Sunday 9 November 2014

ಕೆಲವೊಮ್ಮೆ ಹೀಗೆ

 
ಕೆಲವೊಮ್ಮೆ ಹೀಗೆ:
ಕೆಲವೊಮ್ಮೆ ವದನದಲಿ ನಿರ್ಜೀವ ನಗು
ಸತ್ವ ಕಳೆದ ಉರುಳುವ ನಿರ್ಲಿಪ್ತ ಹಾಸ
ನಗೆಯ ಬೆನ್ನಲ್ಲೇ ಬಾಕು ಪಿಡಿದು ತಿವಿದಿದೆ ಹತಾಷೆ
ಸಾರ್ವಜನಿಕರಿಗೆ ಮರೆಯಾಗಬೇಕು ಅಂತರಂಗದ ಕ್ಲೇಷ..
ಒಳಮನಸ ಕೋಣೆಯ ಬಿಸಿಲಮಚ್ಚೆಯಲಿ
ಸುಡು ಸುಡುವ ಕೆಂಡದಂತೆ ವಿನಾಕಾರಣ ಆಕ್ರೋಷ
ತುಳಿದು ಮೆಟ್ಟಿ ಹೂತು ಹಾಕಿ ಸೃಷ್ಟಿಸು ಮತ್ತೊಂದು
ನಗೆಯ ವರ್ಣಗೋಳ
ಕೆಲವೊಮ್ಮೆ ದೀರ್ಘ ಬೇಗುದಿ ಅನುಭವಿಸಲೂ
ಬಿಡರು ಪಾಪಿ ಶಬ್ಧ ರಾಕ್ಷಸರ
ಏಕಾಂತ ಬಯಸುವ ಆತ್ಮಕ್ಕೆ ಗಾಳಿಗೆ ಕಿರುಗುಡುವ ಕಿಟಕಿ ಬಾಗಿಲಗಳ ಸದ್ದೂ ಅಸಹನೀಯ
ಚೀರ್ ಗುಟ್ಟುವ ದುಂಬಿಯ ಝೇಂಕಾರ
ಕರ್ಣಕಠೋರ ಕಿರುಚಾಟ ಕರ್ಕಶ ಕಷ್ಟ
ರಿಂಗಣಿಸುವ ಸ್ಮೃತಿ ಪಟಲದ ದೂರ ಸರಿದ
ಅನುಬಂಧದ ಧ್ವನಿ
ಅನುರಣದ ಹಿಂಸೆಯೇ ಅನಿವಾರ್ಯವೆನಿಸುವ ಅಸಹ್ಯ ವಾಂಚೆ
ಕೆಲವೊಮ್ಮೆ, ಅದೇ ಪರಿಚಿತ ಪರಿಮಳದ ಕಂಪು
ನಾಸಿಕಾಗ್ರಗಳ ಮತ್ತೇರಿಸುವ ವಯ್ಯಾರದ ಘಮ
ಅದು ಇಷ್ಟವಾದರೂ ಸಹಿಸಲಾರದಷ್ಟು ದುರ್ಗಂಧ
ನಾರುತ್ತದೆ ಕೊಳೆತು, ಹಳಸಿದ ಹಲಸು ತೊಳೆಗಳ ಲೋಳೆ
ಸುವಾಸನೆ ಹೀರಲು ಅಸಾಧ್ಯ; ಕಾರಣ ಕೊಳೆತು ಕರಗುತ್ತಲಿದೆ ಭಾವ..
ಹಿಂಡಿ ಹಿಪ್ಪೆಯಾಗಿಸಿ ಹರಡಿ ಒಣಹಾಕಿದೆ ಜೀವ
ಯಾರು ಅರಿಯುವರು ನಿತ್ಯ ಸತ್ತು ಮತ್ತೆ
ಬದುಕಿ ನರಳಾಡುವ ನೋವ
ಕೆಲವೊಮ್ಮೆ ಮಾತ್ರ ಈ ಬಡಬಾಗ್ನಿಯ
ಕಾವು ರೌರವ..
-ವಿಶ್ವಾಸ್ ಭಾರದ್ವಾಜ್

No comments:

Post a Comment