Monday 15 June 2015

ನಾನೂ ದೇವರಾಗ ಹೊರಡುವೆ..!

ನಾನೂ ದೇವರಾಗ ಹೊರಡುವೆ..!
ನನಗೂ ಆಗಾಗ ದೇವರಾಗುವ ಆಸೆ ಹುಟ್ಟುತ್ತದೆ!!
ಚತುರ್ಮುಖ, ತ್ರಿನೇತ್ರ, ಮಹಾಪಾದ, ಅಷ್ಟಹಸ್ತಗಳ
ರಗಳೆ ತೊಂದರೆಗಳು ಮಾತ್ರ ಬೇಡ..!!
ಛತ್ರಿ ಚಾಮರ ಧ್ವಜಗಳ ಬಯಸದ ದೇವರು
ಸಿಂಪಲ್ಲಾಗೊಂದು ದೇಹ ಹೊತ್ತ ಮನುಷ್ಯಾಕೃತಿಯ ದೇವರು
ಅತೀತ ಶಕ್ತಿಗಳ ಹೊಂದಿರದೇ ಇರುವ ದೇವರು
ತಲೆ ತುಂಬಾ ಕಾಮನ್ ಸೆನ್ಸ್ ತುಂಬಿಕೊಂಡಿದ್ದರೆ ಸಾಕು
ದೇವರಾಗಿಬಿಟ್ಟರೆ ಹೇಗಿರುತ್ತದೆ ನನ್ನ ಲೈಫ್ ಸ್ಟೈಲ್??
ಆಗಾಗ ಯೋಚಿಸುತ್ತೇನೆ ಹಾಗಾದರೆ ಎಷ್ಟು ಚೆಂದ
ಹಮ್ಮಿನ ಕೋಟು ಧರಿಸದೆ,
ಆಡಂಬರದ ಮೆಟ್ಟು ತುಳಿಯದೆ:
ಕೊಳೆಯದೊಂದ ಹಳೆಯ ಶರಟು;
ನೇತು ಹಾಕಿಕೊಂಡು ಹೊರಟು
ಜಗತ್ತಿನಲ್ಲಿ ಗುಡಿ ಗೋಪುರ, ಮಂದಿರ ಮಸೀದಿ ಚರ್ಚುಗಳ
ಕಟ್ಟುವ ಮೂರ್ಖ ಶಿಖಾಮಣಿಗಳನ್ನು
-ಎಣಿಸಿಣಿಸಿ ಪಕಪಕನೆ ನಕ್ಕುಬಿಡುತ್ತೇನೆ!!
ನಾನು ದೇವರಾದರೆ,,,!
ಈ ಸಂಪ್ರದಾಯವಾದಿಗಳ ಹಿಪ್ನಟೈಸ್ ಮಾಡಿಸಿ-
-ಮಾಡರ್ನ್ ಮನುಷ್ಯರನ್ನಾಗಿಸುತ್ತೇನೆ:
ಪಿತೃಗಳಿಗೆ ಇಡುವ ಪಕ್ಷದ ಪಿಂಡ ತಿನ್ನಲು
-ಬರುವ ಕಾಗೆಯ ರೂಪ ತಳೆಯುತ್ತೇನೆ
ಶ್ರಾದ್ಧದ ಅಡುಗೆ ಉದ್ದಿನ ವಡೆ, ಕಡ್ಲೇಬೇಳೆಯ ಪಾಯಸವ
ಸೊರ್ರನೇ ಸದ್ದು ಮಾಡಿ ಉಣ್ಣುತ್ತೇನೆ
ಮಡಿ ಮೈಲಿಗೆಯೆಂದು ತುಳಸೀ ತೀರ್ಥ ಸಿಂಪಡಿಸಿ
ಪಂಚಗವ್ಯ ಸಹಿತ ಶುದ್ದ ಪುಣ್ಯ ಮಾಡಿಸುವ
ಪ್ರಾರಬ್ಧ ಪುರೋಹಿತನಿಗೆ ಗೋಮೂತ್ರವ ಕುಡಿಸುತ್ತೇನೆ
ನಾನು ಮಾತ್ರ ಗಟ್ಟಿ ಹಾಲು, ಮೊಸರು, ತುಪ್ಪ, ಜೇನುಗಳ
-ಬೆರೆಸಿದ ಪಂಚಾಮೃತವ ಸವಿಯುತ್ತೇನೆ
ನಾನು ದೇವರೇ ಆಗಿಬಿಟ್ಟರೇ,,,!
ಹಿತ್ತಲಿನ ಬಾಳೆ, ಪೇರಲೆ ಮರಗಳ ಮೇಲೆ ಗರ್ಭಗುಡಿಯ ಕಟ್ಟುತ್ತೇನೆ
ಮಾವು ಹಲಸಿನ ಮರಗಳಿಗೆ ಉಯ್ಯಾಲೆ ಕಟ್ಟಿ ಉತ್ಸವ ಮೂರ್ತಿಯ ಜೋಕಾಲಿಯಾಡಿಸುತ್ತೇನೆ..!!
ನಾಗರಬನದ ಯಕ್ಷ, ಭೂತ, ಪಂಜುರ್ಲಿ, ಕಲ್ಕುಟ್ಕ, ಬಬ್ಬರ್ಯ
ಗಣಗಳ ಜೊತೆ ಜೂಟಾಟವಾಡುತ್ತೇನೆ
ಅದೇ ಬನದ ನಡುಮಧ್ಯೆ ಹಳೆ ಮರದ ಕೊಂಬೆಯ ಮೇಲೆ ಕೂತು
ಬಲಿ ಹಾಕಿದ ಕೋಳಿ ಖಾದ್ಯ ಸವಿಯುವ ಗಳಿಗೆಗೆ ಕಾಯುತ್ತೇನೆ
ನಾನೂ ದೇವರಾಗಿಬಿಟ್ಟರೆ,,,!
ಅನಂತನ ಸಂಪತ್ತನ್ನೆಲ್ಲ ದಿಗಂಬರರಿಗೆ ಹಂಚಿಬಿಡುತ್ತೇನೆ
ಅರೆ ಹೊಟ್ಟೆ ಅರೆ ಬಟ್ಟೆಯ ಪಕೀರರಿಗೆ ಮೃಷ್ಟಾನ್ನ ಉಣಿಸುತ್ತೇನೆ
ಮಹಲುಗಳ ಮಾಸ್ಟರ್ ಬೆಡ್ ರೂಂನಲ್ಲಿ ತಿರುಕರ ತಂದು ಮಲಗಿಸುತ್ತೇನೆ
ಭವ್ಯ ಝಗಮಗಿಸುವ ಜೂಮರ್ ಅಡಿಯಲ್ಲಿ ಚೌಕಾಮಣೆ ಆಡುತ್ತೇನೆ
ಅಲ್ಲೆಲ್ಲೋ ಮುದ್ದೆ ಬತ್ಸಾರಿನ ಘಮ ಬಂದೆಡೆ ಉಸಿರುಗಟ್ಟಿ ಓಡುತ್ತೇನೆ
ಹೊಲೆ ಮಾದಿಗರ ಅಂಗಳದಲ್ಲೇ ಕುಳಿತು ಬ್ರಾಹ್ಮಣರ ಪುಳಿಯೋಗರೆ ತಿನ್ನುತ್ತೇನೆ
ಕೊನೆಗೆ ತುಂಬು ಚಂದಿರನ ಬೆಳದಿಂಗಳಡಿ ಅಂಡು ಕವಚಿ ಮಲಗಿಬಿಡುತ್ತೇನೆ
ನಾನೂ ಆಗಾಗ ದೇವರಾಗುವ ದಿವ್ಯ ಕನಸು ಕಾಣುತ್ತೇನೆ
ನಿಹಾರಿಕೆಗಳ ಮಾಲೆ ಕಟ್ಟಿ ಅಭಿಸಾರಿಕೆಗೆ ತೊಡಿಸಲು
ಬಿದಿಗೆ ಚಂದ್ರನ ಕತ್ತರಿಸಿ ನಲ್ಲೆ ಹಣೆಗೆ ಬೊಟ್ಟಿಕ್ಕಲು
ಮಹಾ ಸಾಗರದ ಅಲೆಗಳ ಎರಡೂ ಕೈಗಳಲ್ಲೆತ್ತಿ
ಮಡಿಕೆ ಮಾಡಿ ರವಿಕೆಯಿರದ ಸೀರೆಯಂತೆ ಅವಳಿಗೆ ಸುತ್ತಲು
ವಿಂಧ್ಯ ಸಾತ್ಪುರ ಶ್ರೇಣಿಯ ಗಿರಿಧಾಮಗಳ ಚೆಂದದ ಚೆಪ್ಪಲಿ ಮಾಡಿ ತೊಡಿಸಲು
ನಾನು ದೇವರಾಗಲೇ ಬೇಕು ಈ ವಿಶೇಷ ಶಕ್ತಿ ಲಭಿಸಲು
ಒಮ್ಮೊಮ್ಮೆ ನಾನು ದೇವರೇ ಆಗಿಬಿಡುವೆ,,,!
ಐಶರಾಮಿ ಹೆರಿಗೆ ಆಸ್ಪತ್ರೆಯ ಕೆಡವಿ;
ನೂರಲ್ಲ ಸಾವಿರ ಸೂಲಗಿತ್ತಿಯರ ಸೃಷ್ಟಿಸಲು ಆದೇಶ ನೀಡುವೆ
ಬಹುಮಹಡಿಯ ಪಾಠಶಾಲೆಗಳ ಬೀಳಿಸಿ
ಅಲ್ಲಿ ಮತ್ತೆ ಹಳೆಯ ಹರಕು ಜೋಳಿಗೆಯ ಭವತಿ ಭಿಕ್ಷಾಂದೇಹಿ;
-ಗುರುಕುಲ ಸಮುಚ್ಛಯವ ನಿರ್ಮಿಸುವೆ..!!
ಮಗ್ಗುಲಲ್ಲಿ ಬಾಂಬು ಕಟ್ಟಿಕೊಂಡು ಅಟ್ಟಹಾಸ ಮೆರೆವ ರಕ್ಕಸ ಸಂತಾನಗಳಿಗೆ
ಕೈಕಾಲು ಬಿಗಿದು ಪಾಯಖಾನೆಯ ಕಿಣ್ಣ ತಿನ್ನಿಸುವೆ
ಒಂದೇ ರಾತ್ರಿಯಲ್ಲಿ ಗ್ಲೋಬಿನ ಗಡಿರೇಖೆಗಳ ಅಳಿಸಿ ಚಪ್ಪಾಳೆ ತಟ್ಟಿಬಿಡುವೆ:
ನಾನೂ ದೇವರಾಗುತ್ತೇನೆ,,,!
ನವಿರಾದ ಪ್ರೀತಿಯ ಕಾಣಲು
ಪ್ರಿಯಸಖಿಯ ಹೆಜ್ಜೆ ಜಾಡಿಗೆ ಕಿವಿಯಾಗಿ
-ಆಕೆಯ ಮೈಗಂಧ ಸುಗಂಧವ ಆಘ್ರಾಣಿಸಲು
ನಾನೂ ದೇವರಾಗುತ್ತೇನೆ,,,!
ವಿಶ್ವವ್ಯಾಪಿಯಾಗಿ ಬೆಳೆದು ನಿಂತು
ಅಸಂಖ್ಯ ಬಲಿ ಚಕ್ರವರ್ತಿಗಳ ತುಳಿದು ಪಾತಾಳ ಸೇರಿಸಲು
ನಾನು ಏಕಚಕ್ರಾಧಿಪತ್ಯ ಸಾಧಿಸಲು ಹೊರಡುತ್ತೇನೆ,,,!
ಪ್ರಪಂಚವನ್ನೇ ಗೆಲ್ಲುವೆ
ಆದರೆ...!
ನನ್ನ ಸೈನ್ಯಕ್ಕೆ ಬುದ್ಧನನ್ನೇ ದಳಪತಿಯನ್ನಾಗಿಸುವೆ:
ದೇವರು ದೇವರೇ ಯಾಕಾಗಬೇಕು??
ದೇವರು ಮನುಜನಾಗನೇ? ಮಗುವಾಗಲಾರನೆ?
ಜೋಲುದೇಹದ ಮುದುಕ - ಅಲೆದಲೆದು ಬೇಡಿ ತಿನ್ನುವ ತಿರುಕ??
ನೂಲು ಜನಿವಾರದಂತಹ ದೇಹದ ಬಡ ಬ್ರಾಹ್ಮಣ?
ಹರಿದು ಹೋದ ಕಚ್ಚೆಯ ನೀತಿ ಪಾಠದ ಶಿಕ್ಷಕ?
ದಲಿತನೋ, ದೀನನೋ, ಅಸಹಾಯಕನೋ ಆದ ನಡುವಯಸ್ಕ??
ಪೋಲಿಯೋ ಪೀಡಿತ? ಕ್ಷಯ, ಕುಷ್ಠ ರೋಗಿ? ಬುದ್ಧಿಮಾಂದ್ಯ??
ಇವರಲ್ಲಿ ಯಾರಾದರೂ ದೇವರೇ ಆಗಿರಬಹುದು!!!
ಅಥವಾ ಇವರ ಸೊಲ್ಲು ಸೊಲ್ಲಿನ ನರಳಿಕೆಯಲ್ಲೂ-
-ದೇವರ ಉಸಿರಾಟವಿರಬಹುದು..!
ನಾನು ದೇವರಾಗುವ ಮುನ್ನ ಮಾನವನಾಗಲು ಬಯಸುವೆ..!
ಈ ಎಲ್ಲಾ ಪಾತ್ರಗಳಿಗೆ ಜೀವ ನೀಡುವ ನಿರ್ದೇಶಕನಾಗುವೆ..!
-ವಿಶ್ವಾಸ್ ಭಾರದ್ವಾಜ್
(ರಾಜಶೇಖರ್ ಬಂಡೆ ಬರೆದ ‘ನಾನು ದೇವರಾದರೆ’ ಪದ್ಯಕ್ಕೆ ಪ್ರತಿಯಾಗಿ ನನ್ನ ಈ ‘ನಾನೂ ದೇವರಾಗ ಹೊರಡುವೆ..!’ )

No comments:

Post a Comment