Monday 15 June 2015

ಅಲೆಮಾರಿ:


ತಿರುಗು ತಿರುಗಿ ಮರಳಿ ಹೊರಳಿ
ಹತ್ತಿ ಇಳಿದು ಏರಿ ಸಾಗು!!
ಹೊರಡು ಇನ್ನು ನಿಲ್ಲಬೇಡ-
ದಾರಿ ದೂರ ಸಾಗು ವೇಗ
ನಿಂತು ನೋಡು ಸವೆದ ಜೋಡು;
ಹೇಳುತ್ತದೆ ಕ್ರಮಿಪ ಹಾದಿ..
ಅಲ್ಲಿ ಗಿರಿಶಿಖರ ಇಲ್ಲಿ ತಳಂಪಾತಳ
ನಟ್ಟ ನಡುವೆ ಕಾಡು ಮಾರ್ಗ
ಕಲ್ಲು ಮುಳ್ಳು ಹಳ್ಳ ದಿಣ್ಣೆ
ಹರಿವ ಝರಿಯ ತೊರೆಯ ಜಾಡು
ಕರೆವ ಕೂಗು ಹಕ್ಕಿ ಹಾಡು
ನಲಿವ ಮನಕೆ ಅದರ ಪಾಡು:
ದಿಕ್ಕು ದೆಸೆಯ ಗೊಡವೆಯೇಕೆ???
ಯಾಕೆ ಏನು ಪ್ರಶ್ನೆಯೇಕೆ???
ಸಪ್ತ ಸಿಂಧು ದಾಟಿ ಹೋಗು
ಅಷ್ಟ ದ್ವೀಪ ಕಂಡು ಸಾಗು!!
ಪುಣ್ಯಕ್ಷೇತ್ರ ಮುಗಿದ ಮೇಲೆ;
ಪಾಪಿ ನಾಡು ಶೇಷ ಮಾತ್ರ
ಮೂರುಲೋಕ ಮೂರು ಕಾಲ
ಒಂದು ಜಾವ ವಿರಮಿಸುವೆಯ!
ಮೂರು ಜಾವದಲ್ಲೇ ಯಾನ:
ಬುತ್ತಿ ಕಟ್ಟು ಗಂಟು ಮಾಡು-
ಜೋಳಿಗೆಯಲಿ ಪಾಲು ಒಟ್ಟು
ಗೋದಿ, ಮೆಣಸು, ಉಪ್ಪು, ಹಿಟ್ಟು;
ದಾರಿ ಮಧ್ಯೆ ಹೊಟ್ಟೆ ಪಾಡು-
ನೋಡಿಕೊಂಡು ಮುಂದೆ ಸಾಗು!!
ಹಸಿರು ಲೋಕ, ಕೆಂಪು ಮಣ್ಣು
ಹಳದಿ ವಿಶ್ವ ನೀಲ ಶರಧಿ;
ಆಳ ಕಣಿವೆ ಜಾರು ಬಂಡೆ
ಹೋರು ಗಾಳಿ ಸ್ತಭ್ಧ ವಿಶ್ವ:
ಚಲನೆ ನಡಿಗೆ ನಿರಂತರ
ಚಿದಾನಂದ ಮಂದಿರ
ವಿಶ್ವಾಂಬರ ಸುಂದರ
ಅಲೆಮಾರಿಯ ಪ್ರವರ
-ವಿಶ್ವಾಸ್ ಭಾರದ್ವಾಜ್ji

No comments:

Post a Comment