Monday 15 June 2015

ಈ ಮೂರ್ಖರಿಗೆ ಬುದ್ದಿ ಬರೋದಿಲ್ಲ..:

ಈ ಮೂರ್ಖರಿಗೆ ಬುದ್ದಿ ಬರೋದಿಲ್ಲ..:

ಅವರು ಗಡ್ಡಬಿಟ್ಟ ಚರ್ಚಿನ ಅಪ್ಪಂದಿರು; ಮಗ್ಗುಲಲಿದ್ದಾರೆ –
-ಶ್ವೇತವಸ್ತ್ರ ಧರಿಸಿರುವ ಶಾಂತ ಮುದ್ರೆಯ ಸನ್ಯಾಸಿನಿಯರು
ಕೊರಳಲ್ಲಿ ನೇತಾಡುತ್ತದೆ ಏಸುತಂದೆ ಅಂತಿಮ ಪ್ರಸ್ತಾನ ಹೊಂದಿದ ಶಿಲುಬೆ
ಕ್ರಾಸ್ ಧರಿಸಿದವರು ಮಾಡುವ ಕದನ ಒಡಂಬಡಿಕೆಯ ನೋಡಿಯೂ ಅವರು ಸುಮ್ಮನಿರುತ್ತಾರೆ
ಓ ಪವಿತ್ರ ತಂದೆ ಯೇಸು!! ಓ ಪ್ರೀತಿಯ ಸಾರಿದ ಇಸಾಮಸಿ!!
ಎಲ್ಲಿ ಹೋಯಿತು ನೀನು ಕೊಟ್ಟ ಸಂದೇಶ ಜೀಸಸ್???
ಪ್ರೀತಿ ಬೇಡವಾಗಿರುವ ಅವರು ಎಲ್ಲೆಡೆ ದ್ವೇಷದ ಕಿಡಿಯ ಹೊತ್ತಿಸುತ್ತಿದ್ದಾರೆ..
ಎರಡೆರಡು ಮಹಾ ಕದನವಾದರೂ ಇವರ ಸಮರದಾಹ ಇನ್ನೂ ಇಂಗಿಲ್ಲ
ಎತ್ತಲೋ ಏರಿ ಹೋದ ತಥಾಗತರ ದಿಕ್ಕು ನೋಡುತ್ತಾ ಕುಳಿತಿದ್ದಾರೆ
ಅಹಿಂಸೋ ಪರಮೋಧರ್ಮ ಅಂದ ಶಾಂತಿಧೂತನ ಕಾಯುತ್ತಿದ್ದಾರೆ
ಸಂಘ, ಧರ್ಮಗಳ ಮಹತ್ವ ಸಾರಿ ಹೇಳಿದ ಬುದ್ಧನಿಗೆ ಮೂರ್ತಿ ಮಾಡಿ-
ಶುದ್ಧಿ ಸ್ನಾನ ಮಾಡಿಸುತ್ತಿದ್ದಾರೆ;
ಆಸೆಯ ತೊರಿಯಿರಿ ಅಂದವನ ಸಂದೇಶಗಳ ಮರೆತಿದ್ದಾರೆ
ಈಗ ಆಸೆಯ ಜೊತೆಗೆ ಮೋಹ ಲೋಭಗಳ ಅಂಟಿಸಿ ದುಃಖಿಸುತ್ತಾ ಕುಳಿತಿದ್ದಾರೆ
ಓ ಮಹಾ ಬೋಧಿಯ ಅಡಿಯಲ್ಲಿ ಬೆಳಕ ಕಂಡ ಗೌತಮ!!
ಜಗತ್ತಿಗೆ ದಾರಿ ತೋರಿದ ನೀನು ನಿನ್ನ ಅನುಯಾಯಿಗಳ ಮರೆತೆಯೇಕೆ???
ಅವರೀಗ ಆಸೆಯಿಂದಲೇ ನಿನ್ನ ಮಂದಿರಗಳನ್ನು ಕಟ್ಟಿ ನಿನಗೆ ಅವತಾರ ಲೇಪಿಸುತ್ತಿದ್ದಾರೆ
ಬ್ರಾಹ್ಮಣ್ಯ ಸಮರ್ಥಿಸಿದ ಗೌಡ ಪರಂಪರೆಯವರೇ!!
ಕಾಲಟಿಯಿಂದ ಶುರುವಾಗಿ ಯೋಗ ಮಾಯೆ ಜಗದಂಬಿಕೆ ಪಾದದವರೆಗೂ
ನಿಮ್ಮ ಜೈತ್ರ ಯಾತ್ರೆಯ ಧರ್ಮವಿಜಯದ ಕೊನೆಗೂ-
ನೀವು ಸರಿಯೇ ಸರಿ!! ಅದ್ವೈತ ಅಂದಿರಿ; ಸೌಂದರ್ಯ ಲಹರಿಯ ವ್ಯಾಖ್ಯಾನ ಕೊಟ್ಟಿರಿ
ವೈದೀಕ ಕರ್ಮಠದ ಕುರುಡು ಮೌಢ್ಯವ ತೊಡೆದು ಭಜಗೋವಿಂದನ ಆರಾಧಿಸಿದಿರಿ
ಈಗ ಮತ್ತೊಂದು ಅವತಾರಕ್ಕೆ ಸಿದ್ಧರಾಗಿ ಶಂಕರ ಭಗವತ್ಪಾದರೇ..!!
ನಿಮ್ಮದೇ ಹೆಸರಿನ ಆಶ್ರಮದಲ್ಲಿ ಕುಡಿ ಶಿಖೆಯ ವಟುಗಳ ಆಟಾಟೋಪ ಮಿತಿಮೀರಿದೆ
ದ್ವೈತವ ಸಾರಿದ ಆನಂದತೀರ್ಥರೇ ಎತ್ತ ಹೋದಿರಿ ನೀವು??
ನೀವು ಕುಳಿತಿದ್ದ ಪಾಜಕದ ಬಂಡೆಗಳು ಈಗ ಪಾಚಿಕಟ್ಟಿವೆ
ಕಾಲಿಟ್ಟಲ್ಲೆಲ್ಲಾ ಜಾರುತ್ತಿವೆ; ಬಿದ್ದರೆ ಅಡಿ ಮಹಾಪ್ರಪಾತ
ತಿಕ್ಕಿ ತೊಳೆಯಬೇಕಿದೆ ಆದರೆ ಅಷ್ಟಮಠಗಳಲ್ಲಿ ಸೇವಾರ್ಥಿಗಳೇ ಇಲ್ಲ
ಎಲ್ಲರೂ ಜಾರುವ ಪಾಚಿಯ ಮೇಲೆ ಕೃಷ್ಣಾಜಿನವ ಹಾಸುವ ಬುದ್ಧಿವಂತರೇ ಇಲ್ಲಿ
ಮಧ್ವಾಚಾರ್ಯರೇ ಕೇಳುತ್ತಿದೆಯೇ ನಿಮಗೆ ನೂರಾರು ಕನಕದಾಸರ ಆರ್ತನಾದ?
ಕೃಷ್ಣನ ಕಾಣಲು ಕುರುಬರಿಗೆ ಸಾಧ್ಯವಿಲ್ಲ; ಮಧ್ಯೆ ಬ್ರಾಹ್ಮಣ ಪಂಕ್ತಿ ಅಡ್ಡವಿದೆ
ದಯೆಯೇ ಧರ್ಮದ ಮೂಲವೆಂದ ಮಹಾಪುರುಷನೊಬ್ಬನಿದ್ದ
ಮುಟ್ಟಬಾರದವರನ್ನೆಲ್ಲಾ ಮುಟ್ಟಿದ; ಅನುಭವ ಮಂಟಪ ಕಟ್ಟಿದ
ಕಟ್ಟಳೆಗಳ ಚೌಕಟ್ಟು ಕಳಚಿ ಲಿಂಗ ಧಾರಣೆ ಮಾಡಿದ
ಅವನು ಹಳೆ ಧರ್ಮ ಬಿಟ್ಟ ಹೊಸ ಧರ್ಮ ಕಟ್ಟಿದ
ಅವನು ಸಾರ್ವಕಾಲಿಕ ಅಣ್ಣ; ಸರ್ವ ಜನ ಮೆಚ್ಚಿದ ಬಸವಣ್ಣ
ಕೆಲವರು ಆ ಅಣ್ಣನ ಕೀರ್ತಿಗೆ ಮಣ್ಣು ಸೇರಿಸುತ್ತಿದ್ದಾರೆ
ಲಿಂಗ ಕಟ್ಟಿದ ಎದೆಯ ಮೇಲೆ ಜಗಮಗಿಸುವ ಝರಿಯ ಉತ್ತರೀಯ ಸುತ್ತುತ್ತಾರೆ
ಹೆಗಲಿಗೆ ಜೋಳಿಗೆಯ ಗಂಟು ನೇತು ಬಿಟ್ಟುಕೊಂಡು ಸುತ್ತುತ್ತಾರೆ
ವಚನಗಳ ಸಾರವರೆದರೆದು ಕುಡಿದ ಮಂದಿ ಸದ್ದಿಲ್ಲದೇ ಅಸಹ್ಯದ ಮರೆಗೆ ಸರಿಯುತ್ತಾರೆ
ಜೀವ ಕಣಕಣದಲ್ಲೂ ದಯೆಯ ಸಿದ್ಧಾಂತ ಹೊತ್ತವರು
ಅಹಿಂಸಾ ಜೀವನವೇ ಪರಮ ಶ್ರೇಷ್ಠವೆಂದವರು
ನೆಲದೊಳಗೆ ಬೆಳೆದದ್ದನ್ನೂ ವರ್ಜಿಸುವವರು; ಬಸದಿಗಳಿಗೆ ಅಡ್ಡಬೀಳುವವರು
ತೀರ್ಥಂಕರರ ನಡೆದಾಡಿದ ಅಂಗಳದಲ್ಲಿ ಸ್ಥಾಪಿತರಾದವರು ಇವರು
ಜೀನನಾಥ, ಪಾರ್ಶ್ವನಾಥ, ಮಹಾವೀರರೇ ಈ ಅಪದ್ಧವ ಕಂಡಿರಾ?
ಸಲ್ಲೇಖನದ ಯೋಚನೆ ಮಾಡುವವರ ತೊಡೆ ಮಧ್ಯೆಯ ನರ ಕಂಪಿಸುತ್ತದೆ
ಇವರು ನಿಮ್ಮ ಬಸದಿಯೊಳ ನುಗ್ಗಿ ಮೈಲಿಗೆ ಮಾಡುತ್ತಾರೆ ಎಚ್ಚರ!!
ಈಗ ಮತ್ತೆ ಅವತರಿಸಬೇಕು ನೀವು 24 ಸಾಲದು ಕನಿಷ್ಟ 48 ಆದರೂ ಬೇಕು!!
ದಿನಕ್ಕೈದು ನಮಾಜು ಮಾಡುವುದು; ಪವಿತ್ರ ಕಾಬಾದ ಕಡೆಗೆ ತಲೆ ತಗ್ಗಿಸುವುದು
ಖುರಾನ್ ವಾಣಿಗೆ ಧ್ವನಿಯಾಗುವುದಷ್ಟೇ ಅಲ್ಲ; ಜೀವನವ ಅದರಲ್ಲೇ ಮುಗಿಸುವುದು
ನೀವು ಹೇಳಿದ್ದು ಹಾಗಿತ್ತು..! ಪೈಗಂಬರರೇ, ಆದರಿದು ನಿಮ್ಮ ಕಾಲವಲ್ಲ-
ನೀವು ತೋರಿದ ಹಾದಿ ಬಹು ಉತ್ತಮವಾಗಿತ್ತು; ಈಗ ಹಾಗಿಲ್ಲವಲ್ಲ
ನೀವು ಶರಾಬು, ಜೂಜು ಬಿಡುವ ಜೊತೆ ಮಾನವರಾಗಲು ಹೇಳಿದಿರಿ
ಸತ್ಯ ಮುಸಲ್ಮಾನ ಹೇಗಿರಬೇಕು ಅಂತ ಮದರಸಾಗಳಲ್ಲಿ ಪಾಠ ಮಾಡಿದಿರಿ
ಆದರೀಗ ಅದೇ ಮದರಸಾಗಳನ್ನೇ ಬಾಂಬಿಟ್ಟು ಉಡಾಯಿಸುತ್ತಾರೆ
ಪಾಪದ ನಿಮ್ಮ ಹಸುಳೆ ಕಂದಮ್ಮಗಳ ಕೊಲ್ಲುತ್ತಿದ್ದಾರೆ;
ಕಾಫಿರರು ಇಸ್ಲಾಂ ಹೆಸರಿನಲ್ಲಿ ವಿಧ್ವಂಸ ಎಸಗುತ್ತಿದ್ದಾರೆ
ಈಗ ನೀವು ಬಾರದೆ ಇದ್ದರೆ ಅಚಾತುರ್ಯವಾಗುತ್ತದೆ ಮಹಾನ್ ಮೌಲ್ವಿಗಳೇ
ಶೈತಾನ್ ಸಂಹಾರಕ್ಕಾಗಿ; ಜನ್ನತ್ ತೋರಿಸುವುದಕ್ಕಾಗಿ
-ಬನ್ನಿ ಮಾನವೀಯತೆಯ ಉಳಿವಿಗಾಗಿ ಖಡ್ಗ ಹಿರಿದು ಬನ್ನಿ
ಬದುಕಿದ್ದಾಗಲೇ ಆ ಪಕೀರನನ್ನು ಮಹಾತ್ಮನನ್ನಾಗಿಸಿದರು
ಕೊಂದರೊಂದು ದಿನ ದೇಹವ ಮಾತ್ರವಲ್ಲ ಆದರ್ಶಗಳನ್ನೂ ಸೇರಿಸಿ
ಸತ್ತ ಮೇಲೆ ಪುತ್ಹಳಿಗಳ ಮಾಡಿ ನಿಲ್ಲಿಸಿದರು; ಈಗ ಅವೇ ಪ್ರತಿಮೆಗಳ ಒಡೆಯುತ್ತಿದ್ದಾರೆ
ದೇಶದ ಔನ್ನತ್ಯ ಸಮರ್ಥಿಸಿದ ಸನ್ಯಾಸಿ ಈಗ ರಾಜಕಾರಣದ ಮುಖವಾಣಿ
ಬದುಕಿದ್ದಾಗ ನಿರ್ಲಕ್ಷ್ಯ, ಸತ್ತ ಮೇಲೆ ಕಟ್ಟುತ್ತಾರೆ ದೇಗುಲ
ಕ್ರಿಸ್ತನಂತೆ, ಬುದ್ಧನಂತೆ ತಾವೇ ಶ್ರೇಷ್ಟರೆನ್ನುವ ಬ್ರಾಹ್ಮಣರಂತೆ
ಪ್ರತ್ಯೇಕತೆ ಬಯಸುವ ವೀರಶೈವ ಲಿಂಗಾಯಿತರಂತೆ
ಶಾಂತಿ ಅಹಿಂಸೆಗಳ ಧ್ಯಾನ ಮೂರ್ತಿ ಬುದ್ಧ ಮಹಾವೀರರಂತೆ
ನೈತಿಕ ನೈಷ್ಟಿಕ ಮುಸಲ್ಮಾನರಂತೆ; ಅವರೆಲ್ಲರೂ ಸರಿಯಿದ್ದರು ಸತ್ಯ ಸತ್ಯ!!
ಕತ್ತಲೆಯ ಕೂಪದೊಳಗೆ ಸೊಡರು ಹತ್ತಿಸಿ ಮಾರ್ಗ ತೋರಿದರು
ಈಗ ಅವರಾರೂ ಇಲ್ಲ ಮತ್ತೆ ಕತ್ತಲು ಅಡರಿಕೊಂಡಿದೆ;
ಅವರ ಹೆಸರಿನಲ್ಲಿ ನಮ್ಮ ತನದ ನಮ್ಮ ತಮದ ಅಹಂ ಗುಂಡಿಯಲ್ಲಿ-
ಬಿದ್ದು ಹೊರಳಾಡುತ್ತಿದ್ದೀವಿ
ಕಲ್ಕಿ ಹುಟ್ಟುವನೆಂದೂ ಅಥವಾ ಇನ್ನೊಂದು ಹೊಸ ಶಕ್ತಿ ಉಗಮಿಸುತ್ತದೆ ಎಂದೂ!!
ಈ ಮೂರ್ಖರಿಗೆ ಬುದ್ದಿಯಿಲ್ಲ; ಬುದ್ದಿ ಬರುವುದೂ ಇಲ್ಲ ಅನ್ನುತ್ತಾ-
ಅಣಕಿಸಿ ತನ್ನಷ್ಟಕ್ಕೆ ಹಾಗೇ ನಗುತ್ತದೆ ಮಾಳಿಗೆಯಲ್ಲಿ ಕುಳಿತ ಕಾಗೆ
-ವಿಶ್ವಾಸ್ ಭಾರದ್ವಾಜ್

No comments:

Post a Comment