Wednesday 22 July 2015

ಪ್ರಾಚೀನ ಈಜಿಪ್ಟ್ ನಾಗರೀಕತೆಯ ರಮ್ಯ ಮನೋಹರ ಕಥಾ ಹಂದರ-ಮೃತ್ಯುಂಜಯ:


ಒಸೈರಿಸ್ ದೇವನ ಹೆಂಡತಿ ಐಸಿಸ್ ದೇವಿ.. ಅವರ ವೀರ ಸಂತಾನ ಹೋರಸ್ ದೇವ.. ಓಸೈರಿಸ್ ನನ್ನು ಮೋಸದಿಂದ ಕೊಲ್ಲುವ ಸೆತ್ ಅನ್ನುವ ರಾಕ್ಷಸ ಒಸೈರಿಸ್ ದೇಹವನ್ನು 14 ಹೋಳುಗಳನ್ನಾಗಿ ಕತ್ತರಿಸುತ್ತಾನೆ.. ಆನಂತರ ಒಸೈರಿಸ್ ನ ಅನುಯಾಯಿಗಳು ಅಷ್ಟೂ ಹೋಳುಗಳನ್ನು ಒಟ್ಟುಗೂಡಿಸಿ ಶವವನ್ನು ಶಾಶ್ವತ ಮನೆ(ಗೋರಿ)ಗೆ ಕಳಿಸುತ್ತಾರೆ.. ಕೆಲ ಕಾಲ ಅಜ್ಞಾತದಲ್ಲಿ ಬದುಕುವ ಐಸಿಸ್ ದೇವತೆ ತನ್ನ ಮಗ ಹೋರಸ್ ನನ್ನು ವೀರಾಧಿವೀರನನ್ನಾಗಿಸುತ್ತಾಳೆ.. ಕೊನೆಗೆ ಹೋರಸ್ ಹಾಗೂ ಸೆತ್ ನಡುವಣ ನಡೆಯುವ ನಿರ್ಣಾಯಕ ಕದನದಲ್ಲಿ ತನ್ನ ತಂದೆ ಒಸೈರಿಸ್ ನನ್ನು ಕೊಂದಂತೆ, ಹೋರಸ್ ಸೆತ್ ನನ್ನು 14 ತುಂಡುಗಳನ್ನಾಗಿ ಹೊಡೆದು ಕೊಂದು ಹಾಕುತ್ತಾನೆ.. ವೀರಾಧಿ ವೀರ ಹೋರಸ್ ಗೆ ಉಘೆ ಅನ್ನುತ್ತದೆ ಐಗುಪ್ತ ರಾಷ್ಟ್ರ.. ಅಂದ ಹಾಗೆ ಒಸೈರಿಸ್ ನ ಶಾಶ್ವತ ಮನೆ ಅಥವಾ ಗೋರಿ ಇರುವ ಸ್ಥಳ ಅಬ್ಟು ದ್ವೀಪ..
4000 ವರ್ಷಗಳ ಹಿಂದೆ ಐಗುಪ್ತವನ್ನು ಆಳಿದ ಮೊದಲ ಪೆರೋ ಹೆಸರು ರಾ.. ಅವನೇ ಸೂರ್ಯ.. ಐಗುಪ್ತ ರಾಷ್ಟ್ರದ ಪ್ರಮುಖ ದೇವರು ಈ ರಾಅಥವಾ ಸೂರ್ಯ, ಐಗುಪ್ತ ಜನತೆ ಆರಾಧಿಸುವ ಮುಖ್ಯ ಮೂರು ದೇವರುಗಳು ರಾ, ಪ್ ಟಾ, ಅಮನ್.. ಪ್ ಟಾ ದೇವನನ್ನು ಸರ್ವಶಕ್ತ, ಸರ್ವಜನ ಪೂಜಿತ ದೇವರು ಅಂತ ಗುರುತಿಸಿದರೆ, ಅಮನ್ ದೇವ ದೋಣಿಕಾರರ, ಅಂಬಿಗರ, ದಂಡಿನ ಸೈನಿಕರ ಅಚ್ಚುಮೆಚ್ಚಿನ ದೇವ.. ದೋಣಿ ಮುಳುಗದಂತೆ, ಹಾಯಿ ಹರಿದುಹೋಗದಂತೆ, ಮಹಾ ನೀಲ ನದಿಯಲ್ಲಿ ಚಂಡಮಾರುತಗಳು ಬೀಸಿ ನಾವೆ ಉರುಳದಂತೆ ಕಾಪಾಡುವ ಜವಬ್ದಾರಿ ಅಮನ್ ದೇವನದ್ದು..
ಧೂಎಸಿಸ್ ದೇವತೆ ಗರ್ಭ ಧರಿಸಿದ ಮಹಿಳೆಯರ ಆರಧ್ಯ ದೇವಿ.. ಗರ್ಭದಲ್ಲಿರುವ ಕುಡಿಗಳ ರಕ್ಷಣೆ ಮಾಡುವ ಹೊಣೆ ಅವಳದ್ದು.. ಥೂತ್ ದೇವಿ ಐಗುಪ್ತ ಜನರಿಗೆ ಲಿಪಿಸುರುಳಿ ಜ್ಞಾನ ಕಲಿಸಿದ ವಿದ್ಯಾದೇವತೆ.. ಸ್ವರ್ಣ ದೇವತೆ ಹಾಥೋರ್ ಪೆರೋ ವಂಶದಿಂದ ಅಧಿಕೃತವಾಗಿ ಪೂಜಿಸಲ್ಪಡುವ ದೇವತೆ.. ಕೋಡಿರುವ ಹಸುವಿನ ಮುಖವಾಡ ಧರಿಸರುವ ಹಾಥೊರ್ ಐಗುಪ್ತದಲ್ಲಿ ಮಗು ಹುಟ್ಟಿದ ನಂತರ ಬಂದು ಭವಿಷ್ಯವನ್ನು ನಿರ್ಧರಿಸುತ್ತಾಳೆ ಅನ್ನುವುದು ಐಗುಪ್ತದ ನಂಬಿಕೆ.. ತೋಳದ ಮುಖವಾಡ ಇರುವ ಅನೋಬಿಸ್ ದೇವತೆ ಸತ್ತ ವ್ಯೆಕ್ತಿಗಳಿಗೆ ಮುಕ್ತಿ ದೊರಕಿಸುವ ಶಾಶ್ವತ ಮನೆಯ ದೇವ..
ಇವಿಷ್ಟೂ ಪ್ರಾಚೀನ ಐಗುಪ್ತ ಅಂದರೆ ಈಗಿನ ಈಜಿಪ್ಟ್ ನಾಗರೀಕತೆಯಲ್ಲಿ ಜನರಿಗಿದ್ದ ನಂಬಿಕೆಗಳು.. ನೀಲ ನದಿಯ ಅಂದರೆ ನೈಲ್ ನದಿ ಪಾತ್ರದ ನಡುಗಡ್ಡೆಗಳಿಗೆ ಜಿಂಕೆ ಪ್ರಾಂತ್ಯ, ಮೊಸಳೇ ಪ್ರಾಂತ್ಯ, ನೀರಾನೆ ಪ್ರಾಂತ್ಯ, ಠಗರು ಪ್ರಾಂತ್ಯಗಳೆಂಬ ಹೆಸರು.. ಐಗುಪ್ತದ ರಾಜಧಾನಿ ಮೆಂಫಿಸ್.. 4500 ವರ್ಷಗಳ ಹಿಂದೆ ಐಗುಪ್ತ ರಾಷ್ಟ್ರದಲ್ಲಿ ಲಿಪಿಸುರುಳಿ ಕಂಡು ಹಿಡಿಯಲಾಯ್ತು.. ಕೃಷಿ, ಮೀನುಗಾರಿಕೆ, ಪೆರೋ ಆಳ್ವಿಕೆ, ಗುಲಾಮಿ ಪದ್ಧತಿ, ಗಣಿಗಾರಿಕೆ, ಅರಮನೆ ಗುರುಮನೆಗಳ ಆಡಳಿತ, ಗೋರಿ ನಿರ್ಮಾಣ ಕೊನೆಗೆ ದೇವರೂಪ ಪೆರೋಗೆ ಇದಿರಾಗಿ ಬಂಡಾಯವೆದ್ದ ಮೊದಲ ದಲಿತ ಚಳುವಳಿ ಇವೆಲ್ಲದರ ಸಂಪೂರ್ಣ ಹೂರಣೆವೇ ಮೃತ್ಯುಂಜಯ..
ಬಹಳ ಹಿಂದೆ ಓದಿದ್ದ ಅತ್ಯದ್ಭುತ ಕಾದಂಬರಿ ಮೃತ್ಯುಂಜಯ.. ಓದುತ್ತಾ ಹೋದಂತೆ ಓದುಗರನ್ನು ಪೆರೋ ಪೇಪಿಯನ್ನಾಗಿ, ಮಹಾರಾಣಿ ನೆಫರ್ ಟೀಮ್ ಳನ್ನಾಗಿ, ಅಮಾತ್ಯ ಆಮೆರಬ್ ನನ್ನಾಗಿ, ಮಹಾ ಅರ್ಚಕ ಹೆಪಾಟ್ ನನ್ನಾಗಿ, ದಲಿತ ಬಂಡಾಯದ ಮಹಾನ್ ಜನನಾಯಕನಾದ ಮೆನಪ್ ಟಾ ನನ್ನಾಗಿಸುತ್ತದೆ ಕಾದಂಬರಿ.. ಅದಿಷ್ಟೇ ಅಲ್ಲದೆ ಕಾದಂಬರಿಯುದ್ದಕ್ಕೂ ಅರಮನೆ-ಗುರುಮನೆಗಳ ರಾಜಕಾರಣವಿದೆ.. ಮೆನಪ್ ಟಾನ ಸುಮುಧಾಯದ ಸಂಘಟಿತ ಹೋರಾಟವಿದೆ.. ಕುತಂತ್ರಿಗಳಾದ ಸೆನಬ್, ಸಿನ್ಯುಹೆ, ಗೇಬು, ಟಿಹುಟಿ, ಬಕೀಲ, ಪ್ರಾಂತಪಾಲರು, ಭೂಮಾಲಿಕರ ಷಡ್ಯಂತ್ರಗಳಿವೆ.. ಕೊನೆಗೆ ರಾಜಕೀಯದ ಚೌಕಾಮಣೆಯಾಟದಲ್ಲಿ ಬಲಿಯಾಗುವ ಮೆನನಪ್ ಟಾ ವಿಚಾರಣೆ ವೇಳೆ ಮಾತನಾಡುವ ಅದ್ಭುತ ಅಂತರಾಳದ ಮನಕಲಕುವ ಸಂದೇಶವಿದೆ.. ಮೆನ್ನ, ಬಟಾ, ಖ್ನೇಮ್ ಹೊಟೆಪ್, ಸ್ನೋಫ್ರು, ಸುಬೆಕ್ಕು, ಶಿಲ್ಪಿ ನೆಖೆನ್, ಮುಂತಾದ ಅಪಾರ ಮೆದು ಹೃದಯಿ ಪಾತ್ರಗಳು ಮನ ಮುಟ್ಟುತ್ತವೆ.. ಮೆನಪ್ ಟಾ ಪತ್ನಿ ನೆಫಿಸ್, ರಾಮರಿಪ್ ಟಾ, ನೆಜಮುಟ್, ಶೀಬಾ ಮುಂತಾದ ಪಾತ್ರಗಳು ಆರ್ದ್ರವಾಗಿಸುತ್ತವೆ.. ಇಂತದ್ದೊಂದು ಅದ್ಭುತ ಕಾದಂಬರಿಯನ್ನು ಮೂರನೆಯ ಬಾರಿಗೆ ಓದಿ ನಾನೂ ಆರ್ದ್ರನಾದೆ..
ನಿಜ ನಿಜ ಕನ್ನಡಕ್ಕೊಬ್ಬರೇ ನಿರಂಜನ..
-ವಿಶ್ವಾಸ್ ಭಾರದ್ವಾಜ್
***


ಹಿಂದೆ ತುಳಿದ ಮಂದಿ ಈಗ ತುಳಿಸಿಕೊಳ್ಳಲಿ ಬಿಡಿ..

ಹಸಿವು ಬಡತನ ಅವಮಾನ ಇವೆಲ್ಲವೂ ಅನ್ನಭಾಗ್ಯ ಫಲಾನುಭವಕ್ಕೆ ಮಾನದಂಡಗಳು!!!
ಆದರೆ ಈ ಹಸಿವು ಅನ್ನೋದಿದ್ಯಲ್ಲ, ಅದು ಕೇವಲ ಅಹಿಂದ ಜಾತಿಗಳಿಗೆ ಮಾತ್ರ ಆಗುವಂತದ್ದು..
ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಮಾತ್ರ ಹಸಿವಿನ ಆರ್ತನಾದದ ಪರಿಚಯವಿದೆ..
ಈ ಮೇಲ್ವರ್ಗದ ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಒಕ್ಕಲಿಗರು ಪ್ರಭಾವಿಗಳು ಶತಶತಮಾನಗಳಿಂದ ಊಳಿಗ ಇಟ್ಟುಕೊಂಡಿದ್ದವರು.. ಜಮೀನುದಾರರು..
(ಇವತ್ತು ಆ ಎಲ್ಲಾ ಜಮೀನುದಾರರ ಹೊಲ ಗದ್ದೆಗಳು ಉಳುವವನ ಪಾಲಾಗಿ ಉಳಿದಿದ್ದ ಹಳೆಯ ಮಣ್ಣಿನ ಗೋಡೆ ಮನೆಯ ಕೊನೆಯ ಜಂತಿಯೂ ನೆಲಕ್ಕೆ ಬಿದ್ದಿದೆ.. ಅದು ಒತ್ತಟ್ಟಿಗಿರಲಿ)
ಹಿಂದೆ ಶತಶತಮಾನಗಳಿಂದ ಮೃಷ್ಟಾನ್ನ ತಿಂದ ಮಂದಿ ಈಗಲೂ ಅದನ್ನೇ ತಿನ್ನುತ್ತಿದ್ದಾರೆ ಹಾಗಾಗಿ ಅವರಿಗೆ ಹಸಿವಿನ ಘೋರ ಅನುಭವದ ಅರಿವಿಲ್ಲ..!!
ಅವರಿಗೆ ಅನ್ನಭಾಗ್ಯವೂ ಬೇಡ, ಅತ್ಯೋಧಯವೂ ಬೇಡ, ಯಶಸ್ವಿನಿಯೋ ಮತ್ತೊಂದೂ ಯೋಜನೆಗಳ ಫಲ ಬೇಡ, ರಿಸರ್ವೇಶನ್ ಬೇಡವೇ ಬೇಡ..!!
ಸರಿ ದೊರೆಗಳೇ ನೀವು ಹೇಳೋದು ಶತಾಂಶ ಸಹಸ್ರಾಂಶವೂ ಸರಿ ಸರಿ..
ಬ್ರಾಹ್ಮಣರಿಗೆ, ವೀರಶೈವರಿಗೆ, ಶೆಟ್ಟರು, ಗೌಡರಿಗೆ, ಈ ಜನರಲ್ ಕ್ಯಾಟಗರಿಯಲ್ಲಿ ಯಾವ ಜಾತಿಯವರಿಗೂ ಹಸಿವೇ ಆಗೋದಿಲ್ಲ ಬಿಡಿ..
ಅವರಿಗೇಕೆ ಅನ್ನಭಾಗ್ಯ..???
ಹಿಂದೆ ತುಳಿದ ಮಂದಿ ಈಗ ತುಳಿಸಿಕೊಳ್ಳಲಿ ಬಿಡಿ..
ಇದೇ ನೋಡಿ ಸರಿಯಾದ ಸಾಮಾಜಿಕ ನ್ಯಾಯ..
ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ಅನ್ನುತ್ತಿದ್ದ ಹಮ್ಮು ರಾಬಿಯ ಸರ್ವಶ್ರೇಷ್ಠ ಸಾಮಾಜಿಕ ನ್ಯಾಯ ಇದೆ.. ಟಿಟ್ ಫರ್ ಟ್ಯಾಟ್.. ಗ್ರೇಟ್!!!

ಅಗ್ನಿ ಗರ್ಭ:


ಆಗಾಗ ಕೊಂಚ ಎಡಕ್ಕೂ ಬಲಕ್ಕೂ ಹಿಮ್ಮುಖ ಮುಮ್ಮುಖವಾಗಿ ಹೊರಳುತಿದೆ
ಅಂತರಾಳದಲ್ಲಡಗಿ ಕುಳಿತ ಜೀವ
ಕರುಳು ಬಳ್ಳಿಗೆ ಕೈ ಸುತ್ತಿ ಕುಳಿತೆಣಿಸುತ್ತಿದೆ ಮಹಾ ಪ್ರಸವಕ್ಕುಳಿದ ದಿನವ
ಈಗೀಗ ಉಸಿರ ತತ್ತಿ ಮತ್ತೆ ಭಾರ ಭಾರ
ನಡೆದಾಡಲು ಬಿಡಲಾಗದ ಸಂಕಟ ನಿತ್ರಾಣ
ನಿಂತಲ್ಲಿ ನಿಲ್ಲಿಸದದು ಕುಳಿತಲ್ಲಿ ಕೂರಿಸದು
ಮಲಗಿ ನಿದ್ರೆ ಹೋದರು ಬಡಿದೆಬ್ಬಿಸುವ ತುಡಿತ

ಕೆಲವು ಅನಿಷ್ಠ ಮುಖಗಳನ್ನು ನೋಡಿದರೆ ವಾಕರಿಕೆ
ಹೊಟ್ಟೆ ತೊಳಿಸುವಂತ ಅಸಹ್ಯಕರ ಕಮಟು ವಾಸನೆಯ ವ್ಯೆಕ್ತಿತ್ವಗಳ ತುರಿಕೆ
ಗರ್ಭದಲ್ಲಿರುವ ಕಂದಮ್ಮನಿಗೆ ಅವರ ಸಂಗ ಸಹ್ಯವಲ್ಲ
ಮಗ್ಗುಲು ಬದಲಾಯಿಸಿ ಗುಟುರು ಹಾಕಿದರೆ ಅಸಮಧಾನದ ಕುರುಹು
ಅದರ ಕೋಪ ಉದರದೊಳಗೆ ಸುಡುವ ಬಿಸಿ ಕೆಂಡ ಕೆಂಡ!!
ದೇಹದ ಉಷ್ಣತೆ ಹೆಚ್ಚಿ ಕೊನೆಗೆ ವಿಷಮ ಜ್ವರದ ಭಾದಕ
ಕೆಲವೊಮ್ಮೆ ಭ್ರೂಣದೊಳಗೆ ಶೀತಲ ಮೌನ
ಅನಾಹುತಕಾರಿ ನೀರವದಲ್ಲೊಂದು ಸ್ಪಷ್ಟ ಮುನ್ಸೂಚನೆ
ಯಾವುದೋ ಅವ್ಯಕ್ತ ಆತಂಕ ಆವರಿಸಿದರೆ ಅಪಾಯ ಸನ್ಹೆ!!
ಒಳಮನೆಯಲ್ಲಿ ಮಗುಮ್ಮಾಗಿ ಮಲಗಿದ ಕಂದಮ್ಮ
ಯಾರನ್ನೋ ಗುರಿಯಾಗಿಸಿ ಏನನ್ನೋ ತರ್ಕಿಸುತ್ತದೆ
ಈ ಬಾರಿ ಹಣೆವ ರಣಜಾಲಕ್ಕೆ ಸಿಕ್ಕರೆ ಅವಯವಗಳು ಊನ
ದೇಹದ ಒಂದು ಭಾಗಕ್ಕೆ ಪಾರ್ಶವಾಯು ಬಡಿಯುತ್ತದೆ
ಲಕ್ಷ ಕೋಟಿ ಅಗಣಿತ ಅಸಂಖ್ಯ ಸಂಖ್ಯೆಯಲ್ಲಿ ದೇಹದ ಚೂರುಗಳು ಸಿಡಿಯುತ್ತವೆ
ಅದು ಮಹಾ ಬಿರುಗಾಳಿ ಬೀಸುವ ಮುಂಚಿನ ಕಡು ಗಾಢ ಮೌನ ಭಯಾನಕ
ಗರ್ಭ ಸೀಳಿ ಹೊರಬರಲು ಇನ್ನಿಲ್ಲದ ಕಾತರ
ಘರ್ಜಿಸಿದರೆ ಅರಣ್ಯವೇ ನಡುಗುವ ಭೀಬತ್ಸ ಅಟ್ಟಹಾಸ-ರಾಕ್ಷಸ ನೃತ್ಯ
ನಿರಂತರ ಸುರಿವ ಕುಂಬದ್ರೋಣ ಮಳೆಯ ಮಹಾಪ್ರವಾಹಕ್ಕಿಂತಲೂ ಉಗ್ರ
ಸಹಸ್ರ ಸಿಡಿಲುಗಳು ಒಮ್ಮೆಲೆ ಗುಡುಗಿದಂತಹ ಕಂಪನ
ವಸುಧೆಯೊಳಪದರದ ಕೊತಕೊತನೆ ಕುದಿಕುದಿವ ಲಾವಾ ಉಕ್ಕುಕ್ಕಿ
ಜ್ವಾಲಾಮುಖಿಗೆ ಗಿರಿಶಿಖರಗಳ ತುದಿ ಮೊನೆ ಬಾಯ್ತೆರೆಯುವಂತಾಗುತ್ತದೆ
-ಪ್ರಸವ...!!!
ಶಿಲಾಪದರಗಳ ಒಳಮುಖದ ತಟ್ಟೆಗಳು ಒಂದಕ್ಕೊಂದು ಸವೆದು ನೊಸೆದು
ಧರಣಿ ಉಯ್ಯಾಲೆಯಾಡುವಂತಹ ಭೂಕಂಪನದ ಅನುಭವ
ತಿಂಗಳು ತುಂಬಿದ ಅದಕ್ಕೆ ಇನ್ನು ಒಳಗಿರುವುದು ಕಷ್ಟಸಾಧ್ಯ
ಕಬಂಧ ಬಾಹುಗಳನ್ನೇ ಮೊದಲು ಹೊರಹಾಕಿ ಚಾಚಿ
ದೈತ್ಯ ಗಾತ್ರದ ನೀಳ ದೇಹವ ಚಿಮ್ಮಿ ವ್ಯಾಘ್ರ ಶಿರವನ್ನೇ
-ಅಲ್ಲಾಡಿಸಿ ಹೊರಬರುವ ತವಕ:
ಈ ವೇದನೆ ಶತಮಾನಗಳ ಮೂಕ ರೋಧನೆಗೆ ಶಾಶ್ವತ ಮುಕ್ತಿ
ಅವಡುಗಚ್ಚಿ ಆ ನೋವ ತಡೆದುಕೊಂಡರೆ;
ಹುಟ್ಟುವ ಆ ಕೂಸು ಅವತಾರವೆತ್ತಿ ಯುಗಪುರುಷನಾಗುತ್ತಾನಾ???
ಅನವರತ ಮನ್ವಂತರಗಳಿಂದ ಆರ್ಭಟಿಸುತ್ತಿರುವ ಹುಂಬರುಗಳಿರಾ;
ಹುಟ್ಟುವವನಿದ್ದಾನೆ ಅಸುರ ಮಕ್ಕಳ ಅರಿಹಂತಕ!!!
ದ್ವಾಪರದ ಕಂಬವನ್ನು ಎರಡು ಹೋಳುಗಳಾಗಿ ಕಲಿಯುಗದಲ್ಲಿ ಸೀಳಿ
ನಖವ ಆಯುಧವನ್ನಾಗಿಸುವ ನೂರು ನರಸಿಂಹನ ಬಲದವನು!!!
ಯುಗಪರಿವರ್ತನೆಗೆ ಕಾಲ ಪರಿಪಕ್ವವಾಗಿದೆ..!
ಸನ್ನಿಹಿತವಾಗಿದೆ ಆ ದಿವ್ಯ ಮಹೂರ್ತ ಕ್ಷಣಗಣನೆ..!
ಮಹತ್ವಾಕಾಂಕ್ಷೆ ಮಹಾ ಪ್ರಸವ ಸಂಕಟಕ್ಕೆ..!
ನೆನಪಿರಲಿ, ಮರೆಯದಿರಿ ಭ್ರೂಣದಲ್ಲಿರುವುದು ದೈತ್ಯ ಪಿಂಡ
ಇದು ಬ್ರಹ್ಮಾಂಡವ ನಡುಗಿಸುವ ಅಗ್ನಿ ಗರ್ಭ
-ವಿಶ್ವಾಸ್ ಭಾರದ್ವಾಜ್..
================

ಅಹುದಹುದು ಕನ್ನಡಕ್ಕೊಬ್ಬರೇ ಗಣೇಶಯ್ಯ: 


1. ಆರ್ಯರು ಪಶ್ಚಿಮದಿಂದ ವಲಸೆ ಬಂದವರಲ್ಲ; ಬದಲಿಗೆ ಇಲ್ಲಂದಲೇ ಪಾಶ್ಚಿಮಾತ್ಯ ದೇಶಗಳಿಗೆ ತೆರಳಿದವರು.. ಸರಸ್ವತಿ ನದಿ ತೀರದಲ್ಲಿ ನಾಗರೀಕತೆ ಕಟ್ಟಿದ ಮೂಲ ಮನುಷ್ಯರು ಇಂಡಸ್ ವ್ಯಾಲಿಯವರೇ ವಿನಃ ಮ್ಯಾಕ್ಸ್ಮುಲ್ಲರ್ ಹೇಳುವಂತೆ ಐರೋಪ್ಯ ರಾಷ್ಟ್ರಗಳಿಂದಲೋ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೋ ಏಷ್ಯಾದ ಕಡೆಗೆ ಬಂದವರು ಅಲ್ಲವೇ ಅಲ್ಲ
-ಶಿಲಾಕುಲ ವಲಸೆ
***
2. ಹೈದರಾಬಾದ್ ನಿಜಾಮನ ಖಜಾನೆ ಬೀದರ್ ಕೋಟೆಯಲ್ಲಿತ್ತಾ..? ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಮುಂದುವರೆದಿದ್ದ ರಜಾಕಾರರ ಅಟ್ಟಹಾಸದ ಪರಿಣಾಮಗಳೇನು..? ಕೊನೆಗೆ ನಿಜಾಮನಲ್ಲಿದ್ದ ಅನಂತ ಸಂಪತ್ತು ಹೋಗಿದ್ದೆಲ್ಲಿಗೆ..? ನಿಜಾಮನ ಖಜಾನೆ ಕಾಯಲು ನಿಗ್ರೋ ಗುಲಾಮರನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತಾ..?
-ಏಳು ರೊಟ್ಟಿಗಳು
***
3. ಕರುನಾಡಿನ ಶ್ರೀಮಂತ ಸಾಮ್ರಾಜ್ಯ ಕೃಷ್ಣದೇವರಾಯನ ಖಜಾನೆ ಕಥೆ ಗೊತ್ತಾ..? ಆನೆಗಳ ಮೇಲೆ ಸಂಪತ್ತು ಹೇರಿಕೊಂಡು ಹೋದ ಕೃಷ್ಣದೇವರಾಯನ ನಂತರದ ಪೀಳಿಗೆ ಅವನ್ನು ಹೊತ್ತೊಯ್ದಿದ್ದು ಎಲ್ಲಿ..? ಈ ಖಜಾನೆ ಹುಡುಕಾಟದ ಹಿಂದಿರುವ ತಿರುಪತಿ ಧರ್ಮ ರಾಜಕಾರಣ, ಬೌದ್ಧರು ಹಾಗೂ ಹಿಂದೂಗಳ ನಡುವಿನ ತರ್ಕ ವಾದವಿವಾದ, ವೆಂಕಟೇಶ್ವರ ಮೂರ್ತಿ ಬೌದ್ಧರ ಅವಲೋಕಿತೇಶ್ವರನೇ? ಕೃಷ್ಣದೇವರಾಯನ ಖಜಾನೆ ಪೆನುಕೊಂಡದಲ್ಲಿತ್ತಾ ಅಥವಾ ತಿರುಪತಿಯಲ್ಲಿತ್ತಾ? –
-ಕರಿಸಿರಿಯಾನ
***
4. ಬುದ್ಧನ ಹಲ್ಲಿಗೂ ಅಲೆಗ್ಸಾಂಡರ್ನ ಸಂಪತ್ತಿಗೂ ಸಂಬಂಧವಿದೆಯಾ? ಅಸಲಿಗೆ ಶ್ರೀಲಂಕಾ, ಕಾಂಬೋಡಿಯಾ ಹಾಗೂ ಇನ್ನೆರಡು ರಾಷ್ಟ್ರಗಳಲ್ಲಿ ಸಂರಕ್ಷಿಸಲಾಗಿರುವ ನಾಲ್ಕು ಬುದ್ಧನ ಹಲ್ಲುಗಳಲ್ಲಿ ಬುದ್ಧನ ಮೂಲ ಹಲ್ಲು ಎಲ್ಲಿದೆ.. ತೇರವಾದಿಗಳು ಅನ್ನುವ ಅಜ್ಞಾತ ಬೌದ್ಧ ಸಂರಕ್ಷಕ ಪಡೆ ಇದೆಯೇ..? ಗ್ರೀಕ್ನ ಸಿಡಿಯುವ ನಕ್ಷತ್ರದ ಸಿಂಬಲ್ಗೂ ನಮ್ಮ ಸಾರನಾಥ ಸ್ಥಂಭ ಹಾಗೂ ಅಶೋಕ ಚಕ್ರಕ್ಕೂ ಇರುವ ಸಾಮ್ಯತೆಯೇನು..? ಭಾರತಕ್ಕೆ ದಂಡಯಾತ್ರೆ ಬಂದಿದ್ದ ಅಲೆಗ್ಸಾಂಡರ್ ಖಜಾನೆ ಎಲ್ಲಿದೆ..?
- ಚಿತಾದಂತ
***
5. ಆಂಜನೇಯ ಹೊತ್ತು ತಂದಿದ್ದ ಸಂಜೀವಿನಿ ಪರ್ವತ ಅಂಡಮಾನ್ನಲ್ಲಿತ್ತಾ..? ಜೀವರಕ್ಷಕ ಸಸ್ಯ ಸಂಜೀವಿನಿ ನಿಜಕ್ಕೂ ಇದೆಯಾ..? ಹನುಮಾನ್ ಅನ್ನುವ ಹೆಸರು ಅಂಡಮಾನ್ನ ಮೂಲ ಹೆಸರಾ..? ರುಡಂತಿ ಅಥವಾ ಒಂದು ಜಾತಿಯ ಸೀತಾಳೆ ಸಸ್ಯವೇ ಸಂಜೀವಿನಿಯಾ..?
- ಕಪಿಲಿಪಿಸಾರ
***
6. ಡಾರ್ವಿನ್ನ ವಿಕಾಸವಾದ ನಿಜಕ್ಕೂ ಸತ್ಯವೇ..? ಜೀವ ವಿಕಾಸಕ್ಕಿಂತ ಮೊದಲು ಜೀವಕ್ಕೆ ಸಾವು ಇರಲಿಲ್ಲವೇ..? ಏಕಾಣು ಜೀವಿ ಬಹು ಅಣು ಜೀವಸತ್ವ ತಂತುಗಳ ಮಾನವನಾಗಿ ರೂಪುಗೊಂಡಿದ್ದು ಹೇಗೆ..? ನಿಜಕ್ಕೂ ಪ್ಯಾರಾಸೆಲ್ ದ್ವೀಪಗಳಲ್ಲಿ ಚೀನಿಯರು ಕಾನೂನು ಬಾಹಿರ ಸಂಶೋದನೆಗಳನ್ನು ನಿರ್ವಹಿಸುತ್ತಾರಾ..? ಮಾನವ ತನ್ನ ವಂಶಕ್ಕಾಗಿ ಆಸ್ತಿ ಮಾಡುವುದು ಜೀವಕೋಶದಲ್ಲಿರುವ ಸ್ವಾರ್ಥ ದಾತುವಿನ ಕಾರಣದಿಂದಲಾ..?
-ಮೂಕಧಾತು
***
7. ಚಂದ್ರಗುಪ್ತ ಮೌರ್ಯ ಜೈನ ಧರ್ಮದ ಉದ್ಧಾರಕ್ಕಾಗಿ ದಕ್ಷಿಣಕ್ಕೆ ಅಪಾರ ಸಂಪತ್ತು ತಂದನೇ..? ಆಗ ಶ್ರವಣಬೆಳಗೊಳಕ್ಕೆ ಬಂಗಾರದ ಮುಸುಕಿನ ಜೋಳ ತರಲಾಯ್ತೇ..? 12 ಸಾವಿರ ರಥಗಳಲ್ಲಿ ಚಿನ್ನದ ಜೋಳದ ತೆನೆ ಬಂದಿದ್ದು ನಿಜವೇ..? ಪ್ರಾಚೀನ ಕೆತ್ತನೆಗಳಲ್ಲಿ ಶಿಲಾಬಾಲಕಿಯರ ಕೈನಲ್ಲಿರುವ ಫಲ ಜೋಳವೇ..? ಹಾಗಿದ್ದರೆ ಆ ಅಪಾರ ಸಂಪತ್ತು ಕರಗಿದ್ದೆಲ್ಲಿ..? ವಿಷ್ಣುವರ್ಧನನ ಪಟ್ಟದರಸಿ ಶಾಂತಲಾ ದೇವಿ ಪ್ರಾಣತ್ಯಾಗ ಮಾಡಿಕೊಂಡ ಶಿವಗಂಗಾ ಬೆಟ್ಟದ ಸುತ್ತಮುತ್ತಲ ಕಥೆಯೇನು..? ಬಿಟ್ಟಿದೇವ ಜೈನ ಧರ್ಮದಿಂದ ವೈಷ್ಣವ ವಿಷ್ಣುವರ್ಧನನಾಗಿದ್ದು ಹೇಗೆ..?
-ಕನಕ ಮುಸುಕು
***
8. ಶ್ರೀಲಂಕಾದಲ್ಲಿ ತಮಿಳರು ಹಾಗೂ ಸಿಂಹಳರ ನಡುವಿನ ವೈಷಮ್ಯಕ್ಕೆ ನಿಜವಾದ ಕಾರಣ-ಸಿಗೀರಿಯಾ
***
9. ಬೇಲೂರು ಶಿಲಾಬಾಲಕಿಯರ ಮದನಿಕೆಗಳ ಕೆತ್ತನೆಗೆ ರೂಪದರ್ಶಿ ಬೇರಾರು ಅಲ್ಲ ವಿಷ್ಣುವರ್ಧನನ ಪಟ್ಟದರಸಿ ಶಾಂತಲಾದೇವಿ
-ಕಲೆಯ ಬಲೆ, ಪದ್ಮಪಾಣಿ
***
10. ಮೈಸೂರು ಅರಸರಿಗೆ ಅಲಮೇಲಮ್ಮ ಶಾಪವನ್ನು ಕೊಟ್ಟಿದ್ದೇ ಸುಳ್ಳು; ತಲಕಾಡು ಮರಳಾಗಿದ್ದು, ಮಾಲಂಗಿ ಮಡುವಾಗಿದ್ದು ಶಾಪದ ಪ್ರಭಾವದಿಂದ ಅಲ್ಲ ಬದಲಿಗೆ ಅದೊಂದು ಪ್ರಾಕೃತಿಕ ಬದಲಾವಣೆಯಷ್ಟೆ..
-ಮರಳ ತೆರೆಯೊಳಗೆ, ಪದ್ಮಪಾಣಿ
***
11. ಕಿತ್ತೂರಿನ ಸಂಸ್ಥಾನದಲ್ಲೂ ಒಂದು ನವಿರಾದ ಪ್ರೇಮಕಥೆ ಇದೆ.. ಜೊತೆಗೆ ಅಂತರ್ಧರ್ಮೀಯ ರಾಣಿಯ ತ್ಯಾಗದ ವ್ಯಥೆಯೂ ಇದೆ..
- ಕಿತ್ತೂರು ನಿರಂಜನಿ, ಪದ್ಮಪಾಣಿ
ಬರೆಯುತ್ತಾ ಹೋದರೆ ಮುಗಿಯಲಾರದಷ್ಟು ನಾವು ಈವರೆಗೆ ಕಂಡು ಕೇಳರಿಯದ ಅಸಲು ಚರಿತ್ರೆಯ ಹಂದರಗಳ ಅದ್ಭುತ ವಿಶ್ವ ಅನಾವರಣಗೊಳ್ಳುತ್ತೆ ಕೆ.ಎನ್ ಗಣೇಶಯ್ಯನವರ ಕೃತಿಗಳಲ್ಲಿ.. ಇನ್ನೂ ಓದಿಲ್ಲವಾದರೆ ಈಗಲೇ ಓದಲು ಶುರುಮಾಡಿ.. Am dam sure definitely you will love the writings.. ಅಹುದಹುದು ಕನ್ನಡಕ್ಕೊಬ್ಬರೇ ಕನ್ನಡದ ಆಸ್ತಿ ಗಣೇಶಯ್ಯ..
-ವಿಶ್ವಾಸ್ ಭಾರದ್ವಾಜ್

ನೀವು ಯಾವುದಾದರೂ ನಂಬಿ..

ದೇವರು/ನಿಯತಿ/ಶಕ್ತಿ/ ಪಾಸಿಟೀವ್ ಎನರ್ಜಿ
ನೀವು ಯಾವುದಾದರೂ ನಂಬಿ..
ಆ ಅತೀತ ಶಕ್ತಿ ಒಮ್ಮೊಮ್ಮೆ ನೀವು ಬಯಸದ ಅತಿ ಉತ್ಕ್ರುಷ್ಟ ಆತ್ಮೀಯ ಸಂಬಂಧವೊಂದನ್ನು ದಯಪಾಲಿಸಿರುತ್ತದೆ..
ಇನ್ನಾದರೂ ಬದುಕನ್ನು ಪ್ರೀತಿಸಿ ಬದುಕು ನೀವು ಬಯಸುವ ಪ್ರೀತಿಯನ್ನು ಹಲವು ಮೂಲಗಳಲ್ಲಿ ಒದಗಿಸುತ್ತದೆ..
 
 

ಸಾಧ್ಯ ಆದಷ್ಟು ಅವರನ್ನು ದೂರ ಇಡೋದೆ ಉತ್ತಮ..

ಕೆಲವು ಅನಿಷ್ಟ ವ್ಯೆಕ್ತಿತ್ವದ ಅಲ್ಪ ಮನುಷ್ಯರು ನಮ್ಮ ಅಕ್ಕಪಕ್ಕದಲ್ಲಿರ್ತಾರೆ.. ಸಾಧ್ಯ ಆದಷ್ಟು ಅವರನ್ನು ದೂರ ಇಡೋದೆ ಉತ್ತಮ..
ಅವರು ಸ್ನೇಹಕ್ಕಿರಲಿ ಕನಿಷ್ಟ ನಂಬಿಕೆಗೂ ಅರ್ಹರಲ್ಲ.. ಅವರಿಂದ ಒಬ್ಬನೇ ಒಬ್ಬನಿಗೆ ಕಿಂಚಿತ್ತೂ ಉಪಕಾರ ಸಿಗುವುದಿಲ್ಲ.. ಸಮಾಜದಲ್ಲಿ ಅವರ ಅಸ್ತಿತ್ವ ಅನ್ನೋದಕ್ಕೆ ಅರ್ಥವೇ ಇರೋದಿಲ್ಲ.. ಅವರೊಂತರಾ ನಾಯಿ ಮೊಲೆಯ ಹಾಲಿದ್ದಂತೆ.. ದೇವರ ನೈವಿದ್ಯಕ್ಕೂ ಅಲ್ಲ, ಅಭಿಷೇಕಕ್ಕೂ ಅಲ್ಲ, ಕೊನೆಗೆ ಕುಡಿದು ಹೊಟ್ಟೆ ತುಂಬಿಸಿಕೊಳ್ಳೋದಕ್ಕೂ ಅಲ್ಲದ ವ್ಯರ್ಥ ಕ್ಷೀರ..
ಅವರೊಂದಿಗೆ ನೀವು ಎಷ್ಟೇ ಬಡಿದಾಡಿದ್ರೂ ನಿಮ್ಮಪ್ಪನಾಣೆ ಅವರನ್ನು ಬದಲಾಯಿಸೋಕೆ ಸಾಧ್ಯ ಇಲ್ಲ.. ಅವರಿಗೆ ಕೆಲಸ ಆಗಬೇಕಂದ್ರೆ ನೀವು ಅವರ ಪಾಲಿನ ನಿಜದೈವ, ಕೆಲಸ ಆದ ಮೇಲೆ ನೀವು ಕಾಲ ಕೆಳಗಿನ ಕಸಕ್ಕಿಂತಲೂ ಕಡೆ..
ಆದರೂ ಅವರು ನಿಮ್ಮ ಸುತ್ತ ಸುತ್ತುತ್ತಲೇ ಇರುತ್ತಾರೆ ತಮ್ಮ ರತಿಯನ್ನು ತಾವೇ ತೃಪ್ತಿ ಪಡಿಸಿಕೊಳ್ಳುತ್ತಾ, ತಮಗೆ ತಾವೆ ಪರಾಕು ಹೇಳಿಕೊಳ್ಳುತ್ತಾ, ತಮ್ಮನ್ನು ತಾವೇ ಸರ್ವಶ್ರೇಷ್ಟರೆಂದುಕೊಳ್ಳುತ್ತಾ, ಮುಟ್ಟುಬಾರದ ಜಾಗಗಳನ್ನು ಮುಟ್ಟಿ ತಟ್ಟಿ ತುರುಸಿಕೊಳ್ಳುತ್ತಿರುತ್ತಾರೆ..
ಅವರಿಂದ ನಿಮಗೆ ಎಲ್ಲಾದರೂ ನಯಾಪೈಸೆ ಉಪಕಾರ ಅಂತಾದ್ರೆ ಅದರ ಹಿಂದೆಯೇ ನಿಮ್ಮನ್ನು ಸಾರ್ವಜನಿಕವಾಗಿ ಉಪಕೃತಗೊಂಡವ ಅಂತ ಬೆರಳು ಮಾಡಿ ತೋರಿಸುವ ಆಶಾಡಭೂತಿ ಪ್ರೇತವದು..
ಅದಲ್ಲದಕ್ಕಿಂತ ದೊಡ್ಡ ಅಪಾಯವೆಂದರೇ ಅವರು ನಿಮ್ಮ ನಡುವೆಯೇ ಇದ್ದು ಕೊನೆಗೆ ನಿಮ್ಮತನದ ಮಧ್ಯೆಯೇ ಗೋಡೆ ಕಟ್ಟಿ ಬಿಡುತ್ತಾರೆ ಅಥವಾ ಕಂದಕ ತೋಡುತ್ತಾರೆ.. ಸಾಧ್ಯ ಆದರೆ ನಿಮ್ಮನ್ನು ಅದೇ ಕಂದಕಕ್ಕೆ ದೂಡಿ ಕೈ ತಟ್ಟಿ ವಿಕಟಹಾಸ ಮಾಡುತ್ತಾರೆ.. ಅಂತ ನೀಚ ವ್ಯೆಕ್ತಿಗಳು ಮಿತ್ರತ್ವ ಒತ್ತಟ್ಟಿಗಿರಲಿ ಶತ್ರುವಾಗಲೂ ಲಾಯಕ್ಕಲ್ಲ..
ಸಾಧ್ಯ ಆದರೆ ಅವರನ್ನು ದೂರವಿಡಿ; ಹತ್ತಿರ ಬಂದರೆ ಮುಖ ಸಿಂಡರಿಸಿ ಅಸಹ್ಯ ಪಟ್ಟುಕೊಳ್ಳಿ ಅವರು ಅಂತಹ ಹೇಸಿಗೆಯ ಜಿಗುಟು ಜಿಡ್ಡು..
ಇಷ್ಟೆಲ್ಲಾ ಹೇಳಿದ ಬಳಿಕವಾದ್ರೂ ನಿಮ್ಮ ಬದುಕಿನಲ್ಲಿ ಅಂತಹವರೇನಾದ್ರೂ ಬಂದ್ರೆ; ಅವರನ್ನು ಒರೆಸಿ ಮುದ್ದೆ ಮಾಡಿ ಎಸೆಯುವ ಟಿಷ್ಯೂ ಪೇಪರ್ ಅಂತ ಪರಿಗಣಿಸಿ..
ಶುಭಂ
-ವಿಭಾ

ನನಗನ್ನಿಸಿದ್ದು ಇಷ್ಟು ನೋಡಿ:


1. ನಿನಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಿಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನೀವು ಹೊರಗೆ ಹಂಚುತ್ತೀರೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ತಿರುಗಿ ಲಭಿಸುತ್ತದೆ
***
2. ಎಲ್ಲಿಯವರೆಗೆ ನೀವು ನಡೆವ ದಾರಿ ಸತ್ಯವೆಂದು ಭಾವಿಸುತ್ತೀರೋ ಅಲ್ಲಿಯವರೆಗೂ ಜಗತ್ತು ಆ ಸತ್ಯದ ಪ್ರಾಮಾಣಿಕ ಪ್ರತಿನಿಧಿಯಾಗಿ ನಿಮಗೆ ಗೋಚರಿಸುತ್ತದೆ
***
3. ಸದಾ ಒಂದಿಲ್ಲೊಂದು ವಿಚಾರಗಳಿಗೆ ಕೊರಗುವವನು ಯಾವ ವಿಷಯಗಳನ್ನೂ ಸಮಾಧಾನದಿಂದ ಒಪ್ಪಲಾರ
***
4. ದೈಹಿಕವಾದ ಎಲ್ಲಾ ಸಂಬಂಧಗಳಿಗಿಂತ ಆತ್ಮದೊಂದಿಗೆ ಬೆರೆಯುವ ಸಂಬಂಧಗಳು ಬಹು ಸೂಕ್ಷ್ಮ ಹಾಗೂ ಮಹತ್ತರ
***
5. ನಿಮ್ಮಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ, ನೀವು ಬುದ್ಧಿಗೇಡಿ ಅಲ್ಪರಿಗೆ ಜೈಕಾರ ಹಾಕುತ್ತಿದ್ದರೆ ನಿಮ್ಮ ಪಾಂಡಿತ್ಯಕ್ಕೆ ಬೆಲೆ ಇರುವುದಿಲ್ಲ
***
6. ಭರವಸೆ ಹಾಗೂ ಆಶಾವಾದ ಅನ್ನುವುದು ಜೀವನವೆಂಬ ಮರುಭೂಮಿಯಲ್ಲಿ ಅಲ್ಲಲ್ಲಿ ಕಂಡುಬರುವ ಒಯಾಸಿಸ್ನಂತಹ ನೀರಿನ ಚಿಲುಮೆಗಳಿದ್ದಂತೆ
7. ಕಳೆದುಕೊಂಡ ಇಂದಿನ ಸಂತೋಷವನ್ನು ನಾಳೆ ನೆನೆದು ಕೊರಗುವುದು ನಿಜವಾದ ಮೂರ್ಖತನ
***
8. ಆಗಾಗ ಅಚಾತುರ್ಯವಾಗುತ್ತಿದ್ದಾಗ ಮಾತ್ರ ಬದುಕಲ್ಲಿ ಹೊಸದೊಂದು ಆಯಾಮ ಆವಿಷ್ಕರಿಸಲು ಸಾಧ್ಯ
***
9. ಹೊಸ ನೀರು ಉಕ್ಕಿ ಹರಿಸಲು ಹಳೆಯ ನೀರನ್ನು ಹರಿಯಗೊಡಲೇಬೇಕು
***
10. ಬದುಕಿನಲ್ಲಿ ಸಂಭವಿಸುವ ನಿರಂತರ ಭಾವನಾತ್ಮಕ ಆಘಾತಗಳು ಎಂಥ ನಿರ್ಭಲ ಮನಸ್ಥಿತಿಯ ಜನರನ್ನೂ ಗಟ್ಟಿಗೊಳಿಸುತ್ತದೆ
***
11. ಬದುಕಿನಲ್ಲಿ ನೂರು ದಾರಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದರೂ ಆ ಎಲ್ಲಾ ದಾರಿಗಳ ಅಂತ್ಯ ಮಾತ್ರ ಸಾವು ಅನ್ನುವ ಒಂದೇ ದಿಕ್ಕಿನದ್ದಾಗಿರುತ್ತದೆ
***
12. ಸದಾ ಅಮಂಗಳ ನುಡಿಯುವ ನೂರು ಜನ ಆಪ್ತಮಿತ್ರರುಗಳಿಗಿಂತ ಅಪರೂಪಕ್ಕೊಮ್ಮೆ ನಿಮ್ಮ ತಾಕತ್ತಿನ ಬಗ್ಗೆ ಮೆಚ್ಚುಗೆ ಸೂಸುವ ಒಬ್ಬ ಬದ್ಧ ಶತ್ರು ಉತ್ತಮ
***
13. ಕಿವುಡನ ಬಳಿ ಕುಳಿತು ಸುದೀರ್ಘ ಉಪನ್ಯಾಸ ಬಿಗಿದರೂ ತೊಂದರೆಯಿಲ್ಲ; ಕುರುಡನ ಬಳಿ ಮಾರ್ಗದರ್ಶನ ಬೇಡದಿರಿ
-ವಿಭಾ
***

ಹೇಗಿದೆ ಸ್ವಾಮಿ ಬದುಕು..???

ಪ್ರಶ್ನೆ: ಹೇಗಿದೆ ಸ್ವಾಮಿ ಬದುಕು..???
ಉತ್ತರ: ಆರಕ್ಕೇರೆನು ನಾ ಮೂರಕ್ಕಿಳಿಯೆ!
ಅತ್ತ ಮೊಲದ ತೀವ್ರವೂ ಇಲ್ಲದ ಇತ್ತ ಆಮೆಯ ಮಂದವೂ ಅಲ್ಲದ!!
ಮತ್ತದೇ ಎಂದಿನ ಅದೇ ವೇಗ, ಅದೇ ಓಘ!!
ಹತ್ತಿಯೂ ಹತ್ತದೆ-ಕುಸಿದರೂ ಬೀಳದೆ,
ಬಿದ್ದರೂ ತೋರಿಸಿಕೊಳ್ಳದೆ;
ಮಲಗಿದರೂ ಎಚ್ಚರಾವಸ್ಥೆಯಲ್ಲಿರುವಂತಿದ್ದು!!
ಸಪ್ತ ದ್ವೀಪಗಳನ್ನಲೆದರೂ ಮಾತೃಭೂಮಿಯಲ್ಲಿ ಹುದುಗಿಕೊಂಡಂತೆ!
ಅಹಂ ಹತ್ತಿಸಿಕೊಳ್ಳದೆ-ಪೂರ್ವಾಗ್ರಹದ ಪ್ರಪಾತಕ್ಕಿಳಿಯದೆ,
ದುರಭಿಮಾನದ ದಾಸನಾಗದೆ-ಸ್ವಾಭಿಮಾನವ ಬಿಟ್ಟುಕೊಡದೇ,
ಪೌರ್ಣಮಿಯ ಬೆಳದಿಂಗಳಿಗೆ ಛತ್ರಿ ಅಡ್ಡ ಹಿಡಿಯದೆ,
ಹುಳಿ ಮೊಸರು ತಿನ್ನದೆ-ತಿಂದರೂ ಅದನ್ನು ಅಮಾಯಕ ಮೇಕೆಗಳ ಮುಖಕ್ಕೆ ಒರೆಸದೆ
ಆರು ಮೂರರಾಟದಲ್ಲಿ ಅತ್ತೆ-ಸೊಸೆಯರ ಪರ ವಹಿಸದೆ,
ಗೆದ್ದ ಹೋರಿಯ ಬಾಲದ ಚುಂಗನ್ನು ಬೆರಳಿಗೆ ಸಿಕ್ಕಿಸಿಕೊಳ್ಳದೆ:
ಅವಕಾಶವಾದಿ ಸಮಯಸಾಧಕರಿಗೆ ಜೈ ಹುಜೂರ್ ಅನ್ನದೆ
ಪರಾಕು ಪ್ರಭುಗಳಿಗೆ ತಲೆ ತಗ್ಗಿಸದೆ- ಮಂಡಿ ಊರಿ ನಡು ನೆಲಕ್ಕಿಡದೇ
ಪ್ರಸಿದ್ಧಿಯ ಅಫೀಮಿನ ನಶೆ ನೆತ್ತಿಗೇರಿಸಿಕೊಳ್ಳದೇ-ಜನಪ್ರಿಯತೆ ಅಮಲಿನಲ್ಲಿ ತೇಲಿ ಓಲಾಡದೆ
ಬದುಕಿನ ಅಂಗಳದಲ್ಲಿ ನಿಂತು ಸಾವಿನ ಮನೆಯ ಕದ ತಟ್ಟದೇ
ಸಾವಿನ ಮಹಾಸಾಗರದ ಮುಳುಗಿಯೂ ಬದುಕಿನ ಹಾಯಿದೋಣಿಗೆ ಕಾಯುತ್ತಾ
ನಗುವಿನ ನೆರಳಿನಲ್ಲಿ ಕಂಬನಿಗಳ ತೇವ ಒರೆಸುತ್ತಾ
ಮಡುಗಟ್ಟಿದ ದುಃಖಧಾರೆಯಲ್ಲೂ ಚಿಕ್ಕ ಆಶಾವಾದದ ಚಳಕು ಅರಸುತ್ತಾ
ಹಸಿವು, ಬಾಯಾರಿಕೆ, ದಣಿವು, ನಿದ್ರೆ, ಮೈಥುನ, ಸ್ವಪ್ನ ದಂತಹ ಷಟ್
ದಿವ್ಯಗಳೊಂದಿಗೆ ನಿತ್ಯವೂ ಜೂಟಾಟ ಆಡುತ್ತಾ
..........
..........
..........
ಇಷ್ಟರ ಮಟ್ಟಿಗೆ ಇದ್ದೀನಿ ನೋಡಿ ಸ್ವಾಮಿ..
(ಇನ್ಮುಂದೆ ನಂಗೆ ಯಾರೂ ಹೇಗಿದೆ ಸ್ವಾಮಿ ಬದುಕು ಅನ್ನುವ ಪ್ರಶ್ನೆಯನ್ನು ಅಪ್ಪಿ ತಪ್ಪಿಯೂ ಕೇಳುವುದಿಲ್ಲ)
-ವಿಭಾ

ಇದು ವಿಶ್ವಾತ್ಮಕಥೆ:

ಪ್ರಪಂಚಕ್ಕೆಒಂದು ಆತ್ಮವಿದೆ.. ಅನಂತ ವಿಶ್ವದಲ್ಲಿ ಅಡಗಿರುವ ಎಲ್ಲವೂ ನಮ್ಮ ವರ್ತನೆಯನ್ನು ಬಲ್ಲವು.. ಆದರೆ ಮನುಷ್ಯನಿಂದ ವಿಶ್ವದ ಆತ್ಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ..!!
ಯಾವ ಮನುಷ್ಯ ಪ್ರಪಂಚದ ಆತ್ಮವನ್ನು ಹೊಕ್ಕು ಅನಂತದಾಳವನ್ನು ಅಳೆಯುತ್ತಾನೋ ಆತ ಚಿರಂಜೀವಿಯಾಗಿ ಉಳಿಯುತ್ತಾನೆ..!!
ವಿಶ್ವಾತ್ಮದ ಚಿಂತನೆಗೈದ ಮೊದಲ ಪುರುಷ ಶ್ರೀಕೃಷ್ಣ.. ಅದನ್ನೇ ಕೃಷ್ಣ ಗೀತೆಯ ಮೂಲಕ ಅರ್ಜುನನಿಗೆ ಅರ್ಥ ಮಾಡಿಸಲು ಹೋಗುತ್ತಾನೆ.. ಆದರೆ ಕೃಷ್ಣನಿಗಿಂತ ಮುಂಚೆ ವಿಶ್ವಾತ್ಮ ಸಂಭವನೀಯತೆಯ ಅರಿವಿದ್ದಿದ್ದು ಸೂರ್ಯನಿಗೆ ಅನ್ನುವ ಪೌರಾಣಿಕ ನಂಬಿಕೆ ನಮ್ಮಲ್ಲಿದೆ..!!
ಹಿಮಾಲಯದಲ್ಲಿ ತಪಸ್ಸು ಮಾಡುವ ವಿಕ್ಷಿಪ್ತ ಸಾಧುಗಳಿಗೆ ಪ್ರಪಂಚದ ಆತ್ಮವನ್ನು ಅರಿಯುವ ಸಾಮರ್ಥ್ಯವಿದೆ ಅನ್ನುವವರಿದ್ದಾರೆ.. ದಕ್ಷಿಣೇಶ್ವರದ ಕಾಳಿಯ ಉಪಾಸಕ ರಾಮಕೃಷ್ಣ ಪರಮಹಂಸರಿಗೆ ಅನಂತ ವಿಸ್ತಾರದೊಳಕ್ಕೆ ಚಲಿಸಬಲ್ಲ ತಾಕತ್ತು ಇತ್ತಂತೆ..!!
ಅವರು ತಮ್ಮ ಪ್ರಿಯ ಶಿಷ್ಯ ನರೇಂದ್ರನಿಗೆ ಈ ದಿವ್ಯ ಜ್ಞಾನ ಉಪದೇಶಿಸಿದ್ರು ಅನ್ನುವುದನ್ನು ಕೇಳಿದ್ದೇನೆ. ಆದರೆ ವಿವೇಕಾನಂದರು ಮೂರು ಮೂರು ಮಹಾಸಾಗರಗಳು ಸೇರುವ ಕನ್ಯಾಕುಮಾರಿಯ ಕಡಲನ್ನು ಈಜಿ ತಮ್ಮ ತಪೋಭೂಮಿಯನ್ನು ತಲುಪುತ್ತಿದ್ದರು ಅಂತ ಕೇಳಿದಾಗ ನಿಜಕ್ಕೂ ವಿಶ್ವಾತ್ಮ ಜ್ಞಾನದ ಅರಿವು ವಿವೇಕರಿಗೆ ಖಂಡಿತಾ ಇದ್ದಿರಬೇಕು ಅನ್ನುವ ನಂಬಿಕೆ ಹುಟ್ಟುತ್ತದೆ..!!
ಈ ವಿಶ್ವಾತ್ಮ ದೃಷ್ಟಿಕೋನ ಹಾಗೂ ಅನಂತದ ಒಳಹೊಕ್ಕು ಪ್ರಪಂಚದ ವರ್ತನೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಸಿದ್ದಿ ನಮ್ಮ ಭಾರತೀಯ ಮೂಲದ್ದು..!!
ಎಷ್ಟೋ ಕಾಲದ ಹಿಂದೆಯೇ ರಚನೆಯಾದ ಮಹಾಭಾರತದ ಗೀತೋಪನಿಷದ್ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ..!!
ಆದರೆ ಈ ವಿಶ್ವಾತ್ಮ ಕಥೆ ಅಥವಾ ಕಾಸ್ಮೋಟಿಸಂ ಅಥವಾ ಯುನಿವರ್ಸಲ್ ಕಾಸ್ಮಿಕ್ ಥಿಯರಿ ಅನ್ನುವ ಕಾನ್ಸೆಪ್ಟ್ ಅನ್ನು ಚೀನಾದವರೋ ಜಪಾನಿಯರೋ ತಮ್ಮ ಪ್ರಾಕ್ಟೀಸ್ ನಲ್ಲಿ ಬಳಸಿಕೊಂಡಾಗ ಅಥವಾ ಪಾಲೋ ಕೋಯೆಲೋರಂತಹ ಕೃತಿಕಾರ ದಿ ಆಲ್ ಕೆಮಿಸ್ಟ್ ನಂತಹ ಸುಪ್ರಸಿದ್ಧ ಗ್ರಂಥದ ಮೂಲ ಆಕರವನ್ನಾಗಿಸಿಕೊಂಡಾಗ ನಮಗೆ ಗ್ರೇಟ್ ಅನ್ನಿಸುತ್ತದೆ..
ಎಷ್ಟಾದ್ರೂ ಹಿತ್ತಲ ಗಿಡ ಮದ್ದಲ್ಲ ನೋಡಿ..!!
-ವಿಭಾ

ಇದಕ್ಕಿಂತ ಮೂರ್ಖತನ ಇನ್ಯಾವುದಿದೆ:

ಆಂಧ್ರದಲ್ಲಿ ಬಾಹುಬಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ಮಂದಿರದಲ್ಲಿ ಮೇಕೆಯನ್ನು ಬಲಿ ಕೊಟ್ಟ ಅಭಿಮಾನಿಗಳು.. ಇದಕ್ಕಿಂತ ಅತಿರೇಕ ಇನ್ಯಾವುದು ಬೇಕು ಹೇಳಿ.. ಯಾವನೋ ಸ್ಟಾರ್ ಚಿತ್ರ ಯಶಸ್ವಿಯಾಗಲು ಅಮಾಯಕ ಪ್ರಾಣವೊಂದರ ಹರಣ ಮಾಡಿದ್ದಕ್ಕಿಂತ ಮೂರ್ಖತನ ಇನ್ಯಾವುದಿದೆ.. ಬುಲ್ ಶಿಟ್..

ಹೌ ಕ್ಯಾನ್ ಐ ಮಿಸ್ ಯೂ:

ನೀನು ಒಳ ಬಾಗಿಲ ಮೇಲೆ ಸುಮ್ಮನೆ ಹಾಗೇ ಲಿಪ್ ಸ್ಟಿಕ್ ನಲ್ಲಿ ಬರೆದಿಟ್ಟು ಹೋದ don't miss ಮಿ ಹಾಗೇ ಇದೆ..
ಮೊನ್ನೆ ಯಾಕೋ ಅದನ್ನು ದಿಟ್ಟಿಸಿ ನೋಡಬೇಕು ಅನ್ನಿಸಿತು; ನೋಡಿದೆ
ನಿನ್ನೆಯೂ ನೋಡಿದೆ, ಇಂದೂ ಮತ್ತೆ ನೋಡಿದೆ
how can i miss you..!!!
because...
ನೀನು ನನ್ನ ಜೀವದಲ್ಲಿ-ಭಾವದಲ್ಲಿ
ಚಿತ್ತದಲ್ಲಿ-ಬುದ್ದಿಯಲ್ಲಿ
ದೇಹದಲ್ಲಿ-ರಕ್ತದಲ್ಲಿ
ಪ್ರಜ್ಞೆಯಲ್ಲಿ-ಸುಪ್ತದಲ್ಲಿ
ಹೃದಯದಲ್ಲಿ-ಧಮನಿಗಳಲಿ
ಕನಸಿನಲ್ಲಿ-ಕನವರಿಕೆಯಲ್ಲಿ
ಕಥೆಯಲ್ಲಿ-ಕೃತಿಯಲ್ಲಿ
ಕಾವ್ಯದಲ್ಲಿ-ಪದ್ಯದ ವರ್ಣನೆಗಳಲಿ
ಚಿತ್ರದಲ್ಲಿ-ಬಣ್ಣಗಳಲ್ಲಿ
ಬಿಂಬದಲ್ಲಿ-ಅನುರಣದಲ್ಲಿ
ಅನುಕರಣೆಯಲ್ಲಿ-ಸ್ವಗತದಲ್ಲಿ
ಧೋರಣೆಗಳಲ್ಲಿ-ವ್ಯಕ್ತಿತ್ವದಲ್ಲಿ
ನಿಲುವಿನಲ್ಲಿ-ಅಭಿಮತಗಳಲ್ಲಿ
ಮಾತಿನಲ್ಲಿ-ಕಾರ್ಯದಲ್ಲಿ
ಖುಷಿಯಲ್ಲಿ-ನಗುವಿನಲ್ಲಿ
ಮೌನದಲ್ಲಿ-ದುಃಖದಲ್ಲಿ
ವಾಂಛೆಯಲ್ಲಿ-ವಿರಸದಲ್ಲಿ
ಕಲಹದಲ್ಲಿ-ಮಿಲನದಲ್ಲಿ
ಚರ್ಚೆಯಲ್ಲಿ-ತರ್ಕದಲ್ಲಿ
ವಾದದಲ್ಲಿ-ವೈರುಧ್ಯಗಳಲ್ಲಿ
ಆಳದಾಳದ ನೆನಪಿನಲ್ಲಿ
ಮರೆಯಲಿಚ್ಛಿಸುವ ಮರೆವಿನಲ್ಲೂ ಮಿಳಿತಗೊಂಡಿರುವೆ
ಸರ್ವಾಂತರ್ಯಾಮಿ ಪರಮಾತ್ಮನೊಂದಿಗೆ ಬೆಸೆದುಕೊಂಡ ಆತ್ಮ ಎಂದಿಗಾದರೂ ಮಿಸ್ ಮಾಡಿಕೊಳ್ಳಲಾದೀತಾ..???
I never miss you because you are attached me and it will be tagged forever..
-ವಿಭಾ
***

ನೀ ಹತ್ತಿರ ಬರಬೇಡ ನಿಹಾರಿಕೆ ಮಾಲೆ ತೊಟ್ಟವಳೆ:

ನಿತ್ಯವೂ ಮಲಗುವ ಮುನ್ನ ನಿಹಾರಿಕೆ ಮಾಲೆ ತೊಟ್ಟ ಸುಂದರಿಯದ್ದೇ ಧ್ಯಾನ. ಎಂದಾದರೊಂದಿನ ಬಂದೇ ಬರುವಳೆನ್ನುವ ನಿರೀಕ್ಷೆ ಕೊನೆಗೂ ಅಂದು ನೆರವೇರಿತು..
ಒಂದು ರಾತ್ರಿ ಬಂದಳವಳು, ಅಂದು ಹುಣ್ಣಿಮೆ..
ಅವಳು ತೊಟ್ಟಿದ್ದು ನಾನು ಬಯಸುತ್ತಿದ್ದ ನಿಹಾರಿಕೆಗಳದ್ದೇ ಮಾಲೆ.. ಒಂದೆಡೆ ಪೌರ್ಣಿಮಿಯ ಬೆಳದಿಂಗಳು ಇನ್ನೊಂದೆಡೆ ಸುಂದರಿ ಕೊರಳಲ್ಲಿದ್ದ ನಕ್ಷತ್ರ ಮಾಲೆಯ ಕಾಂತಿ..
ಅವಳ ಮುಖ ಕಾಣಿಸುತ್ತಲೇ ಇಲ್ಲ.. ಅಷ್ಟರಲ್ಲಿ ಕಾರ್ಮೋಡ ಸೈನ್ಯ ನುಗ್ಗಿ ಸುಂದರ ಬೆಳ್ಳಿ ಚಂದಿರನನ್ನು ನುಂಗಿಹಾಕಿತು.. ಆಗಷ್ಟೇ ಆಗಸದಲ್ಲಿ ಕಪ್ಪು ಹೊದಿಕೆ, ಸುದೈವವಶಾತ್ ನನ್ನ ಸ್ವಪ್ನ ಸುಂದರಿಯ ಮುಖದ ಕೆಲವು ಭಾಗ ದರ್ಶನವಾಗತೊಡಗಿತು..ಚೆಂದವಿದ್ದಳು, ಅದೇನೋ ಪಿಸುಗುಡತೊಡಗಿದಳು..
ಹತ್ತಿರ ಬಂದು ಕಿವಿಯಲ್ಲಿ ಹೇಳೆಂದೆ.. ಹೊರಗೆ ಧಾರಾಕಾರ ಕುಂಬದ್ರೋಣ ಮಳೆ ಶುರುವಾಯ್ತು.. ಭೋರ್ಗರೆವ ಗಾಳಿಯ ಸದ್ದು, ಕಣ್ಣು ಕೋರೈಸುವ ಮಿಂಚು, ಅಬ್ಬರದ ಗುಡುಗು ಸಿಡಿಲುಗಳ ಮೊರೆತ.. ಇತ್ತ ಸ್ವಪ್ನ ಕನ್ನಿಕೆ ಹೇಳುವ ಪಿಸುಮಾತು ಕೇಳುತ್ತಿಲ್ಲ ಅನ್ನುವ ಅಸಮಧಾನ ನನಗೆ..
ಹತ್ತಿರ ಹೋಗಲು ಅನುವಾದೆ.. ಅಪ್ಪಿಕೊಂಡು ಅವಳ ತುಟಿಗೆ ಕಿವಿಯೊಡ್ಡುವ ಯೋಚನೆ.. ಆಗಲಾದ್ರೂ ಅವಳ ಮಾತುಗಳು ಮನಸಿಗಿಳಿಯುತ್ತವಾ ನೋಡುವ..
ಹತ್ತಿರ ಹತ್ತಿರ ಹೋಗತೊಡಗಿದೆ.. ಅವಳು ಹಿಂದೆ ಹಿಂದೆ ಸರಿಯತೊಡಗಿದಳು.. ಕಂಪಿಸುತ್ತಿದ್ದ ತುಟಿಗಳಿಂದ ಬರಬೇಡ ಬರಬೇಡ ಅನ್ನುವ ಗೋಗರೆತ ಶುರುವಿಟ್ಟುಕೊಂಡಳು..
"ಯಾಕೆ ಬರಬಾರದು..? ನಿನ್ನ ಮುಟ್ಟಬಾರದೇ..? ಅಪ್ಪಬಾರದೆ..? ನಿನ್ನ ಪಿಸು ಮಾತುಗಳಿಗೆ ಧ್ವನಿಯಾಗಬಾರದೇ..? ಯಾರು ನೀನು..? ನನ್ನ ದಿವ್ಯ ಕನಸಿನಲ್ಲಿ ನಿತ್ಯವೂ ಬರುತ್ತಿದ್ದವಳೇ ತಾನೇ..? ನೀನು ಕಿನ್ನರಿಯೇ? ಯಕ್ಷಿಣಿಯೇ? ಮಾಯಾವಿಯೇ? ಗಂಧರ್ವ? ಕನ್ಯಯೇ? ದೇವತೆಯೇ?" ನಾನಂದೆ
"ಮುಟ್ಟಿದರೇ ಸುಟ್ಟು ಭಸ್ಮವಾಗುತ್ತಿ..!! ನಾನು ಧರಿಸಿದ್ದು ಸಹಸ್ರಾರು ಪಟ್ಟು ಶಕ್ತಿಯುತ ಕಾಂತಿಪುಂಜಗಳ ನಿಹಾರಿಕೆಗಳ ಮಾಲೆ..!!" ಅವಳಂದಳು..
ನಾನಂದೆ, "ಮತ್ಯಾಕೆ ಅದನ್ನು ತೊಟ್ಟು ಬಂದೆ..?"
ಅವಳಂದಳು, :ನೀನೇ ಕನಸಿನಲ್ಲಿ ಕನವರಿಸುತ್ತಿದ್ದೆಯಲ್ಲ.."
....
....
....
....
"ಬಾ ಅಭಿಸಾರಿಕೆ ಒಮ್ಮೆ ಎನ್ನ ಕನಸಿನಲಿ
ಬರುವ ಮುನ್ನ ತೊಟ್ಟು ಬಿಡು ನಿಹಾರಿಕೆಯ ಮಾಲೆಯಾ
ಹೊಳೆವ ಕಾಂತಿ ನಕ್ಷತ್ರಗಳ ಸರವ ಮಾಡಿ ಪೋಣಿಸು
ನಿನ್ನ ಮೊಗವ ವಿಘ್ನವಿರದೆ ದಿಟ್ಟಿಸುವೆನು ಸಹಕರಿಸು
ಪ್ರಕಾಶ ಮಾನ ಜ್ವಾಜಲ್ಯವಿರಲಿ ನಿನ್ನ ಪ್ರಭೆಯ ಸುತ್ತಾ
ಅನಂತ ದಿವ್ಯ ಜ್ವಾಲೆ ಬೆಳಕು ಮಿನುಗಿ ಮೆರೆಯುವತ್ತ"

"ನಿನ್ನ ಇಚ್ಛೆಯಂತೆ ನಾನು ನಕ್ಷತ್ರಗಳನ್ನೇ ಪೋಣಿಸಿ ಮಾಲೆ ಮಾಡಿ ತೊಟ್ಟು ಬಂದಿದ್ದೀನಿ ನೋಡು.." ಅವಳ ಮಾತು ಅನುರಣಿಸಿದಂತಾಯ್ತು..
"ನೀನು ಕಾಣಿಸುತ್ತಿಲ್ಲ ನನಗೆ, ಕಣ್ಣು ಕುಕ್ಕುವ ಕಾಂತಿ, ಸುಡುಸುಡುವ ಕಿರಣಗಳು.. ನೀನು ನನ್ನ ಸ್ವಪ್ನ ಸುಂದರಿಯಲ್ಲ.. ನೀನು ರಾಕ್ಷಿಸಿ..! ನೀನು ಮಾಯಾವಿನಿ..! ನನಗೆ ಕೈಗೆಟುಕದ ನೀನು ನನಗೆ ಬೇಡ.. ಹೋಗು.. ಹೊರಟು ಹೋಗು.. ಮತ್ತೆಂದಿಗೂ ನನ್ನ ಕಣ್ಣ ಮುಂದೆ ಬರಬೇಡ ತೊಲಗು.." ನಾನು ಅಬ್ಬರಿಸುತ್ತಲೇ ಇದ್ದೆ.. ನನ್ನದೇ ಮಾತುಗಳು ಎದುರಿಗಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತಿತ್ತು..
ಅವಳು ಮಾಯವಾಗಿದ್ದಳು.. ಹೊರಗೆ ಸುರಿದ ಮಳೆ ನಿಂತಿತ್ತು.. ಸೂರಿನಿಂದ ಹನಿಗಳು ಸದ್ದು ಮಾಡುತ್ತಾ ಅಂಗಳಕ್ಕೆ ಹನಿಕುತ್ತಿತ್ತು.. ನಿಧಾನವಾಗಿ ಮೋಡ ಚದುರುತ್ತಿತ್ತು.. ನಿರ್ಮಲವಾಗುತ್ತಿದ್ದ ಆಗಸವ ನೋಡಿದರೆ, ಮತ್ತೆ ಚಂದ್ರನ ಒಡ್ಡೋಲಗ ಕಳೆ ಕಟ್ಟತೊಡಗಿತ್ತು.. ಮತ್ತೆ ಸೋಜಿಗ ಅನ್ನುವಂತೆ ಚಂದ್ರನೊಳಗೆ ಕಾಣಿಸಿದ ಬಿಂಬ ಅವಳನ್ನೇ ಹೋಲುತ್ತಿತ್ತು..
-ವಿಭಾ
***

ಮುತ್ತಿನಂತ ಮಾತುಗಳು:


-ವಿಪ್ರವಿಶ್ವತ್,
1. ಭರವಸೆ ಹಾಗೂ ಆಶಾವಾದ ಅನ್ನುವುದು ಜೀವನವೆಂಬ ಮರುಭೂಮಿಯಲ್ಲಿ ಅಲ್ಲಲ್ಲಿ ಕಂಡುಬರುವ ಒಯಾಸಿಸ್ನಂತಹ ನೀರಿನ ಚಿಲುಮೆಗಳಿದ್ದಂತೆ
***
2. ಕಳೆದುಕೊಂಡ ಇಂದಿನ ಸಂತೋಷವನ್ನು ನಾಳೆ ನೆನೆದು ಕೊರಗುವುದು ನಿಜವಾದ ಮೂರ್ಖತನ
***
3. ಆಗಾಗ ಅಚಾತುರ್ಯವಾಗುತ್ತಿದ್ದಾಗ ಮಾತ್ರ ಬದುಕಲ್ಲಿ ಹೊಸದೊಂದು ಆಯಾಮ ಆವಿಷ್ಕರಿಸಲು ಸಾಧ್ಯ
***
4. ಹೊಸ ನೀರು ಉಕ್ಕಿ ಹರಿಸಲು ಹಳೆಯ ನೀರನ್ನು ಹರಿಯಗೊಡಲೇಬೇಕು
***
5. ಬದುಕಿನಲ್ಲಿ ಸಂಭವಿಸುವ ನಿರಂತರ ಭಾವನಾತ್ಮಕ ಆಘಾತಗಳು ಎಂಥ ನಿರ್ಭಲ ಮನಸ್ಥಿತಿಯ ಜನರನ್ನೂ ಗಟ್ಟಿಗೊಳಿಸುತ್ತದೆ
***
6. ನಮ್ಮ ನಿಲುವು ಹಾಗೂ ಧೋರಣೆಗಳು ಬಲವಾಗಿದ್ದಾಗ ಮಾತ್ರ ಸಮುದಾಯ ನಮ್ಮನ್ನು ಪ್ರತ್ಯೇಕ ದೃಷ್ಟಿಯಲ್ಲಿ ಗೌರವದಿಂದ ಕಾಣುತ್ತದೆ
***
7. ಬದುಕಿನಲ್ಲಿ ನೂರು ದಾರಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದರೂ ಆ ಎಲ್ಲಾ ದಾರಿಗಳ ಅಂತ್ಯ ಮಾತ್ರ ಸಾವು ಅನ್ನುವ ಒಂದೇ ದಿಕ್ಕಿನದ್ದಾಗಿರುತ್ತದೆ
***
8. ಸದಾ ಅಮಂಗಳ ನುಡಿಯುವ ನೂರು ಜನ ಆಪ್ತಮಿತ್ರರುಗಳಿಗಿಂತ ಅಪರೂಪಕ್ಕೊಮ್ಮೆ ನಿಮ್ಮ ತಾಕತ್ತಿನ ಬಗ್ಗೆ ಮೆಚ್ಚುಗೆ ಸೂಸುವ ಒಬ್ಬ ಬದ್ಧ ಶತ್ರು ಉತ್ತಮ
***
9. ನಿನಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಿಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನೀವು ಹೊರಗೆ ಹಂಚುತ್ತೀರೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ತಿರುಗಿ ಲಭಿಸುತ್ತದೆ
***
10. ನೀವು ಸ್ವಚ್ಛ ಬಟ್ಟೆ ಧರಿಸಿಕೊಂಡಿದ್ದರೇ ನಿಮ್ಮ ಸುತ್ತಲೇ ಇರುವ, ನಿಮ್ಮ ಮೇಲೆ ಕೊಚ್ಚೆ ಎರಚುವವರ ಬಗ್ಗೆ ಎಚ್ಚರ
***
11. ಬುದ್ದಿ ಹಾಗೂ ಪ್ರಜ್ಞೆಗೆ ಗೋಚರಿಸದ ಎಷ್ಟೋ ಅವ್ಯಕ್ತ ಸಂಗತಿಗಳು ಆತ್ಮ ಹಾಗೂ ಭಾವದ ಕಣ್ಣಿಗೆ ಕಾಣಿಸುತ್ತವೆ
***
12. ಕಿರೀಟವಿಲ್ಲದ ಅರಸ, ಖತ್ತಿ ಇಲ್ಲದ ಕ್ಷತ್ರಿಯ, ತಕ್ಕಡಿ ಇಲ್ಲದ ವೈಶ್ಯ ಹೇಗೆ ಅರ್ಥಹೀನನೋ ಹಾಗೆಯೇ ವಿವೇಕವಿಲ್ಲದ ಪಂಡಿತ ಸಹ ಅರ್ಥಹೀನ
***
13. ಭಗ್ನಗೊಂಡ ಮನಸ್ಸಿಗೆ ನೂರು ಸಮಾಧಾನ ಸಂತೈಕೆಗಳಿಗಿಂತ ಒಂದು ಸಣ್ಣ ಭರವಸೆ ಹಾಗೂ ಆಶಾವಾದ ಅಗತ್ಯವಿರುತ್ತದೆ
***
14. ಕಾಸು ಕೊಟ್ಟು ಕಷ್ಟ ಪಡೆಯುವ ಸಿರಿವಂತನಿಗಿಂತ ಕಾಸೇ ಇಲ್ಲದ ನಿರ್ಗತಿಕ ಎಷ್ಟೋ ಉತ್ತಮ; ಕನಿಷ್ಟ ಪಕ್ಷ ಕಷ್ಟ ಖರೀದಿಸುವ ಗೋಳಿರುವುದಿಲ್ಲ
***
15. ಪ್ರತಿಯೊಂದು ಸಂಕಷ್ಟಗಳೂ ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುವ ಅತ್ಯಗತ್ಯ ಕ್ರಿಯೆ ಮಾತ್ರ; ಇದರಿಂದ ಬದುಕಿನ ಸವಾಲುಗಳನ್ನು ಎದುರಿಸುವುದು ಸುಲಭಸಾಧ್ಯ
***
16. ಅತಿ ಮಾತಾಡುವ ಮತಿಗೇಡಿಗಳ ಸಂಗಡ ನೂರು ದಿನ ಕಳೆಯುವುದಕ್ಕಿಂತ ಸೂಕ್ಷ್ಮಮತಿ ಜ್ಞಾನಿಗಳೊಂದಿಗೆ ಕಳೆಯುವ ಒಂದು ದಿನ ಅತ್ಯುತ್ತಮ
***
17. ಪರಿಪೂರ್ಣತೆಯ ಸಾಧನೆ ಒಂದು ನಿರಂತರ ತಪಸ್ಸಿನಂತೆ; ಒಮ್ಮೆಲೆ ಸಿದ್ಧಿಸುವುದಿಲ್ಲ ಹಾಗೂ ಸಿದ್ಧಿಯಾದ ನಂತರ ಮುಗಿಯುವಂತದ್ದೂ ಅಲ್ಲ
***
18. ಹೊಸದು ಕಟ್ಟುವ ಉತ್ಸಾಹದಲ್ಲಿ ಹಳೆಯದರ ಗತ ಚಾರಿತ್ರಿಕ ವೈಭವ ಮರೆಯಬಾರದು
***
19. ಪ್ರತಿಯೊಂದು ಅಸ್ತ್ರಗಳಿಗೂ ಪ್ರತಿಯಾದ ಪ್ರತ್ಯಾಸ್ತ್ರವಿದ್ದೇ ಇರುತ್ತದೆ; ಯಾವ ಅಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಪ್ರಯೋಗಿಸಬೇಕು ಅನ್ನುವ ಜ್ಞಾನ ಅತಿ ಮುಖ್ಯ
***
20. ಬದುಕುವ ಕಾಲದಲ್ಲಿ ಸಾವಿನ ಧ್ಯಾನ ಅಥವಾ ಸಾವಿನಂಚಿನಲ್ಲಿ ಬದುಕಿನ ಕನವರಿಕೆ ಎರಡೂ ವ್ಯರ್ಥ
***
21. ಯಾವುದೇ ಇತಿಹಾಸವಾದರೂ ಮತ್ತೆ ಮರುಕಳಿಸಬಹುದೇ ವಿನಃ ಹೊಸದಾಗಿ ಸೃಷ್ಟಿಯಾಗುವುದಿಲ್ಲ
***
-ವಿಭಾ

ಕ್ಷಮಿಸಿ ಇದು ಬಾಹುಬಲಿಯ ವಿಮರ್ಷೆ ಅಲ್ವೇ ಅಲ್ಲ:

ಪಲ್ಲವರ ವಿರುದ್ಧ ಕದಂಬರು ಸಂಘಟನೆ ಕಟ್ಟಿ ಯುದ್ಧ ಮಾಡಿ ತಮ್ಮ ರಾಜ್ಯ ವಾಪಾಸು ಪಡೆಯುವ ಕಥಾನಕವೇ 'ಮಯೂರ' ಕಾದಂಬರಿ. ತರಾಸು ಬರೆದ ಈ ಐತಿಹಾಸಿಕ ಕಾದಂಬರಿ ಅಣ್ಣಾವ್ರು ಮನೋಜ್ಞವಾಗಿ ನಟಿಸಿ ಸೂಪರ್ ಹಿಟ್ ಆಯಿತು, ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿತು..
ಅಮೀಶ್ ಪಟೇಲ್ ಬರೆದ 'ಮೆಲೂಹ', ಇತ್ತೀಚೆಗಿನ ಓದುಗರ ಗಮನ ಸೆಳೆದ ಶಿವನ ಕಥಾನಕ..ಮೆಲುಹದ ಅಂತ್ಯದಲ್ಲಿ ಕಾದಂಬರಿ ನಾಯಕ ನೀಲಕಂಠ ಚಂದ್ರವಂಶಿಗಳ ವಿರುದ್ಧ ಸೂರ್ಯವಂಶಿಗಳ ನೇತೃತ್ವ ವಹಿಸಿ ಯುದ್ಧಕ್ಕೆ ಹೋಗುತ್ತಾನೆ.. ನೀಲಕಂಠನ ಯುದ್ಧ ತಂತ್ರದಲ್ಲಿ ಹಣೆವ ವ್ಯೂಹವೇ ತ್ರಿಶೂಲ ವ್ಯೂಹ.. ಜೊತೆಗೆ ಒಮ್ಮೆಲೆ ಸಾಮೂಹಿಕವಾಗಿ ಶತ್ರುಗಳ ಮೇಲೆ ಸರಣಿ ಬಾಣ ಪ್ರಯೋಗ ಇದೇ ಕಾದಂಬರಿಯ ಕಥಾನಾಯಕನ ಯುದ್ಧನೀತಿಯ ವರ್ಣನೆಯಲ್ಲಿ ಉಲ್ಲೇಖವಾಗಿದೆ..
ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ವಿಶಿಷ್ಟ ಪ್ರಯತ್ನ 'ಯುಗಾನಿಕಿ ಒಕ್ಕಡು' ಸಿನಿಮಾ..ಕಾರ್ತಿಕ್, ರೀಮಾಸೇನ್ ಮುಖ್ಯ ತಾರಾಗಣದಲ್ಲಿ ನಟಿಸಿದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದು.. ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಪಾಂಡ್ಯ ವಂಶಜರು ಹಾಗೂ ಚೋಳ ಸೈನಿಕರ ನಡುವಿನ ಯುದ್ಧದಲ್ಲಿ ಗುಡ್ಡದ ಮೇಲೆ ನಿಂತು ಚೋಳ ಸೈನಿಕರು ಕಲ್ಲುಬಂಡೆಗಳನ್ನೇ ಶಸ್ತ್ರಾಸ್ತ್ರಗಳಂತೆ ಬಳಸಿ ಯುದ್ಧಕ್ಕೆ ಮುಂದಾಗುತ್ತಾರೆ..
***
ಈಗ ವಿಷಯ ಅರ್ಥ ಮಾಡಿಕೊಳ್ಳಿ.. ಬಾಹುಬಲಿ ಚಿತ್ರದ ಸೂಕ್ಷ್ಮ ಕಥೆ 'ಮಯೂರ'ದ ನಕಲಿನಂತಿದೆ ಆದರೆ ಅದರ ಕನ್ ಕ್ಲೂಷನ್ ಭಾಗ 2ಕ್ಕೆ 2016ರ ವರೆಗೆ ಕಾಯಬೇಕು..
ಬಾಹುಬಲಿ ಚಿತ್ರದ ಉತ್ತರಾರ್ಧದ ಯುದ್ಧದಲ್ಲಿ ಬಳಸಿಕೊಂಡ ತ್ರಿಶೂಲ ವ್ಯೂಹ ಹಾಗೂ ಬುಡಕಟ್ಟು ಸಮುದಾಯದ ಕಥಾನಾಯಕ (ಶಿವುಡು), ಅಮೀಶ್ ರ ಮೆಲೂಹ ಶಿವ ಸರಣಿಯಿಂದ ಪ್ರೇರಿತವಾದಂತಿದೆ.. (ಅಮೀಶ್ ರ ಮೆಲೂಹ, ಸೀಕ್ರೆಟ್ ಆಫ್ ನಾಗಾ ಹಾಗೂ ವೂಥ್ಸ್ ಆಫ್ ವಾಯುಪುತ್ರ ಕಾದಂಬರಿಗಳು ಶುದ್ಧಿ ಅನ್ನುವ ಬಾಲಿವುಡ್ ಚಿತ್ರವಾಗುತ್ತಿದೆ)
ಯುದ್ಧದ ದೃಶ್ಯದಲ್ಲೇ ಕಲ್ಲುಬಂಡೆಯನ್ನು ಶತ್ರು ಪಾಳೆಯದ ಮೇಲೆ ತೂರಿ ಬಿಡುವುದು 'ಯುಗಾನಿಕಿ' ಒಕ್ಕಡು ಚಿತ್ರದಿಂದ ಎರವಲು ಪಡೆದಂತಿದೆ..
ಉಳಿದಂತೆ ಚಿತ್ರದ ಮಾಹಿಷ್ಮತಿ ಸಾಮ್ರಾಜ್ಯದ ಸೆಟ್ಟಿಂಗ್ಸ್ ಹಾಲಿವುಡ್ ನ 'ಗೇಮ್ಸ್ ಆಫ್ ಥ್ರೋನ್' ಸರಣಿಯಿಂದ ಕಾಪಿ ಮಾಡಿದಂತಿದೆ..
'ಕಾಲಕೇಯ' ಅನ್ನುವ ರಾಕ್ಷಸನ ಸೈನ್ಯದೊಂದಿಗೆ ನಡೆವ ಮಹಾಯುದ್ಧ ಲಾರ್ಡ್ ಆಫ್ ರಿಂಗ್ಸ್ ಹಾಲಿವುಡ್ ಚಿತ್ರವನ್ನು ಕದ್ದು ಬಳಸಿಕೊಂಡಂತಿದೆ..
***
ಯಾರಿಗೂ ಗೊತ್ತಾಗದಂತೆ ಕದಿಯುವ ಕಲೆ ಗೊತ್ತಿರೋನೆ ಸೃಜನಾತ್ಮಕ ನಿರ್ದೇಶಕ.. ಇದು ಕಟು ವಿಮರ್ಷೆಯೋ, ವ್ಯಂಗ್ಯವೋ ಅಲ್ಲ.. ರಾಜಮೌಳಿ ಅನ್ನುವ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಬೇಕು ಅನ್ನೋದಾದ್ರೆ ದೃಷ್ಟಿಕೋನ ವಿಸ್ತಾರವಾಗಿರಬೇಕು.. ಹತ್ತು ಚಿತ್ರಗಳ ಅಂಗಗಳನ್ನು ಕದ್ದು ಒಂದೇ ಬೇಸನ್ ನಲ್ಲಿ ಹುರಿದು, ಬೇಯಿಸಿ, ಕುದಿಸಿ, ಕಾಯಿಸಿ ಉಂಡೆ ಮಾಡಿ ತಟ್ಟೆಯಲ್ಲಿಟ್ಟು ಕೊಟ್ಟರೂ ಜನ ಅದನ್ನು ಮೆಚ್ಚಿ ಬಹುಪರಾಕ್ ಹೇಳುತ್ತಾರೆ ಅನ್ನೋದಾದ್ರೆ, ಅದರ ಹಿಂದೆ ಇರಬಹುದಾದ ಶ್ರದ್ಧೆ ಹಾಗೂ ಕದ್ದ ವಸ್ತುಗಳನ್ನು ಸಲೀಸಾಗಿ ರೀಜನಾಲಿಟಿ ಹಾಗೂ ರಿಯಾಲಿಟಿಗೆ ಸಮನಾಗಿ ಫಿಕ್ಷನ್ ಗೆ ಜೋಡಿಸುವ ಕಲೆ ಸಿದ್ಧಿಸಿರಬೇಕು..
ಐ ಬಿಲೀವ್ ಈ ಸೂಪರ್ ಸ್ಪೆಷಾಲಿಟಿ ಆರ್ಟ್ ರಾಜಮೌಳಿ, ಶಂಕರ್, ಪುರಿ ಜಗನ್ನಾಥ್ ರಂತಹ ನಿರ್ದೇಶಕರಿಗೆ ಚೆನ್ನಾಗಿಯೇ ಒಲಿದಿದೆ..
***
ವಿ.ಸೂ: ಮತ್ತೆ ಸ್ಪಷ್ಟಪಡಿಸ್ತಿದ್ದೀನಿ ಇದು ಬಾಹುಬಲಿ ನೋಡಿದ ನಂತರ ನನಗನ್ನಿಸಿದ್ದೇ ವಿನಃ ಯಾವ ವಿಮರ್ಷೆಯೂ ಅಲ್ಲ
-ವಿಭಾ
***

ಪುಟ್ಕತೆ

ಆಗಿನ್ನೂ ಈ ಮಗ ಕಾನ್ವೆಂಟಿನಲ್ಲಿ ಸೆಕೆಂಡ್ ಸ್ಟಾಂಡರ್ಡ್ ಓದುತ್ತಿದ್ದ..
ಒಂದಿನ ಮನೆಗೆ ಬಂದವನೇ ಅಮ್ಮನಿಗೆ ಕೇಳಿದ "ಇವತ್ತು ಮಿಸ್ಸು, ಡೀ ಫಾರೆಸ್ಟರೇಷನ್ ಬಗ್ಗೆ ಪಾಠ ಮಾಡಿದ್ರು.. ಮರಗಳನ್ನು ಕಡಿದ್ರೆ ಮುಂದೆ ಭೂಮಿ ಮೇಲೆ ಮರಗಳೇ ಇರೋದಿಲ್ವಂತಲ್ಲಮ್ಮ.. ಅದಕ್ಕೆ ನಾವು ಮನೆ ಕಟ್ಟಿಸುವಾಗ ಮರದ ತೊಲೆ, ರೀಪು, ಪಕಾಸಿ ಹಾಕೋದು ಬೇಡ.. ಪಾಪ ಮರ ಕಡಿಯೋದು ಬೇಡ.. ಕಬ್ಬಿಣದ್ದು ಹಾಕಿಸೋಣ ಅಮ್ಮ.. ಅಪ್ಪನಿಗೆ ಹೇಳು ನೀನು.."
***
ಕೆಲವು ವರ್ಷಗಳ ಬಳಿಕ ಮನೆಯನ್ನೂ ಕಟ್ಟಿ ಆಯ್ತು. ಮನೆಗೆ ಮರದ್ದೇ ರೀಪು, ಪಕಾಸಿ, ತೊಲೆಗಳನ್ನೇ ಹಾಕಿ ಮೆಂಗಳೂರಿನ ಹೆಂಚು ಹೊದಿಸಲಾಯ್ತು..
ಮಗ ದೊಡ್ಡವನಾಗಿ ಜವಬ್ದಾರಿ ಹೊತ್ತು ದುಡಿಯತೊಡಗಿದ ಒಂದು ದಿನ ಮತ್ತೆ ಅಮ್ಮನನ್ನು ಕೇಳಿದ..
"ಅಮ್ಮಾ, ಮನೆ ರಿನೋವೇಶನ್ ಮಾಡಿಸಬೇಕು ಅಂತಿದ್ದೀನಿ.. ಹೊರಗಿನ ಕೋಣೆಗೆ ತಾರಸಿ ಸ್ಲಾಬ್ ಹಾಕಿಸೋಣ ಅಂದ್ಕೊಂಡಿದ್ದೀನಿ.. ಆಮೇಲೆ ಈ ಮರದ ತೊಲೆ, ರೀಪು, ಪಕಾಸಿ ವೇಸ್ಟ್ ಚೆನ್ನಾಗಿ ಕಾಣಿಸೋದಿಲ್ಲ.. ಅದನ್ನು ತೆಗೆಸಿ ಕಬ್ಬಿಣದ್ದು ಹಾಕಿಸುವಾ ಅಂತ ಯೋಚಿಸ್ತಿದ್ದೀನಿ.. ಅಪ್ಪನಿಗೆ ಹೇಳು ನೀನು.."

ಒಮ್ಮೆ ನೋಡಿ ಭಜರಂಗಿ ಭಾಯ್ ಜಾನ್; ತೊಂದರೆ ಇಲ್ಲ, ನಿಮಗೆ ಇಷ್ಟ ಆಗುತ್ತೆ

ಆ ಎರಡೂ ದೇಶಗಳು ವಿಭಿನ್ನ ಧರ್ಮೀಯರೇ ಬಹುಸಂಖ್ಯಾತರಾಗಿರುವ ನೆಲ
ಒಂದು ಧರ್ಮವನ್ನು ಕಂಡರೆ ಇನ್ನೊಂದು ಧರ್ಮದವರಿಗಾಗದು
ಒಂದು ರಾಷ್ಟ್ರವನ್ನು ಕಂಡರೆ ಇನ್ನೊಂದು ಬೆಂಕಿಕಾರುವಂತಹ ದ್ವೇಷ
ಆ ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ, ಸೌಹಾರ್ಧತೆ ಮೂಡಿಸುವ ದಶಕಗಳ ರಾಜತಾಂತ್ರಿಕ ಪ್ರಯತ್ನ ಇನ್ನೂ ಯಶಸ್ವಿಯಾಗಿಲ್ಲ
ಗಡಿಯಲ್ಲಿ ನಿತ್ಯವೂ ತಂಟೆ ತಕರಾರು; ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರಾಷ್ಟ್ರದ ವಿರುದ್ಧ ಆ ರಾಷ್ಟ್ರ ದೂರು ಕೊಡುತ್ತದೆ, ಅದರ ವಿರುದ್ಧ ಇದು ಪ್ರತಿಭಟನೆ ಮಾಡುತ್ತದೆ
ಅದು ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳಿಗೆ ಸಂಬಂಧಪಟ್ಟ, ಎರಡೂ ರಾಷ್ಟ್ರಗಳ ಮಹಾಜನತೆ ನೋಡಲೇಬೇಕಾದ ಚಿತ್ರ.. ಯಾಕಂದ್ರೆ ಅದರ ಕಥಾನಕದ ವೈಶಿಷ್ಟವೇ ಅಂತಹದ್ದು..
***
ಅಷ್ಟು ದಟ್ಟವಾದ ದ್ವೇಷವಿರುವ, ಬದ್ಧ ವಿರೋಧಿ ನೆಲದಿಂದ ಅಚಾನಕ್ಕಾಗಿ ಈ ರಾಷ್ಟ್ರಕ್ಕೆ ಬರುವ ಆ ಅಬೋಧ ಕಣ್ಣುಗಳ, ಮುಗ್ದ ಲವಲವಿಕೆಯ ಮುಖದ 5-6 ವರ್ಷದ ಬಾಲಕಿಗೆ ಮಾತು ಬರುವುದಿಲ್ಲ
ಹೆತ್ತಮ್ಮನಿಂದ ಆಕಸ್ಮಿಕವಾಗಿ ದೂರವಾಗುವ ಪೋರಿಗೆ ಜೊತೆಯಾಗುವ ಕಥಾನಾಯಕ ಅಣ್ಣ ವಿರೋಧಿ ಧರ್ಮದವನು ಅಷ್ಟೇ ಅಲ್ಲ ವಿರುದ್ಧ ಆಚರಣೆಯ ಪಂಥದವನು.. ಮುಖ್ಯವಾಗಿ ಶತಮಾನದಿಂದ ದ್ವೇಷಿಸುತ್ತಿರುವ ಹಿಂದೂಸ್ತಾನದ ನೆಲದ ವಾಸಿ ಹನುಮಾನ್ ದೇವರ ಭಕ್ತ..
***
ಬಾಲಕಿಯನ್ನು ತನ್ನೊಂದಿಗೆ ಜೊತೆಯಲ್ಲಿಟ್ಟುಕೊಂಡು ಮಾತು ಬಾರದ ಅವಳಿಂದ ಆಕೆಯ ಪೂರ್ವಾ ಪರ ವಿಚಾರಿಸುವ ಆತನಿಗೊಂದು ದಿನ ಅರ್ಥವಾಗುತ್ತದೆ, ಅವಳು ಪಕ್ಕದ ದಾಯಾದಿ ರಾಷ್ಟ್ರದವಳು ಅಂತ.. ಆದರೆ ಆ ಪೋರಿ ಸುಂದರ ಮುಖದ ಅಮಾಯಕ ಬಾಲಕಿ; ಅಷ್ಟೇ ಮುದ್ದು ಬರಿಸುವ ತಂಗಿ ಮುನ್ನಿ.. ಆ ಹೆಸರಿಡುವುದು ಈತನೆ.. (ಬಾಲಕಿಗೆ ಮಾತು ಅರ್ಥವಾಗುತ್ತದೆ ವಿನಃ ಮಾತಾಡಲು ಬಾರದು)
ಕೇವಲ ಸನ್ಹೆಗಳಿಂದ ಪುಟ್ಟ ಮುನ್ನಿ ಪಾಕ್ ದೇಶದವಳು ಅಂತ ಗೊತ್ತಾದ ಅವನು, ತನ್ನ ಭಾವಿ ಮಾವನಿಂದಲೇ (ಪ್ರಿಯತಮೆಯ ಅಪ್ಪ) ಉಗ್ರ ವಿರೋಧ ಎದುರಿಸುತ್ತಾನೆ..
ಬೇರೆ ದಾರಿ ಇಲ್ಲದೆ ಅವಳನ್ನು ಅವಳ ನೆಲಕ್ಕೆ ಸೇರಿಸುವ ಯತ್ನ ಮಾಡ್ತಾನೆ.. ಈ ಪ್ರಯತ್ನದಲ್ಲಿ ಹಲವು ವಿಘ್ನಗಳು ಎದುರಾಗ್ತವೆ..
***
ಆಂಜನೇಯನ ಪರಮ ಭಕ್ತನಾದ ಇವನಿಗೆ ಎಲ್ಲವೂ ನೇರವಾಗಿರಬೇಕು.. ಸುಳ್ಳು ಕಪಟ ಯಾವುದೂ ಈತನರಿಯ.. ಕೊನೆಗೊಂದು ದಿನ ನೇರವಾಗಿ ತಾನೇ ಪಾಕಿಸ್ತಾನಕ್ಕೆ ಹೋಗಿ ಬಾಲಕಿಯನ್ನು ಅವಳ ಮನೆಗೆ ಬಿಟ್ಟು ಬರುವ ನಿರ್ಧಾರ ಮಾಡ್ತಾನೆ.. ಗಡಿಯಲ್ಲಿ ಕಷ್ಟ ಪಟ್ಟು ಪಾಕ್ ನೆಲದೊಳಗೆ ನುಸುಳಿ, ತಿರುಗಿ, ಅಲೆದು, ಸುತ್ತಿ, ದೇಶದ್ರೋಹಿ ಗೂಢಾಚಾರ ಅನ್ನುವ ಪಟ್ಟ ಹೊತ್ತು, ಪತ್ರಕರ್ತನೊಬ್ಬನ ನೆರವು ಪಡೆದು, ಮೌಲ್ವಿಯೊಬ್ಬನ ಸಹಕಾರ ಹೊಂದಿ ಅಂತಿಮವಾಗಿ ಸಾಕಷ್ಟು ಅಲೆದಾಟಗಳ ನಂತರ ಮುನ್ನಿಯನ್ನು ಮನೆ ಸೇರಿಸಲು ಯಶಸ್ವಿಯಾಗ್ತಾನೆ.. ಕ್ಲೈಮ್ಯಾಕ್ಸ್ ನಲ್ಲಿ ಕೇವಲ ವಿರೋಧಿ ರಾಷ್ಟ್ರದ ಅಪರಿಚಿತ ಬಾಲಕಿಗಾಗಿ ಅವನು ಎದುರಿಸುವ ಕಷ್ಟ ಹಾಗೂ ಸವಾಲುಗಳು, ಹಾಗೂ ತೆಗೆದುಕೊಳ್ಳುವ ರಿಸ್ಕುಗಳು, ಯಾವ ನೆರವೂ ಇಲ್ಲದಿದ್ದರೂ ಧೃತಿಗೆಡದೆ ಕೇವಲ ಇಷ್ಟ ದೈವ ಆಂಜನೇಯ ಓಳ್ಳೆಯದು ಮಾಡುತ್ತಾನೆ ಅನ್ನುವ ನಂಬಿಕೆ ಹಾಗೂ ಸಂಕಲ್ಪಶಕ್ತಿಯಿಂದ ಎರಡೂ ರಾಷ್ಟ್ರಗಳ ಜನತೆಯ ಮನ ಗೆಲ್ಲುತ್ತಾನೆ..
***
ಉಪಸಂಹಾರ:
ಗಡಿಯ ಬೃಹತ್ ಬೇಲಿಯಲ್ಲಿ ಆತನಿಗೆ ಪಾಕ್ ನಿಂದ ಬೀಳ್ಕೊಡುವ ಪಾಕ್ ಜನ ಹಾಗೂ ಭಾರತಕ್ಕೆ ಸ್ವಾಗತಿಸುವ ಭಾರತೀಯರ ಕಣ್ಣಿನಲ್ಲಿ ಅವನ ಪ್ರಯತ್ನಕ್ಕೊಂದು ಶ್ಲಾಘನೆಯ ಹ್ಯಾಟ್ಸ್ ಆಫ್ ಇರುತ್ತದೆ
ತನ್ನನ್ನು ಅಮ್ಮನ ಬಳಿ ಸೇರಿಸಲು ಕಷ್ಟ ಪಟ್ಟ ಅಣ್ಣನಿಗೆ ಕೊನೆಗೊಂದು ಬಾಯ್ ಹೇಳಲು ಕಷ್ಟ ಪಡುವ ಪೋರಿ ಮುನ್ನಿಗೆ ಕೊನೆಗೂ ಮಾತು ಬರುತ್ತದೆ..
ಪಾಕ್ ನಲ್ಲಿಯೂ ಹೃದಯವಂತ ಜನರಿದ್ದಾರೆ ಅನ್ನುವುದು ಅವನ ಈ ಪಾಕ್ ಪ್ರವಾಸದಿಂದ ಅನುಭವಕ್ಕೆ ಬರುತ್ತದೆ.. ಹನುಮ ಭಕ್ತ ಭಾರತೀಯರಲ್ಲೂ ಮಾನವೀಯ ಅಂತಕರಣವಿರುವ ಮನುಷ್ಯರಿದ್ದಾರೆ ಅನ್ನುವ ಸಂಗತಿ ಪಾಕಿಸ್ತಾನಿಯರಿಗೂ ಈ ಭಜರಂಗಿಯ ದಿಟ್ಟ ಪ್ರಯತ್ನದ ಮೂಲಕ ಮನವರಿಕೆಯಾಗುತ್ತದೆ.. ಈ ಎಲ್ಲಾ ದೃಶ್ಯಗಳಲ್ಲಿ ಭಾವನಾತ್ಮಕ ಸನ್ನಿವೇಶಗಳ ಸೊಗಸಾದ ನಿರೂಪಣೆ ಇದೆ..
***
ನಿನ್ನೆ ಭಜರಂಗಿ ಬಾಯ್ ಜಾನ್ ಚಿತ್ರ ನೋಡಿದೆ.. ನಿಜಕ್ಕೂ ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನ.. ಎರಡೂ ರಾಷ್ಟ್ರಗಳಲ್ಲೂ ಬದುಕುತ್ತಿರೋದು ಮನುಷ್ಯರೇ ವಿನಃ ರಾಕ್ಷಸರಲ್ಲ ಅನ್ನೋದು ಅರ್ಥ ಆದರೆ ಮುಂದೊಂದು ದಿನ ಯುದ್ದ ರಹಿತ ಸೌಹಾರ್ಧಯುತ ಬಾಂದವ್ಯ ಸಾಧ್ಯ.. ಒಂದು ಅತ್ಯುತ್ತಮ ಸಂದೇಶ ಚಿತ್ರದಲ್ಲಿದೆ.. ಸಲ್ಲೂ ಮಿಯಾ ಆ್ಯಕ್ಟಿಂಗ್ ಚೆನ್ನಾಗಿದೆ ಆದರೆ ಸಲ್ಮಾನ್ ಅನ್ನುವ ಅಪರಾಧಿಗೆ ದೇವರು ಕ್ಷಮಿಸಬಹುದು, ಸುಪ್ರೀಂ ಕೋರ್ಟ್ ಕೂಡಾ ಕ್ಷಮಿಸಬಹುದು; ಪತ್ರಕರ್ತನಾದವನು ಎಂದಿಗೂ ಕ್ಷಮಿಸುವುದಿಲ್ಲ..
ಇಂತದ್ದೊಂದು ಮನೋಜ್ಞ ಚಿತ್ರಕಥೆ ಬರೆದವನಿಗೆ, ಸಂಭಾಷಣೆ ರಚನೆಕಾರನಿಗೆ, ಚಿತ್ರ ಸಾಹಿತ್ಯ ಹಾಗೂ ಸಂಗೀತ ಸಂಯೋಜಿಸಿದ ಕಲಾವಿದರಿಗೆ, ನಿರ್ದೇಶನ ಮಾಡಿದವನಿಗೆ, ಹಣ ಹೂಡಿದ ಕನ್ನಡದ ರಾಕ್ ಲೈನ್ ವೆಂಕಟೇಶ್ ಮುಂತಾದ ನಿರ್ಮಾಪಕರಿಗೆ, ಅಸಂಖ್ಯಾತ ತಾಂತ್ರಿಕ ವರ್ಗ ಹಾಗೂ ಇತರೆ ಬ್ಯಾಕ್ ಡ್ರಾಪ್ಟ್ ಸಿಬ್ಬಂದಿಗಳಿಗೆ ಒಂದು ದಿವ್ಯ ಹ್ಯಾಟ್ಸ್ ಆಫ್..
-ವಿಶ್ವಾಸ್ ಭಾರದ್ವಾಜ್
***