Wednesday 22 July 2015

ಅಗ್ನಿ ಗರ್ಭ:


ಆಗಾಗ ಕೊಂಚ ಎಡಕ್ಕೂ ಬಲಕ್ಕೂ ಹಿಮ್ಮುಖ ಮುಮ್ಮುಖವಾಗಿ ಹೊರಳುತಿದೆ
ಅಂತರಾಳದಲ್ಲಡಗಿ ಕುಳಿತ ಜೀವ
ಕರುಳು ಬಳ್ಳಿಗೆ ಕೈ ಸುತ್ತಿ ಕುಳಿತೆಣಿಸುತ್ತಿದೆ ಮಹಾ ಪ್ರಸವಕ್ಕುಳಿದ ದಿನವ
ಈಗೀಗ ಉಸಿರ ತತ್ತಿ ಮತ್ತೆ ಭಾರ ಭಾರ
ನಡೆದಾಡಲು ಬಿಡಲಾಗದ ಸಂಕಟ ನಿತ್ರಾಣ
ನಿಂತಲ್ಲಿ ನಿಲ್ಲಿಸದದು ಕುಳಿತಲ್ಲಿ ಕೂರಿಸದು
ಮಲಗಿ ನಿದ್ರೆ ಹೋದರು ಬಡಿದೆಬ್ಬಿಸುವ ತುಡಿತ

ಕೆಲವು ಅನಿಷ್ಠ ಮುಖಗಳನ್ನು ನೋಡಿದರೆ ವಾಕರಿಕೆ
ಹೊಟ್ಟೆ ತೊಳಿಸುವಂತ ಅಸಹ್ಯಕರ ಕಮಟು ವಾಸನೆಯ ವ್ಯೆಕ್ತಿತ್ವಗಳ ತುರಿಕೆ
ಗರ್ಭದಲ್ಲಿರುವ ಕಂದಮ್ಮನಿಗೆ ಅವರ ಸಂಗ ಸಹ್ಯವಲ್ಲ
ಮಗ್ಗುಲು ಬದಲಾಯಿಸಿ ಗುಟುರು ಹಾಕಿದರೆ ಅಸಮಧಾನದ ಕುರುಹು
ಅದರ ಕೋಪ ಉದರದೊಳಗೆ ಸುಡುವ ಬಿಸಿ ಕೆಂಡ ಕೆಂಡ!!
ದೇಹದ ಉಷ್ಣತೆ ಹೆಚ್ಚಿ ಕೊನೆಗೆ ವಿಷಮ ಜ್ವರದ ಭಾದಕ
ಕೆಲವೊಮ್ಮೆ ಭ್ರೂಣದೊಳಗೆ ಶೀತಲ ಮೌನ
ಅನಾಹುತಕಾರಿ ನೀರವದಲ್ಲೊಂದು ಸ್ಪಷ್ಟ ಮುನ್ಸೂಚನೆ
ಯಾವುದೋ ಅವ್ಯಕ್ತ ಆತಂಕ ಆವರಿಸಿದರೆ ಅಪಾಯ ಸನ್ಹೆ!!
ಒಳಮನೆಯಲ್ಲಿ ಮಗುಮ್ಮಾಗಿ ಮಲಗಿದ ಕಂದಮ್ಮ
ಯಾರನ್ನೋ ಗುರಿಯಾಗಿಸಿ ಏನನ್ನೋ ತರ್ಕಿಸುತ್ತದೆ
ಈ ಬಾರಿ ಹಣೆವ ರಣಜಾಲಕ್ಕೆ ಸಿಕ್ಕರೆ ಅವಯವಗಳು ಊನ
ದೇಹದ ಒಂದು ಭಾಗಕ್ಕೆ ಪಾರ್ಶವಾಯು ಬಡಿಯುತ್ತದೆ
ಲಕ್ಷ ಕೋಟಿ ಅಗಣಿತ ಅಸಂಖ್ಯ ಸಂಖ್ಯೆಯಲ್ಲಿ ದೇಹದ ಚೂರುಗಳು ಸಿಡಿಯುತ್ತವೆ
ಅದು ಮಹಾ ಬಿರುಗಾಳಿ ಬೀಸುವ ಮುಂಚಿನ ಕಡು ಗಾಢ ಮೌನ ಭಯಾನಕ
ಗರ್ಭ ಸೀಳಿ ಹೊರಬರಲು ಇನ್ನಿಲ್ಲದ ಕಾತರ
ಘರ್ಜಿಸಿದರೆ ಅರಣ್ಯವೇ ನಡುಗುವ ಭೀಬತ್ಸ ಅಟ್ಟಹಾಸ-ರಾಕ್ಷಸ ನೃತ್ಯ
ನಿರಂತರ ಸುರಿವ ಕುಂಬದ್ರೋಣ ಮಳೆಯ ಮಹಾಪ್ರವಾಹಕ್ಕಿಂತಲೂ ಉಗ್ರ
ಸಹಸ್ರ ಸಿಡಿಲುಗಳು ಒಮ್ಮೆಲೆ ಗುಡುಗಿದಂತಹ ಕಂಪನ
ವಸುಧೆಯೊಳಪದರದ ಕೊತಕೊತನೆ ಕುದಿಕುದಿವ ಲಾವಾ ಉಕ್ಕುಕ್ಕಿ
ಜ್ವಾಲಾಮುಖಿಗೆ ಗಿರಿಶಿಖರಗಳ ತುದಿ ಮೊನೆ ಬಾಯ್ತೆರೆಯುವಂತಾಗುತ್ತದೆ
-ಪ್ರಸವ...!!!
ಶಿಲಾಪದರಗಳ ಒಳಮುಖದ ತಟ್ಟೆಗಳು ಒಂದಕ್ಕೊಂದು ಸವೆದು ನೊಸೆದು
ಧರಣಿ ಉಯ್ಯಾಲೆಯಾಡುವಂತಹ ಭೂಕಂಪನದ ಅನುಭವ
ತಿಂಗಳು ತುಂಬಿದ ಅದಕ್ಕೆ ಇನ್ನು ಒಳಗಿರುವುದು ಕಷ್ಟಸಾಧ್ಯ
ಕಬಂಧ ಬಾಹುಗಳನ್ನೇ ಮೊದಲು ಹೊರಹಾಕಿ ಚಾಚಿ
ದೈತ್ಯ ಗಾತ್ರದ ನೀಳ ದೇಹವ ಚಿಮ್ಮಿ ವ್ಯಾಘ್ರ ಶಿರವನ್ನೇ
-ಅಲ್ಲಾಡಿಸಿ ಹೊರಬರುವ ತವಕ:
ಈ ವೇದನೆ ಶತಮಾನಗಳ ಮೂಕ ರೋಧನೆಗೆ ಶಾಶ್ವತ ಮುಕ್ತಿ
ಅವಡುಗಚ್ಚಿ ಆ ನೋವ ತಡೆದುಕೊಂಡರೆ;
ಹುಟ್ಟುವ ಆ ಕೂಸು ಅವತಾರವೆತ್ತಿ ಯುಗಪುರುಷನಾಗುತ್ತಾನಾ???
ಅನವರತ ಮನ್ವಂತರಗಳಿಂದ ಆರ್ಭಟಿಸುತ್ತಿರುವ ಹುಂಬರುಗಳಿರಾ;
ಹುಟ್ಟುವವನಿದ್ದಾನೆ ಅಸುರ ಮಕ್ಕಳ ಅರಿಹಂತಕ!!!
ದ್ವಾಪರದ ಕಂಬವನ್ನು ಎರಡು ಹೋಳುಗಳಾಗಿ ಕಲಿಯುಗದಲ್ಲಿ ಸೀಳಿ
ನಖವ ಆಯುಧವನ್ನಾಗಿಸುವ ನೂರು ನರಸಿಂಹನ ಬಲದವನು!!!
ಯುಗಪರಿವರ್ತನೆಗೆ ಕಾಲ ಪರಿಪಕ್ವವಾಗಿದೆ..!
ಸನ್ನಿಹಿತವಾಗಿದೆ ಆ ದಿವ್ಯ ಮಹೂರ್ತ ಕ್ಷಣಗಣನೆ..!
ಮಹತ್ವಾಕಾಂಕ್ಷೆ ಮಹಾ ಪ್ರಸವ ಸಂಕಟಕ್ಕೆ..!
ನೆನಪಿರಲಿ, ಮರೆಯದಿರಿ ಭ್ರೂಣದಲ್ಲಿರುವುದು ದೈತ್ಯ ಪಿಂಡ
ಇದು ಬ್ರಹ್ಮಾಂಡವ ನಡುಗಿಸುವ ಅಗ್ನಿ ಗರ್ಭ
-ವಿಶ್ವಾಸ್ ಭಾರದ್ವಾಜ್..
================

No comments:

Post a Comment