Wednesday 22 July 2015

ಒಮ್ಮೆ ನೋಡಿ ಭಜರಂಗಿ ಭಾಯ್ ಜಾನ್; ತೊಂದರೆ ಇಲ್ಲ, ನಿಮಗೆ ಇಷ್ಟ ಆಗುತ್ತೆ

ಆ ಎರಡೂ ದೇಶಗಳು ವಿಭಿನ್ನ ಧರ್ಮೀಯರೇ ಬಹುಸಂಖ್ಯಾತರಾಗಿರುವ ನೆಲ
ಒಂದು ಧರ್ಮವನ್ನು ಕಂಡರೆ ಇನ್ನೊಂದು ಧರ್ಮದವರಿಗಾಗದು
ಒಂದು ರಾಷ್ಟ್ರವನ್ನು ಕಂಡರೆ ಇನ್ನೊಂದು ಬೆಂಕಿಕಾರುವಂತಹ ದ್ವೇಷ
ಆ ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ, ಸೌಹಾರ್ಧತೆ ಮೂಡಿಸುವ ದಶಕಗಳ ರಾಜತಾಂತ್ರಿಕ ಪ್ರಯತ್ನ ಇನ್ನೂ ಯಶಸ್ವಿಯಾಗಿಲ್ಲ
ಗಡಿಯಲ್ಲಿ ನಿತ್ಯವೂ ತಂಟೆ ತಕರಾರು; ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರಾಷ್ಟ್ರದ ವಿರುದ್ಧ ಆ ರಾಷ್ಟ್ರ ದೂರು ಕೊಡುತ್ತದೆ, ಅದರ ವಿರುದ್ಧ ಇದು ಪ್ರತಿಭಟನೆ ಮಾಡುತ್ತದೆ
ಅದು ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳಿಗೆ ಸಂಬಂಧಪಟ್ಟ, ಎರಡೂ ರಾಷ್ಟ್ರಗಳ ಮಹಾಜನತೆ ನೋಡಲೇಬೇಕಾದ ಚಿತ್ರ.. ಯಾಕಂದ್ರೆ ಅದರ ಕಥಾನಕದ ವೈಶಿಷ್ಟವೇ ಅಂತಹದ್ದು..
***
ಅಷ್ಟು ದಟ್ಟವಾದ ದ್ವೇಷವಿರುವ, ಬದ್ಧ ವಿರೋಧಿ ನೆಲದಿಂದ ಅಚಾನಕ್ಕಾಗಿ ಈ ರಾಷ್ಟ್ರಕ್ಕೆ ಬರುವ ಆ ಅಬೋಧ ಕಣ್ಣುಗಳ, ಮುಗ್ದ ಲವಲವಿಕೆಯ ಮುಖದ 5-6 ವರ್ಷದ ಬಾಲಕಿಗೆ ಮಾತು ಬರುವುದಿಲ್ಲ
ಹೆತ್ತಮ್ಮನಿಂದ ಆಕಸ್ಮಿಕವಾಗಿ ದೂರವಾಗುವ ಪೋರಿಗೆ ಜೊತೆಯಾಗುವ ಕಥಾನಾಯಕ ಅಣ್ಣ ವಿರೋಧಿ ಧರ್ಮದವನು ಅಷ್ಟೇ ಅಲ್ಲ ವಿರುದ್ಧ ಆಚರಣೆಯ ಪಂಥದವನು.. ಮುಖ್ಯವಾಗಿ ಶತಮಾನದಿಂದ ದ್ವೇಷಿಸುತ್ತಿರುವ ಹಿಂದೂಸ್ತಾನದ ನೆಲದ ವಾಸಿ ಹನುಮಾನ್ ದೇವರ ಭಕ್ತ..
***
ಬಾಲಕಿಯನ್ನು ತನ್ನೊಂದಿಗೆ ಜೊತೆಯಲ್ಲಿಟ್ಟುಕೊಂಡು ಮಾತು ಬಾರದ ಅವಳಿಂದ ಆಕೆಯ ಪೂರ್ವಾ ಪರ ವಿಚಾರಿಸುವ ಆತನಿಗೊಂದು ದಿನ ಅರ್ಥವಾಗುತ್ತದೆ, ಅವಳು ಪಕ್ಕದ ದಾಯಾದಿ ರಾಷ್ಟ್ರದವಳು ಅಂತ.. ಆದರೆ ಆ ಪೋರಿ ಸುಂದರ ಮುಖದ ಅಮಾಯಕ ಬಾಲಕಿ; ಅಷ್ಟೇ ಮುದ್ದು ಬರಿಸುವ ತಂಗಿ ಮುನ್ನಿ.. ಆ ಹೆಸರಿಡುವುದು ಈತನೆ.. (ಬಾಲಕಿಗೆ ಮಾತು ಅರ್ಥವಾಗುತ್ತದೆ ವಿನಃ ಮಾತಾಡಲು ಬಾರದು)
ಕೇವಲ ಸನ್ಹೆಗಳಿಂದ ಪುಟ್ಟ ಮುನ್ನಿ ಪಾಕ್ ದೇಶದವಳು ಅಂತ ಗೊತ್ತಾದ ಅವನು, ತನ್ನ ಭಾವಿ ಮಾವನಿಂದಲೇ (ಪ್ರಿಯತಮೆಯ ಅಪ್ಪ) ಉಗ್ರ ವಿರೋಧ ಎದುರಿಸುತ್ತಾನೆ..
ಬೇರೆ ದಾರಿ ಇಲ್ಲದೆ ಅವಳನ್ನು ಅವಳ ನೆಲಕ್ಕೆ ಸೇರಿಸುವ ಯತ್ನ ಮಾಡ್ತಾನೆ.. ಈ ಪ್ರಯತ್ನದಲ್ಲಿ ಹಲವು ವಿಘ್ನಗಳು ಎದುರಾಗ್ತವೆ..
***
ಆಂಜನೇಯನ ಪರಮ ಭಕ್ತನಾದ ಇವನಿಗೆ ಎಲ್ಲವೂ ನೇರವಾಗಿರಬೇಕು.. ಸುಳ್ಳು ಕಪಟ ಯಾವುದೂ ಈತನರಿಯ.. ಕೊನೆಗೊಂದು ದಿನ ನೇರವಾಗಿ ತಾನೇ ಪಾಕಿಸ್ತಾನಕ್ಕೆ ಹೋಗಿ ಬಾಲಕಿಯನ್ನು ಅವಳ ಮನೆಗೆ ಬಿಟ್ಟು ಬರುವ ನಿರ್ಧಾರ ಮಾಡ್ತಾನೆ.. ಗಡಿಯಲ್ಲಿ ಕಷ್ಟ ಪಟ್ಟು ಪಾಕ್ ನೆಲದೊಳಗೆ ನುಸುಳಿ, ತಿರುಗಿ, ಅಲೆದು, ಸುತ್ತಿ, ದೇಶದ್ರೋಹಿ ಗೂಢಾಚಾರ ಅನ್ನುವ ಪಟ್ಟ ಹೊತ್ತು, ಪತ್ರಕರ್ತನೊಬ್ಬನ ನೆರವು ಪಡೆದು, ಮೌಲ್ವಿಯೊಬ್ಬನ ಸಹಕಾರ ಹೊಂದಿ ಅಂತಿಮವಾಗಿ ಸಾಕಷ್ಟು ಅಲೆದಾಟಗಳ ನಂತರ ಮುನ್ನಿಯನ್ನು ಮನೆ ಸೇರಿಸಲು ಯಶಸ್ವಿಯಾಗ್ತಾನೆ.. ಕ್ಲೈಮ್ಯಾಕ್ಸ್ ನಲ್ಲಿ ಕೇವಲ ವಿರೋಧಿ ರಾಷ್ಟ್ರದ ಅಪರಿಚಿತ ಬಾಲಕಿಗಾಗಿ ಅವನು ಎದುರಿಸುವ ಕಷ್ಟ ಹಾಗೂ ಸವಾಲುಗಳು, ಹಾಗೂ ತೆಗೆದುಕೊಳ್ಳುವ ರಿಸ್ಕುಗಳು, ಯಾವ ನೆರವೂ ಇಲ್ಲದಿದ್ದರೂ ಧೃತಿಗೆಡದೆ ಕೇವಲ ಇಷ್ಟ ದೈವ ಆಂಜನೇಯ ಓಳ್ಳೆಯದು ಮಾಡುತ್ತಾನೆ ಅನ್ನುವ ನಂಬಿಕೆ ಹಾಗೂ ಸಂಕಲ್ಪಶಕ್ತಿಯಿಂದ ಎರಡೂ ರಾಷ್ಟ್ರಗಳ ಜನತೆಯ ಮನ ಗೆಲ್ಲುತ್ತಾನೆ..
***
ಉಪಸಂಹಾರ:
ಗಡಿಯ ಬೃಹತ್ ಬೇಲಿಯಲ್ಲಿ ಆತನಿಗೆ ಪಾಕ್ ನಿಂದ ಬೀಳ್ಕೊಡುವ ಪಾಕ್ ಜನ ಹಾಗೂ ಭಾರತಕ್ಕೆ ಸ್ವಾಗತಿಸುವ ಭಾರತೀಯರ ಕಣ್ಣಿನಲ್ಲಿ ಅವನ ಪ್ರಯತ್ನಕ್ಕೊಂದು ಶ್ಲಾಘನೆಯ ಹ್ಯಾಟ್ಸ್ ಆಫ್ ಇರುತ್ತದೆ
ತನ್ನನ್ನು ಅಮ್ಮನ ಬಳಿ ಸೇರಿಸಲು ಕಷ್ಟ ಪಟ್ಟ ಅಣ್ಣನಿಗೆ ಕೊನೆಗೊಂದು ಬಾಯ್ ಹೇಳಲು ಕಷ್ಟ ಪಡುವ ಪೋರಿ ಮುನ್ನಿಗೆ ಕೊನೆಗೂ ಮಾತು ಬರುತ್ತದೆ..
ಪಾಕ್ ನಲ್ಲಿಯೂ ಹೃದಯವಂತ ಜನರಿದ್ದಾರೆ ಅನ್ನುವುದು ಅವನ ಈ ಪಾಕ್ ಪ್ರವಾಸದಿಂದ ಅನುಭವಕ್ಕೆ ಬರುತ್ತದೆ.. ಹನುಮ ಭಕ್ತ ಭಾರತೀಯರಲ್ಲೂ ಮಾನವೀಯ ಅಂತಕರಣವಿರುವ ಮನುಷ್ಯರಿದ್ದಾರೆ ಅನ್ನುವ ಸಂಗತಿ ಪಾಕಿಸ್ತಾನಿಯರಿಗೂ ಈ ಭಜರಂಗಿಯ ದಿಟ್ಟ ಪ್ರಯತ್ನದ ಮೂಲಕ ಮನವರಿಕೆಯಾಗುತ್ತದೆ.. ಈ ಎಲ್ಲಾ ದೃಶ್ಯಗಳಲ್ಲಿ ಭಾವನಾತ್ಮಕ ಸನ್ನಿವೇಶಗಳ ಸೊಗಸಾದ ನಿರೂಪಣೆ ಇದೆ..
***
ನಿನ್ನೆ ಭಜರಂಗಿ ಬಾಯ್ ಜಾನ್ ಚಿತ್ರ ನೋಡಿದೆ.. ನಿಜಕ್ಕೂ ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನ.. ಎರಡೂ ರಾಷ್ಟ್ರಗಳಲ್ಲೂ ಬದುಕುತ್ತಿರೋದು ಮನುಷ್ಯರೇ ವಿನಃ ರಾಕ್ಷಸರಲ್ಲ ಅನ್ನೋದು ಅರ್ಥ ಆದರೆ ಮುಂದೊಂದು ದಿನ ಯುದ್ದ ರಹಿತ ಸೌಹಾರ್ಧಯುತ ಬಾಂದವ್ಯ ಸಾಧ್ಯ.. ಒಂದು ಅತ್ಯುತ್ತಮ ಸಂದೇಶ ಚಿತ್ರದಲ್ಲಿದೆ.. ಸಲ್ಲೂ ಮಿಯಾ ಆ್ಯಕ್ಟಿಂಗ್ ಚೆನ್ನಾಗಿದೆ ಆದರೆ ಸಲ್ಮಾನ್ ಅನ್ನುವ ಅಪರಾಧಿಗೆ ದೇವರು ಕ್ಷಮಿಸಬಹುದು, ಸುಪ್ರೀಂ ಕೋರ್ಟ್ ಕೂಡಾ ಕ್ಷಮಿಸಬಹುದು; ಪತ್ರಕರ್ತನಾದವನು ಎಂದಿಗೂ ಕ್ಷಮಿಸುವುದಿಲ್ಲ..
ಇಂತದ್ದೊಂದು ಮನೋಜ್ಞ ಚಿತ್ರಕಥೆ ಬರೆದವನಿಗೆ, ಸಂಭಾಷಣೆ ರಚನೆಕಾರನಿಗೆ, ಚಿತ್ರ ಸಾಹಿತ್ಯ ಹಾಗೂ ಸಂಗೀತ ಸಂಯೋಜಿಸಿದ ಕಲಾವಿದರಿಗೆ, ನಿರ್ದೇಶನ ಮಾಡಿದವನಿಗೆ, ಹಣ ಹೂಡಿದ ಕನ್ನಡದ ರಾಕ್ ಲೈನ್ ವೆಂಕಟೇಶ್ ಮುಂತಾದ ನಿರ್ಮಾಪಕರಿಗೆ, ಅಸಂಖ್ಯಾತ ತಾಂತ್ರಿಕ ವರ್ಗ ಹಾಗೂ ಇತರೆ ಬ್ಯಾಕ್ ಡ್ರಾಪ್ಟ್ ಸಿಬ್ಬಂದಿಗಳಿಗೆ ಒಂದು ದಿವ್ಯ ಹ್ಯಾಟ್ಸ್ ಆಫ್..
-ವಿಶ್ವಾಸ್ ಭಾರದ್ವಾಜ್
***

No comments:

Post a Comment