Thursday, 9 April 2015

ಅದೇ ಛಳಕು ಅಳಿಯದಂತೆ ಉಳಿದಿದೆ

ಅಂಗಳದಲ್ಲಿ ಅದೇ ಛಳಕು ಅಳಿಯದಂತೆ ಉಳಿದಿದೆ
ಹೊಳಪು ಹೊಳೆದು ಮಿನುಗಿ ಮಿಂಚಿ ಅಂಧಕಾರ ಕಳೆದಿದೆ
ಅಲ್ಲಿ ಅವಳ ಘಮವಿದೆ ; ಬೆಳ್ಳಿ ಗೆಜ್ಜೆಯ ಘಲಿರಿದೆ
ಅವಳ ಸಿರಿಕಂಠದ ಭಜನ್ ಗಾನ ಸುಧೆಯಿದೆ
ಕೈ ನೇವರಿಸಿ ಸವರಿದಂತ ತುಂಬೆ ಎಲೆಗಳ ನಾಚಿಕೆಯಿದೆ
ಅವಳು ಮುತ್ತಿಟ್ಟ ಗುಲಾಬಿ ಕನ್ಯೆಯ ಕೆನ್ನೆ ರಂಗೇರಿದೆ
ಅಲ್ಲಿ ಗಾಜಿನ ಬಳೆಗಳ ಕಂಕಣೆಯಿದೆ
ತಂಪು ಗಾಳಿ ಹಾರಿಸಿದ ಮುಂಗುರುಳ ಮುದವಿದೆ
ನೆನೆಸಿ ನಕ್ಕ, ನಲಿದು ನಿಂತ ಮಂದ ಹಾಸ ಕಲರವವಿದೆ
ಚಿಟ್ಟೆ ಹಿಂದೆ ಓಡಿದಂತ ಸಣ್ಣ ಬೆರುಗು ಅಲ್ಲಿದೆ
ಬೊಗಸೆಯಲ್ಲಿ ಅಕ್ಕಿ ಎರೆದೆ, ಹಕ್ಕಿ ಕೊರಳು ತುಂಬಿದೆ
ಹಾರಿ ಕುಣಿದ ದಾಟಿ ನೋಡಿ ನವಿಲೆ ಮರೆಗೆ ಸರಿದಿದೆ
ಹಸಿ ಜೌಗಿನಲಿ ಪುಟ್ಟ ಮೆದು ಪಾದದ ಗುರುತಿದೆ
ಅವಳು ಬಂದು ಹೋದ ಕುರುಹು ಅಳಿಯದಂತೆ ಉಳಿದಿದೆ
-ವಿಶ್ವಾಸ್ ಭಾರದ್ವಾಜ್

No comments:

Post a Comment