Thursday 9 April 2015

ಕುಡುಕ:


ಮತ್ತಿನ ಗಮ್ಮತ್ತಿನಲ್ಲಿ ಕಾಣದ ಕಳೆದುಕೊಂಡ ಹುಡುಕಾಟದ ಓಘ
ಕಳೆದುಹೋಗಿದ್ದೂ ಸಿಗದಿದ್ದರೂ ಕಾಣಬಹುದೀಗ
ತಿರುಗು ಧರತಿಯ ಒಗೆದೊಗೆದು
ಹೊರಳಿಸಿ ಸುತ್ತಿ ಎತ್ತೆತ್ತಿ ಬಿಸುಟು
ಮತ್ತೆ ಮೇಲೆ ಮತ್ತೆ ಕೆಳಗೆ
ಅಲ್ಲಲ್ಲಿ ಅಳತೆ ಮೀರದಷ್ಟು ಎಡ ಬಲಗಳ ಮಗ್ಗುಲು ಓಲಾಡಿ
ತೇಲುವ ಈಜುವ ಮಲಗಿ ಮುಲುಕಾಡುವ
ಅನುಭವದ ಆನುಭಾವಿಯಂತೆ
ಮಗದೊಮ್ಮೆ ದಿಗ್ಗನೆ ಎದ್ದು ಕೂರುವ
ಮಜದ ಮೋಜಿಗೆ ಕಿಕ್ಕೇರಿಸಿಕೊಂಡು
ಕುಳಿತ ತಳ ನಿಲ್ಲಲಾರದ ಅವಸ್ಥೆ ಅವ್ಯವಸ್ಥೆ ಬೇಕಿತ್ತಾ ಭೂಪ?
ಅಖಿಲಾಂಡ ಬ್ರಹ್ಮಾಂಡ ಅಂಡಾಂಡ ಪಿಂಡ
ದಂಡ ಕುಡುಕ ಮಹಾ ಮಹಿಮ
ಬಹುಪರಾಕ್ ಪರಾಕು

ಉರುಳುವ ಕಳೆವ
ಕಳೆದು ಕಣ್ಮರೆಯಾಗುವ ಕಾಲದ ಪರಿವೆ ಇಲ್ಲದೆ
ವಿಭಿನ್ನ ವಿಚಿತ್ರ ವಿಸ್ಮಯ ಪರಪಂಚದ ಪರಿಧಿಯೊಳಗೆ
ನುಸುಳಿ ಸರಪಳಿ ಬಿಗಿದ ಬಂಧದಂತೆ ನಿಂತಲ್ಲಿ ನಿಲ್ಲದೆ
ಕುಳಿತಲ್ಲಿ ಕೂರದೇ
ಮಲಗಿದರೂ ಮಲಗದೇ
ವಾಸ್ತವ ಆಸನಗಳ ಕಲಿಯದೇ ಸಾಧಿಸುವ ಸಿದ್ಧಿ
ಒಮ್ಮೆ ಮತ್ಸ್ಯಾಸನ ಮತ್ತೆ ವೃಷಭ
ಅಗೋ ಕೂರ್ಮ ವರಾಹ
ಅಲ್ಲ ಈಗ ಶೀರ್ಷಾಸನ. ಓಹೋ ಪ್ರಭುವಿಗೆ ಈಗ ಶವಾಸನ.. ಮಧ್ಯೆ ಮಧ್ಯೆ ಸೂರ್ಯ ನಮಸ್ಕಾರ!
ನಡುವೆ ಗೊಣಗುವ ಅಸ್ಪಷ್ಟ ಅಸ್ಕಲಿತ ಅಂದುಕೊಳ್ಳುವ ಮಾತಿನ ಸ್ಕಲನ
ಯಾರಲ್ಲಿ.. ! ಸಾಮ್ರಾಟರು ಕರೆ ಕಳಿಸಿದ್ದಾರೆ ಕೇಳಿಸಲಿಲ್ಲವೇ? ದುರಳ ಮೂರ್ಖರಾ!
ಆನೆ ಕುದುರೆ ಕಾಲಾಳು ಚದುರಂಗ ನಡುವೆ ಸಪ್ತಾಶ್ವ ರಥದ ಮೇಲಿರುವ ಚಕ್ರವರ್ತಿ
ಸಮರಾಂಗಣದಲ್ಲಿ ವೀರ ಶೂರ ಧೀರೋದ್ದಾತ ಯೋಧ
ಸಿಂಹಾಸನದಲ್ಲಿ ಛತ್ರಿ ಚಾಮರ ಧ್ವಜದ ಒಡೆಯ
ಮಹಾಜನಗಳ ಪಾಲಿನ ಅನ್ನದಾತ ಅಯ್ಯ
ಕಲ್ಪನಾ ವಿಕಾಸದಲ್ಲಿ ಸರ್ವವೂ ಆಗಬಲ್ಲ ರಾಯ
ಸಾಮ್ರಾಟರಿಗೆ ಚಿತ್ತದಲ್ಲೀಗ ಸೋಮರಸದ ಸಮೃದ್ಧ ಜ್ಞಾನ!
ಕರೆತನ್ನಿ ವಿದ್ವಾಂಸರು, ಸರಸ್ವತಿ ಪುತ್ರ ರತ್ನ ಮಣಿ- ಮುಕುಟಗಳ ಹಿಂಡು ದಂಡುಗಳನ್ನು
ಮತ್ತಿಳಿಯುವ ಮುನ್ನವೇ ಸ್ಫುರಿಸಿ ಹರಿದು ಹೊಳೆಯಾಗಿ ಕಡಲು ಸೇರಲಿ
ಪದ್ಯ ಕಾವ್ಯ ಅರ್ಥಾರ್ಥ-
ವೈಚಾರಿಕ ತೌಲನಿಕ ವಿಮರ್ಷಕ ಚಿಂತನೆಗಳ ಮಳೆ
ಧಾರೆ ಧಾರೆ ಇಳಿಯಬೇಕು ಮೈಥುನದ ಉತ್ತುಂಗ ಪರಮಾವಧಿಯ ಸೌಖ್ಯ ಹೊಂದಿದಂತೆ
ವೀರ್ಯ ಚಿಮ್ಮುವ ಮುನ್ನದ ಉತ್ಕಟತೆಯೇ ಕಾವ್ಯ
ಅಮಲಿಳಿಯುವ ಮುನ್ನವೂ ಸೃಷ್ಟಿಯಾಗಲಿ ದಿವ್ಯ
ಜಗತ್ತು ಸುಖದ ಭಂಡಾರ..
ಅಲ್ಲಲ್ಲ ಆಸೆ ದುಃಖ ತಂದೊಡ್ಡುವ ಗಟಾರ
ಈಗ ಮಹಾಸ್ವಾಮಿಗಳು ಭೋಗ ಜೀವನದ ತ್ಯಾಗಿಯೂ ಯೋಗ ಪಾರಂಗತರು ವಿರಾಗಿಯೂ ಬೈರಾಗಿಯೂ ಹೌದು!
ಅಮಲಿಳಿಯುವ ತನಕ ಪುಂಖಾನುಪುಂಖ ಆಶಿರ್ವಚನ ಗ್ಯಾರಂಟಿ..!
ಬದುಕು ಶೂನ್ಯ ನಶ್ವರ ವೈರಾಗ್ಯ ಲೊಳೊಲೊಟ್ಟೆ
ಇಂದು ಜೀವಿಸಿದ್ದಿ
ನಾಳೆ ನಾನಿಲ್ಲ ನೀನು ಇಲ್ಲ
ಅಗೋ ಅಲ್ಲಿದೆ ಚಿದ್ವಾಲಸ ಬೀರುವ ಅನಂತ ಆಕಾಶ
ಅಲ್ಲಿ ಹೋಗಬೇಕೆಂದರೆ ಹೀರು ಈ ಕಷಾಯವ
ಕುಡಿದಷ್ಟೇ ಹೊತ್ತು ನೀನಿರುತ್ತಿ ಮೋಡದ ಮೇಲೆ ಒಳಗೆ ಸಂದಿ ಗೊಂದಿಗಳ ಮೂಲೆ ಮೂಲೆಗಳಲ್ಲಿ
ಜಗ ಆಡಿಕೊಳ್ಳುತ್ತೆ;
ಆಡಲಿ ಬಿಡು
ನೀ ಸರ್ವಶ್ರೇಷ್ಠ ಘನ ತತ್ವಜ್ಞಾನಿ
ಹಿರಿತನ ಬರುವುದೇ ಹೀರುವ ಪೇಯದಲ್ಲಿ
ಮಹಾಸ್ವಾಮಿಗಳ ಮಾತು ತೊದಲು ತೊದಲು
ಅರೇ ನಿಲ್ಲತೊಡಗಿದೆ ಪುಗುಸಟ್ಟೆ ಹಿತೋಪದೇಶ
ಬಹುಶಃ ಮತ್ತಿಳಿಯುವ ಸೂಚನೆ
ವೇದಾಂತಿ ನಾಪತ್ತೆಯಾಗಲಿದ್ದಾನೆ ಅದೇ ವಿಪರ್ಯಾಸ
ಮುಂದಿನ ಪ್ರವಚನಕ್ಕಾಗಿ ಕಾಯಿರಿ
ಬಾಟಲಿ ಮುಚ್ಚಳ ತೆಗೆವವರೆಗೂ
ಶುಭಂ
-ವಿಶ್ವಾಸ್ ಭಾರದ್ವಾಜ್

No comments:

Post a Comment