Saturday, 22 November 2014

ಸಮ್ಮತವೇ?

ಈ ಕ್ಷಣ ಸದಾ ಸ್ತಬ್ಧವಾಗಿಬಿಡಲಿ ಸಖಿ
ಇಲ್ಲಿ ನಿನ್ನೊಂದಿಗಿನ ನನ್ನ ದೀರ್ಘ ಸಂಭಾಷಣೆಯಿದೆ
ಉಸುರಿಗೆ ಉಸಿರು ತಾಕುವ ಸನಿಹವಿದೆ
ನಾಸಿಕ ಪುಟಗಳಿಗೆ ಮುದ ನೀಡುವ ನಿನ್ನ ದೇಹ ಗಂಧದ ಘಮವಿದೆ
ಬೆರಳ ಬೆಸೆದ ಅನಿರ್ವಚನೀಯ ಸ್ಪರ್ಷ ಸೌಖ್ಯವಿದೆ
ಅರೆಗಣ್ಣಿನ ಕುಡಿನೋಟದ ಸೊಗಸಿದೆ
ಅವರ್ಣನೀಯ ಅನಂತ ದಿಗಂತದಷ್ಟು ವಿಸ್ತಾರ ಭಾವವಿದೆ
ಬದುಕಿನ ಕಟ್ಟ ಕಡೆಯ ಮಜಲಿನವರೆಗೂ
ಮರೆಯಲಾರದ ದಿವ್ಯ ಈ ಚಣವನ್ನು ಮತ್ತೆ ಮತ್ತೆ ರಿಂಗಣಿಸಿ ದೃಶ್ಯಕಾವ್ಯ ಸೃಷ್ಟಿಸುವೆ ಒಪ್ಪಿಗೆಯೇ
ವಾಸ್ತವದ ಹೊಣೆಯ ಮರೆತು ಲಾಸ್ಯದಲ್ಲಿ ವಿಹರಿಸುವೆ ಸಮ್ಮತವೇ

ನಮ್ ಕಡೆ ಬೈಗುಳ ಹೀಗೆ!

"ನಮ್ಮೂರಿನ ಬೈಗುಳ ಹೀಗ್ ಹೀಗೆ..."
"ಹೌದಾ ನಮ್ಮೂರಲ್ಲಿ ಹೀಗೆ ಬಯ್ತಾರೆ.."
"ಓಹ್! ನಮ್ ಕಡೆ ಬೈಗುಳ ಹೀಗಿರುತ್ತೆ.."

ಅಸಭ್ಯವಲ್ಲದ ಬೈಗುಳಗಳ ಸಂಸ್ಕ್ರತಿ ನೆನಪು ಮಾಡಿಕೊಂಡೆವು ಮೊನ್ನೆ ಭಾನುವಾರದ ನ್ಯೂಸ್ ಡೆಸ್ಕ್ನ ವಿರಾಮದಲ್ಲಿ, ನಾನು, ಪ್ರಶಾಂತ್, ತ್ರಿವೇಣಿ..
ಬ್ಯಾವರ್ಸಿ ಅನ್ನೂ ಬೈಗುಳದ ಬಗ್ಗೆ ತುಳುನಾಡಿನಲ್ಲಿ ಇರೋ ಮಹತ್ವದ ಬಗ್ಗೆ ಕೊಂಚ ಚರ್ಚೆ ಆಯ್ತು..
ಮುಂಡೇಕುರ್ದೆ, ನಿನ್ ಹೊಂಡಕ್ ಹಾಕ, ನಿನ್ ಹುಲಿ ಹಿಡಿಯಾ ಮುಂತಾದ ಮಲೆನಾಡಿನ ಆಗುಂಬೆ ಸೀಮೆಯ ಬೈಗುಳಗಳ ಬಗ್ಗೆ ಹೇಳ್ಕಂಡು ನಕ್ವಿ...
ಆದ್ರೆ ಮತ್ತೆ ಗ್ರೇಟ್ ಬೈಗುಳ ಅನ್ನೋ ಸ್ಥಾನ ಸಿಕ್ಕಿದ್ದು ಮಾತ್ರ ಸುನಿಲ್ ಶಿರಸಂಗಿ ಸರ್ ಒಂದ್ ಸಲ ನಂಗೆ ಬಯ್ದಿದ್ದ "ಹೋಗಿ ಎಲ್ಲಾರೂ ಉಪ್ಪಿನಕಾಯಿ ಜಾಡಿ ಮಾರಿ ಬರ್ರಿ" ಅನ್ನೋ ಪರಮಾರ್ಥಿಕ ಬೈಗುಳಕ್ಕೆ
(ದನ ಮೇಯ್ಸಕ್ಕೆ ಹೋಗು, ಕತ್ತೆ ಕಾಯಕ್ಕೆ ಹೋಗು ಅಂತ ಸುನಿಲ್ ಸರ್ ಬಯ್ದಿದ್ರೆ ಹೆಚ್ಚು ಫೀಲ್ ಆಗ್ತಿರಲಿಲ್ಲ ಆದ್ರೆ ಉಪ್ಪಿನಕಾಯಿ ಮಾರಿ ಬಾ ಹೋಗು ಅಂದಿದ್ದು ಮಾತ್ರ,, ಅಬ್ಬಬ್ಬಾ ಸಿಕ್ಕಾಪಟ್ಟೆ ಅವಮಾನ ಆಗಿಬಿಡ್ತು..)

ಉಪ್ಪಿನಕಾಯಿ ಮಾರಿ ಬಾ ಹೋಗು ಅಂತ ಡಿಫರೆಂಟ್ ಆಗಿ ಬಯ್ದ ಸುನಿಲ್ ಸರ್ಗೆ ಕೃತಜ್ಞತೆಯಿಂದ ಈ ಸಾಲುಗಳ ಅರ್ಪಣೆ..
-ವಿಶ್ವಾಸ್ ಭಾರದ್ವಾಜ್

ಬೆಳಕ ಪರಾಕು

ಬೆಳಕ ಪರಾಕು:
ಕತ್ತಲ ಪರಿಷೆಯಲ್ಲಿ ಮಿಂದೆದ್ದ ರಜನಿ-
ಕಳೆದು ಕಾಯುತ್ತಿದೆ ಆ ದಿವ್ಯ ಮಹೂರ್ತಕ್ಕೆ
ಪಡುವಣದಲ್ಲೂ ಪಡಮೂಡತ್ತದೆ ಆ ಭವ್ಯ ವೈಭವ
ಪೂರ್ವದಲ್ಲಿ ಪೂರ್ವವನೇ ಮರೆಸುವ ರಣಕಹಳೆ
ಚಿಮ್ಮಿ ಬರುತಲಿದೆ ಬೆಳಕಿನಪಾರ ಸೈನ್ಯ
ತಮಗಣದ ವಿರುದ್ಧ ಸಮರ ಸಾರಿಹರು ಆದಿತ್ಯನ ಯೋಧರು
ಮೊದಲು ಸೂಜಿ ಮೊನೆಯಲ್ಲಿ ಇರಿದ ತೇಜೋ ಕಿರಣ
ಅವ್ಯಾಹತವಾಗಿ ಸುರಿಯತೊಡಗಿದೆ ಕೊಳಗಗಟ್ಟಲೇ
ನೋಡನೋಡುತ್ತಲೇ ಜಮೆಯಾದ ಹಳ್ಳ-ಕೊಳ್ಳ ನದಿ, ಜರಿ ತೊರೆಗಳ
ಸಹಸ್ರಪಟ್ಟು ಬೆಳಕಿನ ಮಹಾಸಾಗರದೊಡಲು
ಮೊಗೆದಷ್ಟೂ ಕಡಿಮೆ, ಬಗೆದಷ್ಟೂ ಪ್ರಕಾಶ
ಹೊಳೆ ಹೊಳೆದು ದೇದಿಪ್ಯಮಾನವಾಗಿ ಪ್ರಜ್ವಲಿಸಿ
ಬೆಳೆಬೆಳೆದು ನಿಂತಿದೆ ವಿಶ್ವ'ರೂಪಾ'ಕೃತಿಯಲಿ
ಕತ್ತಲ ಶಕ್ತಿ ಸಾಮರ್ಥ್ಯಗಳಿಗೆ ಮಂಕಾಗುವ ಪರಿ
ಬ್ರಹ್ಮರಾಕ್ಷಸನ ಆಕಾರ ತಳೆದಿದೆ ಸಾತ್ವಿಕ ಭಾಸ್ಕರನ ಬೆಳಕು
ಪರಾಕು ಹೇಳುತ್ತವೆ ಗಿರಿ ಕಂದರಗಳು ಮಾರ್ಧನಿಸಿ
ಹಕ್ಕಿಪಕ್ಕಿಗಳ ಚಿಲಿಪಿಲಿ ಕಲರವದ ಸ್ವಾಗತಗಾನ
ಅಂಧಕಾರಾಸುರನ ವಧಿಸಿ ವಿಜಯೋತ್ಸಾಹಗೈದ
ಚೈತನ್ಯದಾಯಕ ಪ್ರಭೆಗೆ ಎಲ್ಲೆಲ್ಲೂ ಜಯಘೋಷ ಮೊಳಗು
ಮಂಗಳಾರತಿ ಎತ್ತಿ ತಿಲಕವಿಡುತ್ತವೇ ಸಪ್ತವರ್ಣಗಳ ಕಾಮನಬಿಲ್ಲು
ಪ್ರಾತಃಕಾಲದ ಬಾಂದಳದ ಒಡ್ಡೋಲಗದಿ ವಿರಾಜಮಾನ ದಿವಾಕರ
ಶ್ವೇತ ಮೇಘಗಳಿಗೂ ಅಣತಿ ನೀಡುವ ಒಡೆಯ
ಸಕಲಚರಾಚರ ಜೀವಜಂತುಗಳ ಪೋಷಿಪ ಮಹಾಕಾಯ
ಅಣುರೇಣು ತೃಣಕಾಷ್ಟಗಳ ಪಾಲಕ ಅಧಿನಾಯಕ
ಬೆಳಕಿನ ವರ್ಣ ಸಾಮ್ರಾಜ್ಯದ ಶ್ವೇತಕೇತುವಿನಲ್ಲಿ ಸರ್ವವೂ
ಸ್ವಸ್ಥ, ಸಮ್ಮತ, ಸಮ್ಮಿಳಿತ, ಸಮ್ಮೋಹಿತ ಸಂಕಥನ
ಬಾಂದಳದಿಂದ ಇಳೆಗಿಳಿದ ಪ್ರಥಮ ಉಷಾಕಿರಣವ ಚುಂಬಿಸುವ
ಆಕಾಂಕ್ಷೆ ಹೊಂದಿದವ ಬೆಳಕಿನ ಸಮರ್ಥಕನೇ ಹೊರತು
ಗಾಢಾಂಧಕಾರವ ಅಪ್ಪುವ ಹೆಂಬೇಡಿಯಲ್ಲ
-ವಿಶ್ವಾಸ್ ಭಾರದ್ವಾಜ್
****************************
(ಬೆಳಕಿನ ಪದ್ಯ.. ಬರೆಸಿದ್ದು ಒಬ್ಬರು ಮಾರ್ಗದರ್ಶಕರು.. ಬರೆದಿದ್ದು ಒತ್ತಡ ಸಹಿಸದೇ.. ನನಗೂ ಬೆಳಕು ಇಷ್ಟವಾಗುತ್ತದೆ ಅಂತ ಪದ್ಯದಲ್ಲಿ ಹೇಳಿ, ಕತ್ತಲೆಯಿಂದ ಹೊರಬರುವ ಪ್ರಯತ್ನದಲ್ಲಿದ್ದೇನೆ ಅನ್ನುವ ಸಂದೇಶ ತಿಳಿಸಲು ಇಚ್ಛೆ.. “ಅಯ್ಯೋ! ಮುಂಡೇದೆ ಬೆಳಕಿನ ಕಡೆಗೆ ಎಳ್ಕಂಡು ಹೋಗೋಣ ಅಂತ ಇದ್ರೆ ಮತ್ತೆ ಕತ್ತಲೇನ ಹೊಗಳ್ತೀಯಾ” ಅಂತ ಅವ್ರು ಗದರಿಕೊಂಡಿದ್ದಕ್ಕೆ, ಸಣ್ಣಗೆ ಅವಮಾನಿತನಾದ ನಾನು, ಊಹುಂ! ನಿಮ್ಮದೇ ದಾರಿಯಲ್ಲಿದ್ದೀನಿ ಅಂತ ಹೇಳಲು ಬರೆದ ಪದ್ಯ.. ಮುದ್ದಾಗಿ ಸೇಡು ತೀರಿಸಿಕೊಂಡ ಭಾವ.. ಉದ್ದಟತನಕ್ಕೆ ಚಿಕ್ಕದೊಂದ ಪಶ್ಚಾತ್ತಾಪದ ಕ್ಷಮೆಯೊಂದಿಗೆ.. ಬೆಳಕಿನ ಪಾಠ ಮಾಡಿದವರಿಗೆ ಅರ್ಪಣೆ)

Sunday, 9 November 2014

ನಾನೇಕೆ ಸತ್ತೆ?

ಕೆಲ ವರ್ಷಗಳ ಹಿಂದೆ..
ಸಾಗರದಲ್ಲಿ ನಾಟಕಕಾರ ಪ್ರಸನ್ನ ಬರೆದ "ಕೊಂದವರು ಯಾರು?" (ಗಾಂಧಿ ಹತ್ಯೆಯ ವಿಷಯದಲ್ಲಿ) ನಾಟಕ ಪ್ರದರ್ಶನವಿತ್ತು..
ಎಡಪಂಥೀಯ ಧೋರಣೆಯ ಬುದ್ದಿ ಜೀವಿಗಳು ಆ ನಾಟಕಕ್ಕೆ ಹೈಪ್ ಕೊಟ್ಟು, ವಿಚಾರ, ವಿಮರ್ಷೆ ಮಾಡಿದ್ರು..ಅದಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿತು..
ಇದು ಅರಿವಿಗೆ ಬರ್ತಿದ್ದ ಹಾಗೆ ನಮ್ಮ ಬಲಪಂಥೀಯ ನಾಯಕರೊಬ್ಬರ ತಲೆಯಲ್ಲಿ ಐಡಿಯಾವೊಂದು ಹೊಳೆಯಿತು..
"ಅವ್ರು ಕೊಂದವ್ರು ಯಾರು? ಅಂತ ನಾಟಕ ಮಾಡಿದ್ರೆ, ನಾವು ಒಂದು ನಾಟಕ ಮಾಡಿಸಣ ಬಿಡ್ರಲೇ" ಅಂದ್ರು..
ನಾಟಕದ ಟೈಟಲ್ ಎಂಥ ಅಂತ ಕೇಳಿದ್ರೆ....?
-
-
-
-
-

"ನಾನೇಕೆ ಸತ್ತೆ..?"

ಪ್ರಾರ್ಥನೆ

ಪ್ರಾರ್ಥನೆ:
ಹರಸು ಪ್ರಭು ಎಮ್ಮನು ದಯವ ಪಾಲಿಸು
ನಿಮ್ಮ ಚರಣಪದ್ಮಗಳಿಗೆ ಎರಗಿಹೆವು ಆಲಿಸು
ಹಮ್ಮು ಬಿಮ್ಮುಗಳೆಲ್ಲ ತೊರೆದಿಹೆವು ಗಮನಿಸು
ನಿನ್ನ ಹಾದಿ ಹುಡುಕುವೆವು ಮಾರ್ಗ ತೋರಿಸು
-----
ನೀನೆ ಗತಿ, ನೀನೆ ಸ್ಮೃತಿ ತೋರು ಸದ್ಗತಿ
ಚಿತ್ತ ಚಂಚಲವ ತೊಡೆದ ನೀಡು ಸನ್ಮತಿ
ಅಳಿಸು ಹಾಕು ನಮ್ಮ ಜನ್ಮದಾರಭ್ಯ ವಿಕೃತಿ
ನೀನೇ ಸ್ಥಿತಿ ನೀನೆ ನಿಯತಿ ಕಲಿಸು ಸಂಸ್ಕ್ರತಿ
------
ಹಾಕಲಾರೆವು ಡೊಗ್ಗು ಸಲಾಮು ಎಂದಿಗೂ
ನಡುವ ಬಗ್ಗಿ ನಡೆದರೆ ನೋವು ಮಂಡಿಗೆ
ಅಹಂಕಾರಿಗಳ ಆಟಾಟೋಪ ಅಳಿಯುವುದು ಕೊನೆಗೆ
ನಿರಾಕರಣ ನಿರ್ಲಿಪ್ತತೆ ಭಾಗ್ಯ ಎಮ್ಮ ಪಾಲಿಗೆ
------
ಶೀಲವಂತ ಗುಣವ ನೀಡು ಭಾಗ್ಯ ಧಾತನೆ
ಸುನೀತ ಭಾವ ಹರಸು ಸದಾ ಯೋಗ ಮಹಿಮನೇ
ಕೆಡುಕು ಒಡೆದು ಒಳಿತು ಇಳಿಸು ಆತ್ಮ ರೂಪನೇ
ನಿನ್ನ ಸನ್ನಿಧಾನದಲ್ಲಿ ಇದೇ ಸವಿಯ ಪ್ರಾರ್ಥನೆ
-ವಿಶ್ವಾಸ್ ಭಾರದ್ವಾಜ್(ವಿಪ್ರವಿಶ್ವತ್)
(ಬರೆದಿದ್ದು..ದಿನಾಂಕ-16-09-2014-ಸಮಯ 07.15ಕ್ಕೆ ಆರಂಭಿಸಿ, 07.35ಕ್ಕೆ ಮುಗಿಸಿದೆ.. ದೀರ್ಘವಲ್ಲದ ಚುಟುಕು ಪ್ರಾರ್ಥನೆ)

ಸ್ಯಾಫ್ರಿನ್ ರೆವಲ್ಯೂಷನ್

"ವೈಟ್ ರೆವಲ್ಯೂಷನ್ ಅಂದ್ರೆ ಕ್ಷೀರ ಕ್ರಾಂತಿ"
ರೈಟ್..!
"ಗ್ರೀನ್ ರೆವಲ್ಯೂಷನ್ ಅಂದ್ರೆ ಹಸಿರು ಕ್ರಾಂತಿ"
ಕರೆಕ್ಟ್..!
"ಬ್ಲ್ಯೂ ರೆವಲ್ಯೂಷನ್ ಅಂದ್ರೆ ಮೀನುಗಾರಿಕಾ ಕ್ರಾಂತಿ"
ಎಕ್ಸಾಕ್ಟಿಲೀ..!
ಹಾಗಿದ್ದ ಮೇಲೆ..
"ಸ್ಯಾಫ್ರಿನ್ ರೆವಲ್ಯೂಷನ್ ಅಂದ್ರೇನು..?"
"ಉಹೂಂ,, ನೋ ಐಡಿಯಾ ಬಾಬಾ.."
-
-
-
"ಹೇಯ್ ಇಟ್ಸ್ ವೆರಿ ಸಿಂಪಲ್ ಯಾರ್ ಸ್ಯಾಫ್ರಿನ್ ರೆವಲ್ಯೂಷನ್ ಅಂದ್ರೆ
ಕೇಂದ್ರದಲ್ಲಿ ಎನ್ಡಿಎ ನೇತೃತ್ವದ ಹೊಸ ಸರ್ಕಾರ ಅಸ್ಥಿತ್ವಕ್ಕೆ, ಅದೇ ಕೇಸರಿ ಕ್ರಾಂತಿ..ಅಲ್ವಾ..?"
ಹಾಂ!!!!!
------------------------

ಈ ಆಶಾಡಭೂತಿಗಳ ಮನೋವ್ಯಾಧಿಗೆ ಮದ್ದೇ ಇಲ್ಲ


ರಾತ್ರಿ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಹೋಗುವ ದಾರಿಯಲ್ಲಿ ಆ ಪುಣ್ಯಾತ್ಮ ಸಿಕ್ಕಿದ. ಉಗ್ರ ಎಡಪಂಥೀಯ..,
ದಟ್ಸ್ ಓಕೆ,
ಆದ್ರೆ ಶುದ್ದ ಅವಿವೇಕಿ, ವಿತಂಡವಾದಿ.. ಕಣ್ಣಲ್ಲಿ ನಿದ್ದೆ ಎಳೆಯುತ್ತಿತ್ತು. ಸಣ್ಣಗೆ ಇರಿಟೇಟ್ ಆಗತೊಡಗಿದ್ದೆ.. ಬೇಗ ಮಾತು ಮುಗಿಸುವ ಅಂತಿದ್ದೆ ಕಾಫಿಗೆ ಕರೆದೊಯ್ದ.
ಎಲ್ಲೆಲ್ಲೋ ಸುತ್ತಿ ಜಗ್ಗಿ, ಎಳೆದಾಡಿ ಕೊನೆಗೆ ಕನ್ನಡ ಸಾಹಿತ್ಯದಲ್ಲಿ ಪುರೋಹಿತಶಾಹಿ ಡಾಮಿನೇಷನ್ ವಿಷಯಕ್ಕೆ ಬಂದ.
ಅವನ ಸ್ವಭಾವ ಗೊತ್ತಿದ್ದ ನಾನು ಹೆಚ್ಚು ತಲೆ ಕೆಡಿಸಕೊಳ್ಳಲು ಹೋಗಲಿಲ್ಲ. ಆದ್ರೆ ಕೊನೆಗೆ ಅಡಿಗರನ್ನೇ ಪುರೋಹಿತಶಾಹಿ ಕವಿ ಅಂದಾಗ ಬುದ್ದಿ ಹಾಗೂ ಮನಸು ರೊಚ್ಚಿಗೆದ್ದಿದ್ದು ನನ್ನ ಅರಿವಿಗೇ ಬರಲಿಲ್ಲ.
ಪ್ರಾಯಶಃ ಇಂತಹ ಸೋಗಲಾಡಿಗಳಿಗಾಗಿಯೇ ಅಡಿಗರು ಕೂಪಮಂಡೂಕ, ಸ್ನಾನದಂತಹ ಪದ್ಯಗಳನ್ನು ಬರೆದಿದ್ದಿರಬಹುದು.
ಅಡಿಗರನ್ನು ಅರ್ಥಮಾಡಿಕೊಳ್ಳದ ಯೋಗ್ಯತೆ ಇಲ್ಲದ ಮೂರ್ಖ ಶಿಖಾಮಣಿಗಳೂ ಅಡಿಗರ ಸಾಹಿತ್ಯದ ಬಗ್ಗೆ ಮಾತಾಡ್ತಾರೆ.
ಅಡಿಗರನ್ನು ಪುರೂಹೊತಶಾಹಿ ಅನ್ನುವ ಹಣೆಪಟ್ಟಿ ಅಂಟಿಸಿ ದೂರುತ್ತಾರೆ.
ಅಂತರಾಷ್ಟ್ರೀಯ ಕವಿ, ಶತಮಾನದ ಕವಿ, ಎರಡು ವಿಭಿನ್ನ ವರ್ಗಗಳ ಪ್ರಾತಿನಿಧಿಕ ಕವಿ ಅಂತ ಸುಮ್ಮನೇ ಅಡಿಗರನ್ನು ಕರೆಯುತ್ತಿರಲಿಲ್ಲ ಧೂರ್ತ ಮಹಾನುಭಾವರೆ, ನಿಮಗೆ ಕೊನೇ ಪಕ್ಷ ಅಡಿಗರ ಪದ್ಯಗಳ ಒಂದೇ ಒಂದು ಸಾಲಾದರೂ ಅರ್ಥವಾಗುತ್ತದಾ..?
ಅಡಿಗರು ಬರೆಯುವ ಮೊದಲು ಇಂಗ್ಲೀಷ್, ಗ್ರೀಕ್ ಹಾಗೂ ಫ್ರೆಂಚ್ ಸಾಹಿತ್ಯವನ್ನು ಓದಿಕೊಂಡಿದ್ದರು.. ಕಾಫ್ಕಾ, ಯೇಟ್ಸ್, ಟಾಲ್ಸ್ಟಾಯ್, ಶೇಕ್ಸ್ಪಿಯರ್ ಸಾಹಿತ್ಯಗಳು ಅಡಿಗರಿಗೆ ಲೀಲಾಜಾಲವಾಗಿತ್ತು.. ಸಿಗ್ಮಂಡ್ ಫ್ರಾಯ್ಡ್ನ ಮನಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಓದುವ ಹವ್ಯಾಸ ಅಡಿಗರಿಗಿತ್ತು.
ತಮ್ಮ ಪದ್ಯಗಳಲ್ಲಿ ಉನ್ನತ ಮಟ್ಟದ ಸಾಕ್ಷಿ ಪ್ರಜ್ಞೆಯನ್ನು ಹುದುಗಿಸಿಕೊಂಡ ಕವಿವರ್ಯ ಗೋಪಾಲಕೃಷ್ಣ ಅಡಿಗರು.
ಜಗತ್ತಿನ ಎಲ್ಲಾ ವಸ್ತು, ವ್ಯೆಕ್ತಿ, ವಿಚಾರಗಳ ಬಗ್ಗೆ ಅಡಿಗರು ಪ್ರಶ್ನೆ ಎತ್ತಿದ್ದಾರೆ, ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ, ವಿವರಿಸಿದ್ದಾರೆ, ವರ್ಣಿಸಿದ್ದಾರೆ ಕೊನೆಗೆ ತಾರ್ಕಿಕ ಸಮಾಧಾನವನ್ನೂ ನೀಡಿದ್ದಾರೆ.
ಬದುಕಿನ ಉಧಾತ್ತ ಆದರ್ಶ, ಜೀವನ ಪ್ರೀತಿ ಹಾಗೂ ಅಮಿತ ಮೌಲ್ಯಗಳನ್ನು ತಮ್ಮ ಕವಿತೆಗಳಲ್ಲಿ ಬಿಂಬಿಸಿದ್ದಾರೆ.
ನಿಮಗೆ ಅವರ ಕವನ ಸಂಕಲನದ ಹೆಸರುಗಳಾದ್ರೂ ಗೊತ್ತಿದ್ಯಾ, ಮಿಸ್ಟರ್ ಗೇಟಿನ ಮೇಲೆ ಕವಿ ಅಂತ ಬೋರ್ಡ್ ಬರೆಸಿರುವ ಸೋ ಕಾಲ್ಡ್ ಸಾಹಿತಿಗಳೇ?
ಮೊದಲು ಅಪ್ರಬುದ್ಧ ಮನಸ್ಥಿತಿಯ ಆಲೋಚನೆಗಳನ್ನು ಬಿಡಿ, ಪಂಥ ರಾಜಕೀಯದ ಸಣ್ಣತನ ಬಿಡಿ, ವಿಶಾಲವಾಗಿ ಜಗತ್ತನ್ನು ನೋಡುವ ದೃಷ್ಟಿ ಬೆಳೆಸಿಕೊಳ್ಳಿ..
ಕಾಮಾಲೆ ರೋಗ ಬಂದಿರುವುದು ನಿಮ್ಮ ಕಣ್ಣಿಗೆ ಹೊರತು ಜಗತ್ತಿಗಲ್ಲ..
ನಿಮ್ಮ ಮನೋವ್ಯಾಧಿಗೆ ಮದ್ದೇ ಇಲ್ಲ..
ಇನ್ನೇನು ಹೇಳಲಿ..
ಜಗನ್ಮಾತೆ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ
(ಆ ಮಹಾನುಭಾವ ಫೇಸ್ಬುಕ್ನಲ್ಲಿ ಈ ಸ್ಟೇಟಸ್ ಓದಿದ ಮೇಲಾದ್ರೂ ವಿತಂಡವಾದ ಬಿಟ್ರೆ ಫೇಸ್ಬುಕ್ ತಂತ್ರಜ್ಞಾನಕ್ಕೆ ಒಂದು ದಿವ್ಯ ಸಲಾಂ)
-ವಿಶ್ವಾಸ್ ಭಾರದ್ವಾಜ್

ಮರುಕ

ಎದೆಗಿರಿದ ಚೂರಿಯ ಮೇಲಿಲ್ಲ ಸೇಡಿನುರಿ
ಚಿಮ್ಮಿ ಹರಿದ ನೆತ್ತರ ಹನಿಯ ಮೇಲೆ ವಿನಾಕಾರಣ ಮರುಕ

ಸಂಡೆ ಏನಾದ್ರೂ ಆದ್ರೆ ಏನ್ ಗತಿ?

ಪ್ರಶ್ನೆ: ನಮ್ಮ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸಂಡೇ ಮಾತ್ರ ಎಲ್ಲಾ ಚೀಫ್ ಗಳಿಗೂ ವೀಕ್ ಆಫ್ ಇರುತ್ತೆ. ಅಕಸ್ಮಾತ್ ಯಾರಾದ್ರೂ ವಿವಿಐಪಿಗಳೋ, ಫೇಮಸ್ ಅನ್ನಿಸ್ಕೊಂಡ ಸೆಲೆಬ್ರಿಟಿಗಳೋ ಹೊಗೆ ಹಾಕಿಸ್ಕೊಂಡ್ರೆ ಗತಿಯೇನು..?(ಕ್ವಶ್ಚನ್ ದೊಡ್ಡದಾಯ್ತಾ)
ಉತ್ತರ: ಹಾಗೇನು ಆಗಲ್ಲ...ಸಂಡೇ ಯಾರೂ ಸಾಯಲ್ಲ..ಯಾಕಂದ್ರೆ ಸಂಡೆ ಯಮಲೋಕ ಹಾಗೂ ಸ್ವರ್ಗ ಎರಡೂ ಲೋಕಗಳ ಚೀಫ್ಗಳಿಗೂ ವೀಕ್ ಆಫ್ ಇರುತ್ತೆ..!(ಉತ್ತರ ಶಾರ್ಟ್ ಆಗಿದೆ ಅಲ್ವಾ)

ಬದಲಾಗುತ್ತಿದೆ ಪ್ರೀತಿಯ ವ್ಯಾಖ್ಯಾನ


ಕಾಲ ಬದಲಾಗುತ್ತಿದೆ...
ಪ್ರೀತಿಯ ವ್ಯಾಖ್ಯಾನವೂ ಬದಲಾಗಿದೆ..
ಅದೊಂದು ದಿವ್ಯ ಅನುಭೂತಿಗಾಗಿ ಅವನು/ಅವಳು ಕಾಯುತ್ತಿದ್ದ ಆಯಾಮವನ್ನೇ ಪ್ರೀತಿ ಅನ್ನಲಾಗ್ತಿತ್ತು..
--------------
ಮತ್ತೆ ಬದಲಾದ ಕಾಲ, ಬದಲಾದ ಪ್ರೀತಿಯ ವ್ಯಾಖ್ಯಾನ...
ಅವನ/ಅವಳ ನಡುವಿನ ಕಾನ್ಸೆಪ್ಚುಯಲ್ ಅಟ್ಯಾಚ್ ಮೆಂಟ್ ಅಥವಾ ಅವ್ಯಕ್ತ ಬಂಧವನ್ನು ಪ್ರೀತಿ ಅಂತ ಗುರುತಿಸಲಾಯ್ತು
---------------
ಈಗ ಆ ಕಾಲವೂ ಬದಲಾಗಿದೆ..ಮತ್ತೆ ಡೆಫೆನೇಷನ್ ಆಫ್ ಲವ್ ಬದಲಾಗಿದೆ...
ಅವನ/ಅವಳ ಬಾಂದವ್ಯದ ಫುಲ್ಫಿಲ್ನೆಸ್, ಕಂಪ್ಲೀಟ್ ನೆಸ್ ಆಫ್ ಆಟ್ಯಾಚ್ ಮೆಂಟ್, ಎಲ್ಲಾ ರೀತಿಯಲ್ಲೂ ಪೂರ್ಣವಾದ ಕಂಫರ್ಟ್ ನೆಸ್ ಪ್ರೀತಿಯ ಹೊಸ ವ್ಯಾಖ್ಯಾನ
----------------
ಅವನ/ಅವಳ ಈ ಹೊಸ ನಿರೀಕ್ಷೆ ಎಷ್ಟರಮಟ್ಟಿಗೆ ಫಲ ನೀಡುತ್ತದೆ ಅನ್ನೋದೆ ಒಲವಿನ ಆರಾಧನೆ,,,,
-ವಿಶ್ವಾಸ್ ಭಾರದ್ವಾಜ್

ಕೃಷ್ಣ ಪರಿಪೂರ್ಣತೆಯ ಸಂಕೇತಕೃಷ್ಣ ಪರಿಪೂರ್ಣತೆಯ ಸಂಕೇತ..!
ಕೃಷ್ಣನಲ್ಲಿ ಏನಿಲ್ಲ..?
ಕೃಷ್ಣ ಎಲ್ಲವೂ ಹೌದು!
ಬುದ್ದಿವಂತಿಕೆ, ಚಾಣಾಕ್ಷತನ, ಸಮಯ ಪ್ರಜ್ಞೆ, ಅಂತಃಸತ್ವ, ಮೇಧಾವಂತಿಕೆ, ಭಾವ ಸಾಗರ, ರಾಜಕಾರಣ, ಕುಶಾಗ್ರಮತಿ,,,,,
ಪ್ರೇಮ, ಸರಸ, ಬಂಧ, ಲಾಲಿತ್ಯ, ಲಾಸ್ಯ,,,,
ನಿರಂಕುಶತ್ವ, ಸರ್ವಾಧಿಕಾರ, ಕಾಲ, ನಿಯತಿ, ಸ್ಥಿತಿ,,,,
ಕಾರ್ಯ ಕಾರಣ ಕಾಯ,,,
ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ನಾಗ,
ಯಶೋಧೆ ಮಡಿಲು ತುಂಬಿದ ನಂದ ಕಂದ
ದ್ವಾಪರ ಬೆಳಗಿದ ದ್ವಾರಕೆ ಕಟ್ಟಿದ
ಪಲಾಯನಕ್ಕೂ ವ್ಯಾಖ್ಯಾನ ನೀಡಿದ
ರಾಧೆಯೊಡಲ ವಿರಹದುರಿಯ ಶಮನ ಮಾಡಿದ,
ಗೋವಿನ ಸಾನಿಧ್ಯದಲ್ಲಿ ಜನನಿಯ ಕಂಡ
ಪೂತನಿ ಮೊಲೆಯಲಿ ಅಮೃತ ಉಂಡ
ಮುರುಳಿ ನುಡಿಸಿ ಪ್ರಕೃತಿ ಮಾರ್ಧನಿಸಿದ
ಜಗತ್ತಿಗೆ ಮಾರ್ಗದರ್ಶನ ಮಾಡಿದ ಗೀತಾಚಾರ್ಯ,
ಕುರುಕ್ಷೇತ್ರದ ಜಗನ್ನಾಟಕ ರಚಿಸಿದ ನಿರ್ದೇಶಕ,
ಅಂಧಕಾರದ ಸಮಾಜಕ್ಕೆ ಪ್ರಕಾಶ ಧಾರೆ ಎರೆದ ಜಗದ್ಗುರು,
ಮಾಯಾವಿ, ಅಸುರ, ಮೋಸಗಾರ, ತಂತ್ರಗಾರ ಅನ್ನುವ ಕಳಂಕಿತ,
ದೃತರಾಷ್ಟ್ರನ ಮೃತ್ಯು ಅಪ್ಪುಗೆಯಿಂದ ಭೀಮನ ಉಳಿಸಿದ ಚಾಣಾಕ್ಯ,
ಪಾಂಚಜನ್ಯ ಮೊಳಗಿಸಿ ಅಧರ್ಮ ನಿಗ್ರಹಿಸಿದ,
ಸುದರ್ಶನ, ಕೌಮೇದಿನಿಗಳಿದ್ದರು ನಿಃಶಸ್ತ್ರನಾಗಿ 18 ದಿನದ ಕದನ ನಿರೂಪಿಸಿದ
ಗಾಂಧಾರಿಯ ಉಗ್ರ ಶಾಪವನ್ನುಂಡರೂ ನಸು ನಗುತ್ತಲೆ ನಿರ್ಯಾಣ ಹೊಂದಿದ,
-ವಿಶ್ವಾಸ್ ಭಾರದ್ವಾಜ್

ಅವಳು ಅಲ್ಲಿಯೇ ಇದ್ದಾಳೆ


ಅವಳು ಅಲ್ಲಿಯೇ ಇದ್ದಾಳೆ...
ಮನ್ವಂತರ ಗತಿಸಿದರೂ ಕದಲದೇ ಕಾಯುತ್ತಿದ್ದಾಳೆ
ಹೊಂಗೇ ಮರದ ಹಿಂದೆ ನಾಚಿ ನಿಂತಿದ್ದಾಳೆ
ತುಂಬೆ ಗಿಡ ಸವರುತ್ತಾ ನೆಲದಿ ಕಾಲ ಹೆಬ್ಬರಳಿನಿಂದ ರಂಗೋಲಿ ಬಿಡಿಸಿ
ಆಗಾಗ ಧಾವಣಿಯ ತುದಿಯ ಚುಂಗು ಹಿಡಿದು ಕಿರು ಬೆರಳಿಗೆ ಸುತ್ತಿ
ತುಟಿಯಂಚಿನಲ್ಲಿ ಲಜ್ಜೆಯ ನಸುನಗೆ ಸೂಸಿ
ಹೆಜ್ಜೆ ಸದ್ದುಗಳ ನಿರೀಕ್ಷಿಸಿ
ಮುರುಳಿ ನಾದವ ಅಪೇಕ್ಷಿಸಿ
ನೀಲ ಮೇಘ ಶ್ಯಾಮ ವರ್ಣದ ಪುರುಷನ ಧೇನಿಸಿ
ಶತ ಶತಮಾನಗಳಿಂದ ತವಕಿಸಿ, ತಲ್ಲಣಿಸಿ,
ತಪವನಾಚರಿಸಿ
ನಡೆದು ಬಂದ ಹಾದಿಯ ಕಡೆ ಗಳಿಗೆಗೊಮ್ಮೆ ವೀಕ್ಷಿಸಿ
ಮುಡಿದ ದುಂಡು ಮಲ್ಲೆಯ ಮೊಗ್ಗು ಅರಳುವುದನ್ನೇ ಕಾದು
ಕಡು ವಿರಹದ ಬಡಬಾಗ್ನಿಯಲಿ ಅನುಕ್ಷಣವೂ ಬೆಂದು
ರಿಂಗಣಿಸುವ ಕೊಳಲ ಗಾನದ ಆಲಾಪನೆ ಗುನುಗುತಿಹಳು
ಗೋ ಮೆರವಣಿಗೆಯ ಅವಲೋಕಿಸುತಿಹಳು
ಗೊಲ್ಲನ ಆಗಮನವನ್ನೇ ಎದುರು ನೋಡುತಿಹಳು
ನೆನಯುವ ಸುಖಕ್ಕಾಗಿ ಮನಸಿಗೆ ಮರೆವಿನ ಮಸುಕು ಹಾಕುತ್ತಾ
ಮತ್ತೆ ಮತ್ತೆ ಮರೆಯುತ್ತಾ ಮತ್ತೆ ಮತ್ತೆ ನೆನೆಯುತ್ತಾ
ಬೃಂದಾವನದಂಗಳದಲಿ ಮತ್ತೆ ಸರಸದ ಸವಿಯ ಸವಿಯಲು
ರಾಧೆ ಸದಾ ಕಾಯುತ್ತಲೇ ಇದ್ದಾಳೆ
ಇಂದಿಗೂ ಮತ್ತೆ ಮಾಧವನ ಆಲಿಂಗನಕ್ಕೆ ಕಾತರಳಾಗಿ ಅಲ್ಲಿಯೇ ಇದ್ದಾಳೆ
-ವಿಶ್ವಾಸ್ ಭಾರದ್ವಾಜ್

ನಿಮ್ಮನ್ನು ಮಾಸ್ಟ್ರೇ ಅನ್ನಲು ಅಭ್ಯಂತರವೇನಿಲ್ಲ. ಆದ್ರೆ...?

ಪ್ರಾಯಶಃ ನನಗೆ ನೆನಪಿರುವಂತೆ ನಾನು ಅನಂತಮೂರ್ತಿಯವರನ್ನು ಮೊದಲ ಬಾರಿಗೆ ನೋಡಿದ್ದು ಬುದ್ದಿ ಬೆಳೆಯುತ್ತಿರುವ ಮೊದಲ ಹಂತದಲ್ಲಿ, ಆಗ ಹೆಚ್ಚು ವಿರೋದಾಭಿಪ್ರಾಯಗಳಿರಲಿಲ್ಲ ಜೊತೆಗೆ ಅನಂತಮೂರ್ತಿಯವರ ಪುಸ್ತಕಗಳನ್ನೂ ಓದಿರಲಿಲ್ಲ. ಅದು ನೀನಾಸಂ ಸಂಸ್ಕ್ರತಿ ಉತ್ಸವ ಅಂತ ಕಾಣಿಸುತ್ತೆ..‘ನಾಡಿನ ಸಾಹಿತ್ಯದಲ್ಲಿ ಸಾಕ್ಷಿ ಪ್ರಜ್ಞೆಯನ್ನು ಹಿಡಿದಿಟ್ಟುಕೊಂಡವರು ಅಡಿಗರು' ಅಂತ ಅನಂತ ಮೂರ್ತಿಯವರು ಹೇಳಿದ ಮೇಲೆಯೇ ಅಡಿಗರ ಪದ್ಯಗಳನ್ನು ನಾನು ಓದಲು ಶುರು ಮಾಡಿದ್ದು, ಆಮೇಲೆಯೇ ಅವು ಕೊಂಚ ಅರ್ಥವಾಗಿ ನನಗೆ ಆಪ್ತವಾಗಿದ್ದು..
ಕೆಲ ಕಾಲದ ಬಳಿಕ ಶಿವಮೊಗ್ಗದಲ್ಲಿ ಮತ್ತೊಂದು ಗೋಷ್ಠಿಯಲ್ಲಿ ಅನಂತ ಮೂರ್ತಿಯವರ ಆಶಯ ಭಾಷಣ..(ವೈಚಾರಿಕ ತಲ್ಲಣಗಳ) ಬಗ್ಗೆ ಕೇಳಿದ ಮೇಲೆ ಅಡಿಗರ ಬಳಿಕ ಶೂನ್ಯವಾಗಿದ್ದ ನಾಡಿನ ಸಾಕ್ಷಿ ಪ್ರಜ್ಞೆ ಅಡಿಗರ ಶಿಷ್ಯ ಅನಂತ ಮೂರ್ತಿಯವರು ತುಂಬುತ್ತಾರಾ ಅನ್ನಿಸಿತು..
ಅದೇ ಕಾರಣದಿಂದ ಅವರ ಘಟಶ್ರಾದ್ಧ ಓದಿದೆ..ನಾನು ಮೊದಲು ಓದಿದ ಯು.ಆರ್.ಎ ಪುಸ್ತಕವೇ ಅದು..ಕೆಲ ಸಮಯದಲ್ಲೇ ಸಂಸ್ಕಾರ, ಭಾರತೀಪುರ, ಅವಸ್ಥೆ, ಪಣಿಯಮ್ಮ, ಬರ, ವಾಲ್ಮಿಕಿಯ ನೆವದಲ್ಲಿ, ಹೀಗೆ ಹತ್ತು ಹಲವು ಪುಸ್ತಕಗಳನ್ನು ತಂದಿಟ್ಟುಕೊಂಡು ಹಠಕ್ಕೆ ಬಿದ್ದವನಂತೆ ಓದಿದೆ..ಆಗ ಅನಂತ ಮೂರ್ತಿಯವರು ಸಾಹಿತ್ಯಕ್ಕೂ ಮೀರಿ ವಿವಾದ ಸೃಷ್ಟಿಸಿಕೊಳ್ಳುತ್ತಿದ್ದರು..
ಆಗ ನಿಜವಾಗಿಯೂ ಅನ್ನಿಸಿದ್ದು ಈ ಮನುಷ್ಯನಲ್ಲಿ ಇಬ್ಬರು ವ್ಯೆಕ್ತಿಗಳಿದ್ದಾರೆ..ಎರಡು ಬೌದ್ಧಿಕ ಸಂಘರ್ಷಗಳು ನಡೆಯುತ್ತವೆ..
ಬರೆಯುವ ಅನಂತ ಮೂರ್ತಿಯೇ ಬೇರೆ, ಮಾತನಾಡುವಾಗ ವಿತಂಡವಾದ ಬೆರೆಸುವ ಅನಂತಮೂರ್ತಿಯೇ ಬೇರೆ..ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಇವರಿಗೆ ಜ್ಞಾನಪೀಠ ಹೇಗೆ ಸಿಕ್ತಪ್ಪ ಅನ್ನಿಸಿತ್ತು..ಆದರೆ ಅನಂತಮೂರ್ತಿಯವರ ಪುಸ್ತಕಗಳಲ್ಲಿದ್ದ ಸಂವೇದನೆಗಳ ಹ್ಯಾಂಗ್ ಒವರ್ ಕಾಡದೆ ಇರ್ತಿರಲಿಲ್ಲ..
ಎನಿ ಹೌ! ಅನಂತಮೂರ್ತಿ ಮತ್ತೆ ನಮ್ಮ ನಾಡಲ್ಲೇ ಹುಟ್ಟಲಿ ಆದರೆ ಕೇವಲ ಬರೆಯುವ ಅನಂತಮೂರ್ತಿಯಾಗಿ ಮಾತ್ರ ಹುಟ್ಟಲಿ..ಅವರಲ್ಲಿದ್ದ ಮಾತಾಡಿ ಮುಖ ಕೆಡಿಸಿಕೊಳ್ತಿದ್ದ ಅನಂತಮೂರ್ತಿ ಶಾಶ್ವತವಾಗಿ ನಾಶವಾಗಲಿ...
-ವಿಶ್ವಾಸ್ ಭಾರದ್ವಾಜ್

ನೀನ್ ಹೇಳ್ದಂಗೆ ಕೇಳ್ತೀನಿ ಕೃಷ್ಣಾ!!

ಕುರುಕ್ಷೇತ್ರದ ರಣಭೂಮಿಯಲ್ಲಿ ಶ್ವೇತ ಕುದುರೆಗಳ ಜೀನು ಹಿಡಿದ ಮಹಾಭಾರತದ ಡ್ರೈವರ್ ಶ್ರೀಕೃಷ್ಣ ಪರಮಾತ್ಮ ಹೇಳಿದ್ದು..
‘ನಿಮಿತ್ತ ಮಾತ್ರಂ ಭವ'
(ಎಲ್ಲವೂ ನಂದೇ ಆಯೋಜನೆ..ಇದು ಹೀಗೀಗೇ ಆಗ್ಬೇಕು ಅಂತ ಮೊದ್ಲೇ ಪ್ಲಾನ್ ಮಾಡಿಟ್ಟಿದ್ದೀನಿ.. ನೀನು ಜಸ್ಟ್ ನೆಪ ಅಷ್ಟೇ ಬಡ್ಡಿ ಮಗನೇ, ನಾನ್ ಹೇಳಿದ್ ಹಾಗೆ ಕೇಳು)
---------------------------
ಗಾಂಢೀವ ಹಿಡಿದು ಡಿಪ್ರೆಸ್ಡ್ ಆಗಿದ್ದ ಅರ್ಜುನ ವೇಕ್ ಅಪ್ ಆಗಿ ಉತ್ತರಿಸಿದ್ದು..
‘ಕರಿಷ್ಯ ವಚನಂ ತವಾ’
(ಆಯ್ತು ಮಾರಾಯ, ನೀನ್ ಈಗ ಸಿಟ್ ಮಾಡ್ಕೋ ಬ್ಯಾಡ.. ನೀ ಹೇಳಿದ್ ಹಾಗೆ ಕೇಳ್ತೀನಿ..ಈಗ ಸಮಾಧಾನನಾ..?)

ಯಾವುದು ಒಳ್ಳೇದು?

ದೊಡ್ಡವರಾಗಿ ಬದುಕುವುದು ಒಳ್ಳೆಯದೋ..?
ಅಥವಾ..
ಒಳ್ಳೆಯವರಾಗಿ ಬದುಕುವುದು ದೊಡ್ಡದೋ..?
-ಟೆನ್ನಿಸನ್ 


ಕಾದಂಬರಿ ಕಾವೇರಿಸಿಕೊಳ್ತಿದೆ

ವೆಂಕಟರಮಣ ಐತಾಳರ ರಣತಂತ್ರದ ಫಲವಾಗಿ ಗೆದ್ದವರು ಆ ರಾಜ್ಯದ ಅಷ್ಟೂ ೨೪ ಜನ ಸಂಸದರು.. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಐತಾಳರ ವಿರುದ್ಧ ತಿರುಗಿ ಬಿದ್ದಿದ್ದಾರೆ.. ಷಡ್ಯಂತ್ರವೊಂದರ ಮಾರಾಮೋಸ ರಚನೆಯಾಗತೊಡಗಿದೆ... ಐತಾಳರ ದತ್ತುಮಗ ಸಮರ್ಥ ವಿಕ್ರಮ ಪ್ರವೀರ ಐತಾಳರ ಉತ್ತರಾಧಿಕಾರಿ ಆಗ್ತಾನಾ..? ಮುಂಬರುವ ಚುನಾವಣೆಯಲ್ಲಿ ದೇಶದ ರಾಜಕೀಯದ ಸ್ಥಿತಿ ಪಲ್ಲಟಗೊಳ್ಳುತ್ತದಾ..? ಹೊಸ ಮನ್ವಂತರದ ಬುನಾದಿ ಹಾಕುತ್ತಿರುವವರಾರು..? ಕಿಂಗ್ ಮೇಕರ್ ಐತಾಳರ ಮುಂದಿನ ರಾಜಕೀಯ ನಡೆ ಏನು..? ರಾಜ್ಯದ ಸಂಚಲನಾತ್ಮಕ ಪತ್ರಿಕೆಯೊಂದರ ಸಂಪಾದಕ ಸಮರ್ಥ ವಿಕ್ರಮ ಪ್ರವೀರ (ಸನ್ನಿ) ರಾಜಕೀಯ ರಂಗಪ್ರವೇಶ ಮಾಡ್ತಾನಾ..? ಸನ್ನಿಯ ಆತ್ಮ ಬಂಧು ಶಶಾಂಕ್ ಆರಾಧ್ಯನ ಅಸಲಿಯತ್ತೇನು..? ಐತಾಳರಂತಹ ಚಾಣಾಕ್ಯನ ಬದ್ದ ವಿರೋಧಿ ಪ್ರಭಾಕರ ಈಡಿಗನ ಮಾಟ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ..? (ಕಾಯ್ತಿರಿ ಗೆಳೆಯರೇ ಕಾದಂಬರಿ ಕಾವು ಪಡೆದುಕೊಳ್ಳುತ್ತಿದೆ)

ಕೆಲವೊಮ್ಮೆ ಹೀಗೆ

 
ಕೆಲವೊಮ್ಮೆ ಹೀಗೆ:
ಕೆಲವೊಮ್ಮೆ ವದನದಲಿ ನಿರ್ಜೀವ ನಗು
ಸತ್ವ ಕಳೆದ ಉರುಳುವ ನಿರ್ಲಿಪ್ತ ಹಾಸ
ನಗೆಯ ಬೆನ್ನಲ್ಲೇ ಬಾಕು ಪಿಡಿದು ತಿವಿದಿದೆ ಹತಾಷೆ
ಸಾರ್ವಜನಿಕರಿಗೆ ಮರೆಯಾಗಬೇಕು ಅಂತರಂಗದ ಕ್ಲೇಷ..
ಒಳಮನಸ ಕೋಣೆಯ ಬಿಸಿಲಮಚ್ಚೆಯಲಿ
ಸುಡು ಸುಡುವ ಕೆಂಡದಂತೆ ವಿನಾಕಾರಣ ಆಕ್ರೋಷ
ತುಳಿದು ಮೆಟ್ಟಿ ಹೂತು ಹಾಕಿ ಸೃಷ್ಟಿಸು ಮತ್ತೊಂದು
ನಗೆಯ ವರ್ಣಗೋಳ
ಕೆಲವೊಮ್ಮೆ ದೀರ್ಘ ಬೇಗುದಿ ಅನುಭವಿಸಲೂ
ಬಿಡರು ಪಾಪಿ ಶಬ್ಧ ರಾಕ್ಷಸರ
ಏಕಾಂತ ಬಯಸುವ ಆತ್ಮಕ್ಕೆ ಗಾಳಿಗೆ ಕಿರುಗುಡುವ ಕಿಟಕಿ ಬಾಗಿಲಗಳ ಸದ್ದೂ ಅಸಹನೀಯ
ಚೀರ್ ಗುಟ್ಟುವ ದುಂಬಿಯ ಝೇಂಕಾರ
ಕರ್ಣಕಠೋರ ಕಿರುಚಾಟ ಕರ್ಕಶ ಕಷ್ಟ
ರಿಂಗಣಿಸುವ ಸ್ಮೃತಿ ಪಟಲದ ದೂರ ಸರಿದ
ಅನುಬಂಧದ ಧ್ವನಿ
ಅನುರಣದ ಹಿಂಸೆಯೇ ಅನಿವಾರ್ಯವೆನಿಸುವ ಅಸಹ್ಯ ವಾಂಚೆ
ಕೆಲವೊಮ್ಮೆ, ಅದೇ ಪರಿಚಿತ ಪರಿಮಳದ ಕಂಪು
ನಾಸಿಕಾಗ್ರಗಳ ಮತ್ತೇರಿಸುವ ವಯ್ಯಾರದ ಘಮ
ಅದು ಇಷ್ಟವಾದರೂ ಸಹಿಸಲಾರದಷ್ಟು ದುರ್ಗಂಧ
ನಾರುತ್ತದೆ ಕೊಳೆತು, ಹಳಸಿದ ಹಲಸು ತೊಳೆಗಳ ಲೋಳೆ
ಸುವಾಸನೆ ಹೀರಲು ಅಸಾಧ್ಯ; ಕಾರಣ ಕೊಳೆತು ಕರಗುತ್ತಲಿದೆ ಭಾವ..
ಹಿಂಡಿ ಹಿಪ್ಪೆಯಾಗಿಸಿ ಹರಡಿ ಒಣಹಾಕಿದೆ ಜೀವ
ಯಾರು ಅರಿಯುವರು ನಿತ್ಯ ಸತ್ತು ಮತ್ತೆ
ಬದುಕಿ ನರಳಾಡುವ ನೋವ
ಕೆಲವೊಮ್ಮೆ ಮಾತ್ರ ಈ ಬಡಬಾಗ್ನಿಯ
ಕಾವು ರೌರವ..
-ವಿಶ್ವಾಸ್ ಭಾರದ್ವಾಜ್

ಹೊಣೆಯಲ್ಲ ನಾ

 
ಹೊಣೆಯಲ್ಲ ನಾ..!
ಮತ್ತದೇ ನಿನ್ನ ಮಾತಿನ ಸತತ ವಕ್ರ ವ್ಯಂಗ್ಯ
ಹರಿತ ನಾಲಿಗೆಯ ಚೂಪು ಮೊನೆತಾಗಿದ ಗಾಯ
ಚುಚ್ಚದೆ ತೂತು ಬೀಳಿಸಿ ಇರಿದುಬಿಟ್ಟೆ ಎದೆಯ
ಮಾಯಾಂಗನೆ ನಿನ್ನ ಅಣಕು ಕೆಣಕುಗಳಿಗೆ ಹೇಳು ವಿದಾಯ
*****
ನಿನ್ನದೇ ಕಾಮಾಲೆ ಕಣ್ಣಿನ ಪೀತವರ್ಣಕೆ ನಾ ಹೊಣೆಯಲ್ಲ
ನನಗಂತೂ ಜಗ ಪರಿಶುದ್ಧ ಶುಭ್ರ ಸ್ವಚ್ಛ ಸುಂದರ
ನಳನಳಿಸುವ ಪ್ರಭೆಯಲ್ಲಿ ಗೋಚರಿಸಿಹ ಅಗ್ನಿದಿವ್ಯ ನಿತ್ಯ
ಒಳಗಿರುವುದೆ ಹೊರಗಿರುವುದು ಇದುವೆ ಕಟು ಸತ್ಯ
****
ಹದೆಯೇರಿಸಿ ಶರದಾಳಿ ಒಂದರ ಹಿಂದೊಂದೊಂದು
ಸೋಲಲಾರೆ ಮತ್ತೆ; ಸತ್ತರೆ ಶವದಿ ಸಹ ವಿಜಯದುನ್ಮಾದ
ತಾರಕಕ್ಕೇರಿದರೂ ಪಾತಳಕ್ಕಿಳಿಯದ ಆತ್ಮದ ಅಹಂ ವಾದ
ಕೃತ್ರಿಮತೆಯ ಸೋಗೇಕೆ ನನಗೆಲ್ಲವೂ ಸಹ್ಯ ಸಂಬಂಧ
****
ನಡುಬಾಗಿಸಿ ಕೊಡಮಾಡೆನು ಒಲವೆಂಬೋ ಔತಣ
ಸಮ್ಮತವಿರದ ಸಹಜೀವನ ನಿಜನರಕತಾಣ
ಕಂಡೆಂಬರೂ ಕಾಣದದು ಅವ್ಯಕ್ತತೆಯ ಹೂರಣ
ಎದೆ ಬಗೆವೆ ಇಣುಕು ಹಾಕು ಹಸಿ ಪ್ರೀತಿಯ ಕಾಣ
(ವಿನಾಕಾರಣ ಮುನಿಸಿಕೊಂಡ ಅವಳೆಂಬ ಆತ್ಮಕ್ಕೆ, ಹತಾಶೆಗೊಂಡರೂ ಮಾತಿಗಿಳಿಯುವ ಭಾವದ ಸಮರ್ಥನೆ)
-ವಿಶ್ವಾಸ್ ಭಾರದ್ವಾಜ್

ನನಗೆ ಸರ್ಟಿಫಿಕೇಟ್ ಅಗತ್ಯವಿಲ್ಲ

ಯಾರೋ ಒಂದಿಬ್ಬರು ನಾನು ನಿತ್ಯ ಪ್ರಾತರ್ವಂಧನೆ ಸಂಧ್ಯಾವಂದನೆ ಮಾಡೋದಿಲ್ಲ ಅನ್ನೋದನ್ನು ಹೀಯಾಳಿಸಿ ಮಾತಾಡಿದ್ದನ್ನು ಫೇಸ್ ಬುಕ್ ಗೋಡೆಯ ಮೇಲೆ ಬರೆಯುವ ದರ್ದು, ಅಗತ್ಯ-ಅನಿವಾರ್ಯತೆ ಖಂಡಿತಾ ನನಗಿರಲಿಲ್ಲ.. ಆದರೆ ಅದನ್ನು ಅಂಟಿಸಿದ್ದ ಕಾರಣ ನನಗೆ ಮಾತ್ರ ಗೊತ್ತು... ಹಿಂದವೀ ಸ್ವರಾಜ್ಯ ಅನ್ನುವ ಪತ್ರಿಕೆ ಮಾಡಹೊರಟಾಗ ನನ್ನ ಬಲಪಂಥೀಯ ಅಂತ ತೆಗಳಿದ್ರು. ಇನ್ನು ಕೆಲವರು ಮುಂದೆ ಕೆಲವು ಸಂದರ್ಭದಲ್ಲಿ ಎಡಪಂಥೀಯ ಅಂತ ಜರಿದಿದ್ದೂ ಇದೆ.ನಾನು ಅನಂತಮೂರ್ತಿ ಪುಸ್ತಕ ಓದಿದ್ರೆ ಬಲಪಂಥೀಯರಿಗೆ ಬಿಕ್ಕಟ್ಟು, ಬೈರಪ್ಪನವರ ಪುಸ್ತಕದ ಬಗ್ಗೆ ರೀವ್ಯೂ ಬರೆದ್ರೆ ಎಡ ಪಂಥಿಯರ ಕಣ್ಣು ಕೆಂಡ. ಅಸಲಿಗೆ ನಾನು ಯಾರು..? ನನ್ನ ಧೋರಣೆಗಳಾದ್ರೂ ಯಾವ ಸೈದ್ಧಾಂತಿಕ ನೆಲಗಟ್ಟಿಗೆ ಸೇರಿದವು..?
ನಾನು ಸಾಮಾನ್ಯ ಓದುಗ....! ಎಲ್ಲರನ್ನೂ, ಎಲ್ಲವನ್ನೂ ಓದುವ ಸಾಹಿತ್ಯದ ವಿದ್ಯಾರ್ಥಿ. ಯಾವ ತಾರತಮ್ಯವನ್ನೂ ಮಾಡದೇ, ಯಾವ ಪಂಥ, ಪಕ್ಷ, ಬಣಗಳಿಗೂ ಸೇರದ ಪತ್ರಕರ್ತ.. of course ಪತ್ರಕರ್ತ ಹೀಗೆ ಇರಬೇಕು ಅಂತ ಬಯಸುವ ಸಮರ್ಥಿಸುವ ಸಾಧಾರಣ ಆಮ್ ಆದ್ಮಿ.. A Common Man (mango MAN)
ಸಂಪ್ರಧಾಯಗಳು ಇಟ್ಟು ಪೂಜಿಸುವ ದೈವವೂ ಅಲ್ಲ ಸುಟ್ಟು ಹಾಕುವ ಹೆಣವೂ ಅಲ್ಲ ಅನ್ನೋದು ನನ್ನ ಖಾಸಗಿ ಅಭಿಪ್ರಾಯ... ಅಂದರೆ ಈ ಸಂಪ್ರದಾಯಗಳು ನಮ್ಮ ಮಧ್ಯೆದಲ್ಲೇ ಉಸಿರಾಡುವ ಅನಿವಾರ್ಯತೆ ಎಂದರ್ಥ. ನನ್ನ ಕುಟುಂಬವೇ ಪುರೋಹಿತರ ಸಮೂಹ. ನಾನು ಸಂಧ್ಯಾವಂದನೆ ಮಾಡೋದಿಲ್ಲ ಅಂದ ಮಾತ್ರಕ್ಕೆ ಸಂಧ್ಯಾವಂದನೆ ಮಾಡೋರು ನನ್ನ ದೃಷ್ಟಿಯಲ್ಲಿ ವಿಲನ್ ಗಳು ಅಂತ ಅರ್ಥವಲ್ಲ. ಸಂಪ್ರದಾಯಗಳ ಹಿಂದಿನ ಶ್ರದ್ಧೆಯನ್ನು ನಾನು ಪೂರ್ಣ ಮನಸ್ಸಿನಿಂದ ಗೌರವಿಸ್ತೀನಿ..ನಾನು ಆಸ್ತಿಕವಾದವನ್ನು ಗೌರವಸ್ತೀನಿ.ಸಂಪ್ರದಾಯಗಳ ಜೊತೆಯಲ್ಲಿ ಬೆಳೆವ ಸಂಸ್ಕ್ರತಿ, ಜನಪದವನ್ನು ಮೆಚ್ಚುತ್ತೀನಿ. ಜಗನ್ಮಾತೆ ನನ್ನ ಆರಾಧ್ಯ ದೈವ.. ಒಂದು ಕಾಲದಲ್ಲಿ ಅಮ್ಮನ ಇಚ್ಛೆ ಪೂರೈಸಬೇಕು ಅನ್ನುವ ಒಂದೇ ಕಾರಣದಿಂದ ರುದ್ರ,ಚಮಕ, ಶ್ರೀ ಸೂಕ್ತ,ಪುರುಷ ಸೂಕ್ತ,, ಗಣಪತಿ ಅಥರ್ವಶೀರ್ಷ ಕಲಿತಿದ್ದೂ ಇದೆ. ಕೇವಲ ಅಮ್ಮನ ಸಮಾಧಾನಕ್ಕಾಗಿ ಅಪೂರ್ವಕ್ಕೆ ಸಂಧ್ಯಾವಂದನೆ ಮಾಡೋದಿದೆ.
ನನಗೆ ಯಾರ ಸರ್ಟಿಫಿಕೇಟ್ ಅಗತ್ಯವೂ ಇಲ್ಲ... ಈ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಬಂಧುಗಳು ಹೇಗೆ ಅಭಿಪ್ರಾಯ ವ್ಯಕ್ತಪಡಿಸ್ತಾರೆ ಅಂತ ತಿಳಿಯುವ ಕುತೂಹಲ ಇತ್ತು. ಕೆಲವರು ಕಾಮೆಂಟ್ ಮಾಡಿದ್ರು.. ಕೆಲವರು ಮೆಸೆಜ್ ಹಾಕಿದ್ರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಲವ್ರು ಕಾಲ್ ಕೂಡ ಮಾಡಿದ್ರು. ಎಲ್ಲರ ಅಭಿಪ್ರಾಯಗಳನ್ನೂ ತುಂಬು ಮನಸಿನಿಂದ ಗೌರವಸ್ತೀನಿ...
-ವಿಶ್ವಾಸ್ ಭಾರದ್ವಾಜ್

ಮಾಣಿಗೆ ಯಾರೂ ಹೆಣ್ಣು ಕೊಡ್ತಲ್ಯ

 
ನಮ್ಮೂರಿನ ಕೆಲ ಹಿರಿ ತಲೆಗಳು ನನ್ನನ್ನು ಗುರುತು ಹಚ್ಚುವುದು ಹೀಗಂತೆ..
ಆ ಮಾಣಿನಾ, ಅದೆಂಥದೋ ಟಿವಿ ಚಾನಲ್ನಲ್ಲಿ ಕೆಲಸ ಮಾಡುತ್ತಂತೆ.. ಎಂಥ ಮಣ್ಣೋ, ಹೇಳ್ಕಳಕೆ ಬ್ರಾಮಂಡ್ರು ಜಾತಿ, ಚೂರು ಆಚಾರ ಇಲ್ಲೆ ವಿಚಾರ ಇಲ್ಲೆ, ಸಂಸ್ಕ್ರತಿ ಸಂಸ್ಕಾರ ಇಲ್ಲೆ..
ಅವನಪ್ಪ ಸುಮ್ನೆ ಸಾವ್ರಾರು ರೂಪಾಯಿ ಖರ್ಚು ಮಾಡಿ ಜನಿವಾರ ಹಾಕ್ದ.. ಕೆಲ್ಸ ಇರ್ಲೆ ಅವಂಗೆ..
ಆ ಮಾಣಿ ಮೈನಲ್ಲಿ ಜನಿವಾರ ಉಂಟೋ ಇಲ್ಲೋ ಅನ್ನೋದೆ ಅನ್ಮಾನ.. ಸಂಧ್ಯಾವಂದನೆ ಸಂದೀಮೂಲೆ ಸೇರ್ತು, ಆಚಮ್ಯ ಆಚೆಮನೆ ಓಡ್ತು, ಅಗ್ನೀಕಾರ್ಯ ಅಟ್ಟ ಹತ್ತು.. ಅದ್ರ ಹೊಂಡಕ್ ಹಾಕ್ತು..
ಆ ಮಾಣಿಗೆ ಯಾರೂ ಬ್ರಾಮಂಡ್ರು ಹೆಣ್ ಕೊಡ್ತಲ್ಯೆ ಬರೆದಿಟ್ಕೋ..
(ಅಬ್ಬಬ್ಬಾ ಬೊಡ್ಡು ಸಂಪ್ರದಾಯ ವಿರೋಧಿಸಿದ್ರೆ ಎಷ್ಟೆಲ್ಲಾ ಗೌರವ ಕೊಡ್ತಾರೆ ನಮ್ ಬ್ರಾಮಣರು.. ಧನ್ಯೋಸ್ಮಿ.. ಕೇಳಿ ಕರ್ಣಗಳು ಪಾವನವಾಗಿ ಹೋಯ್ತು)

ಅವಳಿನ್ನೂ ಬದಲಾಗಿಲ್ಲ!!

 
ಹಠಮಾರಿ ಹುಡುಗಿಯ ವಿನಾಕಾರಣ
ರಗಳೆ...
ಅರ್ಥವಾಗದ ಮುನಿಸು
ಸುಖಾಸುಮ್ಮನೆ ಸಿಡುಕು
ಕೊಂಚ ಹಾಗೆ ಕೊಂಚ ಹೀಗೆ
ಸಹಿಸಿಕೊಳ್ಳೋ ಗೆಳಯನಿಗೆ
ಅವಳು ಸ್ವಲ್ಪ ಮೂಡಿ
ಆದ್ರೆ ಒಳ್ಳೆಯವಳು
ಇನ್ನೂ ಹುಡುಗಾಟ ಸರಿ ಹೋದಾಳು
ಕೆಲ ಕಾಲ ಉರುಳಲಿ
ಕೊಂಚ ಬುದ್ದಿ ಬಲಿಯಲಿ
ತಿಳಿಸಿ ಹೇಳಿದರಾಯ್ತು
ಉರುಳುವ ಸಮಯವ ನೋಡುತ್ತಲೇ ಯೋಚಿಸುತ್ತಿದ್ದಾನೆ
ದೀವಾನ್ ಖಾನೆಯ ಆಳೆತ್ತರದ ಕನ್ನಡಿ
ಅಣಕಿಸುತ್ತಿದೆ ನೆರತ ಬಿಳಿ ಕೂದಲು
ಬೊಕ್ಕ ತಲೆಯ ನೋಡಿ

ಸುಳ್ಳೇ ಸವಿ!!

ಕಣಸುಗಳು ವಾಮನಾಕೃತಿಯಲ್ಲಿದ್ದ ವಾಸ್ತವ
ತ್ರಿವಿಕ್ರಮನಾಗಿ ಬೆಳೆದು ಬಲಿ ಚಕ್ರವರ್ತಿಯ ತಲೆ
ಪಾತಾಳ ಸೇರಿತೆಂಬ ಭ್ರಮೆ
ಕಾರ್ಕೊಟಕದ ಕಹಿಯಂತಹ ಸತ್ಯಕ್ಕಿಂತ
ಸುಳ್ಳಿನ ಆಲೇಮನೆ ಸಿಹಿ ಬೆಲ್ಲವೇ ಪ್ರಿಯ

ಮಿಸ್ ಯೂ ಗೆಳೆಯ ಸಂಜಯ್ ಲದ್ದೀಮಠ

 
ಸಕಾರಣವಿಲ್ಲದೆ ಅಕಾಲಿಕವಾಗಿ ಅಗಲಿದ ಮಿತ್ರಾ. ನಿಗೂಢವಾಗಿ ಕೇವಲ ಪ್ರಶ್ನೆಗಳನ್ನೇ ಉಳಿಸಿ ಹೋದೆಯೇಕೆ? ಈ ದೀಪಾವಳಿ ನಿನ್ನ ಆತ್ಮೀಯ ವೃತ್ತಕ್ಕೆ ಕೇವಲ ಕತ್ತಲೆ ತಂದಿಟ್ಟಿದೆ.
ಕೊನೆಗೆ ಪ್ರೇತವಾಗಿ, ಪಿಶಾಚಿಯಾಗಿ ಬಂದಾದರೂ ಕಾರಣ ಹೇಳಿ ಹೋಗು.
ಸಾವು ನಿನಗೆ ಅನಿವಾರ್ಯವಾಗಿತ್ತಾ?
ಮಿಸ್ ಯೂ..!
 

ಅಗಲಿದ ಮಿತ್ರನಿಗೆ ಅಕ್ಷರ ತರ್ಪಣ

 
ಅಗಲಿದ ಆತ್ಮೀಯ ಗೆಳೆಯನಿಗೆ ಅಕ್ಷರ ತರ್ಪಣ:
ಇಲ್ಲ.. ಈಗ ಅದ್ಯಾವ ಭಾವಗಳ ತುಮಲಗಳಿಲ್ಲ..
ಮೊನ್ನೆ ಇದ್ದ ಸಿಟ್ಟು-ಸೆಡವು, ಹತಾಶೆ, ಅಸಮಧಾನ, ಕೋಪ-ಆಕ್ರೋಷ, ದುಃಖ-ದುಮ್ಮಾನ, ಸಂಕಟ-ವೇದನೆ ಯಾವುದೂ ಇವತ್ತಿಲ್ಲ.. ಮನಸೆಲ್ಲಾ ಖಾಲಿ ಖಾಲಿ.. ಯಾವ ಪ್ರತಿಕ್ರಿಯೆಗಳೂ ಇಲ್ಲದ ನಿರ್ಭಾವುಕ, ನಿರ್ವಿಣ್ಣತೆಯ ನಿರ್ವಾತ.. ಅದೊಂದು ವಿವರಿಸಲು ಸಾಧ್ಯವಾಗದ ಶೂನ್ಯ ಸ್ಥಿತಿ.. Yes..Its an un explainable vacume..
ಪ್ರತಿ ನಿತ್ಯ ಟ್ರಾಫಿಕ್ನಲ್ಲಿ ಕಾಣಿಸುವ ಮುಖ ಒಂದು ದಿನ ಕಾಣದೇ ಇದ್ದಾಗ ಚಡಪಡಿಕೆ ಶುರುವಾಗುತ್ತೆ, ಅಂತದ್ರಲ್ಲಿ ನಿತ್ಯವೂ ಆಫೀಸ್ನಲ್ಲಿ ಮುಗುಳ್ನಗೆ ಸೂಸಿ ಸ್ವಾಗತಿಸುತ್ತಿದ್ದ ಆತ್ಮೀಯ ಕೊಲೀಗ್ ಇನ್ನು ಮುಂದೆ ಕಾಣಿಸೋದಿಲ್ಲ ಅಂದಾಗ ಹೇಗಾಗಬೇಡ..!
ಇಲ್ಲ.. ಈಗ ಅಧ್ಯಾವ ಭಾವಗಳ ತುಮಲಗಳಿಲ್ಲ..
ಇಲ್ಲ! ಈಗ ಸಿಟ್ಟು ಮಾಡಿಕೊಂಡು ಅರ್ಥವಿಲ್ಲ.. ನಿನ್ನ ಹುಟ್ಟಿನಂತೆ ಅಂತ್ಯಕ್ಕೊಂದು ಉದ್ದೇಶವೋ ಕಾರಣವೋ ಇರಲೇ ಬೇಕು..? ಏನು ಆ ಕಾರಣ..? ಯಾಕೆ ಸರಿದೆ ಮೃತ್ಯುವಿನ ಸೆರಗಿನ ಮರೆಗೆ ಹೇಳದೇ ಕಾರಣ..? ನನಗೇ ಕೇವಲ ಆ ಕಾರಣ ಬೇಕು..!
ಸತ್ತ 13 ದಿನ ಆತ್ಮ ಇಲ್ಲೇ ಇರುತ್ತದೆ.. ದೈಹಿಕವಾಗಿ ಗತಿಸಿದರೂ, ಚಿನ್ಮಯದಾಯಕ ಸ್ಪಿರಿಟ್ಗೆ ಮುಕ್ತಿ ಸಿಕ್ಕಿರೋದಿಲ್ಲ.. ಅನ್ನ ಆಹಾರ ನೀರಿಲ್ಲದೆ ಪರದಾಡುವ ಆತ್ಮ ಹಸಿವು, ಬಾಯಾರಿಕೆಗಳಿಂದ ಪರಿತಪಿಸುತ್ತದೆ ಅಂತ ಚಿಕ್ಕಂದಿನಲ್ಲಿ ಅಮ್ಮ ಕಥೆ ಹೇಳಿದ್ದ ನೆನಪು..
ಗೆಳೆಯಾ ನೀನೂ ಕೂಡಾ ಅಂತದ್ದೇ ಆತ್ಮ ಆಗಿದ್ದೀಯಾ..? ನಿನ್ನ ಸ್ಪಿರಿಟ್ಗೆ ನಾವು ಸಾಮೂಹಿಕವಾಗಿ ಇಟ್ಟ ಕಣ್ಣೀರು ಕಾಣಿಸಿತೇ..? ನಿನ್ನ ಬದುಕಿನ ದುರಂತಕ್ಕೆ ವ್ಯಕ್ತಪಡಿಸಿದ ವಿಷಾದ ಗೊತ್ತಾಯಿತೇ..? ದುಡುಕತನದ ನಿರ್ಧಾರಕ್ಕೆ ಧಿಕ್ಕಾರ ಹೇಳಿದ್ದು ಅರಿವಿಗೆ ಬಂದಿತೇ..? ನಿನ್ನ ಹೊತ್ತೊಯ್ದ ಕಾಲನಿಗೆ ಹಿಡಿಮಣ್ಣು ತೂರಿ ಶಪಿಸಿದ್ದು ಕಂಡಿತೇ..?
ಇಲ್ಲ.. ಈಗ ಅದ್ಯಾವ ಭಾವಗಳ ತುಮಲಗಳಿಲ್ಲ..
ಒಂದು ಗೆಳೆತನದ ಅಧ್ಯಾಯವನ್ನು ಬೇಗ ಮುಗಿಸಿ ಹೋಗಿಬಿಟ್ಟೆ.. ಅಂಥ ಅವಸರವೇನಿತ್ತು ನಿನಗೆ..? ಬದುಕಿದ್ದಾಗ ನೀನು ಅಂತರ್ಮುಖಿಯಾಗಿದ್ದೇಕೆ..? ಸತ್ತ ಮೇಲೆ ಪ್ರಶ್ನೆಗಳನ್ನು ಮಾತ್ರ ಉಳಿಸಿ ಹೋಗಿದ್ದೇಕೇ..? ಉತ್ತರವೇ ಇಲ್ಲದ ದೊಡ್ಡ ಪ್ರಶ್ನೆಯಾಗಿ ನೀ ಉಳಿದೆಯೇಕೆ..? ಅಸಲಿಗೆ ನಿನಗೆ ಹೋಗಲು ಅನುಮತಿ ನೀಡಿದ್ದಾದರೂ ಯಾರು..? ನಮ್ಮ ಬಳಗದ PERMISSION ತೆಗೆದುಕೊಳ್ಳದೇ ಹೋದ ನಿನ್ನ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ನೀನೇ ಹೇಳು..? ಬಾಯಿ ತುಂಬಾ ಬಯ್ಯುವ ಮನಸಾಗುತ್ತಿತ್ತು..
ಆದರೀಗ ಇಲ್ಲ, ಅದ್ಯಾವ ಭಾವಗಳ ತುಮಲಗಳಿಲ್ಲ..
ಬದುಕು ತುಂಬಾ ಸಂದಿಗ್ದ ಸಂಕದ ಮೇಲೆ ನಿಂತಿದೆ.. ನಿನ್ನ ಕಳೆದುಕೊಂಡ ಗೆಳೆಯರು ಅದೇ ಕಹಿ ನೆನಪಿನಲ್ಲಿ ಮತ್ತೊಂದು ಟೂರ್ ಮಾಡಿದ್ದಾರೆ.. ಟೂರ್ನಲ್ಲಿ ನಿನಗೆ ಕಾಯ್ದಿಟ್ಟುಕೊಂಡ ಸ್ಥಾನದಲ್ಲಿ ಮತ್ತೊಬ್ಬರು ಕುಳಿತಿದ್ದರು, ಅಲ್ಲಿ ನೀನಿರಲಿಲ್ಲ, ಆಗ ಚಿಮ್ಮುತ್ತಿದ್ದ ನಗುವಿನಲ್ಲಿ ನೀನಿಲ್ಲ,, ನಿನ್ನ ಪಾಲಿನದ್ದನ್ನು ಬೇರೆ ಯಾರೋ ತಿಂದರು, ಮತ್ಯಾರೋ ಕುಡಿದರು.. ಮಿಸ್ ಮಾಡಿಕೊಂಡಿದ್ದು ನೀನಾ..? ನಾವಾ..? ಈಗ ಹೇಳು ಸತ್ತು ಏನು ಸಾಧಿಸಿದೆ..?
ಇಲ್ಲ.. ಈಗ ನೀನಿಲ್ಲ.. ಮತ್ತೆ ನೀ ಬಾರದ ಪ್ರಪಂಚದ ಕಡೆ ಹೋಗಿದ್ದೀಯಾ..? ನಿನ್ನ ನೆನಪುಗಳನ್ನು ಒರೆಸಿ ಹಾಕಲೇ ಬೇಕು.. ಇದು ನಿನ್ನ ಬಗ್ಗೆ ಬರೆವ ಕಟ್ಟ ಕಡೆಯ ಸಾಲುಗಳು.. ಇನ್ನು ಮುಂದೆ ನಮ್ಮ ಪ್ರಪಂಚದಲ್ಲಿ ಸಂಜಯ ಲದ್ದೀಮಠ ಅನ್ನುವ ಹೆಸರು ಶಾಶ್ವತವಾಗಿ ಅಳಿಸಿ ಹೋಗುತ್ತದೆ..
ಆದ್ರೆ…
ಮರೆತೇನಂದರೂ ಮರೆಯಲಿ ಹ್ಯಾಂಗ..
ನಮ್ಮೆಲ್ಲರ ಹೃದಯಲ್ಲಿ ಒಂದು ಸಣ್ಣ ಕೊಣೆಯೊಳಗೆ ನಿನ್ನ ಬಂಧಿಸಿ ಕೂಡಿ ಹಾಕುತ್ತೇವೆ.. ಒಂದು ಪುಟ್ಟ ಬೀಗ ಜಡಿಯುತ್ತೇವೆ.. ಅದು ಚಿಕ್ಕದ್ದೇ ಕೊಠಡಿ ಆದ್ರೆ ಅದು ನಿನ್ನ ಮೊನ್ನೆ ಫೋಸ್ಟ್ ಮಾರ್ಟಂಗೆ ಮಲಗಿಸಿದರಲ್ಲ ಮಾರ್ಚರಿಯ ಆ ಪುಟ್ಟ ಕ್ಯಾಬಿನ್ ಅಂತದ್ದಲ್ಲ.. ಅಲ್ಲಿ ಕತ್ತಲಿಲ್ಲ.. ಉಸಿರುಗಟ್ಟಿಸುವ ಇಕ್ಕಟ್ಟಿಲ್ಲ.. ಭಯ ಹುಟ್ಟಿಸುವ ಒಂಟಿತನವಿಲ್ಲ.. ಅದು ಕಂಫರ್ಟಾಗಿದೆ.. ನೀನು ಅಲ್ಲೇ ಇರಬೇಕು.. ಅಲ್ಲೇ ಇರುತ್ತೀಯಾ.. ನೆನಪಿನ ಗಣಿಯಾಳಕ್ಕೆ ಸೇರಿಹೋದ ಕಟ್ಟ ಕಡೆಯ ಚುಟುಕು ಸ್ಮೃತಿಯಾಗಿ..
ಅಗಲಿ ಹೋದ ನಿನಗೆ ಇದು ನಿನ್ನ ಸ್ನೇಹ ಬಳಗದ ಅಂತಿಮ ಆತ್ಮೀಯ ಅಕ್ಷರಗಳ ಅಶೃ ತರ್ಪಣ..
-ವಿಶ್ವಾಸ್ ಭಾರದ್ವಾಜ್..
*********

ನಿನ್ನೋಳು ನಾ. ನನ್ನೊಳು ನೀ

 
ಗೆಳೆಯ ಹರೀಶ್ ಎಚ್ಚರಿಕೆ ಬೆರೆತ ಆಮಂತ್ರಣ ನೀಡಿದ್ದ, ಹೋಗದೇ ವಿಧಿ ಇರಲಿಲ್ಲ. ಬಹಳಷ್ಟು ದಿನಗಳಿಂದ ಮನಸಿಗೆ ಮುದ ನೀಡುವ ನಾಟಕವೊಂದನ್ನು ನೋಡಿರಲೇ ಇಲ್ಲ. ಸಾಕಷ್ಟು ಪ್ರೌಢ ಸಂಗತಿಗಳನ್ನು ಹುಟ್ಟು ಹಾಕುವ ನಾಟಕ "ನನ್ನೊಳು ನೀ, ನಿನ್ನೊಳು ನಾ "
ಎರಡೇ ಪಾತ್ರಗಳು ಆದಿಯಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಬಹುತೇಕ ಸಫಲವಾಗಿದೆ. ಈ ವಿಷಯದಲ್ಲಿ ಅವನಾದ ಅವಿನಾಶ್ ಹಾಗು ಅವಳಾದ ಪ್ರಿಯ ನಟನ ಯಶಸ್ವಿಯಾದ್ರು.. ಅಭಿನಯ ಹಾಗೂ ಅಭಿವ್ಯಕ್ತಿ ಎರಡೂ ಪಕ್ಕಾ ಪ್ರೋಫೇಶನಲ್ ಅನ್ನಿಸಿತು.
ರಂಗ ಸಜ್ಜಿಕೆ, ಬೆಳಕು, ಕಥಾ ವಿಸ್ತರಣೆ, ಪಾತ್ರಗಳಲ್ಲಿ ಸನ್ನಿವೇಶಗಳ ನಿರೂಪಣೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂತು..
ನಾಟಕವೇನೋ ಮುಗಿಯಿತು. ಆದ್ರೆ ಪ್ರೇಕ್ಷಕರ ಮನಸಿನಲ್ಲಿ ಇನ್ನೊಂದು ದೃಶ್ಯ ಉಳಿದಿದೆಯೇನೋ ಅನ್ನುವಷ್ಟರಮಟ್ಟಿಗೆ ಅದರ ಮುಂದುವರಿಕೆ ಇತ್ತು.
ಈಗ ಕಾಡುತ್ತಿರುವ ಅಸಂಖ್ಯ ಪ್ರಶ್ನೆಗಳಲ್ಲಿ ಕೆಲವು ವಾಸ್ತವದ ಸೈದ್ದಾಂತಿಕ ಚೌಕಟ್ಟಿಗೆ ಸೇರುತ್ತವೇ.
ಯಾರು ಸರಿ? ಅವನಾ...? ಅವಳಾ...?
ಯಾವುದು ಸರಿ.....? ಸ್ವಾತಂತ್ರವಾ...? ಸ್ವೇಚ್ಛೆಯಾ...?
ಬ್ರಾಹ್ಮಣರ ಹೆಣ್ಣು ಮಗಳು ಆಧುನಿಕತೆಯ ಸೋಗಿನಲ್ಲಿ ಸಿಗರೇಟು ಸೇದುವುದು, ಹೆಂಡ ಕುಡಿಯುವುದು, ಚಿಕನ್ ತಿನ್ನುವದು ಅಥವಾ ಸಂಪ್ರಧಾಯದ ಸಮಾಜಿಕ ಪರಂಪರೆಯನ್ನು ಧಿಕ್ಕರಿಸಿ,ಅದನ್ನೇ ಸ್ತ್ರೀ ಸ್ವಾತಂತ್ರ, ಪುರುಷ ಪ್ರದಾನ ಸಮಾಜದ ಜೊತೆಗಿನ ಸಮಾನತೆ ಅಂದುಕೊಳ್ಳುವುದು ಎಷ್ಟು ಸೂಕ್ತ...?
ಮೇಲ್ನೋಟಕ್ಕೆ ಸಂಪ್ರದಾಯದ ಕಟ್ಟಾ ವಿರೋಧಿ ಅನ್ನುವ ಸೋಗು ಹಾಕುವ ಮುಖವಾಡದಾರಿ ಅವನು.. ಸಂಪ್ರದಾಯದ ಅನಿವಾರ್ಯತೆಯ ನಟನೆ, ಹೆಂಡತಿ ಮೇಲೆ ತೋರಿಕೆಯ ಪ್ರೀತಿ, ಮನಸಿನಲ್ಲಿ ಸಂಶಯದ ಮೂಟೆ. ಸ್ವಾತಂತ್ರ ಕೊಡುತ್ತೇನೆ ಆದರೆ ನಾನು ಕೊಟ್ಟ ಸ್ವಾತಂತ್ರದ ಲೆಕ್ಕ ಕೊಡು ಅನ್ನುವ ಧೋರಣೆ..
ಅವಳ ಮನಸ್ಸಿನಲ್ಲಿ ಹಳೇಯ ಪ್ರೇಮಿಯ ಸ್ಮ್ರತಿ, ಹೊಸ ಬದುಕಿನ ಅಸಮ್ಮತ ಆ
ಲಿಂಗನ..
ಅವನಿಗೆ ಅವಳು ಕೇವಲ ಪಾತ್ರದಂತೆ ಬದಲಾಗಬೇಕಾದ ಕಲಾವಿದೆ.
ಅವನು ಅವಳಾಗಲೂ ಇಲ್ಲ, ಅವಳನ್ನು ಅರ್ಥ ಮಾಡಿಕೊಳ್ಳಲೂ ಒಲ್ಲ.
ಗಂಡಿನ ಅಹಂ, ಹೆಣ್ಣಿನ ಸ್ವಾಭಿಮಾನವನ್ನು ನಾಟಕದಲ್ಲಿ ಕಟ್ಟುವ ಪ್ರಯತ್ನ ಮಾಡಲಾಗಿದೆ.. ವಾಸ್ತವದ. ಜೀವಂತಿಕೆ ತುಂಬುವ ಸಫಲ ಯತ್ನವಿದೆ. ನಾಟಕದುದ್ದಕ್ಕೂ ಲಘು ಹಾಸ್ಯ ತುಂಬಿ ಹರಿಯುತ್ತದೆ.
ಅವಿನಾಶ್ ರ ಸಂಭಾಷಣೆ, ನಿರ್ದೇಶನ ಮೆಚ್ಚುವಂತದ್ದು.
ಪ್ರಿಯ ನಟನ ಎಲ್ಲಿಯೂ ಓತಪ್ರೇತವಾಗದಂತೆ ತನ್ನ ಪಾತ್ರವನ್ನು ಸರಿದೂಗಿಸಿಕೊಂಡು ಹೋಗಿದ್ದಾಳೆ.
ಒಂದು ಒಳ್ಳೆಯ ಸಾಯಂಕಾಲ ಕೊಟ್ಟಿದ್ದಕ್ಕೆ ಗೆಳೆಯ ಹರೀಶ್ ಗೆ, ನಾಟಕದ ತೆರೆಯ ಮುಂದಿನ ಹಾಗೂ ತೆರೆಯ ಹಿಂದಿನ ಎಲ್ಲಾ ಗೆಳೆಯರಿಗೆ ಧನ್ಯವಾದ...
-ವಿಶ್ವಾಸ್ ಭಾರದ್ವಾಜ್

ನನ್ನ ತಲೆಕೆಟ್ಟ ಕಾದಂಬರಿಯಲ್ಲಿ ಬರುವ ದೃಶ್ಯವಿದು

 
ಸುದೀರ್ಘ ೧ ಗಂಟೆ ತನ್ನ ಭವ್ಯ ಮಹಲಿನ ಪೋರ್ಟಿಕೋದಲ್ಲಿದ್ದ ಚಪ್ಪಲಿಯ ಸ್ಟಾಂಡ್ ಬಳಿ ಕುಳಿತ ನಿರಂಜನ್ ಷಾ, ಅಲ್ಲಿದ್ದ ಸುಮಾರು ೨೮ ವಿವಿಧ ಬಗೆಯ ಇಂಪೋರ್ಟೆಡ್ ಬ್ರಾಂಡೆಡ್ ಚಪ್ಪಲಿಗಳು, ನಾನಾ ವರೈಟಿಯ ಶೂಗಳನ್ನು ದಿಟ್ಟಿಸತೊಡಗಿದ..
ಅದು ಪ್ರಭಂಜನ್ ಷಾ ಅನ್ನುವ ಮಲ್ಟಿ ಮಿಲೇನಿಯರ್, ನಿರಂಜನ್ ಷಾ ಗ್ರೂಪ್ ಅಫ್ ಸ್ಟೀಲ್ಸ್ ಎಂಡ್ ಐರನ್ ಇಂಡಸ್ಟ್ರಿ ಅನ್ನುವ ಮಹಾ ಸಾಮ್ರಾಜ್ಯದ ಉತ್ತರಾಧಿಕಾರಿ ನಿರಂಜನ್ ಷಾನ ಲೌಕಿಕದಿಂದ ಮಹಾ ನಿರ್ವಾಣದ ನಿರ್ಧಾರ ಅಣಿಗೊಂಡ ಕ್ಷಣ..
ಲಂಡನ್ ಸಂಸತ್ತಿನ ಮುಂಬಾಗದ ಬಿಗ್ ಬೆನ್ ಗ್ರೇಟ್ ಕ್ಲಾಕ್ ಕೆಳಗೆ ಕುಳಿತ ವೃದ್ಧ ಫ್ರೆಂಚ್ ಭಿಕ್ಷುಕನ ಮಾತುಗಳು ನಿರಂಜನನ ಕಿವಿಯಲ್ಲಿ ರಿಂಗಣಿಸತೊಡಗಿತು..
ಫ್ರೆಂಚ್ ಬೆರೆತ ಇಂಗ್ಲೀಷ್ ನಲ್ಲಿ ಆ ಭಿಕ್ಷುಕ ಹೇಳಿದ್ದು ನಿರಂಜನನಿಗೆ ಅಂದು ಅರ್ಥವಾಗಿರಲಿಲ್ಲ..

ಹಸಿವಿನ ಜಗತ್ತಿನ ಆರ್ತನಾದದ ಕಿಡಿ ಹೊತ್ತಿಸಿದ
ಸಣ್ಣ ಕರುಳಿನೊಳಗಣ ಸುಡುವ ಜ್ವಾಲಾಗ್ನಿ
ಐಶಾರಾಮಿ ದೊರೆಗಳ ಅರಸೊತ್ತಿಗೆಯ ಪಾಕಶಾಲೆಗೆ
ಒಟ್ಟುವ ಕಟ್ಟಿಗೆಯ ಬೆಂಕಿಯಾಗಲಾರದು
ಚಳಿ ಕಾಯಿಸಿಕೊಳ್ಳುವ ಇಟ್ಟಿಗೆ ಗೂಡಿನ
ಉರಿವ ಕೊಳ್ಳಿಯೂ ಆಗಲಾರದು
ಬಣ್ಣಬಣ್ಣದ ಗರಿಗರಿ ವಸ್ತ್ರ, ಥಂಡಿ ಓಡಿಸುವ ಕೋಟು
ಹಸುವಿನ ತೊಗಲು ಹರಿದ ಚೆಂದದ ಬೂಟು
ಮೆಟ್ಟಿದ ನೆಲದೊಳಗೆ ಹೂತು ಹೋಯಿತು
ಜಗತ್ತಿನ ಎಲ್ಲಾ ಹಸಿದ ಬಡವರ ಗಂಟಲ
ಕೂಗು ಕೇಕೆ..

ಇಂಥದ್ದೊಂದು ಆರ್ಥಿಕ ದಾರ್ಷ್ಟ್ಯ ಧಿಕ್ಕರಿಸಿ ಹೊರಡುತ್ತಾನೆ ನಿರಂಜನ.. ಕೊನೆಗೆ ಕಾಲಿಗೊಂದು ಮೆಟ್ಟೂ ಇಲ್ಲದೆ, ಬರಿಗಾಲಿನಲ್ಲಿ..
(ನನ್ನ ತಲೆಕೆಟ್ಟ ಕಾದಂಬರಿಯಲ್ಲಿ ಬರುವ ದೃಶ್ಯವಿದು)