Friday, 8 May 2015

ಮತಿಹೀನ ಮಹಾಮಹಿಮ:


ಈ ಮೂಢ, ಮುಟ್ಟಾಳ, ಮರುಳ ಮಹಾಶಯನಿಗೆ ಜ್ಞಾನದ ಗಂಧಗಾಳಿಯೇ ಇಲ್ಲ
ಆದರೂ ಸಿಂಹಾಸನವೇರಿ ಪವಡಿಸಿದ್ದಾನೆ ಕೃಪಾ ಕಟಾಕ್ಷದ ಭಿಕ್ಷೆಯ ಬಲದಲ್ಲಿ
ಇಹಕೂ-ಪರಕ್ಕೂ ಬೇಡವಾದವನಿಗೆ ಅಲ್ಲಿ ನರಕದಲಿ ಜಾಗವಿಲ್ಲ
ಇನ್ನೂ ಸತ್ತಿಲ್ಲ ಪುಣ್ಯಾತ್ಮ ಆಳ ಸಮುದ್ರ ಹೊಕ್ಕರೂ ಮುಳುಗುವುದಿಲ್ಲ

ಅಲ್ಲಿಂದಿಲ್ಲಿಗೆ ಬೆಂಕಿ ಹಚ್ಚಿ; ಮನೆಯೊಡೆದು ಮಾಳಿಗೆಯ
-ತೊಲೆ ರೀಪು ಪಕಾಸಿಗಳ ಕಿತ್ತು ಚಳಿ ಕಾಯಿಸುತ್ತಾನೆ ದುಷ್ಟ ಕೂಟ ನೇತಾರ
ಅವರಿವರ ಕಿವಿಯೂದಿ ಚಾಡಿ ಚುಚ್ಚುವ ಹಸಿವೈಶ್ಯೆಯ ಚಾಳಿಯವನ-
ಕಂಡರೆ ಭೂತ, ಪ್ರೇತ, ಪಿಶಾಚಿ, ಪೆಡಂಭೂತ, ಬ್ರಹ್ಮರಾಕ್ಷಸಗಳೂ ಮಾರು ದೂರ
ಕಡು ಚೇಷ್ಟೆಯ ಮರ್ಕಟದ ಕೈಗೆ ಮಾಣಿಕ್ಯ ಕೊಟ್ಟಂತಾಗಿದೆ ಇವನ ಪರಮಾಧಿಕಾರ
ಒಬ್ಬ ಬ್ರಹ್ಮಚಾರಿ ಶತ ಕೋತಿಗಳ ಕೂಟಕ್ಕೆ ಸಮನಾದ ಭಂಡ
ಹಾಗಂತ ಈತ ನೈಷ್ಟಿಕ ಬ್ರಹ್ಮಚಾರಿಯಲ್ಲ; ಶುದ್ಧ ನೈತಿಕ ಸಂಸಾರಿಯೂ ಅಲ್ಲ
ಅಲ್ಲಲ್ಲಿ ಸಿಕ್ಕಲ್ಲಿ ಸಿಕ್ಕಷ್ಟು ದೋಚಿ ಉಂಡು, ಕೊನೆಗೆ ಮನೆಗೂ ನಿಷ್ಟನಲ್ಲದ ದಂಡಪಿಂಡ
ಇವನೊಬ್ಬ ಹೆಂಬೇಡಿ, ಹೇತಲಾಂಡಿ ಅವಕಾಶವಾದ ಮೂರ್ಖ
ಸಮಯ ಸಾಧಕ ಮಹಾಮಹಿಮ ಘನ ತಿಕ್ಕಲು ಪುಕ್ಕಲು ಕೊರಮ ಖದೀಮ
ಬಾಯಿ ಬಿಟ್ಟರೇ ಬಣ್ಣಗೇಡಿಯಂತಾಗುವ ಅಲ್ಪ ಪಾಮರಮತಿ
ತನ್ನನ್ನು ತಾನೇ ತೃಪ್ತಿಗೊಳಿಸಿ ಬೀಗುತ್ತಾನೆ ಮೇರು ಪಂಡಿತನಂತೆ
ಇವನ ಪಾಂಡಿತ್ಯಕ್ಕಷ್ಟು ಬೆಂಕಿ ಹಾಕ; ಮೂರರ ಮಗ್ಗಿ ಬರುತ್ತದಾ ಕೇಳಿನೋಡಿ!
ಇವನ ಹೆಸರೇಳಿದರೂ ಹಸಿ ಹುಲ್ಲಿಗೆ ಬೆಂಕಿ ಬೀಳುತ್ತದೆ; ಸ್ವಗತ
ಎಲ್ಲಾದರೂ 24 ಕ್ಯಾರೆಟ್ಟಿನ ಅಸಹ್ಯ ಅಂತಿದ್ದರೇ ಅದು ಇವನೇ ಖಂಡಿತ
ವಿನಾಕಾರಣ ಕುಹಕ ನಗೆ ಬೀರಿ ನಗೆಪಾಟಲಾಗುತ್ತಾನೆ ಟೊಣಪ
ತಾನೇ ಸೃಷ್ಟಿಸಿದ ಗಟಾರದಲ್ಲಿ ಮಲಗೆದ್ದು ರಾಡಿ ಮಾಡಿಕೊಳ್ಳುವ ಭೂಪ
ಅದೇ ಹೊಲಸನ್ನು ಉಳಿದವರಿಗೂ ಎರಚುತ್ತಾನೆ ಪಾಪಿ
ಈತ ಅಂತರಂಗದಲ್ಲೂ ಸೌಂದರ್ಯವಿಹೀನ ಪರಮ ಕುರೂಪಿ
ವಿಕೃತಿಗಳನ್ನೇ ಪೋಷಿಸಿ ಆರಾಧಿಸುವುದೇ ಈ ವಿಘ್ನ ಸಂತೋಷಿಗೆ ಮೋದ
ಶಿರದ ಮೇಲೆ ಕರವಾಡಿಸುವ ಬುದ್ದಿಗಳ ಎಂಜಲೇ ಇವನಿಗೆ ಮಹಾಪ್ರಸಾದ
ಸಂಸ್ಕ್ರತಿ-ಸಂಸ್ಕಾರಗಳಿಗೂ ಇವನಿಗೂ ಬಹುದೂರ ಅಂತರ
ಹುಟ್ಟಿನಿಂದಲೇ ಅಸಂಬದ್ಧ ವರ್ತಿಸುವ ವಿತಂಡವಾದಿ ವೀರ!?
ಇವನ ಹಿಂಬಾಲಿಸುವ ಅನುಯಾ(ನಾ)ಯಿಗಳಿಗೂ ಗೊತ್ತು ಇವನ ಪ್ರವರ
ಈತನದ್ದು ಅಸಮರ್ಥ, ಅಜ್ಞಾನಿ ಕೂಪಮಂಡೂಕದ ಅಹಂಕಾರ
ಕೊಟ್ಟ ಕುದುರೆಯ ಮೇಲೂ ಕೂರದೆ ಹೇಶಾರವಗೈವ ಅತೃಪ್ತ ಆತ್ಮನೀತ
ವ್ಯಕ್ತಿತ್ವದಲ್ಲಿ ದುರ್ನಾತ ನಾರುವ ಗಲೀಜು ಸಂಜಾತ
ತೊಳೆದಷ್ಟೂ ಹಬ್ಬಿ ದುರ್ಗಂಧವೆಬ್ಬಿಸುತ್ತಿದೆ ಇವನ ಜನ್ಮಜಾತಕ
ಇನ್ನೊಂದು ಪದ, ವಾಕ್ಯ ಬರೆದರದು ಸರಸ್ವತಿ ತಾಯಿಗೆ ಅಪಮಾನ
-ವಿಶ್ವಾಸ್ ಭಾರದ್ವಾಜ್

No comments:

Post a Comment