Wednesday, 10 December 2014

ಬೇರೆ ಯಾವುದಾದ್ರೂ ಇದ್ಯಾ?

ನಾನು ನಿಮ್ಮನ್ನು ಇಷ್ಟ ಪಡೋದು ಸಾಮಾನ್ಯ
ಪ್ರೀತಿಸಿದ್ರೆ ಮಧ್ಯಮ
ಆರಾಧಿಸಿದ್ರೆ ಅತಿರೇಕ
ಇದ್ಯಾವದೂ ಅಲ್ಲದ ಯಾವುದಾದ್ರೂ ಭಾವ ಇದೆಯಾ???

ನನ್ನತನ

ಯಾವ ಮಹಾಸಾಗರದೊಡಲ ಸುನಾಮಿಗಂಜಲಾರೆ
ಬಿರುಗಾಳಿ ಭೋರ್ಗರೆತಗಳ ಓಘಕೆದೆಗುಂದಲಾರೆ
ಸಿಡಿಲಬ್ಬರದ ಮೊರೆತಗಳಿಗೆ ತಲ್ಲಣಿಸಲಾರೆ
ಅಗ್ನಿವರ್ಷದ ಉಷ್ಣಧಾರೆಯ ಹಬೆಗೆ ಕರಗಲಾರೆ
ಕಾಳಿಂಗ ಕಾರ್ಕೋಟಕ ವಿಷಕೆ ಹೆಪ್ಪುಗಟ್ಟಲಾರೆ
ಬೆನ್ನತ್ತಿ ಬರುವ ಜ್ವಾಲಾಮುಖಿಯ ಲಾವಾರಸ ಭೀತಿಗೆ
ಕಂಪಿಸಲಾರೆ
ದಯ್ಯ ಅಸುರ ಪೆಡಂಭೂತ ಬ್ರಹ್ಮರಾಕ್ಷಸ ಪಿಶಾಚಿ ನಿಶಾತಗಣದ ರಣಕೇಕೆಗೆ ಭಯಬಿದ್ದು
ಪರಾಕು ಪಂಪನು ಊದಲಾರೆ
ನಾ ಅಚಲ ಚಿತ್ತ ಚಿನ್ಮಯಾತ್ಮ ದೃಢ ವಿಶ್ವರೂಪ ಚೇತನ
ಎನ್ನ ತನ ಸದಾ ಹರಿವ ಅನಂತ ಜೀವವಾಯು ಅನುಚಣ
-ವಿಶ್ವಾಸ್ ಭಾರದ್ವಾಜ್

ವಿಧ್ವಂಸಕ ನಾಯಕ

ವಿಧ್ವಂಸಕ ನಾಯಕ:
ಅರಿಹಂತಕ ಪ್ರಳಯಾಂತಕ ಮಹಾ ಧಮನಕಾರಕ
ವಿಷವರ್ತುಲ ಜಾಲ ಹೊಸೆವ ವಿನಾಶ ಕಾಲ ಕಂಟಕ
ಅಭಯ ಹಸ್ತ ವಸ್ತ್ರ ಧರಿಸಿ ಮೆರೆವ ವಿಧ್ವಂಸಕ
ಪದ ತಳದಲೇ ಮೃತ್ಯು ಕೂಪ ಸೃಷ್ಟಿಪ ಕ್ರೂರ ಮಾಂತ್ರಿಕ
ಭೂಮಂಡಲ ಚಕ್ರವರ್ತಿ ಅಹಂ ಸ್ವಯಂ ದೇವ
ಪ್ರಭೆಯ ಝಲಕು ಹೊಳೆಯುತಿರಲಿ ಝಗಮಗಿಸುವ ಠಾಃವ
ಒಪ್ಪಿಕೊಂಡು ಅಪ್ಪಿಕೊಳ್ಳು ಎನ್ನ ದಾರ್ಷ್ಟ್ರ ಇರುವ
ಪಾದುಕೆಯೋ ಹಾವಗೆಯೋ ಶಿರವೇರಿಸು ಮೂರ್ಖ
ತುಳಿತುಳಿದು ಹೂಂಕರಿಸುವೆ ಶಕ್ತಿಕೇಂದ್ರ ಆರೋಹಣ
ಆರ್ಭಟಿಸಿ ಬೊಬ್ಬಿರಿಯುವೆ ಅಧಿಕಾರವೇ ಶಿರಸ್ತ್ರಾಣ
ಚಂಡೆ-ಮದ್ದಳೆ ಬಾರಿಸುವೆ ರಾಜ ‘ಕಾರ್ಯ'ಕಾರಣ
ರಣತಾಂಡವ ಧಿಮಿ ತಿರುಗುವೆ ನಿತ್ಯ ಸಾವಿನ ನರ್ತನ
ಅಡಿಗೆರಗಿರಿ ನಾ ನಿಮ್ಮಯ ಸದಾ ಪಾದಸೇವಕ
ಜನಪದದಲೇ ಮೌಲ್ಯ ಅರಸೊ ವಿನಮ್ರ ಬಡ ಜನನಾಯಕ
ಪಾದಧೂಳಿ ಹಣೆಗೇರಿಸಿರಿ, ನಾ ಸಮಾಜ ಪಾಲಕ
ಸೊಲ್ಲೆತ್ತಿದರೇ ಜೋಕೆ..! ಭಲ್ಲೆ ಎಸೆವ ವಂಚಕ
ಚಿರಂಜೀವಿ ಮೃತ್ಯುಂಜಯ ಸಾವಿಲ್ಲದ ಅಮರಕಾಯ
ಅವತರಿಸುವ ಅನವರತ ದುಷ್ಟಕೂಟ ನಿರ್ಭಯ
ಅಂಧ ಕಾಂಚಾಣಕೂ ಮಾರ್ಗ ತೋರೋ ಅಕ್ಷಯ
ಅಧರ್ಮ ಪಥದ ಸಿದ್ಧಿ ಪಡೆದ ನಿರ್ಲಜ್ಜಿತ ಛಾಯಾ
-ವಿಶ್ವಾಸ್ ಭಾರದ್ವಾಜ್
(ಅರ್ಪಣೆ: ಖಾಸಗಿ ಮಾಧ್ಯಮವೊಂದನ್ನು ಅಧಿಕಾರದ ಮದದಿಂದ ತುಳಿದ ವಿಜಯಪತಾಕೆ ಹಾರಿಸಿದ ಘನವೆತ್ತ ಸರ್ಕಾರದ ಮಾನ್ಯ ಪ್ರಭಾವಿ ಸಚಿವರೊಬ್ಬರಿಗೆ)

ಅದಿತಿಪೊಯಮ್ಸ್

(ಅದಿತಿಪೊಯಮ್ಸ್.ಕಾಂ)
ಪುಟ್ಟ ಪುಟ್ಟ ಗುಬ್ಬಿ ಗೆಳತಿ
ಮುದ್ದಿಸುತೀನಿ ಬಾ
ಕಾಳನು ತಿನ್ನಿಸಿ, ಪಾಲಿಸಿ ಲಾಲಿಸಿ
ಆಡಿಸುತೀನಿ ಬಾ

ವಿಶಾಲ ಹಸಿರು ಬಯಲು
ಕುಣಿಯಲು ಹೋಗೋಣ
ಎನ್ನಯ ಸಂಗಡ ಹೆಜ್ಜೆಯ ಹಾಕೇ
ಸಂತಸದಿ ನಲಿಯೋಣ
ಬೇಸರವೇನೆ ಸಖಿಯೇ
ಗೊಂಬೆಯ ಕೊಡಲೇನೆ
ಸೀರೆಯ ಉಡಿಸಿ, ಹೂವನು ಮುಡಿಸಿ
ಮದುವೆಯ ಮಾಡೋಣ
ರೆಕ್ಕೆಯ ಕಟ್ಟೇ ಗೆಳತಿ
ಬಾಂದಳಕೇರೋಣ
ಹಾರುತ ತೇಲುತ ಚಿಮ್ಮುತ ಸಾಗಿ
ಹರಷವ ಹಂಚೋಣ
ಕಜ್ಜಾಯ ಕೊಡುವೆ ಬೇಕಾ
ಪಾಪಚ್ಚಿ ಹಸಿದಿಹೆಯಾ?
ಅಮ್ಮನ ಕೇಳಿ ಬೆಣ್ಣೆಯ ಹಚ್ಚಿ
ಉಣ್ಣಿಸುವೆ ಕಾಯುವೆಯಾ?
ಹುಣ್ಣಿಮೆ ಚಂದಿರ ಮಾಮ
ಆಡಲು ಕರೆಯುವನು
ಬರುವೆಯ ಜೊತೆಗೆ ಗುಬ್ಬಿ ಗೆಳತಿ
ನನ್ನಪ್ಪಿಕೋ ಕರೆದೊಯ್ಯುವೆನು
ಕೇಶ ಮುಂಡನವಾದ ಬೇಸರದಲ್ಲಿರುವ ಅದಿತಿ ಪುಟಾಣಿಗೆ ಪ್ರೀತಿಯಿಂದ ವಿಶ್ವಾಸ್

ಸಿಹಿ ಹಂಚಲಾರ

ಸಿಹಿಯ ಉಣ್ಣದೆ ಇರುವವನು ಸಿಹಿಯ ಹಂಚಲೂ ಆರ

ಪ್ರಕ್ಷುಬ್ಧ

ಉದರದೊಳಗಡೆ ಸುಡುಸುಡು ದಹಿಸುವ ಅಗ್ನಿಪಿಂಡ
ಮಸ್ತಿಷ್ಕದಲಿ ಉರಿಯುರಿ ಲಾವಾಕಾಂಡ
ಅಣುಅಣುದಿ ಕಣಕಣದಿ ಹೂತಿಟ್ಟ ದುಗುಡ
ಹೊಸೆಹೊಸೆದು ಕಟ್ಟುತಿದೆ ಹೊಸತು ಬ್ರಹ್ಮಾಂಡ
ಅರಿ ಬಂದು ನಿಂತರೂ ಅರಿವಿಲ್ಲ ಈ ಸ್ಥಿತಿ
ಸಿದ್ದವಿಲ್ಲ ಈಟಿ ಗುರಾಣಿ ಬಿಲ್ಲು ಬತ್ತಳಿಕೆ ಕತ್ತಿ
ಪರುಶುರಾಮನ ಕೊಡಲಿಗೇಕೆ ಈ ದುರ್ಗತಿ
ಸಮರ ಸಂಕಲ್ಪ ತ್ಯೆಜಿಸಿದರೆ ಬರಿ ಪ್ರೀತಿ ಶಾಂತಿ
ಮನತೆರೆದು ಹೊರದಬ್ಬು ಈ ವ್ಯರ್ಥ ವೈಷಮ್ಯ
ಪ್ರಖರ ಪ್ರಭಾಕರನ ಉಷ್ಣ ಕಿರಣವೂ ಕ್ಷಮ್ಯ
ಹಿಡಿಶಾಪ ಹಾಕಿದರೆ ಅಪರಾಧವದು ಅಕ್ಷಮ್ಯ
ನಸುನಕ್ಕು ಕಂಡರೆ ಪರಪಂಚ ರಮ್ಯ
ಅನುಕ್ಷಣವೂ ಅನುರಣವು ಮತ್ಸರದ ಬೇಗುದಿ
ಧರೆ ಕುಸಿಯುತಿದೆ ಸಡಿಲ ಪಾಯ ತಳಹದಿ
ಅಶಾಂತ ಸಾಗರದಿ ಅಂಬಿಗರಿದ್ದರು ಕ್ರಿಸ್ತ, ಬುದ್ದ ಗಾಂಧಿ
ಎದೆ ಬಗೆದು ಕೀಳದಿದ್ದರೆ ಹಬ್ಬುವುದು ಈ ಘೋರ ವ್ಯಾಧಿ
-ವಿಶ್ವಾಸ್ ಭಾರದ್ವಾಜ್

ಇನ್ನು ಯಾಕೆ ಬಂದಿಲ್ಲವೋ?

ಅವಳು ಅದೇನನ್ನು ಮಣಮಣಿಸುತ್ತಿದ್ದಾಳೆ
ಗುನುಗುತ್ತಿದ್ದಾಳೋ, ಗೊಣಗುತ್ತಿದ್ದಾಳೋ..?
ಅಲ್ಲಿ ಯಾರದೋ ನಿರೀಕ್ಷೆಯ ತಪನೆಯಿದೆ
ಒಮ್ಮೊಮ್ಮೆ ಸರಿದ ಬಾಗಿಲ ನೆರಳ ಕಡೆಗೆ
ಮತ್ತೊಮ್ಮೆ ಅಂಗಳದಿ ಅಲುಗುವ ಗಿಡದ ಕಡೆಗೆ
ಮಗದೊಮ್ಮೆ ಕರ್ಣ ಕಾತುರ ಹೆಜ್ಜೆ ಸಪ್ಪಳದೆಡೆಗೆ
ಇನ್ನೂ ಯಾಕೆ ಬಂದಿಲ್ಲವೋ..?
ಬಾಳ ಬೆಳಗುವ ಭಾವ..!
********