Friday 10 April 2015

ಪುಟ್ಕತೆ:

ಅಡಿಕೆ ತೋಟದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿತ್ತು ಕೆಂಪು ಬಣ್ಣದ ಮನೋಜ್ಞ ರಥಪುಷ್ಪದ ಹೂಗಳು..
ಅದರ ಮಧ್ಯೆ ದಾರಿ ಮಾಡಿಕೊಂಡು ಗೌರಿ ಹಳ್ಳ ದಾಟಿ ಕೊಂಚ ಮೇಲಕ್ಕೆ ಹೋದರೆ ಸಿಗುತ್ತದೆ ಶಾಸ್ತ್ರಿಗಳ ಮನೆ..
ಗುಂಡಿಯ ಗಣೇಶ ದೇವಾಲಯಕ್ಕೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ಪಕ್ಕದಲ್ಲಿ ಹಾಯ್ದು ಹೋಗಲೇಬೇಕು.. ಇವತ್ತು ಬೇರೆ ವಿಧಿಯಿಲ್ಲ.. ಯಾಕಂದ್ರೆ ಭೂಷಣ್ ರಾಯ್ರು ಅವರ ತೋಟದ ಬೇಲಿ ಬಂದ್ ಮಾಡಿಬಿಟ್ಟಿದ್ದಾರೆ..
ನಿನ್ನೆ ಮೊನ್ನೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ದಾರಿ ತಪ್ಪಿಸಿದ್ದಾಯಿತು.. ಆದ್ರೆ ಇವತ್ತು ಬೇರೆ ದಾರಿ ಇಲ್ಲ ಅದೇ ದಾರಿಯಲ್ಲಿ ಹೋಗಬೇಕು.. ಹೋಗದಿದ್ದರೆ ಅಮ್ಮ ಬಯ್ತಾಳೆ.. ಮಾಣಿಗೆ ಸಂಧ್ಯಾವಂದನೆಯೇ ಮುಗಿಯೋದಿಲ್ಲ.. ಅಡಿಕೆಯ ಶೃಂಗಾರ ಕೊಡದಿದ್ದರೆ ಮುಂಜಾನೆ ಗಣಪತಿ ಪೂಜೆ ಆಗೋದೆ ಇಲ್ಲ..
ಇವತ್ತು ಅವನು ಕಾಣ್ತಾನಾ..? ಕಣ್ಣಲ್ಲೇ ಕೊಲ್ತಾನೆ.. ನಾನು ಶಾಸ್ತ್ರಿಗಳ ಮನೆ ಓಣಿ ದಾಟುವಾಗ ಎಲ್ಲಿರುತ್ತಾನೋ ಬಂದು ನಿಂತುಬಿಡುತ್ತಾನೆ.. ಕುಡಿ ಮೀಸೆಯಡಿಯಲ್ಲಿ ನಗುವ ಗಂಧರ್ವ ಚೆಲುವ ಚೆನ್ನಿಗರಾಯ..
ನಾನು ಅವನ ಸೆಳೆತಕ್ಕೆ ಬೀಳ್ತಿದ್ದೀನಾ..? ಇನ್ನೇನು ರಜೆ ಮುಗಿದೇ ಹೋಗುತ್ತೆ ಅವನದ್ದು.. ಮತ್ತೆ ಬೆಂಗಳೂರಿನ ಬಸ್ ಹತ್ತುತ್ತಾನೆ.. ಆಮೇಲೆ ನನ್ನ ನೆನಪಿರುತ್ತಾ..? ನಾನೇಕೆ ಅವನ ನೆನಪಿನಲ್ಲಿ ಕೊರಗಬೇಕು.. ಇಷ್ಟಕ್ಕೂ ನಾನೇನು ಅವನನ್ನು ಪ್ರೀತಿಸುತ್ತಿಲ್ಲವಲ್ಲ.. ಹಾಗಿದ್ರೆ ನಿನ್ನೆ ಮೊನ್ನೆ ಯಾಕೆ ಆ ದಾರಿ ತಪ್ಪಿಸಿದೆ.. ನನ್ನ ಮನಸಿಗೆ ವಿನಾಕಾರಣ ಅಂಜಿಕೆಯೇಕೆ..?
ಉಹುಂ! ಇವತ್ತು ಅದೇ ದಾರಿಯಲ್ಲಿ ಸಾಧ್ಯವಾದಷ್ಟು ನಿಧಾನಕ್ಕೆ ಹೋಗ್ತೀನಿ.. ಅವಕಾಶ ಸಿಕ್ಕರೆ ಅಪ್ಪಣ್ಣ ಶಾಸ್ತ್ರಿಗಳ ಹೆಂಡತಿ ಜಾನಕಮ್ಮನವರನ್ನು ಮಾತಾಡಿಸ್ತೀನಿ, ಅಜ್ಜಿ ವೆಂಕಟಲಕ್ಷ್ಮಿ ಕೋಲು ಕಿತ್ತು ಆಟ ಆಡಿಸ್ತೀನಿ, ಕೊಟ್ಟಿಗೆಯಲ್ಲಿ ಕರುನ ಮುದ್ದು ಮಾಡ್ತೀನಿ..
ಹಾಗಂದುಕೊಂಡು ರಥಪುಷ್ಪದ ಗಿಡಗಳನ್ನು ಸರಿಸುತ್ತಾ ತೋಟದಲ್ಲಿ ಹೆಜ್ಜೆ ಹಾಕಿದಳು ಮನೋಹರಿ.. ಯೋಚನಾಭರದಲ್ಲಿ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ ಅವಳಿಗೆ.. ಗೌರಿ ಹಳ್ಳ ದಾಟಿ ಅಪ್ಪಣ್ಣ ಶಾಸ್ತ್ರಿಗಳ ಉಣುಗೋಲು ದಾಟಿದಳು..
ಅವಳಂದುಕೊಂಡಿದ್ದು ಯಾವುದೂ ಆಗಲೇ ಇಲ್ಲ..
ಅದೆಲ್ಲಿದ್ದನೋ ಆ ಸುರಸುಂದರ; ಅವಳ ಗೆಜ್ಜೆ ಸದ್ದಿಗೆ ಕಿವಿಯಾಗಿ, ಚಂಗನೇ ಹಾರಿ ಜಗುಲಿಯ ಕಂಬಕ್ಕೆ ಒರಗಿ ಅವಳನ್ನೇ ನೋಡತೊಡಗಿದ.. ಅಲ್ಲಿಯವರೆಗೆ ಅವಳಲ್ಲಿದ್ದ ಸಂಕಲ್ಪ ಶಕ್ತಿ ಜರ್ರನೇ ಧರೆಗೆ ಕುಸಿದಂತಾಯ್ತು..
ನಾಚಿ ನೀರಾದ ಮನೋಹರಿ ಅತ್ತಿತ್ತ ನೋಡದೆ, ತಗ್ಗಿಸಿದ ತಲೆ ಎತ್ತದೆ ಬಿರುಬೀಸಾಗಿ ಆಲ್ ಮೋಸ್ಟ್ ಓಡುವವಳಂತೆ ಓಣಿ ದಾರಿಯಲ್ಲಿ ನಡೆಯತೊಡಗಿದಳು..
"ಗುಂಡಿ ಗಣೇಶ ಇನ್ನೂ ಎಷ್ಟು ದೂರ ಇದಿಯಪ್ಪಾ ನೀನು..?" ಅವಳ ಒಳಮನಸ್ಸು ಅವನ ಪ್ರಭಾವಲಯದಿಂದ ಹೊರಹಾರುವ ಹವಣಿಕೆಯಲ್ಲಿತ್ತು..
-ವಿಶ್ವಾಸ್ ಭಾರದ್ವಾಜ್

No comments:

Post a Comment