Thursday 9 April 2015

ಹಲಗೆ ಹನುಮಂತಪ್ಪ:


"ಕಪ್ನಳ್ಳಿ ಹೋರಿ ಹರಿಗ್ಗೇಲಿ ಹೋತ್ರಲೇ" ಅನ್ನುತ್ತಾ ಕಾಲೆತ್ತಿ ಕುಣಿಯುತ್ತಾ ಡಂಕಣಕಣ ಣಕಣಕಣ ಬಡಿಯುತ್ತಿದ್ದ ಆತನ ಹೆಸರು ಹಲಗೆ ಹನುಮಂತಪ್ಪ. ಹಲಗೆ ಹನುಮಂತಪ್ಪನಿಗೆ ಮಹತ್ವ ಬರುತ್ತಿದ್ದುದ್ದು ಕೆಲವೇ ಸಂದರ್ಭಗಳಾದರೂ ಆತ ಬಡಿಯುತ್ತಿದ್ದ ತಮಟೆಯಂತಹ ಚರ್ಮವಾದ್ಯದ ಲಯಬದ್ದ ಸದ್ದು ಮಾತ್ರ ನಿತ್ಯವೂ ಕೇಳುತ್ತಿತ್ತು. ತ್ಯಾಗರ್ತಿಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಹೋರಿ ಓಡಿಸುವ ಹಬ್ಬ, ದೀಪಾವಳಿಯ ಗುಡುಗುಡಿ, ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಮಾರಮ್ಮನ ದುಗುಳ್ ಪರ್ಸೆ, 5 ವರ್ಷದ ಮಾರೀಜಾತ್ರೆಗಳಲ್ಲಿ ಹನುಮಂತಪ್ಪನ ಹಲಗೆ ಇಲ್ಲದಿದ್ರೆ ಅವಕ್ಕೆಕಳೆಯೇ ಇರುತ್ತಿರಲಿಲ್ಲ. ತ್ಯಾಗರ್ತಿಯ ನಾಗರೀಕತೆಯ ಸಂಸ್ಕ್ರತಿಯಲ್ಲಿ ಹಾಗೆ ಬೆರೆತು ಹೋಗಿತ್ತು ಹನುಮಂತಪ್ಪನ ಚರ್ಮವಾದ್ಯ ಹಲಗೆ ಹಾಗೂ ಹನುಮಂತಪ್ಪನ ವಿಪರೀತ ವಿಲಾಸಿ ಬದುಕು.
ಗ್ರಾಮದ ಹೋರಿ ಓಡಿಸುವ ಹಬ್ಬದ ದಿನದಂದು ಮುಕುಪ್ಪಿ ಸರ್ಕಲ್ ಅಂತಲೇ ಕರೆಸಿಕೊಳ್ತಿದ್ದ ಕೆಳಗಿನ ವೃತ್ತದ ಮಧ್ಯೆ ಒಣಹುಲ್ಲು, ಕಡ್ಡಿ ಪುಳ್ಳೆಗಳನ್ನೊಡ್ಡಿ ಬೆಂಕಿ ಹಾಕಿ ಅದರಲ್ಲಿ ತನ್ನ ಚರ್ಮದ ತಮಟೆಯನ್ನು ಲಘುವಾಗಿ ಕಾಯಿಸುತ್ತಿದ್ದ ಹನುಮಂತಪ್ಪ. ಅಲ್ಲಿಗೆ ಹನುಮಂತಪ್ಪನ ಹಲಗೆ ಭೀಷಣ ಸದ್ದು ಮಾಡುವುದರಲ್ಲಿ ಅನುಮಾನವೇ ಇಲ್ಲ ಅನ್ನುವ ಅಭಿಪ್ರಾಯ ಊರ ಮಂದಿಗೆ ಖಾತ್ರಿ ಆಗುತ್ತಿತ್ತು. ಆದರೆ ಅಲ್ಲಿ ಇನ್ನೊಂದು ಸಮಸ್ಯೆ ಇರುತ್ತಿತ್ತು. ಹಲಗೆ ಹನುಮಂತಪ್ಪನಿಗೆ ಅಂದು ಮಾತ್ರ ಬೆಳ್ಳಂಬೆಳಿಗ್ಗೆಯೇ ಸಾರಾಯಿ ನೈವೇದ್ಯವಾಗಬೇಕಿತ್ತು. ಹೊಟ್ಟೆಗೆ ಹುಳಿ ಹೆಂಡ ಬಿದ್ದ ಮೇಲೆ ಮಾತ್ರವೇ ಹನುಮಂತಪ್ಪನ ಮೆದುಳಿನ ಕೋಣೆಯ ಕರೆಂಟು ಆನ್ ಆಗುತ್ತಿತ್ತು. ಇದರ ಖರ್ಚು ತ್ಯಾಗರ್ತಿಯ ಯಾರಾದ್ರೂ ಕಲಾಪ್ರೇಮಿಗಳು ವಹಿಸಿಕೊಳ್ಳಲೇಬೇಕಿತ್ತು.
ಸಾಮಾನ್ಯವಾಗಿ ಮೂರು ಸಂಜೆಯ ನಂತರ ನಟ್ಟ ನಡು ರಾತ್ರಿಯವರೆಗೂ ಲೆಖ್ಖ ಮಾಡಿ 10 ಪಾಕೀಟು ಸರ್ಕಾರಿ ಸರಾಯಿ ಕುಡಿಯುತ್ತಿದ್ದ ಹನುಮಂತಪ್ಪ. ನೆಂಚಿಕೊಳ್ಳಲು ಮಾಮೂಲಿ ಬ್ರಾಮಣರ ಕೇರಿ ವೃದ್ಧೆ ರೇಣುಕಮ್ಮಜ್ಜಿ ಸಹಾನುಭೂತಿಯಿಂದ ಕೊಡ್ತಿದ್ದ ಮಿಡಿಗಾಯಿ ಉಪ್ಪಿನಕಾಯಿ. ಹಿಂದೆ ಮುಂದೆ ಗತಿ ಇಲ್ಲದ ರೇಣುಕಮ್ಮಜ್ಜಿ ಮಾಬಲಗಿರಿ ಮಾಸ್ಟರ್ ಮನೆಯ ಕೊಟ್ಟಿಗೆಯಲ್ಲಿ ರೂಮೊಂದರಲ್ಲಿ ಒಂಟಿಯಾಗಿ ಬದುಕುತ್ತಿತ್ತು. ಜೀವನೋಪಾಯಕ್ಕಾಗಿ ಹಪ್ಪಳ, ಸಂಡಿಗೆ, ಹೋಳಿಗೆ, ಕರದಂಟು, ಉಪ್ಪಿನಕಾಯಿ, ತೊಕ್ಕು ತಯಾರಿಸಿ ಮಾರಾಟ ಮಾಡುತ್ತಿತ್ತು. ಅದರ ಕೈನಲ್ಲಿ ತಯಾರಾದ ಯಾವುದೇ ಖಾದ್ಯವಾದರೂ ಅಮೃತ ಸದೃಶ್ಯ ರುಚಿ. ಅಂತಹ ರೇಣುಕಮ್ಮಜ್ಜಿ ರೂಮಿನ ಮುಂಭಾಗದ ಜಗುಲಿಯ ಮೇಲೆ ಹನುಮಂತಪ್ಪ ಕುಳಿತನೆಂದರೇ ಮುದುಕಿಗೆ ಕರುಣೆ ಸಹಾನುಭೂತಿ ಕರಣೆ ಕರಣೆಯಾಗಿ ಉಕ್ಕುತ್ತಿತ್ತು. ತಾನು ತಯಾರಿಸಿದ ಯಾವುದಾದರೂ ತಿಂಡಿಯೂ ಕುರುಕಲೋ ಕೊಟ್ಟು, ಧನ್ಯತೆ ಅನುಭವಿಸುತ್ತಿತ್ತು ವೃದ್ಧೆ. ಆದರೆ ಅಸಲಿಗೆ ಹಲಗೆ ಹನುಮಂತಪ್ಪ ರೇಣುಕಮ್ಮಜ್ಜಿ ಕೋಣೆ ಮುಂಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದಿದ್ದೇ ಸೂಜಿ ಮೆಣಸಿನ ಕಾಯಿ, ಇಂಗಿನ ಒಗ್ಗರಣೆ ಒಗ್ಗರಿಸಿ ಪಿಂಗಾಣಿ ಜಾಡಿಯಲ್ಲಿ ಹದಹಾಕುವ ಮಿಡಿಗಾಯಿ ಉಪ್ಪಿನಕಾಯಿ ಆಸೆಗೆ. "ಜಾಸ್ತಿ ಕುಡಿಬ್ಯಾಡ ಹನುಮಂತಪ್ಪ" ಅನ್ನುವ ಉಪದೇಶ ಮಾಡಿಯೇ ರೇಣುಕಮ್ಮಜ್ಜಿ ಬ್ಯಾಗಡಿ ಕವರಿನಲ್ಲಿ ಉಪ್ಪಿನಕಾಯಿ ಕಟ್ಟಿ ಕೊಡುತ್ತಿತ್ತು.
ವಿಶೇಷದ ದಿನಗಳನ್ನು ಹೊರತುಪಡಿಸಿದ್ರೆ ಹನುಮಂತಪ್ಪನ ಹಲಗೆಗೆ ಅಷ್ಟು ಮಹತ್ವ ಇರುತ್ತಿರಲಿಲ್ಲ. ಆದರೆ ಅಪ್ಪನಿಗೆ ಸಂಬಳವಾಗುವ ದಿನ ನಮಗೆಲ್ಲರಿಗಿಂತ ನಿಖರವಾಗಿ ಹನುಮಂತಪ್ಪನಿಗೆ ಗೊತ್ತಾಗುತ್ತಿತ್ತು. ಸಂಬಳವಾದ ದಿನ ಮನೆ ಮುಂದೆ ಹನುಮಂತಪ್ಪ ಹಾಜರ್ ಆಗುತ್ತಿದ್ದ. "ಅಯ್ಯಾರೆ, ಪಗಾರ ಆತಂತೆ!" ಅಂತ ರಾಗ ಎಳೆಯುತ್ತಿದ್ದಂತೆ ಅಪ್ಪ ಕಿಸೆಯಿಂದ 10 ರೂ ತೆಗೆದು ಕೊಡುತ್ತಿದ್ದರು. "ಯಾಕ್ರೀ ಅವನಿಗೆ ದುಡ್ಡು ಕೊಡ್ತೀರಾ? ಸುಮ್ಮನೆ ಕುಡಿದು ಹಾಳಾಗ್ತಾನೆ!" ಅಮ್ಮ ಗೊಣಗುತ್ತಿದ್ದಳು. "ಪಾಪ ಕುಡಿಲೀ ಬಿಡೆ. ಅವನಿಗೂ ಹೆಂಡ್ತೀ ಮಕ್ಳು ಸತ್ತ ನೋವಿದೆಯಲ್ಲ. ಕುಡಿದು ಕುಣಿದು ಮರಿತಾನೆ ಬಿಡು" ಅನ್ನುತ್ತಿದ್ದ ಅಪ್ಪ. ಇದು ರೂಟಿನ್ ಆಗಿತ್ತು. ಆದ್ರೆ ಕುಡಿಯುವ ವಿಚಾರದಲ್ಲೂ ಪಕ್ಕಾ ಲೆಕ್ಕಾಚಾರದ ಮನುಷ್ಯ ಹನುಮಂತಪ್ಪ ಅಪ್ಪ ಕೊಟ್ಟ 10 ರೂಪಾಯಿಯನ್ನು ಅಳತೆ ಮಾಡಿ 5 ದಿನ ಕೆಂಪು ಬೋರ್ಡಿನ ಸರ್ಕಾರಿ ಗಡಂಗು ಸರಾಯಿ ಅಂಗಡಿಯ ಹುಂಡಿಗೆ ಹಾಕುತ್ತಿದ್ದ. ಮತ್ತು ಆ ಐದೂ ದಿನ ಮೇಲಿನ ಸರ್ಕಲ್ನಲ್ಲಿ ರಾತ್ರಿ ಹಲಗೆ ಬಾರಿಸಿ ಕುಣಿಯುವಾಗ ಹೆಂಡಕ್ಕೆ ದುಡ್ಡು ಕೊಟ್ಟ ಅಪ್ಪನ ಹೆಸರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ತಿದ್ದ.
ಈಗೊಂದು ಐದಾರು ವರ್ಷದ ಹಿಂದೆ ಹನುಮಂತಪ್ಪ ಸತ್ತು ಹೋದನಂತೆ. ಹಾಗಂತ ಊರಲ್ಲಿ ಯಾರೋ ಹೇಳಿದ್ದು ಇತ್ತೀಚೆಗೆ. ತ್ಯಾಗರ್ತಿ ಬಿಟ್ಟ ಮೇಲೂ ತ್ಯಾಗರ್ತಿ ಕಾಡುವುದೇ ಇಂತಹ ಕೆಲವು ಮರೆಯಲಾಗದ ಪೆಕ್ಯೂಲಿಯರ್ ಪಾತ್ರಗಳಿಂದಾಗಿ.
-ವಿಶ್ವಾಸ್ ಭಾರದ್ವಾಜ್
***

No comments:

Post a Comment