Tuesday, 30 December 2014

ಹ್ಯಾಮ್ಲೆಟ್ ನಾಟಕದ ವಿಮರ್ಷೆ

ಅತೃಪ್ತ ಆತ್ಮದ ಅಸ್ತ್ಯವ್ಯಸ್ತ ಸ್ಥಿತಿಯಲ್ಲಿ ತನ್ನ ಭಗ್ನ ದೇಹಕ್ಕೆ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ:
ಅತೃಪ್ತ ಆತ್ಮ ಹೊಂದಿದ ಅಸ್ತ್ಯವ್ಯಸ್ತ ಸ್ಥಿತಿಯಲ್ಲಿ ತನ್ನ ಭಗ್ನ ದೇಹಕ್ಕೆ ಕತ್ತಿಯಲ್ಲಿ ಇರಿದುಕೊಂಡು ಹ್ಯಾಮ್ಲೆಟ್ ಮತ್ತೆ ಸತ್ತ..
ಶೇಕ್ಸ್ಪಿಯರ್ನ ಅತ್ಯಂತ ಜನಪ್ರಿಯ ನಾಟಕ ಹ್ಯಾಮ್ಲೆಟ್ ಉಪಸಂಹಾರಗೊಳ್ಳುವುದು ಹೀಗೆ.. ರಾಮಚಂದ್ರ ದೇವ ಕನ್ನಡಕ್ಕೆ ತಂದ ಹ್ಯಾಮ್ಲೆಟ್ಗೆ ಹೊಸ ಪರಿಕಲ್ಪನೆ ನೀಡಿ ರಂಗದ ಮೇಲೆ ತಂದಿದ್ದರು ನಿರ್ದೇಶಕ ಅವಿನಾಶ್ ಷಟಮರ್ಶನ.. ಹನುಮಂತ ನಗರದ ಕೆ.ಹೆಚ್ ಕಲಾಸೌಧದಲ್ಲಿ ಹ್ಯಾಮ್ಲೆಟ್ ದೀರ್ಘ 2 ಗಂಟೆಗಳ ಕಾಲ ಪ್ರೇಕ್ಷಕರನ್ನು ಖುರ್ಚಿಯ ತುದಿಯಲ್ಲಿ ತಂದು ಕೂರಿಸಿದ್ದ..
ಶೇಕ್ಸ್ ಪಿಯರ್ನ ಉಳಿದ ದುರಂತ ನಾಟಕಗಳಂತೆ ಹ್ಯಾಮ್ಲೆಟ್ ನಲ್ಲೂ ಹಲವು ದುರಂತದ್ದೇ ಆಯಾಮಗಳಿವೆ.. ತಂತ್ರ-ಕುತಂತ್ರ-ಷಡ್ಯಂತ್ರಗಳ ರಾಜಕಾರಣದಲ್ಲಿ ಹ್ಯಾಮ್ಲೆಟ್ ನ ನವಿರಾದ ಪ್ರೀತಿಯೂ ಬಣ್ಣ ಕಳೆದುಕೊಳ್ಳುತ್ತದೆ.. ಕಿರೀಟಕ್ಕಾಗಿ ರಾಣಿಗಾಗಿ ತನ್ನ ಅಪ್ಪನ ಕೊಲೆಯಾಯಿತು ಅನ್ನುವ ಸಂಗತಿ ಗೊತ್ತಾದ ಕೂಡಲೆ ಹ್ಯಾಮ್ಲೆಟ್ ನ ಮನಸಿನಲ್ಲಿ, ಹ್ಯಾಮ್ಲೆಟ್ ನ ಚಿತ್ತದಲ್ಲಿ, ಹ್ಯಾಮ್ಲೆಟ್ ಪ್ರಜ್ಞೆ ಹಾಗೂ ಪ್ರಕೃತಿಯಲ್ಲಿ ಉಂಟಾಗುವ ಬಹುವಿಧದ ಬದಲಾವಣೆಗಳು ಎಳ್ಳಷ್ಟೂ ವ್ಯೆತ್ಯಾಸವಿಲ್ಲದಂತೆ ರಂಗಪ್ರಯೋಗಗೊಂಡಿದೆ.. ಕಥೆಗೆ ತಿರುವು ನೀಡುವ ಹ್ಯಾಮ್ಲೆಟ್ ತಂದೆಯ ಪ್ರೇತ ರಂಗದ ಮೇಲೆ ಮೂರ್ನಾಲ್ಕು ಸುತ್ತು ತಿರುಗಿ ಪ್ರೇಕ್ಷಕರ ಮನಸಿನಲ್ಲಿ ಅಚ್ಚೊತ್ತುತ್ತದೆ..
ಪ್ರಿನ್ಸ್ ಹ್ಯಾಮ್ಲೆಟ್ ತನ್ನನ್ನು ನಿರ್ವಂಚನೆಯಿಂದ ಪ್ರೀತಿಸುತ್ತಾನೆ.. ಇದಕ್ಕಾಗಿ ಆತ ಸ್ವರ್ಗದಲ್ಲಿರುವ ಪವಿತ್ರ ಶಕ್ತಿಗಳ ಮೇಲೆ ಆಣೆ ಮಾಡಿ ಹೇಳಿದ ಅನ್ನುವ ನಂಬುಗೆಯ ಸಮರ್ಥನೆ ನೀಡುವ ಒಫೀಲಿಯಾಳಿಗೆ, ಅವಳ ತಂದೆ ಪೋಲೋನಿಯಸ್ ನೀಡುವ ಉತ್ತರ ಅದು ಗುಬ್ಬಚ್ಚಿಗಳನ್ನು ಹಿಡಿಯುವ ಬಲೆ.. ಇಲ್ಲಿ ಒಫೀಲಿಯಾಳ ಪ್ರೀತಿ ಅಮಾಯಕ ಎಂದು ಬಯಸುವ ಪೋಲೋನಿಯಸ್ ಪ್ರಿನ್ಸ್ ಹ್ಯಾಮ್ಲೆಟ್ನನ್ನು ಮೋಸಗಾರ ಎಂದು ಅಂದಾಜಿಸುತ್ತಾನೆ.. ಇಂತಹ ಹಲವು ಸನ್ನಿವೇಶಗಳನ್ನು ಹಾಗೂ ಸಂಭಾಷಣೆಗಳನ್ನು ನಾಟಕದಲ್ಲಿ ಯಶಸ್ವಿಯಾಗಿ ತೋಗಿಸಿಕೊಂಡು ಹೋಗಲಾಗಿದೆ..
ಯಾವ ವಿಷ ಸರ್ಪ ತನ್ನನ್ನು ಕಚ್ಚಿತೋ ಅದೇ ವಿಷ ಸರ್ಪ ಈಗ ಡೆನ್ಮಾರ್ಕ್ ನ ಸಿಂಹಾಸನದಲ್ಲಿ ಕುಳಿತಿದೆ.. ರಾಣಿಯನ್ನು ಮೋಹ ಪರವಶಗೊಳಿಸಿ ಕಿರೀಟ ತೊಟ್ಟಿದೆ.. ಈ ಸಂಚಿಗೆ ತಾನು ಬಲಿಯಾದೆ. ಈ ಸೇಡಿಗೆ ನೀನು ತಕ್ಕ ಪ್ರತ್ಯುತ್ತರ ನೀಡು ಅಂತ ಆದೇಶ ನೀಡುವ ಭೂತ, ಹ್ಯಾಮ್ಲೆಟ್ ನ ತಂದೆ ಡೆನ್ಮಾರ್ಕ್ ನ ಮಾಜಿ ಪ್ರಭು.. ಅತ್ತ ಕ್ಲಾಡಿಯಸ್ ಅನ್ನುವ ಹೊಸ ಅರಸ ಡೆನ್ಮಾರ್ಕ್ ನ ಸಿಂಹಾಸನವನ್ನು ಅಲಂಕರಿಸುತ್ತಿರುತ್ತಾನೆ.. ನಿನ್ನೆಯವರೆಗೂ ನನ್ನ ಅತ್ತಿಗೆಯಾದ ಗರ್ಟ್ರೂಡ್ ಇಂದು ನನ್ನ ರಾಣಿ ಎಂದು ಹಿಗ್ಗುವ ಕ್ಲಾಡಿಯಸ್ ಹಾವು ಕಡಿದು ಸತ್ತ ಅಣ್ಣನ ಸಾವಿಗೆ ಸಂತಾಪಿಸಿ ಗರ್ಟ್ರೂಡ್ ಳ ಕೈ ಚುಂಬಿಸುತ್ತಾನೆ.. ಈ ಎರಡೂ ದೃಶ್ಯಗಳನ್ನು ಒಂದೇ ವೇದಿಕೆಯಲ್ಲಿ ಒಂದೇ ಸಂದರ್ಭದಲ್ಲಿ ಪ್ರದರ್ಶಿಸಿದ್ದು ನಾಟಕದ ಗಾಂಭೀರ್ಯತೆಯನ್ನು ಹೆಚ್ಚಿಸಿ ಕಥೆಯ ನಿರೂಪಣೆಯನ್ನು ಸುಗಮಗೊಳಿಸಿತು..
ತೋಟದಲ್ಲಿ ಅಸ್ವಸ್ಥನಾಗಿ ಮಲಗಿದ್ದ ಗಂಡ, ತನ್ನ ಕಾಲದ ಬಳಿಕ ನೀನು ಬೇರೆ ಗಂಡನನ್ನು ಹುಡುಕಿಕೋ ಅಂದಾಗ ನಾನು ನಿಮ್ಮ ಹೊರೆತು ಬೇರೆ ಗಂಡನ ಕಲ್ಪನೆ ಮಾಡಿಕೊಂಡರೆ ನನ್ನ ಈ ಬದುಕಿಗೆ ಸ್ವರ್ಗದ ಶಕ್ತಿಗಳ ಶಾಪವಿರಲಿ ಎಂದು ವಿದೇಯ ಮಾತುಗಳನ್ನಾಡಿದ್ದು ಗರ್ಟ್ರೂಡ್ ಗೆ ಮರೆತೇ ಹೋಗಿರುತ್ತದೆ. ಇದೇ ಸಂದರ್ಭದಲ್ಲಿ ಸಂಚು ಹೂಡಿದ್ದ ಚಿಕ್ಕಪ್ಪನ ಕ್ರೂರ ನಿರ್ಧಾರಕ್ಕೆ ಕುದಿಯುವ ಹ್ಯಾಮ್ಲೆಟ್ ತನ್ನ ತಾಯಿಯ ನಡತೆಯ ಬಗ್ಗೆಯೂ ಅಸಹ್ಯಿಸಿಕೊಳ್ಳುತ್ತಾನೆ.. ತಂದೆಯ ತಿಥಿಗೆ ಮಾಡಿದ್ದ ಅಡುಗೆ ಖಾಲಿಯಾಗುವ ಮೊದಲೇ ತಾಯಿಯ ಇನ್ನೊಂದು ಮದುವೆಯ ಭೋಜನ ತಯಾರಾಗುತ್ತಿದೆ ಎನ್ನುವ ಹ್ಯಾಮ್ಲೆಟ್ ನ ವ್ಯಂಗ್ಯದ ಮಾತು ಈ ದೃಶ್ಯಕ್ಕೆ ಬೌದ್ದಿಕ ಶ್ರೀಮಂತಿಕೆ ಒದಗಿಸುತ್ತದೆ..
ತಂದೆಯ ಸಾವಿನ ಹಿಂದಿದ್ದ ಸಂಚನ್ನು ಅರಿತ ಹ್ಯಾಮ್ಲೆಟ್ ಆ ಕ್ಷಣದಲ್ಲಿ ಅನುಭವಿಸುವ ಚಿತ್ರಹಿಂಸೆ, ಸೇಡಿನ ಉರಿ, ಪ್ರತೀಕಾರ ಜ್ವಾಲೆ, ವಿಶ್ವಾಸ ದ್ರೋಹದ ಕಂಪನ, ಪಿತೃ ವಾಕ್ಯ ಪರಿಪಾಲನೆಯ ಕರ್ತವ್ಯ ಇವೆಲ್ಲವೂ ಯಥಾವತ್ತು ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದ ಹಿಂದಿನ ರಂಗಪ್ರಯೋಗಗಳಂತೆ ಮೂಡಿಬಂದಿದೆ.. ತಂತ್ರಕ್ಕೊಂದು ಪ್ರತಿತಂತ್ರ ಹಣೆವ ಹ್ಯಾಮ್ಲೆಟ್ ಪ್ರಯತ್ನದ ಹಿಂದಿನ ತಲ್ಲಣ, ಹೆಣಗಾಟ ಹಾಗೂ ಒದ್ದಾಟಗಳು ನಾಟಕದ ಕೆಲವು ದೃಶ್ಯಗಳಲ್ಲಿ ಮನೋಜ್ಞವಾಗಿ ಮೂಡಿಬಂದಿದೆ
ವಿಟ್ಟಿನ್ ಬರ್ಗ್ ವಿಶ್ವವಿದ್ಯಾನಿಲಯದಿಂದಲೂ ಹ್ಯಾಮ್ಲೆಟ್ ನ ಒಡನಾಡಿಯಾದ ಹೊರೋಷಿಯೋಗೆ ಹ್ಯಾಮ್ಲೆಟ್ ನ ಅಂತರಾಳದ ವೇದನೆ ಅರ್ಥವಾಗುತ್ತದೆ.. ಹುಚ್ಚನಂತೆ ನಟಿಸಿ ಸೇಡು ತೀರಿಸಿಕೊಳ್ಳುವ ತನ್ನ ಕಾರ್ಯತಂತ್ರವನ್ನು ಹ್ಯಾಮ್ಲೆಟ್ ಹೊರೋಷಿಯೋ ಬಳಿ ಹೇಳಿಕೊಳ್ಳುವ ಪ್ರಸಂಗ ಇಡೀ ಪ್ರಸಂಗಕ್ಕೆ ಜೀವಂತ ಸಾಕ್ಷಿಯೊಂದರ ಸೃಷ್ಟಿಯಂತೆ ಗೋಚರಿಸುತ್ತದೆ.. ಕೊನೆಗೆ ಹ್ಯಾಮ್ಲೆಟ್, ಒಫೀಲಿಯಾ, ಕ್ಲಾಡಿಯಸ್, ಗರ್ಟ್ರೂಡ್, ಪೋಲೋನಿಯಸ್, ಲಾರ್ಟೆಸ್ ಎಲ್ಲರೂ ಸತ್ತಾಗ ಇಡೀ ವೃತ್ತಾಂತಕ್ಕೆ ಸಾಕ್ಷಿಯಾಗಿ ಉಳಿಯುವ ಏಕೈಕ ವ್ಯೆಕ್ತಿ ಹೊರೋಷಿಯೋ ಮಾತ್ರ.
.
ಹ್ಯಾಮ್ಲೆಟ್ ನಲ್ಲಿ ಉತ್ಸಾಹದ ಕಾರಂಜಿ ಚಿಮ್ಮಿ ಉಕ್ಕುವ ತಾರುಣ್ಯವಿತ್ತು.. ಡೆನ್ಮಾರ್ಕ್ ನ ಉತ್ತರಾಧಿಕಾರಿ ಎನ್ನುವ ಹಮ್ಮಿತ್ತು.. ಯುದ್ದ ರಾಜ್ಯಾಡಳಿತ, ಅಧಿಕಾರ ಮುಂತಾದ ಮಹತ್ವಾಕಾಂಕ್ಷೆಗಳಿದ್ದವು, ಮುಖ್ಯವಾಗಿ ಒಫೀಲಿಯಾಳ ಒಲವಿನ ಬಂಧನದಲ್ಲಿ ಅರ್ಪಿಸಿಕೊಂಡು ಧನ್ಯತೆ ಪಡೆವ ಹೆಬ್ಬಯಕೆಯಿತ್ತು.. ಒಫೀಲಿಯಾಳ ಹೆಜ್ಜೆ ಸದ್ದುಗಳ ಆಲಿಸುವ, ಅವಳು ಬರುವ ದಾರಿಯ ಅವಲೋಕಿಸುವ, ಅವಳ ಕಂಗಳನ್ನು ದಿಟ್ಟಿಸುವ, ಅವಳ ಸ್ಪರ್ಷಕ್ಕಾಗಿ ಹಾತೊರೆವ ಸ್ಪಷ್ಟ ತುಡಿತಗಳಿದ್ದವು..
ತಂದೆಯ ದುರಂತ ಸಾವು, ಅದರ ಹಿಂದಿನ ಷಡ್ಯಂತ್ರ, ಕುಯುಕ್ತಿಯ ರಾಜಕಾರಣ, ಅಮ್ಮ ಗರ್ಟ್ರೂಡ್ ಎಸಗುವ ದ್ರೋಹ, ಚಿಕ್ಕಪ್ಪ ಕ್ಲಾಡಿಯಸ್ ನ ಹೀನ ದುರಾಸೆ ಕೇವಲ ಹ್ಯಾಮ್ಲೆಟ್ ನ ಯೌವನದ ಭಾವಗಳನ್ನು ಮಾತ್ರ ಕೊಲ್ಲುತ್ತಾ ಹೋಗುವುದಿಲ್ಲ, ಜೊತೆಗೆ ಆತನ ನೆಮ್ಮದಿ, ಪ್ರೀತಿ, ಕೊನೆಗೆ ಒಫೀಲಿಯಾಳ ಪ್ರೇಮದ ಆರಾಧನೆಯನ್ನೂ ಪ್ರತಿಕ್ಷಣ ನಾಶಪಡಿಸುತ್ತಾ ಹೋಗುತ್ತದೆ.. ಹ್ಯಾಮ್ಲೆಟ್ ಹುಚ್ಚನ ನಟನೆ ಮಾಡುತ್ತಾನೋ ಅಥವಾ ನಿಜವಾಗಿಯೂ ಹುಚ್ಚನಾಗಿಬಿಟ್ಟಿದ್ದಾನೋ ಅನ್ನುವಷ್ಟರ ಬದಲಾವಣೆ ಆತನ ವ್ಯೆಕ್ತಿತ್ವದಲ್ಲಾಗುತ್ತದೆ.. ಇದನ್ನು ರಾಜ ಕ್ಲಾಡಿಯಸ್, ರಾಣಿ ಗರ್ಟ್ರೂಡ್, ಸಿಂಹಾಸನದ ನಿಷ್ಟ ಪೋಲೋನಿಯಸ್ ನಂಬುತ್ತಾರೆ ಆದರೆ ಕೊನೆಗೆ ಒಫೀಲಿಯಾಳೂ ಹ್ಯಾಮ್ಲೆಟ್ ಗೆ ಹುಚ್ಚು ಹಿಡಿದಿದೆ ಅನ್ನುವ ಅನುಮಾನ ಕಾಡುತ್ತದಾ ಎನ್ನುವಲ್ಲಿಯೇ ಶೇಕ್ಸ್ ಪಿಯರ್ ನ ಸಾಹಿತ್ಯಕ ಮಾಂತ್ರಿಕತೆ ಕಾಣುತ್ತದೆ..
ನಾಟಕದ ಮಧ್ಯೆ ಬರುವ ನಾಟಕಕಾರರ ಪಾತ್ರ ಹ್ಯಾಮ್ಲೆಟ್ ಕಥೆಗೆ ತಾರ್ಕಿಕ ಅಂತ್ಯ ಒದಗಿಸುವ ಮಾಧ್ಯಮವಾಗುತ್ತದೆ.. ಅಂತ್ಯದಲ್ಲಿ ಹ್ಯಾಮ್ಲೆಟ್ ನ ಸೂಚನೆಯಂತೆ ಅವನ ತಂದೆಯ ಸಾವಿನ ಪ್ರಸಂಗವನ್ನು ಅಭಿನಯಿಸುವ ಈ ಮೂಲಕ ಕ್ಲಾಡಿಯಸ್, ಗರ್ಟ್ರೂಡ್ ರ ಆತ್ಮಸಾಕ್ಷಿಯನ್ನು ಕಲಕುವ, ಕೊನೆಗೆ ಪ್ರತ್ಯುತ್ತರ ತೀರಿಸಿಕೊಳ್ಳಲು ಹಚ್ಚುವ ಕಿಡಿಯಂತೆ ಗೋಚರಿಸುತ್ತದೆ..
ನಿಜಕ್ಕೂ ಹ್ಯಾಮ್ಲೆಟ್ ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿತು.. ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ಬೆಳಕು, ಹಿನ್ನಲೆ ಸಂಗೀತ, ನಿರೂಪಣೆ, ಅಭಿನಯ, ಪರಿಕಲ್ಪನೆ ಎಲ್ಲದರಲ್ಲೂ ಶ್ರದ್ಧೆಯಿತ್ತು.. ರಂಗದ ಮೇಲೆ ಆಗಾಗ ಕೆಲವು ತಾಂತ್ರಿಕ ದೋಷಗಳು ಕಂಡುಬಂದವಾದರೂ ಅದರಿಂದ ಪ್ರದರ್ಶನದ ಔಟ್ ಪುಟ್ ಗೇನೂ ಸಮಸ್ಯೆಯಾಗಲಿಲ್ಲ.. ಕೆಲವು ಪಾತ್ರದಾರಿಗಳ ಅಭಿನಯ ಸಪ್ಪೆ ಅನ್ನಿಸುವಂತಿತ್ತು ಆದರೆ ಮುಖ್ಯ ಪಾತ್ರಿದಾರಿಗಳ ಮನೋಜ್ಞ ಅಭಿನಯ ಆ ನ್ಯೂನ್ಯತೆಯನ್ನು ಮರೆಯಾಗಿಸಿತು.. ಹ್ಯಾಮ್ಲೆಟ್ ಪಾತ್ರದಾರಿಯಾಗಿ ಮಹೇಶ್ ಅಭಿನಯ ಅತ್ಯುತ್ತಮವಾಗಿತ್ತು.. ಉಳಿದ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.. ಇನ್ನುಳಿದಂತೆ ನಾಟಕಕಾರ್ತಿಯಾಗಿ ಮಧ್ಯೆ ಕಾಣಿಸಿಕೊಳ್ಳುವ ಪ್ರಿಯ ನಟನಳ ನಟನೆ ಹಾಗೂ ಆಂಗಿಕ ಅಭಿನಯ ಹಿಂದಿಗಿಂತ ಉತ್ತಮಗೊಂಡಿದೆ.. ನಾಟಕದ ನಡುವೆ ಹಿನ್ನೆಲೆ ಧ್ವನಿಯಲ್ಲಿ ಮಾತನಾಡುವ ಅವಿನಾಶ್ ನಟನೆಯ ಸೂಕ್ಷ್ಮದ ಬಗ್ಗೆ ನೀಡುವ ಖಡಕ್ ಎಚ್ಚರಿಕೆ ಹ್ಯಾಮ್ಲೆಟ್ ನ ಹೊಸ ಪ್ರಯೋಗ.. ರಂಗಾಸಕ್ತರು ಒಮ್ಮೆ ನೋಡಲೇಬೇಕಾದ ನಾಟಕ ಹ್ಯಾಮ್ಲೆಟ್, ಆದರೆ ಅಸಲಿಗೆ ಯುವರಾಜ ಹ್ಯಾಮ್ಲೆಟ್ ನ ಉದ್ದೇಶ ಈಡೇರುತ್ತದಾ..? ಒಫೀಲಿಯಾಳ ನಿರ್ವಂಚಕ ಪ್ರೀತಿಗೆ ಇದೇ ಅಂತ್ಯ ಸಿಗಬೇಕಿತ್ತಾ ಅನ್ನುವ ಅಭಿಪ್ರಾಯ ಯಾರಿಗಾದರೂ ಮೂಡದೇ ಇರಲಾರದು..
-ವಿಶ್ವಾಸ್ ಭಾರದ್ವಾಜ್
ಬೆಂಗಾಡು

ಬೆಂಗಾಡು ನೋಡು ಇದು; ಕಾಂಬ ಬಯಲುದೊರೆಗಿಲ್ಲ ಆದಿ-ಅಂತ್ಯ;
ಅಡಿಗರ ಪದ್ಯವೊಂದು ಬಾಯಲ್ಲಿ ಉಲಿಯಿತು..ಆ ಸಂದರ್ಭ ಅದಕ್ಕೆ ಸೂಕ್ತವಾಗಿತ್ತು.. ಬಯಲು ಸೀಮೆಯ ಬಟಾಬಯಲಿನಲ್ಲಿ ಮಧ್ಯೆ ಬಿಳಿ ತಿರುಗಿದ ವೃದ್ಧೆಯ ಬೈತಲೆಯಂತೆ ಆ ರಸ್ತೆ ಹಾದು ಹೋಗಿತ್ತು.. 
ಆದಿ-ಅಂತ್ಯವೇ ಇಲ್ಲದೆ ಕಾಲು ಚಾಚಿ ಶಯನಾವಸ್ಥೆಯಲ್ಲಿದ್ದ ಆ ಬೆಂಗಾಡಿನ ಬಯಲುದೊರೆ,, ಅರ್ಥಾರ್ಥಗಳೇನೇ ಇರಲಿ ಅಡಿಗರ ಉಪಮೆ ಈ ಬಯಲುರಸ್ತೆ ಹಾಗೂ ಸುಡುವ ಬೆಂಕಿಯಂತ ಬೆಂಗಾಡಿಗೆ ಹೋಲಿಕೆಯಾಗಿತ್ತು.. ಸುತ್ತ ಮುತ್ತ ಎಷ್ಟೇ ದೂರ ಕಣ್ಣು ಹಾಯಿಸಿದ್ರೂ ಒಂದೇ ಒಂದು ಸಣ್ಣ ಮರವಿರಲಿಲ್ಲ.. 
ಅಲ್ಲಿ ಟಾರ್ ಕಿತ್ತು ಹೋದ ರೋಡ್ ಶತಮಾನಗಳಿಂದ ಯಾರ ಮಾತಿಗೂ ಕಿವಿಯಾಗದೆ, ಯಾರ ಕಿವಿಗೂ ಧ್ವನಿಯಾಗದೆ, ಯಾರ ಪ್ರತಿಕ್ರಿಯೆಗಳಿಗೂ ಮರು ಪ್ರತಿಕ್ರಿಯೆ ನೀಡದೆ ಜಡವಾಗಿ ಬಿದ್ದ ಕುಷ್ಟ ರೋಗಿಯಂತ ಬಿಳುಚಿಕೊಂಡು ಬೋರ್ಗಾಳಿಗೆ ನೋಡು ಇದು; ಕಾಂಬ ಬಯಲುದೊರೆಗಿಲ್ಲ ಆದಿ-ಅಂತ್ಯ;
ಅಡಿಗರ ಪದ್ಯವೊಂದು ಬಾಯಲ್ಲಿ ಉಲಿಯಿತು..ಆ ಸಂದರ್ಭ ಅದಕ್ಕೆ ಸೂಕ್ತವಾಗಿತ್ತು.. ಬಯಲು ಸೀಮೆಯ ಬಟಾಬಯಲಿನಲ್ಲಿ ಮಧ್ಯೆ ಬಿಳಿ ತಿರುಗಿದ ವೃದ್ಧೆಯ ಬೈತಲೆಯಂತೆ ಆ ರಸ್ತೆ ಹಾದು ಹೋಗಿತ್ತು..
ಆದಿ-ಅಂತ್ಯವೇ ಇಲ್ಲದೆ ಕಾಲು ಚಾಚಿ ಶಯನಾವಸ್ಥೆಯಲ್ಲಿದ್ದ ಆ ಬೆಂಗಾಡಿನ ಬಯಲುದೊರೆ,, ಅರ್ಥಾರ್ಥಗಳೇನೇ ಇರಲಿ ಅಡಿಗರ ಉಪಮೆ ಈ ಬಯಲುರಸ್ತೆ ಹಾಗೂ ಸುಡುವ ಬೆಂಕಿಯಂತ ಬೆಂಗಾಡಿಗೆ ಹೋಲಿಕೆಯಾಗಿತ್ತು.. ಸುತ್ತ ಮುತ್ತ ಎಷ್ಟೇ ದೂರ ಕಣ್ಣು ಹಾಯಿಸಿದ್ರೂ ಒಂದೇ ಒಂದು ಸಣ್ಣ ಮರವಿರಲಿಲ್ಲ..
ಅಲ್ಲಿ ಟಾರ್ ಕಿತ್ತು ಹೋದ ರೋಡ್ ಶತಮಾನಗಳಿಂದ ಯಾರ ಮಾತಿಗೂ ಕಿವಿಯಾಗದೆ, ಯಾರ ಕಿವಿಗೂ ಧ್ವನಿಯಾಗದೆ, ಯಾರ ಪ್ರತಿಕ್ರಿಯೆಗಳಿಗೂ ಮರು ಪ್ರತಿಕ್ರಿಯೆ ನೀಡದೆ ಜಡವಾಗಿ ಬಿದ್ದ ಕುಷ್ಟ ರೋಗಿಯಂತ ಬಿಳುಚಿಕೊಂಡು ಬೋರ್ಗಾಳಿಗೆ ಧೂಳು ಹಾಯಿಸುತ್ತಾ ಮಲಗಿತ್ತು..
ಒಂದೇ ಬಸ್ಸು ಈ ರಸ್ತೆಯಲ್ಲಿ ದಿನಕ್ಕೆ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತದೆ ಅಂತ ಕಟ್ಟಿಗೆ ಹೊರೆ ಹೊತ್ತಿದ್ದ ವೃದ್ಧ ಹೇಳಿದ್ದ..
ಯಾವುದೋ ಅಸೈನ್ಮೆಂಟ್ ಮೇಲೆ ಆ ಕುಗ್ರಾಮಕ್ಕೆ ತೆರಳಿದ್ದ ನನಗೆ ಅಲ್ಲಿನ ಸಾಗದೆ ಇದ್ದ ಕಾಲ ಕ್ಷಣಕ್ಷಣಕ್ಕೂ ದಿವ್ಯ ಅಸಮಧಾನ ಹುಟ್ಟುಹಾಕುತ್ತಿತ್ತು.. ನೀರವ ಮೌನ ಅಸಹನೀಯವಾಗಿತ್ತು.. ಇದ್ಯಾವ ದರಿದ್ರ ಊರಿಗೆ ಬಂದು ಸಿಕ್ಕಂಬಿದ್ದೆ ಅಂತ ನನಗೆ ನಾನೇ ಹತ್ತಾರು ಸಲ ಬಯ್ದುಕೊಂಡಿದ್ದೆ.. ಬಸ್ಸು, ಕಾರು, ಬೈಕುಗಳು ಒತ್ತಟ್ಟಿಗಿರಲಿ ಕೊನೆಗೆ ಮನುಷ್ಯ ಪ್ರಾಣಿಯ ಹೆಜ್ಜೆ ಸದ್ದು ಕೇಳದಷ್ಟು ಕುಗ್ರಾಮವದು..
ಊರಿನಿಂದ ನಾಲ್ಕು ಕಿಮೀ ಬಿಸಿಲ ರಣ ಬಯಲಿನಲ್ಲಿ ನಡೆದು ಬಂದೇ ಈ ಸೋ ಕಾಲ್ಡ್ ಮೈನ್ ರೋಡ್ ಗೆ ತಾಕಿಕೊಳ್ಳಬೇಕಿತ್ತು.. "ವತ್ತಾರೆದು ಪಸ್ಟ್ ಬಸ್ಸು ಹೊಂಟೋಯ್ತು.. ಎಲ್ಡ್ ನೇದು ಈಗ ಬತ್ತದೆ.. ನೀವ್ ದಪ ದಪ ನಡುದ್ರೆ ಸಿಕ್ರೂ ಸಿಕ್ ಬೈದು" ಅಂತ ಹೇಳಿದ್ದ ಅದೇ ಮುದುಕ
ಅಷ್ಟರಲ್ಲಿ...
ದೂರದಲ್ಲೆಲ್ಲೋ ಮೋಟಾರ್ ಸದ್ದು ಕೇಳಿತು.. ಧೂಳೆದ್ದ ರಸ್ತೆಯಲ್ಲಿ ಬರುತ್ತಿರುವ ವಾಹನದ ರೂಪ ಅಸ್ಪಷ್ಟವಾಗಿತ್ತು.. "ಸಾಮಿ ಬಸ್ಸು ತುಂಬ್ ಕ್ಯಂಡಿದ್ರೆ ನಿಲ್ಸಕಿಲ್ಲ.. ಅಡ್ಡಡ್ಡಾಗಿ ನಿಂತ್ ಕ್ಯಂಬುಡ್ರಿ" ಅಂದಿದ್ದ ಆ ಮುದುಕ..
ಅಸಲಿಗೆ ಬರುತ್ತಿರೋದು ಬಸ್ಸು ಹೌದಾ? ಆಗಸಮುಖಿಯಾಗಿ ಏಳುತ್ತಿದ್ದ ಧೂಳಿನ ಬ್ರಹ್ಮರಾಕ್ಷಸನ ನರ್ತನದಿಂದ ಮಬ್ಬಾಗಿ ಕಾಣಿಸುತ್ತಿದ್ದ ಆ ದಿಕ್ಕಿನಲ್ಲಿ ಏನಂದರೆ ಏನೂ ಕಾಣಿಸುತ್ತಲೇ ಇರಲಿಲ್ಲ.. ಅಸ್ಪಷ್ಟ ಶಭ್ದದ ಹೊರತೂ ಮತ್ತೇನೂ ಅಂದಾಜಿಸಲೂ ಸಾಧ್ಯವಿರಲಿಲ್ಲ..
ಒಂದು ವೇಳೆ ಈ ಬಸ್ಸು ನಿಲ್ಲಿಸದೇ ಇದ್ದರೇ ಮುಂದಿನ ಬಸ್ಸಿಗೆ ಕಾಯುವ ಕೊಂಚ ಮಾತ್ರದ ಸೈರಣೆಯೂ ನನ್ನಲ್ಲಿ ಇರಲಿಲ್ಲ.. ಆದದ್ದಾಗಲಿ ಅಡ್ಡ ನಿಂತೇ ಬಿಡೋಣ ಅಂದುಕೊಂಡು ಕಣ್ಣಿಗೆ ಗ್ಲಾಸ್ ಏರಿಸಿ ರಸ್ತೆ ಅನ್ನಿಸಿಕೊಂಡ ಪಟ್ಟೆಯ ಮಧ್ಯೆ ನಿಂತೆ..
ಹಾಕಿದ್ದ ಬಿಳಿಯ ಟೀ ಶರ್ಟ್ ಕ್ಷಣಾರ್ಧದಲ್ಲಿ ತನ್ನ ಬಣ್ಣ ಬದಲಿಸಿಕೊಂಡು ಹೋಳಿಯಾಡಿದ ಮುಖದಂತೆ ಕೆಂಪಾಗಿಬಿಟ್ಟಿತ್ತು..
ಶಬ್ದ ಹತ್ತಿರವಾಗತೊಡಗಿತ್ತು.. ನಿಧಾನವಾಗಿ ಅಸ್ಪಷ್ಟವಾಗಿದ್ದು ಸ್ಪಷ್ಟವಾಗತೊಡಗಿತ್ತು.. ಕೇಳಿದ್ದು ಮಾತ್ರವಲ್ಲದೆ ಈಗ ಕಾಣಿಸಲೂ ತೊಡಗಿತ್ತು.. ಹತ್ತಿರ ಬಂದಿದ್ದು ಬಸ್ ಅಲ್ಲ, ಅದೊಂದು ಹೆಲಿಕಾಪ್ಟರ್ ನೆಲದಿಂದ 40 ಅಡಿ ಮೇಲೆ ಹಾರುತ್ತಿದ್ದ ಕಾರಣ ಧೂಳಿನ ವಿರಾಟ್ ಸ್ವರೂಪ ವಿಶ್ವರೂಪ ದರ್ಶನ ಮಾಡಿಸಿತ್ತು..
ನರನಾಡಿಗಳಲ್ಲಿ ರೋಷದ ಕಿಡಿ ಹರಿದಾಡತೊಡಗಿತ್ತು.. ಹಿಂದೆಯೇ ಬಸ್ಸೇ ಅಪರೂಪವಾದ ಈ ಊರಿನಲ್ಲಿ ಹೆಲಿಕಾಪ್ಟರ್ ಎಲ್ಲಿಂದ ಬಂತಪ್ಪ ಅನ್ನುವ ಅನುಮಾನವೂ ಹುಟ್ಟಿಕೊಂಡಿತು..
ಮೊದಲೇ ಕೆಂಪಾಗಿದ್ದ ಮುಖ ಮೈ ಬಟ್ಟೆಗಳು ಈಗ ಮತ್ತಷ್ಟು ಘೋರವಾಗಿ ಹೋಯಿತು.. ಬಂದ ಕರ್ಮ ಆದದ್ದು ಅನುಭವಿಸಲೇ ಬೇಕು ಅಂದುಕೊಂಡು ಸುಮ್ಮನೇ ರಸ್ತೆ ಬದಿಗೆ ಹೋಗಿ ನಿಂತೆ.. ರಸ್ತೆಗೆ ವಿರುದ್ಧವಾಗಿ ಮುಖ ಮಾಡಿ ನಿಂತು ಮೈ ವಸ್ತ್ರಗಳನ್ನು ಕೊಡವುತ್ತಿದ್ದಾಗಲೇ ಮತ್ತೆ ಸಣ್ಣಗೆ ಮೋಟಾರ್ ಸದ್ದು ಕೇಳಿಸಿತು..
ಈ ಅವತಾರದಲ್ಲಿ ಬಸ್ ಡ್ರೈವರ್ ನನ್ನನ್ನು ನೋಡಿದ್ರೂ ನಿಲ್ಲಿಸೋದು ಕಷ್ಟ ಅಂದುಕೊಂಡೇ ಕೈ ಮಾಡಿದೆ.. ಬರ್ರನೇ ಬಂದ ಬಸ್ಸು ಕೊಂಚ ಮುಂದೆ ಹೋಗಿ ನಿಂತುಕೊಳ್ತು.. ಅಲ್ಲಿಯವರೆಗೆ ಮನಸಿನಲ್ಲೇ ಅಸ್ತಿತ್ವದಲ್ಲಿ ಇರುವ ಎಲ್ಲಾ ಗಂಡು ಹಾಗೂ ಹೆಣ್ಣು ದೇವರುಗಳಿಗೆ ಕೈ ಮುಗಿದಿದ್ದ ನಾನು, ಅಬ್ಬಾ ಪ್ರಾರ್ಥನೆ ಫಲಿಸಿತು ಅಂತ ಬಸ್ ಏರಿದೆ..
ಏನ್ ಸಾರ್ ನಿಮ್ಮ ಅವತಾರ ಅಂದ ಡ್ರೈವರ್.. ಹೆಲಿಕಾಪ್ಟರ್ ಮಹಿಮೆ ವರ್ಣಿಸಿದೆ.. ಮುಂಡೇ ಮಕ್ಳು ಈ ಊರಿಗೊಂದು ರಸ್ತೆ ಮಾಡೋ ಯೋಗ್ಯತೆ ಇಲ್ಲ; ಈಗ ಅದೇನೋ ಫ್ಯಾಕ್ಟರಿ ಕಟ್ಟಿಸ್ತಾರಂತೆ ಅಂತ ಗೊಣಗಿದ ಡ್ರೈವರ್, ಬಸ್ ಮೂವ್ ಮಾಡಿದ..
-ವಿಶ್ವಾಸ್ ಭಾರದ್ವಾಜ್

ದೇವರು ಕಾಣೆಯಾದ ಕುಡಿಕಥೆ

ಕನಸುಗಳಲ್ಲೂ ಕಾಮಿಡಿ ಹಾಗೂ ಟ್ರಾಜಿಡಿಗಳಿವೆ.. ಇದು ಕೇವಲ ಕನಸು ಮಾತ್ರ.. ಇದನ್ನು ಓದಿದ ಮೇಲೆ ಈ ಕನಸು ಕಾಮಿಡಿಯೋ ಟ್ರಾಜಿಡಿಯೋ ನೀವೇ ನಿರ್ಧರಿಸಿ..
ಅದೊಂದು ದಿವ್ಯ ಕನಸು..
ಆ ರಾತ್ರಿ ಬಿದ್ದ ಕನಸಿನಲ್ಲಿ ವಿಶ್ವದ ಎಲ್ಲಾ ಮೂಲೆಗಳಲ್ಲಿದ್ದ ಮಂದಿರಗಳು, ಮಸೀದಿಗಳು, ಚರ್ಚುಗಳು ದಿಢೀರ್ನೆ ಮಾಯವಾಗಿಬಿಟ್ಟಿದ್ದವು..
ಅವುಗಳನ್ನು ಯಾರೋ ಕಿತ್ತು ಹೊತ್ತು ಒಯ್ದಂತೆ ಅಲ್ಲಿ ಖಾಲಿ ಜಾಗಗಳು ಮಾತ್ರ ಉಳಿದಿದ್ದವು..
ಏಕಾಏಕಿ ರಾತ್ರೋ ರಾತ್ರಿ ಸಂಭವಿಸಿದ ಈ ಘಟನೆಗೆ ವಿಶ್ವವೇ ಬೆಚ್ಚಿಬಿದ್ದಿತ್ತು..
ಆಶ್ಚರ್ಯ, ವಿಸ್ಮಯ, ಕೌತುಕ, ವಿಚಿತ್ರ, ಭಯ, ಆತಂಕ, ದುಗುಡ, ದುಃಖ, ಬೇಸರ, ಹತಾಶೆ, ಅಸಮಧಾನ, ವೇದನೆ, ಗಾಬರಿ ಎಲ್ಲ ಭಾವಗಳಿಗೂ ಈ ಘಟನೆಯ ನಂತರ ಅಸ್ತಿತ್ವ ಸಿಕ್ಕಿಬಿಟ್ಟಿತ್ತು..
ಎಲ್ಲಾ ಧರ್ಮಗಳ ಮೂಲಸ್ಥಾನ ಕಳೆದು ಹೋಗಿದ್ದು ಹೇಗೆ ಎಂದು ಆಶ್ಚರ್ಯ, ಸೋಜಿಗ, ವಿಸ್ಮಯ, ಕೌತುಕ..
ಮಠ, ಮಂದಿರ, ಮಸೀದಿ, ಚರ್ಚುಗಳ ನಾಪತ್ತೆಯ ಪರಮ ವಿಚಿತ್ರ ಘಟನೆ ಹೇಗಾಯ್ತು ಅನ್ನುವ ಹಲವು ಭಗೆಯ, ಹಲವು ಕೋನದ, ಹಲವು ಆಯಾಮದ ತರ್ಕಗಳು ಶುರುವಾಯ್ತು..
ಮುಂದೇನು..? ದೇವರು, ಸೃಷ್ಟಿಕರ್ತ, ಕರುಣಾಮಯಿ ಮುನಿಸಿಕೊಂಡಿದ್ದಾನೇನೋ ಅನ್ನುವ ಭಯ, ಆತಂಕ, ದುಗುಡ, ಗಾಬರಿ..
ಇನ್ನು ಮುಂದೆ ಆರಾಧಿಸಲು ಸ್ಥಳವೇ ಇಲ್ಲವಲ್ಲ ಅನ್ನುವ ಬೇಸರ, ಹತಾಶೆ, ಅಸಮಧಾನ..
*****
ಇದು ಹಿಂದೂಗಳ ಕೃತ್ಯವೇ..? ಮುಸಲ್ಮಾನರ ಧರ್ಮಾಂದ ದುರುಳತನವೇ ಅಥವಾ ಕ್ರಿಶ್ಚಿಯನ್ನರ ಮತಾಂತರದ ಹುನ್ನಾರವೇ..?
ಹೀಗಂತ ಬೇರೆ ಬೇರೆ ಧರ್ಮಗಳ ರಕ್ಷಕ ಸಂಘಟನೆಗಳು ಸಭೆ ಸೇರಿ ಗಂಭೀರವಾಗಿ ಚರ್ಚೆ ನಡೆಸಿದವು..
ಈ ನಡುವೆ ಸಿಖ್, ಪಾರಸಿ, ಜೋರಾಸ್ಟ್ರಿಯನ್, ಬೌದ್ಧ, ಜೈನ ಮುಂತಾದ ಸಣ್ಣ ಪುಟ್ಟ ಧರ್ಮಗಳದ್ದೂ ಪ್ರಾರ್ಥನಾ ಮಂದಿರಗಳು ಕಣ್ಮರೆಯಾಗಿವೆ ಅನ್ನುವ ಬ್ರೇಕಿಂಗ್ ನ್ಯೂಸ್ ಬಿತ್ತರಿಸತೊಡಗಿದ್ದವು 24/7ರ ಟಿವಿ ಮಾಧ್ಯಮಗಳು..
ಇದು ಶೈತಾನ್ ನ ಕೆಲಸ ಅಂತ ಯಾರೋ ಮಂತ್ರವಾದಿ ಹೇಳಿಕೆ ನೀಡಿಬಿಟ್ಟ..
ಈ ಹಿನ್ನಲೆಯಲ್ಲಿ ದೇಶ ವಿದೇಶಗಳ ವಿಶಾಲವಾದ ಶಾಲಾ ಕಾಲೇಜುಗಳ ಬಯಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಶುರುವಾಯ್ತು..
ಹಿಂದೂಗಳು ಬಯಲಿನಲ್ಲೇ ಶತ್ರು ಉಚ್ಛಾಟನೆ ಯಾಗ, ಅರಿ ನಿಗ್ರಹ ಕೈಂಕರ್ಯ, ಸುದರ್ಶನ ಹೋಮ, ಅಘೋರ ಯಜ್ಞ ಮುಂತಾದ ಪೂಜಾ ವಿಧಿ ವಿಧಾನಗಳನ್ನು ಶುರು ಮಾಡಿದರು..
ಮುಸಲ್ಮಾನರು ಬಯಲಿನಲ್ಲೇ ಪಶ್ಚಿಮದ ಕಾಬಾದೆಡೆಗೆ ಮುಖ ಮಾಡಿ ಸಾಮೂಹಿಕ ನಮಾಜು ಮಾಡಿದರು..
ಇನ್ನು ಇಸಾಯಿಗಳು ತಾತ್ಕಾಲಿಕ ಕಟ್ಟೆಗಳನ್ನು ತಯಾರಿಸಿ ಅವುಗಳ ಮೇಲೆ ಕ್ಯಾಂಡೆಲ್ ಬೆಳಗಿಸಿ ವಿಶ್ವದ ನಿಷ್ಪಾಪಿ ಮಾನವರ ರಕ್ಷಣೆಗೆ ಮೊರೆ ಇಟ್ಟರು..
ಇವುಗಳನ್ನು ವೀಕ್ಷಿಸುತ್ತಲೇ ಇದ್ದ ಬುದ್ದಿಜೀವಿಗಳ ಸಮೂಹ ಹೊಸ ಧರ್ಮವೊಂದರ ಉದಯದ ಮುನ್ಸೂಚನೆಯಿದು.. ಮುಂದೆ ಹುಟ್ಟುವ ಹೊಸ ಧರ್ಮದಲ್ಲಿ ಕುರುಡು ಡಂಬಾಚಾರಗಳಿರುವುದಿಲ್ಲ; ಕೇವಲ ಶಾಂತಿ ಮಾತ್ರವೇ ಇರುತ್ತದೆ.. ಇದು ಆಗಿದ್ದು ಒಳ್ಳಯದೇ ಆಯಿತು ಅಂತ ಪ್ರಚಾರ ಶುರುವಿಟ್ಟರು..
ಇದೇ ವಿಚಾರದ ಒಂದು ಎಳೆಯನ್ನು ಇಟ್ಟುಕೊಂಡ ಕೆಲವರು ಜಗತ್ತನ್ನು ರಕ್ಷಿಸಲು ಹೊಸ ದೇವರು ಅವತಾರವೆತ್ತಲಿದ್ದಾನೆ.. ಹಾಗಾಗಿ ಹೀಗಾಗಿದೆ ಅನ್ನುವ ಹೊಸ ಕಥೆ ಹುಟ್ಟಿಸಿ ಗಾಳಿಗೆ ಹಾರಿ ಬಿಟ್ಟರು..
*****
ಇದು ಅನ್ಯಗ್ರಹ ಜೀವಿಗಳಾದ ಏಲಿಯನ್ ಗಳ ಕೃತ್ಯ ಅನ್ನುವ ಎಕ್ಸ್ ಪರ್ಟ್ ಒಪೀನಿಯನ್ ಕೊಟ್ಟಿತು ಯುನೆಸ್ಕೋದ ತಜ್ಞರ ತನಿಖಾ ತಂಡ..
ಹೌದೇ..! ಬೇರೆ ಗ್ರಹದ ಯು.ಎಫ್.ಓ ಜೀವಿಗಳು ಬಂದು ನಮ್ಮ ದೇವರ ಮಂದಿರವನ್ನು ಅಪಹರಿಸಿ ಒಯ್ದವೇ..? ಅವುಗಳಿಗೆ ನಮ್ಮ ಆಸ್ಥೆಯ ಕೇಂದ್ರದ ಅಗತ್ಯವೇನು..? ಹೀಗಂತ ಪ್ರಶ್ನಿಸಿತು ಸಂಪ್ರಧಾಯವಾದಿಗಳ ಸಮೂಹ..
ಈ ಬಗ್ಗೆ ಒಂದಷ್ಟು ಚರ್ಚೆಗಳಾಗುತ್ತಿದ್ದಂತೆ ಪ್ರಾಯಶಃ ಭೂಮಿಯ ಮೇಲಿನ ಮಠ, ಮಂದಿರ, ಮಸೀದಿ, ಚರ್ಚುಗಳ ವಾಸ್ತು ಶಿಲ್ಪವನ್ನು ಅಧ್ಯಯನ ಮಾಡುವ ಸಲುವಾಗಿ ಯಾವುದೋ ಅನ್ಯಗ್ರಹದ ಏಲಿಯನ್ಗಳು ಈ ಕೃತ್ಯ ಎಸಗಿರಬಹುದು ಅನ್ನುವ ಅಭಿಪ್ರಾಯಕ್ಕೆ ಪುಷ್ಟಿ ದೊರೆಯಿತು..
ದಿನ ದಿನಕ್ಕೂ ಪರಿಸ್ಥಿತಿ ಹದಗೆಡುತ್ತಿತ್ತು.. ಆದರೆ ತಾರ್ಕಿಕ ಅಂತ್ಯ ಕಾಣದ ಸಮಸ್ಯೆಯಾದ್ದರಿಂದ ಯಾರೂ ಯಾರ ಮೇಲೂ ಗೂಬೆ ಕೂರಿಸಲಾಗಲಿ, ಆಪಾದನೆ ಮಾಡುವುದಾಗಲೀ ಮಾಡಲಿಲ್ಲ..
*****
ಮೊದಲ ಕೆಲವು ದಿನ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಸಕಲ ನಾಟಕ ಸೂತ್ರಧಾರಿ ಕೃಷ್ಣ ಪರಮಾತ್ಮ, ಪ್ರಳಯ ತಾಂಡವದ ಮಹಾರುದ್ರ, ಆದಿಶಕ್ತಿ ಪರಾಶಕ್ತಿ ನವದುರ್ಗೆಯರು, ಲಕ್ಷ್ಮಿ, ಪಾರ್ವತಿಯರ ವಿವಿಧ ಸಹ ರೂಪಿಣಿ ದೇವತೆಗಳು, ಮುದ್ದಿನ ದೇವರುಗಳಾದ ಗಣೇಶ, ಅಯ್ಯಪ್ಪ, ಆಂಜನೇಯ.. ಸಾಯಿಬಾಬಾ, ರಾಘವೇಂಧ್ರ ಸ್ವಾಮಿ ಮುಂತಾದ ಅಸಂಖ್ಯ ದೇವರುಗಳ ಭಕ್ತಾದಿಗಳು ತಮ್ಮ ತಮ್ಮ ಇಷ್ಟ ದೇವರುಗಳನ್ನು ನೆನೆ ನೆನೆದು ಕೊರಗಿ ಕರಬಿ ಹಂಬಲಿಸಿ ಹೊರಳಾಡಿ ಅತ್ತು ಸುಸ್ತಾದರು.. ಮತ್ತೆ ಮತ್ತೆ ಭಗವದ್ಗೀತೆ, ಉಪನಿಷತ್ ಪಾರಾಯಣ ಪಠಿಸಿದರು.. ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಹನುಮಾನ್ ಚಾಲೀಸ, ರಾಮತಾರಕ ಮಂತ್ರ, ದುರ್ಗಾ ಸಪ್ತಶತಿ, ರುದ್ರ-ಚಮಕ ಪಾರಾಯಣ ಉರು ಹೊಡೆದರು..
ಇಸ್ಲಾಂ ಧರ್ಮೀಯರು ಅಲ್ಲಾನ ಕರುಣೆಯನ್ನು ನೆನದು ರೋಧಿಸಿದರು.. ಖುರಾನ್ ದಿವ್ಯವಾಣಿಯನ್ನು ಆಗಸಕ್ಕೆ ಕೇಳುವಂತೆ ಉಚ್ಚರಿಸಿ ಮೊರೆ ಇಟ್ಟರು..
ಇನ್ನು ಕ್ರೈಸ್ತರೂ ಸುಮ್ಮನಿರಲಿಲ್ಲ ಶಾಂತಿ ಧೂತ ಇಸಾಮಸಿಯ ಸಂದೇಶಗಳನ್ನು ನೆನಪು ಮಾಡಿಕೊಂಡರು.. ಪವಿತ್ರ ಬೈಬಲ್ನ್ನು ಅವುಚಿಕೊಂಡು ಮಣಿಗಳನ್ನು ಎಣಿಸುತ್ತಾ, ಯೇಸು ಕ್ರಿಸ್ತ ಶಿಲುಬೆಗೇರಿದ ಹಳೆಯ ನೆನಪಿನ ಬೆಳ್ಳಿಯ ಕ್ರಾಸ್ ಅನ್ನು ಎದೆಗೆ ಕಣ್ಣಿಗೆ ಪುನಃ ಪುನಃ ಒತ್ತಿಕೊಂಡರು..
ಇದೇ ರೀತಿ ಉಳಿದ ಧರ್ಮಗಳ ನಾಗರೀಕರು ತಮ್ಮ ತಮ್ಮ ಆರಾಧನೆಯ ಕ್ರಮವನ್ನು ಕೆಲ ದಿನ ಬಿಟ್ಟೂ ಬಿಡದೆ ನಿರಂತರವಾಗಿ ಮಾಡಿದರು..
ಕೊನೆಗೆ ಇವೆಲ್ಲಾ ನಿಧಾನವಾಗಿ ಕಡಿಮೆಯಾಗತೊಡಗಿತು.. ಎಲ್ಲ ಧರ್ಮದವರು ತಮ್ಮ ತಮ್ಮ ಧರ್ಮ ಹಾಗೂ ದೇವರುಗಳನ್ನು ಮರೆಯತೊಡಗಿದರು.. ಈಗ ಎಲ್ಲ ಸಮುದಾಯಗಳಿಗೂ ಹೊಸ ಭರವಸೆಯೊಂದು ಮೊಳಕೆ ಒಡೆತೊಡಗಿತು.. ಅದೇ ಹೊಸ ಧರ್ಮ ಹೊಸ ದೇವರು..
ಕೆಲವರು ಹೊಸ ದೇವರ ಕಲ್ಪನೆಗೆ ಜೀವ ತುಂಬತೊಡಗಿದರು.. ಇನ್ನೂ ಕೆಲವರು ಅದರ ಚಿತ್ರ ಬಿಡಿಸತೊಡಗಿದರು.. ಮತ್ತೆ ಕೆಲವರು ಆ ಹೊಸ ಭಗವಂತನ ಪ್ರತಿಮೆ ಕೆತ್ತತೊಡಗಿದರು..
ಹಿಂದೂಗಳು ಕಲಿಯುಗ ಅಂತ್ಯವಾಯ್ತು ಹೊಸಯುಗ ಪ್ರಾರಂಭ.. ವಿಷ್ಣುವಿನ ಹನ್ನೊಂದನೇ ಅವತಾರ ಶುರುವಾಗಲಿದೆ ಅನ್ನುವ ಭಜನೆ ಶುರು ಮಾಡಿದರು..
ಮುಸಲ್ಮಾನರು ಈ ಹೊಸ ದೇವರ ಉಗಮದ ಬಗ್ಗೆ ಪೈಗಂಬರರು ಖುರಾನ್ನಲ್ಲಿ ಹಿಂದೆಯೇ ಹೇಳಿದ್ದರು ಅನ್ನುವ ಹೇಳಿಕೆ ನೀಡತೊಡಗಿದರು..
ಇನ್ನು ಕ್ರಿಶ್ಚಯನ್ನರು ಸುಮ್ಮನಿರುತ್ತಾರಾ..? ಕ್ರಿಸ್ತನಿಗೆ ಮಗನಿದ್ದ ಅವನೇ ಈಗ ಮತ್ತೆ ಹುಟ್ಟಿ ತಂದೆಯ ದಿವ್ಯ ಸಂದೇಶಗಳನ್ನು ಪ್ರಚಾರ ಮಾಡಲಿದ್ದಾನೆ ಅನ್ನುವ ಸಮರ್ಥನೆಗೆ ನಿಂತರು..
ಇದೇ ರೀತಿ ತಮ್ಮದೊಂದು ದೇವರ ಹೆಸರನ್ನು ನಾಮಿನೇಟ್ ಮಾಡಲು ಉಳಿದ ಸಣ್ಣ ಪುಟ್ಟ ಧರ್ಮಗಳು ಸಿದ್ಧವಾದವು
ಇತ್ತ ಅಪಹೃತಗೊಂಡ ಮಠ, ಮಂದಿರ, ದೇವಾಲಯ, ಮಸೀದಿ, ಚರ್ಚು, ಬಸದಿ, ಸ್ತೂಪ ಮುಂತಾದ ಬ್ರಹ್ಮಾಂಡ ವಿಸ್ತಾರದ ಖಾಲಿ ಜಾಗವನ್ನು ನುಂಗಲು ಜಾಗತಿಕವಾಗಿ ರಿಯಲ್ ಎಸ್ಟೇಟ್ ಮಾಫಿಯ ತೆರೆಮರೆಯಲ್ಲಿ ಸ್ಕೆಚ್ ಹಾಕತೊಡಗಿದ್ದರು..
-ವಿಶ್ವಾಸ್ ಭಾರದ್ವಾಜ್..

Thursday, 25 December 2014

ಅವಳಂದುಕೊಂಡಿದ್ದು ಆಗಲೇ ಇಲ್ಲ

ಕುಡಿಕಥೆಗಳು:
ಅವಳಂದುಕೊಂಡಿದ್ದು ಯಾವುದೂ ಆಗಲೇ ಇಲ್ಲ:
ಅಡಿಕೆ ತೋಟದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿತ್ತು ಕೆಂಪು ಬಣ್ಣದ ಮನೋಜ್ಞ ರಥಪುಷ್ಪದ ಹೂಗಳು..
ಅದರ ಮಧ್ಯೆ ದಾರಿ ಮಾಡಿಕೊಂಡು ಗೌರಿ ಹಳ್ಳ ದಾಟಿ ಕೊಂಚ ಮೇಲಕ್ಕೆ ಹೋದರೆ ಸಿಗುತ್ತದೆ ಶಾಸ್ತ್ರಿಗಳ ಮನೆ..
ಗುಂಡಿಯ ಗಣೇಶ ದೇವಾಲಯಕ್ಕೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ಪಕ್ಕದಲ್ಲಿ ಹಾಯ್ದು ಹೋಗಲೇಬೇಕು.. ಇವತ್ತು ಬೇರೆ ವಿಧಿಯಿಲ್ಲ.. ಯಾಕಂದ್ರೆ ಭೂಷಣ್ ರಾಯ್ರು ಅವರ ತೋಟದ ಬೇಲಿ ಬಂದ್ ಮಾಡಿಬಿಟ್ಟಿದ್ದಾರೆ..
ನಿನ್ನೆ ಮೊನ್ನೆ ಅಪ್ಪಣ್ಣ ಶಾಸ್ತ್ರಿಗಳ ಮನೆಯ ದಾರಿ ತಪ್ಪಿಸಿದ್ದಾಯಿತು.. ಆದ್ರೆ ಇವತ್ತು ಬೇರೆ ದಾರಿ ಇಲ್ಲ ಅದೇ ದಾರಿಯಲ್ಲಿ ಹೋಗಬೇಕು.. ಹೋಗದಿದ್ದರೆ ಅಮ್ಮ ಬಯ್ತಾಳೆ.. ಮಾಣಿಗೆ ಸಂಧ್ಯಾವಂದನೆಯೇ ಮುಗಿಯೋದಿಲ್ಲ.. ಅಡಿಕೆಯ ಶೃಂಗಾರ ಕೊಡದಿದ್ದರೆ ಮುಂಜಾನೆ ಗಣಪತಿ ಪೂಜೆ ಆಗೋದೆ ಇಲ್ಲ..
ಇವತ್ತು ಅವನು ಕಾಣ್ತಾನಾ..? ಕಣ್ಣಲ್ಲೇ ಕೊಲ್ತಾನೆ.. ನಾನು ಶಾಸ್ತ್ರಿಗಳ ಮನೆ ಓಣಿ ದಾಟುವಾಗ ಎಲ್ಲಿರುತ್ತಾನೋ ಬಂದು ನಿಂತುಬಿಡುತ್ತಾನೆ.. ಕುಡಿ ಮೀಸೆಯಡಿಯಲ್ಲಿ ನಗುವ ಗಂಧರ್ವ ಚೆಲುವ ಚೆನ್ನಿಗರಾಯ..
ನಾನು ಅವನ ಸೆಳೆತಕ್ಕೆ ಬೀಳ್ತಿದ್ದೀನಾ..? ಇನ್ನೇನು ರಜೆ ಮುಗಿದೇ ಹೋಗುತ್ತೆ ಅವನದ್ದು.. ಮತ್ತೆ ಬೆಂಗಳೂರಿನ ಬಸ್ ಹತ್ತುತ್ತಾನೆ.. ಆಮೇಲೆ ನನ್ನ ನೆನಪಿರುತ್ತಾ..? ನಾನೇಕೆ ಅವನ ನೆನಪಿನಲ್ಲಿ ಕೊರಗಬೇಕು.. ಇಷ್ಟಕ್ಕೂ ನಾನೇನು ಅವನನ್ನು ಪ್ರೀತಿಸುತ್ತಿಲ್ಲವಲ್ಲ.. ಹಾಗಿದ್ರೆ ನಿನ್ನೆ ಮೊನ್ನೆ ಯಾಕೆ ಆ ದಾರಿ ತಪ್ಪಿಸಿದೆ.. ನನ್ನ ಮನಸಿಗೆ ವಿನಾಕಾರಣ ಅಂಜಿಕೆಯೇಕೆ..?
ಉಹುಂ! ಇವತ್ತು ಅದೇ ದಾರಿಯಲ್ಲಿ ಸಾಧ್ಯವಾದಷ್ಟು ನಿಧಾನಕ್ಕೆ ಹೋಗ್ತೀನಿ.. ಅವಕಾಶ ಸಿಕ್ಕರೆ ಅಪ್ಪಣ್ಣ ಶಾಸ್ತ್ರಿಗಳ ಹೆಂಡತಿ ಜಾನಕಮ್ಮನವರನ್ನು ಮಾತಾಡಿಸ್ತೀನಿ, ಅಜ್ಜಿ ವೆಂಕಟಲಕ್ಷ್ಮಿ ಕೋಲು ಕಿತ್ತು ಆಟ ಆಡಿಸ್ತೀನಿ, ಕೊಟ್ಟಿಗೆಯಲ್ಲಿ ಕರುನ ಮುದ್ದು ಮಾಡ್ತೀನಿ..
ಹಾಗಂದುಕೊಂಡು ರಥಪುಷ್ಪದ ಗಿಡಗಳನ್ನು ಸರಿಸುತ್ತಾ ತೋಟದಲ್ಲಿ ಹೆಜ್ಜೆ ಹಾಕಿದಳು ಮನೋಹರಿ.. ಯೋಚನಾಭರದಲ್ಲಿ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ ಅವಳಿಗೆ.. ಗೌರಿ ಹಳ್ಳ ದಾಟಿ ಅಪ್ಪಣ್ಣ ಶಾಸ್ತ್ರಿಗಳ ಉಣುಗೋಲು ದಾಟಿದಳು..
ಅವಳಂದುಕೊಂಡಿದ್ದು ಯಾವುದೂ ಆಗಲೇ ಇಲ್ಲ..
ಅದೆಲ್ಲಿದ್ದನೋ ಆ ಸುರಸುಂದರ; ಅವಳ ಗೆಜ್ಜೆ ಸದ್ದಿಗೆ ಕಿವಿಯಾಗಿ, ಚಂಗನೇ ಹಾರಿ ಜಗುಲಿಯ ಕಂಬಕ್ಕೆ ಒರಗಿ ಅವಳನ್ನೇ ನೋಡತೊಡಗಿದ.. ಅಲ್ಲಿಯವರೆಗೆ ಅವಳಲ್ಲಿದ್ದ ಸಂಕಲ್ಪ ಶಕ್ತಿ ಜರ್ರನೇ ಧರೆಗೆ ಕುಸಿದಂತಾಯ್ತು..
ನಾಚಿ ನೀರಾದ ಮನೋಹರಿ ಅತ್ತಿತ್ತ ನೋಡದೆ, ತಗ್ಗಿಸಿದ ತಲೆ ಎತ್ತದೆ ಬಿರುಬೀಸಾಗಿ ಆಲ್ ಮೋಸ್ಟ್ ಓಡುವವಳಂತೆ ಓಣಿ ದಾರಿಯಲ್ಲಿ ನಡೆಯತೊಡಗಿದಳು..
"ಗುಂಡಿ ಗಣೇಶ ಇನ್ನೂ ಎಷ್ಟು ದೂರ ಇದಿಯಪ್ಪಾ ನೀನು..?" ಅವಳ ಒಳಮನಸ್ಸು ಅವನ ಪ್ರಭಾವಲಯದಿಂದ ಹೊರಹಾರುವ ಹವಣಿಕೆಯಲ್ಲಿತ್ತು..
-ವಿಶ್ವಾಸ್ ಭಾರದ್ವಾಜ್

ಯಾಕೋ ಪ್ರಸಂಗ ಸರಿ ಬರಲಿಲ್ಲ ಕುಡಿಕಥೆ

ಕುಡಿಕಥೆಗಳು:
ಯಾಕೋ ಪ್ರಸಂಗ ಸರಿ ಬರಲಿಲ್ಲ:
ಧೀಂ ಧೀಂ ಧೀಂ ದಿತ್ತೈ ದಿದ್ದಿತೈ ತತ್ತೈ..
"ಸೈರಂಧ್ರಿ ಎಲ್ಲಿದ್ದಾಳೇ.. ಇವತ್ತು ಅವಳನ್ನು ನನ್ನ ಕೊರಳಿಗೆ ಮಾಲೆ ಹಾಕಿಕೊಳ್ಳದಿದ್ದರೇ ನಾನು ಕೀಚಕನೇ ಅಲ್ಲ.."
ರಂಗದಲ್ಲಿ ಕೀಚಕನ ವೇಷದಾರಿ ದ್ರೌಪತಿಯನ್ನು ಹುಡುಕುವ ಅಭಿನಯ ಮಾಡುತ್ತಿದ್ದ..
ಬೇಲಿ ಮೂಲೆಯಲ್ಲಿ ಕುಳಿತು ನಾಗಿಯನ್ನು ಕಾಯುತ್ತಿದ್ದ ಸುಬ್ಬಪ್ಪನಿಗೆ ಹತ್ತಿರದಲ್ಲೇ ಯಕ್ಷಗಾನದ ಚಂಡೇ ಸದ್ದು ಭಾಗವತರ ಪದ ಕೇಳಿಸುತ್ತಿತ್ತು..
ಕೀಚಕ ಸೈರಂಧ್ರಿಯನ್ನು ಹುಡುಕಲು ಹೋಗುತ್ತಿದ್ದಾನೆ ಅನ್ನುವ ಪದ ಅವನ ಕಿವಿಗೆ ಬಿತ್ತು.. ನಾಗಿ ಬರಲ್ಲ ನಾನೇ ಅವಳನ್ನು ಹುಡುಕಿಕೊಂಡು ಹೋಗಬೇಕು.. ಅವಳ ಕುಡುಕ ಅಪ್ಪ ಯಕ್ಷಗಾನ ಹರಕೆಯಾಟ ನೋಡಲು ಬಂದಿರ್ತಾನೆ.. ಈಗ ಮನೆಯಲ್ಲಿ ಅವಳೊಬ್ಬಳೇ ಇರ್ತಾಳೆ.. ಅವಳಿಗೆ ಬೇಲೆ ಸಾಲಿಗೆ ಬರಲು ಹೇಳಿದ್ದು ಹೌದಾದ್ರೂ, ಅವಳಿಗೆ ನಾಚಿಕೆ ಇರಬಹುದು.. ತಾನೇ ಹೋದರಾಯಿತು.. ಮನಸಿನಲ್ಲೇ ಹೀಗಂದುಕೊಂಡು ಕುಳಿತಲ್ಲಿಂದ ಎದ್ದ ಸುಬ್ಬಪ್ಪ..
ಮೀನುಗಾರರ ಓಣಿ ದಾಟಿ ಮುಂದೆ ಹೋದ.. ನಾಗಿಯ ಮನೆ ಬಾಗಿಲು ತೆರೆದೇ ಇತ್ತು.. ಸಣ್ಣಗೆ ಲಾಂದ್ರ ಉರಿಯುತ್ತಿತ್ತು.. ಸದ್ದು ಮಾಡದೇ ಒಳಗೆ ಅಡಿಯಿಟ್ಟ ಸುಬ್ಬಪ್ಪ.. ನಾಗಿ ಕಣ್ಣಲ್ಲೇ ಆಹ್ವಾನ ನೀಡಿದ್ದಳು..
ದೂರದಲ್ಲಿ ಯಕ್ಷಗಾನದ ಭಾಗವತಿಕೆ ಮುಂದುವರೆದಿತ್ತು.. ಅತ್ತ ರಂಗದ ಮೇಲೆ ಭೀಮ ಕೀಚಕರ ರಣ ಭೀಕರ ಯುದ್ಧ ಶುರುವಾದ ಬಗ್ಗೆ ತಾರಕ ಸ್ವರದಲ್ಲಿ ಭಾಗವತರು ಪದ ಹಾಡುತ್ತಿದ್ದರು..
ಚಂಡೆ ಧ್ವನಿ ಮುಗಿಲು ಮುಟ್ಟಿತ್ತು..
ಇತ್ತ, ಸುಬ್ಬಪ್ಪ-ನಾಗಿಯರ ಮಧ್ಯೆಯೂ ಕದನ ಏರ್ಪಟ್ಟಿತ್ತು.. ಇಲ್ಲಿ ಚಂಡೆ, ಭಾಗವತಿಕೆಗಳ ಅಬ್ಬರವಿರಲಿಲ್ಲ..
ಆದರೆ...
ಮನಸಿನಲ್ಲೇ ಸುಬ್ಬಪ್ಪ ಹೇಳಿಕೊಂಡ "ಯಾಕೋ ಪ್ರಸಂಗ ಸರಿ ಬರಲಿಲ್ಲ.."

ಬ್ಯಾಂಕ್ ಲೋನ್ ಆಫರ್ ಕುಡಿಕಥೆ

ಕುಡಿಕಥೆಗಳು:
ಬ್ಯಾಂಕ್​ ಲೋನ್ ಆಫರ್:
ಕೆಂಪು ತುಟಿಯ ಲೇಡಿ ಆ್ಯಂಕರ್ ಕೇಳಿದಳು.. "ನಿಮ್ಮ ಬ್ಯಾಂಕ್ ಹೇಗೆ ಉಳಿದ ಬ್ಯಾಂಕ್ ಗಳಿಗಿಂತ ಡಿಫರೆಂಟ್..?"
ಆ ಕಮರ್ಷಿಯಲ್ ಸ್ಪಾನ್ಸರ್ಡ್ (ಪ್ರಾಯೋಜಿತ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆ ಬ್ಯಾಂಕ್ ನ ನಿರ್ದೇಶಕ ಹೇಳಿದ.. "ನೋಡಿ ನಮ್ಮದು ಗ್ರಾಹಕರ ತೃಪ್ತಿಯನ್ನೇ ಮೂಲೋದ್ದೇಶವನ್ನಾಗಿ ಇಟ್ಟುಕೊಂಡು ಸೇವೆ ಒದಗಿಸುವ ಬ್ಯಾಂಕ್.. ನಮ್ಮ ಅಜೆಂಡಾ ಕೂಡಾ ಅದೇ ಆಗಿದೆ.. ಕನ್ಸ್ಯೂಮರ್ ಸ್ಯಾಟಿಸ್ ಫ್ಯಾಕ್ಷನ್ ಈಸ್ ಅವರ್ ಮೈನ್ ಮೋಟೋ.."
"ಸ್ವಲ್ಪ ಬಿಡಿಸಿ ಹೇಳಿ.. ಉಳಿದ ಬ್ಯಾಂಕ್ಗಳು ನೀಡದ ಯಾವ ಸೌಕರ್ಯಗಳನ್ನು ನಿಮ್ಮ ಬ್ಯಾಂಕ್ ಗ್ರಾಹಕರಿಗೆ ನೀಡುತ್ತದೆ.." ಅವಳು ಮತ್ತೆ ಕೇಳಿದಳು..
"ಲಾಂಗ್ ಟರ್ಮ್ ಹಾಗೂ ಶಾರ್ಟ್ ಟರ್ಮ್ ಲೋನ್ ಕೊಡ್ತೀವಿ.." ಆತ ಹೇಳಿದ
"ಈ ಲೋನ್ ಗಳನ್ನು ದೇಶದ ಎಲ್ಲಾ ಬ್ಯಾಂಕ್ಗಳೂ ನೀಡ್ತಾವೆ ಅಲ್ವಾ..?" ಅವಳು ಥಟ್ ಅಂತ ಕೇಳಿದ್ಳು..
"ನೋಡಿ.. ನಾವು ಗ್ರಾಹಕರಿಗೆ ಕಡಿಮೆ ಬಡ್ಡಿಧರದಲ್ಲಿ ಸಾಲ ನೀಡ್ತೀವಿ.." ಆತ ಹೇಳಿದ
"ಅದು ಈಗೀಗ ಎಲ್ಲಾ ಬ್ಯಾಂಕ್ ಗಳಲ್ಲೂ ಸಿಕ್ತಾ ಇದೆ.." ಅವಳು ಮತ್ತೆ ಕ್ರಾಸ್ ಕ್ವಶ್ಚನ್ ಮಾಡಿದ್ಳು
"ಹೌದು! ಆದ್ರೆ ಈ ಡಾಕ್ಯುಮೆಂಟೇಶನ್, ಅದೂ ಇದೂ ಅಂತ ನೂರಾರು ತಾಪತ್ರಯಗಳಿರ್ತಾವಲ್ವಾ,,? ಅದ್ಯಾವುದು ನಮ್ಮ ಬ್ಯಾಂಕ್ನಲ್ಲಿ ಇಲ್ಲ.. ಗ್ರಾಹಕರಿಗೆ ತಲೆ ನೋವು ತರುವ ದಾಖಲಾತಿಗಳನ್ನು ನಾವು ಕೇಳುವುದೂ ಇಲ್ಲ.." ಆತ ಗಂಭೀರವಾಗಿ ಮಾತನಾಡುತ್ತಿದ್ದ
ಅಂತೂ ಕೊನೆಗೆ ಪ್ರೋಗ್ರಾಮ್ ಮುಗಿಯಿತು..
ಸ್ಟೂಡಿಯೋ ಇಂದ ಹೊರಗೆ ಬಂದ ನಿರ್ದೇಶಕನಿಗೆ ಆ ಆ್ಯಂಕರ್.. "ಅಂದ ಹಾಗೆ, ಸಾರ್ ನಂಗೆ ನಿಮ್ಮ ಬ್ಯಾಂಕ್ ನಲ್ಲಿ ಲೋನ್ ಸಿಗಬಹುದಾ..? ಶಾರ್ಟ್ ಟರ್ಮ್ ಲೋನ್, ಕಡಿಮೆ ಇಂಟರೆಸ್ಟ್ ಇರೋ ಅಂತದ್ದು.. ತಲೆ ನೋವು ತರಿಸುವ ಡಾಕ್ಯುಮೆಂಟೇಶನ್ ಇಲ್ಲದ್ದು.."
"ಓಹ್! ಸಾರಿ ಮೇಡಂ.. ನೀವು ಮೀಡಿಯಾ ಅಲ್ವಾ.. ನಮ್ಮ ಬ್ಯಾಂಕಿಂಗ್ ಯೂನಿಯನ್ ನಲ್ಲಿ ಪ್ರೆಸ್ ಹಾಗೂ ಮೀಡಿಯಾದವರಿಗೆ ಲೋನ್ ನೀಡಬಾರದು ಅಂತ ರೆಸಲ್ಯೂಷನ್ ಆಗಿಬಿಟ್ಟಿದೆ.. ಬೇರೆ ಯಾರಾದ್ರೂ ನಿಮ್ ಫ್ಯಾಮಿಲಿ ಮೆಂಬರ್ ಹೆಸರಲ್ಲಿ ನೀಡಬಹುದು.."
"ಹಾಗಿದ್ರೆ ನನ್ನ ಗಂಡನ ಹೆಸರಲ್ಲಿ ಸಾಲ ಸಿಗಬಹುದಾ..? ಅವರು ಪೊಲೀಸ್ ಡಿಪಾರ್ಟ್ ಮೆಂಟ್ನಲ್ಲಿ ಕೆಲಸ ಮಾಡ್ತಿದ್ದಾರೆ. ಸಬ್ ಇನ್ಸ್ ಪೆಕ್ಟರ್..!"
"ಓಹ್! ಎಗೈನ್ ಸಾರಿ ಮೇಡಂ ನಮ್ಮಲ್ಲಿ ಪೊಲೀಸ್ ಡಿಪಾರ್ಟ್ ಮೆಂಟ್ಗೆ ಸಹ ಸಾಲ ಕೊಡುವಂತಿಲ್ಲ.."
"ನಮ್ಮ ಅತ್ತೆಯ ಹೆಸರಲ್ಲಿ ಸಾಧ್ಯ ಆಗುತ್ತಾ.. ಅವ್ರು ಅಡ್ವಕೇಟ್..!"
"ಯು ಮೀನ್ ಲಾಯರ್..? ಮತ್ತೆ ಸಾರಿ ಕೇಳ್ಕೊಳ್ತಾ ಇದ್ದೀನಿ.. ಈ ಪ್ರೆಸ್, ಪೊಲೀಸ್, ಲಾಯರ್ ಬಿಟ್ಟು ಬೇರೆ ಯಾರಾದ್ರೂ ಇದ್ದಾರಾ ಮನೆಯಲ್ಲಿ.. ಈ ಮೂರು ವಿಭಾಗಗಳಿಗೆ ಸಾಲ ಕೊಡಬಾರದು ಅಂತ ಸ್ಟ್ರಿಕ್ಟ್ ಆಗಿ ರೂಲ್ಸ್ ಮಾಡಿದ್ದಾರೆ.."
"ನಮ್ಮ ಮಾವನವರು ರಿಟೈರ್ಡ್ ಸ್ಕೂಲ್ ಟೀಚರ್.. ಹಾಳಾಗಿ ಹೋಗ್ಲಿ ಅವರ ಹೆಸರಿಗಾದ್ರೂ ಲೋನ್ ಸಿಗತ್ತೇನ್ರಿ..?" ಅವಳ ಸಹನೆ ಮೀರಿತ್ತು..
"ರಿಟೈರ್ಡ್ ಟೀಚರ್ ಅಂದ್ರೆ, ಈಗ ಕೆಲಸದಲ್ಲಿ ಇಲ್ಲ ಅಲ್ವಾ..? ರಿಯಲಿ ಸಾರಿ ಮೇಡಂ.. ನಿಜ ಬೇಸರ ಆಗ್ತಿದೆ ಆದ್ರೆ ವರ್ಕಿಂಗ್ ನಲ್ಲಿ ಇರೋರಿಗೆ ಮಾತ್ರ ಲೋನ್ ಸಿಗತ್ತೆ.. ನಿವೃತ್ತಿ ಹೊಂದಿದವರಿಗೆ ಕೊಡೊಕೆ ಆಗಲ್ಲ.."
"ನಿಮ್ಮ ಬ್ಯಾಂಕಿನ ಉದ್ದೇಶ ಹಾಗೂ ಗುರಿ.. ಅದೇನೋ ಅಂದ್ರಲ್ಲ.." ಅವಳು ಕೇಳಿದ್ಳು..
"ಅದೇ ಮೇಡಂ ಗ್ರಾಹಕರ ತೃಪ್ತಿ ಹಾಗೂ ಸಮಾಧಾನ.." ಪೆಚ್ಚು ಮುಖದಲ್ಲಿ ಉದ್ಘರಿಸಿದ ನಿರ್ದೇಶಕ.. ಆದ್ರೆ ಅದು ಆಫ್ ದ ರೆಕಾರ್ಡ್ ಆಗಿತ್ತು..

ಕೊನೆಗೂ ಅವಳೇನೋ ಬಂದಳು.. ಮುಂದೆ..?

ಕುಡಿ ಕಥೆಗಳು:
ಕೊನೆಗೂ ಅವಳೇನೋ ಬಂದಳು.. ಮುಂದೆ..?
ಅವಳಿಗಾಗಿ ಆತ ಕಾಯುತ್ತಲೇ ಇದ್ದ.. ಅದೇ ಪಾರ್ಕಿನ ಬೆಂಚಿನ ಮೇಲೆ.. ಕೆಲ ಹೊತ್ತು ಉತ್ಸಾಹದಿಂದ ಕಾಯುವ ಆತ ಕೊನೆಗೆ ನಿರಾಸೆಯ ಭಾವದಿಂದ ತಲೆ ತಗ್ಗಿಸಿ ಕುಳಿತುಬಿಡುತ್ತಿದ್ದ..
ಅವಳು ಇಂದಲ್ಲ ನಾಳೆ ಬಂದೇ ಬರ್ತಾಳೆ ಅನ್ನುವ ಗಟ್ಟಿ ನಂಬಿಕೆ ಅವನದ್ದು..
ಬಳಿಕ ಇದು ನಿತ್ಯದ ಅಭ್ಯಾಸವಾಗಿ ಹೋಯ್ತು ಅವನಿಗೆ.. ಒಂದು ನಿರ್ದಿಷ್ಟ ಸಮಯ ಗೊತ್ತು ಮಾಡಿಕೊಂಡು ಪಾರ್ಕ್ ಕಟ್ಟೆಯ ಬೆಂಚು ಕಾಯಿಸಲು ಶುರು ಮಾಡಿದ..
ಅವನು ಆ ಪಾರ್ಕ್ಗೆ ಬರುವ ಸಂಜೆಯ 5 ಗಂಟೆ ಪಾರ್ಕ್ ಕಸ ಗುಡಿಸುವ ಹೆಂಗಸಿಗೆ, ಬುಟ್ಟಿ ಪಾನಿಪುರಿ ಮಾಡುವ ಬಿಹಾರಿ ಹುಡುಗನಿಗೆ, ನಿತ್ಯವೂ ತಪ್ಪಿಸದೇ ಜಾಗ್ ಮಾಡುವ ಅಥ್ಲಿಟ್ಗೆ, ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಅಂತ ಹಾಡು ಹೇಳುವ ಆರ್ಎಸ್ಎಸ್ ನವರಿಗೆ, ಲಾಫಿಂಗ್ ಕ್ಲಬ್ನ ವಯೋವೃದ್ಧರಿಗೆ, ಕೈನಲ್ಲೊಂದು ಜರ್ಮನ್ ಶಫರ್ಡ್ ನಾಯಿ ಹಿಡಿದು ವಾಕಿಂಗ್ ನೆಪದಲ್ಲಿ ದೇಹ ಕರಗಿಸುವ ಮಧ್ಯವಯಸ್ಸಿನ ಆಂಟಿಯರಿಗೆ ಸೇರಿದಂತೆ ಆ ಪಾರ್ಕ್ನ ಅನೂಹ್ಯ ಒಡನಾಟ ಇಟ್ಟುಕೊಂಡ ನೂರಾರು ಮಂದಿಗೆ ಟೈಮ್ ಟೇಬಲ್ ಆಯಿತು..
ಈ ಮಧ್ಯೆ ಸಾಕಷ್ಟು ಬದಲಾವಣೆಗಳಾದವು..
ಜನರೇಷನ್ಗಳು ಬದಲಾದವು.. ಪಾರ್ಕ್ಗೆ ಬರುವ ಮಂದಿ ಬದಲಾದರು.. ಪಾನಿಪುರಿ ಮಾರುವ ಬಿಹಾರಿಯೂ ಬದಲಾದ ಅವನ ಬದಲಿಗೆ ಮತ್ತೊಬ್ಬ ಬಂದ..
ಕ್ರಿಕೆಟ್ ಆಡುತ್ತಿದ್ದ ಮಕ್ಕಳು ದೊಡ್ಡವರಾಗಿ ಕೆಲಸಕ್ಕೆ ಸೇರಿಕೊಂಡರು..ಕೆಲವರಿಗೆ ಮದುವೆಯೂ ಆಯಿತು.. ಇನ್ನೂ ಕೆಲವರಿಗೆ ಮಕ್ಕಳಾಯಿತು.. ಆಂಟಿಯರು ಮುದುಕಿಯರಾಗಿ ಲಾಫಿಂಗ್ ಕ್ಲಬ್ಗೆ ಹೊಸ ಮೆಂಬರ್ ಆದ್ರು..
ತಮ್ಮ ಪತ್ನಿಯೊಂದಿಗೆ ವಾಕಿಂಗ್ ಬರುವ ಹೊಸ ಜವ್ವನಿಗರು, ಮಕ್ಕಳನ್ನು ಆಡಿಸಲು ಕರೆತರುವವರು ಎಲ್ಲರೂ ಆತನ ಬದುಕಿನಲ್ಲಿ ಬದಲಾವಣೆ ಆಗದೇ ಇದ್ದುದ್ದ ಕಂಡು ಆಶ್ಚರ್ಯಗೊಂಡರು..
ಒಬ್ಬಾತ ದೈರ್ಯ ಮಾಡಿ ಒಂದಿನ ಕೇಳಿದ..
"ಅಜ್ಜಾ, ನೀನು ಯಾಕೆ ಹೀಗೆಯೇ ಇದ್ದೀಯಾ..? ನಿಂಗೆ ಲೈಫ್ ಬೋರ್ ಬರಲ್ವಾ..?" ಆತ ಇನ್ನೂ ಏನೇನೋ ಪ್ರಶ್ನಿಸಿದ ಅದ್ಯಾವುದು ಈತನ ಗಮನಕ್ಕೆ ಬರಲಿಲ್ಲ..
ಆದರೆ ಅವನು ಅಜ್ಜಾ ಅಂದಿದ್ದು ಮಾತ್ರ ಇವನ ಕಿವಿಗೆ ತಾಗಿತು.. ತಾನು ವೃದ್ಧನಾದರೂ ಅವಳಿನ್ನೂ ಬಂದಿಲ್ಲವಾ ಅಂದುಕೊಳ್ಳುತ್ತಾ ಅತ್ತ ತಿರುಗಿ ನೋಡಿದ..
ಅಲ್ಲಿ...
ಲಾಫಿಂಗ್ ಕ್ಲಬ್ನಲ್ಲಿ ಅವಳು ಕಂಡಂತಾಯಿತು.. ದಿಟ್ಟಿಸಿ ನೋಡಿದ .. ಹೌದು ಅದೇ ಚಹರೆ, ಆದ್ರೆ ಮುಖದಲ್ಲಿ ನೆರಿಗೆ ಬಿದ್ದಿದೆ.. ಅವನು ಎಷ್ಟೇ ಮುದಿಬಿದ್ದರೂ ಅವಳ ಗುರುತನ್ನು ಮರೆಯಲಾರ.. ಹೌದು ಅದು ಅವಳೇ,, ಆದರೆ ಅವಳ ಜೊತೆಯಲ್ಲೊಬ್ಬ ಮುದುಕ ಇದ್ದ, ಅವರಿಬ್ಬರೂ ಮಗುವೊಂದರ ಜೊತೆ ಆಡುತ್ತಿದ್ದರು..
"ಓಹೋ! ಮದುವೆಯಾಗಿ, ಮಗನಾಗಿ ಕೊನೆಗೆ ಮೊಮ್ಮಗುವೂ ಆಗಿ ಪಾರ್ಕಿಗೆ ಆಡಲು ಕರೆತಂದಿದ್ದಾಳೆ.." ಆದರೇನಂತೆ ಇಷ್ಟು ವರ್ಷ ಕಾದಿದ್ದಕ್ಕೆ ಕೊನೆಗೂ ಇದೇ ಪಾರ್ಕ್ಗೆ ಬಂದಳಲ್ಲ ಅದೇ ಸಂತೋಷ ಅಂತ ಮನಸಿನಲ್ಲಿ ಅಂದುಕೊಂಡವನೇ ಅಲ್ಲಿಂದ ಎದ್ದ..
ತನ್ನ ಕಾಯುವಿಕೆ ಹುಸಿ ಹೋಗಲಿಲ್ಲ ಅನ್ನುವ ಸಾರ್ಥಕತೆ ಅವನ ಮುಖದಲ್ಲಿತ್ತು..

ಕನ್ನಡಕ ಕಳೆದು ಹೋದ ಪ್ರಸಂಗ

ಕುಟಿಕಥೆಗಳು:
ಕನ್ನಡಕ ಕಳೆದು ಹೋದ ಪ್ರಹಸನ:
"ಇಲ್ಲೇ ಎಲ್ಲೋ ಇಟ್ಟಿದ್ದೆ.. ಕಾಣ್ತಿಲ್ಲ.. ಈ ಹಾಳದ್ದು ಮರೆವು ಬೇರೆ.. ಒಂಚೂರು ನೋಡಮ್ಮ ಎಲ್ಲಾದ್ರೂ ಕಾಣುತ್ತಾ.." ಸಿಡಿಮಿಡಿಗುಟ್ಟತ್ತಲೇ ಹುಡುಕುತ್ತಿದ್ದರು 60ರ ಅರೆಮರೆವಿನ ವೃದ್ಧೆ ಶಾಂತಮ್ಮ..
ಶಾಂತಮ್ಮನ ಮನಸಿನಲ್ಲಿ ಕನ್ನಡಕದ ಪೆಟ್ಟಿಗೆಯಲ್ಲಿ ತಮ್ಮ ಕನ್ನಡಕವೂ ಇದೆ ಅನ್ನುವ ನಂಬಿಕೆ.. ಕನ್ನಡಕ ಕಳೆದು ಹೋಗಿದೆ ಅಂತ ಅವರು ಹೇಳಲೇ ಇಲ್ಲ.. ಕೇವಲ ಕನ್ನಡಕದ ಬಾಕ್ಸ್ ಕಳೆದು ಹೋಗಿದೆ ಅಂತ ಹುಡುಕುತ್ತಲೇ ಇದ್ದಾರೆ..
"ಶಾಂತು ಕನ್ನಡಕದ ಬಾಕ್ಸ್ ಅಲ್ಲೆಲ್ಲೋ ಇದ್ಯಂತೆ ನೋಡ್ರೋ..!" ಶಾಂತಮ್ಮನ ಪತಿ ಶ್ಯಾಮರಾಯರು ದಿವಾನಖುರ್ಚಿಯಲ್ಲಿ ಕುಳಿತು ಆರ್ಡರ್ ಮಾಡಿದ್ರು..
"ಅತ್ತೆ ಕನ್ನಡಕದ ಬಾಕ್ಸ್ ಕಳ್ಕೊಂಡಿದ್ದಾರೆ..!" ಸೊಸೆಯಂದಿರು ಅತ್ತೆಯ ಕಷ್ಟವನ್ನು ಮನೆಯ ಸದಸ್ಯರಿಗೆ ಹೇಳುತ್ತಾ ಕನ್ನಡಕದ ಬಾಕ್ಸ್ ಹುಡುಕಲು ಮುಂದಾದ್ರು..
"ಏನು ಅಮ್ಮ ಕನ್ನಡಕದ ಬಾಕ್ಸ್ ಮಿಸ್ ಆಯ್ತಾ..?" ಮಗ ತರಾತುರಿಯಲ್ಲಿ ಅಮ್ಮನಿಗೆ ಹೆಲ್ಪ್ ಮಾಡಲು ಸಿದ್ಧನಾದ..
"ಅರೆ ಹೌದಾ! ದೊಡ್ಡಮ್ಮನ ಕನ್ನಡಕದ ಬಾಕ್ಸ್ ಕಳೆದು ಹೋಯ್ತಾ..?" ಶಾಂತಮ್ಮನ ಓರಗಿತ್ತಿಯ ಮಗನೂ ಅಖಾಡಕ್ಕೆ ಇಳಿದ..
"ಅತ್ತಿಗೆಯ ಕನ್ನಡಕದ ಬಾಕ್ಸ್ ಕಳೆದಕೊಂಡ್ರಾ..?" ಓರಗಿತ್ತಿ ಸುಲೋಚನಾಳ ಸಂಭ್ರಮವೂ ಹುಡುಕಾಟಕ್ಕೆ ಸೇರಿಕೊಳ್ತು..
ಕೊನೆಗೆ..
ಮುದ್ದು ಮೊಮ್ಮಗಳು ಪಾರಿ ಓಡಿ ಬಂದು ಶಾಂತಮ್ಮನ ಹೆಗಲಿಗೆ ಜೋತು ಬಿತ್ತು.. "ಏನಜ್ಜಿ ಎಲ್ಲಾ ಸೇರಿ ಹುಡುಕ್ತಾ ಇದ್ದೀರಾ..?"
"ಏನಿಲ್ಲಾ ಕಣೆ ನಿನ್ನ ಆಮೇಲೆ ಮುದ್ದು ಮಾಡ್ತೀನಿ ಮೊದಲು ಕನ್ನಡಕದ ಬಾಕ್ಸ್ ಕಳೆದುಹೋಗಿದೆ ಹುಡುಕಬೇಕು.."
"ಹೌದಾ ಅಜ್ಜಿ,,? ಅದ್ರಲ್ಲಿ ಏನಿತ್ತು.." ಪಾರಿಯ ಮುಗ್ದ ಪ್ರಶ್ನೆ..!
"ಕನ್ನಡಕ ಇತ್ತು ಕಣೆ.." ಶಾಂತಮ್ಮ ರೇಗುವ ಧ್ವನಿಯಲ್ಲಿ
"ಅಯ್ಯೋ ಅಜ್ಜಿ ಕನ್ನಡಕ ನಿನ್ನ ಕಣ್ಣಲ್ಲೇ ಇದ್ಯಲ್ಲ..!" ಪಾರಿ ಅಣಕಿಸುತ್ತಾ..
"ಅರೇ ಹೌದಲ್ವಾ..?" ಶಾಂತಮ್ಮ..
"ಅಮ್ಮಾ..! ಕಳೆದು ಹೋಗಿದ್ದು ಕನ್ನಡಕದ ಬಾಕ್ಸ್ ಅಂದೆ.. ಕನ್ನಡಕ ಅಂದಿದ್ರೆ ಆಗಲೇ ಹೇಳ್ತಾ ಇರಲಿಲ್ಲವಾ..? ಸುಮ್ಮನೆ ನಿನ್ನ ಮರೆವಿನ ದೆಸೆಯಿಂದ ಮನೆ ಮಂದಿನೆಲ್ಲಾ ಯಕ್ಷಗಾನ ಮಾಡಿಸಿಬಿಟ್ಟೆ ನೀನು.." ಮಗ ಗೊಣಗುತ್ತಾನೆ
-ವಿಶ್ವಾಸ್ ಭಾರದ್ವಾಜ್

ಶರಣೆಂಬೆಶರಣು ಶರಣೆಂಬೇ..:
ಇತಿ ಮಿತಿ ಮೀರಿದ ಗತಿ ಸ್ಥಿತಿ ಮಾತೆ
ಪರಮೋನ್ನತ ಸಂಸ್ಕೃತಿ ಸದ್ಗತಿದಾತೆ
ಭವ ಬಂಧವ ಅಂಟಿಸೋ ನಾಟಕೀಯತೆ
ರತಿ ಮೋಹ ಪ್ರಕೃತಿ ನಿನ್ನ ರಮ್ಯತೆ

ನವ ನಿರ್ಮಿತಿ ಧಿತಿ ಪ್ರತಿ ಜನನಿ
ದುರ್ಮತಿ ಚಿತ್ತದ ಅವನತಿ ಕಾರಣಿ
ಪೂರತಿ ಪ್ರಾಣಕೆ ಜೀವಧಾರಿಣಿ
ಶಾಶ್ವತಿ ಭಾವದ ಅಮರ ರೂಪಿಣಿ
ಪರ ಲೋಕದ ಅನುಮತಿ ದೊರಕಿಸು ತಾಯೇ
ಚರಣಾರವಿಂದವ ಸ್ಪರ್ಷಿಸಿ ಚುಂಬಿತ ಆಶಯೇ
ಮೋಕ್ಷ ಸ್ವರೂಪ ವರ ನೀಡಿಸು ಮಾಯೆ
ವಿಸ್ಕೃತ ಅನಂತ ದಿಗಂತ ವಿಶಾಲ ಛಾಯೆ
ಕಮಲನೇತ್ರಕೆ ನಮಿಸಲು ನೀಡು ಸಮ್ಮತಿ
ಕಠಿಣ ತಪಸ್ಸಿಗೆ ಗಟ್ಟಿ-ದಿಟ್ಟಿನ ಧೀ ಶಕುತಿ
ಸಗ್ಗದ ಸೊಗ್ಗದ ಬಗ್ಗದ ಮಹಾಮತಿ
ನೀ ಎಮ್ಮಯ ಅನುರಣ ಸ್ವೀಕೃತಿ ಸುಕೃತಿ
ಹೇ ಜಗದಂಬೆಯೇ ಶರಣೆನ್ನುವ ರೀತಿ ಸುನೀತಿ
ಯಂತ್ರ-ಮಂತ್ರಗಳ ತಂತ್ರ ಅರಿವುಗಳ ಒಡತಿ
ಶರಣು ಶರಣೆಂಬೇ ಪೊರೆಯೇ ಅಂಬೇ
ಶರಣು ಶರಣೆಂಬೇ ಹೇ ಜಗದಂಬೇ
-ವಿಶ್ವಾಸ್ ಭಾರದ್ವಾಜ್

ಅದಿತಿಪೊಯಮ್ಸ್


ಕುಣಿಕುಣಿಯುತ ನೆಗೆನೆಗೆಯುತಾ
ಬಂದಿತೆಮ್ಮ ಕೂಸು
ಕಲಕಲರವ ಖುಷಿಯ ಹರಿಸೊ
ಮನೆಯ ಮಂದಹಾಸ
ಫ್ರಿಲ್ಲು ಫ್ರಾಕು ಒದೆಯುತಾ
ಚಿಗುರೆ ಬಂತು ಒಳಗೆ
ಗಲಗಲಿಸುವ ಮೊಗದ ತುಂಬಾ
ನಲಿವ ನಗೆಯ ಬುಗ್ಗೆ
ಕಥೆಯ ಸರಣಿ ಹರಿದು ಬಂತು
ನೀಳ ರೈಲಿನಂತೆ
ರೈಲು ಕಂಬಿ ಸೇರದಂತೆ
ಕಥೆಯೂ ಮುಗಿಯದಂತೆ
ಚಟಪಟಪಟ ವಟಗುಡುವಳು
ನಿಂತೂ ನಿಲ್ಲದೆಂದೂ
ಕೊಟ್ಟಿಗೆಯಲಿ ತುಯ್ದಾಡಿದ ಕರು
ಗೆಳತಿ ಬಂದಳೆಂದು
ತುಂಬು ರಾತ್ರಿ ಚಂದ್ರನೊಡನೆ
ಪಂದ್ಯ ಕಟ್ಟೊ ತುಂಟಿ
ಪ್ರೇಮ ಮೂರ್ತಿ ಸೋಮ ಕೂಡಾ
ಸೋತ ಮಾತಿಗಂಟಿ
ಬದುಕು ಕೊಟ್ಟ ಪುಣ್ಯ ನೀನು
ಮಧುವ ಸುರಿಸೊ ರಾಣಿಜೇನು
ವರವೇ ನಿಜ ಅರಿವೆಯೇನು?
ಮನೆ ಮನಗಳ ಕಾಮಧೇನು
ಸುಖದ ಶೃಂಗ ಒಲವ ಭೃಂಗ
ಇದು ವಾತ್ಸಲ್ಯದ ಉತ್ತುಂಗ
ಮನಮೋಹಕ ಮುದ್ದುಬಾಲೆ
ನಡೆವ ಮಧುರ ಮೃದಂಗ
-ವಿಶ್ವಾಸ್ ಭಾರದ್ವಾಜ್

ಈ ಸಲವೂ ಶೂ ಕೊಳ್ಳಲಾಗಲಿಲ್ಲ

ಕುಡಿಕಥೆಗಳು:
ಈ ಸಲವೂ ಶೂ ಕೊಳ್ಳಲಾಗಲಿಲ್ಲ:
ಈ ಸಲ ಹೊಸ ಶೂಗಳನ್ನು ಕೊಂಡುಕೊಳ್ಳಬೇಕು ಅಂತ ಅಂದುಕೊಂಡ..
ಕಳೆದ ಮೂರು ವರ್ಷಗಳಿಂದಲೂ ಹಾಗೇ ಅಂದುಕೊಳ್ಳುತ್ತಲೇ ಇದ್ದಾನೆ ಅವನು..
ಅಡಿಕೆ ಕೊಯ್ಲು ಮುಗಿಸಿ, ಮಂಡಿಗೆ ಅಡಿಕೆ ಸಾಗಿಸಿ, ಹಣ ಬಂದು ಬ್ಯಾಂಕಿಗೆ ಬಿದ್ದ ದಿನ ಕೊಂಡುಕೊಳ್ಳಲೇ ಬೇಕು ಅನ್ನುವ ಅತಿಯಾದ ತುಡಿತ ಅವನಿಗೆ..
ಹೊಸದೊಂದು ಜೊತೆ ನೈಕಿ ಸ್ಪೋರ್ಟ್ಸ್ ಶೂ, ರಿಬಾಕ್ ಲೆದರ್ ಶೂ ಮತ್ತೊಂದು ಜೊತೆ ಬಾಟಾ ಕಂಫರ್ಟ್ ಚಪ್ಪಲಿ ಕೊಂಡುಕೊಳ್ಳಬೇಕು.. ಸ್ಪೋರ್ಟ್ಸ್ ಶೂಗೆ 5 ಸಾವಿರ, ಲೆದರ್ ಶೂಗೆ 2 ಸಾವಿರ ಚಪ್ಪಲಿಗೆ ಮತ್ತೊಂದು.. ಒಟ್ಟು ಎಂಟತ್ತು ಸಾವಿರ ಆದ್ರೂ ಬೇಕು..
ಈ ಸಲ ಏನಾದರಾಗಲಿ ಕೊಂಡುಕೊಳ್ಳಬೇಕು ಅಂದುಕೊಳ್ಳುತ್ತಾನೆ..
ಅಷ್ಟರಲ್ಲಿ ಪೇಟೆಯ ಕೋ ಆಪರೇಟಿವ್ ಬ್ಯಾಂಕಿನ ಕ್ಲರ್ಕ್ ಫೋನ್ ಮಾಡಿದ್ದ "ಸಾ, ಬಡ್ಡಿ ಇಷ್ಟಿಷ್ಟಿಷ್ಟಾಗಿದೆ ಸಾ, ಮ್ಯಾನೇಜರ್ ನಿಮ್ಮ ಬೈಗುಳ ನನ್ನ ಮೇಲೆ ಹಾಕ್ತಾನೆ ಸಾ..ಬೇಗ ಕಟ್ಟಿಬಿಡಿ ಸಾ.."
ಓಹ್! ಅಕ್ಕನಿಗೆ ಮದುವೆ ಮಾಡಿ ವರ್ಷ 5 ಆಯಿತು.. ಬಳಿಕ ಅವಳ ಬಸುರಿ-ಬಯಕೆ, ಸೀಮಂತ.. ಅಕ್ಕನ ಮೊದಲ ಮಗಳ, ಎರಡನೇ ಮಗನ ಬಾಣಂತನ ಮಾಡಿಸಿದ್ದು, ಆಮೇಲೆ ತೊಟ್ಟಿಲು ಕಳಿಸೋ ಶಾಸ್ತ್ರ, ಎರಡಕ್ಕೂ ಅನ್ನಪ್ರಾಶನ, ನಾಮಕರಣ, ಅಕ್ಷರಾಭ್ಯಾಸ, ಚಂಡಿಕೆ.. ಮತ್ತಷ್ಟು ಸಾಲ.. ಪ್ರತಿ ಸಲ ಅಡಿಕೆ ಮಂಡಿಗೆ ಹಾಕಿದ ದುಡ್ಡು ಕೈಗೆ ಬಂದಾಗ ಈ ಸಾಲಗಳಿಗೇ ಸರಿ ಹೋಗುತ್ತೆ ಇನ್ನೆಲ್ಲಿ ನೈಕಿ, ರಿಬಾಕ್, ಬಾಟಾ..?
ಈ ಸಲ ಕೊಳ್ಳಲೇಬೇಕು ಅನ್ನುವ ದೃಢ ಸಂಕಲ್ಪ ನೆನಪಾಯಿತು.. ಒಮ್ಮೆ ತನ್ನ ಕಾಲು ನೋಡಿಕೊಂಡ, ಹಾವಾಯಿ ಚಪ್ಪಲಿ ಕೊಂಚ ಮಟ್ಟಿಗೆ ಚೆನ್ನಾಗೇ ಇದೆ ಅನ್ನಿಸಿತು ಅವನಿಗೆ..ಈ ಮಳೆಗಾಲ ಕಳೆಯಲು ಇದು ಸಾಕು,, ಶೂ ಮುಂದಿನ ಬಾರಿ ಕೊಂಡರಾಯ್ತು ಅಂದುಕೊಂಡು ಗುಮಾಸ್ತನಿಗೆ ತಿರುಗಿ ಫೋನ್ ಹಾಯಿಸಿದ.. "ನಾಳೆ ಬಂದು ಬಡ್ಡಿ ಕಟ್ತೀನಿ ಅಂತ ಹೇಳು ಮ್ಯಾನೇಜರ್ ಸಾಹೇಬ್ರಿಗೆ.."

ಓ ಈಳಂಶ್ರೀಲಂಕಾದಲ್ಲಿ ತಮಿಳರು ಸಿಂಹಿಳಿಯರ ನಡುವೆ ಸೌಹಾರ್ದತೆ ಮೂಡಿಸಿ ಶಾಂತಿ ಸ್ಥಾಪನೆಗೆ ಕಳಿಸಲ್ಪಟ್ಟಿದ್ದು ಶಾಂತಿ ಪಾಲನಾ ಪಡೆ INDIAN PEACE KEEPING FORCE.
ಅದನ್ನು ಕಳಿಸಿದ್ದು ಸನ್ಮಾನ್ಯ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ...
ಕಳಿಸಿದ್ದ ಉದ್ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಹಾಗೂ ಒಂದರ್ಥದಲ್ಲಿ ತನ್ನ ಅಂತರಾಷ್ಟ್ರೀಯ ಅಹಂಕಾರದ ತೀಟೆ ತೀರಿಸಿಕೊಳ್ಳುವ.. ಕೊನೆಯ ಅಲ್ಪ ಕಾರಣ ತಮಿಳರ ಸ್ವಾತಂತ್ರ್ಯ ಹಾಗೂ ಹಕ್ಕು ರಕ್ಷಿಸಿ ಅನ್ನುವ ಭಾರತೀಯ ತಮಿಳಿಯರ ಒತ್ತಾಯ..
ಸರಿ,, 32 ತಿಂಗಳು ಶ್ರೀಲಂಕಾದಲ್ಲಿ ಕಾರ್ಯಾಚರಣೆ ಮಾಡಿದ IPKF ಅಸಲಿಗೆ ಮಾಡಿದ್ದಾದರೂ ಏನು?
1990 ಮಾರ್ಚ್ 24 ರಂದು ತವರಿಗೆ ವಾಪಾಸಾದ ಶಾಂತಿಪಾಲನಾ ಪಡೆಯ ಸಾಧನೆಗಳು ವಾಹ್! ನಿಜಕ್ಕೂ ನಾವು ಮಾತ್ರ ಬೆನ್ನು ತುರಿಸಿಕೊಳ್ಳಲೇಬೇಕು...
ಪ್ರತಿ ದಿನವೊಂದಕ್ಕೆ 5 ಕೋಟಿಯಂತೆ ಒಟ್ಟು 4500 ಕೋಟಿ ಹಣ ವ್ಯಥಾ ವ್ಯರ್ಥ....
ರಷ್ಯಾ, ಪೋಲೆಂಡ್ ಮುಂತಾದ ರಾಷ್ಟ್ರಗಳಿಂದ ತರಿಸಲ್ಪಟ್ಟ ಅಪಾರ ಪ್ರಮಾಣದ ಮದ್ದುಗುಂಡು, ಶಸ್ತ್ರಾಸ್ತ್ರ ವಿನಾಕಾರಣ ವ್ಯರ್ಥ..
ಸುಮಾರು 1248 ಶಾಂತಿ ಪಾಲನಾ ಪಡೆಯ ಯೋಧರು, ಅಧಿಕಾರಿಗಳ ಜೀವಹಾನಿ...
3000ಕ್ಕೂ ಹೆಚ್ಚು ಸೈನಿಕರ ಅಂಗಾಂಗ ನಷ್ಟ,, ಶಾಶ್ವತ ಅಂಗವೈಕಲ್ಯ..
4000 ಲಂಕಾದ ತಮಿಳು ಹಾಗೂ ಸಿಂಹಳ ಅಮಾಯಕ ನಾಗರೀಕರ ಹತ್ಯೆ..
1 ಲಕ್ಷ ನಿರಾಶ್ರಿತರ ಹಿಡಿ ಶಾಪ, ಐವತ್ತು ಸಾವಿರ ಮನೆ ಮಠ ಕಳೆದುಕೊಂಡವರು ಮಣ್ಣು ತೂರಿ ಹರಸಿದ ಹಾರೈಕೆ..
ನೂರಾರು ಮುಗ್ಧ ಹೆಣ್ಣು ಮಕ್ಕಳ ಸಾಮೂಹಿಕ ಅತ್ಯಾಚಾರ ..
ಇಷ್ಟು ಸಾಧನೆ ಮಾಡಿ ಹಿಂತಿರುಗಿದ ಶಾಂತಿ ಪಾಲನಾ ಪಡೆ ವಾಪಾಸು ಬರುವಾಗ ಹೊತ್ತ ಹೆಸರು INDIAN PEOPLE KILLING FORCE..
ಒಮ್ಮೆ ಇತಿಹಾಸವನ್ನು ಅಮೂಲಾಗ್ರವಾಗಿ ಗಮನಿಸಿದರೆ ಎದ್ದು ಕಾಣಿಸೋದು ಕೇವಲ ರಾಜೀವ್ ಗಾಂಧಿಯವರ ಅನವಶ್ಯಕ ಅಹಂಕಾರದ ತಿಕ್ಕಲುತನ ಮಾತ್ರ..
ಮಧ್ಯ ಹಲವು ಆಯಾಮಗಳಲ್ಲಿ ಕ್ಷುಲ್ಲಕ ರಾಜಕಾರಣ ಕಾಣಿಸುತ್ತದೆ..
ಶಾಂತಿ ಸ್ಥಾಪನೆಗೆ ಹೋಗಿ ಲಂಕನ್ನರಲ್ಲಿ ಶಾಶ್ವತ ಕಂದಕ ಹುಟ್ಟು ಹಾಕಿದ ಶ್ರೇಯಸ್ಸು ರಾಜೀವ್ ಗಾಂಧಿ ಸರ್ಕಾರಕ್ಕೆ ಸಲ್ಲಬೇಕು..
ಹಾಗಿದ್ದರೂ ರಾಜೀವ್ ಗಾಂಧಿ ಭಾರತ ರತ್ನ..
ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆ ಮೂಲಕ ದೇಶವನ್ನು ಭದ್ರಪಡಿಸಿದ, ವಿದೇಶಾಂಗ ಸಂಬಂಧ ಸುಧಾರಿಸಿದ, ಸುವ್ಯವಸ್ಥಿತ ಆಡಳಿತ ನೀಡಿದ, ಕಾರ್ಗಿಲ್ ಯುದ್ಧದ ಮುಖಾಂತರ ಪಾಪಿ ಪಾಕ್ ಗೆ ಪೆಟ್ಟು ಕೊಟ್ಟ, ಜೈ ವಿಜ್ಞಾನ್ ಅನ್ನುವ ಹೊಸ ದೃಕ್ಪಥ ತೋರಿಸಿದ ನಿಸ್ವಾರ್ಥ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ನೀಡಲು ಮೀನಾ ಮೇಷ ಎಣಿಸಬೇಕಾಯಿತು..
ಓದಲೇಬೇಕಾದ ಪುಸ್ತಕ ಕುಮಾರ್ ಬುರಡಿಕಟ್ಟೆಯವರ ಓ ಈಳಂ..
-ವಿಶ್ವಾಸ್ ಭಾರದ್ವಾಜ್

Wednesday, 10 December 2014

ಮೂಷಿಕ ಮಹಿಮೆಮೂಷಿಕ ಮಹಿಮೆ:
 ಹಾಗೆಲ್ಲ ಒಂದು ಸಾರಿ ನಿದ್ದೆಗೆ ಜಾರಿದ ಮೇಲೆ ಎದ್ದ ದಾಖಲೆಯೇ ಇಲ್ಲ ನನ್ನದು. ಅಂತದರಲ್ಲಿ ಬಡಿದೆಬ್ಬಿಸಿದಂತೆ ಎಚ್ಚರವಾಗಿ ಹೋಯಿತು. ಎಲ್ಲಿಂದಲೋ ಸರ-ಸರ, ಪರ-ಪರ, ಚರ-ಚರ ಸದ್ದು, ಅವ್ಯಾಹತವಾಗಿ ಕೇಳಿಬರುತ್ತಲೇ ಇದೆ. ಎಲ್ಲಿಂದ ತಿಳಿಯುತ್ತಿಲ್ಲ. ಉಹುಂ! ಪಟಪಟನೆ ತಲೆ ಕೆಡವಿಕೊಂಡೆ.. ಮತ್ತೆ ನಿದ್ದೆಗೆ ಜಾರುವ ಮನಸಾಗುತ್ತಿದೆ. ಕಣ್ಣುಗಳಲ್ಲಿ ಅದೇ ಮಂಜು-ಮಂಜು ತೂಕಡಿಕೆ. ಸದ್ದು ಈಗ ತಲೆಯೊಳಗೂ ಸೇರಿಕೊಂಡು ಕೊರೆಯತೊಡಗಿತು. ಎಲ್ಲಿಂದ ಬರುತ್ತಿದೆ ಸುಡುಗಾಡು ಶಭ್ದ. ಪಾಂಡವರು ವನವಾಸದ ಸಂದರ್ಭದಲ್ಲಿ ಕೌರವರು ಕುತಂತ್ರ ಮಾಡಿ ಅರಗಿನ ಮನೆಯಲ್ಲಿ ದಾಯಾದಿಗಳನ್ನು ಕೊಲ್ಲುವ ಸಂಚು ಮಾಡಿದ್ದಾಗ ಅಲ್ಲಿಂದ ತಪ್ಪಸಿಕೊಳ್ಳಲು ಸುರಂಗ ಕೊರೆಯುತ್ತಿದ್ದ ಸನಿವೇಶ ಕಣ್ಮುಂದೆ ಬರುತ್ತಿದೆ. ಎಷ್ಟೇ ಆದರೂ ನಿದ್ದೆಗಣ್ಣು, ಕನಸುಗಳಿಗೇನಂತೆ ಏಕಾಏಕಿ ದಾಳಿಮಾಡಿಬಿಡುತ್ತವೆ.
            ಅರೆ ಎಲ್ಲಿಂದ ಬರುತ್ತಿದೆ ಹಾಳು ಸದ್ದು..? ನಡುರಾತ್ರಿಯ ಸರಹೊತ್ತಿನಲ್ಲಿ,,! ಹೇಳಿಕೇಳಿ ನಮ್ಮದು ಒಂಟಿಮನೆ ಬೇರೆ. ಯಾರಾದರೂ ಕಳ್ಳ ಹೊಕ್ಕುಬಿಟ್ಟನೆ? ಅಥವಾ ದೆವ್ವಗಳು, ಪಿಶಾಚಿ, ಮೋಹಿನಿ ಇರಬಹುದಾ? ವಾಸ್ತವಕ್ಕೆ ಮರಳಿದೆ. ತಲೆಯಲ್ಲಿ ಅಲೋಚನೆಗಳು ನೂರಾರು ಕವಲುಗಳಾಗಿ ಅರ್ಥವಿಲ್ಲದೆ, ದ್ವಂದ್ವಗಳಾಗಿ ಸುರುಳಿ ಸುತ್ತುತಿವೆ ಯಾವುದೂ ಸ್ಪಷ್ಟವಿಲ್ಲ, ಎನೆನೋ ತರಹೇವಾರಿ ಕಲ್ಪನೆಗಳ ನಡುವೆ ಮತ್ತೆ ಉದ್ಭವಗೊಳ್ಳುವ ಪ್ರಶ್ನೆ ಎಲ್ಲಿಂದ ಬರುತ್ತಿದೆ ದರಿದ್ರದ ಸದ್ದು? ಏನಾದರಾಗಲಿ ನೋಡೆ ಬಿಡುವ ಎಂದು ಹೊದ್ದಿದ್ದ ಚಾದರ ಎಸೆದು ಕುಳಿತೆ. ಕೈಗೆಟಕುವಷ್ಟು ಸನಿಹದಲ್ಲೆ ಸ್ವಿಚ್ಚಿತ್ತು. ಲೈಟ್ ಆನ್ ಮಾಡಿದೆ ದಿಗ್ಗನೆ ಪ್ರಕಾಶ ಬೆಳಗಿತು. ಸುತ್ತಲಿನ ಪರಿಸರಕ್ಕೆ ಕಣ್ಣು ಹೊಂದಿಕೊಳ್ಳಲು ಸುದೀರ್ಘ ಎರಡು ನಿಮಿಷ ಹಿಡಿಯಿತು. ಆಗಲೇ ಸದ್ದು ಹೆಚ್ಚಾಗಿದ್ದು. ಈಗ ಮೊದಲಿಗಿಂತಲೂ ಜೋರಾಗಿ ಕೇಳುತ್ತಿದೆ. ಬಹುಷಃ ಬೆಳಕಾದ್ದರಿಂದಲೇನೋ ಕಾರ್ಯಾಚರಣೆ ಚುರುಕಾಗಿದೆ. ಸರಿ ಯಾರ ಕಾರ್ಯಾಚರಣೆ? ಕಳ್ಳನದ್ದೋ? ದೆವ್ವಗಳದ್ದೋ? ಇಲ್ಲ ಇಲ್ಲ ಕಳ್ಳನಾಗಿರಲು ಸಾಧ್ಯವಿಲ್ಲ ಬಹುಷಃ ಅದೇ ಇರಬೇಕು. ಚಿಕ್ಕಂದಿನಲ್ಲಿ ಅಮ್ಮ, ಅಜ್ಜ, ಅಜ್ಜಿ ಹೇಳಿದ ದೆವ್ವಗಳ ಪುಂಖಾನುಪುಂಖ ಕಥೆಗಳು, ಪಾತ್ರಗಳು ಬೇಡವೆಂದರೂ ನೆನಪಾಗತೊಡಗಿದವು. ಯಾವ ದಿನ ಇಂದು? ಅಮವಾಸ್ಯೆಯಾ? ಹುಣ್ಣಿಮೆಯಾ? ತಥ್ಥೆರಿಕೆ ವಾರ,ತಿಥಿ, ಮಾಸ, ನಕ್ಷತ್ರ ಯಾವುದೂ ನೆನಪಿಲ್ಲ. ಹೇಳಿಕೊಳ್ಳಲು ಬ್ರಾಹ್ಮಣರ ಜಾತಿಯಾದರೂ ಸಂಧ್ಯಾವಂಧನೆ ಮಂತ್ರಗಳೆ ಮರೆತುಹೋಗಿದೆ. ಇನ್ನು ವಾರ-ತಿಥಿಗಳು ಎಲ್ಲಿಂದ ನೆನಪಿರಬೇಕು. ಬ್ರಾಹ್ಮಣರ ಜಾತಿ ಎಂಬ ಪ್ರಸ್ಥಾಪ ಮನಸಿಗೆ ಬರುತ್ತಲೇ ಎದೆಯ ಮೇಲಿನ ಜನಿವಾರ ತಡಕಾಡಿದೆ. ಸಿಕ್ಕಿತು, ಗಾಯಿತ್ರಿ ಗಂಟನ್ನು ಹಿಡಿದುಕೊಂಡು ಧೈರ್ಯ ತಂದುಕೊಳ್ಳುವ ಯತ್ನ ಮಾಡಿದೆ. ಅಬ್ಬಾ! ಇನ್ಮೇಲಾದರೂ ವಾರಕ್ಕೊಂದು ಸಲ ಜಪ ಮಾಡಬೇಕು. ಪಂಚಾಂಗ ಪಾರಾಯಣ ಮಾಡುವ ಅಭ್ಯಾಸ ರೂಡಿಸಿಕೊಳ್ಳಬೇಕು. ಕೊನೆಗೆ ಏನಿಲ್ಲವೆಂದರೂ ವಾರ-ತಿಥಿಗಳು ನೆನಪಿನಲ್ಲಿ ಉಳಿಯುತ್ತವೆ.
        ಚರಚರ ಸದ್ದು ಹೆಚ್ಚುತ್ತಲೇ ಇದೆ. ಮೈ ನಿಧಾನವಾಗಿ ಬೆವರಿನ ಮಯವಾಗುತ್ತಿದೆ. ನನ್ನದು ಮೇಲಿನ ಅಟ್ಟದ ಮೆತ್ತಿಯ ಮೇಲಿನ ವಾಸ್ತವ್ಯ. ಅಲ್ಲಿನ ಪ್ರತಿ ಹರಡಾಗಳೂ ನನ್ನವೇ. ತೀರ ಹೆಂಗಸರಂತೆ ನೀಟಾಗಿ ಜೋಡಿಸಿಕೊಳ್ಳದಿದ್ದರೂ, ಒಂದು ರೀತಿಯಲ್ಲಿ ಸುಸಜ್ಜಿತವಾಗಿ, ವ್ಯವಸ್ಥಿತವಾಗಿ  ನನಗೆ ತೃಪ್ತಿ ನೀಡುವ ರೀತಿಯಲ್ಲಿ ವಸ್ತುಗಳನ್ನು ಇಟ್ಟುಕೊಂಡಿದ್ದೆ. ಚಿಕ್ಕಪುಟ್ಟ ವಸ್ತುಗಳಲ್ಲಿ ಚಿಕ್ಕಪುಟ್ಟ ನೆನಪುಗಳನ್ನು ಶೇಖರಿಸಿಡುವ ನಾನು, ಹರಿದು ಚಿಂದಿಯಾದರೂ ಬಸ್ ಟಿಕೇಟನ್ನು ಎಸೆಯುವುದಿಲ್ಲ. ಹುಟ್ಟಿನಿಂದ ಬಂದ ಅಭ್ಯಾಸವದು. ಎಲ್ಲಿಗೆ ಹೋಗಿ ಬಂದರೂ, ಬಸ್ ಟಿಕೆಟ್ ಮೇಲೆ ಅಂದಿನ ದಿನಾಂಕ ಮತ್ತು ಹೋದ ಸ್ಥಳದ ಹೆಸರು ಬರೆದಿಟ್ಟುಕೊಳ್ಳುವುದು ವ್ಯರ್ಥವಾದರೂ ನೆಚ್ಚಿನ ಹವ್ಯಸ. ಇದರಿಂದ ಪಾಯಿದೆ ಎನಿಲ್ಲದಿದ್ದರೂ ಒಂದಷ್ಟು ಇರುವೆ ಮತ್ತು ಜಿರಲೆಗಳಿಗೆ ಆಶ್ರಯ ಕಲ್ಪಿಸಿದ್ದ ಸುಕೃತ ನನ್ನದಾಗಿತ್ತು.
ಸದ್ದು ನಿರಂತರವಾಗಿ ಕೇಳಿಸುತ್ತಲೇ ಇತ್ತು. ಎಲ್ಲಿಂದಲೋ ಕೊಂಚ ಧೈರ್ಯ ಸಂಪಾದಿಸಿಕೊಂಡೆ. ಮನಸಿನಲ್ಲಿ ಅದಾಗಲೇ ಇಷ್ಟದೈವ ಜಗನ್ಮಾತೆಯ ಪಠಣವಾಗತೊಡಗಿತ್ತು. ಜನನಿಯ ನಾನಾ ಅವತಾರ ಮತ್ತು ಸ್ವರೂಪಗಳು ಸ್ಮರಣೆಗೆ ಬರತೊಡಗಿತ್ತು. ಮಾರಮ್ಮ, ಮಂಚಾಲಮ್ಮ, ಮಾಸ್ತಮ್ಮ, ಮಂಕಾಳಮ್ಮ, ಚೌಡಮ್ಮ, ದೇವಿರಮ್ಮ, ಕಪಾಳಮ್ಮ, ಹೆಣ್ಣು ದೇವರುಗಳ ಹೆಸರೇ ನೆನಪಾಗುತ್ತಿದೆ. ಇಷ್ಟಕ್ಕೂ ದೆವ್ವಗಳು ಹೆದರುವುದು ಆಂಜನೇಯನಿಗಲ್ಲವೇ, ಸರಿ ಸರಿ ಅವನ ನಾಮ ಸ್ಮರಣೆಯೇ ಸರಿ. ಅರ್ಧಂಬರ್ಧ ಬರುತ್ತಿದ್ದ ಹನುಮ ಚಾಲೀಸು ನಾಲಿಗೆಯ ಮೇಲೆ ಹರಿದಾಡತೊಡಗಿತು.
        ನಡುಕ ಹೆಚ್ಚಿಸುವ ಕೊರೆಯುವ ಚಳಿ ಬೇರೆ. ವಿಧಿಯಿಲ್ಲದೆ ಎದ್ದೆ. ಸದ್ದು ನಿಚ್ಚಳವಾಗಿ ಕೇಳಿ ಬರುತ್ತಿರುವದು ಮೂಲೆಯ  ಕಪಾಟಿನಿಂ. ಅಲ್ಲಿ ತನ್ನ ಪುಸ್ತಕ ಭಂಡಾರವಿದೆ. ಓದುವ ಹವ್ಯಾಸವಿದ್ದ ನಾನು ಅತಿ ಜತನದಿಂದ ಜೋಪಾನ ಮಾಡಿ ಸಂಗ್ರಹಿಸಿದ ಕವಿತೆಗಳ ಸಂಗ್ರಹವಿದೆ, ಕಥಾ ಸಂಕಲನಗಳಿವೆ, ದೊಡ್ಡ-ದೊಡ್ಡ ಕಾದಂಬರಿಗಳಿವೆ. ಯಂಡಮೂರಿಯಿದ್ದಾರೆ, ಬೈರಪ್ಪರಿದ್ದಾರೆ, ತರಾಸು, ಬಿ.ಎಂ.ಶ್ರೀ, ಗಳ ಜೊತೆ ಅಡಿಗರು, ಬೇಂದ್ರೆ, ಕುವೆಂಪು, ಕಂಬಾರರಂತಹ ಶತಮಾನದ ಕವಿಗಳಿದ್ದಾರೆ. ಮಾರ್ಕ್ಸ್, ಮಾವೂವಾದದ ಸಾಕ್ಷ ದಾಖಲೆಗಳಿವೆ. ಸಾಕ್ರಟಿಸ್, ಶೇಕ್ಸ್ಪಿಯರ್, ಯೇಟ್ಸ್ ಸಂಗಡ ನವ್ಯ ಆಂಗ್ಲ ಕಾದಂಬರಿಕಾರರಾದ ಚೇತನ್ ಭಗತ್, ಸಿಡ್ನಿ ಶೆಲ್ಡೋನ್, ಅರವಿಂದ ಅಡಿಗ ಸ್ಥಾನ ಹಂಚಿಕೊಂಡಿದ್ದಾರೆ. ವಿವಾದಾತ್ಮಕ ಬರಹಗಾರರಾದ ಅರುಂದತಿ ರಾಯ್, ಸಲ್ಮಾನ್ ರಶ್ದಿ ಸಹ ಅಲ್ಲಿದ್ದಾರೆ. ಎಡಪಂಥೀಯ ಮತ್ತು ಬಲಪಂಥಿಯ ಬರಹಗಾರರು ಅಲ್ಲಿ ಕುಳಿತೇ ತಮ್ಮ ವಿತಂಡವಾದ ಮಂಡಿಸುತ್ತಿದ್ದಾರೆ. ನಾಟಕ ಸಾಹಿತ್ಯ ಇವುಗಳ ಮಧ್ಯೆ ಮುಗಮ್ಮಗಿ ಕುಳಿತಿದೆ. ಲಂಕೇಶರು ಆರ್ಭಟಿಸುತ್ತಿದ್ದಾರೆ. ತೇಜಸ್ವಿ ಅಚ್ಚರಿ ಮೂಡಿಸುವ ಹೊಸ-ಹೊಸ ವಿಷಯಗಳನ್ನು ತುಂಬಿಸುತ್ತಿದ್ದಾರೆ, ಅನಂತಮೂರ್ತಿಗಳು ಮತ್ತೆ ಮತ್ತೆ ವಿವಾದ ಸೃಷ್ಠಿ ಮಾಡುತ್ತಲೇ ಇದ್ದಾರೆ. ಕಿ.ರಂ ನಾಗರಾಜರ ವಿಮರ್ಷೆಗಳು ಚಾಲ್ತಿಗೆ ಬರುತ್ತಿದೆ. ಕೆಲ ಹಿರಿ-ಕಿರಿ ಸಾಹಿತಿಗಳ ವಿಡಂಭನೆಗಳು, ಪ್ರಸ್ತುತತೆಯ ಕುರಿತಾದ ಬರಹಗಳು ಕಪಾಟಿನ ಸ್ಥಳವನ್ನು ಇನ್ನಿಲ್ಲದಂತೆ ತುಂಬಿಸಿಬಿಟ್ಟಿದೆ. ಅಂತಹ ನನ್ನ ಮಹಾ ಸಾಹಿತ್ಯದ ಕಿರು ಪೆಟ್ಟಿಗೆಯೊಳಗೆ ದೆವ್ವ ಹೊಕ್ಕಿ ಏನು ಮಾಡುತ್ತಿದೆ?  ಒಂದು ವೇಳೆ ಎಡ ಮತ್ತು ಬಲಭಾಗಗಳ, ಪಂಥವಾದಗಳ ರಾಜಿ ಪಂಚಾಯತಿಕೆಯ ಸಂಧಾನ ಮಾಡಿಸುತ್ತಿರಬಹುದೇ? ಅಥವಾ ಎಡಪಂಥೀಯರನ್ನು ಬಲಪಂಥೀಯರನ್ನಾಗಿ, ಬಲಪಂಥೀಯರನ್ನು ಎಡಪಂಥೀಯರನ್ನಾಗಿ ಬದಲಾಯಿಸುತ್ತಿರಬಹುದೇ? ಛೆ,ಛೆ ಹಾಗಾಗಿರಲು ಸಾಧ್ಯವೇ ಇಲ್ಲ. ಒಂದು ವೇಳೆ ಮೂರ್ಖ ಪ್ರಯತ್ನ ಮಾಡಿದರೆ ದೆವ್ವವೆಂಬ ದೆವ್ವ ತನ್ನ ಅಸ್ಥಿತ್ವವನ್ನೆ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ನನ್ನ ತರ್ಕ ನನಗೆ ನಗು ತರಿಸಿತು.
             ಹತ್ತಿರ ಹೋಗುತ್ತಲೇ ದಢಾರ್ ಎಂಬ ಶಭ್ದದೊಂದಿಗೆ ಭಾಗಿಲು ತೆರೆದುಕೊಂಡಿತು. ಇದ್ದ ಭಯ ಇಮ್ಮಡಿಯಾಯಿತು. ಎಲ್ಲಿ ನೀರು ಸೋರುತ್ತಿದೆ ತಿಳಿಯುತ್ತಿಲ್ಲ, ಒದ್ದೆಯಾಗಿರುವುದಂತೂ ನಿಜ. ಓಂ ಭೂರ್ಭುವಸ್ಸುವಃ ತತ್ಸ ವಿತುರ್ವವರೇಣ್ಯಂ............. ತನ್ನಿಂತಾನೆ ಗಾಯಿತ್ರಿ ಮಂತ್ರ ಉಚ್ಛಾರಣೆಯಾಗುತ್ತಿದೆ.

ದೊಡ್ಡ ಧೈರ್ಯ ಮಾಡಿ ಒಳಗೆ ಇಣುಕಿದೆ. ಆಗ ಹೊರಬಂದಿತು. ಮೊದಲು ಸಣ್ಣದು, ಆಮೆಲೆ ಅದರ ಚಿಕ್ಕಮ್ಮ ಇರಬೇಕು (ಅದು ಚಿಕ್ಕಪ್ಪನೇ ಆಗಿದ್ದರೆ ನನ್ನನ್ನು ಲಿಂಗ ತಾರತಮ್ಯ ಮಾಡಿದ್ದೇನೆ ಎಂದು ನ್ಯಾಯಾಲಯದ ಮೊರೆ ಹೋಗದಿರಲಿ ) ಹಿಂದೆಯೇ ದೊಢೂತಿ ಕಾಯದ ಮತ್ತೊಂದು. ಬಹುಷಃ ಒಳಗೆ, ಯಾರು ಮೊದಲು ಹೊರಹೋಗಿ ನನಗೆ ದರ್ಶನ ನೀಡಬೇಕೆಂಬ ಚರ್ಚೆಯಾಗಿರಬೇಕು. ಆಗ ಬಿಸಿರಕ್ತದ ಯುವನಾಯಕ ಮುಂದೆ ಬಂದು ಮಾರ್ಗದರ್ಶನ ನೀಡಿರಬೇಕು. ಇಷ್ಟು ಹೊತ್ತು ಸುಮ್ಮನೆ ಗಾಬರಿಯಾಗಿ, ತರಹೇವಾರಿ ಕಲ್ಪನೆಗಳನ್ನು ಮಾಡಿಕೊಳ್ಳತ್ತಾ ಮೈ ಚಂಡಿ ಮಾಡಿಕೊಂಡ ನನ್ನ ಮೂರ್ಖತನ ನೆನೆದು ತುಟಿಯಲ್ಲಿ ನಗು ಹುಟ್ಟಿತು. ಒಂದು ಕ್ಷಣಕ್ಕೆ ಮೂಷಿಕ ಮಹಿಮೆಯನ್ನು ಶ್ಲಾಘಿಸುವ ಮನಸ್ಸಾಯಿತು. ಆನಂತರ ಮತ್ತೆ ವಾಸ್ತವಕ್ಕೆ ಮರಳಿದೆ. ಕಂಡಿದ್ದು ಒಂದಲ್ಲ, ಎರಡಲ್ಲ ಮೂರು ಮೂರು ಇಲಿಗಳು. ಒಳಗೆ ಅವುಗಳ ವಂಶವಾಹಿನಿಯ ಸಂತಾನಗಳು ಅವೆಷ್ಟಿವೆಯೋ? ನನ್ನ ಪುಸ್ತಕ ಭಂಡಾರ ಉಳಿದಿರುವುದೆಂಬ ಆಶಾ ಭಾವನೆ ನಶಿಸಿಹೋಗತೊಡಗಿತು. ಶೀತಲ ವಾತಾವರಣದ ಘೋರ ಚಳಿಯನ್ನು ಲೆಕ್ಕಿಸದೆ ಉಟ್ಟ ಪಂಚೆಯನ್ನು ಎತ್ತಿ ಕಟ್ಟಿ ಪುಸ್ತಕಗಳ ರಕ್ಷಣೆಗೆ ನಿಂತು ಬಿಟ್ಟೆ.
           ಪುಣ್ಯಕ್ಕೆ ಪುಸ್ತಕಗಳಿಗೇನೂ ಹೆಚ್ಚಿನ ಹಾನಿಯಾಗಿರಲಿಲ್ಲ. ಕೆಳ ಸಾಲಿನಲ್ಲಿ ಇಟ್ಟಿದ್ದ ದಿನ ಪತ್ರಿಕೆಗಳನ್ನು ಮಾತ್ರ ಹರಿದು ತುಂಡು-ತುಂಡು ಮಾಡಿ ಒಂದು ದಿನದ ಉರವಲಿಗಾಗುವಷ್ಟು ಸರಕಾಗಿ ಮಾಡಿದ್ದವು. ಸಿಡಿಮಿಡಿಗೊಳ್ಳುತ್ತಲೆ ಚೂರುಗಳನ್ನು ಒಟ್ಟುಗೂಡಿಸತೊಡಗಿದೆ. ಪುಸ್ತಕಕ್ಕೇನೂ ಹಾನಿಯಾಗಿಲ್ಲವೆಂದುಕೊಂಡಿದ್ದರು, ಅನಂತಮೂರ್ತಿಗಳ ಯಾವುದೋ ಸಂಪ್ರಧಾಯವಾದಿತ್ವವನ್ನು ವಿರೋಧಿಸಿ ಬರೆದಿದ್ದ ಕಾದಂಬರಿಯನ್ನು, ಚೊಕ್ಕಮಾಡಿ ತಿಂದುಬಿಟ್ಟಿದ್ದವು. ಅಹಾ! ಬಹುಷಃ ಇಲಿಗಳು ಬಲಪಂಥೀಯ ಧೋರಣೆಯನ್ನು ತಳೆದಿರಬೇಕು. ಇಲಿಗಳ ವಾಸ್ತವ ಹೂಡಿರುವ ವಿಷಯ ಮೊದಲೇ ತಿಳಿದಿತ್ತಾದರೂ, ಪ್ರಾಣಿಹಿಂಸೆ ಮಾಡಬಾರೆದೆಂಬ ಕಾರಣಕ್ಕೆ ಇಲಿ ಬೋನನ್ನಿಟ್ಟಿರಲಿಲ್ಲ. ಅವುಗಳು ಸಿಂಪಥಿ ಹುಟ್ಟಿಸುವುದಕ್ಕಿಂಥ ಅಸಹ್ಯ ಹುಟ್ಟಿಸುತ್ತಿತ್ತು. ಅದೇ ಕಾರಣಕ್ಕೆ ಕೊಲ್ಲದೆ ಬಿಟ್ಟಿದ್ದು ಮಹಾಪರಾಧವಾಯಿತೇನೋ ಅನ್ನಿಸತೊಡಗಿತು. ಹರಹರ ಮಹಾದೇವ್! ಇನ್ಮುಂದೆ ಎಲ್ಲಾದರೂ ಇಲಿಗಳು ಕಂಡರೆ ಸಂತತಿಯನ್ನೆ ಧಮನ ಮಾಡಿ ಬಿಡಬೇಕು. ರಕ್ತದೋಕುಳಿಯಾಡುವಷ್ಟರ ಮಟ್ಟಿಗೆ ಆಕ್ರೋಷ ಉಕ್ಕಿತು. ಬಹುಷಃ ಜನಮೇಜಯ ಹಾವುಗಳ ಸಂತತಿ ನಿರ್ನಾಮ ಮಾಡುವ ಯೋಚನೆ ಮಾಡಿ, ಸರ್ಪಯಾಗ ಮಾಡಿದಾಗ ಅವನ ಚಿತ್ತದಲ್ಲೂ ಇಷ್ಟೇ ಕ್ರೋಧಾಗ್ನಿ ಮಡುಗಟ್ಟಿತ್ತಿರಬೇಕು. ಆದರೆ ಕಲಿಯುಗದಲ್ಲಿ ಸರ್ಪಯಾಗದಂತೆ ಮಹಾಯಜ್ಞ ಮಾಡಬಹುದೆ? ಉಹುಂ ವಾಸ್ತವಿಕವಾಗಿ ಯೋಚಿಸಿದರು ಇಲಿಗಳ ಸಂತತಿಯನ್ನು ಕೊನೆ ಪಕ್ಷ ನನ್ನ ಮನೆಯಲ್ಲಾದರೂ ಅಳಿಸಹಾಕದಿದ್ದರೆ.... ಬದಲಾಯಿಸಿ ಯಾವ ಹೆಸರಿಟ್ಟುಕೊಳ್ಳಲಿ ಅಂತ ತೋಚದ ಕಾರಣ ಭೀಷ್ಮ ಪ್ರತಿಜ್ಞೆ ಮಾಡಲು ಹೋಗಲಿಲ್ಲ? ನಡು ರಾತ್ರಿ 3 ಗಂಟೆಯ ತನಕ ಸ್ವಚ್ಚತಾ ಕಾರ್ಯ ಸಾಗಿತು. ಬಡಬಡಿಸುತ್ತಲೆ ನಿದ್ದೆಗೆ ಜಾರಿದೆ.
        ಆನಂತರ ಪ್ರತೀ ರಾತ್ರಿ ದೀಪವನ್ನು ಆರಿಸುವಂತಯೇ ಇರಲಿಲ್ಲ. ಬೆಳಕಿನ ಪ್ರಕಾಶವಿದ್ದರೂ ಇಲಿಗಳು ರಾಜಾರೋಷವಾಗಿ ತಮ್ಮದೆ ಸರ್ವಸಾಮ್ರಾಜ್ಯವೇನೋ ಎಂಬಂತೆ ಪಥಸಂಚಲನ ಮಾಡತೊಡಗಿದ್ದವು. ಏನು ಮಾಡಲಿ ಇವುಗಳನ್ನು? ಅಲ್ಪ ಬುದ್ದಿಯನ್ನು ಪೂರ್ತಿಯಾಗಿ ಬಳಸಿ ಶೀರ್ಷಾಸನ ಹಾಕಿ ಯೋಚಿಸಿದರು ಪರಿಹಾರೋಪಾಯ ಕಾಣುತ್ತಿಲ್ಲ. ಬೆಕ್ಕು ತಂದು ಸಾಕೋಣವೆಂದರೆ, ನಮ್ಮ ಮನೆಯ ವಾಸ್ತುವೇ ಸರಿಯಿಲ್ಲ. ಹಿಂದೆ ತಂದಿದ್ದ ಮೂರು ಬೆಕ್ಕಿನ ಮರಿಗಳ ಪಾಡು ಸತ್ಯನಾಶವಾಗಿತ್ತು. ಮತ್ತೆ-ಮತ್ತೆ ಬೋನಿಡುವ ಅಲೋಚನೆ ಬರುತ್ತಿದ್ದರೂ, ಎಷ್ಟೇ ಆದರೂ ತಿಳುವಳಿಕೆಯಿರದ ಜೀವವಲ್ಲವೆ. ಎಲ್ಲ ಅರಿತಿರುವ ಮಾನವ ಜೀವಿಯೇ ಇಷ್ಟೆಲ್ಲಾ ತಪ್ಪು ಮಾಡುತ್ತಾನೆಂದರೆ, ಇಲಿಗಳು ಹಾಗೆ ಮಾಡುವುದರಲ್ಲಿ ತೀರ ಮಹಾಪರಾಧವೇನಲ್ಲ. ನಾನೆ ಅವುಗಳು ನುಸುಳಿ ಬರದಂತೆ ತಡೆದು ಬಿಟ್ಟರೆ? ಮಾರನೆಯ ದಿನವೆ ಕಾರ್ಯೋನ್ಮುಖನಾದೆ. ಶುದ್ದ ಸೂಮಾರಿಯಾದ ನಾನು ಏಣಿ ಇಟ್ಟು ಹಂಚನ್ನೇರಿ, ಗೋಡೆಯ ಸಾಲಿನ ಅಷ್ಟೂ ಹೆಂಚುಗಳನ್ನು ತೆಗೆದು ಗೋಡೆಯ ತೂತುಗಳಿಗೆ ಸಿಮೆಂಟ್ ಕಲೆಸಿ ಮೆತ್ತಿದೆ. ಹಾಗೆ ಸಿಮೆಂಟ್ ತುಂಬುವಾಗ ಅಲ್ಲಿ ನಿರ್ಮಾಣವಾಗಿದ್ದ ಇಲಿಗಳ ಚೆಂದನೆಯ ಗೂಡು ತೆಗೆಯುವಾಗ ಮನಸಿನ ಮೂಲೆಯಲ್ಲಿ, ಅವುಗಳ ನೆಲೆಗೆ ಭಂಗ ತಂದು ಎಂಥಹ ಅಪರಾಧ ಮಾಡುತ್ತಿದ್ದೇನಲ್ಲ ಎನ್ನಿಸಿತು. ಎರಡೂ ಸಾಲಿನ ಹೆಂಚುಗಳ ಸಂದಿಗೊಂದಿಗೆ ಪಾನಿಡುವ ಹೊತ್ತಿಗೆ ಮೈ ಹಣ್ಣಾಗಿತ್ತು.
        ಎಲ್ಲಾ ಸರಿಯಾಯಿತು. ಇನ್ನು ಇಲಿಗಳು ನನ್ನ ಕೋಟೆಗೆ ಲಗ್ಗೆಯಿಡಲಾರವು ಎಂದುಕೊಂಡು ನೆಮ್ಮದಿಯಾಗಿ ಮಲಗಿದೆ. ಒಂದು ಕಡೆ ಇಲಿಗಳ ಆಶ್ರಯ ಹಾಳುಮಾಡಿದ ಭಾವನೆ ತುಯ್ದಾಡುತ್ತಿದ್ದರೂ, ಉಳಿದಂತೆ ಮನಸ್ಸು ಪ್ರಶಾಂತವಾಗಿತ್ತು. ನಡುರಾತ್ರಿ ಸಟ್ಟ ಸರಹೊತ್ತು ಮತ್ತೆ ಎಲ್ಲಿಂದಲೋ ಸರ-ಸರ, ಚರ-ಚರ, ಪರ-ಪರ ಸದ್ದು, ಇಲಿಗಳ ಕಾಟ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಈಗ ಮತ್ತೆ ಆರಂಭವಾಯಿತು. ಬಾರಿ ನಿಜಕ್ಕೂ ಕಳ್ಳ ಹೊಕ್ಕಿರಬಹುದಾ? ಅಥವಾ ದೆವ್ವ? ಎದ್ದು ಮತ್ತೆ ದೀಪ ಬೆಳಗಿಸಿದೆ ಮತ್ತದೆ ದ್ವಿಗುಣಗೊಳ್ಳುವ ಸದ್ದು,  ರ್ಯಾಕ್ ಬಾಗಿಲು ತೆರೆದರೆ ದಢಾರ್ ಶಭ್ದ, ಮತ್ತೆ ಮುಂದೆ ಬಂದು ನಿಂತುಕೊಂಡ ತರುಣ ನಾಯಕ, ಹಿಂದೆ ಕುಟುಂಬ ಅಥವಾ ಸೈನ್ಯ. ಬಾರಿ ಇಲಿಗಳ ಟಾರ್ಗೆಟ್ ಬೈರಪ್ಪ ಇರಬಹುದಾ?
                                                                                                                                -ವಿಪ್ರವಿಶ್ವತ್ (ವಿಶ್ವಾಸ್ ಭಾರದ್ವಾಜ್)
                                         ಸಾಗರ.