Saturday 10 January 2015

ಮುಂದೆ ದೊಡ್ಡವನಾಗಿ ಏನಾಗ್ತೀಯಾ?



ಕೂಸು ಹುಟ್ಟಿದ್ದೇ ತಪ್ಪಾಗಿಬುಡ್ತು ಬಿಡಪ್ಪ..:
 ಒಂದ್ ಇಪ್ಪತ್ತೆಕೆರೆ ಹೊಲ ಬಿಡಿಸಿಕೊಡ್ತೀನಿ ಲಕ್ಷಣವಾಗಿ ವ್ಯವಸಾಯ ಮಾಡಿಕೊಂಡಿರುಅಂದ ಜಮೀನ್ದಾರ ಅಪ್ಪ
ನೀನು ಜಮೀನಿನಲ್ಲಿ ಗೇದಿದ್ದು ಸಾಕು; ಅವನ ಮೈಗೂ ಯಾಕೆ ಮಣ್ಣು ಹಿಡಿಸ್ತೀಯೋಗದರಿದ ಈಸಿ ಚೇರ್ನಲ್ಲಿ ಕಾಲು ಚಾಚಿ ಕುಳಿತಿದ್ದ ಬಿಳಿ ಗಿರಿಜಾ ಮೀಸೆಯ ಅಜ್ಜ
ನೀನು ಅಪ್ಪನ ಮಾತು ಕೇಳಬೇಡಪ್ಪ..! ಡಾಕ್ಟರ್ರೋ, ಎಂಜಿನಿಯರ್ರೋ ಆಗು ದೊಡ್ಡ ಮನುಷ್ಯ ಅನ್ನಿಸ್ಕೋತೀಯಾದೃಷ್ಟಿ ನೆಟಿಕೆ ಮುರಿದಳು ನೀಲಿ ರೇಷಿಮೆ ಸೀರೆ ಉಟ್ಟಿದ್ದ ಅಮ್ಮ
ಟೀಚರ್ರೋ, ಲೆಕ್ಚರರ್ರೋ ಆದ್ರೆ ಬೆಟರ್ರುಅಂದ ಅಪ್ಪನ ಕೊನೆಯ ತಮ್ಮ ಉಪನ್ಯಾಸಕ ವೃತ್ತಿ ಮಾಡುತ್ತಿರುವವನು
ಅದೆಂತಾ ಪಾಠ ಹೇಳೋ ಕೆಲಸಾನೋ ಮಾರಾಯ..! ಸುಮ್ನೇ ಬೋರು.. ನೋಡು ನನ್ ತರಾ ತಾಲೂಕು ಆಫೀಸಲ್ಲಿ ವಿಲೇಜ್ ಅಕೌಂಟೆಂಟ್ ಆದ್ರೆ ಲಕ್ಕು.. ಶಾನುಭೋಗ್ರು ಅಂತ ಗೌರವ, ಸಂಬಳದ ಮೂರ್ ಪಟ್ಟು ಕಮಾಯಿ..” ಅಂದವನು ಅಮ್ಮನ ಹಿರಿಯಣ್ಣ ವಿಲೇಜ್ ಅಕೌಂಟೆಂಟ್
ಹೋಯ್! ಅದೆಂತಾ ಸರ್ಕಾರಿ ನೌಕರಿ ಕರ್ಮಕಾಂಡ ಮಾರಾಯ್ರೆ; ಅನುಕೂಲಸ್ಥರ ಹೆಣ್ಣುಮಕ್ಕಳ ಅಪ್ಪನ್ನ ಹುಡುಕಿ, ಮಾತುಕಥೆ ಅಂತ ಒಂದ್ ನಡೆಸಿ, ಅಚ್ಚುಕಟ್ಟಾಗಿ ಒಂದು ಮದ್ವೆ ಅಂತ ಮಾಡಿ ಮನೆಯಾಳಿತನಕ್ಕೆ ಕಳಿಸಿದ್ರೆ ಕೆಲಸದ ರಗಳೆ ಇಲ್ಲದೇ ಕಾಲ್ ಮೇಲೆ ಕಾಲ್ ಹಾಕ್ಕಂಡು ನನ್ ತರಾ ಆರಾಮಾಗಿರ್ಬಹುದು ಅಲ್ವೇ..?” ಅಂದ ಅಪ್ಪನ ಅಕ್ಕನ ಗಂಡ ಉಡಾಳ ಮನೆಯಳಿಯ
ಅಷ್ಟರಲ್ಲಿ ಪೊರಕೆ ಹಿಡಿದು ಕಸ ಗುಡಿಸಲು ರೂಂಗೆ ಬಂದ ಕೆಲಸದ ನಿಂಗಿ, “ಅಯ್ಯಾ! ಇದೇನ್ರಯ್ಯಾ ಮಾಡ್ತಿವ್ರಿ? ಪಾಪ ಮಗಿಗೆ ಉಸಿರ್ ಕಟ್ಟಕಿಲ್ವಾ.. ವಸಿ ಇತ್ಲಾಗ್ ಬರ್ಬಾರ್ದಾ..” ಅಂದಳು
ಅದು ದೊಡ್ಡ ಮನೆಯ ಮಗುವಿಗೆ ನಾಮಕರಣ ಶಾಸ್ತ್ರ ನಡೆದ ದಿನ ಕುಟುಂಬವರ್ಗದವರು ತಮ್ಮ ಮನೆಯ ಮಗು ಮುಂದೆ ದೊಡ್ಡವನಾಗಿ ಏನಾಗಬೇಕು ಅಂತ ತೀರ್ಮಾನಿಸಲು ಸಭೆ ಸೇರಿದ್ದ ಸಂದರ್ಭ.. ತೊಟ್ಟಿಲಲ್ಲಿ ಮುದ್ದಾದ 11 ದಿನದ ಗಂಡು ಮಗು ಹಾಗೇ ನಿದ್ದೆ ಹೋಗಿಬಿಟ್ಟಿತ್ತು.. 
-ವಿಶ್ವಾಸ್ ಭಾರದ್ವಾಜ್..  

No comments:

Post a Comment