Saturday 22 November 2014

ಬೆಳಕ ಪರಾಕು





ಬೆಳಕ ಪರಾಕು:
ಕತ್ತಲ ಪರಿಷೆಯಲ್ಲಿ ಮಿಂದೆದ್ದ ರಜನಿ-
ಕಳೆದು ಕಾಯುತ್ತಿದೆ ಆ ದಿವ್ಯ ಮಹೂರ್ತಕ್ಕೆ
ಪಡುವಣದಲ್ಲೂ ಪಡಮೂಡತ್ತದೆ ಆ ಭವ್ಯ ವೈಭವ
ಪೂರ್ವದಲ್ಲಿ ಪೂರ್ವವನೇ ಮರೆಸುವ ರಣಕಹಳೆ
ಚಿಮ್ಮಿ ಬರುತಲಿದೆ ಬೆಳಕಿನಪಾರ ಸೈನ್ಯ
ತಮಗಣದ ವಿರುದ್ಧ ಸಮರ ಸಾರಿಹರು ಆದಿತ್ಯನ ಯೋಧರು
ಮೊದಲು ಸೂಜಿ ಮೊನೆಯಲ್ಲಿ ಇರಿದ ತೇಜೋ ಕಿರಣ
ಅವ್ಯಾಹತವಾಗಿ ಸುರಿಯತೊಡಗಿದೆ ಕೊಳಗಗಟ್ಟಲೇ
ನೋಡನೋಡುತ್ತಲೇ ಜಮೆಯಾದ ಹಳ್ಳ-ಕೊಳ್ಳ ನದಿ, ಜರಿ ತೊರೆಗಳ
ಸಹಸ್ರಪಟ್ಟು ಬೆಳಕಿನ ಮಹಾಸಾಗರದೊಡಲು
ಮೊಗೆದಷ್ಟೂ ಕಡಿಮೆ, ಬಗೆದಷ್ಟೂ ಪ್ರಕಾಶ
ಹೊಳೆ ಹೊಳೆದು ದೇದಿಪ್ಯಮಾನವಾಗಿ ಪ್ರಜ್ವಲಿಸಿ
ಬೆಳೆಬೆಳೆದು ನಿಂತಿದೆ ವಿಶ್ವ'ರೂಪಾ'ಕೃತಿಯಲಿ
ಕತ್ತಲ ಶಕ್ತಿ ಸಾಮರ್ಥ್ಯಗಳಿಗೆ ಮಂಕಾಗುವ ಪರಿ
ಬ್ರಹ್ಮರಾಕ್ಷಸನ ಆಕಾರ ತಳೆದಿದೆ ಸಾತ್ವಿಕ ಭಾಸ್ಕರನ ಬೆಳಕು
ಪರಾಕು ಹೇಳುತ್ತವೆ ಗಿರಿ ಕಂದರಗಳು ಮಾರ್ಧನಿಸಿ
ಹಕ್ಕಿಪಕ್ಕಿಗಳ ಚಿಲಿಪಿಲಿ ಕಲರವದ ಸ್ವಾಗತಗಾನ
ಅಂಧಕಾರಾಸುರನ ವಧಿಸಿ ವಿಜಯೋತ್ಸಾಹಗೈದ
ಚೈತನ್ಯದಾಯಕ ಪ್ರಭೆಗೆ ಎಲ್ಲೆಲ್ಲೂ ಜಯಘೋಷ ಮೊಳಗು
ಮಂಗಳಾರತಿ ಎತ್ತಿ ತಿಲಕವಿಡುತ್ತವೇ ಸಪ್ತವರ್ಣಗಳ ಕಾಮನಬಿಲ್ಲು
ಪ್ರಾತಃಕಾಲದ ಬಾಂದಳದ ಒಡ್ಡೋಲಗದಿ ವಿರಾಜಮಾನ ದಿವಾಕರ
ಶ್ವೇತ ಮೇಘಗಳಿಗೂ ಅಣತಿ ನೀಡುವ ಒಡೆಯ
ಸಕಲಚರಾಚರ ಜೀವಜಂತುಗಳ ಪೋಷಿಪ ಮಹಾಕಾಯ
ಅಣುರೇಣು ತೃಣಕಾಷ್ಟಗಳ ಪಾಲಕ ಅಧಿನಾಯಕ
ಬೆಳಕಿನ ವರ್ಣ ಸಾಮ್ರಾಜ್ಯದ ಶ್ವೇತಕೇತುವಿನಲ್ಲಿ ಸರ್ವವೂ
ಸ್ವಸ್ಥ, ಸಮ್ಮತ, ಸಮ್ಮಿಳಿತ, ಸಮ್ಮೋಹಿತ ಸಂಕಥನ
ಬಾಂದಳದಿಂದ ಇಳೆಗಿಳಿದ ಪ್ರಥಮ ಉಷಾಕಿರಣವ ಚುಂಬಿಸುವ
ಆಕಾಂಕ್ಷೆ ಹೊಂದಿದವ ಬೆಳಕಿನ ಸಮರ್ಥಕನೇ ಹೊರತು
ಗಾಢಾಂಧಕಾರವ ಅಪ್ಪುವ ಹೆಂಬೇಡಿಯಲ್ಲ
-ವಿಶ್ವಾಸ್ ಭಾರದ್ವಾಜ್
****************************
(ಬೆಳಕಿನ ಪದ್ಯ.. ಬರೆಸಿದ್ದು ಒಬ್ಬರು ಮಾರ್ಗದರ್ಶಕರು.. ಬರೆದಿದ್ದು ಒತ್ತಡ ಸಹಿಸದೇ.. ನನಗೂ ಬೆಳಕು ಇಷ್ಟವಾಗುತ್ತದೆ ಅಂತ ಪದ್ಯದಲ್ಲಿ ಹೇಳಿ, ಕತ್ತಲೆಯಿಂದ ಹೊರಬರುವ ಪ್ರಯತ್ನದಲ್ಲಿದ್ದೇನೆ ಅನ್ನುವ ಸಂದೇಶ ತಿಳಿಸಲು ಇಚ್ಛೆ.. “ಅಯ್ಯೋ! ಮುಂಡೇದೆ ಬೆಳಕಿನ ಕಡೆಗೆ ಎಳ್ಕಂಡು ಹೋಗೋಣ ಅಂತ ಇದ್ರೆ ಮತ್ತೆ ಕತ್ತಲೇನ ಹೊಗಳ್ತೀಯಾ” ಅಂತ ಅವ್ರು ಗದರಿಕೊಂಡಿದ್ದಕ್ಕೆ, ಸಣ್ಣಗೆ ಅವಮಾನಿತನಾದ ನಾನು, ಊಹುಂ! ನಿಮ್ಮದೇ ದಾರಿಯಲ್ಲಿದ್ದೀನಿ ಅಂತ ಹೇಳಲು ಬರೆದ ಪದ್ಯ.. ಮುದ್ದಾಗಿ ಸೇಡು ತೀರಿಸಿಕೊಂಡ ಭಾವ.. ಉದ್ದಟತನಕ್ಕೆ ಚಿಕ್ಕದೊಂದ ಪಶ್ಚಾತ್ತಾಪದ ಕ್ಷಮೆಯೊಂದಿಗೆ.. ಬೆಳಕಿನ ಪಾಠ ಮಾಡಿದವರಿಗೆ ಅರ್ಪಣೆ)

No comments:

Post a Comment