Wednesday 22 July 2015

ಹೇಗಿದೆ ಸ್ವಾಮಿ ಬದುಕು..???

ಪ್ರಶ್ನೆ: ಹೇಗಿದೆ ಸ್ವಾಮಿ ಬದುಕು..???
ಉತ್ತರ: ಆರಕ್ಕೇರೆನು ನಾ ಮೂರಕ್ಕಿಳಿಯೆ!
ಅತ್ತ ಮೊಲದ ತೀವ್ರವೂ ಇಲ್ಲದ ಇತ್ತ ಆಮೆಯ ಮಂದವೂ ಅಲ್ಲದ!!
ಮತ್ತದೇ ಎಂದಿನ ಅದೇ ವೇಗ, ಅದೇ ಓಘ!!
ಹತ್ತಿಯೂ ಹತ್ತದೆ-ಕುಸಿದರೂ ಬೀಳದೆ,
ಬಿದ್ದರೂ ತೋರಿಸಿಕೊಳ್ಳದೆ;
ಮಲಗಿದರೂ ಎಚ್ಚರಾವಸ್ಥೆಯಲ್ಲಿರುವಂತಿದ್ದು!!
ಸಪ್ತ ದ್ವೀಪಗಳನ್ನಲೆದರೂ ಮಾತೃಭೂಮಿಯಲ್ಲಿ ಹುದುಗಿಕೊಂಡಂತೆ!
ಅಹಂ ಹತ್ತಿಸಿಕೊಳ್ಳದೆ-ಪೂರ್ವಾಗ್ರಹದ ಪ್ರಪಾತಕ್ಕಿಳಿಯದೆ,
ದುರಭಿಮಾನದ ದಾಸನಾಗದೆ-ಸ್ವಾಭಿಮಾನವ ಬಿಟ್ಟುಕೊಡದೇ,
ಪೌರ್ಣಮಿಯ ಬೆಳದಿಂಗಳಿಗೆ ಛತ್ರಿ ಅಡ್ಡ ಹಿಡಿಯದೆ,
ಹುಳಿ ಮೊಸರು ತಿನ್ನದೆ-ತಿಂದರೂ ಅದನ್ನು ಅಮಾಯಕ ಮೇಕೆಗಳ ಮುಖಕ್ಕೆ ಒರೆಸದೆ
ಆರು ಮೂರರಾಟದಲ್ಲಿ ಅತ್ತೆ-ಸೊಸೆಯರ ಪರ ವಹಿಸದೆ,
ಗೆದ್ದ ಹೋರಿಯ ಬಾಲದ ಚುಂಗನ್ನು ಬೆರಳಿಗೆ ಸಿಕ್ಕಿಸಿಕೊಳ್ಳದೆ:
ಅವಕಾಶವಾದಿ ಸಮಯಸಾಧಕರಿಗೆ ಜೈ ಹುಜೂರ್ ಅನ್ನದೆ
ಪರಾಕು ಪ್ರಭುಗಳಿಗೆ ತಲೆ ತಗ್ಗಿಸದೆ- ಮಂಡಿ ಊರಿ ನಡು ನೆಲಕ್ಕಿಡದೇ
ಪ್ರಸಿದ್ಧಿಯ ಅಫೀಮಿನ ನಶೆ ನೆತ್ತಿಗೇರಿಸಿಕೊಳ್ಳದೇ-ಜನಪ್ರಿಯತೆ ಅಮಲಿನಲ್ಲಿ ತೇಲಿ ಓಲಾಡದೆ
ಬದುಕಿನ ಅಂಗಳದಲ್ಲಿ ನಿಂತು ಸಾವಿನ ಮನೆಯ ಕದ ತಟ್ಟದೇ
ಸಾವಿನ ಮಹಾಸಾಗರದ ಮುಳುಗಿಯೂ ಬದುಕಿನ ಹಾಯಿದೋಣಿಗೆ ಕಾಯುತ್ತಾ
ನಗುವಿನ ನೆರಳಿನಲ್ಲಿ ಕಂಬನಿಗಳ ತೇವ ಒರೆಸುತ್ತಾ
ಮಡುಗಟ್ಟಿದ ದುಃಖಧಾರೆಯಲ್ಲೂ ಚಿಕ್ಕ ಆಶಾವಾದದ ಚಳಕು ಅರಸುತ್ತಾ
ಹಸಿವು, ಬಾಯಾರಿಕೆ, ದಣಿವು, ನಿದ್ರೆ, ಮೈಥುನ, ಸ್ವಪ್ನ ದಂತಹ ಷಟ್
ದಿವ್ಯಗಳೊಂದಿಗೆ ನಿತ್ಯವೂ ಜೂಟಾಟ ಆಡುತ್ತಾ
..........
..........
..........
ಇಷ್ಟರ ಮಟ್ಟಿಗೆ ಇದ್ದೀನಿ ನೋಡಿ ಸ್ವಾಮಿ..
(ಇನ್ಮುಂದೆ ನಂಗೆ ಯಾರೂ ಹೇಗಿದೆ ಸ್ವಾಮಿ ಬದುಕು ಅನ್ನುವ ಪ್ರಶ್ನೆಯನ್ನು ಅಪ್ಪಿ ತಪ್ಪಿಯೂ ಕೇಳುವುದಿಲ್ಲ)
-ವಿಭಾ

No comments:

Post a Comment