Thursday 9 April 2015

ಸಾವು:


ತುಂಡು ಪುಳ್ಳೆಗಂಟಿಸಿದ ಬೆಂಕಿ ಸಣ್ಣಗೆ ಕೆಂಡವಾಗಿ ಹೊಗೆಯಾಡಿದೆ
ಮನೆ ಮುಂದೆ ಅಂಗಳದ ಮೂಲೆಯಲ್ಲಿ ವರಚ್ಚಾಗಿ ಬೂದಿಯಾಗುತ್ತಲೇ ಇದೆ
ಅಲ್ಲಲ್ಲಿ ಕೈ ಕಟ್ಟಿ ಮಾತಾಡುತ್ತಾ ನಿಂತಿದ್ದ ಗುಂಪಿನಲ್ಲಿ ಸತ್ತವನದ್ದೇ ಚರ್ಚೆ
ಅಲ್ಲಿ ಹಾಗೆ ಸತ್ತು ಮಂದಿಯ ಮಾತಿಗೆ ಸ್ವತ್ತಾದವಗೆ ಅದೂ ಗೊತ್ತಾಗುತಿದೆ
ಲಕ್ವಾ ಹೊಡೆದಿತ್ತಾ? ಕೋಮಾದಲ್ಲಿದ್ದನಂತೇ, ಹೃದಯಸ್ಥಂಭನವಾ?
ಕೈಕಾಲು ಬಿದ್ದು ಬಾಯಿ ಸೇದಿ ಹೋಗಿತ್ತಾ? ಅಯ್ಯೋ ಶಿವ ಶಿವಾ..!
ಅಲ್ಲಲ್ಲ ಕಿಡ್ನಿ ಡ್ಯಾಮೇಜ್, ಲಿವರ್ ಲೀಕೇಜ್ ಅಂತೆ; ಕುಡಿತ ವಿಪರೀತವಾ?
ಕ್ಯಾನ್ಸರ್ ಅಲ್ವೇನೋ? ಅಲ್ವಾ ಮಾರಾಯ್ರೇ; ಸತ್ತವನ ವಿಚಾರಿಸಿಕೊಂಬುವಾ
ತೊಂದರೆ ತಾಪತ್ರಯಗಳಿರಲಿಲ್ಲ ಬಿಡಿ; ಹಂಗಾಗಿ ಸಹಜ ಸಾವೇ ಸರಿ
ಸಾಲ ಗೀಲ ಏನಾದ್ರೂ ಇತ್ತಾ? ಓಹ್ಹೋ! ಅನೈತಿಕ ಸಂಬಂಧವೇನ್ರೀ?
ಥತ್ತೆರಿಕೆ ಯಾರಾದ್ರೂ ಈ ನಾಲಿಗೆಗಳಿಗೆ ಫಿನಾಯಿಲ್ ಹಾಕ್ರೀ!
ಗುಸುಪಿಸು ಧನಿಗಳ ಹಿಂದೆಯೇ ಸತ್ತವನ ಶೃಂಗಾರ; ಬಂಗಾರದಂತಹ ಮನುಷ್ಯ ಕಣ್ರೀ
ನೆಂಟರಿಷ್ಟರು, ಬಂದು ಬಳಗ ವಿಶ್ವಾಸಿಗರಿಗೆಲ್ಲರಿಗೂ ವರ್ತಮಾನ..?
-ಕೊಟ್ಟಾಗಿದೆ ಎಲ್ಲರೂ ಬರುವ ಮಾರ್ಗದಲ್ಲಿದ್ದಾರೆ; ಕೆಲವರು ಅನುಮಾನ
ಅಯ್ಯೋ ಕೆಲಸ ಕಾರ್ಯದ್ದೇ ದರ್ದು ತೊಂದ್ರೆ ತಾಪತ್ರಯ ಅದ್ವಾನ
ಮನೆ ಮಕ್ಕಳು ಸಧ್ಯ ಇಲ್ಲೇ ಇದ್ದಾರೆ ಮಾರ್ರೆ, ಅದೇ ಸಮಾಧಾನ
ನಡುಮನೆಯಿಂದ ಅಲೆ ಅಲೆಯಾಗಿ ಹರಿದು ಬರುತಿದೆ ರೋದನೆ
ಆತ್ಮಕ್ಕೆ ಹತ್ತಿರದವರಿಗೆ ಹೇಳಿಕೊಳ್ಳಲಾರದ ಮೂಕ ವೇದನೆ
ಕೆಲವು ಜೀವಗಳಂತೂ ಕಾಲನ ನಿರ್ಣಯಕೂ, ಎಸೆದಿವೆ ಘೋರ ಖಂಡನೆ
ಸನಿಹ ಬಲ್ಲದವರು ದೂರದಲ್ಲೇ ನಿಂತು ಸಲ್ಲಿಸುವರು ಮೌನ ಪ್ರಾರ್ಥನೆ
ನೆರೆಮನೆಯಾಕೆಯಿಂದ ನಡೆಯುತಿದೆ ನೆರದವರ ಉಪಚಾರ
ಪಾಪ! ಸೂತಕದ ಮನೆಗೆ ನೆರೆಹೊರೆಯ ಕೈಲಾದ ಉಪಕಾರ
ಕಾಫಿ ಸಮಾರಾಧನೆ, ಬಾಯಾರಿಕೆ ನೀರು ಬೆಲ್ಲದ ಸದಾಚಾರ
ಇಹ ತೊರೆದ ಕಾಯದ ಕುರಿತು ನಡೆಯುತ್ತಲೇ ಇದೆ ಪ್ರವರ
ಮಾತೆ ಮುತ್ತೈದೆಯರು; ನಿತ್ಯ ಸುಮಂಗಲಿಯರ ಗೋಳು ನಿಂತಿದೆ
ಅಪರ ಕ್ರಿಯಾಕರ್ಮಕ್ಕೆ ಬಂದ ಪುರೋಹಿತ ಬೆರಳಿಗೆ ದರ್ಬೆ ಸುತ್ತಿದೆ
ಪಾಣಿ ಪಂಚೆ ಕಚ್ಚೆ ಕಟ್ಟಿದ ಮಗನ ಹೆಗಲಲ್ಲಿ ಸತ್ತವನದೇ ರೇಷ್ಮೇ ಉತ್ತರೀಯ
ಕರಿ ಎಳ್ಳು, ಮಡಿಕೆ, ಗಾಡಿ ಸೌದೆ, ಹಿತ್ತಾಳೆ ಪಂಚಪತ್ರೆಯ ಜೊತೆ ದಕ್ಷಿಣೆಯೂ ಮುಖ್ಯ!
ಬಿದಿರು ಬೊಂಬುಗಳ ಕಟ್ಟಿದ ಚಳ್ಳೆ ಹುರಿ ಚಟ್ಟ; ದಬ್ಬೆ ಸಿಕ್ಕಿಸಿ ಕಟ್ಟ!
ಶಂಖ ಜಾಗಟೆ ತಮಟೆ ಬಂತು ಹೊರಬಾಗಿಲ ಪಕ್ಕ; ಕಣಗಿಲೆ ಮಾಲೆ ಹಾಕ
ಗೋವಿಂದ ಗೋವಿಂದ ರಾಮನಾಮ ಸತ್ಯ; ಪಾರ್ವತಿ ಪತಿ ಮಹದೇವ ಕೈಲಾಸ ನಾಥ
ಸುರಿವ ಕಂಬನಿಗಳ ಬೀಳ್ಕೊಟ್ಟು ಶವದ ಮೆರವಣಿಗೆ; ಅಂತಿಮ ಗಮ್ಯ ಮಸಣದರಮನೆಗೆ
-ವಿಶ್ವಾಸ್ ಭಾರದ್ವಾಜ್
***
(ಪಕ್ವ ಜೋಗಿಯ ‘ಸಾವು’ ಪದ್ಯವೇ ಈ ಅಪಕ್ವ ‘ಸಾವು’ ಪದ್ಯಕ್ಕೆ ಪ್ರೇರಣೆ; ಅಲ್ಲಿ ಜೋಗಿಯ ಬದುಕು ಹಾಗೂ ಅನುಭವ ಸಾವನ್ನೂ ಕೃತಿಯಾಗಿಸಿದೆ.. ಸತ್ಯ.. ಇಲ್ಲಿ ನನ್ನ ಅಪ್ರಬುದ್ಧ ಚಿತ್ತ ಕೃತಿಯನ್ನು ಸಾಯಿಸಿದೆಯೇ? ಹಾಗಲ್ಲದಿದ್ದರೆ ಸಾಕು)

No comments:

Post a Comment