ಜಲಕ್ಷಾಮದ ಭೀಕರತೆಗೆ ನಲುಗ್ತಿದೆ ಕಗ್ಗತ್ತಲ ಖಂಡದ ನಗರ.. ವಿಶ್ವದ 11 ಪ್ರಮುಖ ಪಟ್ಟಣಗಳಿಗೂ ಕಾದಿದೆ ಜಲ ಗಂಡಾಂತರ.. ಬಂದೇ ಬಿಡ್ತಾ ಸ್ವಾರ್ಥಿ ಮಾನವನ ಅಭಿವೃದ್ಧಿಯ ನಾಗಾಲೋಟಕ್ಕೆ ಬೆಲೆ ತೆರುವ ಸಮಯ?.. ಜೀವಜಲದ ಬರದಿಂದ ತತ್ತರಿಸಲಿದೆಯಂತೆ ರಂಗ್ರಂಗೀನ್ ನಗರಗಳು..
ಮನುಷ್ಯ ತನ್ನ ಬದುಕಿಗಾಗಿ ತನ್ನ ಮೂಲಮನೆಯನ್ನು ನಾಶ ಮಾಡ್ತಿದ್ದಾನೆ.. ಆದ್ರೆ ಅದೇ ಮನುಷ್ಯ ಎಷ್ಟೇ ಬುದ್ದಿವಂತನಾದ್ರೂ ಪ್ರಕೃತಿಯ ಮುಂದೆ ಅವನ ಸವಾಲು ನಡೆಯೋದಿಲ್ಲ ಅನ್ನೋದು ಅನೇಕ ಬಾರಿ ಸಾಭೀತಾಗಿದೆ.. ಈಗ ಮತ್ತೊಮ್ಮೆ ಅಂತದ್ದೇ ಒಂದು ಮುನ್ಸೂಚನೆಯನ್ನು ಪ್ರಕೃತಿ ಕೊಟ್ಟಿದೆ.. ಬುದ್ದಿವಂತ ಮಾನವ ಕಟ್ಟಿಕೊಂಡ ಐಶಾರಾಮಿ ನಗರಗಳಿಗೆ ಜಲಕ್ಷಾಮದ ಎಚ್ಚರಿಕೆ ನೀಡಿದೆ ಜಗತ್ತಿನ ಖ್ಯಾತ ಮಾಧ್ಯಮ ಸಂಸ್ಥೆ ಬಿಬಿಸಿ..
ಭೂಮಿಯ ಮೇಲೆ ಶೇ 70ರಷ್ಟು ನೀರಿದ್ದರೂ ಭೂವಾಸಿಗಳಿಗೆ ಕುಡಿಯಲು ಹಾಗೂ ಬದುಕಲು ಲಭ್ಯವಿರುವ ಶುದ್ಧ ಜೀವಜಲದ ಪ್ರಮಾಣ ಕೇವಲ ಶೇ 3ರಷ್ಟು ಮಾತ್ರ.. ಪ್ರಪಂಚದ ಜನಸಂಖ್ಯೆ 650 ಕೋಟಿ ದಾಟಿದೆ.. 2014ರಲ್ಲಿ ನಡೆಸಲಾದ ಸರ್ವೇ ಒಂದರ ಪ್ರಕಾರ 500 ದೊಡ್ಡ ನಗರಗಳಲ್ಲಿ ನಾಲ್ಕರಲ್ಲಿ ಒಂದು ನಗರ ಅತೀವ ನೀರಿನ ಕೊರತೆಯ ಒತ್ತಡ ಎದುರಿಸುತ್ತಿದೆ ಅನ್ನುವ ಆತಂಕಕಾರಿ ಸಂಗತಿ ಬಯಲಾಗಿತ್ತು.. ಅರಣ್ಯನಾಶ, ಪ್ರಕೃತಿಯ ಮೇಲಿನ ದೌರ್ಜನ್ಯ, ಜಲಮೂಲಗಳ ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಹಿಮಕರಗಿ ಸಾಗರ ಸೇರುತ್ತಿರುವುದು, ಕಡಲ್ಕೊರೆತ, ಸಮುದ್ರದ ಮಟ್ಟ ಅನಾಹುತಕಾರಿ ಏರಿಕೆ ಕಾಣುತ್ತಿರುವುದು ಇವೆಲ್ಲದರ ಪರಿಣಾಮವಾಗಿ ಶುದ್ಧ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆ ಉಂಟಾಗ್ತಿದೆ..
ಜಗತ್ತನ್ನೇ ಬೆಚ್ಚಿ ಬೀಳಿಸಿದೆ ದಕ್ಷಿಣ ಆಫ್ರಿಕಾದ ಕೇಪ್ಟೌನ್ನ ತೀವ್ರ ಜಲಕ್ಷಾಮ.. ಮುಂಬರುವ ವರ್ಷಗಳಲ್ಲಿ ಇದೇ ರೀತಿ ತೀವ್ರ ಜಲಕ್ಷಾಮ ತಲೆದೋರಬಹುದಾದ 11 ಮೇಜರ್ ಸಿಟಿಗಳನ್ನು ಗುರುತಿಸಿ ಕಾರಣ ಸಹಿತ ವರದಿ ಮಾಡಿದೆ ಖ್ಯಾತ ಸುದ್ದಿ ಮಾಧ್ಯಮ ಬಿಬಿಸಿ..
ಡಬ್ಲ್ಯೂ.ಹೆಚ್.ಓ ವರದಿಯಂತೆ ಸುಮಾರು 850 ಮಿಲಿಯನ್ ಮಂದಿ ಭವಿಷ್ಯದಲ್ಲಿ ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಬಡಿದಾಡಬೇಕಾದ ಸ್ಥಿತಿ ಎದುರಾಗುತ್ತದೆ.. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಹಾಗೂ ಜಲಮೂಲಗಳ ಮೇಲಿನ ಮಾನವ ದೌರ್ಜನ್ಯ ಇಡೀ ಮನುಕುಲದ ಭವಿಷ್ಯವನ್ನೇ ಅಪಾಯದಂಚಿಗೆ ತಂದು ನಿಲ್ಲಿಸಿದೆ..
ಭೂಮಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದ ಮೊದಲ ಪಟ್ಟಣ ಕೇಪ್ಟೌನ್.. ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್ಬರ್ಗ್ ನಂತರದ ಪ್ರಸಿದ್ಧ ಕರಾವಳಿ ನಗರಿ ಈ ಕೇಪ್ಟೌನ್.. ಇಲ್ಲಿ ಏಕಾಏಕಿ ಸಂಭವಿಸಿದ ಬರ ಹಾಗೂ ಜಲಕ್ಷಾಮ, ಪ್ರಪಂಚದ ಪರಿಣಿತ ಪರಿಸರ ತಜ್ಞರ ನಿದ್ದೆ ಹಾಗೂ ನೆಮ್ಮದಿ ಎರಡನ್ನೂ ಭಂಗಮಾಡಿದೆ.. ಪ್ರಪಂಚದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಆಫ್ರಿಕಾ ಖಂಡದ ಭೂಭಾಗದಲ್ಲಿ ನೀರಿನ ಅಭಾವದಿಂದ ಜನ ನರಳುತ್ತಾರೆ ಅಂದರೆ ಸೋಜಿಗವಾಗುತ್ತೆ, ಆದ್ರೂ ಇದು ವಾಸ್ತವದ ಕಹಿ ಸತ್ಯ.. ಕೇಪ್ಟೌನ್ಗೆ ಸಾಲಿಗೆ ಸೇರಲು ಅಭಿವೃದ್ಧಿ ಹೊಂದಿರುವ ಹಾಗೂ ಅಭಿವೃದ್ದಿ ಹೊಂದಲು ಹೊರಟ ರಾಷ್ಟ್ರಗಳ ಕೆಲವು ಪ್ರಮುಖ ಪಟ್ಟಣಗಳು ತುದಿಗಾಲಿನಲ್ಲಿ ನಿಂತಿವೆ.. ಇನ್ನೇನು ಕೆಲವೇ ವರ್ಷಗಳಲ್ಲಿ ಈ ನಗರಗಳಲ್ಲೂ ವಾಟರ್ ರನ್ನಿಂಗ್ ಔಟ್ ಆದರೂ ಆಶ್ಚರ್ಯವೇನಿಲ್ಲ..
ಆಲ್ಫಾ ಗ್ಲೋಬಲ್ ಸಿಟಿ, ಬ್ರಿಜಿಲ್ನ ವಾಣಿಜ್ಯ ರಾಜಧಾನಿ ಅಂತೆಲ್ಲಾ ಕರೆಸಿಕೊಳ್ಳುವ ಸಾವೋ ಪೌಲೋ ನಗರ, ಶೀಘ್ರದಲ್ಲೇ ತೀವ್ರ ಜಲಕ್ಷಾಮಕ್ಕೆ ತುತ್ತಾಗಬೇಕಿರುವ ಮೊತ್ತಮೊದಲ ಪಟ್ಟಣ ಅನ್ನುವ ಹಣೆಪಟ್ಟಿ ಹೊತ್ತಿದೆ.. 2015ರಲ್ಲೇ ಇದರ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಶೇ4ಕ್ಕೆ ಕುಸಿದಿತ್ತು.. ಸಾವೋ ಪೌಲೋನಲ್ಲಿ ಸುಮಾರು 21.7 ಮಿಲಿಯನ್ ನಿವಾಸಿಗಳು ಈಗಲೇ ನೀರಿಗಾಗಿ ಪರದಾಡುತ್ತಿದ್ದಾರೆ. ಪ್ರತಿ 20 ದಿನಕ್ಕೊಮ್ಮೆ ಮುನ್ಸಿಪಾಲಿಟಿಯಿಯಿಂದ ನೀರು ಬಿಡಲಾಗ್ತಿದೆ.. ನೀರಿನ ಟ್ಯಾಂಕರ್ಗಳ ಲೂಟಿ ತಡೆಯಲು ಪೊಲೀಸರ ಸರ್ಪಗಾವಲು ಇದೆ.. 2014ರಿಂದ 17ರವರೆಗೆ ಸತತ 3 ವರ್ಷ ಎದುರಾದ ತೀವ್ರ ಬರ ಇಲ್ಲಿನ ನೀರಿನ ಕೊರತೆಗೆ ಕಾರಣ ಅಂತ ಯುಎನ್ ಹೇಳಿದೆ.. ಆದ್ರೆ ಅಸಲು ಕಾರಣ ಬೆಳೆದು ನಿಂತ ನಗರದ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಸಮಸ್ಯೆ ಅನ್ನುತ್ತವೆ ಸ್ಥಳೀಯ ಸುದ್ದಿ ಮೂಲಗಳು.. ಕಾರಣ ಏನೇ ಇರಲಿ, ಸಾವೋ ಪೌಲೋ ಅತ್ಯಂತ ಅಪಾಯದಲ್ಲಿದೆ ಅನ್ನುವುದಂತೂ ನಿಜ..
ಏಷ್ಯಾದ ಎರಡು ಬಲಾಢ್ಯ ಆರ್ಥಿಕ ಶಕ್ತಿಗಳಾದ ಭಾರತ ಹಾಗೂ ಚೀನಾ ಒಂದೇ ಮಾದರಿಯ ಸಮಸ್ಯೆ ಎದುರಿಸುತ್ತಿವೆ.. ಚೀನಾದಂತೆ ಭಾರತದ ಬಹುತೇಕ ಪ್ರದೇಶಗಳಲ್ಲಿ ಶೇ 85ರಷ್ಟು ನೀರು ಕೃಷಿಗೆ ಹಾಗೂ ಕೈಗಾರಿಕೆಗಳಿಗೆ ಬಳಕೆಯಾಗ್ತಿದೆ.. ಇನ್ನು ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ ಕುಡಿಯುವ ಜಲಮೂಲಗಳು ವಿಷಮಿಶ್ರಿತಗೊಳ್ತಿವೆ.. ಬಿಬಿಸಿ ವರದಿ ಮಾಡಿರುವಂತೆ ಜಲಕ್ಷಾಮದ ಅತ್ಯಂತ ಅಪಾಯದಲ್ಲಿರುವ ಎರಡನೇ ಮುಖ್ಯ ನಗರ ನಮ್ಮ ಬೆಂಗಳೂರು.. ಭಾರತದ ಸಿಲಿಕಾನ್ ವ್ಯಾಲಿ, ಐಟಿ-ಬಿಟಿ ರಾಜಧಾನಿ, ಗಾರ್ಡನ್ ಸಿಟಿ ಎಂಬಿತ್ಯಾದಿ ಉಪಮೆಗಳಿರುವ ಬೆಂಗಳೂರಿಗೂ ಅತೀವ ನೀರಿನ ಅಭಾವದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಅಂತ ಬಿಬಿಸಿ ಹೇಳಿದೆ.. ಆದ್ರೆ ನಮ್ಮ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ..
2030ರವರೆಗೂ ಬೆಂಗಳೂರಿನ ಜನರ ನೀರಿನ ಸಮಸ್ಯೆ ದೂರ ಮಾಡಲು ಜಲಮಂಡಳಿಯ ಬಳಿ ಯೋಜನೆಗಳಿವೆ.. ಬೆಂಗಳೂರು ಸುತ್ತಮುತ್ತಲ ಜಲಾಶಯಗಳ ಪುನಶ್ಚೇತನ, ಎತ್ತಿನಹೊಳೆ ಹಾಗೂ ಶರಾವತಿಯ ನೀರನ್ನು ರಾಜಧಾನಿಗೆ ತರಿಸಲಾಗುವುದು ಅನ್ನುವ ಭರವಸೆಯನ್ನು ನಗರಾಡಳಿತ ನೀಡಿದೆ.. ಅದೆಷ್ಟೇ ಜನಸಂಖ್ಯೆ ಹೆಚ್ಚಾದರೂ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.. ಆದ್ರೂ ಬೆಂಗಳೂರಿನಲ್ಲಿರುವ ಅಳಿದುಳಿದಿರುವ ಕೆರೆಗಳನ್ನು ಮಾಲಿನ್ಯದಿಂದ ಮುಕ್ತಗೊಳಿಸಿ ರಕ್ಷಿಸದಿದ್ರೆ ಬೆಂಗಳೂರಿನ ಗತಿ ಮುಂದೊಂದು ದಿನ ಕೇಪ್ಟೌನ್ನಂತಾಗುವುದ್ರಲ್ಲಿ ಅನುಮಾನವಿಲ್ಲ..
ಅತಿ ಹೆಚ್ಚು ಶುದ್ದ ಕುಡಿಯುವ ನೀರಿನ ಮೂಲ ಹೊಂದಿದ್ರೂ ರಷ್ಯಾ ಸಹ ಜಲಕ್ಷಾಮದ ಭೀತಿಯಿಂದ ಹೊರತಾಗಿಲ್ಲ.. ಏಷ್ಯಾದಲ್ಲೇ ಅತಿ ಹೆಚ್ಚು ಶುದ್ದ ನೀರಿನ ಮೂಲ ಹೊಂದಿದ್ರೂ ಚೀನಾದ ನಗರಕ್ಕೆ ಜಲಕಂಟಕ ತಪ್ಪಿಲ್ಲ.. ಮಹಾನದಿ ನೈಲ್ ತೀರದಲ್ಲಿದ್ದರೂ ಈಜಿಪ್ಟ್ ನಾಗರೀಕತೆ ನೀರಿನ ಬರದ ಸಂಕಷ್ಟದಲ್ಲಿದೆ.. ಹಾಗಿದ್ರೆ ಇದಕ್ಕೆಲ್ಲಾ ಕಾರಣವೇನು ಗೊತ್ತಾ?
ವಿಶ್ವ ಸಂಸ್ಥೆಯ ಸಂಶೋಧನೆಯೊಂದರ ಅನ್ವಯ ನೀರಿನ ಭದ್ರತೆಯ ವಿಚಾರದಲ್ಲಿ ಈವರೆಗೆ ನಡೆದ ಸಂಶೋಧನೆಯಂತೆ ಒಬ್ಬ ವ್ಯಕ್ತಿಗೆ ಒಂದು ವರ್ಷಕ್ಕೆ ಸುಮಾರು 1000 ಲೀಟರ್ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ.. ಆದ್ರೆ 2014ರಲ್ಲಿ ನಡೆದ ಸರ್ವೇ ಪ್ರಕಾರ ಚೀನಾದ ಬೀಜಿಂಗ್ನಲ್ಲಿ ಕೇವಲ ಒಬ್ಬ ವ್ಯಕ್ತಿಗೆ ವಾರ್ಷಿಕ 145 ಕ್ಯುಬಿಕ್ ಮೀಟರ್ ಶುದ್ಧ ನೀರು ಮಾತ್ರ ಲಭ್ಯವಿತ್ತು.. ಚೀನಾ ಜಗತ್ತಿನ ಜನಸಂಖ್ಯೆಯಲ್ಲಿ ಶೇ 20ರಷ್ಟು ಪಾಲು ಹೊಂದಿದೆ ಆದ್ರೆ ಪ್ರಪಂಚದ ಶುದ್ಧ ಕುಡಿಯುವ ನೀರಿನಲ್ಲಿ ಶೇ 7ರಷ್ಟು ಪಾಲು ಹೊಂದಿದೆ.. ಕೊಲಂಬಿಯಾ ವಿಶ್ವವಿದ್ಯಾನಿಲಯ ಅಧ್ಯಯನಗಳ ಪ್ರಕಾರ ಚೀನಾದ ಜಲಮೂಲಗಳು 2000ರಿಂದ 2009ರವರೆಗೆ ಶೇ 13ರಷ್ಟು ಕುಸಿತ ಕಂಡಿವೆ.. ಬೀಜಿಂಗ್ ಈ ನಿಟ್ಟಿನಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಶೇ 40ರಷ್ಟು ಬೀಜಿಂಗ್ನ ಮೇಲ್ಮೈ ನೀರು ಮಲಿನಗೊಂಡಿದ್ದರೆ, ಬೀಜಿಂಗ್ ಪಟ್ಟಣದ ಜನಸಾಂಧ್ರತೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೇ ಇದೆ..
ಚೀನಾದ ಕೈಗಾರಿಕೆ ಹಾಗೂ ಕೃಷಿ ಕ್ರಾಂತಿಯ ನೇರ ಪರಿಣಾಮ ಅಲ್ಲಿನ ಶುದ್ದ ಜಲಮೂಲಗಳ ಮೇಲಾಗಿದೆ.. ಹೀಗಾಗಿ ಸದ್ಯದಲ್ಲಿಯೇ ಬೀಜಿಂಗ್ನಲ್ಲಿ ತೀವ್ರ ಜನಕ್ಷಾಮ ತಲೆದೋರಲಿದೆ ಅಂತ ಬಿಬಿಸಿ ಭವಿಷ್ಯ ನುಡಿದಿದೆ..
ಪ್ರಪಂಚದ ನಾಗರೀಕತೆಯ ಉಗಮದಿಂದಲೂ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ವಿಶ್ವದ ಪ್ರಮುಖ ಮಹಾನದಿ ನೈಲ್.. ಈಜಿಪ್ಟ್ ನಾಗರೀಕತೆ ಉಗಮವಾಗಿದ್ದೇ ಈ ನೈಲ್ ನದಿಯ ತೀರದಲ್ಲಿ.. ಶೇ 97ರಷ್ಟು ಈಜಿಪ್ಟ್ನ ನೀರಿನ ಅವಶ್ಯಕತೆಗಳನ್ನು ಪೂರೈಸುವ ನೈಲ್ ನದಿಯನ್ನೇ ಈಜಿಪ್ಟ್ನ ಕೈಗಾರಿಕೆ ಹಾಗೂ ಕೃಷಿ ತ್ಯಾಜ್ಯಗಳ ವಿಸರ್ಜನೆಗೆ ಬಳಸಿಕೊಳ್ಳಲಾಗಿದೆ.. ಹೀಗಾಗಿ ನೈಲ್ ನದಿ ನಮ್ಮ ಗಂಗೆಯಷ್ಟೇ ಮಲಿನಗೊಂಡಿದೆ.. ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಯಲ್ಲಿ ನೈಲ್ ನೀರು ಕುಡಿದು ದೇಹಾರೋಗ್ಯ ಕೆಡಿಸಿಕೊಂಡು ಸಾವಿಗೆ ಹತ್ತಿರ ಆಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗ್ತಿದೆ ಎನ್ನುವ ಭೀತಿಯ ವಿಚಾರ ಬಹಿರಂಗಪಡಿಸಲಾಗಿದೆ.. 2015ರ ಸುಮಾರಿಗೆ ನೈಲ್ ನದಿ ಸಂಪೋರ್ಣ ವಿಷಕಾರಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.. ಇದರ ನೇರ ಪರಿಣಾಮವೆಂಬಂತೆ ಅತ್ಯಂತ ಶೀಘ್ರದಲ್ಲಿಯೇ ಜಗತ್ಪ್ರಸಿದ್ಧ ಕೈರೋ ಪಟ್ಟಣ ನೀರಿನ ಬರದಿಂದ ತತ್ತರಿಸಲಿದೆ ಎಂದು ಬಿಬಿಸಿ ಹೇಳಿದೆ..
ವಿಶ್ವದ ಉಳಿದ ಸಮುದ್ರ ತೀರದಲ್ಲಿರುವ ಪಟ್ಟಣಗಳಂತೆ ಇಂಡೋನೇಷ್ಯಾದ ರಾಜಧಾನಿ ಜಕಾರ್ಥಕ್ಕೂ ಎದುರಾಗಿರುವ ಸಮಸ್ಯೆ, ಏರುತ್ತಿರುವ ಸಮುದ್ರ ಮಟ್ಟ ಹಾಗೂ ಕಡಲ್ಕೊರೆತ.. ಆದ್ರೆ ಜಕಾರ್ಥದಲ್ಲಿ ಇನ್ನೊಂದು ಸಮಸ್ಯೆ ಇದೆ.. ಜಕಾರ್ಥದ ಅರ್ಧಕ್ಕೂ ಹೆಚ್ಚು ಅಂದರೆ ಸುಮಾರು 10 ಮಿಲಿಯನ್ ನಿವಾಸಿಗಳು ಕಡಿವಾಣವಿಲ್ಲದಂತೆ ಬೋರ್ವೆಲ್ಗಳನ್ನು ಕೊರೆದು ಅಂತರ್ಜಲವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.. ಇದ್ರಿಂದ ಜಕಾರ್ಥದ ಜಲಮೂಲಗಳು ಸಂಪೂರ್ಣವಾಗಿ ಖಾಲಿಯಾಗುತ್ತಿವೆ, ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದೆ.. ವಿಶ್ವಬ್ಯಾಂಕ್ ಪರಿಣಿತರು ಅಂದಾಜಿಸಿರುವಂತೆ ಈಗಾಗಲೆ ಜಕಾರ್ಥದ ಶೇ40ರಷ್ಟು ಭೂಮಿ ಸಮುದ್ರಮಟ್ಟಕ್ಕಿಂತ ಕೆಳಗಿದೆ.. ಇದು ಭವಿಷ್ಯದಲ್ಲಿ ಅಪಾಯಕ್ಕೆ ಆಹ್ವಾನ ನೀಡುವುದ್ರಲ್ಲಿ ಸಂದೇಹವಿಲ್ಲ..
ಇಡೀ ಜಗತ್ತಿನ ಕಾಲು ಭಾಗ ಶುದ್ದ ಕುಡಿಯುವ ನೀರಿನ ಮೂಲ ಹೊಂದಿರುವ ರಷ್ಯಾ, ಸೋವಿಯತ್ ಯೂನಿಯನ್ ಕಾಲಘಟ್ಟದ ಕೈಗಾರಿಕಾ ಕ್ರಾಂತಿಯ ಕಾರಣ ಜಲಮಾಲಿನ್ಯಕ್ಕೆ ತುತ್ತಾಗಿದೆ.. ಹೀಗಾಗಿ ಶೇ. 70ರಷ್ಟು ಮೇಲ್ಮೈ ನೀರಿನ ಮೇಲೆ ಅವಲಮಭಿತವಾಗಿರುವ ಮಾಸ್ಕೋ ಮುಂಬರುವ ವರ್ಷಗಳಲ್ಲಿ ಜಲಕ್ಷಾಮದ ಅಪಾಯದಲ್ಲಿದೆ.. ಶೇ35ರಿಂದ ಶೇ 60ರಷ್ಟು ಮಾಸ್ಕೋದ ಜಲಮೂಲಗಳು ನೈರ್ಮಲ್ಯದ ಮಾನದಂಡವನ್ನು ತೃಪ್ತಿಪಡಿಸುವಂತಿಲ್ಲ ಅನ್ನುವ ಅಂಶವನ್ನು ಮಾಸ್ಕೋದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ..
ಟರ್ಕಿಯ ರಾಜಧಾನಿ ಇಸ್ತಾಂಬುಲ್ ಸಹ ಅಧಿಕ ನೀರಿನ ಅಭಾವ ಎದುರಿಸುತ್ತಿರುವ ಪಟ್ಟಣಗಳ ಪಟ್ಟಿಯಲ್ಲಿದೆ.. ಇಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲಾಗದೇ ಇರುವುದೇ ಜಲಕ್ಷಾಮಕ್ಕೆ ಕಾರಣವಾಗಬಹುದು ಅಂತ ತಜ್ಞರು ಅಭಿಪ್ರಾಯಪಡ್ತಿದ್ದಾರೆ.. ಇಲ್ಲಿನ ಜೀವಂತ ಸರೋವರ ಕಳೆದ 10 ತಿಂಗಳಿನಿಂದ ಬರಡುಬಿದ್ದಿದೆ.. ಜಲಾಶಯಗಳು ಹಾಗೂ ಜಲಮೂಲಗಳು 2014ರಲ್ಲೇ ಶೇ 30ರಷ್ಟು ಜಲನಷ್ಟ ಅನುಭವಿಸಿದ್ದವು.. ಇಸ್ತಂಬುಲ್ನಲ್ಲಿ ವಾಸವಿರುವ ಸುಮಾರು 14 ಮಿಲಿಯನ್ ನಿವಾಸಿಗಳು ಮುಂಬರುವ ವರ್ಷಗಳಲ್ಲಿ ಧಾರುಣ ನೀರಿನ ಬರ ಎದುರಿಸಬೇಕಾಗಬಹುದು ಅಂತ ಬಿಬಿಸಿಯ ವರದಿ ಮುನ್ಸೂಚನೆ ನೀಡಿದೆ..
ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿ ಅಂತ ಕರೆಸಿಕೊಂಡಿರುವ ಅಮೇರಿಕಾ, ಜಗತ್ತನ್ನೇ ವಸಾಹತು ಮಾಡಿಕೊಳ್ಳಲು ಹೊರಟಿದ್ದ ಆಂಗ್ಲರ ನಾಡು ಬ್ರಿಟನ್ ಹಾಗೂ ಬುದ್ದಿವಂತರು ಹಾಗೂ ಶ್ರಮಜೀವಿಗಳ ಭೂಮಿ ಜಪಾನ್ ಸಹ ಜಲಕ್ಷಾಮದ ಅಪಾಯದಲ್ಲಿವೆ.. ಮೆಕ್ಸಿಕೋ, ಟೋಕಿಯೋ ಹಾಗೂ ಮಿಯಾಮಿ ನಗರಗಳಲ್ಲೂ ಮುಂಬರುವ ವರ್ಷಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರತ್ತಂತೆ..
ನೀರಿನ ಕೊರತೆಯ ಒತ್ತಡ ಮೆಕ್ಸಿಕನ್ನರ ರಾಜಧಾನಿ ಮೆಕ್ಸಿಕೋದಲ್ಲಿನ 21 ಮಿಲಿಯನ್ ನಾಗರೀಕರಿಗೆ ಇದೇನು ಹೊಸತಲ್ಲ.. ಈ ರೀತಿಯ ಅನೇಕ ಸಂದರ್ಭಗಳನ್ನು ಮೆಕ್ಸಿಕನ್ನರು ಎದುರಿಸಿ ಅನುಭವಿಸಿದ್ದಾರೆ.. ಇಲ್ಲಿ ಮನೆಗಳ ನಳದಲ್ಲಿ ನೀರು ಬರುವುದು ಕೆಲವೇ ಗಂಟೆಗಳು ಮಾತ್ರ.. ನಿರಂತರ 24 ಗಂಟೆಗಳ ನೀರಿನ ವ್ಯವಸ್ಥೆ ಮೆಕ್ಸಿಕನ್ನರಿಗೆ ಕನಸಿನ ಮಾತು.. ಮೆಕ್ಸಿಕೋ ನಗರಕ್ಕೆ ಶೇ 40ರಷ್ಟು ನೀರು ಪೂರೈಕೆಯಾಗುವುದೇ ದೂರದ ಜಲಮೂಲಗಳಿಂದ.. ಆದ್ರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ನೀರಿನ ಸೋರಿಕೆ ತಡೆಗಟ್ಟದೇ ಇರುವುದು ಹಾಗೂ ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಇಲ್ಲದೇ ಇರುವುದೇ ಇಲ್ಲಿ ಪುನಃ ಪುನಃ ಜಲಕ್ಷಾಮ ತಲೆದರಲು ಕಾರಣ.. ಬಳಕೆಯಾದ ನೀರನ್ನು ಶುದ್ಧೀಕರಿಸಿ ಪುನರ್ಬಳಕೆಗೆ ಮಾಡಿಕೊಳ್ಳಬೇಕು ಅನ್ನುವ ಯೋಚನೆಯೇ ಮೆಕ್ಸಿಕನ್ನರಿಗೆ ಇಲ್ಲ..
ಬ್ರಿಟನ್ನರ ಅಹಂಕಾರದ ಕಳಶ ಲಂಡನ್ ಸಹ ಜಲಕ್ಷಾಮದ ಭೀತಿಯ ಕಣ್ಗಾವಲಿನಲ್ಲೇ ಇದೆ.. ಇಲ್ಲಿ ವಾರ್ಷಿಕ ಮಳೆಯಾಗುವ ಪ್ರಮಾಣ ಕೇವಲ 600 ಮಿಲಿಮೀಟರ್.. ಆದ್ರೆ ಲಂಡನ್ನ ಪ್ರಮುಖ ಕುಡಿಯುವ ನೀರಿನ ಮೂಲಗಳು ಥೇಮ್ಸ್ ಹಾಗೂ ಲಿಯಾ ನದಿಗಳು.. ಗ್ರೇಟರ್ ಲಂಡನ್ ಪ್ರಾಧಿಕಾರದ ಪ್ರಕಾರ 2025ಕ್ಕೆ ಲಂಡನ್ನಲ್ಲಿ ಶುದ್ದ ನೀರಿನ ಅಭಾವದ ಸಮಸ್ಯೆ ಶುರುವಾಗುತ್ತದೆ; 2040ಕ್ಕೆ ಜಲಕ್ಷಾಮದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ..
ಜಪಾನ್ನ ಟೋಕಿಯೋ ಕೂಡಾ ನೀರಿನ ಅಭಾವಕ್ಕೆ ತುತ್ತಗಲಿರುವ ಬಿಬಿಸಿ ಎಚ್ಚರಿಕೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.. ಟೋಕಿಯೋದಲ್ಲಿ ಮಳೆಯಾಗುವುದೇ ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ.. ಆದರೆ ಅಷ್ಟೇ ನೀರನ್ನು ಸಮರ್ಥವಾಗಿ ಸಂಗ್ರಹಿಸಿಟ್ಟುಕೊಂಡು ಬಳಸುವ ಬುದ್ದಿವಂತಿಕೆ ಟೋಕಿಯನ್ನರಿಗಿದೆ.. ಟೋಕಿಯೋದ 30 ಮಿಲಿಯನ್ ನಿವಾಸಿಗಳಲ್ಲಿ ಶೇ 70ರಷ್ಟು ಜನ ಮೇಲ್ಮೈ ಜಲಮೂಲಗಳಾದ ನದಿ, ಸರೋವರ ಹಾಗೂ ಹಿಮದ ಅವಲಂಭನೆಯಲ್ಲಿದ್ದಾರೆ.. ಈಗ ಪೈಪ್ಲೈನ್ ಯೋಜನೆಯ ಮೂಲಕವೂ ಶೇ3ರಷ್ಟು ನೀರಿನ ಸೋರಿಕೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ.. ಆದರೂ ಟೋಕಿಯೋ ಜನರಿಗೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುವ ಸೂಚನೆಯಂತೂ ಬಿಬಿಸಿ ಕೊಟ್ಟಿದೆ..
ಯುನೈಟೆಡ್ ಸ್ಟೇಟ್ಸ್ನ ಪ್ರಮುಖ 5 ರಾಜ್ಯಗಳ ಪೈಕಿ, ವರ್ಷದಲ್ಲಿ ಅತ್ಯಧಿಕ ಮಳೆ ಬೀಳುವ ರಾಜ್ಯ ಫ್ಲೋರಿಡಾ.. ಆಶ್ಚರ್ಯವಾದ್ರೂ ಇದು ಸತ್ಯ; ಫ್ಲೋರಿಡಾದ ಮಿಯಾಮಿ ನಗರದಲ್ಲಿ ಜಲಕ್ಷಾಮ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.. 20ನೇ ಶತಮಾನದ ಮೊದಲೇ ಇಲ್ಲಿನ ಒಳಚರಂಡಿ ವ್ಯವಸ್ಥೆಯ ಯೋಜನೆ ಅನಿರೀಕ್ಷಿತ ಫಲಿತಾಂಶ ನೀಡಿತ್ತು.. ಅಟ್ಲಾಂಟಿಕ್ ಮಹಾಸಾಗರದ ಕಲುಷಿತ ನೀರು ಮಿಯಾಮಿಯ ಶುದ್ಧ ಜಲಮೂಲಗಳನ್ನು ಮಾಲಿನ್ಯಗೊಳಿಸಿತ್ತು.. ಅಮೇರಿಕದ ಇತರೆ ಭಾಗಗಳಂತೆ ಮಿಯಾಮಿಯಲ್ಲೂ ಏರುತ್ತಿರುವ ಸಮುದ್ರ ಮಟ್ಟ ಹಾಗೂ ಅಂತರ್ಜಲ ಮಾಲಿನ್ಯಗಳು ತೀವ್ರ ಸಮಸ್ಯೆ ಸೃಷ್ಟಿಸುತ್ತಿವೆ.. ಇದು ಇಂದು ನಿನ್ನೆಯ ಕಥೆಯಲ್ಲ.. 1930ರಿಂದ ಈಚೆಗೆ ಹಲವು ದಶಕಗಳಿಂದ ಮಿಯಾಮಿ ನಗರ ಇಂತಹ ಸಮಸ್ಯೆಗಳ ನಡುವೆಯೇ ಬದುಕುತ್ತಿದೆ.. ಹೀಗಾಗಿ ಮಿಯಾಮಿಯ ಭವಿಷ್ಯವೂ ಡೋಲಾಯಮಾನ ಸ್ಥಿಯಲ್ಲಿದೆ..
ಯುನೈಟೆಡ್ ನೇಷನ್ಸ್ನ ಪರಿಣಿತರು ಅಂದಾಜಿಸಿರುವ ಹಾಗೆ 2030ರಲ್ಲಿ ಶೇ 40ರಷ್ಟು ಶುದ್ಧ ಜೀವಜಲ ಜಾಗತಿಕ ಬೇಡಿಕೆ ಹೆಚ್ಚಾಗಲಿದೆ.. ಇದಕ್ಕೆ ನೇರವಾಗಿ ಕಾರಣವಾಗಿರೋದು ಜನಸಂಖ್ಯಾ ಸ್ಫೋಟ, ತಾಪಮಾನ ಏರಿಕೆ ಹಾಗೂ ವಾತಾವರಣದಲ್ಲಿ ನಿರಂತರವಾಗಿ ಆಗುತ್ತಿರುವ ಅನಾಹುತಕಾರಿ ಬದಲಾವಣೆ.. ಇಷ್ಟಕ್ಕೆಲ್ಲಾ ಕಾರಣವಾಗಿರುವ ಪಾಪಿ ಮನುಷ್ಯನ ದುರಾಸೆ ಹಾಗೂ ಸ್ವಾರ್ಥಕ್ಕೊಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ..
ಇಷ್ಟಕ್ಕೆಲ್ಲಾ ಕಾರಣ ನಮ್ಮ ದುರಾಸೆ, ಅಭಿವೃದ್ಧಿ ಹೊಂದಬೇಕು ನಿಜ.. ಆದ್ರೆ ಆ ಅಭಿವೃದ್ಧಿ ಸಕಾರಾತ್ಮಕವಾಗಿ, ಧನಾತ್ಮಕವಾಗಿ ಸುಸ್ಥಿರತೆಯನ್ನು ಪೋಷಿಸುವಂತದ್ದಾಗಿರಬೇಕು.. ಅದು ಬಿಟ್ಟು ಉದ್ದಾರಾಗುವ ಭರಾಟೆಯ ನಾಗಾಲೋಟದಲ್ಲಿ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನೇ ಹಾಳುಗೆಡವಿದ ನಮ್ಮನ್ನು ಪ್ರಕೃತಿಯ ಮುನಿಸು ಸುಡದೇ ಬಿಡುವುದುಂಟಾ? ಇನ್ನಾದ್ರೂ ನಮ್ಮ ಅಹಂಕಾರ ಇಳಿದು, ಕವಿದಿರುವ ಮಂಕು ಸರಿದು ಪ್ರಕೃತಿಯನ್ನು ಉಳಿಸಿಕೊಂಡ್ರೆ ಬದುಕು.. ಇಲ್ಲವಾದ್ರೆ ಇಂಕಾ, ಮಾಯನ್, ಬ್ಯಾಬಿಲೋನ್, ಇನ್ನಿತರೆ ನಾಗರೀಕತೆಗಳಂತೆ ನಾವೂ ಸರ್ವನಾಶವಾಗಿ ಹೋಗುವ ದಿನಗಳು ದೂರವೇನಿಲ್ಲ..
-ವಿಭಾ (ವಿಶ್ವಾಸ್ ಭಾರದ್ವಾಜ್)
***
No comments:
Post a Comment