Tuesday 22 July 2014

ಕರ್ಮ ಓದಿದ್ದೀರಾ?





ಬಹಳ ಮಂದಿ ಹೇಳಿದ್ದರು  " ಸ್ವತಃ ಬೈರಪ್ಪನವರೇ ಓದಿ ಮೆಚ್ಚಿದ್ದಾರಂತೆ, ಒಂದ್ ಸಲ ಕರ್ಮ ಓದು" ಅಂತ..
ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ..ಮೊನ್ನೆ ಬಿಬಿಸಿಯಲ್ಲಿ ವಾಸವಿಗೆ ಹೇಳಿದೆ ಕರ್ಮ ಕೊಳ್ಳೋಕೆ..ಅವಳು ಖರೀದಿಸಿದ್ರೆ ಅದು ನಾನು ಖರೀದಿಸಿದ ಹಾಗೆಯೆ..
ತಕ್ಷಣ ಓದಲು ಕುಳಿತೆ ಎರಡೇ ದಿನಕ್ಕೆ ಮುಗಿದು ಹೋಯ್ತು..ಪುಸ್ತಕದ ಹಾಳೆಗಳು ಮುಗಿದಿವೆ ಆದ್ರೆ ಹ್ಯಾಂಗ್ ಓವರ್..? ಪ್ರಾಯಶಃ ಅದು ಸದ್ಯಕ್ಕೆ ಮುಗಿಯುವಂತದ್ದಲ್ಲ..
ನಾನಾಗ ಪ್ರಥಮ ವರ್ಷದ ಪದವಿ ಓದ್ತಾ ಇದ್ದೆ..ಸಾವಿನ ನಂತರದ 15 ದಿನಗಳ ಕಾಲ ಆತ್ಮ ಇಲ್ಲೇ ಇರುತ್ತೆ ಅನ್ನುವ ಆಧಾರದ ಮೇಲೆ "ಆತ್ಮ ಮುಕ್ತ" ಅಂತ ಸಣ್ಣ ಕಥೆಯೊಂದನ್ನು ಬರೆದಿದ್ದೆ..ಅದು ಶಿವಮೊಗ್ಗದ ಸೃಷ್ಟಿ ರಾಜ್ಟೈಮ್ಸ್ನಲ್ಲಿ ಪ್ರಕಟವಾಗಿತ್ತು..
ಕರ್ಮ ಓದಿದ ಮೇಲೆ ಮೊದಲು ಕಾಡಿದ ಭಾವವೇ ಅದು..ಇಂಥ ಪ್ರಯತ್ನ ನಾನೇಕೆ ಮಾಡ್ಲಿಲ್ಲ..? ಸಬ್ಜೆಕ್ಟ್ ಬಹಳ ಕಾಲದಿಂದ ನನ್ನ ತಿವೀತಾ ಇತ್ತು..ನಿಜ ಈಗ ಪಶ್ಚಾತ್ತಾಪ ಆಗ್ತಿದೆ..(ಕರಣಂ ಪವನ್ ಪ್ರಸಾದ್ಬಗ್ಗೆ ಒಂಚೂರು ಜಲಸ್ ಕೂಡಾ) ಆದ್ರೆ ಒಂದು ವೇಳೆ ನಾನೇ ಪ್ರಯತ್ನ ಮಾಡಿದ್ರೂ ಕರಣಂ ಪವನ್ ಪ್ರಸಾದ್ ಶ್ರದ್ಧೆ ನಂಗೆ ಇರ್ತಾ ಇತ್ತೋ ಇಲ್ವೋ..? ಅವರಷ್ಟು ಹೋಂ ವರ್ಕ್ಖಂಡಿತಾ ನಾನು ಮಾಡ್ತಾ ಇರ್ಲಿಲ್ಲ..
ಕರ್ಮ ಅದ್ಭುತವಾಗಿದೆ..ಶ್ರದ್ಧೇ ಹಾಗೂ ನಂಬಿಕೆಗಳ ನಡುವಿನ ಸೂಕ್ಷ್ಮ ಸಂವೇಧನೆಯನ್ನು, ತಲ್ಲಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ..ನಮ್ಮೆಲ್ಲರಲ್ಲೂ ಒಬ್ಬ ಸುರೇಂದ್ರ ಖಂಡಿತಾ ಇದ್ದಾನೆ..ಯಾಂಕಳ್ಳಿ ವೆಂಕಟೇಶ್ ಭಟ್ಟರ ಶ್ರದ್ಧೆಯ ಕುರಿತಾದ ಸಮರ್ಥನೆ ಓದಿನ ಲಯಕ್ಕೆ ಇಂಬು ಕೊಡುತ್ತದೆ..ಕರ್ಮ ಓದಿಸಿಕೊಂಡು ಹೋಗುತ್ತೆ.
ಕರ್ಮ ಕಾದಂಬರಿಯೊಳಗೇ ಪುರುಷೋತ್ತಮ ಪ್ರದರ್ಶಿಸುವ "ಎಲೈ ಗರುಡ" ನಾಟಕ ಕರ್ಮದ ಸಾರಾಂಶವನ್ನು ಕೆಲವೇ ಅಕ್ಷರಗಳಲ್ಲಿ ಸರಳೀಕರಿಸುತ್ತೆ..
ಕುಮಾರ್ ಮಾವ ನಿಜಕ್ಕೂ ಇಂಟರೆಸ್ಟಿಂಗ್ ಕ್ಯಾರೆಕ್ಟರ್..ವಾಣಿಯ ಸ್ನಿಗ್ದ ಸೌಂದರ್ಯ ಚೆನ್ನಾಗಿ ವರ್ಣನೆಯಾಗಿದೆ..ಜೊತೆಗೆ ಸುರೇಂದ್ರನ ತೊಳಲಾಟ ಕೂಡಾ..
ಸೈಲೆಂಟ್ ಕ್ಯಾರೆಕ್ಟರ್ ಸುಬ್ಬು ಮಾವ ಹಾಗೂ ಸುರೇಶರ ಬಗ್ಗೆ ಗೌರವ ಮೂಡುತ್ತೆ..ಮಲೆನಾಡಿನ ಮಂದಿಗೆ ಕರ್ಮ ಸ್ವಂತಿಕೆಯ ಭಾವ ಮೂಡಿಸುತ್ತೆ..
ಜೆನೆಟಿಕ್ ಸೈನ್ಸ್ ಸ್ವಭಾವ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಹೇಗೆ ಮುಖ್ಯ ಅನ್ನೋದು ನರಹರಿ ಹಾಗೂ ಸುರೇಂದ್ರನ ಸ್ವಭಾವಗಳಿಂದ ಸಾಬೀತಾಗುತ್ತೆ..
ಶಾರದಮ್ಮನವರ ಕೌಟುಂಬಿಕ ಅನ್ಯೂನ್ಯತೆ..ಶ್ರೀಕಂಠ ಜೋಯಿಸರ ಗಂಭೀರ ಅಹಂಕಾರ..ನರಹರಿಯ ಮುಗ್ದತೆ..ನೇಹಾ ಜೀವಂತಿಯ ದಾರ್ಷ್ಟತೆಗಳು ಕರ್ಮದ ಪಾತ್ರ ವರ್ಗವನ್ನು ಅತ್ಯಂತ ಶ್ರೀಮಂತಗೊಳಿಸಿವೆ..
ಆದ್ರೆ ಬೈರಪ್ಪನವರಂತೆ ಕರಣಂ ಪ್ರಸಾದ್ ಸಹ ದ್ವಂದ್ವ ಅಂತ್ಯ ಸಿದ್ಧಾಂತಕ್ಕೆ ಜೋತು ಬಿದ್ರೇನೋ ಅನ್ನಿಸುತ್ತೆ..ಕನ್ಕ್ಲೂಷನ್ ಓದುಗರೇ ಕೊಡಲಿ ಅನ್ನುವ ಬೈರಪ್ಪನವರ ದಾಟಿಯೇ ಪ್ರಸಾದ್ಅನುಸರಿಸಿದ್ದಾರೆ..
ಅದರ ಬದಲು ನೇಹಾ ಜೀವಂತಿಗೂ ಹಿಂದೂ ಸಂಸ್ಕ್ರತಿಯ ಅಪರ ಕರ್ಮ ಅಥವಾ ಶ್ರಾದ್ಧದ ಬಗೆಗಿನ ನಿಲುವು ಬದಲಾಯಿಸಿದ್ದರೆ ಒಂದಷ್ಟು ರೋಚಕತೆ ಇರ್ತಿತ್ತೇನೋ ಅನ್ನೋದು ನನ್ನ ಅಭಿಪ್ರಾಯ..
ಉಳಿದಂತೆ ಕರ್ಮ ಈಸ್ ವಂಡರ್ಫುಲ್..
ಓದದೇ ಇದ್ರೆ ಖಂಡಿತಾ ಓದಿ..
-ವಿಶ್ವಾಸ್ ಭಾರದ್ವಾಜ್


Wednesday 16 July 2014

ಕಣ್ಣೀರು ಎಫೆಕ್ಟ್



ಅವಳ ಕಣ್ಣೀರಿಗೆ ಕರಗಿದ ಮೂರ್ಖ ಬಣ್ಣ

ಮುಖದ ಕಾಂತಿಯನ್ನೇ ಕುಂದಿಸಿತು...

ಕಂಬನಿ ಧಾರೆಯ ಕರೆ ಕೆನ್ನೆಗೆ ಮೆತ್ತಿ

ಸ್ನೋ-ಪೌಡರ್​ಗಳ ಛಾಯೆ ಅಳಿಸಿತು...


Sunday 13 July 2014

ಅಡಿಗ ಟ್ರಿಬ್ಯೂಟ್ 1

ಚಂಡಿ ಚಾಮುಂಡಿ ಪೇಳ್ ಬೇಕಾದುದೇನು
ಗಂಡುಸಾದರೆ ನನ್ನ ಬಲಿಕೊಡುವೆಯೇನು
-ಮೊಗೇರಿ ಗೋಪಾಲಕೃಷ್ಣ ಅಡಿಗ(ಭೂಮಿಗೀತ)

Saturday 12 July 2014

ಚಿಕ್ಕಪ್ಪ ಅನ್ನುವ ಕಾದಂಬರಿಯ ಕುರಿತು

ಶಿವಮೊಗ್ಗದಲ್ಲಿ 'ಹಿಂದವಿ ಸ್ವರಾಜ್ಯ' ವಾರಪತ್ರಿಕೆ ಬಿಡುಗಡೆ ಮಾಡುವ ಮುನ್ನ ಉದ್ಘಾಟನೆಗೆ ಜಯಂತ್ ಕಾಯ್ಕಿಣಿ ಬರುತ್ತಾರೆನೋ ಎಂದು ಕೇಳಲು ಧೂರವಾಣಿ ಕರೆ ಮಾಡಿದ್ದೆ.
ಪತ್ರಿಕೆಯ ಮೂಲ ಆಶಯಗಳನ್ನು ಹೇಳಿದ ನಂತರ ಕಾಯ್ಕಿಣಿ, ಒಂದು ಮಾತನ್ನು ಹೇಳಿದ್ದರು, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಧರ್ಮೀಯ ನೆಲೆಗಟ್ಟಿನಲ್ಲಿ ಅತ್ಯಂತ ವಿದ್ವಂಸಕ ಹಾಗು ಆತಂಕಕಾರಿ ಬೆಳವಣಿಗೆಗಳಾಗುತ್ತಿವೆ. ಕೊಂಚ ಈ ವಿಚಾರದಲ್ಲಿ ಮಾಧ್ಯಮಗಳು ಸೂಕ್ಷ್ಮವಾಗಿ ವರ್ತಿಸುವ ಅಗತ್ಯವಿದೆ ಎಂದಿದ್ದರು.
ಆಗ ಅದರ ತೀವ್ರತೆ ಹೇಗಿದ್ದಿರಬಹುದೆನ್ನುವ ಕಲ್ಪನೆ ಇರಲಿಲ್ಲ.
ಮೊನ್ನೆ ಜೋಗಿಯವರ 'ಚಿಕ್ಕಪ್ಪ' ಪುಸ್ತಕ ಓದಿದೆ.
ಒಬ್ಬ ಓದುಗನಾಗಿ ಉಪ್ಪಿನಂಗಡಿಯಲ್ಲಿ ಜರುಗಿದ ಪ್ರತಿ ಘಟನೆಗಳಿಗೂ ನಾನೇ ಮೂಖ ಸಾಕ್ಷಿಯಾಗಿದ್ದೆ ಎನ್ನುವಂತೆ ಭಾಸವಾಯಿತು. ಉಪ್ಪಿನಂಗಡಿಯ ಮೊದಲಿದ್ದ ವಾತಾವರಣ, ಜನಗಳ ಮನ ಸ್ಥಿತಿ,
ಬದಲಾಗುವ ಋತುಮಾನ ಅಂತೆಯೇ ಬದಲಾಗುವ ವಿದ್ಯಮಾನಗಳು
ಚಿಕ್ಕಪ್ಪ ಎನ್ನುವ ಅನಾಮಿಕನ ಆಗಮನ
ಚಿಕ್ಕಪ್ಪನ ನಿಗೂಡ ಸಂಚಾರದಿಂದ ಮೊದಮೊದಲು ಊರವರಲ್ಲಿ ಸಹಜವಾಗಿ ಮೂಡುವ ಕುತೂಹಲ ಮತ್ತು ಆತಂಕ
ಕಾಲಾಂತರದಲ್ಲಿ ಚಿಕ್ಕಪ್ಪ ಉಪ್ಪಿನಂಗಡಿಯಲ್ಲಿ ತ್ರಿವಿಕ್ರಮನಂತೆ ಬೆಳೆದು ನಿಲ್ಲುವ ಪರಿ
ಹಂತ ಹಂತವಾಗಿ ಚಿಕ್ಕಪ್ಪ ಎನ್ನುವ ಅನಾಮಧೇಯ ವ್ಯಕ್ತಿ ಉಪ್ಪಿನಂಗಡಿಯ ಸರ್ವವನ್ನು ಆವರಿಸಿಕೊಳ್ಳುವ ರೀತಿ
ಉಪ್ಪಿನಂಗಡಿ ಎನ್ನುವ ಸಾಂಸ್ಕೃತಿಕ ಸುಂದರಿ ಚಿಕ್ಕಪ್ಪನ ಖದರಿನ ಮುಂದೆ, ಜುಟ್ಟು, ಜನಿವಾರ ಕೊಟ್ಟು ಮಂಡಿಯೂರಿ ಶರಣು ಹೊಡೆಯುವ ಆಶ್ಚರ್ಯಕರ ಬದಲಾವಣೆ.
ಅಸಲಿಗೆ ಚಿಕ್ಕಪ್ಪ ಯಾರು? ನಾಯಕನಾ? ಖಳನಾಯಕನಾ? ಧರ್ಮ ರಕ್ಷಕನಾ? ಸಾಂಸ್ಕೃತಿಕ ರಾಯಭಾರಿಯಾ? ಸರ್ವಾಧಿಕಾರಿಯಾ? ಅವತಾರಪುರುಷನಾ?
ಇಡಿ ಪುಸ್ತಕದಲ್ಲಿ ಚಿಕ್ಕಪ್ಪನ ಸೊಗಸಾದ ಪರಾಕುಗಳಿವೆ
ಚಿಕ್ಕಪ್ಪನೆಂಬ ದ್ವಂದ್ವವಿದೆ, ಅರ್ಥವೇ ಆಗದ ಸಂದಿಗ್ದವಿದೆ, ಅರ್ಥ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ, ಕೊನೆಗೆ ಒಂದು ಸಲ ಚಿಕ್ಕಪ್ಪನ ಅದ್ಭುತ ವ್ಯೆಕ್ತಿತ್ವಕ್ಕೆ ಸಲಾಂ ಹೊಡೆಯಲೇಬೇಕೆನಿಸುತ್ತದೆ.
ಅಂತ್ಯದಲ್ಲಿ ಚಿಕ್ಕಪ್ಪನಂತಹ ಚಿಕ್ಕಪ್ಪ ಸಹ ದೈನ್ಯದ ಸ್ಥಿತಿಗೆ ತಲುಪುತ್ತಾನೆ. ಅದು ಹೇಗೆ? ನೀವು ಪುಸ್ತಕ ಓದಲೇಬೇಕು!
ಅಂದ ಹಾಗೆ ನಿಮಗೆ ಸೀತಾರಾಮ ಯರ್ಮುಂಜ, ರಜಾಕ್ ಡಾಕ್ಟರ್ ಇಷ್ಟ ಆಗಬಹುದು. ಪತ್ರಕರ್ತ ರಾಮಕೃಷ್ಣ ಕಾಮತ್ ಕೊಂಚ ಇಂಟೆರೆಸ್ಟಿಂಗ್ ಎನ್ನಿಸಬಹುದು.
'ಚಿಕ್ಕಪ್ಪ' ೨ ದಿನದಲ್ಲೇ ಮುಗಿದು ಹೋಯಿತು. ದುಡ್ಡು ಕೊಟ್ಟು ಕೊಂಡು ಸ್ವಲ್ಪ ದಿನ ಟೈಮ್ ಪಾಸ್ ಮಾಡಬಹುದು ಎಂದೆನಿಸಿದ್ದ ನನಗೆ ನಿರಾಸೆ ಆಯಿತು. ಜೋಗಿಗೆ ಅಭಿಮಾನದಿಂದ ಬಯ್ದುಕೊಂಡೆ.
-ವಿಶ್ವಾಸ್ ಭಾರದ್ವಾಜ್

(ಬಹಳ ಕಾಲದ ಹಿಂದೆ ಫೇಸ್​​ಬುಕ್​​ನಲ್ಲಿ ಬರೆದ ಜೋಗಿ ಯವರ ಕಾದಂಬರಿ ಚಿಕ್ಕಪ್ಪ ರೀವ್ಯೂ)

ಸ್ಮಾರಕ ಕಟ್ಟಲೇ?


ನೆನಪಿನ ಗಣಿ ಗುಂಡಿಯೊಳಗೆ ಮಣ್ಣು ತುಂಬಿ
ಮುಚ್ಚಿಬಿಡುವ ಮನಸಾಗಿದೆ;
ವ್ಯಥಾ ಕಾಡುವ ಕನವರಿಕೆಗಳೇಕೆ..!
ಮುಚ್ಚಿದ ಕೊಳವೇ ಬಾವಿಗೆ ಕಲ್ಲಿನ ಚಪ್ಪಡಿಯನ್ನೆಳೆಯಲೇ
ಸಿಮೆಂಟಿನ ಗಟ್ಟಿ ಗಾರೆ ಮಾಡಲೆ...?


ಮೇಲೊಂದು ಸ್ಮಾರಕವನ್ನು ಕಟ್ಟಲೇ..?
-ವಿಶ್ವಾಸ್ ಭಾರದ್ವಾಜ್

ನೀವು ಯಾವ ಕ್ಯಾಟಗರಿ?


ಇದೊಂದು ದರಿದ್ರ ಭಾನುವಾರ, ಯಾಕಾದ್ರೂ ಬರುತ್ತೋ ಅನ್ನೋ ಹತಾಶೆಯಲ್ಲಿ ಟೀ ಅಂಗಡಿಯ ಅನ್ವೇಷಣೆಗೆ ಹೊರಟಿದ್ದೆ..ಜೊತೆಗೆ ಪತ್ರಕರ್ತ ಮಿತ್ರ ಸಾಗರ್ ಕನ್ನೇಮನೆ ಇದ್ದ..
ಭಾನುವಾರ ಬಂತೆಂದರೆ, ಕಸ್ತೂರಿ ಬಾ ರೋಡಿನ ನಮ್ಮ ಆಫೀಸ್ ಮುಂಭಾಗದ ಅಂಗಡಿಗಳಿಂದ ಎಂ.ಜಿ ರೋಡ್ ತನಕ ಯಾವ ಗೂಡಂಗಡಿಗಳೂ ಬಾಗಿಲು ತೆಗೆದಿರೋದಿಲ್ಲ..
ಒಂದು ಕಪ್ ಟೀ ಗೆ ಹುಡುಕುತ್ತಾ ಹೋದರೆ, ಅದು ಪ್ರಪಂಚ ಪರ್ಯಟನೆ ಮಾಡಿದಂತಾಗುತ್ತೆ..
ಅಂತಹದ್ದೆ ಪರ್ಯಟನೆ ಮಾಡ್ತಾ, ಎಂಪರರ್ ಹೋಟೆಲ್ ಬಳಿಯ ಶೆಷ ಮಹಲ್ ಹತ್ತಿರ ಹೋದೆವು..ಪುಣ್ಯಕ್ಕೆ ಅಲ್ಲೊಂದು ಚಾಟ್ ಶಾಪ್ನಲ್ಲಿ ಟೀ ಸಿಕ್ಕಿತು..
---------------------------
ಟೀ ಕುಡಿಯುತ್ತಾ ಪಕ್ಕದ ಪುಸ್ತಕದ ಅಂಗಡಿಯ ಕಡೆಗೆ ಕಣ್ಣು ಹಾಯಿಸಿದೆ.. ಸಾಗರ್ಗೆ ಹೇಳಿದೆ, 24 ಗಂಟೆ ಎಡಬಿಡದೆ ಓದಿದ್ರೂ ಇಲ್ಲಿರುವ ಎಲ್ಲಾ ಪುಸ್ತಕಗಳನ್ನು ಮುಗಿಸಲು ನಮ್ಮ ಜೀವಿತ ಸಾಲೋದಿಲ್ಲ ಅಂದೆ..
ಹೌದು ! ಜನ ಯಾಕಷ್ಟು ಬುಕ್ಸ್ ಬರೀತಾರೆ..? ಯಾಕೆ ಅಷ್ಟು ಬುಕ್ಸ್ ಓದ್ತಾರೆ ಅಂದ ಸಾಗರ್..
ಥಟ್ಟನೆ ಮನಸಿನಲ್ಲೇ ಚಿಂತನೆಯೊಂದು ಹುಟ್ಟಿಕೊಳ್ತು..
(ಮೊತ್ತ ಮೊದಲಿಗೆ ನನ್ನ ಗಂಭೀರ ತರ್ಕ ಅನ್ನೋ ಮಹಾ ಕೊರೆತಕ್ಕೆ ಬಲಿಪಶುವಾಗಿದ್ದು ಸಾಗರ್)
----------------------------
ಈ ಪುಸ್ತಕ ಓದುಗರಲ್ಲಿ ಮುಖ್ಯವಾಗಿ ಮೂರು ಕ್ಯಾಟಗರಿಗಳಿವೆ..
* ಮೊದಲನೆಯದ್ದು ಕೇವಲ ಪುಸ್ತಕಗಳನ್ನು ಓದುವ ವರ್ಗ…ಇವರು ಪುಸ್ತಕಗಳನ್ನು ಬರೀ ಓದ್ತಾರೆ ಅಷ್ಟೆ..ತುಂಬಾ ಜನರಿಗೆ ಯಾಕೆ ಓದ್ತಾ ಇದ್ದೀವಿ ಅಂತಾನೂ ಗೊತ್ತಿರಲ್ಲ..ಓದಿದ್ದ ಪುಸ್ತಕಗಳು ಅರ್ಥಾನೂ

ಆಗಿರಲ್ಲ..
* ಎರಡನೆಯ ಕ್ಯಾಟಗರಿಯ ಓದುಗರು ಪುಸ್ತಕಗಳನ್ನು ಓದ್ತಾರೆ ಜೊತೆಗೆ ಜೀರ್ಣಿಸಿಕೊಳ್ತಾರೆ ಕೂಡಾ..ಆ ಪುಸ್ತಕದ ತಾತ್ಪರ್ಯ ಅವರಿಗೆ ಭಾಗಶಃ ಅರ್ಥವಾಗಿರುತ್ತೆ..ಅದರ ಸಾರಾಂಶ ಹಾಗೂ ಸಂದೇಶಗಳು ಅವರ ಇಂಟಲೆಕ್ಚುಯಲ್ಗೆ ಹೋಗಿ ತಲುಪಿರುತ್ತೆ..
* ಇನ್ನು ಮೂರನೆಯ ಕ್ಯಾಟಗರಿ ಒಂದಿದೆ..ನನ್ನ ಪ್ರಕಾರ ಅದು ನಿಜಕ್ಕೂ ಮೇಧಾವಿ ವರ್ಗ..ಅವರು ಪುಸ್ತಕಗಳನ್ನು ಓದ್ತಾರೆ..ಅರ್ಥ ಮಾಡಿಕೊಳ್ತಾರೆ..ಅರಗಿಸಿಕೊಳ್ತಾರೆ..ಕೊನೆಗೆ ಅದನ್ನು ಅಭಿವ್ಯಕ್ತಪಡಿಸ್ತಾರೆ..ಕೇವಲ ಓದಿದ್ರೆ ಮಾತ್ರ ಜ್ಞಾನ ಭಂಡಾರ ವೃದ್ಧಿಯಾಗೋದಿಲ್ಲ..ಓದಿದ್ದನ್ನು ಸಮರ್ಪಕವಾಗಿ ಜೀರ್ಣಿಸಿಕೊಂಡು, ಸೂಕ್ತವಾಗಿ ಅಭಿವ್ಯೆಕ್ತಪಡಿಸಬೇಕು..
YES! EXACTLY THAT IS A REAL INTELLECTUAL STATE
ಕನ್ನಡದ ಸಾಹಿತ್ಯಕ್ಕೆ ಬೇಕಾಗಿರೋದೆ ಈ ಮೂರನೆಯ ವರ್ಗ..ಆದ್ರೆ ದುರದೃಷ್ಟವಶಾತ್ ಬಹುತೇಕ ಜನರಿಗೆ ಈಗ ಪುಸ್ತಕಗಳೇ ಬೇಡವಾಗಿವೆ..ಇನ್ನು ಓದೋದು ಎಲ್ಲಿ..? ಓದಿದ್ದನ್ನು ಅರಗಿಸಿಕೊಳ್ಳೋದೆಲ್ಲಿ..?
ಹೇಗಿದೆ ಈ ಚಿಂತನೆ..? ನೀವು ಈ ಮೂರರಲ್ಲಿ ಯಾವ ಕ್ಯಾಟಗೆರಿಗೆ ಸೇರುತ್ತೀರಾ..?
-ವಿಶ್ವಾಸ್ ಭಾರದ್ವಾಜ್…