Sunday 9 November 2014

ಅಗಲಿದ ಮಿತ್ರನಿಗೆ ಅಕ್ಷರ ತರ್ಪಣ

 
ಅಗಲಿದ ಆತ್ಮೀಯ ಗೆಳೆಯನಿಗೆ ಅಕ್ಷರ ತರ್ಪಣ:
ಇಲ್ಲ.. ಈಗ ಅದ್ಯಾವ ಭಾವಗಳ ತುಮಲಗಳಿಲ್ಲ..
ಮೊನ್ನೆ ಇದ್ದ ಸಿಟ್ಟು-ಸೆಡವು, ಹತಾಶೆ, ಅಸಮಧಾನ, ಕೋಪ-ಆಕ್ರೋಷ, ದುಃಖ-ದುಮ್ಮಾನ, ಸಂಕಟ-ವೇದನೆ ಯಾವುದೂ ಇವತ್ತಿಲ್ಲ.. ಮನಸೆಲ್ಲಾ ಖಾಲಿ ಖಾಲಿ.. ಯಾವ ಪ್ರತಿಕ್ರಿಯೆಗಳೂ ಇಲ್ಲದ ನಿರ್ಭಾವುಕ, ನಿರ್ವಿಣ್ಣತೆಯ ನಿರ್ವಾತ.. ಅದೊಂದು ವಿವರಿಸಲು ಸಾಧ್ಯವಾಗದ ಶೂನ್ಯ ಸ್ಥಿತಿ.. Yes..Its an un explainable vacume..
ಪ್ರತಿ ನಿತ್ಯ ಟ್ರಾಫಿಕ್ನಲ್ಲಿ ಕಾಣಿಸುವ ಮುಖ ಒಂದು ದಿನ ಕಾಣದೇ ಇದ್ದಾಗ ಚಡಪಡಿಕೆ ಶುರುವಾಗುತ್ತೆ, ಅಂತದ್ರಲ್ಲಿ ನಿತ್ಯವೂ ಆಫೀಸ್ನಲ್ಲಿ ಮುಗುಳ್ನಗೆ ಸೂಸಿ ಸ್ವಾಗತಿಸುತ್ತಿದ್ದ ಆತ್ಮೀಯ ಕೊಲೀಗ್ ಇನ್ನು ಮುಂದೆ ಕಾಣಿಸೋದಿಲ್ಲ ಅಂದಾಗ ಹೇಗಾಗಬೇಡ..!
ಇಲ್ಲ.. ಈಗ ಅಧ್ಯಾವ ಭಾವಗಳ ತುಮಲಗಳಿಲ್ಲ..
ಇಲ್ಲ! ಈಗ ಸಿಟ್ಟು ಮಾಡಿಕೊಂಡು ಅರ್ಥವಿಲ್ಲ.. ನಿನ್ನ ಹುಟ್ಟಿನಂತೆ ಅಂತ್ಯಕ್ಕೊಂದು ಉದ್ದೇಶವೋ ಕಾರಣವೋ ಇರಲೇ ಬೇಕು..? ಏನು ಆ ಕಾರಣ..? ಯಾಕೆ ಸರಿದೆ ಮೃತ್ಯುವಿನ ಸೆರಗಿನ ಮರೆಗೆ ಹೇಳದೇ ಕಾರಣ..? ನನಗೇ ಕೇವಲ ಆ ಕಾರಣ ಬೇಕು..!
ಸತ್ತ 13 ದಿನ ಆತ್ಮ ಇಲ್ಲೇ ಇರುತ್ತದೆ.. ದೈಹಿಕವಾಗಿ ಗತಿಸಿದರೂ, ಚಿನ್ಮಯದಾಯಕ ಸ್ಪಿರಿಟ್ಗೆ ಮುಕ್ತಿ ಸಿಕ್ಕಿರೋದಿಲ್ಲ.. ಅನ್ನ ಆಹಾರ ನೀರಿಲ್ಲದೆ ಪರದಾಡುವ ಆತ್ಮ ಹಸಿವು, ಬಾಯಾರಿಕೆಗಳಿಂದ ಪರಿತಪಿಸುತ್ತದೆ ಅಂತ ಚಿಕ್ಕಂದಿನಲ್ಲಿ ಅಮ್ಮ ಕಥೆ ಹೇಳಿದ್ದ ನೆನಪು..
ಗೆಳೆಯಾ ನೀನೂ ಕೂಡಾ ಅಂತದ್ದೇ ಆತ್ಮ ಆಗಿದ್ದೀಯಾ..? ನಿನ್ನ ಸ್ಪಿರಿಟ್ಗೆ ನಾವು ಸಾಮೂಹಿಕವಾಗಿ ಇಟ್ಟ ಕಣ್ಣೀರು ಕಾಣಿಸಿತೇ..? ನಿನ್ನ ಬದುಕಿನ ದುರಂತಕ್ಕೆ ವ್ಯಕ್ತಪಡಿಸಿದ ವಿಷಾದ ಗೊತ್ತಾಯಿತೇ..? ದುಡುಕತನದ ನಿರ್ಧಾರಕ್ಕೆ ಧಿಕ್ಕಾರ ಹೇಳಿದ್ದು ಅರಿವಿಗೆ ಬಂದಿತೇ..? ನಿನ್ನ ಹೊತ್ತೊಯ್ದ ಕಾಲನಿಗೆ ಹಿಡಿಮಣ್ಣು ತೂರಿ ಶಪಿಸಿದ್ದು ಕಂಡಿತೇ..?
ಇಲ್ಲ.. ಈಗ ಅದ್ಯಾವ ಭಾವಗಳ ತುಮಲಗಳಿಲ್ಲ..
ಒಂದು ಗೆಳೆತನದ ಅಧ್ಯಾಯವನ್ನು ಬೇಗ ಮುಗಿಸಿ ಹೋಗಿಬಿಟ್ಟೆ.. ಅಂಥ ಅವಸರವೇನಿತ್ತು ನಿನಗೆ..? ಬದುಕಿದ್ದಾಗ ನೀನು ಅಂತರ್ಮುಖಿಯಾಗಿದ್ದೇಕೆ..? ಸತ್ತ ಮೇಲೆ ಪ್ರಶ್ನೆಗಳನ್ನು ಮಾತ್ರ ಉಳಿಸಿ ಹೋಗಿದ್ದೇಕೇ..? ಉತ್ತರವೇ ಇಲ್ಲದ ದೊಡ್ಡ ಪ್ರಶ್ನೆಯಾಗಿ ನೀ ಉಳಿದೆಯೇಕೆ..? ಅಸಲಿಗೆ ನಿನಗೆ ಹೋಗಲು ಅನುಮತಿ ನೀಡಿದ್ದಾದರೂ ಯಾರು..? ನಮ್ಮ ಬಳಗದ PERMISSION ತೆಗೆದುಕೊಳ್ಳದೇ ಹೋದ ನಿನ್ನ ತಪ್ಪಿಗೆ ಯಾವ ಶಿಕ್ಷೆ ಕೊಡಬೇಕು ನೀನೇ ಹೇಳು..? ಬಾಯಿ ತುಂಬಾ ಬಯ್ಯುವ ಮನಸಾಗುತ್ತಿತ್ತು..
ಆದರೀಗ ಇಲ್ಲ, ಅದ್ಯಾವ ಭಾವಗಳ ತುಮಲಗಳಿಲ್ಲ..
ಬದುಕು ತುಂಬಾ ಸಂದಿಗ್ದ ಸಂಕದ ಮೇಲೆ ನಿಂತಿದೆ.. ನಿನ್ನ ಕಳೆದುಕೊಂಡ ಗೆಳೆಯರು ಅದೇ ಕಹಿ ನೆನಪಿನಲ್ಲಿ ಮತ್ತೊಂದು ಟೂರ್ ಮಾಡಿದ್ದಾರೆ.. ಟೂರ್ನಲ್ಲಿ ನಿನಗೆ ಕಾಯ್ದಿಟ್ಟುಕೊಂಡ ಸ್ಥಾನದಲ್ಲಿ ಮತ್ತೊಬ್ಬರು ಕುಳಿತಿದ್ದರು, ಅಲ್ಲಿ ನೀನಿರಲಿಲ್ಲ, ಆಗ ಚಿಮ್ಮುತ್ತಿದ್ದ ನಗುವಿನಲ್ಲಿ ನೀನಿಲ್ಲ,, ನಿನ್ನ ಪಾಲಿನದ್ದನ್ನು ಬೇರೆ ಯಾರೋ ತಿಂದರು, ಮತ್ಯಾರೋ ಕುಡಿದರು.. ಮಿಸ್ ಮಾಡಿಕೊಂಡಿದ್ದು ನೀನಾ..? ನಾವಾ..? ಈಗ ಹೇಳು ಸತ್ತು ಏನು ಸಾಧಿಸಿದೆ..?
ಇಲ್ಲ.. ಈಗ ನೀನಿಲ್ಲ.. ಮತ್ತೆ ನೀ ಬಾರದ ಪ್ರಪಂಚದ ಕಡೆ ಹೋಗಿದ್ದೀಯಾ..? ನಿನ್ನ ನೆನಪುಗಳನ್ನು ಒರೆಸಿ ಹಾಕಲೇ ಬೇಕು.. ಇದು ನಿನ್ನ ಬಗ್ಗೆ ಬರೆವ ಕಟ್ಟ ಕಡೆಯ ಸಾಲುಗಳು.. ಇನ್ನು ಮುಂದೆ ನಮ್ಮ ಪ್ರಪಂಚದಲ್ಲಿ ಸಂಜಯ ಲದ್ದೀಮಠ ಅನ್ನುವ ಹೆಸರು ಶಾಶ್ವತವಾಗಿ ಅಳಿಸಿ ಹೋಗುತ್ತದೆ..
ಆದ್ರೆ…
ಮರೆತೇನಂದರೂ ಮರೆಯಲಿ ಹ್ಯಾಂಗ..
ನಮ್ಮೆಲ್ಲರ ಹೃದಯಲ್ಲಿ ಒಂದು ಸಣ್ಣ ಕೊಣೆಯೊಳಗೆ ನಿನ್ನ ಬಂಧಿಸಿ ಕೂಡಿ ಹಾಕುತ್ತೇವೆ.. ಒಂದು ಪುಟ್ಟ ಬೀಗ ಜಡಿಯುತ್ತೇವೆ.. ಅದು ಚಿಕ್ಕದ್ದೇ ಕೊಠಡಿ ಆದ್ರೆ ಅದು ನಿನ್ನ ಮೊನ್ನೆ ಫೋಸ್ಟ್ ಮಾರ್ಟಂಗೆ ಮಲಗಿಸಿದರಲ್ಲ ಮಾರ್ಚರಿಯ ಆ ಪುಟ್ಟ ಕ್ಯಾಬಿನ್ ಅಂತದ್ದಲ್ಲ.. ಅಲ್ಲಿ ಕತ್ತಲಿಲ್ಲ.. ಉಸಿರುಗಟ್ಟಿಸುವ ಇಕ್ಕಟ್ಟಿಲ್ಲ.. ಭಯ ಹುಟ್ಟಿಸುವ ಒಂಟಿತನವಿಲ್ಲ.. ಅದು ಕಂಫರ್ಟಾಗಿದೆ.. ನೀನು ಅಲ್ಲೇ ಇರಬೇಕು.. ಅಲ್ಲೇ ಇರುತ್ತೀಯಾ.. ನೆನಪಿನ ಗಣಿಯಾಳಕ್ಕೆ ಸೇರಿಹೋದ ಕಟ್ಟ ಕಡೆಯ ಚುಟುಕು ಸ್ಮೃತಿಯಾಗಿ..
ಅಗಲಿ ಹೋದ ನಿನಗೆ ಇದು ನಿನ್ನ ಸ್ನೇಹ ಬಳಗದ ಅಂತಿಮ ಆತ್ಮೀಯ ಅಕ್ಷರಗಳ ಅಶೃ ತರ್ಪಣ..
-ವಿಶ್ವಾಸ್ ಭಾರದ್ವಾಜ್..
*********

No comments:

Post a Comment