Tuesday, 15 April 2014

ಸಮಾಧಿಯಿಲ್ಲದ ಸಾರ್ವಭೌಮ ಸರ್ದಾರ


ನಮ್ಮ ಎಲ್ಲಾ ಘತಿಸಿದ ನಾಯಕ ಶ್ರೇಷ್ಠರಿಗೆ ಸಮಾಧಿಯಿದೆ. ಎಕರೆಗಟ್ಟಲೆ ಸ್ಥಳದಲ್ಲಿ ನಿರ್ಮಿಸಲಾದ ಭವ್ಯ ಅಮೃತ ಶಿಲೆಯ ಗೊರಿಯಿದೆ. ಕಾಲಾಂತರದಲ್ಲಿ ಆ ಸಮಾದಿಗಳು ಯಾತ್ರಾ ಹಾಗೂ ಪ್ರವಾಸೋದ್ಯಮ ಸ್ಥಳಗಳಾಗಿವೆ. ಮಹಾತ್ಮ ಗಾಂಧೀ-ರಾಜ್ ಘಾಟ್, ನೆಹರು-ಶಾಂತಿ ವನ, ಇಂದಿರಾ ಗಾಂಧೀ-ಶಕ್ತಿ ಸ್ಥಳ, ಲಾಲ್ ಬಹಾದ್ದೂರ್ ಶಾಸ್ತ್ರಿ-ವಿಜಯ್ ಘಾಟ್, ಸ್ವತಂತ್ರ ಬಂದ ನಂತರ ನಮ್ಮ ನೇತಾಗಳಾದ ರಾಜೀವ್ ಗಾಂಧೀ-ವೀರಭೂಮಿ, ಗುಲ್ಜಾರಿಲಾಲ್ ನಂದ-ನರೇನ್ ಘಾಟ್, ಇವರುಗಳ ಮದ್ಯೆ ಒಂದು ತುಂಡು ನೆಲವೂ ಸಮಾಧಿ ಸ್ಥಳವಾಗಿ ಹೊಂದದ ಭಾರತದ ಉಕ್ಕಿನ ಮನುಷ್ಯ ಪಟೇಲರು. ಅವರನ್ನು ಅವರ ನೆನಪುಗಳನ್ನು ರಾಜಕೀಯವಾಗಿ ನೇಪಥ್ಯಕ್ಕೆ ಸರಿಸುವ ಕ್ರಮಬದ್ದ ಯೋಜನೆ ಕಾಂಗ್ರೆಸ್ಸ್ ಸಾಧಿಸಿದೆ. ಭಾರತ ಎಂದರೆ ಅದು ಕೇವಲ ನೆಹರು ವಂಶ ಮಾತ್ರ ಎನ್ನುವ ನಮ್ಮ ನಾಯಕರಿಗೆ ಪಟೇಲರ ಮೊನಚು ಮಾತುಗಳಾಗಲಿ, ಮಾತೃಭೂಮಿಯ ಭಗೆಗಿನ ದಿವ್ಯ ಕಾಳಜಿಯಾಗಲಿ ಅಥವಾ ನಿಸ್ವಾರ್ಥ ದೇಶ ಭಕ್ತಿಯಾಗಲಿ ಎಂದಿಗೆ ಅರ್ಥವಾದೀತು? ರಾಷ್ಟ್ರದ ವಿಲೀನಿಕರಣ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದಿದ್ದ ಪಟೇಲರ ಅವಿರತ ಶ್ರಮ ಹಾಗೂ ಕಾಶ್ಮೀರದ ಹರಿಸಿಂಗ್ ವಿಚಾರದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಸದಾ ಸ್ಮರಣೀಯ. ಭಾರತೀಯನಾದವನು ಎಂದಿಗೂ ಪಟೇಲರನ್ನು ಮರೆಯಭಾರದು. ಮತ್ತೆ ಹುಟ್ಟಿ ಬರಲಿ ಪಟೇಲರು ತಾಯಿ ಭಾರತಿಯ ಉದರದಲ್ಲಿ.
-ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)

(31 ಅಕ್ಟೋಬರ್ 2012ರಂದು ಬರೆದಿದ್ದ ಕಿರು ಲೇಖನ-ಸರ್ದಾರ್ ಪಟೇಲರ ವ್ಯೆಕ್ತಿತ್ವ ಹಾಗೂ ಬಿರುಸುತನ ಕೆಲವು ದಿನ ನನ್ನ ಇಂಟರೆಸ್ಟಿಂಗ್ ಸಬ್ಜೆಕ್ಟ್ ಆಗಿತ್ತು)

ನೀವೂ ಪಾಲುದಾರರೇ

ನೀವು ಆಸ್ಥೆಯಿಂದ ಆಶಿರ್ವದಿಸುತ್ತಿದ್ದಿರಲ್ಲ ಅದುವೇ ಕರ್ನಾಟಕದ ಅತಿ ದೊಡ್ಡ ಗಣಿ ಹಗರಣದ ರೂವಾರಿ. ಆತ ಹೊರಗಿದ್ದಾಗ ನಿಮ್ಮನ್ನು ಬಳ್ಳಾರಿಗೆ ಕರೆದು ಕರೆದು ಚಿನ್ನದ ಕಿರೀಟ ತೊಡಿಸಿ, ಕೈಗೆ ಛತ್ರಪತಿ ಶಿವಾಜಿಯ ಕಡಗ ನೀಡಿ, ಹಾರ ತುರಾಯಿಗಳ ಮಹಾಭಿನಂದನೆ ಗೈದ. ಪಾಪ ಗಣಿ ಕುಣಿಕೆ ಕೊರಳಿಗೆ ಸುತ್ತಿಕೊಂಡಿತು ಜೈಲು ಪಾಲಾದ, ಅನಂತರ ಒಮ್ಮೆಯಾದರೂ ಅವನ ಬಗ್ಗೆ ಚಕಾರ ಹೊರಡಿಸಿದೀರಾ? ಗಣಿ ಅಕ್ರಮದಲ್ಲಿ ಕೇವಲ ಜನಾರ್ಧನ ರೆಡ್ಡಿ ಮಾತ್ರವಲ್ಲ ನೀವೆಲ್ಲರೂ ಪಾಲುದಾರರೆ!
- ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)

{18 ಅಕ್ಟೋಬರ್ 2012ರಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕುರಿತಾಗಿ ಫೇಸ್‍ಬುಕ್‍ನಲ್ಲಿ ಟೀಕಿಸಿದ ಸಾಲು}

ಅಡಿಗ ಟ್ರಿಬ್ಯೂಟ್

ಕೋಟೆ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು.
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು.
ಆದವು ಅಂಜುವೆದೆ ನಮ್ಮದಲ್ಲ
ಸೋಲುಭಗೆ ವೀರನಿಗೆ ಸಲ್ಲ ಹೊಲ್ಲ
                                            

-ಡಾ ಮೊಗೇರಿ ಗೋಪಾಲ ಕೃಷ್ಣ ಅಡಿಗ
(15 ಅಕ್ಟೋಬರ್ 2012ರಂದು ಫೇಸ್‍ಬುಕ್ ಗೋಡೆಗೆ ಅಂಟಿಸಿದ ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು ಪದ್ಯದ ಪ್ಯಾರಾ-ನನ್ನನ್ನು ಅತಿಯಾಗಿ ಆಕರ್ಷಿಸಿದ ಚೈತನ್ಯಮಯ ಹಾಗೂ ವೀರರಸದ ಸಾಲುಗಳಿವು)

ಬ್ಲಾಗ್ ಪರಿಚಯ

ಬ್ಲಾಗ್ ಅಂತ ಸೃಷ್ಠಿ ಮಾಡಿ ಹಲವು ಕಾಲವೇ ಆಗಿ ಹೋಗಿತ್ತು. ಯಾಕೋ ಬ್ಲಾಗ್‍ನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಅಂತ ಅನ್ನಿಸಿತು. ಕೂಡಲೆ ಎಂದೋ ಗೀಚಿದ್ದ ಹಚ್ಚ ಹಳೆಯ ಒಂದೆರಡು ಕವಿತೆಗಳನ್ನು ಬ್ಲಾಗ್‍ನ ಬಾಯಿಗೆ ತುರುಕಿದೆ...ಈಗ ಮತ್ತೊಂದೊ ಐಡಿಯಾ ಬಂದಿದೆ..ಈ ವರೆಗೆ ಫೇಸ್‍ಬುಕ್‍ನಲ್ಲಿ ಬರೆದಿದ್ದ ಕೆಲವು ಅನಿಸಿಕೆಗಳನ್ನು ಯಥಾವತ್ತಾಗಿ ನನ್ನ `ಮಾಧ್ಯಮವಿಶ್ವ' (ಬ್ಲಾಗ್)ದಲ್ಲಿ ಕಾಪಿ ಮಾಡಲು ಯೋಚಿಸಿದೆ. ಅದನ್ನು ಇನ್ನು ಮುಂದೆ ಕಾರ್ಯರೂಪಕ್ಕೂ ತರುತ್ತಿದ್ದೇನೆ. ಅಂದ ಹಾಗೆ ಈ ಹಿಂದೆ ಫೇಸ್‍ಬುಕ್‍ನಲ್ಲಿ ಗೀಚಿದ್ದ ಅಣಕು ಕುಣುಕುಗಳನ್ನು ಆಯಾ ಡೇಟ್ ಸಹಿತ ಇಲ್ಲಿ ನಕಲು ಮಾಡುತ್ತೆನೆ.
-ವಿಪ್ರವಿಶ್ವತ್(ವಿಶ್ವಾಸ್ ಭಾರಧ್ವಾಜ್)

Friday, 28 March 2014

ಮರಣ ಸ್ವಪ್ನ



ಮರಣ ಸ್ವಪ್ನ:
ಸ್ವರ್ಗ ವಂಚಿತ ಶಾಪಗ್ರಸ್ಥ; ಪಾಪಗಳ ಹೊತ್ತ ತಪ್ಪಿತಸ್ಥ
ಸ್ವರ್ಗ ನರಕಗಳ ನಡುವಿನ ತ್ರಿಶಂಕು ಯಾತ್ರೆ
ಅತೋಭ್ರಷ್ಟ ತತೋ ಭ್ರಷ್ಟ; ಕಡು ಪಾಪಿ
ಪವಿತ್ರ ಪ್ರೇತಾತ್ಮವಾಗಲಿಚ್ಛಿಸುವವ
ರಣರಂಗದಿಂದ ಹಿಮ್ಮೆಟ್ಟಿದ ರಣಹೇಡಿ
ಮತ್ತೆ ಮರಳುವಾಸೆ ಮರಳಿ ಬಾರದ ಪ್ರಪಂಚಕ್ಕೆ
ಅಲ್ಲಿಂದಲೇ ಬಂದ ಶಾಶ್ವತದ ಮೂಲ ಮನೆಗೆ
ಬಂದವರೆಲ್ಲ ಮರು ಮಾತಿಲ್ಲದೆ ಹಿಂತಿರುಗುವಲ್ಲಿಗೆ
ಹತ್ಯೆಯಾದರೂ ಆತ್ಮ ಪುನೀತ…!
ನನ್ನ ಮೂಲ ಮನೆಯಲಿ ಕುಳಿತು ವೀಕ್ಷಿಸಿದರೆ,
ಸುದ್ದಿಗಳ ಪ್ರವಾಹದಲ್ಲಿ ನನ್ನ ಸಾವಿನ ವಿಧ್ಯಮಾನ-ದೂರದರ್ಶನದಿ
ಕೆಂಪುತುಟಿಯ ಆಡಿಸುತಾ ಲಲನೆ ಹೇಳಿದ ಶೋಕವಾರ್ತೆ
ನಾನು ಜನಪ್ರಿಯ, ಖ್ಯಾತ, ಮೇದಾವಿ…! ಹೌದೌದು
ನನ್ನ ಸಾವಿಗೆ ಹಲವು ಸಾವಿರ ಅಶೃತರ್ಪಣ
ನನ್ನ ಅನುಯಾಯಿಗಳ ಕಣ್ಣಲ್ಲಿ ದುಃಖದ ಪ್ರವಾಹ
ಉಮ್ಮಳಿಸಿ ಬರುವ ಅಳುವನ್ನು ಸೆರಗ ತುದಿಯಲಿ
ಒತ್ತಿ ಹಿಡಿವ ಮಾತೃ ಹೃದಯಿ ಅಮ್ಮಂದಿರು
ಮನಸಿನಾಳದಲ್ಲಿ ಹೆಪ್ಪುಗಟ್ಟಿರಬಹುದು ನೋವು
ಬಿಕ್ಕುವ ಧನಿಗಳ ಹಿಂದಿರುವ ವಿಷಾದಕ್ಕೆ ಕಾರಣ ನನ್ನ ಸಾವು
ನನ್ನ ಅಂತ್ಯಕ್ಕೂ ಈ ಮಂದಿ ಮರುಗುವರೇ…?
ನಾನು ಪಾಪಿ…!
ನನಗೆ ಈ ಮಟ್ಟಿನ ಅಭಿಮಾನಿಗಳಿದ್ದಾರಾ…?
ನಾನು ಗುರುತಿಸುವಲ್ಲಿ ಸೋತೆನೇ…?
ಇಷ್ಟಕ್ಕೂ ನನ್ನ ಆತ್ಮಹತ್ಯೆಗೆ ನಿಖರ ಕಾರಣವೇನು…?
ಬದುಕನೆದುರಿಸಲಾರದ ಹೇಡಿತನ…!
ಹೌದು ಜೀವನದ ಸವಾಲುಗಳಿಂದ ಪಲಾಯನವಾದ
ಯಾವುದೋ ಕ್ಯಾಮರ ಕಣ್ಣಲ್ಲಿ ಅಪ್ಪನ ಮುಖ
ಅವನು ಎಂದಿನಂತೆ ನಿರ್ಭಾವುಕ, ನಿರ್ಲಪ್ತ…..!
ಅಪ್ಪನ ಕಣ್ಣಲ್ಲಿ ನೀರಾಡುವುದಿಲ್ಲ;
ಜ್ವಾಲಾಮುಖಿಯ ಲಾವಾದಂತೆ ಒಳಗೆ ಕುದಿತ
ಆದರೆ ಹೆತ್ತವಳಾದ ಆ ಜೀವ…?
ಅದರ ಕಣ್ಣುಗಳಿಂದ ಧುಮ್ಮಿಕ್ಕುವ ಜಲಪಾತಕ್ಕೆ ತಡೆಯಿಲ್ಲ
ಸಾವಿಗಿಂತ ಪರ್ಯಾಯ ಇರಲಿಲ್ಲವೇ….?
ಮೊದಲ ಬಾರಿಗೆ ದುಡುಕಿನ ನಿರ್ಧಾರ ಕೆಡುಕೆನಿಸಿದೆ
ಆದರೆ ನಾನು ಮರಳಿ ಹೋಗದಷ್ಟು ದೂರ ಬಂದಾಯ್ತು
ಹಿಂದೆ ಹೋಗುವ ಮಾರ್ಗ…?
ಹುಡುಕಿದರೆ ಸಿಗಲಾರದು, ಅಡಿರಿದೆ ಕತ್ತಲು
ಪಶ್ಚಾತ್ತಾಪದ ಬೇಗುದಿ-
ಅಪ್ಪನ ತಣ್ಣಗಿನ ದುಃಖ, ಅಮ್ಮನ ಭೋರ್ಗರೆತ
ನನ್ನ ಹುಟ್ಟಿನ ಉದ್ದೇಶ, ಬದುಕಿದ್ದ ಅರ್ಥ
ಸಾವಿನ ಸಾರ್ಥಕ್ಯವೇನು…?
ಮೃತ್ಯು ದೇವತೆಗೆ ದೀರ್ಘದಂಡ ನಮಸ್ಕಾರ ಹಾಕಿದರೆ
ಬದುಕಿನ ದಾರಿಗೆ ಕರೆದೊಯ್ಯುವಳೇ…?
ನನಗೆ ಲೌಕಿಕ ಬದುಕು ಹಿಂತಿರುಗಿ ಬೇಕು
ನನಗೆ ಗತದ ಜೀವನ ಬೇಕು, ನನ್ನ ಜನ ಬೇಕು
ಅವರ ಸಾಂಗತ್ಯದ ಪ್ರೀತಿ ಬೇಕು
ಹಡೆದವಳ ಮಡಿಲಿನ ಬೆಚ್ಚಗಿನ ಬಿಸುಪು ಬೇಕು
ಪೋಷಕನ ಬಾಹುಗಳ ಅಪ್ಪುಗೆ ಬೇಕು
ಒಂದೇ ಸಮನೆ ಕಿರುಚಿದರೆ ಮೈದಡಿವಿ ಎಬ್ಬಿಸಿದ್ದು
ಮತ್ತದೇ ವಾತ್ಸಲ್ಯಮಯಿ ಜನನಿ ಆತಂಕದ ಕಂಗಳಿಂದ
-(ವಿಪ್ರವಿಶ್ವತ್)ವಿಶ್ವಾಸ್ ಭಾರದ್ವಾಜ್







Sunday, 9 March 2014

ಆತ್ಮ ಸಖಿ:

ಆತ್ಮ ಸಖಿ:
ಅವಳು ಉಪಮೆಗೆ ತಕ್ಕಂತ ಭೂಮಿ ತೂಕದವಳು
ಅವಳು ಜನನಿ, ವಿಶ್ವ ರಹಸ್ಯ ಹೊತ್ತ ಮಹಾಯೋನಿ
ಒಡಲಲಿ ಅಡಗಿಸಿಕೊಂಡ ಅಗ್ನಿದಿವ್ಯ
ಮೊಗದಿ ಅರೆಕ್ಷಣ ಮಾಸದ ನಸುನಗೆ
ಬಿದ್ದ ಪುರುಷನ ಕೈ ಹಿಡಿದೆತ್ತುವ ಪ್ರಕೃತಿ
ಎತ್ತಿದನಂತರ ಮುಂಗೈ ಸವರಿದ ಭರವಸೆ
ಒಂದು ಕಿರುನಗೆಯಲ್ಲಿ ಅನಂತ ಮಹತ್ವಾಕಾಂಕ್ಷೆ
ದಿಗ್‍ದಿಗಂತದೆತ್ತರಕೆ ಏರಿ ನಿಲ್ಲುವ ಭಾವದ ಮಾಳಿಗೆ
ವಿಶ್ವಾಸದ ಗೋಡೆಗೆ ನಂಬಿಕೆಯ ತಳಪಾಯ
ವಿಧ ವಿಧದ ಹಲವು ಬಗೆ ಬಣ್ಣ ಬಳಿದು
ರವಿ ಸತ್ತು ಮಲಗುವ ಪ್ರತಿ ಸಂಜೆಯಲೂ
ಮತ್ತೆ ಮತ್ತೆ ನಿರ್ಮಿಸುತ್ತಾಳೆ ಕನಸಿನ ಆಶಾ ಗೋಪುರ
ಸಂಸಾರದ ಹೆಬ್ಬಾಗಿಲಲ್ಲಿ ಪ್ರೀತಿಯ ಗಂಟೆ;
ಕಟ್ಟುವಳು ಅಭಿಸಾರಿಕೆ ಆಸ್ಥೆಯಿಂದ
ಅಲ್ಲಿ ಸ್ತಭ್ದವಾಗಬೇಕು ಜಗ; ಜೋರ್ಗಾಳಿ ಸಹ ಬೀಸದಂತೆ
ಗಂಟೆ ಢಣ್ ಎಂದಾಗ ಮಾತ್ರ ವಾಸ್ತವ
ಇಲ್ಲವಾದರೆ ಅಗಂತುಕ ಲೋಕದಲ್ಲಿ ಸುದೀರ್ಘ ಪಯಣ
ಜೊತೆಯಲ್ಲಿ ಹೆಗಲು ತಬ್ಬಿ ನಡೆವ ಯಾಮಿನಿ
ಅಂತರಂಗ ಆತ್ಮ ಸಖಿಯೊಂದಿಗೆ ಕಲ್ಪನಾ ವಿಲಾಸ
ವಾತ್ಸಲ್ಯದ ಘಮ ಘಮಸಿವ ಪಾಯಸ
ಮಮತೆಯು ಹಾಲಿನಲಿ ಬೇಯಿಸುವ ಪರಮಾನ್ನ
ಪಾಕಶಾಲೆಯಲಿ ಪರಿಣಿತೆ ಪರಿಪೂರ್ಣ ಗೃಹಿಣಿ; ಅನ್ನಪೂರ್ಣೆ
ಸಾಕು ಸಾಕೆಂದರೂ ಬಡಿಸುವ ಕೈ ಹಿಂದೆ ಸರಿಯದು
ಆದಿತ್ಯರು ಸೇವಿಸಿದ್ದ ಅಮೃತ ಅವಳ ಕೈ ಅಡುಗೆ
ಅಕ್ಕರೆಯ ಅಪ್ಪುಗೆಯ ಅವಳಿಗೆ ಅಮಿತ ಆನಂದ
ವಿಸ್ತಾರ ಪ್ರಪಂಚದ ಅಧಮ್ಯ ಚೈತನ್ಯ ಶಕ್ತಿಯ ಮೂಲ ಅವಳು
ಮೊಗೆದಷ್ಟೂ ಉಕ್ಕಿ ಹರಿವ ಅನಿರ್ವಚನೀಯ ನೆಮ್ಮದಿಯ ಚಿಲುಮೆ
ತನ್ನ ಚೌಕಟ್ಟಿನೊಳಗೆ ಬಂಧಿ ಅವಳು -
ಧರೆಗಿಳಿದ ಶಾಪಗ್ರಸ್ತ ಗಂಧರ್ವಕನ್ಯೆ
ಕೊನೆ ಮೊದಲಿಲ್ಲದ ನಿರ್ವಹಿಪಳು ನಿರಂತರ ಸೇವೆ
ಅವಳು ಎಲ್ಲರ ಮಾತೆ, ಭೂಮಿತೂಕದ ಕ್ಷಮೆಯಾ ಧರಿತ್ರಿ
ಚಿರಂಜೀವಿಸಲಿ ಸರ್ವತ್ರ ಸೌಭಾಗ್ಯವತಿಯಾಗಿ
ನಿತ್ಯ ಸುಮಂಗಲಿ ಸತಿಸಹಗಮನೆ
ತನ್ನದೇ ಅಸ್ಥಿತ್ವವ ಮರೆತು ಬಾಳುವ ತ್ಯಾಗಿ
ಸಂಕಟಗಳ ನುಂಗಿಕೊಂಡು ನರಳುವ
ನೋವುಗಳ ಮರೆಮಾಚಿ ನಗುವ
ಒಡಲಿನಲ್ಲಿ ಅಗ್ನಿಪರ್ವತದ ಲಾವಾರಸವಡಗಿಸಿ ನೀರವ ಮೌನ ಧರಿಸುವ
ಅವಳು ಶೀತಲ ವಾಹಿನಿಯಂತೆ
ಅನವರತ ಸರಳ ಶೋಭಿತ ಶೋಡಷಿ
                                              -ವಿಶ್ವಾಸ್ ಭಾರದ್ವಾಜ್
(ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕೇವಲ ಅವಳೆನ್ನುವ ಆತ್ಮಸಖಿಗೆ ಅರ್ಪಿಸಲು ಬರೆದಿದ್ದು)