Sunday 9 November 2014

ಅವಳು ಅಲ್ಲಿಯೇ ಇದ್ದಾಳೆ


ಅವಳು ಅಲ್ಲಿಯೇ ಇದ್ದಾಳೆ...
ಮನ್ವಂತರ ಗತಿಸಿದರೂ ಕದಲದೇ ಕಾಯುತ್ತಿದ್ದಾಳೆ
ಹೊಂಗೇ ಮರದ ಹಿಂದೆ ನಾಚಿ ನಿಂತಿದ್ದಾಳೆ
ತುಂಬೆ ಗಿಡ ಸವರುತ್ತಾ ನೆಲದಿ ಕಾಲ ಹೆಬ್ಬರಳಿನಿಂದ ರಂಗೋಲಿ ಬಿಡಿಸಿ
ಆಗಾಗ ಧಾವಣಿಯ ತುದಿಯ ಚುಂಗು ಹಿಡಿದು ಕಿರು ಬೆರಳಿಗೆ ಸುತ್ತಿ
ತುಟಿಯಂಚಿನಲ್ಲಿ ಲಜ್ಜೆಯ ನಸುನಗೆ ಸೂಸಿ
ಹೆಜ್ಜೆ ಸದ್ದುಗಳ ನಿರೀಕ್ಷಿಸಿ
ಮುರುಳಿ ನಾದವ ಅಪೇಕ್ಷಿಸಿ
ನೀಲ ಮೇಘ ಶ್ಯಾಮ ವರ್ಣದ ಪುರುಷನ ಧೇನಿಸಿ
ಶತ ಶತಮಾನಗಳಿಂದ ತವಕಿಸಿ, ತಲ್ಲಣಿಸಿ,
ತಪವನಾಚರಿಸಿ
ನಡೆದು ಬಂದ ಹಾದಿಯ ಕಡೆ ಗಳಿಗೆಗೊಮ್ಮೆ ವೀಕ್ಷಿಸಿ
ಮುಡಿದ ದುಂಡು ಮಲ್ಲೆಯ ಮೊಗ್ಗು ಅರಳುವುದನ್ನೇ ಕಾದು
ಕಡು ವಿರಹದ ಬಡಬಾಗ್ನಿಯಲಿ ಅನುಕ್ಷಣವೂ ಬೆಂದು
ರಿಂಗಣಿಸುವ ಕೊಳಲ ಗಾನದ ಆಲಾಪನೆ ಗುನುಗುತಿಹಳು
ಗೋ ಮೆರವಣಿಗೆಯ ಅವಲೋಕಿಸುತಿಹಳು
ಗೊಲ್ಲನ ಆಗಮನವನ್ನೇ ಎದುರು ನೋಡುತಿಹಳು
ನೆನಯುವ ಸುಖಕ್ಕಾಗಿ ಮನಸಿಗೆ ಮರೆವಿನ ಮಸುಕು ಹಾಕುತ್ತಾ
ಮತ್ತೆ ಮತ್ತೆ ಮರೆಯುತ್ತಾ ಮತ್ತೆ ಮತ್ತೆ ನೆನೆಯುತ್ತಾ
ಬೃಂದಾವನದಂಗಳದಲಿ ಮತ್ತೆ ಸರಸದ ಸವಿಯ ಸವಿಯಲು
ರಾಧೆ ಸದಾ ಕಾಯುತ್ತಲೇ ಇದ್ದಾಳೆ
ಇಂದಿಗೂ ಮತ್ತೆ ಮಾಧವನ ಆಲಿಂಗನಕ್ಕೆ ಕಾತರಳಾಗಿ ಅಲ್ಲಿಯೇ ಇದ್ದಾಳೆ
-ವಿಶ್ವಾಸ್ ಭಾರದ್ವಾಜ್

No comments:

Post a Comment