Monday, 19 February 2018

ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿದ್ದರು ನವ್ಯ ಹಾಗೂ ನವೋದಯದ ಪ್ರಾತಿನಿಧಿಕ ಕವಿ, ಶತಮಾನದ ಕವಿ, ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಅಡಿಗರು:

ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿದ್ದರು ನವ್ಯ ಹಾಗೂ ನವೋದಯದ ಪ್ರಾತಿನಿಧಿಕ ಕವಿ, ಶತಮಾನದ ಕವಿ, ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಅಡಿಗರು:

ಕನ್ನಡವೆಂದರೇ ತಾಯಿಯೇ ದೇವರೇ
ನಾನೂ ನೀನು ಅವರು
ಜನಮನದೊಳಗುದಿ ಮಿಡಿತ ತುಡಿತಗಳ
ಪ್ರತಿಕೃತಿ ಗತಿ ನೂರಾರು

ಹೀಗಂತ ಕನ್ನಡತನವನ್ನು ತಮ್ಮದೇ ದಾಟಿಯಲ್ಲಿ ಬರೆದ ಕನ್ನಡದ ಶ್ರೇಷ್ಠ ಸಾರಸ್ವತ ರತ್ನ ನವ್ಯ ಹಾಗೂ ನವೋದಯ ಪಂಥಗಳ ಪ್ರಾತಿನಿಧಿಕ ಕವಿ ಪ್ರೊ. ಎಂ ಗೋಪಾಲಕೃಷ್ಣ ಅಡಿಗರು.  ಕನ್ನಡದ ಹೆಸರಾಂತ ಪತ್ರಕರ್ತ ಪಿ.ಲಂಕೇಶ್​ರಿಂದ “ಒಂದು ಶತಮಾನದ ಕಣ್ಣು ತೆರೆಸಿದ ಕವಿ” ಎಂದು ಬಣ್ಣಿಸಲ್ಪಟ್ಟ ಕವಿ ಅಡಿಗರು.. ಇಂದು ಮಹಾ ಕವಿ ಅಡಿಗರ ಜನ್ಮದಿನ, ಇದು ಅಡಿಗರ ಜನ್ಮಶತಮಾನೋತ್ಸವ ವರ್ಷ..

ಕುಂದಾಪುರದ ಮೊಗೇರಿ ಎನ್ನುವ ಹಳ್ಳಿಯಲ್ಲಿ ಯಕ್ಷಗಾನ ಬಯಲಾಟದ ಸಂಸ್ಕೃತಿ ಪರಂಪರೆಯ ವಾತಾವರಣದಲ್ಲಿ ಬೆಳೆದು ಬಂದ ಅಡಿಗರು 70, 80 ಹಾಗೂ 90ರ ದಶಕದಲ್ಲಿ ಕನ್ನಡದ ಸಾಕ್ಷಿ ಪ್ರಜ್ಞೆ ಎನಿಸಿದ ಮಹಾನ್ ಕವಿ. ಇಂಗ್ಲೀಷ್ ಪ್ರೊಫೆಸರ್​​ರಾಗಿ, ಕವಿಯಾಗಿ, ಅಂಕಣಕಾರರಾಗಿ, ಪತ್ರಕರ್ತರಾಗಿ, ಸಮಾಜವಾದಿ ಚಿಂತಕರಾಗಿ, ಲೋಹಿಯಾವಾದಿಯಾಗಿ ಹಾಗೂ ಕನ್ನಡದ ಘನ ವಿದ್ವಾಂಸರಾಗಿ ತಮ್ಮದೇ ಆದ ಪ್ರತ್ಯೇಕತೆಯನ್ನು ಗಳಿಸಿಕೊಂಡಿದ್ದಾರೆ.

60ರ ದಶಕದಲ್ಲೇ ನಿಸಿಂ ಎಕ್ಸಿಜಲ್ ಅನ್ನುವ ಚಿಂತಕ ಅಡಿಗರನ್ನು ಕನ್ನಡದಲ್ಲಿ ಬರೆಯುತ್ತಿರುವ 20ನೇ ಶತಮಾನದ ಅಂತರಾಷ್ಟ್ರೀಯ ಕವಿ ಎಂದು ಕರೆದರೇ, ಇನ್ನೂ ಕೆಲವು ಘನ ವಿದ್ವಾಂಸರು ಅಡಿಗರಿಗೆ ಅಂತರಾಷ್ಟ್ರೀಯ ಕವಿ ಎನ್ನುವ ಬಿರುದು ನೀಡಿದ್ದಾರೆ. ಅವರ ಕಟ್ಟುವೆವು ನಾವು ಪದ್ಯದ “ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ-ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು” ಎನ್ನುವ ಸಾಲುಗಳು ಬಿಸಿ ರಕ್ತದ ಯುವಕರ ನರ ನಾಡಿಗಳಿಗೆ ವಿದ್ಯುತ್ ಸಂಚಾರ ಹರಿಸುತ್ತವೆ..

ಕನ್ನಡದ ನವಪೀಳಿಗೆಯ ಸಾಹಿತಿಗಳಿಗೆ  ಮಾರ್ಗದರ್ಶಕರು:

ಕನ್ನಡದ ಬಹುತೇಕ ಸಾಹಿತ್ಯ ದಿಗ್ಗಜರಿಗೆ ಮಾರ್ಗದರ್ಶನ ನೀಡಿದ ಶ್ರೇಯ ಗೋಪಾಲಕೃಷ್ಣ ಅಡಿಗರಿಗೆ ಸಲ್ಲಬೇಕು. ಖ್ಯಾತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ ಯು.ಆರ್ ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕವಿ ಸುಮತೀಂದ್ರ ನಾಡಿಗ, ಹೆಚ್​.ಎಸ್​ ವೆಂಕಟೇಶಮೂರ್ತಿ, ಡಾ.ಲಕ್ಷ್ಮೀನಾರಾಯಣಭಟ್, ಕನ್ನಡದ ಖ್ಯಾತ ವಿಮರ್ಶಕರಾದ ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜ್, ಕೀರ್ತಿನಾಥ ಕುರ್ತಕೋಟಿ ಮುಂತಾದ ಸರಸ್ವತಿ ಪುತ್ರರತ್ನಗಳನ್ನು ತಿದ್ದಿ ತೀಡಿ ಬೆಳೆಸಿದ್ದೇ ಗೋಪಾಲಕೃಷ್ಣ ಅಡಿಗರು ಅನ್ನುವ ಮಾತು ಸಾಹಿತ್ಯ ವಲಯದಲ್ಲಿದೆ. ತಮ್ಮದೇ ಆದ ಮೊನಚಾದ ಶೈಲಿಯಲ್ಲಿ ಪದ್ಯ ಬರೆಯುತ್ತಿದ್ದ ಅಡಿಗರು ಓದುಗರ ಅಚ್ಚುಮೆಚ್ಚಿನ ಹಾಗೂ ನೆಚ್ಚಿನ ಕವಿಯಾಗಿದ್ದರು. ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೇ, ಯಾರಿಗೂ ಹೆದರದೇ ನಿರ್ಭೀತಿಯಿಂದ ನೇರವಾಗಿ ಹೇಳುವ ದಾಟಿ ಅಡಿಗರ ಪದ್ಯಗಳ ಅತಿ ಮುಖ್ಯ ಲಕ್ಷಣ. ಹೊಸ ಮಾರ್ಗವನ್ನು ಹುಟ್ಟುಹಾಕಿದರು. ಹಟದಿಂದ ಬರೆದರು ಬರೆದಿದ್ದನ್ನು ಸಮರ್ಥಿಸಿಕೊಂಡರೆ. ಬರೆದಂತೆ ನಿರ್ಭಿತವಾಗಿ ನಿರ್ಭೀಡೆಯಿಂದ ಬದುಕಿದರು..

ಬಾಲ್ಯದಲ್ಲೇ ಸಾಹಿತ್ಯ ಗೀಳು-ಓದುವ ಆಸೆ ಮುಳ್ಳಿನ ದಾರಿ:

ಅಡಿಗರು ತಮ್ಮ ಬಾಲ್ಯದಲ್ಲಿಯೇ ಅವನ ನೆನವು, ರಾಕಾಚಂದ್ರ, ಬಡತನದ ಭೂತಕಾಗಿ, ಟಿಪ್ಪುವೇ, ಅಳಗನಬ್ಬಿನ ಕಳವಳ, ಕರೆ, ಮೋಡ ಒಳತೋಟಿ ಮುಂತಾದ ಅತ್ಯದ್ಭುತ ಪ್ರಾಸಬದ್ಧ ಕವಿತೆಗಳನ್ನು ಬರೆದಿದ್ದರು. ಬಾಲ್ಯದಲ್ಲಿ ಅಂತರ್ಮುಖಿ ವ್ಯಕ್ತಿತ್ವ ಹೊಂದಿದ್ದ ಅಡಿಗರು ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಸಂಸ್ಕೃತಿಗೆ ಮಾರುಹೋಗಿದ್ದವರು. ಪುರೋಹಿತ ಮನೆತನದಲ್ಲಿ ಹುಟ್ಟಿದ ಅಡಿಗರು ತಮ್ಮ ಊರಿನ ರಮ್ಯ ಪರಿಸರ, ಮಹಾಸಾಗರದ ನೀರವ ಮೌನ ಹಾಗೂ ಭತ್ತದ ಗದ್ದೆಗಳು, ತೆಂಗಿನ ತೋಟಗಳ ವಾತಾವರಣದಲ್ಲಿ ತಮ್ಮ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆ ಕಂಡರು.

ಮಿಡಲ್​ಸ್ಕೂಲ್ ಹಾಗೂ ಹೈಸ್ಕೂಲ್ ಓದುವ ಅವಧಿಯಲ್ಲಿ ಕೈಗೆ ಸಿಕ್ಕಿದ್ದನ್ನು ಓದುತ್ತಿದ್ದ ಅವರು, ಅನೇಕ ವೇಳೆ ತಮ್ಮ ಸಮಯವನ್ನು ಓದಿದ್ದನ್ನು ಮನನ ಮಾಡಿಕೊಳ್ಳುವ ಹಾಗೂ ತಾರ್ಕಿಕವಾಗಿ ಅದನ್ನು ಅವಲೋಕಿಸುವ ಕಾರ್ಯದಲ್ಲಿ ಗಹನವಾಗಿ ತೊಡಗುತ್ತಿದ್ದರು. ಅಡಿಗರ ಮನೆಯಲ್ಲಿ ಎಲ್ಲರೂ ಸಂಸ್ಕೃತ ಹಾಗೂ ವೇದಗಳ ಕಲಿಕೆಗೆ ಮಹತ್ವ ಕೊಡುತ್ತಿದ್ದರೇ ಅಡಿಗರ ಮನಸಿದ್ದಿದ್ದು ಉನ್ನತ ವ್ಯಾಸಂಗ ಹಾಗೂ ಇಂಗ್ಲೀಷ್ ಸಾಹಿತ್ಯದ ಕಲಿಕೆ. ಹೀಗಾಗಿ ಹುಟ್ಟಿದೂರು ಬಿಟ್ಟು ಮೈಸೂರಿಗೆ ಬಂದ ಅಡಿಗರು ಮೇಲೆ ಆರ್ಥಿಕವಾಗಿ ಅತ್ಯಂತ ಕಷ್ಟದ ದಿನಗಳನ್ನು ದೂಡಿ, ವಾರಾನ್ನದ ಬಲದ ಮೇಲೆ ತಮ್ಮ ಪದವಿ ಹಾಗೂ ಸ್ನಾತಕೋತ್ತರ ಮುಗಿಸಿದರು.
 
ಶಿಕ್ಷಣ ಹಾಗೂ ಅಧ್ಯಾಪಕ ವೃತ್ತಿ:

ಅಡಿಗರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್​ ವಿಷಯದಲ್ಲಿ ಬಿ.ಎ ಆನರ್ಸ್​, 1942ರಲ್ಲಿ ನಾಗಪುರ ವಿಶ್ವವಿದ್ಯಾನಿಲಯದಲ್ಲಿ ಎಂಎ ಆನರ್ಸ್​ ಪದವಿ ಗಳಿಸಿದ್ದರು. ಬಳಿಕ 1952ರ ನಂತರ ಹೈಸ್ಕೂಲ್ ಅಧ್ಯಾಪಕರಾಗಿ, ಮೈಸೂರಿನ ಶಾರದಾ ವಿಲಾಸ ಕಾಲೇಜ್​ನಲ್ಲಿ, ಕುಮುಟಾದ ಕೆನರಾ ಕಾಲೇಜಿನಲ್ಲಿ, ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿದರು. ಸುಮಾರು 10 ವರ್ಷಗಳ ಕಾಲ ಇಂಗ್ಲೀಷ್ ರೀಡರ್ ಆಗಿಯೂ ಕಾರ್ಯ ನಿರ್ವಹಿಸಿದರು.  1962ರಲ್ಲಿ ಸಾಕ್ಷಿ ಅನ್ನುವ ಮಾಸ ಪತ್ರಿಕೆ ಹೊರತರುವ ಮೂಲಕ ಸಾಹಿತ್ಯ ಪತ್ರಿಕೋದ್ಯಮ ನಡೆಸಿದರು. ಸಾಗರದ ಲಾಲ್ ಬಹದ್ದೂರ್ ಕಾಲೇಜಿನಲ್ಲಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಡಿಗರು ಇಂಗ್ಲೀಷ್ ಉಪನ್ಯಾಸಕರಾಗಿ ಹಾಗೂ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಅಡಿಗರು ಸಾಗರದಲ್ಲಿ ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿಯೇ ಅದೇ ಕಾಲೇಜಿನಲ್ಲಿ ಚಂದ್ರಶೇಖರ್ ಕಂಬಾರರು ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಇನ್ನೊಬ್ಬ ಕನ್ನಡದ ಹೆಸರಾಂತ ವಿಚಾರವಂತರಾದ ಪ್ರೊ. ಜಿ.ಕೆ ಗೋವಿಂದ್​ರಾವ್ ಲೈಬ್ರರಿಯನ್ ಆಗಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದು ಇದೇ ಅವಧಿಯಲ್ಲಿ.

ಅಡಿಗರ ಕವಿ, ಕಾವ್ಯ ಸಮಗ್ರ ಪರಿಚಯ:

ಅಡಿಗರು ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಬತ್ತಲಾಗದ ಗಂಗೆ, ಮಾವೋ ಕವನಗಳು, ಇದನ್ನು ಬಯಸಿರಲಿಲ್ಲ, ಮೂಲಕ ಮಹಾಶಯರು, ಚಿಂತಾಮಣಿಯಲ್ಲಿ ಕಂಡ ಮುಖ, ಬಾ ಇತ್ತ ಇತ್ತ, ಸುವರ್ಣ ಪುತ್ಥಳಿ, ಅನುಬಂಧ-1 ಮುಂತಾದ ಹತ್ತು ಹಲವು ಸುಪ್ರಸಿದ್ಧ ಕವನ ಸಂಕಲಗಳನ್ನೂ ಆಕಾಶದೀಪ, ಅನಾಥೆ ಎನ್ನುವ ಕಾದಂಬರಿಗಳನ್ನೂ ಬರೆದಿದ್ದಾರೆ. ಅವರ 7 ದಶಕಗಳ ಸಾಹಿತ್ಯ ಕೃಷಿಯಲ್ಲಿ ಸುಮಾರು 12 ಕವನ ಸಂಕಲನಗಳು ಬಿಡುಗಡೆಯಾಗಿವೆ. ಜೊತೆಗೆ ಹುಲಿರಾಯ ಮತ್ತಿತರ ಕಥೆಗಳು, ಕಿಶೋರ ಕೃತ್ಯಗಳು, ಬೇರೆ ಬೇರೆ ಅವಧಿಯಲ್ಲಿ ಬರೆದ ಬಿಡಿ ಬಿಡಿ ಕಥೆಗಳ ಸಂಕಲನ ಹೊರತಂದಿದ್ದಾರೆ. ಮಣ್ಣಿನ ವಾಸನೆ, ವಿಚಾರಪಥ, ಕನ್ನಡ ಅಭಿಮಾನ, ನಮ್ಮ ಶಿಕ್ಷಣಕ್ಷೇತ್ರ ಮುಂತಾದ ಅನೇಕ ವಿಚಾರ ವಿಮರ್ಶೆಗಳೂ ಅಡಿಗರ ಪ್ರಖರ ಬರವಣಿಗೆಗೆ ಸಾಕ್ಷಿಯೆನಿಸಿವೆ. ಸುವರ್ಣಕೀಟ, ರೈತರ ಹುಡುಗಿ, ಜನತೆಯ ಶತ್ರು, ಭೂಗರ್ಭ ಯಾತ್ರೆ, ಹುಲ್ಲಿನ ದಳಗಳು, ಮುಕ್ತಾಫಲ, ಇತಿಹಾಸ ಚಕ್ರ, ಬನದ ಮಕ್ಕಳು, ಟೈಪೀ, ಕೆಂಪು ಅಕ್ಷರ, ನಾಲ್ಕು ಮಂದಿ ಗೆಳೆಯರ ಕಥೆ, ಕಾವ್ಯ ಜಗತ್ತು, ಕೆಸರಿನಿಂದ ಶಿಖರಕ್ಕೆ ಅನ್ನುವ ಅನುವಾದಿತ ಸಾಹಿತ್ಯದ ಜೊತೆಗೆ ಅವರ ಸಮಗ್ರ ಗದ್ಯವೂ ಪ್ರಕಟವಾಗಿದೆ. ಅವರ ಆಯ್ದ ಪ್ರಬಂಧಗಳು ಎರಡು ಸಂಚಿಕೆಯಲ್ಲಿ ಬಿಡುಗಡೆಗೊಂಡಿವೆ. ಅವರ ಆರಂಭದ ರಚನೆಗಳಾದ ಆರೂಡು ಸಮ್ಮಿಶ್ರ ಕಾವ್ಯವಾಗಿದ್ದರೇ, ನೆನಪಿನ ಗಣಿಯಿಂದ ಎನ್ನುವುದು ಅಡಿಗರ ಆತ್ಮಚರಿತ್ರೆ. ಐಬಿಹೆಚ್ ಪ್ರಕಾಶನ ಹಾಗೂ ಸಾಕ್ಷಿ ಪ್ರಕಾಶನಗಳು ಅವರ ಸಮಗ್ರ ಸಂಕಲನಗಳ ಕಾವ್ಯ ಹೊರತಂದಿವೆ. ಅಡಿಗರ ಬಹುತೇಕ ಪುಸ್ತಕಗಳಿಗೆ ಕನ್ನಡ ಸಾರಸ್ವತ ಲೋಕದ ಅತಿರಥ ಮಹಾರಥರುಗಳಾದ ದ.ರಾ ಬೇಂದ್ರೆ, ಪುತಿನ, ಯು.ಆರ್ ಅನಂತಮೂರ್ತಿ, ಎನ್​.ಎಸ್ ಲಕ್ಷ್ಮಿನಾರಾಯಣ ಭಟ್ಟ, ಕಿ.ರಂ ನಾಗರಾಜ್, ಪಿ.ಶ್ರೀನಿವಾಸ​ರಾವ್, ಸುಮತೀಂದ್ರ ನಾಡಿಗ​ರು ಮುನ್ನುಡಿ ಬರೆದಿದ್ದಾರೆ. 

ಅಡಿಗರ ಒಳತೋಟಿ ಕವಿತೆಗೆ ಬಿಎಂಶ್ರೀ ಸುವರ್ಣಪದಕ ಲಭಿಸಿತ್ತು. ಅವರ ಸಾಹಿತ್ಯ ಕೃಷಿಯ ಅನವರತ ಕಾರ್ಯಕ್ಕೆ ಗೌರವಸೂಚಕವಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವರ ವರ್ಧಮಾನ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ. ಇದಲ್ಲದೇ ಕುಮಾರಾನ್ ಆಸಾನ್, ವರ್ಧಮಾನ ಪ್ರಶಸ್ತಿ, ಕಬೀರ್ ಸಮ್ಮಾನ್ ಪುರಸ್ಕಾರ, ಮರಣೋತ್ತರ ಪಂಪ ಪ್ರಶಸ್ತಿಗಳು ಅಡಿಗರ ಸಾಹಿತ್ಯ ಸೇವೆಗೆ ಸಿಕ್ಕ ಅಮೂಲ್ಯ ಕಾಣಿಕೆ. 1979ರಲ್ಲಿ ಅಡಿಗರು ಧರ್ಮಸ್ಥಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
  
ಅಡಿಗರ ಸಾಹಿತ್ಯಗಳ ವಿಮರ್ಶೆಯ ಬಗ್ಗೆ ಹತ್ತು ಹಲವು ಪುಸ್ತಕಗಳು ರಚನೆಯಾಗಿವೆ. ರಾಮದಾಸ್​ರ ಭೂಮಿಗೀತ ಕಾವ್ಯಪ್ರವೇಶ, ಜಿ.ಹೆಚ್ ನಾಯಕ್ ಮತ್ತು ಹೆಚ್​.ಎಂ ಚೆನ್ನಯ್ಯರವರು ಬರೆದ ಸಂವೇದನೆ, ಡಾ.ಸುಮತೀಂದ್ರ ನಾಡಿಗರು ಬರೆದ ಅಡಿಗರ ಕಾವ್ಯ, ಡಾ.ಎನ್​ಎಸ್ ಲಕ್ಷ್ಮೀನಾರಾಯಣ ಭಟ್ಟರು ಬರೆದ ಕಾವ್ಯಶೋಧನ, ದೇಶಪಾಂಡೆ ಸುಬ್ಬರಾಯರು ಬರೆದ ಅನ್ವೇಷಣದ ಅಡಿಗರು, ಡಾ.ಯು.ಆರ್ ಅನಂತ​ಮೂರ್ತಿ ರಚಿಸಿದ ಸಂಸ್ಕೃತಿ ಮತ್ತು ಅಡಿಗ, ಬಿ.ವಿ ಕೆದಿಲಾಯ ವಿರಚಿತ ಗೋಪಾಲಕೃಷ್ಣ ಅಡಿಗ, ಲಕ್ಷ್ಮೀನಾರಾಯಣ ಭಟ್ಟರೇ ಬರೆದ ಮತ್ತೊಂದು ವಿಮರ್ಶಾಗ್ರಂಥ ಅನ್ಯ ಮುಂತಾದವು ಅಡಿಗರ ಕಾವ್ಯ ಪರಂಪರೆಯನ್ನು ಪೋಷಿಸುವ ಗ್ರಂಥಗಳು.

ಕಲಿತಿದ್ದು, ಕಲಿಸಿದ್ದು, ಓದಿದ್ದು,  ಸುತ್ತಿದ್ದು:

ಅಡಿಗರು ದೆಹಲಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್​ನ ಡೆಪ್ಯೂಟಿ ಡೈರೆಕ್ಟರ್​​ರಾಗಿ ಹಾಗೂ ಸಂಪಾದಕೀಯ ವಿಭಾಗದಲ್ಲಿ ಸುಮಾರು ಕಾಲ ಕೆಲಸ ಮಾಡಿದ್ದರು. ಸಿಮ್ಲಾದ ಇಂಡಿಯನ್​ ಇನ್ಸ್​​ಟಿಟ್ಯೂಟ್ ಆಫ್ ಅಡ್ವಾನ್ಸ್​ಡ್​ ಸ್ಟಡೀಸ್​ನ ವಿಸಿಟಿಂಗ್ ಪ್ರೊಫೇಸರ್​​ರಾಗಿ ಅಡಿಗರು ಕಾಣಿಸಿಕೊಂಡಿದ್ದು ಈ ದಶಕದಲ್ಲೇ. ನಂತರ ವಿಶ್ವಕವಿ ಸಮ್ಮೇಳನದಲ್ಲಿ ಭಾಗವಹಿಸಲು ಪ್ಯಾರಿಸ್ ಹಾಗೂ ಯುಗಸ್ಲೋವಿಯಾಗಳಿಗೆ ಭೇಟಿ ನೀಡಿ, ಅದಾದ ಬಳಿಕ ಅಮೇರಿಕಾ ಸಹ ಸಂದರ್ಶಿಸಿದರು. ಅಧ್ಯಾಪಕ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ ನಂತರ ಅಡಿಗರು ಎರಡನೇ ಬಾರಿ ಅಮೇರಿಕಾ ಭೇಟಿ ಮಾಡಿದರು. ಅಮೇರಿಕಾದಿಂದ ವಾಪಾಸು ಬಂದ ಕೆಲವೇ ದಿನಗಳಲ್ಲಿ ಅವರು ಪಾರ್ಶ್ವವಾಯು ಖಾಯಿಲೆಗೆ ತುತ್ತಾದರು. ಆದರೂ ತಮ್ಮ ಕಟ್ಟಕಡೆಯ ದಿನದವರೆಗೂ ಅಡಿಗರು ಬರವಣಿಗೆ ನಿಲ್ಲಿಸಲಿಲ್ಲ.

ಬಿಡದಂತೆ ಹಿಡಿದ ಸಮಾಜವಾದದ ಸೆಳೆತ :

ಅಡಿಗರಿಗೆ ಬಾಲ್ಯದಲ್ಲಿ ಹೇಗೆ ಗಾಂಧಿ ಹಾಗೂ ವಿವೇಕಾನಂದರ ವಿಚಾರಗಳು  ಆಕರ್ಷಿಸಿತ್ತೋ ಹಾಗೇ ಪ್ರಬುದ್ಧತೆಯ ಅವಧಿಯಲ್ಲಿ ಲೋಹಿಯಾವಾದ ಹಾಗೂ ಸಮಾಜವಾದ ಸೆಳೆದಿತ್ತು. ಕನ್ನಡದ ಧೀಮಂತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಅಡಿಗರ ಆತ್ಮೀಯ ಮಿತ್ರರಾಗಿದ್ದರು. ಕೋಣಂದೂರು ಲಿಂಗಪ್ಪರಂತಹ  ಸಮಾಜವಾದಿ ನಾಯಕರ ಒಡನಾಟವಿತ್ತು. ಸಾಗರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಸಂದರ್ಭದಲ್ಲಿ ಸಾಗರಕ್ಕೆ ಲೋಹಿಯಾ ಭೇಟಿ ನೀಡಿದ್ದಾಗ ಅಡಿಗರು ತಲೆಗೆ ಕೆಂಪು ಟೋಪಿ ಧರಿಸಿ ಲೋಹಿಯಾ ಭೇಟಿಗೆ ಹೋಗಿದ್ದರು. ಇದು ಮೂಲತಃ ಕಾಂಗ್ರೆಸ್ ಹಿನ್ನೆಲೆಯವರಾದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು ಕಮಿಟಿಯ ಅಧ್ಯಕ್ಷರಾದ ಕೆ.ಹೆಚ್ ಶ್ರೀನಿವಾಸ್​ರಿಗೆ ಅಸಹನೀಯ ಸಂಗತಿಯಾಗಿತ್ತು. ಅಡಿಗರು ಸಾಗರ ತೊರೆಯಲು ಇದು ಪ್ರಮುಖ ಕಾರಣ. 70ರ ದಶಕದಲ್ಲಿ ಜನಸಂಘದ ಲೋಕಸಭಾ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಡಿಗರು ಸೋಲಿನ ಕಹಿಯುಂಡಿದ್ದರು. ತಮ್ಮ ಅಮೇರಿಕಾ ಪ್ರವಾಸದಿಂದ ಹಿಂತಿರುಗಿ ಬಂದ ಅಡಿಗರು ಎರಡನೇ ಬಾರಿ ಸಮಾಜವಾದಿ ಪಕ್ಷದಿಂದ ವಿಧಾನಸಭೆ ಚುನಾವಣೆಗೂ ಸ್ಫರ್ಧಿಸಿ ಸೋಲನ್ನು ಅನುಭವಿಸಿದರು.

ಆದರೂ ಕೊನೆಯ ದಿನಗಳವರೆಗೂ ಸಮಾಜವಾದದ ಸೆಳೆತ ಅವರನ್ನು ಬಿಟ್ಟಿರಲಿಲ್ಲ. ಅವರು ತಮ್ಮ ಭೂಮಿಗೀತದಲ್ಲಿ “ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ ದಾರಿ ಸಾಗುವುದೆಂತೋ ಕಾಣಬೇಕು”  ಅನ್ನುವ ಮೂಲಕ ಅಂದಿನ ಸರ್ಕಾರವನ್ನು ನೇರಾಗಿ ಟೀಕಿಸಿದ್ದರು. ವ್ಯವಸ್ಥೆಯ ಲೋಪಗಳು ಅಡಿಗರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ಅವರು ಈ ಕ್ರಮವನ್ನು ಖಂಡಿಸಿ “ನನ್ನ ನಾಲೆಗೆ ನೀರು” ಅನ್ನುವ ಪದ್ಯ ಬರೆದಿದ್ದರು.

ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಸವಾಲು ಹಾಕಿ ಬಂದಿದ್ದರು:

ಅಡಿಗರಿಗೆ ಸಾತ್ವಿಕವಾದ ಅಹಂಕಾರವಿತ್ತು. ಅವರು ಯಾವತ್ತೂ ಯಾರಿಗೂ ದೇಹಿ ಅಂದವರಲ್ಲ. ಅವರು ಬರೆದಿದ್ದ ಪ್ರಾರ್ಥನಾ ಕವಿತೆಯಲ್ಲೂ ಇದನ್ನೇ ಉಲ್ಲೇಖಿಸಿ “ಪ್ರಭು, ನಾನು ಯಾರಿಗೂ ನಡು ಬಗ್ಗಿಸಿ ಡೊಗ್ಗು ಸಲಾಮು ಹಾಕಲಾರೆ” ಎಂದು ಬರೆದಿದ್ದರು. ಅವರ ಈ ಪದ್ಯವನ್ನು ಸ್ವತಃ ಅಡಿಗರೇ ದಸರಾ ಕವಿಗೋಷ್ಠಿಯಲ್ಲಿ ಓದಿದ್ದರು. ಬಳಿಕ ಈ ಪದ್ಯ ಆಕಾಶವಾಣಿಯಲ್ಲಿ ಪ್ರಸಾರಗೊಂಡಿದ್ದಲ್ಲದೇ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವೂ ಆಯಿತು. ಇದು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಪದ್ಯದಲ್ಲಿ ಅಶ್ಲೀಲತೆ ವಿಜೃಂಭಿಸುತ್ತಿದೆ, ಅಡಿಗರಿಗೆ ಸೂಕ್ತ ವಾಗ್ದಂಡನೆಯಾಗಬೇಕು ಎಂದು ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಯಾರೋ ದೂರು ನೀಡಿದ್ದರು. ಅದರಂತೆ ನಿಜಲಿಂಗಪ್ಪ ಅಡಿಗರಿಗೆ ಪತ್ರ ಬರೆದು ತುರ್ತಾಗಿ ಬಂದು ವಿವರಣೆ ನೀಡುವಂತೆ ಕೋರಿದ್ದರು. ಆದರೆ ಅಡಿಗರು ತಮಗನುಕೂಲವಾದ ದಿನ ಬಂದು ಕಾಣುವುದಾಗಿ ಪತ್ರ ಬರೆದಿದ್ದರು. ಅಷ್ಟೇ ಅಲ್ಲ ನಿಜಲಿಂಗಪ್ಪನವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಪದ್ಯದ ಅರ್ಥ ಕೇಳಿದಾಗ ಕೆಂಡಾಮಂಡಲವಾಗಿದ್ದರಂತೆ.  ನಿಮಗೆ ಪ್ರಾರ್ಥನ ಪದ್ಯದಲ್ಲಿ ಅಶ್ಲೀಲತೆ ಕಾಣಿಸಿದ್ದರೆ ಅದು ನಿಮ್ಮ ಬೌದ್ಧಿಕ ಸಾಮರ್ಥ್ಯದ ಕೊರತೆಯೇ ವಿನಃ ನನ್ನ ಪದ್ಯದ್ದಲ್ಲ. ನಿಮಗೆ ವಿವರಣೆ ಬೇಕಿದ್ದರೇ ಅನಂತಮೂರ್ತಿಯವರನ್ನೋ, ಪು.ತಿ ನರಸಿಂಹಾಚಾರ್​ರನ್ನೋ ಕೇಳಿ ಎಂದು ಸವಾಲು ಹಾಕಿದ್ದರು. ಇದು ಆಗಿನ ಸಂದರ್ಭದಲ್ಲಿ ಸಾಹಿತ್ಯಿಕ ಹಾಗೂ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ವಿದ್ಯಮಾನವಾಗಿತ್ತು.

ಅಡಿಗರು ಕನ್ನಡದಲ್ಲಿ ಬರೆಯುತ್ತಿದ್ದ ಅಂತರಾಷ್ಟ್ರೀಯ ಕವಿ:

ಅಡಿಗರು ಕನ್ನಡ ಸಾಹಿತ್ಯವನ್ನು ಅಕ್ಷರಶಃ ಆಳಿದ ಕವಿ. ಅವರಿಗೆ ಇಂಗ್ಲೀಷ್ ಪಾಂಡಿತ್ಯದ ಜೊತೆ ಫ್ರೆಂಚ್ ಹಾಗೂ ಇನ್ನಿತರೆ ವಿದೇಶಿ ಸಾಹಿತ್ಯ ಹಾಗೂ ರಂಗಭೂಮಿಯ ಪ್ರೀತಿಯಿತ್ತು. ಯುರೋಪ್​ನ ಸಾಹಿತ್ಯವನ್ನು ಅರಗಿಸಿಕೊಳ್ಳಬಲ್ಲ ಹಾಗೂ ಅರ್ಥ ಮಾಡಿಕೊಳ್ಳಬಲ್ಲ ಕೆಲವೇ ಬೆರಳಣಿಕೆ ಭಾರತೀಯರಲ್ಲಿ ಅಡಿಗರೂ ಒಬ್ಬರಾಗಿದ್ದರು. ಸಿಗ್ಮಂಡ್ ಫ್ರಾಯ್ಡ್​ನ ಮನಃಶಾಸ್ತ್ರವನ್ನು ಒದಿಕೊಂಡಿದ್ದ ಅಡಿಗರು ಸದಾ ಖಂಡತುಂಡವಾಗಿ ಮಾತನಾಡುವ ಸ್ವಭಾವದವರಾಗಿದ್ದರು. ಪಿ. ಲಂಕೇಶ್, ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ, ಎಂ.ಪಿ ಪ್ರಕಾಶ್, ನಜೀರ್ ಸಾಬ್ ರಂತಹ ಪ್ರಗತಿ ರಂಗದ ಗೆಳೆಯರು ಅಡಿಗರನ್ನು ಗುರುಗಳೆಂದೇ ಸಂಭೋದಿಸುತ್ತಿದ್ದರು. ಅಂತಹ ಧೀಮಂತಿಕೆಯ ಕವಿ ಗೋಪಾಲಕೃಷ್ಣ ಅಡಿಗರು 1992ರಲ್ಲಿ ನಿಧನ ಹೊಂದಿದರು. ಅವರ ಯಾವ ಮೋಹನ ಮುರಳಿ ಕರೆಯಿತೋ, ಅಳುವ ಕಡಲಲಿ ತೇಲಿ ಬರುತಲಿದೆ, ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ, ಮೌನ ತಬ್ಬಿತು ನೆಲವ ಮುಂತಾದ ಅನೇಕ ಭಾವಗೀತೆಗಳು ಕನ್ನಡಿಗರ ಮನಸಿನಲ್ಲಿ ಶಾಶ್ವತ ಕಂಪನ್ನು ಬೀರುತ್ತಲೇ ಇವೆ..

-ವಿಭಾ
***

ಅಹಂಕಾರ ಇಳಿದು, ಕವಿದ ಮಂಕು ಸರಿದರೆ ಬದುಕು; ಇಲ್ಲವಾದ್ರೆ ಇಂಕಾ-ಮಾಯನ್ ನಾಗರೀಕತೆಗಳಂತೆ ಸರ್ವನಾಶ:

ಜಲಕ್ಷಾಮದ ಭೀಕರತೆಗೆ ನಲುಗ್ತಿದೆ ಕಗ್ಗತ್ತಲ ಖಂಡದ ನಗರ.. ವಿಶ್ವದ 11 ಪ್ರಮುಖ ಪಟ್ಟಣಗಳಿಗೂ ಕಾದಿದೆ ಜಲ ಗಂಡಾಂತರ.. ಬಂದೇ ಬಿಡ್ತಾ ಸ್ವಾರ್ಥಿ ಮಾನವನ ಅಭಿವೃದ್ಧಿಯ ನಾಗಾಲೋಟಕ್ಕೆ ಬೆಲೆ ತೆರುವ ಸಮಯ?.. ಜೀವಜಲದ ಬರದಿಂದ ತತ್ತರಿಸಲಿದೆಯಂತೆ ರಂಗ್​ರಂಗೀನ್​ ನಗರಗಳು.. 

ಮನುಷ್ಯ ತನ್ನ ಬದುಕಿಗಾಗಿ ತನ್ನ ಮೂಲಮನೆಯನ್ನು ನಾಶ ಮಾಡ್ತಿದ್ದಾನೆ.. ಆದ್ರೆ ಅದೇ ಮನುಷ್ಯ ಎಷ್ಟೇ ಬುದ್ದಿವಂತನಾದ್ರೂ ಪ್ರಕೃತಿಯ ಮುಂದೆ ಅವನ ಸವಾಲು ನಡೆಯೋದಿಲ್ಲ ಅನ್ನೋದು ಅನೇಕ ಬಾರಿ ಸಾಭೀತಾಗಿದೆ.. ಈಗ ಮತ್ತೊಮ್ಮೆ ಅಂತದ್ದೇ ಒಂದು ಮುನ್ಸೂಚನೆಯನ್ನು ಪ್ರಕೃತಿ ಕೊಟ್ಟಿದೆ.. ಬುದ್ದಿವಂತ ಮಾನವ ಕಟ್ಟಿಕೊಂಡ ಐಶಾರಾಮಿ ನಗರಗಳಿಗೆ ಜಲಕ್ಷಾಮದ ಎಚ್ಚರಿಕೆ ನೀಡಿದೆ ಜಗತ್ತಿನ ಖ್ಯಾತ ಮಾಧ್ಯಮ ಸಂಸ್ಥೆ ಬಿಬಿಸಿ..

ಭೂಮಿಯ ಮೇಲೆ ಶೇ 70ರಷ್ಟು ನೀರಿದ್ದರೂ ಭೂವಾಸಿಗಳಿಗೆ ಕುಡಿಯಲು ಹಾಗೂ ಬದುಕಲು ಲಭ್ಯವಿರುವ ಶುದ್ಧ ಜೀವಜಲದ ಪ್ರಮಾಣ ಕೇವಲ ಶೇ 3ರಷ್ಟು ಮಾತ್ರ.. ಪ್ರಪಂಚದ ಜನಸಂಖ್ಯೆ 650 ಕೋಟಿ ದಾಟಿದೆ.. 2014ರಲ್ಲಿ ನಡೆಸಲಾದ ಸರ್ವೇ ಒಂದರ ಪ್ರಕಾರ 500 ದೊಡ್ಡ ನಗರಗಳಲ್ಲಿ ನಾಲ್ಕರಲ್ಲಿ ಒಂದು ನಗರ ಅತೀವ ನೀರಿನ ಕೊರತೆಯ ಒತ್ತಡ ಎದುರಿಸುತ್ತಿದೆ ಅನ್ನುವ ಆತಂಕಕಾರಿ ಸಂಗತಿ ಬಯಲಾಗಿತ್ತು.. ಅರಣ್ಯನಾಶ, ಪ್ರಕೃತಿಯ ಮೇಲಿನ ದೌರ್ಜನ್ಯ, ಜಲಮೂಲಗಳ ಮಾಲಿನ್ಯ, ಹೆಚ್ಚುತ್ತಿರುವ ಉಷ್ಣತೆ, ಹಿಮಕರಗಿ ಸಾಗರ ಸೇರುತ್ತಿರುವುದು, ಕಡಲ್ಕೊರೆತ, ಸಮುದ್ರದ ಮಟ್ಟ ಅನಾಹುತಕಾರಿ ಏರಿಕೆ ಕಾಣುತ್ತಿರುವುದು ಇವೆಲ್ಲದರ ಪರಿಣಾಮವಾಗಿ ಶುದ್ಧ ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆ ಉಂಟಾಗ್ತಿದೆ..
  
ಜಗತ್ತನ್ನೇ ಬೆಚ್ಚಿ ಬೀಳಿಸಿದೆ ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನ ತೀವ್ರ ಜಲಕ್ಷಾಮ.. ಮುಂಬರುವ ವರ್ಷಗಳಲ್ಲಿ ಇದೇ ರೀತಿ ತೀವ್ರ ಜಲಕ್ಷಾಮ ತಲೆದೋರಬಹುದಾದ 11 ಮೇಜರ್ ಸಿಟಿಗಳನ್ನು ಗುರುತಿಸಿ ಕಾರಣ ಸಹಿತ ವರದಿ ಮಾಡಿದೆ ಖ್ಯಾತ ಸುದ್ದಿ ಮಾಧ್ಯಮ ಬಿಬಿಸಿ..

ಡಬ್ಲ್ಯೂ.ಹೆಚ್​.ಓ ವರದಿಯಂತೆ ಸುಮಾರು 850 ಮಿಲಿಯನ್ ಮಂದಿ ಭವಿಷ್ಯದಲ್ಲಿ ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಬಡಿದಾಡಬೇಕಾದ ಸ್ಥಿತಿ ಎದುರಾಗುತ್ತದೆ.. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಹಾಗೂ ಜಲಮೂಲಗಳ ಮೇಲಿನ ಮಾನವ ದೌರ್ಜನ್ಯ ಇಡೀ ಮನುಕುಲದ ಭವಿಷ್ಯವನ್ನೇ ಅಪಾಯದಂಚಿಗೆ ತಂದು ನಿಲ್ಲಿಸಿದೆ..   

ಭೂಮಿಯಲ್ಲಿ ಕುಡಿಯುವ ನೀರಿನ ಅಭಾವ ತಲೆದೂರಿದ ಮೊದಲ ಪಟ್ಟಣ ಕೇಪ್​ಟೌನ್.. ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್​ಬರ್ಗ್ ನಂತರದ ಪ್ರಸಿದ್ಧ ಕರಾವಳಿ ನಗರಿ ಈ ಕೇಪ್​ಟೌನ್.. ಇಲ್ಲಿ ಏಕಾಏಕಿ ಸಂಭವಿಸಿದ ಬರ ಹಾಗೂ ಜಲಕ್ಷಾಮ, ಪ್ರಪಂಚದ ಪರಿಣಿತ ಪರಿಸರ ತಜ್ಞರ ನಿದ್ದೆ ಹಾಗೂ ನೆಮ್ಮದಿ ಎರಡನ್ನೂ ಭಂಗಮಾಡಿದೆ.. ಪ್ರಪಂಚದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಆಫ್ರಿಕಾ ಖಂಡದ ಭೂಭಾಗದಲ್ಲಿ ನೀರಿನ ಅಭಾವದಿಂದ ಜನ ನರಳುತ್ತಾರೆ ಅಂದರೆ ಸೋಜಿಗವಾಗುತ್ತೆ, ಆದ್ರೂ ಇದು ವಾಸ್ತವದ ಕಹಿ ಸತ್ಯ.. ಕೇಪ್​ಟೌನ್​ಗೆ ಸಾಲಿಗೆ ಸೇರಲು ಅಭಿವೃದ್ಧಿ ಹೊಂದಿರುವ ಹಾಗೂ ಅಭಿವೃದ್ದಿ ಹೊಂದಲು ಹೊರಟ ರಾಷ್ಟ್ರಗಳ ಕೆಲವು ಪ್ರಮುಖ ಪಟ್ಟಣಗಳು ತುದಿಗಾಲಿನಲ್ಲಿ ನಿಂತಿವೆ.. ಇನ್ನೇನು ಕೆಲವೇ ವರ್ಷಗಳಲ್ಲಿ ಈ ನಗರಗಳಲ್ಲೂ ವಾಟರ್ ರನ್ನಿಂಗ್ ಔಟ್ ಆದರೂ ಆಶ್ಚರ್ಯವೇನಿಲ್ಲ..     

ಆಲ್ಫಾ ಗ್ಲೋಬಲ್ ಸಿಟಿ, ಬ್ರಿಜಿಲ್​ನ ವಾಣಿಜ್ಯ ರಾಜಧಾನಿ ಅಂತೆಲ್ಲಾ ಕರೆಸಿಕೊಳ್ಳುವ ಸಾವೋ ಪೌಲೋ ನಗರ, ಶೀಘ್ರದಲ್ಲೇ ತೀವ್ರ ಜಲಕ್ಷಾಮಕ್ಕೆ ತುತ್ತಾಗಬೇಕಿರುವ ಮೊತ್ತಮೊದಲ ಪಟ್ಟಣ ಅನ್ನುವ ಹಣೆಪಟ್ಟಿ ಹೊತ್ತಿದೆ.. 2015ರಲ್ಲೇ ಇದರ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಶೇ4ಕ್ಕೆ ಕುಸಿದಿತ್ತು.. ಸಾವೋ ಪೌಲೋನಲ್ಲಿ ಸುಮಾರು 21.7 ಮಿಲಿಯನ್ ನಿವಾಸಿಗಳು ಈಗಲೇ ನೀರಿಗಾಗಿ ಪರದಾಡುತ್ತಿದ್ದಾರೆ. ಪ್ರತಿ 20 ದಿನಕ್ಕೊಮ್ಮೆ ಮುನ್ಸಿಪಾಲಿಟಿಯಿಯಿಂದ ನೀರು ಬಿಡಲಾಗ್ತಿದೆ.. ನೀರಿನ ಟ್ಯಾಂಕರ್​ಗಳ ಲೂಟಿ ತಡೆಯಲು ಪೊಲೀಸರ ಸರ್ಪಗಾವಲು ಇದೆ..  2014ರಿಂದ 17ರವರೆಗೆ ಸತತ 3 ವರ್ಷ ಎದುರಾದ ತೀವ್ರ ಬರ ಇಲ್ಲಿನ ನೀರಿನ ಕೊರತೆಗೆ ಕಾರಣ ಅಂತ ಯುಎನ್ ಹೇಳಿದೆ.. ಆದ್ರೆ ಅಸಲು ಕಾರಣ ಬೆಳೆದು ನಿಂತ ನಗರದ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಸಮಸ್ಯೆ ಅನ್ನುತ್ತವೆ ಸ್ಥಳೀಯ ಸುದ್ದಿ ಮೂಲಗಳು.. ಕಾರಣ ಏನೇ ಇರಲಿ, ಸಾವೋ ಪೌಲೋ ಅತ್ಯಂತ ಅಪಾಯದಲ್ಲಿದೆ ಅನ್ನುವುದಂತೂ ನಿಜ.. 

ಏಷ್ಯಾದ ಎರಡು ಬಲಾಢ್ಯ ಆರ್ಥಿಕ ಶಕ್ತಿಗಳಾದ ಭಾರತ ಹಾಗೂ ಚೀನಾ ಒಂದೇ ಮಾದರಿಯ ಸಮಸ್ಯೆ ಎದುರಿಸುತ್ತಿವೆ.. ಚೀನಾದಂತೆ ಭಾರತದ ಬಹುತೇಕ ಪ್ರದೇಶಗಳಲ್ಲಿ ಶೇ 85ರಷ್ಟು ನೀರು ಕೃಷಿಗೆ ಹಾಗೂ ಕೈಗಾರಿಕೆಗಳಿಗೆ ಬಳಕೆಯಾಗ್ತಿದೆ.. ಇನ್ನು ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ ಕುಡಿಯುವ ಜಲಮೂಲಗಳು ವಿಷಮಿಶ್ರಿತಗೊಳ್ತಿವೆ.. ಬಿಬಿಸಿ ವರದಿ ಮಾಡಿರುವಂತೆ ಜಲಕ್ಷಾಮದ ಅತ್ಯಂತ ಅಪಾಯದಲ್ಲಿರುವ ಎರಡನೇ ಮುಖ್ಯ ನಗರ ನಮ್ಮ ಬೆಂಗಳೂರು.. ಭಾರತದ ಸಿಲಿಕಾನ್ ವ್ಯಾಲಿ, ಐಟಿ-ಬಿಟಿ ರಾಜಧಾನಿ, ಗಾರ್ಡನ್ ಸಿಟಿ ಎಂಬಿತ್ಯಾದಿ ಉಪಮೆಗಳಿರುವ ಬೆಂಗಳೂರಿಗೂ ಅತೀವ ನೀರಿನ ಅಭಾವದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಅಂತ ಬಿಬಿಸಿ ಹೇಳಿದೆ.. ಆದ್ರೆ ನಮ್ಮ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.. 

2030ರವರೆಗೂ ಬೆಂಗಳೂರಿನ ಜನರ ನೀರಿನ ಸಮಸ್ಯೆ ದೂರ ಮಾಡಲು ಜಲಮಂಡಳಿಯ ಬಳಿ ಯೋಜನೆಗಳಿವೆ.. ಬೆಂಗಳೂರು ಸುತ್ತಮುತ್ತಲ ಜಲಾಶಯಗಳ ಪುನಶ್ಚೇತನ, ಎತ್ತಿನಹೊಳೆ ಹಾಗೂ ಶರಾವತಿಯ ನೀರನ್ನು ರಾಜಧಾನಿಗೆ ತರಿಸಲಾಗುವುದು ಅನ್ನುವ ಭರವಸೆಯನ್ನು ನಗರಾಡಳಿತ ನೀಡಿದೆ.. ಅದೆಷ್ಟೇ ಜನಸಂಖ್ಯೆ ಹೆಚ್ಚಾದರೂ ಕುಡಿಯುವ ನೀರಿನ ಪೂರೈಕೆಗೆ ಯೋಜನೆ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.. ಆದ್ರೂ ಬೆಂಗಳೂರಿನಲ್ಲಿರುವ ಅಳಿದುಳಿದಿರುವ ಕೆರೆಗಳನ್ನು ಮಾಲಿನ್ಯದಿಂದ ಮುಕ್ತಗೊಳಿಸಿ ರಕ್ಷಿಸದಿದ್ರೆ ಬೆಂಗಳೂರಿನ ಗತಿ ಮುಂದೊಂದು ದಿನ ಕೇಪ್​ಟೌನ್​ನಂತಾಗುವುದ್ರಲ್ಲಿ ಅನುಮಾನವಿಲ್ಲ..  

ಅತಿ ಹೆಚ್ಚು ಶುದ್ದ ಕುಡಿಯುವ ನೀರಿನ ಮೂಲ ಹೊಂದಿದ್ರೂ ರಷ್ಯಾ ಸಹ ಜಲಕ್ಷಾಮದ ಭೀತಿಯಿಂದ ಹೊರತಾಗಿಲ್ಲ.. ಏಷ್ಯಾದಲ್ಲೇ ಅತಿ ಹೆಚ್ಚು ಶುದ್ದ ನೀರಿನ ಮೂಲ ಹೊಂದಿದ್ರೂ ಚೀನಾದ ನಗರಕ್ಕೆ ಜಲಕಂಟಕ ತಪ್ಪಿಲ್ಲ.. ಮಹಾನದಿ ನೈಲ್ ತೀರದಲ್ಲಿದ್ದರೂ ಈಜಿಪ್ಟ್ ನಾಗರೀಕತೆ ನೀರಿನ ಬರದ ಸಂಕಷ್ಟದಲ್ಲಿದೆ.. ಹಾಗಿದ್ರೆ ಇದಕ್ಕೆಲ್ಲಾ ಕಾರಣವೇನು ಗೊತ್ತಾ? 

ವಿಶ್ವ ಸಂಸ್ಥೆಯ ಸಂಶೋಧನೆಯೊಂದರ ಅನ್ವಯ ನೀರಿನ ಭದ್ರತೆಯ ವಿಚಾರದಲ್ಲಿ ಈವರೆಗೆ ನಡೆದ ಸಂಶೋಧನೆಯಂತೆ ಒಬ್ಬ ವ್ಯಕ್ತಿಗೆ ಒಂದು ವರ್ಷಕ್ಕೆ ಸುಮಾರು 1000 ಲೀಟರ್ ಶುದ್ಧ ಕುಡಿಯುವ ನೀರಿನ ಅಗತ್ಯವಿದೆ.. ಆದ್ರೆ 2014ರಲ್ಲಿ ನಡೆದ ಸರ್ವೇ ಪ್ರಕಾರ ಚೀನಾದ ಬೀಜಿಂಗ್​ನಲ್ಲಿ ಕೇವಲ ಒಬ್ಬ ವ್ಯಕ್ತಿಗೆ ವಾರ್ಷಿಕ 145 ಕ್ಯುಬಿಕ್ ಮೀಟರ್ ಶುದ್ಧ ನೀರು ಮಾತ್ರ ಲಭ್ಯವಿತ್ತು.. ಚೀನಾ ಜಗತ್ತಿನ ಜನಸಂಖ್ಯೆಯಲ್ಲಿ ಶೇ 20ರಷ್ಟು ಪಾಲು ಹೊಂದಿದೆ ಆದ್ರೆ ಪ್ರಪಂಚದ ಶುದ್ಧ ಕುಡಿಯುವ ನೀರಿನಲ್ಲಿ ಶೇ 7ರಷ್ಟು ಪಾಲು ಹೊಂದಿದೆ.. ಕೊಲಂಬಿಯಾ ವಿಶ್ವವಿದ್ಯಾನಿಲಯ ಅಧ್ಯಯನಗಳ ಪ್ರಕಾರ ಚೀನಾದ ಜಲಮೂಲಗಳು 2000ರಿಂದ 2009ರವರೆಗೆ ಶೇ 13ರಷ್ಟು ಕುಸಿತ ಕಂಡಿವೆ.. ಬೀಜಿಂಗ್ ಈ ನಿಟ್ಟಿನಲ್ಲಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಶೇ 40ರಷ್ಟು ಬೀಜಿಂಗ್​ನ ಮೇಲ್ಮೈ ನೀರು ಮಲಿನಗೊಂಡಿದ್ದರೆ, ಬೀಜಿಂಗ್ ಪಟ್ಟಣದ ಜನಸಾಂಧ್ರತೆ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಲೇ ಇದೆ..

ಚೀನಾದ ಕೈಗಾರಿಕೆ ಹಾಗೂ ಕೃಷಿ ಕ್ರಾಂತಿಯ ನೇರ ಪರಿಣಾಮ ಅಲ್ಲಿನ ಶುದ್ದ ಜಲಮೂಲಗಳ ಮೇಲಾಗಿದೆ.. ಹೀಗಾಗಿ ಸದ್ಯದಲ್ಲಿಯೇ ಬೀಜಿಂಗ್​ನಲ್ಲಿ ತೀವ್ರ ಜನಕ್ಷಾಮ ತಲೆದೋರಲಿದೆ ಅಂತ ಬಿಬಿಸಿ ಭವಿಷ್ಯ ನುಡಿದಿದೆ.. 

ಪ್ರಪಂಚದ ನಾಗರೀಕತೆಯ ಉಗಮದಿಂದಲೂ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ವಿಶ್ವದ ಪ್ರಮುಖ ಮಹಾನದಿ ನೈಲ್.. ಈಜಿಪ್ಟ್ ನಾಗರೀಕತೆ ಉಗಮವಾಗಿದ್ದೇ ಈ ನೈಲ್ ನದಿಯ ತೀರದಲ್ಲಿ.. ಶೇ 97ರಷ್ಟು ಈಜಿಪ್ಟ್​ನ ನೀರಿನ ಅವಶ್ಯಕತೆಗಳನ್ನು ಪೂರೈಸುವ ನೈಲ್ ನದಿಯನ್ನೇ ಈಜಿಪ್ಟ್​ನ ಕೈಗಾರಿಕೆ ಹಾಗೂ ಕೃಷಿ ತ್ಯಾಜ್ಯಗಳ ವಿಸರ್ಜನೆಗೆ ಬಳಸಿಕೊಳ್ಳಲಾಗಿದೆ.. ಹೀಗಾಗಿ ನೈಲ್ ನದಿ ನಮ್ಮ ಗಂಗೆಯಷ್ಟೇ ಮಲಿನಗೊಂಡಿದೆ.. ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿಯಲ್ಲಿ ನೈಲ್ ನೀರು ಕುಡಿದು ದೇಹಾರೋಗ್ಯ ಕೆಡಿಸಿಕೊಂಡು ಸಾವಿಗೆ ಹತ್ತಿರ ಆಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗ್ತಿದೆ ಎನ್ನುವ ಭೀತಿಯ ವಿಚಾರ ಬಹಿರಂಗಪಡಿಸಲಾಗಿದೆ.. 2015ರ ಸುಮಾರಿಗೆ ನೈಲ್ ನದಿ ಸಂಪೋರ್ಣ ವಿಷಕಾರಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.. ಇದರ ನೇರ ಪರಿಣಾಮವೆಂಬಂತೆ ಅತ್ಯಂತ ಶೀಘ್ರದಲ್ಲಿಯೇ ಜಗತ್ಪ್ರಸಿದ್ಧ ಕೈರೋ ಪಟ್ಟಣ ನೀರಿನ ಬರದಿಂದ ತತ್ತರಿಸಲಿದೆ ಎಂದು ಬಿಬಿಸಿ ಹೇಳಿದೆ.. 

ವಿಶ್ವದ ಉಳಿದ ಸಮುದ್ರ ತೀರದಲ್ಲಿರುವ ಪಟ್ಟಣಗಳಂತೆ ಇಂಡೋನೇಷ್ಯಾದ ರಾಜಧಾನಿ ಜಕಾರ್ಥಕ್ಕೂ ಎದುರಾಗಿರುವ ಸಮಸ್ಯೆ, ಏರುತ್ತಿರುವ ಸಮುದ್ರ ಮಟ್ಟ ಹಾಗೂ ಕಡಲ್ಕೊರೆತ.. ಆದ್ರೆ ಜಕಾರ್ಥದಲ್ಲಿ ಇನ್ನೊಂದು ಸಮಸ್ಯೆ ಇದೆ.. ಜಕಾರ್ಥದ ಅರ್ಧಕ್ಕೂ ಹೆಚ್ಚು ಅಂದರೆ ಸುಮಾರು 10 ಮಿಲಿಯನ್ ನಿವಾಸಿಗಳು ಕಡಿವಾಣವಿಲ್ಲದಂತೆ ಬೋರ್​ವೆಲ್​ಗಳನ್ನು ಕೊರೆದು ಅಂತರ್ಜಲವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.. ಇದ್ರಿಂದ ಜಕಾರ್ಥದ ಜಲಮೂಲಗಳು ಸಂಪೂರ್ಣವಾಗಿ ಖಾಲಿಯಾಗುತ್ತಿವೆ, ಅಂತರ್ಜಲದ ಮಟ್ಟ ತೀವ್ರ ಕುಸಿತ ಕಂಡಿದೆ.. ವಿಶ್ವಬ್ಯಾಂಕ್​ ಪರಿಣಿತರು ಅಂದಾಜಿಸಿರುವಂತೆ ಈಗಾಗಲೆ ಜಕಾರ್ಥದ ಶೇ40ರಷ್ಟು ಭೂಮಿ ಸಮುದ್ರಮಟ್ಟಕ್ಕಿಂತ ಕೆಳಗಿದೆ.. ಇದು ಭವಿಷ್ಯದಲ್ಲಿ ಅಪಾಯಕ್ಕೆ ಆಹ್ವಾನ ನೀಡುವುದ್ರಲ್ಲಿ ಸಂದೇಹವಿಲ್ಲ.. 

ಇಡೀ ಜಗತ್ತಿನ ಕಾಲು ಭಾಗ ಶುದ್ದ ಕುಡಿಯುವ ನೀರಿನ ಮೂಲ ಹೊಂದಿರುವ ರಷ್ಯಾ, ಸೋವಿಯತ್ ಯೂನಿಯನ್ ಕಾಲಘಟ್ಟದ ಕೈಗಾರಿಕಾ ಕ್ರಾಂತಿಯ ಕಾರಣ ಜಲಮಾಲಿನ್ಯಕ್ಕೆ ತುತ್ತಾಗಿದೆ.. ಹೀಗಾಗಿ ಶೇ. 70ರಷ್ಟು ಮೇಲ್ಮೈ ನೀರಿನ ಮೇಲೆ ಅವಲಮಭಿತವಾಗಿರುವ ಮಾಸ್ಕೋ ಮುಂಬರುವ ವರ್ಷಗಳಲ್ಲಿ ಜಲಕ್ಷಾಮದ ಅಪಾಯದಲ್ಲಿದೆ.. ಶೇ35ರಿಂದ ಶೇ 60ರಷ್ಟು ಮಾಸ್ಕೋದ ಜಲಮೂಲಗಳು ನೈರ್ಮಲ್ಯದ ಮಾನದಂಡವನ್ನು ತೃಪ್ತಿಪಡಿಸುವಂತಿಲ್ಲ ಅನ್ನುವ ಅಂಶವನ್ನು ಮಾಸ್ಕೋದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.. 

ಟರ್ಕಿಯ ರಾಜಧಾನಿ ಇಸ್ತಾಂಬುಲ್​ ಸಹ ಅಧಿಕ ನೀರಿನ ಅಭಾವ ಎದುರಿಸುತ್ತಿರುವ ಪಟ್ಟಣಗಳ ಪಟ್ಟಿಯಲ್ಲಿದೆ.. ಇಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲಾಗದೇ ಇರುವುದೇ ಜಲಕ್ಷಾಮಕ್ಕೆ ಕಾರಣವಾಗಬಹುದು ಅಂತ ತಜ್ಞರು ಅಭಿಪ್ರಾಯಪಡ್ತಿದ್ದಾರೆ.. ಇಲ್ಲಿನ ಜೀವಂತ ಸರೋವರ ಕಳೆದ 10 ತಿಂಗಳಿನಿಂದ ಬರಡುಬಿದ್ದಿದೆ.. ಜಲಾಶಯಗಳು ಹಾಗೂ ಜಲಮೂಲಗಳು 2014ರಲ್ಲೇ ಶೇ 30ರಷ್ಟು ಜಲನಷ್ಟ ಅನುಭವಿಸಿದ್ದವು.. ಇಸ್ತಂಬುಲ್​ನಲ್ಲಿ ವಾಸವಿರುವ ಸುಮಾರು 14 ಮಿಲಿಯನ್ ನಿವಾಸಿಗಳು ಮುಂಬರುವ ವರ್ಷಗಳಲ್ಲಿ ಧಾರುಣ ನೀರಿನ ಬರ ಎದುರಿಸಬೇಕಾಗಬಹುದು ಅಂತ ಬಿಬಿಸಿಯ ವರದಿ ಮುನ್ಸೂಚನೆ ನೀಡಿದೆ.. 

ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿ ಅಂತ ಕರೆಸಿಕೊಂಡಿರುವ ಅಮೇರಿಕಾ, ಜಗತ್ತನ್ನೇ ವಸಾಹತು ಮಾಡಿಕೊಳ್ಳಲು ಹೊರಟಿದ್ದ ಆಂಗ್ಲರ ನಾಡು ಬ್ರಿಟನ್ ಹಾಗೂ ಬುದ್ದಿವಂತರು ಹಾಗೂ ಶ್ರಮಜೀವಿಗಳ ಭೂಮಿ ಜಪಾನ್ ಸಹ ಜಲಕ್ಷಾಮದ ಅಪಾಯದಲ್ಲಿವೆ.. ಮೆಕ್ಸಿಕೋ, ಟೋಕಿಯೋ ಹಾಗೂ ಮಿಯಾಮಿ ನಗರಗಳಲ್ಲೂ ಮುಂಬರುವ ವರ್ಷಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರತ್ತಂತೆ.. 

ನೀರಿನ ಕೊರತೆಯ ಒತ್ತಡ ಮೆಕ್ಸಿಕನ್ನರ ರಾಜಧಾನಿ ಮೆಕ್ಸಿಕೋದಲ್ಲಿನ 21 ಮಿಲಿಯನ್ ನಾಗರೀಕರಿಗೆ ಇದೇನು ಹೊಸತಲ್ಲ.. ಈ ರೀತಿಯ ಅನೇಕ ಸಂದರ್ಭಗಳನ್ನು ಮೆಕ್ಸಿಕನ್ನರು ಎದುರಿಸಿ ಅನುಭವಿಸಿದ್ದಾರೆ.. ಇಲ್ಲಿ ಮನೆಗಳ ನಳದಲ್ಲಿ ನೀರು ಬರುವುದು ಕೆಲವೇ ಗಂಟೆಗಳು ಮಾತ್ರ.. ನಿರಂತರ 24 ಗಂಟೆಗಳ ನೀರಿನ ವ್ಯವಸ್ಥೆ ಮೆಕ್ಸಿಕನ್ನರಿಗೆ ಕನಸಿನ ಮಾತು.. ಮೆಕ್ಸಿಕೋ ನಗರಕ್ಕೆ ಶೇ 40ರಷ್ಟು ನೀರು ಪೂರೈಕೆಯಾಗುವುದೇ ದೂರದ ಜಲಮೂಲಗಳಿಂದ.. ಆದ್ರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ನೀರಿನ ಸೋರಿಕೆ ತಡೆಗಟ್ಟದೇ ಇರುವುದು ಹಾಗೂ ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಇಲ್ಲದೇ ಇರುವುದೇ ಇಲ್ಲಿ ಪುನಃ ಪುನಃ ಜಲಕ್ಷಾಮ ತಲೆದರಲು ಕಾರಣ.. ಬಳಕೆಯಾದ ನೀರನ್ನು ಶುದ್ಧೀಕರಿಸಿ ಪುನರ್ಬಳಕೆಗೆ ಮಾಡಿಕೊಳ್ಳಬೇಕು ಅನ್ನುವ ಯೋಚನೆಯೇ ಮೆಕ್ಸಿಕನ್ನರಿಗೆ ಇಲ್ಲ..  

ಬ್ರಿಟನ್ನರ ಅಹಂಕಾರದ ಕಳಶ ಲಂಡನ್​ ಸಹ ಜಲಕ್ಷಾಮದ ಭೀತಿಯ ಕಣ್ಗಾವಲಿನಲ್ಲೇ ಇದೆ.. ಇಲ್ಲಿ ವಾರ್ಷಿಕ ಮಳೆಯಾಗುವ ಪ್ರಮಾಣ ಕೇವಲ 600 ಮಿಲಿಮೀಟರ್.. ಆದ್ರೆ ಲಂಡನ್​ನ ಪ್ರಮುಖ ಕುಡಿಯುವ ನೀರಿನ ಮೂಲಗಳು ಥೇಮ್ಸ್ ಹಾಗೂ ಲಿಯಾ ನದಿಗಳು.. ಗ್ರೇಟರ್ ಲಂಡನ್ ಪ್ರಾಧಿಕಾರದ ಪ್ರಕಾರ 2025ಕ್ಕೆ ಲಂಡನ್​ನಲ್ಲಿ ಶುದ್ದ ನೀರಿನ ಅಭಾವದ ಸಮಸ್ಯೆ ಶುರುವಾಗುತ್ತದೆ; 2040ಕ್ಕೆ ಜಲಕ್ಷಾಮದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ..  

ಜಪಾನ್​ನ ಟೋಕಿಯೋ ಕೂಡಾ ನೀರಿನ ಅಭಾವಕ್ಕೆ ತುತ್ತಗಲಿರುವ ಬಿಬಿಸಿ ಎಚ್ಚರಿಕೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.. ಟೋಕಿಯೋದಲ್ಲಿ ಮಳೆಯಾಗುವುದೇ ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ.. ಆದರೆ ಅಷ್ಟೇ ನೀರನ್ನು ಸಮರ್ಥವಾಗಿ ಸಂಗ್ರಹಿಸಿಟ್ಟುಕೊಂಡು ಬಳಸುವ ಬುದ್ದಿವಂತಿಕೆ ಟೋಕಿಯನ್ನರಿಗಿದೆ.. ಟೋಕಿಯೋದ 30 ಮಿಲಿಯನ್ ನಿವಾಸಿಗಳಲ್ಲಿ ಶೇ 70ರಷ್ಟು ಜನ ಮೇಲ್ಮೈ ಜಲಮೂಲಗಳಾದ ನದಿ, ಸರೋವರ ಹಾಗೂ ಹಿಮದ ಅವಲಂಭನೆಯಲ್ಲಿದ್ದಾರೆ.. ಈಗ ಪೈಪ್​ಲೈನ್ ಯೋಜನೆಯ ಮೂಲಕವೂ ಶೇ3ರಷ್ಟು ನೀರಿನ ಸೋರಿಕೆ ತಡೆಗಟ್ಟಲು ಯೋಜನೆ ರೂಪಿಸಲಾಗಿದೆ.. ಆದರೂ ಟೋಕಿಯೋ ಜನರಿಗೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎನ್ನುವ ಸೂಚನೆಯಂತೂ ಬಿಬಿಸಿ ಕೊಟ್ಟಿದೆ.. 

ಯುನೈಟೆಡ್ ಸ್ಟೇಟ್ಸ್​ನ ಪ್ರಮುಖ 5 ರಾಜ್ಯಗಳ ಪೈಕಿ, ವರ್ಷದಲ್ಲಿ ಅತ್ಯಧಿಕ ಮಳೆ ಬೀಳುವ ರಾಜ್ಯ ಫ್ಲೋರಿಡಾ.. ಆಶ್ಚರ್ಯವಾದ್ರೂ ಇದು ಸತ್ಯ; ಫ್ಲೋರಿಡಾದ ಮಿಯಾಮಿ ನಗರದಲ್ಲಿ ಜಲಕ್ಷಾಮ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.. 20ನೇ ಶತಮಾನದ ಮೊದಲೇ ಇಲ್ಲಿನ ಒಳಚರಂಡಿ ವ್ಯವಸ್ಥೆಯ ಯೋಜನೆ ಅನಿರೀಕ್ಷಿತ ಫಲಿತಾಂಶ ನೀಡಿತ್ತು.. ಅಟ್ಲಾಂಟಿಕ್ ಮಹಾಸಾಗರದ ಕಲುಷಿತ ನೀರು ಮಿಯಾಮಿಯ ಶುದ್ಧ ಜಲಮೂಲಗಳನ್ನು ಮಾಲಿನ್ಯಗೊಳಿಸಿತ್ತು.. ಅಮೇರಿಕದ ಇತರೆ ಭಾಗಗಳಂತೆ ಮಿಯಾಮಿಯಲ್ಲೂ ಏರುತ್ತಿರುವ ಸಮುದ್ರ ಮಟ್ಟ ಹಾಗೂ ಅಂತರ್ಜಲ ಮಾಲಿನ್ಯಗಳು ತೀವ್ರ ಸಮಸ್ಯೆ ಸೃಷ್ಟಿಸುತ್ತಿವೆ.. ಇದು ಇಂದು ನಿನ್ನೆಯ ಕಥೆಯಲ್ಲ.. 1930ರಿಂದ ಈಚೆಗೆ ಹಲವು ದಶಕಗಳಿಂದ ಮಿಯಾಮಿ ನಗರ ಇಂತಹ ಸಮಸ್ಯೆಗಳ ನಡುವೆಯೇ ಬದುಕುತ್ತಿದೆ.. ಹೀಗಾಗಿ ಮಿಯಾಮಿಯ ಭವಿಷ್ಯವೂ ಡೋಲಾಯಮಾನ ಸ್ಥಿಯಲ್ಲಿದೆ..  

ಯುನೈಟೆಡ್ ನೇಷನ್ಸ್​ನ ಪರಿಣಿತರು ಅಂದಾಜಿಸಿರುವ ಹಾಗೆ 2030ರಲ್ಲಿ ಶೇ 40ರಷ್ಟು ಶುದ್ಧ ಜೀವಜಲ ಜಾಗತಿಕ ಬೇಡಿಕೆ ಹೆಚ್ಚಾಗಲಿದೆ.. ಇದಕ್ಕೆ ನೇರವಾಗಿ ಕಾರಣವಾಗಿರೋದು ಜನಸಂಖ್ಯಾ ಸ್ಫೋಟ, ತಾಪಮಾನ ಏರಿಕೆ ಹಾಗೂ ವಾತಾವರಣದಲ್ಲಿ ನಿರಂತರವಾಗಿ ಆಗುತ್ತಿರುವ ಅನಾಹುತಕಾರಿ ಬದಲಾವಣೆ.. ಇಷ್ಟಕ್ಕೆಲ್ಲಾ ಕಾರಣವಾಗಿರುವ ಪಾಪಿ ಮನುಷ್ಯನ ದುರಾಸೆ ಹಾಗೂ ಸ್ವಾರ್ಥಕ್ಕೊಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೇ.. 

ಇಷ್ಟಕ್ಕೆಲ್ಲಾ ಕಾರಣ ನಮ್ಮ ದುರಾಸೆ, ಅಭಿವೃದ್ಧಿ ಹೊಂದಬೇಕು ನಿಜ.. ಆದ್ರೆ ಆ ಅಭಿವೃದ್ಧಿ ಸಕಾರಾತ್ಮಕವಾಗಿ, ಧನಾತ್ಮಕವಾಗಿ ಸುಸ್ಥಿರತೆಯನ್ನು ಪೋಷಿಸುವಂತದ್ದಾಗಿರಬೇಕು.. ಅದು ಬಿಟ್ಟು ಉದ್ದಾರಾಗುವ ಭರಾಟೆಯ ನಾಗಾಲೋಟದಲ್ಲಿ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನೇ ಹಾಳುಗೆಡವಿದ ನಮ್ಮನ್ನು ಪ್ರಕೃತಿಯ ಮುನಿಸು ಸುಡದೇ ಬಿಡುವುದುಂಟಾ? ಇನ್ನಾದ್ರೂ ನಮ್ಮ ಅಹಂಕಾರ ಇಳಿದು, ಕವಿದಿರುವ ಮಂಕು ಸರಿದು ಪ್ರಕೃತಿಯನ್ನು ಉಳಿಸಿಕೊಂಡ್ರೆ ಬದುಕು.. ಇಲ್ಲವಾದ್ರೆ ಇಂಕಾ, ಮಾಯನ್, ಬ್ಯಾಬಿಲೋನ್, ಇನ್ನಿತರೆ ನಾಗರೀಕತೆಗಳಂತೆ ನಾವೂ ಸರ್ವನಾಶವಾಗಿ ಹೋಗುವ ದಿನಗಳು ದೂರವೇನಿಲ್ಲ.. 

-ವಿಭಾ (ವಿಶ್ವಾಸ್ ಭಾರದ್ವಾಜ್)
***