Monday 15 June 2015

ನಿಜ ನಿಜ ಕನ್ನಡಕ್ಕೊಬ್ಬರೇ ನಿರಂಜನ..



ಒಸೈರಿಸ್ ದೇವನ ಹೆಂಡತಿ ಐಸಿಸ್ ದೇವಿ.. ಅವರ ವೀರ ಸಂತಾನ ಹೋರಸ್ ದೇವ.. ಓಸೈರಿಸ್ನನ್ನು ಮೋಸದಿಂದ ಕೊಲ್ಲುವ ಸೆತ್ ಅನ್ನುವ ರಾಕ್ಷಸ ಒಸೈರಿಸ್ ದೇಹವನ್ನು 14 ಹೋಳುಗಳನ್ನಾಗಿ ಕತ್ತರಿಸುತ್ತಾನೆ.. ಆನಂತರ ಅಷ್ಟೂ ಹೋಳುಗಳನ್ನು ಒಟ್ಟುಗೂಡಿಸಿ ಶವವನ್ನು ಶಾಶ್ವತ ಮನೆ(ಗೋರಿ)ಗೆ ಕಳಿಸಲಾಗುತ್ತದೆ.. ಕೆಲ ಕಾಲ ಅಜ್ಞಾತದಲ್ಲಿ ಬದುಕುವ ಐಸಿಸ್ ದೇವತೆ ತನ್ನ ಮಗ ಹೋರಸ್ನನ್ನು ವೀರಾಧಿವೀರನನ್ನಾಗಿಸುತ್ತಾಳೆ.. ಕೊನೆಗೆ ಹೋರಸ್ ಹಾಗೂ ಸೆತ್ ನಡುವಣ ನಡೆಯುವ ನಿರ್ಣಾಯಕ ಕದನದಲ್ಲಿ ತನ್ನ ತಂದೆ ಒಸೈರಿಸ್ನನ್ನು ಕೊಂದಂತೆ ಹೋರಸ್ ಸೆತ್ ನನ್ನು 14 ತುಂಡುಗಳನ್ನಾಗಿ ಹೊಡೆದು ಕೊಂದು ಹಾಕುತ್ತಾನೆ.. ವೀರಾಧಿ ವೀರ ಹೋರಸ್ಗೆ ಉಘೆ ಅನ್ನುತ್ತದೆ ಐಗುಪ್ತ ರಾಷ್ಟ್ರ.. ಅಂದ ಹಾಗೆ ಒಸೈರಿಸ್ ಶಾಶ್ವತ ಮನೆ ಅಥವಾ ಗೋರಿ ಇರುವ ಸ್ಥಳ ಅಬ್ಟು ದ್ವೀಪ..
4000 ವರ್ಷಗಳ ಹಿಂದೆ ಐಗುಪ್ತವನ್ನು ಆಳಿದ ಮೊದಲ ಪೆರೋ ಹೆಸರು ರಾ.. ಅವನೇ ಸೂರ್ಯ.. ಐಗುಪ್ತ ರಾಷ್ಟ್ರದ ಪ್ರಮುಖ ದೇವರು ರಾ, ಐಗುಪ್ತ ಜನತೆ ಆರಾಧಿಸುವ ಮುಖ್ಯ ಮೂರು ದೇವರುಗಳು ರಾ, ಪ್​​ಟಾ, ಅಮನ್.. ಪ್ಟಾ ದೇವನನ್ನು ಸರ್ವಶಕ್ತ, ಸರ್ವಜನ ಪೂಜಿತ ದೇವರು ಅಂತ ಗುರುತಿಸಿದರೆ, ಅಮನ್ ದೇವ ದೋಣಿಕಾರರ, ಅಂಬಿಗರ, ದಂಡಿನ ಸೈನಿಕರ ಅಚ್ಚುಮೆಚ್ಚಿನ ದೇವ.. ದೋಣಿ ಮುಳುಗದಂತೆ, ಹಾಯಿ ಹರಿದುಹೋಗದಂತೆ, ಮಹಾ ನೀಲ ನದಿಯಲ್ಲಿ ಚಂಡಮಾರುತಗಳು ಬೀಸಿ ನಾವೆ ಉರುಳದಂತೆ ಕಾಪಾಡುವ ಜವಬ್ದಾರಿ ಅಮನ್ ದೇವನದ್ದು..
ಧೂಎಸಿಸ್ ದೇವತೆ ಗರ್ಭ ಧರಿಸಿದ ಮಹಿಳೆಯರ ಆರಧ್ಯ ದೇವಿ.. ಗರ್ಭದಲ್ಲಿರುವ ಕುಡಿಗಳ ರಕ್ಷಣೆ ಮಾಡುವ ಹೊಣೆ ಅವಳದ್ದು.. ಥೂತ್ ದೇವಿ ಐಗುಪ್ತ ಜನರಿಗೆ ಲಿಪಿಸುರುಳಿ ಜ್ಞಾನ ಕಲಿಸಿದ ವಿದ್ಯಾದೇವತೆ.. ಸ್ವರ್ಣ ದೇವತೆ ಹಾಥೋರ್ ಪೆರೋ ವಂಶದಿಂದ ಅಧಿಕೃತವಾಗಿ ಪೂಜಿಸಲ್ಪಡುವ ದೇವತೆ.. ಕೋಡಿರುವ ಹಸುವಿನ ಮುಖವಾಡ ಧರಿಸರುವ ಹಾಥೊರ್ ಐಗುಪ್ತದಲ್ಲಿ ಮಗು ಹುಟ್ಟಿದ ನಂತರ ಬಂದು ಭವಿಷ್ಯವನ್ನು ನಿರ್ಧರಿಸುತ್ತಾಳೆ ಅನ್ನುವುದು ಐಗುಪ್ತದ ನಂಬಿಕೆ.. ತೋಳದ ಮುಖವಾಡ ಇರುವ ಅನೋಬಿಸ್ ದೇವತೆ ಸತ್ತ ವ್ಯೆಕ್ತಿಗಳಿಗೆ ಮುಕ್ತಿ ದೊರಕಿಸುವ ಶಾಶ್ವತ ಮನೆಯ ದೇವ..
ಇವಿಷ್ಟೂ ಪ್ರಾಚೀನ ಐಗುಪ್ತ ಅಂದರೆ ಈಗಿನ ಈಜಿಪ್ಟ್ ನಾಗರೀಕತೆಯಲ್ಲಿ ಜನರಿಗಿದ್ದ ನಂಬಿಕೆಗಳು.. ನೀಲ ನದಿಯ ಅಂದರೆ ನೈಲ್ ನದಿ ಪಾತ್ರದ ನಡುಗಡ್ಡೆಗಳಿಗೆ ಜಿಂಕೆ ಪ್ರಾಂತ್ಯ, ಮೊಸಳೇ ಪ್ರಾಂತ್ಯ, ನೀರಾನೆ ಪ್ರಾಂತ್ಯ, ಠಗರು ಪ್ರಾಂತ್ಯಗಳೆಂಬ ಹೆಸರು.. ಐಗುಪ್ತದ ರಾಜಧಾನಿ ಮೆಂಫಿಸ್.. 4500 ವರ್ಷಗಳ ಹಿಂದೆ ಐಗುಪ್ತ ರಾಷ್ಟ್ರದಲ್ಲಿ ಲಿಪಿಸುರುಳಿ ಕಂಡು ಹಿಡಿಯಲಾಯ್ತು.. ಕೃಷಿ, ಮೀನುಗಾರಿಕೆ, ಪೆರೋ ಆಳ್ವಿಕೆ, ಗುಲಾಮಿ ಪದ್ಧತಿ, ಗಣಿಗಾರಿಕೆ, ಅರಮನೆ ಗುರುಮನೆಗಳ ಆಡಳಿತ, ಗೋರಿ ನಿರ್ಮಾಣ ಕೊನೆಗೆ ದೇವರೂಪ ಪೆರೋಗೆ ಇದಿರಾಗಿ ಬಂಡಾಯವೆದ್ದ ಮೊದಲ ದಲಿತ ಚಳುವಳಿ ಇವೆಲ್ಲದರ ಸಂಪೂರ್ಣ ಹೂರಣೆವೇ ಮೃತ್ಯುಂಜಯ..
ಬಹಳ ಹಿಂದೆ ಓದಿದ್ದ ಅತ್ಯದ್ಭುತ ಕಾದಂಬರಿ ಮೃತ್ಯುಂಜಯ.. ಓದುತ್ತಾ ಹೋದಂತೆ ಓದುಗರನ್ನು ಪೆರೋ ಪೇಪಿಯನ್ನಾಗಿ, ಮಹಾರಾಣಿ ನೆಫರ್ಟೀಮ್ಳನ್ನಾಗಿ, ಅಮಾತ್ಯ ಆಮೆರಬ್ನನ್ನಾಗಿ, ಮಹಾ ಅರ್ಚಕ ಹೆಪಾಟ್ನನ್ನಾಗಿ, ದಲಿತ ಬಂಡಾಯದ ಮಹಾನ್ ಜನನಾಯಕನಾದ ಮೆನಪ್ಟಾ ನನ್ನಾಗಿಸುತ್ತದೆ ಕಾದಂಬರಿ.. ಅದಿಷ್ಟೇ ಅಲ್ಲದೆ ಕಾದಂಬರಿಯುದ್ದಕ್ಕೂ ಅರಮನೆ-ಗುರುಮನೆಗಳ ರಾಜಕಾರಣವಿದೆ.. ಮೆನಪ್ಟಾನ ಸುಮುಧಾಯದ ಸಂಘಟಿತ ಹೋರಾಟವಿದೆ.. ಕುತಂತ್ರಿಗಳಾದ ಸೆನಬ್, ಸಿನ್ಯುಹೆ, ಗೇಬು, ಟಿಹುಟಿ, ಪ್ರಾಂತಪಾಲರು, ಭೂಮಾಲಿಕರ ಷಡ್ಯಂತ್ರಗಳಿವೆ.. ಕೊನೆಗೆ ರಾಜಕೀಯದ ಚೌಕಾಮಣೆಯಾಟದಲ್ಲಿ ಬಲಿಯಾಗುವ ಮೆನನಪ್ಟಾ ವಿಚಾರಣೆ ವೇಳೆ ಮಾತನಾಡುವ ಅದ್ಭುತ ಅಂತರಾಳದ ಮನಕಲಕುವ ಸಂದೇಶವಿದೆ.. ಮೆನ್ನ, ಬಟಾ, ಖ್ನೇಮ್ ಹೊಟೆಪ್, ಸ್ನೋಫ್ರು, ಸುಬೆಕ್ಕು, ಶಿಲ್ಪಿ ನೆಖೆನ್, ಮುಂತಾದ ಅಪಾರ ಮೆದು ಹೃದಯಿ ಪಾತ್ರಗಳು ಮನ ಮುಟ್ಟುತ್ತವೆ.. ಮೆನಪ್ಟಾ ಪತ್ನಿ ನೆಫಿಸ್, ರಾಮರಿಪ್ಟಾ, ನೆಜಮುಟ್, ಶೀಬಾ ಮುಂತಾದ ಪಾತ್ರಗಳು ಆರ್ದ್ರವಾಗಿಸುತ್ತವೆ.. ಇಂತದ್ದೊಂದು ಅದ್ಭುತ ಕಾದಂಬರಿಯನ್ನು ಮೂರನೆಯ ಬಾರಿಗೆ ಓದಿ ನಾನೂ ಆರ್ದ್ರನಾದೆ..
ನಿಜ ನಿಜ ಕನ್ನಡಕ್ಕೊಬ್ಬರೇ ನಿರಂಜನ..
-ವಿಶ್ವಾಸ್ ಭಾರದ್ವಾಜ್



 

No comments:

Post a Comment