Monday 19 February 2018

ಶ್ವೇತಸಾರಂಗ:

ಜಗತ್ತಿನಾದ್ಯಂತ ಲೆಕ್ಕ ಹಾಕಿ ಎಣಿಸಬಹುದಾದಷ್ಟು ಅಪರೂಪದ ಮುದ್ದು ಜೀವಿಗಳು ಅವು.. ಅವುಗಳ ಬಗೆಗೆ ಅತ್ಯಂತ ವಿಶೇಷ, ಪೂಜ್ಯನೀಯ ಹಾಗೂ ಧಾರ್ಮಿಕ ನಂಬಿಕೆಗಳು ವಿಶ್ವದ ಹಲವು ರಾಷ್ಟ್ರಗಳ ಪುರಾಣದಲ್ಲಿದೆ.. ಅವುಗಳನ್ನು ಪರಿಶುದ್ಧತೆಯ ಪ್ರತೀಕ ಎಂದೇ ಗುರುತಿಸಲಾಗುತ್ತದೆ.. ಅದು ಕಾಣಿಸಿಕೊಂಡರೆ ಅದೃಷ್ಟ ಎಂದು ಬಗೆಯಲಾಗುತ್ತದೆ.. 

ಯುರೋಪಿಯನ್ ನಾಗರೀಕತೆಗಳು.. ಸ್ಕಾಟಿಶ್, ಹಂಗೇರಿಯನ್, ಸಿಲ್ಟಿಕ್ ಜನಾಂಗೀಯ ಪುರಾಣಗಳು.. ಕ್ರೈಸ್ತರ ಧಾರ್ಮಿಕ ನಂಬಿಕೆಗಳು.. ಅಷ್ಟೇ ಏಕೆ ಪೂರ್ವ ಇಂಡೋ ಯುರೋಪಿಯನ್​ ಸಾಂಸ್ಕೃತಿಕ ನಂಬಿಕೆಗಳಲ್ಲಿ ಬಿಳಿಯ ಗಂಡು ಕಡವೆ ಅಥವಾ ಶ್ವೇತ ಸಾರಂಗ ಮಹತ್ವದ ಪಾತ್ರ ವಹಿಸಿದೆ.. ಇದು ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ.. ಕಾಣಿಸಿಕೊಂಡರೆ ಅದೃಷ್ಟ ಬದಲಾದಂತೆ ಅಂತ ಇನ್ನೂ ನಂಬುವವರಿದ್ದಾರೆ.. ಅಂದ ಹಾಗೆ ಸ್ಕಾಟ್​ಲ್ಯಾಂಡ್​ನಲ್ಲಿ ಮತ್ತೆ, ಈ ಶ್ವೇತ ಸಾರಂಗ ಕಾಣಿಸಿಕೊಂಡು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ..  
 
ತನ್ನ ಇರುವಿಕೆಯಲ್ಲೇ ರಹಸ್ಯಗಳನ್ನು ಹೊತ್ತ ಹಾಗೂ ಭವ್ಯತೆ-ಘನತೆ ಹಾಗೂ ಪೂಜ್ಯನೀಯವಾಗಿ ಪ್ರತ್ಯೇಕತೆ ಹೊಂದಿರುವ ಮೃಗ ಈ ಶ್ವೇತ ಸಾರಂಗ.. ಇಡೀ ಪ್ರಪಂಚದಲ್ಲಿ ಈ ಶ್ವೇತ ಸಾರಂಗಗಳ ಸಂಖ್ಯೆ ಕೇವಲ 200 ಅಥವಾ ಅದಕ್ಕಿಂತ ಕಡಿಮೆ ಮಾತ್ರ.. ಸಿಲ್ಟಿಕ್ ಹಾಗೂ ಹಂಗೇರಿಯನ್ ಮೈಥಾಲಜಿಯಲ್ಲಿ ಪೂಜ್ಯನೀಯ ಸ್ಥಾನದಲ್ಲಿರುವ, ಕಿಂಗ್ ರಿಚರ್ಡ್​ಗೆ ಗುಡ್​ಲಕ್ ತಂದ ಈ ಶ್ವೇತ ಸಾರಂಗವನ್ನು ಇಂಗ್ಲೆಂಡ್​ನಲ್ಲಿ ವೈಟ್ ಹಾರ್ಟ್ ಎನ್ನಲಾಗುತ್ತದೆ..

ಇಡೀ ವಿಶ್ವದಲ್ಲಿ ಬೆರಳಣಿಕೆಯಷ್ಟಿರುವ ಈ ಶ್ವೇತ ಸಾರಂಗ ಅತ್ಯಂತ ಅಪೂರ್ವ, ಅಪರೂಪ ಹಾಗೂ ವಿಸ್ಮಯ ಜೀವಿಗಳು.. ಇವುಗಳು ಅಷ್ಟು ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ.. ಸ್ಕಾಟ್​ಲ್ಯಾಂಡ್​ನ ಗುಡ್ಡಗಾಡು ಪ್ರದೇಶದಲ್ಲಿ ಕೆಲವರಿಗೆ ಇದು ದರ್ಶನ ಕೊಟ್ಟಿದೆ..

2008ರಲ್ಲಿ ಒಮ್ಮೆ ವೈಲ್ಡ್ ವೈಟ್ ಸ್ಟಾಗ್ ಅಥವಾ ಜಂಗ್ಲಿ ಶ್ವೇತ ಸಾರಂಗ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದನ್ನು ಬಿಬಿಸಿ ವರದಿ ಮಾಡಿತ್ತು.. ಇಂಗ್ಲೆಂಡ್​ನ ಗ್ಲೂಸೆಸ್ಟ್​ಶೈರ್​​ನ ಡೀನ್ ಅರಣ್ಯ ಪ್ರದೇಶದಲ್ಲಿ ಶ್ವೇತ ಸಾರಂಗ ಕಾಣಿಸಿಕೊಂಡಿದ್ದಾಗ ಹವ್ಯಾಸ ಛಾಯಾಚಿತ್ರಕಾರ ಕೆನ್ ಗ್ರಿಂಡಲ್ ಚಿತ್ರೀಕರಿಸಿದ್ದರು.. ಇದು ಡೈಲಿ ಮೇಲ್​​ನಲ್ಲಿ 2009ರಲ್ಲಿ ವರದಿಯಾಗಿತ್ತು.. ಸ್ಕಾಟ್​ಲ್ಯಾಂಡ್​ನ ಪೂರ್ವ ಕರಾವಳಿ ಪ್ರದೇಶಲ್ಲಿ 2012ರಲ್ಲಿ ಇದು ಕಾಣಿಸಿಕೊಂಡಿತ್ತು ಹಾಗೂ 2007ರಲ್ಲಿ ಇಂಗ್ಲೆಂಡ್​ನ ನೈಋತ್ಯ ಭಾಗದಲ್ಲಿ ಶ್ವೇತ ಕಡವೆ ಕಾಣಿಸಿಕೊಂಡಿದ್ದಾಗಿ ರಿಯೂಟರ್ಸ್ ವರದಿ ಮಾಡಿತ್ತು..  

ಕಳೆದ ಜನವರಿ 7ರಂದು ಸ್ಕಾಟ್​ಲ್ಯಾಂಡ್​ನ ಕೈರಂಗಾರ್ಮ್ಸ್ ನ್ಯಾಷನಲ್ ಪಾರ್ಕ್​​ನಲ್ಲಿ ಮತ್ತೆ ಶ್ವೇತ ಸಾರಂಗ ಕಾಣಿಸಿಕೊಂಡು ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.. ಒಂದು ತಿಂಗಳ ನಂತರ ಇದರ ಅಪರೂಪದ ಫೋಟೋಗ್ರಾಫ್ಸ್ ವಿಶ್ವದ ಪ್ರಸಿದ್ದ ಮಾಧ್ಯಮಗಳಾದ ಡೈಲಿ ಮೇಲ್ ಹಾಗೂ ಫಾಕ್ಸ್​ ನ್ಯೂಸ್​ನಲ್ಲಿ ವರದಿಯಾಗಿದೆ.. ಕೆಂಪು ಕಡವೆಗಳ ನಡುವೆ ಹಿಮಚ್ಛಾಧಿತ ಪ್ರದೇಶದಲ್ಲಿ ಮೇಯುತ್ತಿರುವ ಶ್ವೇತ ಕಡವೆ ಅಥವಾ ವೈಟ್ ಸ್ಟಾಗ್​  ಗ್ರೂಮ್ ಡೆಮಿನ್ ಜೋಯೋ ಅನ್ನುವ ವ್ಯಕ್ತಿಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ..    

ನೀಳ ಸುರುಳಿಯಾಕಾರದ ಕೊಂಬುಗಳುಳ್ಳ ಜಿಂಕೆ ಜಾತಿಗೆ ಸೇರಿದ ಬಿಳಿಯ ಬಣ್ಣದ ಸಾರಂಗ.. ಅತ್ಯಂತ ಅಪರೂಪದ ಪ್ರಭೇದ ಈ ಬಿಳಿ ಸಾರಂಗ.. ಇದರ ಬಿಳಿಯ ಬಣ್ಣಕ್ಕೆ ಕಾರಣ ನೈಸರ್ಕಿಗ ದೈಹಿಕ ಬದಲಾವಣೆಯಷ್ಟೆ.. ನಮ್ಮಲ್ಲಿ ಕೆಲವರಿಗೆ ಬಿಳಿಚರ್ಮ ಅಥವಾ ತೊನ್ನಿನ ರೋಗವಿದ್ದಂತೆ ಕೆಲವು ಜಿಂಕೆಗಳಲ್ಲಿ ಅಪರೂಪಕ್ಕೆ ಇಂತಹ ಶ್ವೇತ ವರ್ಣದ ಚರ್ಮ ಹಾಗೂ ಕೂದಲು ಬೆಳೆದು ಶ್ವೇತ ಸಾರಂಗವಾಗುತ್ತವೆ.. ಈ ಶ್ವೇತ ಸಾರಂಗದ ದೇಹದಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಅಪರೂಪದ ಅನುವಂಶಿಕ ಮಾದರಿಗೆ ಕಾರಣ ವರ್ಣತಂತುಗಳ ಕಡಿತ ಅನ್ನುವುದು ಜೀವವಿಜ್ಞಾನದ ವ್ಯಾಖ್ಯಾನ.. ಎಲ್ಲೋ ಹಲವು ಸಾವಿರ ಜೀವಿಗಳಲ್ಲಿ ಒಂದು ಜೀವಿಯ ಕುಟುಂಬ ಹೀಗಾಗುತ್ತದೆ.. ಹುಟ್ಟಿನಂದಲೇ ಅಥವಾ ವರ್ಣದ್ರವ್ಯದ ಅನುಪಸ್ಥಿತಿ ಈ ಜೀವಿಗಳನ್ನು ಶ್ವೇತವರ್ಣವನ್ನಾಗಿಸುತ್ತದೆ.. ಇದೊಂದು ಅಪರೂಪದ ಕುತೂಹಲಕಾರಿ ಸಹಜ ಜೈವಿಕ ಪ್ರಕ್ರಿಯೆ ಅಷ್ಟೆ..   

ಪ್ರಪಂಚದ ಹಲವು ಸಂಸ್ಕೃತಿ ಹಾಗೂ ನಾಗರೀಕತೆಗಳ ಪೌರಾಣಿಕ ನಂಬಿಕೆಯಲ್ಲಿ ಈ ಶ್ವೇತ ಸಾರಂಗ ವಿಶೇಷ ಸ್ಥಾನ ಪಡೆದುಕೊಂಡಿದೆ.. ಸೆಲ್ಟಿಕ್ ಜನ ಈ ಶ್ವೇತ ಸಾರಂಗವನ್ನು ಬೇರೆ ಪ್ರಪಂಚದಿಂದ ಬಂದ ಸಂದೇಶವಾಹಕ ಎಂದೇ ನಂಬುತ್ತಾರೆ.. ವೆಲ್ಷ್ ಮೈಥಾಲಜಿಯ ಪ್ರಕಾರ ಆರಾವ್ನ್ ಅನ್ನುವ ಮೃತ್ಯು ದೇವರ ಬೇಟೆಯಾಡುವ ಪ್ರದೇಶದಲ್ಲಿ ಡೈಫೆಡ್​ನ ರಾಜಕುಮಾರ ಪೌಲ್ ಕಾಣಿಸಿಕೊಂಡಾಗ ಘಟಿಸಬೇಕಿದ್ದ ಅನಾಹುತವನ್ನು ತಪ್ಪಿಸಲು ಈ ಶ್ವೇತಸಾರಂಗ ಕಾಣಿಸಿಕೊಂಡಿತ್ತು ಅನ್ನೋದು ಸೆಲ್ಟ್ ಜನರ ಮೂಲಭೂತ ನಂಬಿಕೆ.. 

ಇದು ಪೂರ್ವ ಇಂಡೋ ಯುರೋಪಿಯನ್ ಸಂಸ್ಕೃತಿಯಲ್ಲಿ ಹಾಗೂ ಉತ್ತರ ಭಾಗದ ರಾಷ್ಟ್ರಗಳ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.. ಇದನ್ನು ಕೆಲವು ರಾಷ್ಟ್ರಗಳಲ್ಲಿ ದೈವಿಕವೆಂದು ಭಾವಿಸಿದ್ರೆ, ಇನ್ನೂ ಕೆಲವು ರಾಷ್ಟ್ರಗಳಲ್ಲಿ ಈ ಶ್ವೇತ ಸಾರಂಗ ಮನುಕುಲದ ಆಧ್ಯಾತ್ಮದ ಸಂಕೇತ ಎಂದು ಆದರಿಸಲಾಗುತ್ತದೆ.. ಆಂಗ್ಲ ಭಾಷೆಯ ಜನಪದದಲ್ಲಿ ಈ ಬಿಳಿಯ ಗಂಡು ಜಿಂಕೆ ಬೇಟೆಗಾರ ಹರ್ನೇ ಕೃತಿಯೊಂದಿಗೆ ಗುರುತಿಸಿಕೊಂಡಿದೆ.. ಕ್ರೈಸ್ತ ಧರ್ಮದಲ್ಲಿಯೂ ಹುತಾತ್ಮ ಸಂತ ಯೂಸ್ಟೇಸ್​ನ ಪರಿವರ್ತನೆಯ ಕಥೆಯಲ್ಲಿ ಈ ಶ್ವೇತ ಸಾರಂಗದ ಪಾತ್ರವಿದೆ..  

ಇಂಗ್ಲೆಂಡ್​ನ ಎರಡನೇ ಕಿಂಗ್ ರಿಚರ್ಡ್ ಈ ಶ್ವೇತ ಸಾರಂಗವನ್ನು ತನ್ನ ಅಧಿಕೃತ ಲಾಂಚನದಲ್ಲಿ ಬಳಸಿಕೊಂಡಿದ್ದ.. ಸ್ವರ್ಣ ಕಿರೀಟ ಹಾಗೂ ಬಂಗಾರದ ಸರಪಳಿ ಇದ್ದ ಶ್ವೇತ ಸಾರಂಗ ರಿಚರ್ಡ್​ನ ಲಾಂಚನದ ಗುರುತಾಗಿತ್ತು.. ಲಂಡನ್​ನ ನ್ಯಾಷನಲ್ ಗ್ಯಾಲರಿಯಲ್ಲಿರುವ 14ನೇ ಶತಮಾನದ ಸುಪ್ರಸಿದ್ಧ ಕಲಾಕೃತಿ ವಿಲ್ಟನ್ ಡಿಪಿಚ್​ನಲ್ಲಿ ಬಂಗಾರದ ಸರಪಳಿಯಿಂದ ಬಂಧಿಯಾಗಿರುವ ಶ್ವೇತ ಸಾರಂಗದ ಚಿತ್ರವಿದೆ.. ಇದು ಕ್ರೈಸ್ತ ಧರ್ಮದ ಹಿಂದಿನ ನಂಬಿಕೆಯ ಪ್ರಕಾರ ಬಳಲುತ್ತಿರುವ ಕ್ರಿಸ್ತನನ್ನು ಪ್ರತಿನಿಧಿಸುತ್ತದೆ..  ಹಂಗೇರಿಯನ್ ಪುರಾಣಗಳ ಪ್ರಕಾರ ಹಂಗೇರಿಯ ದಂತ ಕಥೆಗಳಾದ ಹ್ಯುನರ್ ಹಾಗೂ ಮಾಗರ್ ರನ್ನು ಸಿತಿಯಾ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗುವುದೇ ಶ್ವೇತ ಸಾರಂಗ. 13ನೇ ಶತಮಾನದ ವರ್ಣಚಿತ್ರದಲ್ಲಿ ಬಿಳಿಯ ಗಂಡು ಜಿಂಕೆಯನ್ನು ಈ ಸಹೋದರರು ಬೇಟೆಯಾಡುವ ಚಿತ್ರವಿದೆ.. ಹಂಗೇರಿಯನ್ ಸ್ಕೌಟ್​ ಶಾಖೆಯ ಈಗಿನ ಚಿಹ್ನೆ ಸಹ ಬಿಳಿಯ ಗಂಡುಜಿಂಕೆ.. 

ಸಿಲ್ಟಿಕ್ ಜನಾಂಗೀಯ ಧಾರ್ಮಿಕ ನಂಬಿಕೆಯ ಅನ್ವಯ ಶ್ವೇತ ಸಾರಂಗದ ಬಿಳಿಯ ಬಣ್ಣ ಸ್ವಚ್ಛತೆ, ಪರಿಶುದ್ಧತೆ, ಪಾವಿತ್ರ್ಯ, ಅಂತರಂಗ ಶುದ್ಧಿ ಹಾಗೂ ನಿರ್ಮಲತೆಯ ಪ್ರತೀಕ.. 1938ರಲ್ಲಿ ಮಕ್ಕಳಿಗಾಗಿ ಕೇಟ್ ಸೆರಡಿ ಬರೆದ ವೈಟ್ ಸ್ಟಾಗ್ ಕಥೆ ಪುಸ್ತಕ ಸಾಕಷ್ಟು ಜನಪ್ರಿಯಗೊಂಡಿತ್ತು.. ಅಟ್ಟಿಲಾ ದಿ ಹುನ್ ಅನ್ನುವ ಬುಡಕಟ್ಟಿನ ನಾಯಕನ ಕಥೆ ಹೇಳುವ ಚಾರಿತ್ರಿಕ ಕಾದಂಬರಿ ಸ್ಕೌರ್ಜ್ ಆಫ್ ಗಾಡ್​ನಲ್ಲಿ ಈ ಬಿಳಿಯ ಸಾರಂಗವನ್ನು ಹೊಸ ರಾಷ್ಟ್ರವನ್ನು ಪರಿಚಯಿಸುವ ವಿಶೇಷ ಪ್ರಾಣಿ ಎಂದು ಉಲ್ಲೇಖಿಸಲಾಗಿದೆ..  

ಅಷ್ಟೇ ಅಲ್ಲ ಈ ಶ್ವೇತ ಸಾರಂಗ, ಸಿ.ಎಸ್ ಲೆವಿಸ್​ರ ದಿ ಲಯನ್, ದಿ ವಿಚ್ ಎಂಡ್ ದಿ ವಾರ್ಡ್ ರೋಬ್ ಕಾದಂಬರಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.. ಜಪಾನಿನ ಕಾಮಿಕ್ ಕಥೆ ಬ್ಲಾಕ್ ಬಟ್ಲರ್ ಎನಿಮೆಯ ಎರಡನೆಯ ಸರಣಿಯಲ್ಲಿ ಶ್ವೇತ ಸಾರಂಗದ ಪಾತ್ರವಿದೆ.. ಹ್ಯಾರಿ ಪಾಟರ್​​ ಸರಣಿಯಲ್ಲಿಯೂ ಹ್ಯಾರಿಯ ಮಾರ್ಗದರ್ಶಕನಾದ ಪೋಷಕ ಪಾತ್ರದಲ್ಲಿ ವೈಟ್ ಸ್ಟಾಗ್ ಅಥವಾ ಬಿಳಿಯ ಸಾರಂಗ ಕಾಣಿಸಿಕೊಂಡಿದೆ.. ವಾರ್​ಕ್ರಾಫ್ಟ್ ಸೀರಿಸ್ ಅನ್ನುವ ಕಂಪ್ಯೂಟರ್ ವೀಡಿಯೋ ಗೇಮ್​ನಲ್ಲಿ ಶ್ವೇತಸಾರಂಗವನ್ನು ಮೆಲೋರ್ನೆ ಅನ್ನುವ ಪ್ರಕೃತಿಯ ದೇವತೆಯಂತೆ ಚಿತ್ರಿಸಲಾಗಿದೆ.. ಸ್ನೋ ವೈಟ್ ಎಂಡ್​ ದಿ ಹಂಟ್ಸ್​ಮನ್ ಹಾಗೂ ದಿ ಹಾಬಿಟ್ ಚಿತ್ರಗಳಲ್ಲಿ ಬಿಳಿಯ ಗಂಡು ಹರಿಣ ಕಾಣಿಸಿಕೊಂಡಿದೆ.. 

ಕೆಲವು ಮೂಲಗಳ ಮಾಹಿತಿ ಪ್ರಕಾರ ಈ ಶ್ವೇತ ಸಾರಂಗ ಮೊದಲು ಕಾಣಿಸಿಕೊಂಡಿದ್ದು ಜಪಾನ್​​ನಲ್ಲಿ ಎಂದಿದೆ.. ಆದ್ರೆ ಸ್ಕಾಟಿಶ್ ದಂತಕಥೆಗಳಲ್ಲಿ ಇದರ ಉಲ್ಲೇಖಗಳಿವೆ.. ಇಂಡೋ ಯುರೋಪಿಯನ್ ಹಾಗೂ ಏಷ್ಯನ್ ಸಾಂಸ್ಕೃತಿಕ ಕಾವ್ಯಗಳು ಹಾಗೂ ಧಾರ್ಮಿಕ ನಂಬಿಕೆಯಲ್ಲಿ ಈ ಶ್ವೇತ ಸಾರಂಗಕ್ಕೆ ವಿಶೇಷ ಹಾಗೂ ಪೂಜ್ಯನಯ ಸ್ಥಾನ ಕಲ್ಪಿಸಲಾಗಿದೆ.. 

ಹಲವು ದೇಶಗಳ ಮೂಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೃತಿಗಳಲ್ಲಿ ಮಹತ್ವದ ಘಟ್ಟಗಳಲ್ಲಿ ಈ ಶ್ವೇತ ಸಾರಂಗ ಕಣಿಸಿಕೊಂಡಿದೆ ಹಾಗೂ ಈ ಬಿಳಿಯ ಗಂಡು ಜಿಂಕೆ ಕಾಣಿಸಿಕೊಳ್ಳುವ ಹಿಂದೆ ಒಂದು ನಿರ್ಣಾಯಕ ಹಾಗೂ ಧನಾತ್ಮಕ ಬದಲಾವಣೆಯನ್ನು ಅರ್ಥೈಸಲಾಗಿದೆ.. ಮೆಸಪಟೋಮಿಯಾ, ಬ್ಯಾಬಿಲನ್, ಆಸ್ಸೀರಿಯಾ, ಮಂಗೋಲಿಯಾ, ಚೀನೀ ಹಾಗೂ ಜಪಾನಿ ಪೌರಾಣಿಕ ಸಾಹಿತ್ಯದಲ್ಲಿ ಶ್ವೇತ ಗಂಡು ಸಾರಂಗವನ್ನು ವಿಶೇಷ ಅರ್ಥದಲ್ಲಿ ವಿಶೇಷ ಪಾತ್ರದಲ್ಲಿ ವರ್ಣಿಸಲಾಗಿದೆ.. ಆದರೆ ಪೌರಾಣಿಕ ಹಾಗೂ ಧಾರ್ಮಿಕ ನಂಬಿಕೆಗಳ ಜೊತೆ ತಳುಕು ಹಾಕಿಕೊಂಡ ಅಪೂರ್ವ ಪ್ರಾಣಿ ವೈಟ್ ಸ್ಟಾಗ್ ಅಳಿನಂಚಿನಲ್ಲಿದೆ ಹಾಗೂ ನಿರಂತರರ ಶಿಕಾರಿಗೆ ಸಿಕ್ಕು ಕೆಲವೇ ಸಂಖ್ಯೆಗಳಲ್ಲಿ ಉಳಿದುಕೊಂಡಿದೆ.. ಅಂತರಾಷ್ಟ್ರೀಯ ವನ್ಯಜೀವಿ ಪ್ರಿಯರು ಈ ಮುದ್ದು ಪ್ರಾಣಿಯ ಉಳಿವಿಗಾಗಿ ದೊಡ್ಡ ಮಟ್ಟದ ಹೋರಾಟ ಕೈಗೊಂಡಿದ್ದಾರೆ.. ಧಾರ್ಮಿಕ ನಂಬಿಕೆಗಳಿಗಿಂತ ಶ್ವೇತ ಸಾರಂಗದ ಅಪೂರ್ವತೆಯನ್ನು ಉಳಿಸಿಕೊಳ್ಳುವ ಕಡೆ ಈಗ ಗಮನಹರಿಸಬೇಕಿದೆ..  

ಶ್ವೇತ ಸಾರಂಗಗಳನ್ನು ಇವುಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕು ಹಾಗೂ ಅವುಗಳ ಖಾಸಗಿತನಕ್ಕೆ ಧಕ್ಕೆಯಾಗದ ಹಾಗೆ ಸಂರಕ್ಷಿಸುವ ಯತ್ನಗಳಾಗಬೇಕು.. ಧಾರ್ಮಿಕ ಮಹತ್ವದ ಲೇಪ ಬಳಿದು ಪೂಜಿಸುವುದಕ್ಕಿಂತ ಅವುಗಳ ಬೇಟೆ ನಿಯಂತ್ರಿಸುವುದು ಮುಖ್ಯ.. ಈ ಪವಿತ್ರ ಜೀವಿಯ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಅಂತ ಹಾರೈಸೋಣ.. 

-(ವಿಭಾ) ವಿಶ್ವಾಸ್ ಭಾರದ್ವಾಜ್

No comments:

Post a Comment