Friday 10 April 2015

ನನ್ನ ಕಾವ್ಯ:


ಇಂದು ಒಳಗಿಂದ ತಿವಿಯುತಿದೆ ಭಾವಮಿಡಿತ
ಬರೆಯಲೇಬೇಕೆಂಬ ಅಂತರಂಗದ ತುಡಿತ
ನರನರಗಳಲ್ಲಿ ಉಕ್ಕುಕ್ಕುವ ರುಧಿರದಲೆ ಅಲೆ
ಗುಪ್ತಗಾಮಿನಿಯಂತೆ ಪ್ರವಹಿಸುವ ಉಷ್ಣ ಲಾವಾಜ್ವಾಲೆ
ಬರೆಯಲೇಬೇಕೆಂದು ಪಿಡಿದು ಲೇಖನಿ ಸಿದ್ಧ
ಅಚ್ಚ ಬಿಳುಪಿನ ಕಾಗದಗಳ ಪದರು ಹಾಳೆ
ಶಾಹಿ ಮುಗಿದರೂ ಗೀರಿ ಹೀರುವ ದಾಹ ಮನಸಿಗೆ
ಹಲಬಾರಿ ಒರೆಸಳಿಸಿ ಬರೆದರೂ ತೃಪ್ತಿ ವಿಕ್ಷಿಪ್ತ
ಬಗೆದಷ್ಟೂ ಅರಳುತದೆ ಕಲ್ಪನಾ ನವಲಾಸ್ಯ
ಹೊಸತನದಿ ಹೊಸ ಮುಖದ ಹೊಸಸೃಷ್ಟಿ ಕಾವ್ಯ
ವ್ಯಾಖ್ಯಾನ ಹೊಸತಲ್ಲ ಹಳೆಯದ್ದೇ ಚುಂಗು
ಹೊಸೆದು ನೇಯ್ದು ಎಳೆದೆಳೆದು ಗರಿ ಮಡಿಕೆ ವಸ್ತ್ರ
ಸಾಹಿತಿಗೆ ಯಾಕಯ್ಯ ತಿರುಳಿರದ ಸಿದ್ಧಾಂತ
ಬಣಪಂಥಪಕ್ಷಗಳಿಗೆ ಕದ ಮುಚ್ಚಿ ಸ್ವಾಗತ
ಕರೆದರೂ ಜರೆದರೂ ಓ ಎನ್ನಲಾರೆ
ಖಂಡಿಸುವ ಧನಿಗಂಜದು ಈ ಭಂಡ ಜೀವ
ಬರೆಯುವೆನೋ..? ಗೀಚುವೆನೋ..? ಎನಗಷ್ಟೆ ಮೆಚ್ಚು
ನನಗಿಲ್ಲ ಯಾರದೋ ವಿಮರ್ಶೆಗಳ ನಿರುಕಿಸುವ ಹುಚ್ಚು
ಬೇಕಿಲ್ಲ ಯಾವುದೇ ಪ್ರಶಸ್ತಿ ಫಲಕಗಳ ಮಾನ-ಸಮ್ಮಾನ
ಸೋಂಕಿಲ್ಲ ಡಾಕ್ಟರ್ಗಿರಿಯ ಹಮ್ಮಿನಭಿಮಾನ
ಇಂದು ಬರೆಯಲೇಬೇಂಕೆಂಬ ಒತ್ತಡವ ತಾಳೆನು
ಉರುಳಾಡಿ ಹೊರಳಾಡಿ ನಿದ್ದೆಬಿಟ್ಟು ಬರೆವೆನು
ಪ್ರತಿ ಸಾಲು ಅಣಿಗೊಳಿಸಿ ಮಸೆ ಮಸೆದು ಬಾಣ
ಭತ್ತಳಿಕೆ ತುಂಬುವೆ ಈ ಪೊರ್ತು ಅನುಕ್ಷಣ ಅನುರಣ
-(ವಿಪ್ರವಿಶ್ವತ್) ವಿಶ್ವಾಸ್ ಭಾರದ್ವಾಜ್

No comments:

Post a Comment