Friday, 10 April 2015

ವಿನಾಕಾರಣ ಅಸೀಮನೆ ಶಾಂತಮ್ಮ ನೆನಪಾದರು...

ಯಾಕೋ ವಿನಾಕಾರಣ ಅಸೀಮನೆ ಶಾಂತಮ್ಮ ನೆನಪಾದರು...
92ನೇ ವಯಸ್ಸಿನಲ್ಲಿ ಕೆ ಎಸ್ ಆರ್ ಟಿ ಸಿ ಕಿಲ್ಲರ್ ಕೆಂಪು ಬಸ್ಸಿನ ಅಡಿ ನೊಸೆದು ಚೂರಾಗದಿದ್ದರೆ ಇನ್ನೂ 10 ವರ್ಷ ಬದುಕಿ, ನರ್ವಸ್ ನೈಂಟಿಯ ಸಚಿನ್ ತೆಂಡೂಲ್ಕರ್ ನ ಅಣಕಿಸಿಬಿಡ್ತಿದ್ದರು ಶಾಂತಮ್ಮ..
ಮುದುಕಿ ಅಂತ ಅಸಡ್ಡೆ ಮಾಡ್ತಿದ್ದ ತೀರ್ಥಹಳ್ಳಿ ಆಗುಂಬೆ ಮಧ್ಯ ಓಡಾಡುತ್ತಿದ್ದ ಪುಷ್ಪದಂತ ಬಸ್ ಕಂಡಕ್ಟರ್ ಗೆ "ತೆಳು ಸೊಂಟದ ಹುಡುಗೀರ್ ಗೆ ಕೈ ಹಿಡಿದು ಹತ್ತಿಸ್ಕೋತೀಯಾ, ಈ ಬೆನ್ನು ಬಾಗಿದ ಮುದುಕಿಗೆ ಕೈ ಹಿಡಿಯಕ್ಕೆ ಆಗಲ್ವೇನೋ ಮುಂಡೇದೆ" ಅಂತ ಘರ್ಜಿಸಿದ್ದ ಘಟವಾಣಿ ಘಾಟಿ ಮುದುಕಿ ಶಾಂತಮ್ಮ..
ಶಾಂತಮ್ಮಜ್ಜಿಗೆ ಇಬ್ಬರು ಮಕ್ಕಳು.. ಎರಡೂ ಹೆಣ್ಣು ಸಂತಾನವೇ.. ದೊಡ್ಡವರು ಶ್ರೀದೇವಮ್ಮ,
ಚಿಕ್ಕವರು ಕಮಲಾಕ್ಷಮ್ಮ, ಶೃಂಗೇರಿ ಕಡೆಯ ಶೃಂಗೇಶ್ವರಯ್ಯರನ್ನು ಶ್ರೀದೇವಮ್ಮನಿಗೆ ಮದುವೆ ಮಾಡಿ ಮನೆ ಅಳಿತನಕ್ಕೆ ಕರೆದುಕೊಂಡು ಬಂದರು.. ಆದ್ರೆ ಆಗಾಗಾ ತಿಕ್ಕಲು ತಿರುಗುತ್ತಿದ್ದ ಮುದುಕಿ ಕೆಲವೇ ವರ್ಷಗಳಲ್ಲಿ ಅಳಿಯ-ಮಗಳನ್ನು ಹೊರ ದಬ್ಬಿತು...
ಬಳಿಕ ಕಮಲಾಕ್ಷಮ್ಮರನ್ನು ಮದುವೆ ಮಾಡಿ ಆ ಕಿರಿ ಅಳಿಯನನ್ನು ಮನೆಯಲ್ಲಿ ಇಟ್ಕೊಳ್ತು.. ಆದರೆ ಮುದುಕಿಯದ್ದು ಮಾಮೂಲಿ ವರಾತ ಹುಚ್ಚು ವರಸೆ, ಸಣ್ಣ ಮಗಳು-ಅಳಿಯರ ವ್ಯಾಲಿಡೆಟಿಯೂ ಹೆಚ್ಚು ಕಾಲ ಉಳಿಯಲಿಲ್ಲ.. ಅವರನ್ನೂ ಮನೆಯಿಂದ ಓಡಿಸ್ತು...
ಸ್ವಲ್ಪ ವರ್ಷ ಒಂಟಿಯಾಗಿದ್ದಾಗ ಮುದುಕಿ, ಆಮೇಲೆ ಅದ್ಯಾವನೋ ಭಾರತೀಪುರದ ಪ್ರಸನ್ನ ಕುಮಾರ ಅನ್ನೋ ಅಪರಿಚಿತನ ಹಿಂದೆ ಮುಂದೆ ವಿಚಾರಿಸದೆ ತಂದು ಮನೆಯಲ್ಲಿ ಇಟ್ಕೊಂಡು ಅಡಿಕೆ ತೋಟದ ಉಸ್ತುವಾರಿ ವಹಿಸಿಕೊಡ್ತು.. ಅವನೋ ಪಾಕಂಡಿ, ಮುದುಕಿಗೆ ಉಂಡೇನಾಮ ತಿಕ್ಕೋಕೆ ನೋಡಿದಾಗ, ಶಾಂತಮ್ಮ ಏನು ಕಮ್ಮಿನಾ? ಒದ್ದು ಆಚೆಗಟ್ತು..
ಕೊನೆಯ ಕಾಲದಲ್ಲಿ ಮುದುಕಿ ಒಂಟಿಯಾಗಿತ್ತು..
ಆದ್ರೆ ಶಾಂತಮ್ಮನ ಕತ್ತಲ ಭೂತದ ಮನೆ, ಎರಡೆಕರೆ ತೋಟದ ಕಡೆ ಅಸೀಮನೆ ಹೊಂಡದವರಾರು ಹೋಗ್ತಾ ಇರಲಿಲ್ಲ.. ಶ್ರೀದೇವಮ್ಮನ ಹಿರಿಸೊಸೆ ಚಂದ್ರಕಾಂತಿಗಂತೂ ಆ ದಿಕ್ಕು ಅಂದ್ರೆ ನವರಂಧ್ರಗಳಲ್ಲೂ ನೀರು ಹನಿಕಿಸುವಷ್ಟು ಭೀತಿ..
ಇಂತಿಪ್ಪ ಶಾಂತಮ್ಮ ಅನ್ನೋ ಮುದುಕಿ ಒಬ್ಬಳೇ ತೋಟದ ಬೇಸಾಯ, ಔಷದಿ ಹೊಡಿಸೋದು, ಅಡಿಕೆ ಕೊಯ್ಲು,ಮಂಡಿ ವ್ಯವಹಾರ, ಕೊನೆಗೆ ಹೆಬ್ಬೆಟ್ಟು ಒತ್ತಿ ಬ್ಯಾಂಕ್ ವಹಿವಾಟು ಕೂಡಾ ನೋಡಿಕೊಳ್ತಿತ್ತು..
ಮುದುಕಿಯ ಇಚ್ಛಾಶಕ್ತಿ, ಸಂಕಲ್ಪ ಹಾಗೂ ಬದ್ಧತೆ ಭಯಂಕರ ಗಟ್ಟಿ...ರಿಜಿಡ್ ಮುದುಕಿ..
ತನ್ನ 92 ನೇ ವಯಸ್ಸಲ್ಲಿ ಬಿದರಗೋಡಿನಲ್ಲಿ ಎತ್ತರ ಬಸ್ ನ ಚಕ್ರಕ್ಕೆ ಸಿಕ್ಕಿ ಸತ್ತ ಮುದುಕಿ ಶಾಂತಮ್ಮನ ಮೃತದೇಹ ತಂದು ಬಾಗಿಲು ತೆಗೆದ ಮೊಮ್ಮಕ್ಕಳಿಗೆ ಪರಮಾಶ್ಚರ್ಯ ಕಾದಿತ್ತು... ಅಪರ ಕೃಯೆಗೆ ಬೇಕಾದ ಕರಿ ಎಳ್ಳು, ದರ್ಬೆ,ಮಡಿಕೆಯಾದಿಯಾಗಿ ಸಂಸ್ಕಾರದ ಪದಾರ್ಥಗಳು ಬಾಗಿಲ ಹೊಸ್ತಿಲ ಬುಡದಲ್ಲೇ ಸಿಕ್ಕಿದ್ದವು.. ಮುದುಕಿಗೆ ತನ್ನ ಸಾವಿನ ಮುನ್ಸೂಚನೆ ಸಿಕ್ಕಿತ್ತಾ...?
ಅದ್ಯಾವ ಟೆಕ್ನಾಲಜಿ ಬಳಸುತ್ತಿದ್ದ ಏನೋ, ಶಾಂತಮ್ಮ ಸತ್ತ ಮೇಲೆ, ಅದರ ಕತ್ತಲ ಮನೆಯ ಅಡಿಗೆ ಕೋಣೆಯಲ್ಲಿದ್ದ ನಾಲ್ಕು ಜಾಡಿ ಮಿಡಿಗಾಯಿ ಉಪ್ಪಿನಕಾಯಿ ಸುಮಾರು 5 ವರ್ಷ ಹಾಳಾಗದೇ ಉಳಿದಿತ್ತು.. ಹಲಸಿನ ಹಣ್ಣು ಹಪ್ಪಳ ಅದ್ಭುತ ರುಚಿ ಹೊಂದಿತ್ತು..
ಅಂದ ಹಾಗೆ ಈ ಶಾಂತಮ್ಮ ಬೇರಾರು ಅಲ್ಲ ನನ್ನ ಅಮ್ಮನ ಅಜ್ಜಿ, ನನಗೆ ಮುತ್ತಜ್ಜಿ ...
ನಾನು ಶಾಂತಮ್ಮನ ಮರಿಮಗ... ಅಜ್ಜಿ ನನ್ನ ಉಪನಯನಕ್ಕೆ ಬಂದಿತ್ತು.. ನನಗೇ ಅಂತ ಮಾಡಿಸಿದ್ದ
ಬೆಳ್ಳಿಯ ಪಂಚ ಪಾತ್ರೆ ಉದ್ಧರಣೆ ಉಡುಗೊರೆ ನೀಡಿತ್ತು.. ಶಾಂತಮ್ಮಜ್ಜಿ ಸತ್ತಾಗ ನನಗೆ 13 ನಡೆಯುತ್ತಿತ್ತು..
ಪ್ರಾಯಶಃ ಆಗುಂಬೆ, ಮೇಗರವಳ್ಳಿ ಸೀಮೆ ಕೊನೆಗೆ ಅಸೀಮನೆ ವಾಸಿಗಳು ಶಾಂತಮ್ಮನನ್ನು ಮರೆತಿದ್ದಾರೆ.. ಆದರೆ ಮುದುಕಿ ನನ್ನ ಸ್ಮೃತಿಯಲ್ಲಿ ಉಳಿದುಬಿಟ್ಟಿದೆ...
- ವಿಶ್ವಾಸದಿಂದ ಭಾರದ್ವಾಜ್

No comments:

Post a Comment