Thursday 9 April 2015

ನಾನು..?

ನಾನು..?
ಸ್ವರ್ಣಲೇಪಿತ ಸಿಂಹಾಸನ ಸುವರ್ಣ ರಜತ ಪ್ರಾಶನ
ರತ್ನಖಚಿತ ಮಣಿ ಮುಕುಟ ವಜ್ರ ಸಹಿತ ಕಿರೀಟ
ಭೂಮಂಡಲ ಅಧಿಪತಿ ಚಕ್ರವರ್ತಿ ಸಾರ್ವಭೌಮ
ನನ್ನ ಹೊರತು ಭಿನ್ನ ಎಲ್ಲ ನಾನು ನಾನು ನಾನೇ..!
ವಿಕಟಕವಿ ಶಕಟ ಪಾಠ ಪ್ರವಚಿಸುವ ಅಧ್ಯಾಪಕ
ಬುದ್ದಿ ಬಲಿತ ಮೇದಾವಿ ಪ್ರಖಂಡಖಂಡ ಪಂಡಿತ
ದಿಕ್ಕುಗಳಿಗೆ ದಾರಿ ತೋರೋ ಘನ ಮೇರು ವಿದ್ವಾಂಸ
ನಾನು ನಾನೆ ಸವ್ಯಸಾಚಿ ಸಾಟಿ ನಾನು ನಾನೇ..!
ವೀರ ಶೂರ ಮಹಾಧೀರ ಶೌರ್ಯ ರಣತ್ರಿವಿಕ್ರಮ
ಖತ್ತಿ ಈಟಿ ಗದೆ ಗುರಾಣಿ ಬಿಲ್ಲು ಬಾಣ ಕರತಾಮಲಕ
ಬಿಸಿ ನೆತ್ತರು ತಣಿಯಲಾರದು ಚಿರ ಯೌವನ ಶಾಶ್ವತ
ಪರಾಕ್ರಮಿ ಬಾಹುಬಲಿ ಪ್ರಚಂಡ ನಾನು ನಾನೇ..!
ಖಾವಿ ಹೊದ್ದು ಠೀವಿಯಿಂದ ಹಾವಗೆ ಮೆಟ್ಟು ನಡೆವ
ಪಾದಧೂಳಿ ಧನ್ಯರಾಗೋ ಅಸಂಖ್ಯ ಭಕ್ತ ಮಾನ್ಯ
ಮಾತಲ್ಲ ಅಮೃತವಾಣಿ ಭಗವಂತನ ಶ್ರೇಯೋಭಿಲಾಷಿ
ಆಶಿರ್ವಚನ ಸತ್ಸಂಗದ ದೇವಮಾನವ ನಾನು ನಾನೇ..!
ಪುರಪ್ರಮುಖ ಪೌರಗಣ್ಯ ರಾಜಕಾರಣ ನಾಯಕ
ಜನಗಣಗಳ ಜೈಕಾರ ನನಗೇ ಮಾತ್ರ ಸ್ವೀಕಾರ
ಚತುರ ಕುಶಲ ರಾಜನೀತಿ ಹಣೆವ ಚದುರಂಗ ಪ್ರವೀಣ
ಸತ್ತೆಯೊಳಗೂ ಸಹಿ ದಾಖಲಿಸುವ ಶಾಣ್ಯಾ ನಾನು ನಾನೇ..!
ನಾನಜೇಯ ನಾನಂತಿಮ ಸರ್ವಜ್ಞಜ್ಞಾನಧಾತು
ಸರ್ವೋತ್ತಮ ಶ್ರೇಷ್ಟ ಜೇಷ್ಠ ನಾನು ಗರಿಷ್ಠ ಧಾತ
-ವಿಶ್ವಾಸ್ ಭಾರದ್ವಾಜ್

No comments:

Post a Comment