Wednesday, 22 July 2015

ನೀ ಹತ್ತಿರ ಬರಬೇಡ ನಿಹಾರಿಕೆ ಮಾಲೆ ತೊಟ್ಟವಳೆ:

ನಿತ್ಯವೂ ಮಲಗುವ ಮುನ್ನ ನಿಹಾರಿಕೆ ಮಾಲೆ ತೊಟ್ಟ ಸುಂದರಿಯದ್ದೇ ಧ್ಯಾನ. ಎಂದಾದರೊಂದಿನ ಬಂದೇ ಬರುವಳೆನ್ನುವ ನಿರೀಕ್ಷೆ ಕೊನೆಗೂ ಅಂದು ನೆರವೇರಿತು..
ಒಂದು ರಾತ್ರಿ ಬಂದಳವಳು, ಅಂದು ಹುಣ್ಣಿಮೆ..
ಅವಳು ತೊಟ್ಟಿದ್ದು ನಾನು ಬಯಸುತ್ತಿದ್ದ ನಿಹಾರಿಕೆಗಳದ್ದೇ ಮಾಲೆ.. ಒಂದೆಡೆ ಪೌರ್ಣಿಮಿಯ ಬೆಳದಿಂಗಳು ಇನ್ನೊಂದೆಡೆ ಸುಂದರಿ ಕೊರಳಲ್ಲಿದ್ದ ನಕ್ಷತ್ರ ಮಾಲೆಯ ಕಾಂತಿ..
ಅವಳ ಮುಖ ಕಾಣಿಸುತ್ತಲೇ ಇಲ್ಲ.. ಅಷ್ಟರಲ್ಲಿ ಕಾರ್ಮೋಡ ಸೈನ್ಯ ನುಗ್ಗಿ ಸುಂದರ ಬೆಳ್ಳಿ ಚಂದಿರನನ್ನು ನುಂಗಿಹಾಕಿತು.. ಆಗಷ್ಟೇ ಆಗಸದಲ್ಲಿ ಕಪ್ಪು ಹೊದಿಕೆ, ಸುದೈವವಶಾತ್ ನನ್ನ ಸ್ವಪ್ನ ಸುಂದರಿಯ ಮುಖದ ಕೆಲವು ಭಾಗ ದರ್ಶನವಾಗತೊಡಗಿತು..ಚೆಂದವಿದ್ದಳು, ಅದೇನೋ ಪಿಸುಗುಡತೊಡಗಿದಳು..
ಹತ್ತಿರ ಬಂದು ಕಿವಿಯಲ್ಲಿ ಹೇಳೆಂದೆ.. ಹೊರಗೆ ಧಾರಾಕಾರ ಕುಂಬದ್ರೋಣ ಮಳೆ ಶುರುವಾಯ್ತು.. ಭೋರ್ಗರೆವ ಗಾಳಿಯ ಸದ್ದು, ಕಣ್ಣು ಕೋರೈಸುವ ಮಿಂಚು, ಅಬ್ಬರದ ಗುಡುಗು ಸಿಡಿಲುಗಳ ಮೊರೆತ.. ಇತ್ತ ಸ್ವಪ್ನ ಕನ್ನಿಕೆ ಹೇಳುವ ಪಿಸುಮಾತು ಕೇಳುತ್ತಿಲ್ಲ ಅನ್ನುವ ಅಸಮಧಾನ ನನಗೆ..
ಹತ್ತಿರ ಹೋಗಲು ಅನುವಾದೆ.. ಅಪ್ಪಿಕೊಂಡು ಅವಳ ತುಟಿಗೆ ಕಿವಿಯೊಡ್ಡುವ ಯೋಚನೆ.. ಆಗಲಾದ್ರೂ ಅವಳ ಮಾತುಗಳು ಮನಸಿಗಿಳಿಯುತ್ತವಾ ನೋಡುವ..
ಹತ್ತಿರ ಹತ್ತಿರ ಹೋಗತೊಡಗಿದೆ.. ಅವಳು ಹಿಂದೆ ಹಿಂದೆ ಸರಿಯತೊಡಗಿದಳು.. ಕಂಪಿಸುತ್ತಿದ್ದ ತುಟಿಗಳಿಂದ ಬರಬೇಡ ಬರಬೇಡ ಅನ್ನುವ ಗೋಗರೆತ ಶುರುವಿಟ್ಟುಕೊಂಡಳು..
"ಯಾಕೆ ಬರಬಾರದು..? ನಿನ್ನ ಮುಟ್ಟಬಾರದೇ..? ಅಪ್ಪಬಾರದೆ..? ನಿನ್ನ ಪಿಸು ಮಾತುಗಳಿಗೆ ಧ್ವನಿಯಾಗಬಾರದೇ..? ಯಾರು ನೀನು..? ನನ್ನ ದಿವ್ಯ ಕನಸಿನಲ್ಲಿ ನಿತ್ಯವೂ ಬರುತ್ತಿದ್ದವಳೇ ತಾನೇ..? ನೀನು ಕಿನ್ನರಿಯೇ? ಯಕ್ಷಿಣಿಯೇ? ಮಾಯಾವಿಯೇ? ಗಂಧರ್ವ? ಕನ್ಯಯೇ? ದೇವತೆಯೇ?" ನಾನಂದೆ
"ಮುಟ್ಟಿದರೇ ಸುಟ್ಟು ಭಸ್ಮವಾಗುತ್ತಿ..!! ನಾನು ಧರಿಸಿದ್ದು ಸಹಸ್ರಾರು ಪಟ್ಟು ಶಕ್ತಿಯುತ ಕಾಂತಿಪುಂಜಗಳ ನಿಹಾರಿಕೆಗಳ ಮಾಲೆ..!!" ಅವಳಂದಳು..
ನಾನಂದೆ, "ಮತ್ಯಾಕೆ ಅದನ್ನು ತೊಟ್ಟು ಬಂದೆ..?"
ಅವಳಂದಳು, :ನೀನೇ ಕನಸಿನಲ್ಲಿ ಕನವರಿಸುತ್ತಿದ್ದೆಯಲ್ಲ.."
....
....
....
....
"ಬಾ ಅಭಿಸಾರಿಕೆ ಒಮ್ಮೆ ಎನ್ನ ಕನಸಿನಲಿ
ಬರುವ ಮುನ್ನ ತೊಟ್ಟು ಬಿಡು ನಿಹಾರಿಕೆಯ ಮಾಲೆಯಾ
ಹೊಳೆವ ಕಾಂತಿ ನಕ್ಷತ್ರಗಳ ಸರವ ಮಾಡಿ ಪೋಣಿಸು
ನಿನ್ನ ಮೊಗವ ವಿಘ್ನವಿರದೆ ದಿಟ್ಟಿಸುವೆನು ಸಹಕರಿಸು
ಪ್ರಕಾಶ ಮಾನ ಜ್ವಾಜಲ್ಯವಿರಲಿ ನಿನ್ನ ಪ್ರಭೆಯ ಸುತ್ತಾ
ಅನಂತ ದಿವ್ಯ ಜ್ವಾಲೆ ಬೆಳಕು ಮಿನುಗಿ ಮೆರೆಯುವತ್ತ"

"ನಿನ್ನ ಇಚ್ಛೆಯಂತೆ ನಾನು ನಕ್ಷತ್ರಗಳನ್ನೇ ಪೋಣಿಸಿ ಮಾಲೆ ಮಾಡಿ ತೊಟ್ಟು ಬಂದಿದ್ದೀನಿ ನೋಡು.." ಅವಳ ಮಾತು ಅನುರಣಿಸಿದಂತಾಯ್ತು..
"ನೀನು ಕಾಣಿಸುತ್ತಿಲ್ಲ ನನಗೆ, ಕಣ್ಣು ಕುಕ್ಕುವ ಕಾಂತಿ, ಸುಡುಸುಡುವ ಕಿರಣಗಳು.. ನೀನು ನನ್ನ ಸ್ವಪ್ನ ಸುಂದರಿಯಲ್ಲ.. ನೀನು ರಾಕ್ಷಿಸಿ..! ನೀನು ಮಾಯಾವಿನಿ..! ನನಗೆ ಕೈಗೆಟುಕದ ನೀನು ನನಗೆ ಬೇಡ.. ಹೋಗು.. ಹೊರಟು ಹೋಗು.. ಮತ್ತೆಂದಿಗೂ ನನ್ನ ಕಣ್ಣ ಮುಂದೆ ಬರಬೇಡ ತೊಲಗು.." ನಾನು ಅಬ್ಬರಿಸುತ್ತಲೇ ಇದ್ದೆ.. ನನ್ನದೇ ಮಾತುಗಳು ಎದುರಿಗಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತಿತ್ತು..
ಅವಳು ಮಾಯವಾಗಿದ್ದಳು.. ಹೊರಗೆ ಸುರಿದ ಮಳೆ ನಿಂತಿತ್ತು.. ಸೂರಿನಿಂದ ಹನಿಗಳು ಸದ್ದು ಮಾಡುತ್ತಾ ಅಂಗಳಕ್ಕೆ ಹನಿಕುತ್ತಿತ್ತು.. ನಿಧಾನವಾಗಿ ಮೋಡ ಚದುರುತ್ತಿತ್ತು.. ನಿರ್ಮಲವಾಗುತ್ತಿದ್ದ ಆಗಸವ ನೋಡಿದರೆ, ಮತ್ತೆ ಚಂದ್ರನ ಒಡ್ಡೋಲಗ ಕಳೆ ಕಟ್ಟತೊಡಗಿತ್ತು.. ಮತ್ತೆ ಸೋಜಿಗ ಅನ್ನುವಂತೆ ಚಂದ್ರನೊಳಗೆ ಕಾಣಿಸಿದ ಬಿಂಬ ಅವಳನ್ನೇ ಹೋಲುತ್ತಿತ್ತು..
-ವಿಭಾ
***

No comments:

Post a Comment