Saturday, 10 January 2015

ಭಗವಂತ ಯಾರು?ಭಗವಂತ ಯಾರು..?
ಅದೊಂದು ಧಾರ್ಮಿಕ ಸಭೆ; ಅಲ್ಲಿ ಭಗವಂತನ ಲೀಲಾ ವಿನೋದಗಳ ವರ್ಣನೆ ಮಾಡಲಾಗುತ್ತಿತ್ತು..
ಅಲ್ಲಿ ವೈದ್ಯ, ಕೃಷಿಕ, ದರ್ಜಿ, ಬಡಗಿ, ಕಮ್ಮಾರ, ಕಾರ್ಮಿಕ, ವಕೀಲ, ವಿದ್ಯಾರ್ಥಿ, ಕುಡುಕ, ವೃದ್ಧ, ಸಮಾಜವಾದಿ, ಕ್ರಾಂತಿಕಾರಿ, ಬುದ್ದಿಜೀವಿ, ಭಗ್ನಪ್ರೇಮಿ, ಪತ್ರಕರ್ತ, ವ್ಯಾಪಾರಿ, ನಾಟಕ ನಿರ್ದೇಶಕ, ಸಾಹಿತಿ, ಕಲಾವಿದ ಮುಂತಾದ ಹಲವು ಭಿನ್ನ ವೃತ್ತಿ ಹಾಗೂ ಪ್ರವೃತ್ತಿಯ ವ್ಯೆಕ್ತಿಗಳು ನೆರೆದಿದ್ದರು..
ಭಗವಂತ ನಿಜಕ್ಕೂ ಸೃಜನಶೀಲ ಕಲಾವಿದ ಎಲ್ಲರನ್ನೂ ಎಲ್ಲವನ್ನೂ ಮನೋಜ್ಞವಾಗಿ ಕೆತ್ತಿ ಬಣ್ಣ ಬುದ್ದಿ ಹಾಗೂ ಸ್ವಭಾವ ತುಂಬುವ ಆತನ ಕಲೆ ನಿಜಕ್ಕೂ ಅವರ್ಣನೀಯಅಂದ ಕುಂಚ ಹಿಡಿದ ಕಲಾವಿದ..
***
ಭಗವಂತ ಒಬ್ಬ ಅದ್ಭುತ ಕಲ್ಪನೆಗಳನ್ನು ಹೊಂದಿರುವ ಕಥೆಗಾರ.. ಪ್ರತಿಯೊಂದು ಜೀವಿಯ ಸೃಷ್ಟಿಯೂ ಆತನ ಅಸಂಖ್ಯ ಕಥೆಗಳ ಒಂದೊಂದು ಅಧ್ಯಾಯಗಳುಅಂದವನು ಬೊಕ್ಕ ತಲೆಯ ಸಾಹಿತಿ..
***
ಇಲ್ಲ ಇಲ್ಲ ನಮ್ಮ ಹಿಂದಿನ ತಲೆಮಾರುಗಳ ಹಿರಿಯರು ಹೇಳುತ್ತಿದ್ದ ಮಾತಿನಂತೆ ಭಗವಂತ ಸಕಲ ನಾಟಕಗಳಿಗೂ ಸೂತ್ರದಾರ.. ಅವನೊಬ್ಬ ಅದ್ವಿತೀಯ ನಿರ್ದೇಶಕ.. ನಾವೆಲ್ಲಾ ಆತ ಬರೆದ ನಾಟಕದ ಪಾತ್ರಗಳು.. ಆಡಿಸುವವನು ಅವನು ನಟಿಸುವವರು ನಾವುಈಗ ಮಾತನಾಡಿದವನು ಮೂಗಿಗೆ ಕನ್ನಡಕ ಇಳಿಸಿಕೊಂಡ ನಾಟಕ ನಿರ್ದೇಶಕ..
***
ಭಗವಂತ ಅತಿ ಬುದ್ದಿವಂತ ವ್ಯಾಪಾರಿ.. ಯಾರಿಗಾದರೂ ಒಳ್ಳೆಯದು ಮಾಡುತ್ತಾನೆ ಎಂದರೆ ಅದರ ಹಿಂದೆ ಇನ್ಯಾರಿಗೋ ಕಷ್ಟ ಕೊಟ್ಟೇ ಇರುತ್ತಾನೆ.. ಅವನ ದೃಷ್ಟಿಯಲ್ಲಿ ಲಾಭ ನಷ್ಟಗಳ ಲೆಕ್ಕ ಬಲು ಪಕ್ಕಾಅಂದು ಬಿಟ್ಟ ಮಾರವಾಡಿ ಟೋಪಿ ಕೊಡವಿ ತಲೆಗೆ ಸಿಕ್ಕಿಸಿಕೊಂಡ ವ್ಯಾಪಾರಿ..
***
ಭಗವಂತ ಅಂದರೆ ಒಂದು ಸಾಮೂಹಿಕ ಪ್ರಸಾರ ಮಾಧ್ಯಮವಿದ್ದಂತೆ.. ನಾವೆಲ್ಲರೂ ನಮ್ಮ ನಮ್ಮ ಸುಖದುಃಖಗಳ ಅಹವಾಲುಗಳ ವರದಿಯನ್ನು ಆತನಲ್ಲಿ ಸಲ್ಲಿಸುತ್ತೇವೆ.. ಆತ ಅದನ್ನು ಪರಿಶೀಲಿಸಿ ಮತ್ತೆಲ್ಲೋ ಅದನ್ನು ಪ್ರಸಾರಿಸುತ್ತಾನೆ.. ಆದರೆ ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ.. ಒಂದರ್ಥದಲ್ಲಿ ನಾವೆಲ್ಲರೂ ಭಗವಂತನೆಂಬ ವ್ಯವಸ್ಥೆಗೆ ಕೆಲಸ ಮಾಡುವ ವರದಿಗಾರರಿದ್ದಂತೆತನ್ನ ಅಭಿಪ್ರಾಯ ಹೊರಹಾಕಿದ ಪೆನ್ನಿನ ಕ್ಯಾಪ್ ಹಾಕಿ ಜುಬ್ಬಾದ ಜೇಬು ಸವರಿಕೊಂಡ ಪತ್ರಕರ್ತ..
***
ಭಗವಂತ ಅಂದರೆ ನಿಷ್ಣಾತ ವೈದ್ಯನಿದ್ದಂತೆ.. ಆತ ಎಲ್ಲಾ ರೋಗಗಳಿಗೂ ಮದ್ದು ನೀಡಬಲ್ಲ, ಎಲ್ಲಾ ಗಂಭೀರ ಹಾನಿ ತೊಂದರೆಗಳಿಗೂ ಶಸ್ತ್ರಕ್ರಿಯೆ ನಡೆಸಬಲ್ಲ.. ಸಾವಿನಂಚಿನ ಜೀವಕ್ಕೂ ಬದುಕು ನೀಡಬಲ್ಲ ಆತ ಪರಿಪೂರ್ಣ ವೈದ್ಯನೇ ಸರಿಎಂದು ಬಹುಪರಾಕ್ ಹೇಳಿದ ಸ್ಟೆತಸ್ಕೋಪ್ ಹಿಡಿದಿದ್ದ ವೈದ್ಯ..
***
ಭಗವಂತ ಒಬ್ಬ ಕಾಯಕಯೋಗಿ, ಜಗತ್ತೆಂಬ ವಿಶಾಲ ಕೃಷಿ ಭೂಮಿಯಲ್ಲಿ ಬೆಳೆದಿದ್ದು, ಮೊಳೆತಿದ್ದು, ಫಲಿಸಿದ್ದು ಎಲ್ಲವೂ ಭಗವಂತ ಬಿತ್ತಿದ ಬೀಜಗಳೇ.. ಆತನ ಕೃಷಿಗೆ ನೀರು ಗೊಬ್ಬರಗಳ ಅಗತ್ಯವಿಲ್ಲ; ನೊಗ ನೇಗಿಲು, ಜೋಡಿ ಎತ್ತುಗಳ ಅವಶ್ಯಕತೆಯೂ ಇಲ್ಲ, ನಾಟಿ, ಒಕ್ಕಲಾಟಗಳ ಮಾಡಬೇಕಾದ ಜರೂರತ್ತೂ ಇಲ್ಲಅನ್ನುತ್ತಾ ಹೆಗಲ ಮೇಲಿನ ಪಂಚೆ ಕೊಡವಿದ ರೈತ..
***
ಭಗವಂತ ನನ್ನ ಹಾಗೆಯೇ ಬಣ್ಣ ಬಣ್ಣದ ಬೇರೆ ಬೇರೆ ಬಗೆಯ ಬಟ್ಟೆ ಹೊಲೆವ ದರ್ಜಿ.. ಆತ ಹೊಲಿದ ಬಟ್ಟೆಗಳೇ ಭೂಮಿಯ ಮೇಲೆ ಈಗ ಜೀವಿಸುತ್ತಿರುವ ಮನುಷ್ಯರು.. ಇಲ್ಲಿ ವರ್ಣ, ಗಾತ್ರ, ಆಕಾರ, ಶೈಲಿ, ಎಲ್ಲವೂ ಅವನಿಟ್ಟಂತೆ ಇದೆ; ಹಾಗೆಯೇ ನಡೆದುಕೊಂಡು ಹೋಗುತ್ತಿದೆಅಂದು ಕತ್ತರಿ ಮಡಚಿದ ದರ್ಜಿ..
***
ಭಗವಂತ ನಮ್ಮ ಹಾಗೆಯೇ ಶ್ರಮಜೀವಿ.. ಕುಟ್ಟಿ, ತಟ್ಟಿ ಎಲ್ಲವಕ್ಕೂ ರೂಪ ಕೊಡುತ್ತಾನೆ; ಭೌತಿಕ ದೇಹಗಳು ಭಗವಂತನ ಬಡಿದು ಮಾಡಿದ ಕ್ರಿಯೆಯ ಮೂರ್ತರೂಪಅಂದರು ಉಳಿ, ಸುತ್ತಿಗೆ, ಚಾಣ ಮುಂತಾದ ಸಲಕರಣೆಗಳನ್ನು ಹಿಡಿದ ಬಡಗಿ, ಕಮ್ಮಾರ, ಕಾರ್ಮಿಕ..
***
ಭಗವಂತ ಒಬ್ಬ ಸುಯೋಗ್ಯ ಶಿಕ್ಷಕ; ಒಮ್ಮೊಮ್ಮೆ ಮೊದಲು ಪಾಠ ಕಲಿಸಿ ಬಳಿಕ ಪರೀಕ್ಷೆ ನೀಡುತ್ತಾನೆ ಕೆಲವೊಮ್ಮೆ ಮೊದಲು ಪರೀಕ್ಷೆ ನೀಡಿ ಬಳಿಕ ಪಾಠ ಹೇಳಿಕೊಡುತ್ತಾನೆಅಂದನು ಕಲಿಯುವ ಶ್ರದ್ಧೆಯಿದ್ದ ವಿದ್ಯಾರ್ಥಿ..
***
ಭಗವಂತ ಸಮಾಜದ ಓರೆ ಕೋರೆಗಳನ್ನು ಸೃಷ್ಟಿಸಲೂ ಬಲ್ಲ, ತಿದ್ದಲೂ ಬಲ್ಲ ನಾಶ ಪಡಿಸಲೂ ಬಲ್ಲ ಸಮಾಜವಾದಿಅಂದವನೊಬ್ಬ ಸಮಾಜವಾದಿ..
***
ಇಲ್ಲವೇ ಇಲ್ಲ ಭಗವಂತ ಕೇವಲ ಲಯಕಾರಕ.. ವಿನಾಶಕಾರಿ ಕದನ ನಡೆಸಿಯೇ ಶಾಂತಿ ಸಂಸ್ಥಾಪಿಸುವ ಕ್ರಾಂತಿಕಾರಿಅಂತ ಭಾಷಣ ಬಿಗಿದವನು ಕ್ರಾಂತಿಕಾರಿ..
***
ಅಯ್ಯೋ ಮೂರ್ಖರಾ! ಭಗವಂತ ಅಂದರೆ ಇವು ಯಾವುದೂ ಅಲ್ಲ.. ಇವೆಲ್ಲವೂ ಹೌದು.. ಅವನಿಗೆ ರೂಪವೂ ಇಲ್ಲ, ಪಾತ್ರವೂ ಇಲ್ಲ, ಅಥವಾ ಅವನಿಗೆ ಎಲ್ಲವೂ ಇದೆಅನ್ನುವ ಅರ್ಥವಾಗದ ಮಾತು ಆಡಿಬಿಟ್ಟ ಬುದ್ದಿಜೀವಿ..
***
ಭಗವಂತನಿಗೂ ನನ್ನಂತೆ ವಯಸ್ಸಾಗಿ ವೃದ್ಧಾಪ್ಯ ಅಡರಿದೆ.. ಸೃಷ್ಟಿ ಮಾಡಿ, ಸ್ಥಿತಿ ಸ್ಥಾಪಿಸಿ, ಲಯ ಸಾಧಿಸಿ ಭಗವಂತನೂ ಮುಪ್ಪನ್ನು ಅಪ್ಪಿದ್ದಾನೆಅಂದು ಬೊಚ್ಚು ಬಾಯಿ ಅಗಲಿಸಿ ನಕ್ಕ ವೃದ್ಧ..
***
ಭಗವಂತನಿಗೂ ಲವ್ ಫೈಲ್ಯೂರ್ ಆಗಿದೆ.. ಆತನ ಪ್ರೇಯಸಿ ಭೂಮಿಯಲ್ಲಿ ಎಲ್ಲೋ ಕಳೆದು ಹೋಗಿದ್ದಾಳೆ ; ಅದೇ ಹತಾಶೆಯಿಂದ ಭಗವಂತ ಪ್ರೀತಿ ಮಾಡುವ ಯಾವ ಪ್ರೇಮಿಗಳಿಗೂ ಉಪಕಾರ ಮಾಡುವುದೇ ಇಲ್ಲ..” ಭಗವಂತನ ಬಗ್ಗೆ ಗಡ್ಡ ಬಿಟ್ಟ ಭಗ್ನಪ್ರೇಮಿ ಹೇಳಿದ್ದು ಹತಾಶೆಯ ಮಾತೇ..
***
ಅಷ್ಟರಲ್ಲಿ ಕೊನೆಯ ಸಾಲಿನಿಂದ ಧ್ವನಿಯೊಂದು ಬಂತು. “ಥೂ ನಿಮ್ಮ ಯಾವನೂ ಸರಿ ಇಲ್ಲ ಯಾಕ್ರೋ ಸುಮ್ ಸುಮ್ನೇ ಭಗವಂತನ ಎಲ್ಲೆಲ್ಲೋ ಹುಡುಕುತ್ತೀರಾ, ನಿಮ್ಮ ಎದುರೇ ಕುಳಿತಿದ್ದೀನಿ ಬಂದು ಮುಚ್ಕಂಡು ಪೂಜೆ ಮಾಡ್ರಿ ಮುಂಡೇವಾ..” ನಿಲ್ಲಲಾರದೆ ಓಲಾಡುತ್ತಾ ನಿಂತ ಕುಡುಕ ಭಗವಂತನಂತೆ ಪೋಸು ಕುಟ್ಟು ನಿಂತಿದ್ದ..
-ವಿಶ್ವಾಸ್ ಭಾರದ್ವಾಜ್

No comments:

Post a Comment