Wednesday 28 January 2015

ಬೋಸ್ ಟ್ರಿಬ್ಯೂಟ್

ಇಂದು ದೇಶದ ಚರಿತ್ರೆ ಕಂಡ ಅಪ್ರತಿಮ ದೇಶಭಕ್ತ ಯೋಧನ ಜನ್ಮದಿನ.. ಸ್ವರಾಜ್ಯ ಹಾಗೂ ಸ್ವಾತಂತ್ರ್ಯಕ್ಕಾಗಿ ಮಹಾಸಂಗ್ರಾಮ ಹುಟ್ಟುಹಾಕಿದ ಆ ಧೀಮಂತ ನಾಯಕ ಕೊನೆಗೂ ಅಸಂಖ್ಯ ಪ್ರಶ್ನೆಗಳನ್ನುಳಿಸಿ ಕಣ್ಮರೆಯಾದ.. ಆದರೆ ಅವರ ನೆನಪು ಎಂದಿಗೂ ಅಜರಾಮರ.. ಹೌದು! ಇಂದು ಭಾರತ ಸ್ವಾತಂತ್ರ್ಯ ಸಂಗ್ರಾಮದ ಕೋಲ್ಮಿಂಚು ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮಜಯಂತಿ.. ಈ ನಿಟ್ಟಿನಲ್ಲಿ ಒಂದ ಸಣ್ಣ ಟ್ರಿಬ್ಯೂಟ್ ಇದು..
ನೀವು ನನಗೆ ನಿಮ್ಮ ಬಿಸಿರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಅನ್ನುವ ಕೆಚ್ಚೆದೆಯ ಮಾತುಗಳನ್ನಾಡಿದ ನಿಜ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್.. ಅದು ಭಾರತದ ಸ್ವಾತಂತ್ರ್ಯ ಚಳುವಳಿ ಕಾವೇರುತ್ತಿದ್ದ ಪರ್ವ ಕಾಲವೂ ಹೌದು; ಇನ್ನೊಂದೆಡೆ ಬಲಕಳೆದುಕೊಂಡಿದ್ದ ಸತ್ಯಾಗ್ರಹದ ನಿರ್ವೀಯತೆಯಿಂದ ದೇಶದ ಪ್ರತಿಭಟನೆ ಮೂಲೆಗುಂಪಾಗುತ್ತಿದ್ದ ಕಾಲಘಟ್ಟವೂ ಹೌದು.. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡಿ ಅನ್ನುತ್ತಿದ್ದ ಗಾಂಧಿ ವಾದದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದು ಕಷ್ಟ ಎಂದು ಮನಗಂಡಿದ್ದ ವಿಶಿಷ್ಟ ಹೋರಾಟಗಾರ ಸುಭಾಷ್ ಬಾಬು.. ಆಗ ಮೊಳೆತಿದ್ದೇ ಆಜಾದ್ ಹಿಂದ್ ಅನ್ನುವ ದೇಶಭಕ್ತರ ಸೈನ್ಯದ ಪರಿಕಲ್ಪನೆ..
ಕೋಲ್ಕಾತ್ತದ ನಿವಾಸದಲ್ಲಿ ಬಂಧಿಯಾಗಿದ್ದ ಸುಭಾಷ್ ಚಂದ್ರ ಬೋಸ್ ಮನಸಿನಲ್ಲಿದ್ದ ಅದಮ್ಯ ತುಡಿತ ಅಂದು ಯಾರಿಗೂ ಅರ್ಥವಾಗಿರಲಿಲ್ಲ.. ಹೊರಗಿನ ಪ್ರಪಂಚ ಸುಭಾಷ್ ಬೋಸ್ ಸನ್ಯಾಸತ್ವ ಸ್ವೀಕರಿಸಿದ್ದಾರೆ ಅಂತಲೇ ಭಾವಿಸಿತ್ತು.. ಆದರೆ ಬೋಸ್ ಮನೋವೇಗದಲ್ಲಿ ಆಫ್ಘಾನಿಸ್ತಾನದಲ್ಲಿ ನಿಂತು ಕಾಬೂಲ್ನಲ್ಲಿದ್ದ ಜಪಾನ್ ಹಾಗೂ ರಷ್ಯಾ ಎಂಬೆಸಿಯನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದರು.. ಅಲ್ಲಿಂದ ಶುರುವಾಗಿದ್ದು ಭಾರತದ ಚರಿತ್ರೆಯ ಮಹಾನ್ ದಂಡನಾಯಕನ ಅಸಲೀ ವಿಮೂಚನಾ ಸಂಘರ್ಷ..
ಪಾದರಸ ಕುಡಿದವರಂತೆ ಓಡಾಡಿದ ಸುಭಾಷ್ ಬೋಸ್ ಮಲಯ, ಸಿಂಗಾಪುರ, ಜಪಾನ್, ಜರ್ಮನಿ ಸುತ್ತಾಡಿದರು.. ಎರಡನೇ ವಿಶ್ವಯುದ್ಧದಲ್ಲಿ ಇಂಗ್ಲೆಂಡ್ ಹಾಗೂ ಮಿತ್ರರಾಷ್ಟ್ರಗಳ ಪರ ಯುದ್ದಖೈದಿಗಳಾಗಿದ್ದ ಭಾರತೀಯ ಯೋಧರನ್ನು ಸಂಪರ್ಕಿಸಿದರು.. ಅದೇ ಸೈನಿಕರನ್ನು ಬಳಸಿಕೊಂಡು ಹೊಸ ಸೈನ್ಯ ಕಟ್ಟಿದರು.. ಹಾಗೆ ನಿರ್ಮಾಣವಾದ ಪರಿಪೂರ್ಣ ಸೇನಾ ತುಕುಡಿಯೇ ಅಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ.. ಜಪಾನ್ ಸಹಯೋಗದೊಂದಿಗೆ ಭಾರತದ ಮೇಲೆ ಯುದ್ಧ ಸಾರಿದ್ದ ಬೋಸ್ ಬರ್ಮಾ ದಾಟಿದ್ದರು, ಚಲೋ ದಿಲ್ಲಿ ಅಂದಿದ್ದರು.. ಆದರೆ ಆಗ ವಿಶ್ವಯುದ್ದ ಸೋತ ಜಪಾನ್ ಕೈಚೆಲ್ಲಿದ್ದರಿಂದ ಐಎನ್ಎಗೆ ಹಿನ್ನಡೆ ಉಂಟಾಗಿತ್ತು.. ಆದರೆ ಸುಭಾಷ್ ಪ್ರಯತ್ನ ಬಿಟ್ಟಿರಲಿಲ್ಲ..ನಿಜಾರ್ಥದಲ್ಲಿ ಬ್ರಿಟೀಶ್ ರಾಜ್ ಆಡಳಿತ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸುವ ಹಿಂದೆ ಇದ್ದಿದ್ದು ಸುಭಾಷ್ ಬಾಬುವಿನ ಭಯವೇ ವಿನಃ ಗಾಂಧಿಯ ಸತ್ಯಾಗ್ರಹವಲ್ಲ ಅನ್ನುವ ಮಾತುಗಳಿವೆ..
ಸುಭಾಷ್ ಚಂದ್ರ ಬೋಸ್ ಓರ್ವ ದಣಿವರಿಯದ ದಂಡನಾಯಕ.. ಅದಮ್ಯ ಉತ್ಸಾಹವಿದ್ದ ಅಪರೂಪದ ಧೀಮಂತ ನಾಯಕ.. ಸಂಘಟನಾ ಚತುರ, ಶಿಸ್ತಿನ ಸರಳ ಜೀವಿ, ದೇಶಕ್ಕಾಗಿ ಐಸಿಎಸ್ ಹುದ್ದೆ ತ್ಯಾಗ ಮಾಡಿದ್ದ ದ್ಯೇಯೋದ್ಧಾತ.. ಕೊನೆಗೆ ಸುಭಾಷ್ ಬೋಸ್ರ ಸಾವೂ ಸಹ ಬೇಧಿಸಲಾಗದ ರಹಸ್ಯವಾಗೇ ಉಳಿಯಿತು.. ಆದ್ರೆ ಸುಭಾಷ್ ಚಂದ್ರ ಬೋಸ್ ಅನ್ನುವ ಅಮರ ಸೇನಾನಿ ಅಸಂಖ್ಯ ಭಾರತೀಯರ ಮನಸಿನಲ್ಲಿ ಅಜರಾಮರರಾಗಿ ಉಳಿದರು.. ಜನವರಿ 23, 1897ರಂದು ಜನಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ರ 118ನೇ ಜನ್ಮಜಯಂತಿ ಇಂದು.. ಆ ಅಮರ ಚೇತನಕ್ಕೆ ಜನ್ಮಜಯಂತಿಯ ಶುಭಕಾಮನೆಗಳು..
-ವಿಶ್ವಾಸ್ ಭಾರದ್ವಾಜ್,

ಇದೊಂದು ಇಷ್ಟವಾಯ್ತು

"ಕಾಗದದ ಮೇಲಿನ ಕಾಮ, ಫುಲ್ ಸ್ಟಾಪ್ ಅಥವಾ ಇನ್ಯಾವುದೋ ಲಿಖಿತ ಒಪ್ಪಂದದಿಂದ ಎರಡು ರಾಷ್ಟ್ರಗಳ ನಡುವೆ, ಇಬ್ಬರು ನಾಯಕರ ಮಧ್ಯೆ ಬಾಂದವ್ಯ ಹುಟ್ಟು ಹಾಕಲು ಸಾಧ್ಯವಿಲ್ಲ..
ನಿಕಟ ಸಂಪರ್ಕ ಸಂಬಂಧಗಳು ಬಾಡಿ ಲಾಂಗ್ವೇಜ್, ಕೆಮಿಸ್ಟ್ರೀ ಹಾಗೂ ಅತ್ಯಂತ ನಿಕಟ ಒಡನಾಟದಿಂದ ಮಾತ್ರ ಸಾಧ್ಯವಿದೆ..
ನನ್ನ ಹಾಗೂ ಬರಾಕ್ ಮಧ್ಯೆ ಬೆಸೆದಿರುವುದು ಇಂತಹದ್ದೇ ನಿಕಟ ಸಂಬಂಧ.. ಇದರಿಂದ ಭಾರತ ಹಾಗೂ ಅಮೇರಿಕಾ ಅನ್ನುವ ಎರಡು ಧ್ರುವಗಳ ನಡುವೆ ಸಂಬಂಧ ಸೇತು ಬೆಸೆದಿದೆ.."
ಈ ಮಾತುಗಳನ್ನು ಹೇಳಿದ್ದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ.. ಇಂದಿನ ಸಂವಾಧದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮೋದಿ ಈ ಮಾತು ಹೇಳಿದ್ರು..
ಮಾನವೀಯ ಸಂಬಂಧಗಳಿಂದ ರಾಜತಾಂತ್ರಿಕ ನೀತಿಗಳನ್ನೂ ಉತ್ತಮಪಡಿಸಿಕೊಳ್ಳಬಹುದು ಅನ್ನುವ ದೂರದೃಷ್ಟಿ ಶಾಸ್ತ್ರೀ, ವಾಜಪೇಯಿ ಮುಂತಾದ ಈ ವರೆಗಿನ ದೇಶವನ್ನಾಳಿದ ಕೆಲವೇ ಪ್ರಧಾನಿಗಳಿಗಿತ್ತು..
ಮೋದಿ ಈ ಮಾತುಗಳನ್ನಾಡುವ ಮೂಲಕ ತಾವೇಕೆ ಅಸಂಖ್ಯ ಭಾರತೀಯರ ಹೃದಯ ಸಾಮ್ರಾಟ ಅನ್ನೋದನ್ನು ಮತ್ತೆ ಪ್ರೂವ್ ಮಾಡಿದ್ದಾರೆ..
ಹ್ಯಾಟ್ಸ್ ಆಫ್ ಹಾನರಬಲ್ ಪ್ರೈಮ್ ಮಿನಿಸ್ಟರ್ ಡಿಯರ್ ಮೋದಿಜಿ ..

ಬದುಕು-ಕವಿತೆ

ನೋವು ಕಂಬನಿ ಬದುಕು
ಕರವಸ್ತ್ರ ಕವಿತೆ
-ಕೆ.ಎಸ್.ಎನ್

ಗಣತಂತ್ರ ಸಂಭ್ರಮ

ಇಂದು ನಮ್ಮ ಭವ್ಯ ಭಾರತ ದೇಶಕ್ಕೆ 65ನೇ ಗಣತಂತ್ರ ದಿನದ ಸಂಭ್ರಮ.. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ದೈತ್ಯ ಬೆಳವಣಿಗೆ ಸಾಧಿಸಿರುವ ಭಾರತದ ಸಂವಿಧಾನದ ಶ್ರೇಷ್ಟತೆ ಹಾಗೂ ಆಡಳಿತದ ತರ್ಕಬದ್ದ ನೀತಿಗೆ ಅದರದ್ದೇ ಆದ ಘನತೆ ಗಾಂಭೀರ್ಯತೆಗಳಿವೆ.. ಭಾರತೀಯರ ಎರಡನೇ ದೊಡ್ಡ ರಾಷ್ಟ್ರೀಯ ಹಬ್ಬದ ಮಹತ್ವ ಸಾರುವ ಸುಕೃತದ ದಿನವಿಂದು..
***
ಭಾರತ ವಿಶ್ವ ಆಡಳಿತ ಹಾಗೂ ರಾಜಕೀಯದ ಮೂರನೆಯ ಬೃಹತ್ ಶಕ್ತಿ.. ಭಾರತದಲ್ಲಿ ಬಂಡವಾಳ ಶಾಹಿ ಹಾಗೂ ಸಮಾಜವಾದ ಎರಡಕ್ಕೂ ಅಸ್ಥಿತ್ವವಿದೆ.. ಇವೆರಡೂ ಮಿಳಿತಗೊಂಡ ಮಿಶ್ರ ಆರ್ಥಿಕ ವ್ಯವಸ್ಥೆ ಇಲ್ಲಿನ ಅಭಿವೃದ್ಧಿ ಪಥದ ಅಡಿಗಲ್ಲು.. ಹಾಗೆ ಒಂದು ಗಟ್ಟಿ ಆರ್ಥಿಕ ವ್ಯವಸ್ಥೆಗೆ ಸೌಲತ್ತು ಒದಗಿಸಿದ್ದು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ..ಅಂತದ್ದೊಂದು ಪ್ರಬಲ ಸಂವಿಧಾನಿಕ ಕಾಯ್ದೆ ಕಾನೂನು ಹಾಗೂ ಆಡಳಿತ ವ್ಯವಸ್ಥೆ ಜಾರಿಗೆ ಬಂದ ಮಹತ್ವದ ದಿನವೇ 26 ಜನವರಿಯ ಗಣರಾಜ್ಯೋತ್ಸವ..
***
ಭಾರತದ ಸಂವಿಧಾನ ಹಲವು ಸುತ್ತು ಪರಾಮರ್ಶೆಗೆ ಒಳಪಟ್ಟಿದೆ.. ಆಗಸ್ಟ್ ೧೫ ,೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಕರಡು ಸಮಿತಿ ನೇಮಕಾತಿ ಮಾಡಲಾಯಿತು.. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ,ನವೆಂಬರ್ ೪, ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು..ನವೆಂಬರ್೨೬, ೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬,೧೯೫೦ರಂದು ಭಾರತದ ಸಂವಿಧಾನದ ರೂಪುರೇಶೆ ಜಾರಿಗೆ ಬಂದಿತು..
***
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜನವರಿ ೨೬ರ ದಿನ ಅತ್ಯಂತ ಮಹತ್ವದ್ದು; ಯಾಕಂದ್ರೆ ೧೯೩೦ರ ಇದೇ ದಿನದಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯ ಹಾಕಿಕೊಂಡಿತ್ತು..ಲಾಹೋರ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು..ಇದೇ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು..
***
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ.. ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ,ಶಸ್ತ್ರಾಸ್ತ್ರ ಪ್ರದರ್ಶನ, ತಾಲೀಮು ಮುಂತಾದ ಪೆರೇಡ್ ನಡೆಯುತ್ತದೆ.. ಹಲವು ದೇಶ ವಿದೇಶಗಳ ಗಣ್ಯ ಅತಿಥಿಗಳು ಈ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳುತ್ತಾರೆ..
***
ರಾಷ್ಟ್ರಕ್ಕೆ ಭವ್ಯ ಬುನಾದಿ ಹಾಕಿಕೊಟ್ಟ ಈ ದಿನ ಸಮಸ್ತ ಭಾರತೀಯರ ಪಾಲಿನ ವಿಶೇಷ ದಿನವೂ ಹೌದು ನಮ್ಮತನವನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ಮಹತ್ವದ ದಿನವೂ ಹೌದು..
-ವಿಶ್ವಾಸ್ ಭಾರದ್ವಾಜ್
***
ಭಾರತ ವಿಶ್ವ ಆಡಳಿತ-ರಾಜಕೀಯದ 3ನೇ ಶಕ್ತಿ
ಬಂಡವಾಳ ಶಾಹಿ,ಸಮಾಜವಾದ 2ಕ್ಕೂ ಅಸ್ಥಿತ್ವವಿದೆ
ಗಟ್ಟಿ ಆರ್ಥಿಕ ವ್ಯವಸ್ಥೆಗೆ ಸೌಲತ್ತು ಒದಗಿಸಿದ್ದು ಸಂವಿಧಾನ
ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ಅತ್ಯಂತ ಶ್ರೇಷ್ಟ
ಪರಿಪೂರ್ಣ ಸಂವಿಧಾನ ಜಾರಿಗೆ ಬಂದ ಸುದಿನ ಇಂದು
26 ಜನವರಿ 1950ರಂದು ಜಾರಿಗೆ ತಂದ ಸಂವಿಧಾನ
ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ
ಅಂಬೇಡ್ಕರ್ ನೇತೃತ್ವದ ಸಮಿತಿ ರಚಿಸಿದ ಕರಡು
ಹಲವು ಸುತ್ತಿನ ಪರಿಶೀಲನೆ ತಿದ್ದುಪಡಿ ನಂತರ ಜಾರಿ
ನಮ್ಮತನವನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ಮಹತ್ವದ ದಿನ
ರಾಷ್ಟ್ರದ ಎರಡನೇ ದೊಡ್ಡ ರಾಷ್ಟ್ರೀಯ ಹಬ್ಬ ಗಣತಂತ್ರ ದಿನ
***

ಘಮಘಮಿಸಿದ ಮಲ್ಲಿಗೆಯ ೧೦೦ರ ದಳ

ಕನ್ನಡ ಸಾಹಿತ್ಯದ ಪ್ರೇಮ ಕಬ್ಬಿಗ ಕೆ.ಎಸ್ ನರಸಿಂಹ ಸ್ವಾಮಿ.. ಕನ್ನಡ ಸಾರಸ್ವತ ಲೋಕದಲ್ಲಿ ನರಸಿಂಹ ಸ್ವಾಮಿಗಳ ಪದ್ಯಗಳ ಲಾಲಿತ್ಯಕ್ಕೆ ರಾಜಗೌರವವಿದೆ.. ನರಸಿಂಹ ಸ್ವಾಮಿಗಳ ಕವಿತೆಗಳನ್ನು ಮೆಚ್ಚದ ಸಾಹಿತ್ಯ ಪ್ರೇಮಿಯೇ ಇಲ್ಲ.. ಇಂದು ಈ ಮಹಾಕವಿಯ ಮೈಸೂರು ಮಲ್ಲಿಗೆಯ 100ನೇ ದಳದ ಪರಿಮಳ ಘಮಘಮಿಸಿದೆ.. ಕನ್ನಡಕ್ಕೊಬ್ಬರೇ ಕೆಎಸ್ನ ಅವರ 100ನೇ ಜನ್ಮ ಶತಮಾನೋತ್ಸವ ಇಂದು..
***
ಕಿಕ್ಕೇರಿ ಸುಬ್ಬುರಾವ್ ನರಸಿಂಹಸ್ವಾಮಿ..ಕನ್ನಡ ಸಾರಸ್ವತ ಲೋಕದಲ್ಲಿ ವಿಭಿನ್ನ ಬಗೆಯ ಕವಿತೆಗಳನ್ನು ಬರೆದು ಖ್ಯಾತರಾದ ಪ್ರೇಮಕವಿ.. ತಮ್ಮ ಪದ್ಯಗಳ ರಮಣೀಯ ಭಾವಸಾಗರದಲ್ಲಿ ಭಾವುಕ ಸಾಹಿತ್ಯ ಪ್ರೇಮಿ ರಸಿಕರನ್ನು ತೇಲಿಸಿದ ಕಬ್ಬಿಗ.. ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ 1915ರಲ್ಲಿ ಜನಿಸಿದ ಕೆಎಸ್‌ನ ಕನ್ನಡ ಸಾರಸ್ವತ ಲೋಕವನ್ನು ಉತ್ತುಂಗಕ್ಕೆ ಒಯ್ದ ನವೋದಯ ಕಾವ್ಯ ಸುಕುಮಾರ..ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು;ತಮ್ಮ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಕಲಾವಿದನ ಕುಂಚದ ಲಾಲಿತ್ಯ ಒದಗಿಸಿದ್ದು ನರಸಿಂಹಸ್ವಾಮಿಗಳ ಪದ್ಯಗಳ ವಿಶೇಷತೆ..
***
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಕನ್ನಡದ ಯಾವ ಭಾವ ಜೀವಿಯೂ ಮರೆಯುವ ಹಾಗಿಲ್ಲ.. ಈ ಭಾವಗೀತೆಗಳ ಸಂಕಲನದ ಸಿಡಿಗಳು ಹಾಗೂ ಪುಸ್ತಕಗಳು ಹಲವಾರು ಸಾವಿರ ಪ್ರತಿಗಳು ಖರ್ಚಾಗಿವೆ.. ಮಲ್ಲಿಗೆಯ ಘಮ ಹಾಗೂ ಮಣ್ಣಿನ ಕಂಪು ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ..ಐರಾವತ, ದೀಪದ ಮಲ್ಲಿ, ಉಂಗುರ,ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ,ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನ ಸಂಕಲನಗಳು ನರಸಿಂಹ ಸ್ವಾಮಿಗಳ ಸಾಹಿತ್ಯ ಕೃಷಿಯ ಅಮರತ್ವಕ್ಕೆ ಸಾಕ್ಷಿ..
ನರಸಿಂಹ ಸ್ವಾಮಿಯವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡಿದ ಪ್ರಶಸ್ತಿ ಫಲಕಗಳ ಪಟ್ಟಿಯೂ ದೊಡ್ಡದಿದೆ.. ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕುಮಾರ್ ಆಶಾನ್, ಮಾಸ್ತಿ ಪ್ರಶಸ್ತಿ,ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ.. ಕೇಂದ್ರ ಸಾಹಿತ್ಯ ಅಕಾಡೆಮಿ ತನ್ನ ಪ್ರತಿಷ್ಠಿತ ಫೆಲೋಶಿಪ್ ಕೆಎಸ್‌ನ ಅವರಿಗೆ ೧೯೯೯ರಲ್ಲಿ ಕೊಟ್ಟು ಗೌರವಿಸಿದೆ.
***
ಜನಮಾನಸದಿಂದ ದೂರಾದರೂ ತಮ್ಮ ಕವಿತೆಗಳ ಮೂಲಕ ಪ್ರೇಮಸುಧೆ ಹರಿಸುತ್ತಾ ಚಿರಂಜೀವತ್ವ ಪಡೆದ ಆ ಮಲ್ಲಿಗೆಯ ಮನಸಿನ ಮಹಾಕವಿಗೆ 100ರ ಜನ್ಮಜಯಂತಿಯ ಶುಭಾಶಯಗಳು..
-ವಿಶ್ವಾಸ್ ಭಾರದ್ವಾಜ್
***
ಕನ್ನಡ ಸಾಹಿತ್ಯದ ಪ್ರೇಮ ಕಬ್ಬಿಗ ಕೆ.ಎಸ್ ನರಸಿಂಹಸ್ವಾಮಿ
ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಗೌರವ
ನರಸಿಂಹ ಸ್ವಾಮಿ ಪದ್ಯಗಳ ಲಾಲಿತ್ಯಕ್ಕೆ ರಾಜಗೌರವವಿದೆ
ಕೆಎಸ್ನ ಕವಿತೆಗಳ ಮೆಚ್ಚದ ಸಾಹಿತ್ಯ ಪ್ರೇಮಿಯೇ ಇಲ್ಲ
ಮಹಾಕವಿಯ ಮೈಸೂರು ಮಲ್ಲಿಗೆಯ100ನೇ ದಳದ ಪರಿಮಳ ಘಮ
ಕೆಎಸ್ನ ಅವರ 100ನೇ ಜನ್ಮಜಯಂತಿ ಇಂದು
ಸಾಹಿತ್ಯಲೋಕವ ಉತ್ತುಂಗಕ್ಕೇರಿಸಿದ ನವೋದಯ ಕಾವ್ಯ ಸುಕುಮಾರ
ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು ಕೆಎಸ್ನ
ಕವಿತೆಯ ಭಾಷೆ,ವಸ್ತು,ಲಯಗಳ ಮೇಲೆ ಕುಂಚದ ಲಾಲಿತ್ಯ
ಮೈಸೂರು ಮಲ್ಲಿಗೆ ಭಾವ ಜೀವಿಗಳ ಮೆಚ್ಚಿನ ಸಂಕಲನ
ಮಲ್ಲಿಗೆ ಘಮ-ಮಣ್ಣಿನ ಕಂಪು ವಾಸನೆ ಪರಿಚಯಿಸಿದ ಕವಿ
ಕವಿತೆಗಳ ಮೂಲಕ ಪ್ರೇಮಸುಧೆ ಹರಿಸಿದ ಕಬ್ಬಿಗ
ಮಲ್ಲಿಗೆಯ ಮನಸಿನ ಮಹಾಕವಿಗೆ ನಮನ

Saturday 10 January 2015

ಭಗವಂತ ಯಾರು?



ಭಗವಂತ ಯಾರು..?
ಅದೊಂದು ಧಾರ್ಮಿಕ ಸಭೆ; ಅಲ್ಲಿ ಭಗವಂತನ ಲೀಲಾ ವಿನೋದಗಳ ವರ್ಣನೆ ಮಾಡಲಾಗುತ್ತಿತ್ತು..
ಅಲ್ಲಿ ವೈದ್ಯ, ಕೃಷಿಕ, ದರ್ಜಿ, ಬಡಗಿ, ಕಮ್ಮಾರ, ಕಾರ್ಮಿಕ, ವಕೀಲ, ವಿದ್ಯಾರ್ಥಿ, ಕುಡುಕ, ವೃದ್ಧ, ಸಮಾಜವಾದಿ, ಕ್ರಾಂತಿಕಾರಿ, ಬುದ್ದಿಜೀವಿ, ಭಗ್ನಪ್ರೇಮಿ, ಪತ್ರಕರ್ತ, ವ್ಯಾಪಾರಿ, ನಾಟಕ ನಿರ್ದೇಶಕ, ಸಾಹಿತಿ, ಕಲಾವಿದ ಮುಂತಾದ ಹಲವು ಭಿನ್ನ ವೃತ್ತಿ ಹಾಗೂ ಪ್ರವೃತ್ತಿಯ ವ್ಯೆಕ್ತಿಗಳು ನೆರೆದಿದ್ದರು..
ಭಗವಂತ ನಿಜಕ್ಕೂ ಸೃಜನಶೀಲ ಕಲಾವಿದ ಎಲ್ಲರನ್ನೂ ಎಲ್ಲವನ್ನೂ ಮನೋಜ್ಞವಾಗಿ ಕೆತ್ತಿ ಬಣ್ಣ ಬುದ್ದಿ ಹಾಗೂ ಸ್ವಭಾವ ತುಂಬುವ ಆತನ ಕಲೆ ನಿಜಕ್ಕೂ ಅವರ್ಣನೀಯಅಂದ ಕುಂಚ ಹಿಡಿದ ಕಲಾವಿದ..
***
ಭಗವಂತ ಒಬ್ಬ ಅದ್ಭುತ ಕಲ್ಪನೆಗಳನ್ನು ಹೊಂದಿರುವ ಕಥೆಗಾರ.. ಪ್ರತಿಯೊಂದು ಜೀವಿಯ ಸೃಷ್ಟಿಯೂ ಆತನ ಅಸಂಖ್ಯ ಕಥೆಗಳ ಒಂದೊಂದು ಅಧ್ಯಾಯಗಳುಅಂದವನು ಬೊಕ್ಕ ತಲೆಯ ಸಾಹಿತಿ..
***
ಇಲ್ಲ ಇಲ್ಲ ನಮ್ಮ ಹಿಂದಿನ ತಲೆಮಾರುಗಳ ಹಿರಿಯರು ಹೇಳುತ್ತಿದ್ದ ಮಾತಿನಂತೆ ಭಗವಂತ ಸಕಲ ನಾಟಕಗಳಿಗೂ ಸೂತ್ರದಾರ.. ಅವನೊಬ್ಬ ಅದ್ವಿತೀಯ ನಿರ್ದೇಶಕ.. ನಾವೆಲ್ಲಾ ಆತ ಬರೆದ ನಾಟಕದ ಪಾತ್ರಗಳು.. ಆಡಿಸುವವನು ಅವನು ನಟಿಸುವವರು ನಾವುಈಗ ಮಾತನಾಡಿದವನು ಮೂಗಿಗೆ ಕನ್ನಡಕ ಇಳಿಸಿಕೊಂಡ ನಾಟಕ ನಿರ್ದೇಶಕ..
***
ಭಗವಂತ ಅತಿ ಬುದ್ದಿವಂತ ವ್ಯಾಪಾರಿ.. ಯಾರಿಗಾದರೂ ಒಳ್ಳೆಯದು ಮಾಡುತ್ತಾನೆ ಎಂದರೆ ಅದರ ಹಿಂದೆ ಇನ್ಯಾರಿಗೋ ಕಷ್ಟ ಕೊಟ್ಟೇ ಇರುತ್ತಾನೆ.. ಅವನ ದೃಷ್ಟಿಯಲ್ಲಿ ಲಾಭ ನಷ್ಟಗಳ ಲೆಕ್ಕ ಬಲು ಪಕ್ಕಾಅಂದು ಬಿಟ್ಟ ಮಾರವಾಡಿ ಟೋಪಿ ಕೊಡವಿ ತಲೆಗೆ ಸಿಕ್ಕಿಸಿಕೊಂಡ ವ್ಯಾಪಾರಿ..
***
ಭಗವಂತ ಅಂದರೆ ಒಂದು ಸಾಮೂಹಿಕ ಪ್ರಸಾರ ಮಾಧ್ಯಮವಿದ್ದಂತೆ.. ನಾವೆಲ್ಲರೂ ನಮ್ಮ ನಮ್ಮ ಸುಖದುಃಖಗಳ ಅಹವಾಲುಗಳ ವರದಿಯನ್ನು ಆತನಲ್ಲಿ ಸಲ್ಲಿಸುತ್ತೇವೆ.. ಆತ ಅದನ್ನು ಪರಿಶೀಲಿಸಿ ಮತ್ತೆಲ್ಲೋ ಅದನ್ನು ಪ್ರಸಾರಿಸುತ್ತಾನೆ.. ಆದರೆ ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ.. ಒಂದರ್ಥದಲ್ಲಿ ನಾವೆಲ್ಲರೂ ಭಗವಂತನೆಂಬ ವ್ಯವಸ್ಥೆಗೆ ಕೆಲಸ ಮಾಡುವ ವರದಿಗಾರರಿದ್ದಂತೆತನ್ನ ಅಭಿಪ್ರಾಯ ಹೊರಹಾಕಿದ ಪೆನ್ನಿನ ಕ್ಯಾಪ್ ಹಾಕಿ ಜುಬ್ಬಾದ ಜೇಬು ಸವರಿಕೊಂಡ ಪತ್ರಕರ್ತ..
***
ಭಗವಂತ ಅಂದರೆ ನಿಷ್ಣಾತ ವೈದ್ಯನಿದ್ದಂತೆ.. ಆತ ಎಲ್ಲಾ ರೋಗಗಳಿಗೂ ಮದ್ದು ನೀಡಬಲ್ಲ, ಎಲ್ಲಾ ಗಂಭೀರ ಹಾನಿ ತೊಂದರೆಗಳಿಗೂ ಶಸ್ತ್ರಕ್ರಿಯೆ ನಡೆಸಬಲ್ಲ.. ಸಾವಿನಂಚಿನ ಜೀವಕ್ಕೂ ಬದುಕು ನೀಡಬಲ್ಲ ಆತ ಪರಿಪೂರ್ಣ ವೈದ್ಯನೇ ಸರಿಎಂದು ಬಹುಪರಾಕ್ ಹೇಳಿದ ಸ್ಟೆತಸ್ಕೋಪ್ ಹಿಡಿದಿದ್ದ ವೈದ್ಯ..
***
ಭಗವಂತ ಒಬ್ಬ ಕಾಯಕಯೋಗಿ, ಜಗತ್ತೆಂಬ ವಿಶಾಲ ಕೃಷಿ ಭೂಮಿಯಲ್ಲಿ ಬೆಳೆದಿದ್ದು, ಮೊಳೆತಿದ್ದು, ಫಲಿಸಿದ್ದು ಎಲ್ಲವೂ ಭಗವಂತ ಬಿತ್ತಿದ ಬೀಜಗಳೇ.. ಆತನ ಕೃಷಿಗೆ ನೀರು ಗೊಬ್ಬರಗಳ ಅಗತ್ಯವಿಲ್ಲ; ನೊಗ ನೇಗಿಲು, ಜೋಡಿ ಎತ್ತುಗಳ ಅವಶ್ಯಕತೆಯೂ ಇಲ್ಲ, ನಾಟಿ, ಒಕ್ಕಲಾಟಗಳ ಮಾಡಬೇಕಾದ ಜರೂರತ್ತೂ ಇಲ್ಲಅನ್ನುತ್ತಾ ಹೆಗಲ ಮೇಲಿನ ಪಂಚೆ ಕೊಡವಿದ ರೈತ..
***
ಭಗವಂತ ನನ್ನ ಹಾಗೆಯೇ ಬಣ್ಣ ಬಣ್ಣದ ಬೇರೆ ಬೇರೆ ಬಗೆಯ ಬಟ್ಟೆ ಹೊಲೆವ ದರ್ಜಿ.. ಆತ ಹೊಲಿದ ಬಟ್ಟೆಗಳೇ ಭೂಮಿಯ ಮೇಲೆ ಈಗ ಜೀವಿಸುತ್ತಿರುವ ಮನುಷ್ಯರು.. ಇಲ್ಲಿ ವರ್ಣ, ಗಾತ್ರ, ಆಕಾರ, ಶೈಲಿ, ಎಲ್ಲವೂ ಅವನಿಟ್ಟಂತೆ ಇದೆ; ಹಾಗೆಯೇ ನಡೆದುಕೊಂಡು ಹೋಗುತ್ತಿದೆಅಂದು ಕತ್ತರಿ ಮಡಚಿದ ದರ್ಜಿ..
***
ಭಗವಂತ ನಮ್ಮ ಹಾಗೆಯೇ ಶ್ರಮಜೀವಿ.. ಕುಟ್ಟಿ, ತಟ್ಟಿ ಎಲ್ಲವಕ್ಕೂ ರೂಪ ಕೊಡುತ್ತಾನೆ; ಭೌತಿಕ ದೇಹಗಳು ಭಗವಂತನ ಬಡಿದು ಮಾಡಿದ ಕ್ರಿಯೆಯ ಮೂರ್ತರೂಪಅಂದರು ಉಳಿ, ಸುತ್ತಿಗೆ, ಚಾಣ ಮುಂತಾದ ಸಲಕರಣೆಗಳನ್ನು ಹಿಡಿದ ಬಡಗಿ, ಕಮ್ಮಾರ, ಕಾರ್ಮಿಕ..
***
ಭಗವಂತ ಒಬ್ಬ ಸುಯೋಗ್ಯ ಶಿಕ್ಷಕ; ಒಮ್ಮೊಮ್ಮೆ ಮೊದಲು ಪಾಠ ಕಲಿಸಿ ಬಳಿಕ ಪರೀಕ್ಷೆ ನೀಡುತ್ತಾನೆ ಕೆಲವೊಮ್ಮೆ ಮೊದಲು ಪರೀಕ್ಷೆ ನೀಡಿ ಬಳಿಕ ಪಾಠ ಹೇಳಿಕೊಡುತ್ತಾನೆಅಂದನು ಕಲಿಯುವ ಶ್ರದ್ಧೆಯಿದ್ದ ವಿದ್ಯಾರ್ಥಿ..
***
ಭಗವಂತ ಸಮಾಜದ ಓರೆ ಕೋರೆಗಳನ್ನು ಸೃಷ್ಟಿಸಲೂ ಬಲ್ಲ, ತಿದ್ದಲೂ ಬಲ್ಲ ನಾಶ ಪಡಿಸಲೂ ಬಲ್ಲ ಸಮಾಜವಾದಿಅಂದವನೊಬ್ಬ ಸಮಾಜವಾದಿ..
***
ಇಲ್ಲವೇ ಇಲ್ಲ ಭಗವಂತ ಕೇವಲ ಲಯಕಾರಕ.. ವಿನಾಶಕಾರಿ ಕದನ ನಡೆಸಿಯೇ ಶಾಂತಿ ಸಂಸ್ಥಾಪಿಸುವ ಕ್ರಾಂತಿಕಾರಿಅಂತ ಭಾಷಣ ಬಿಗಿದವನು ಕ್ರಾಂತಿಕಾರಿ..
***
ಅಯ್ಯೋ ಮೂರ್ಖರಾ! ಭಗವಂತ ಅಂದರೆ ಇವು ಯಾವುದೂ ಅಲ್ಲ.. ಇವೆಲ್ಲವೂ ಹೌದು.. ಅವನಿಗೆ ರೂಪವೂ ಇಲ್ಲ, ಪಾತ್ರವೂ ಇಲ್ಲ, ಅಥವಾ ಅವನಿಗೆ ಎಲ್ಲವೂ ಇದೆಅನ್ನುವ ಅರ್ಥವಾಗದ ಮಾತು ಆಡಿಬಿಟ್ಟ ಬುದ್ದಿಜೀವಿ..
***
ಭಗವಂತನಿಗೂ ನನ್ನಂತೆ ವಯಸ್ಸಾಗಿ ವೃದ್ಧಾಪ್ಯ ಅಡರಿದೆ.. ಸೃಷ್ಟಿ ಮಾಡಿ, ಸ್ಥಿತಿ ಸ್ಥಾಪಿಸಿ, ಲಯ ಸಾಧಿಸಿ ಭಗವಂತನೂ ಮುಪ್ಪನ್ನು ಅಪ್ಪಿದ್ದಾನೆಅಂದು ಬೊಚ್ಚು ಬಾಯಿ ಅಗಲಿಸಿ ನಕ್ಕ ವೃದ್ಧ..
***
ಭಗವಂತನಿಗೂ ಲವ್ ಫೈಲ್ಯೂರ್ ಆಗಿದೆ.. ಆತನ ಪ್ರೇಯಸಿ ಭೂಮಿಯಲ್ಲಿ ಎಲ್ಲೋ ಕಳೆದು ಹೋಗಿದ್ದಾಳೆ ; ಅದೇ ಹತಾಶೆಯಿಂದ ಭಗವಂತ ಪ್ರೀತಿ ಮಾಡುವ ಯಾವ ಪ್ರೇಮಿಗಳಿಗೂ ಉಪಕಾರ ಮಾಡುವುದೇ ಇಲ್ಲ..” ಭಗವಂತನ ಬಗ್ಗೆ ಗಡ್ಡ ಬಿಟ್ಟ ಭಗ್ನಪ್ರೇಮಿ ಹೇಳಿದ್ದು ಹತಾಶೆಯ ಮಾತೇ..
***
ಅಷ್ಟರಲ್ಲಿ ಕೊನೆಯ ಸಾಲಿನಿಂದ ಧ್ವನಿಯೊಂದು ಬಂತು. “ಥೂ ನಿಮ್ಮ ಯಾವನೂ ಸರಿ ಇಲ್ಲ ಯಾಕ್ರೋ ಸುಮ್ ಸುಮ್ನೇ ಭಗವಂತನ ಎಲ್ಲೆಲ್ಲೋ ಹುಡುಕುತ್ತೀರಾ, ನಿಮ್ಮ ಎದುರೇ ಕುಳಿತಿದ್ದೀನಿ ಬಂದು ಮುಚ್ಕಂಡು ಪೂಜೆ ಮಾಡ್ರಿ ಮುಂಡೇವಾ..” ನಿಲ್ಲಲಾರದೆ ಓಲಾಡುತ್ತಾ ನಿಂತ ಕುಡುಕ ಭಗವಂತನಂತೆ ಪೋಸು ಕುಟ್ಟು ನಿಂತಿದ್ದ..
-ವಿಶ್ವಾಸ್ ಭಾರದ್ವಾಜ್