುಭಾಷ್ ಚಂದ್ರ ಬೋಸ್ ಅನ್ನುವ ಅಮರ ಸೇನಾನಿ ಅಸಂಖ್ಯ ಭಾರತೀಯರ ಮನಸಿನಲ್ಲಿ ಅಜರಾಮರರಾಗಿ ಉಳಿದರು.. ಜನವರಿ 23, 1897ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ರ 118ನೇ ಜನ್ಮಜಯಂತಿ ಇಂದು.. ಆ ಅಮರ ಚೇತನಕ್ಕೆ ಜನ್ಮಜಯಂತಿಯ ಶುಭಕಾಮನೆಗಳು..
-ವಿಶ್ವಾಸ್ ಭಾರದ್ವಾಜ್,

No comments:

Post a Comment