Friday 8 May 2015

ಈ ಒಂಟಿ ಬ್ರಾಹ್ಮಣನ ಅನಿಷ್ಟ ಮುಖ ನೋಡಿದೆ

ಬೆಳ್ಳಂಬೆಳಿಗ್ಗೆ ಎದ್ದು ಪ್ರಾತಃರ್ವಿಧಿಗಳನ್ನು ಮುಗಿಸಿ, ಶುಭ್ರವಾಗಿ ಸ್ನಾನ ಮಾಡಿ, ರೇಷ್ಮೇ ಮಡಿಯುಟ್ಟು ದೇವಸ್ಥಾನಕ್ಕೆ ಹೋಗಿ; ನಮಸ್ಕಾರ ಮಾಡಿ ಅಲ್ಲಿಂದ ಅಪ್ಪಣ್ಣ ಭಟ್ಟರ ಮನೆಗೆ ಹೋಗಬೇಕು ಅಂದುಕೊಂಡು ಜೋಡು ಮೆಟ್ಟಿದ ಬ್ರಹ್ಮಚಾರಿ ರಾಮಾಶಾಸ್ತ್ರಿ..
ಇವತ್ತು ಅಪ್ಪಣ್ಣ ಭಟ್ಟರ ಮಗಳು ಸೀತಾಲಕ್ಷ್ಮಿಯನ್ನು ತನಗೆ ಮದುವೆ ಮಾಡಿ ಕೊಡುತ್ತಾರಾ ಅನ್ನುವ ವಿಷಯ ಪ್ರಸ್ಥಾಪಿಸುವ ಯೋಜನೆ ರಾಮಾಶಾಸ್ತ್ರಿಯದ್ದಾಗಿತ್ತು..
ಅಷ್ಟರಲ್ಲಿ,
ಎದುರಿನಿಂದ ಪಕ್ಕದ ಮನೆಯ ಗಾಜು ಕಣ್ಣಿನ ಕಂದು ಮಾಳುಬೆಕ್ಕು ರಸ್ತೆ ದಾಟಿತು..
"ತತ್ತೇರಿಕೆ ಇದೊಂದು ಪ್ರಾರಬ್ಧ ಅಡ್ಡ ಬಂತು.. ಅದೂ ಮುಂಡೇದು ಎಡದಿಕ್ಕಿನಿಂದ ಬಲಕ್ಕೆ ಹೊಕ್ಕಿತು.. ಇನ್ನು ಹೋದ ಕೆಲಸ ಆದ ಹಾಗೆ.. ಬೆಳ್ ಬೆಳಿಗ್ಗೆ ಇದೊಂದು ಅಪಶಕುನ ಬೇಡಿತ್ತು.." ಗೊಣಗಾಡಿಕೊಂಡು ಮನೆ ಕಡೆಗೆ ನಡೆದ ರಾಮಾಶಾಸ್ತ್ರಿ..
ರಾಮಾಶಾಸ್ತ್ರಿಯನ್ನು ಒಂದು ಕ್ಷಣ ಗುರುಗುಟ್ಟಿಕೊಂಡು ನೋಡಿದ ಆ ಮಾಳುಬೆಕ್ಕು -"ತಥ್! ಯಾವುದೋ ಒಳ್ಳೇ ಕೆಲಸಕ್ಕೆ ಅಂತ ಹೊರಟಿದ್ದೆ, ಬೆಳ್ ಬೆಳಿಗ್ಗೆ ಈ ಒಂಟಿ ಬ್ರಾಹ್ಮಣನ ಮುಖ ನೋಡಿದೆ.. ಅಲ್ಲಿಗೆ ಇವತ್ತಿನ ನನ್ ಕೆಲಸ ಆದ ಹಾಗೇನೇ?" ಗೊಣಗುಟ್ಟಿಕೊಂಡು ಕಾಂಪೌಂಡ್ ಹತ್ತಿ ನೆಗೆದು ಹೋಯ್ತು ಮಾರ್ಜಾಲ..

No comments:

Post a Comment