Wednesday 10 December 2014

ಗಣಪತಿಯ ತಮ್ಮ ರುಂಡಪತಿ



ಗಣಪತಿಯ ತಮ್ಮ ರುಂಡಪತಿ :
ಪಪ್ಪ ನಿದ್ದೆ ಬರ್ತಿಲ್ಲ ಯಾವ್ದಾದ್ರೂ ಕಥೆ ಹೇಳಪ್ಪ? 7 ವರ್ಷದ ಮಗಳು ಸಾನ್ವಿಕ ಅಪ್ಪ ಸಚ್ಚಿದಾನಂದನನ್ನು  ಕೇಳಿದ್ಳು
ಹುಂ ಪುಟ್ಟಿ ಇವತ್ತು ಭಸ್ಮಾಸುರ ಮೋಹಿನಿ ಕಥೆ ಹೇಳ್ತೀನಿ. ಸಮುದ್ರ ಮಥನ ಮಾಡೋ ದೇವತೆಗಳು... ಮಧ್ಯೆ ಬಾಯಿ ಹಾಕಿದ ಸಾನಿ ಕೇಳಿದ್ಳು  ಅಪ್ಪ ಮಥನ ಅಂದ್ರೇನು?
ಹಾಗಂದ್ರೆ ಮಮ್ಮಿ ಮಜ್ಜಿಗೆ ಕಡಿತಾಳಲ್ವಾ ಹಾಗೆ ಸಮುದ್ರನ ಕಡಿಯೋದು ಅಂತ.. ಮಮ್ಮಿ ಕಡೆಗೋಲು ಬಳಸ್ತಾರಲ್ವಾ ಅದೇ ತರ ದೇವತೆಗಳು ಹಾಗೂ ರಾಕ್ಷಸರು ಮಂದಾರ ಪರ್ವತವನ್ನು ಕಡೆಗೋಲಿನ ಥರಾ ಬಳಸಿದ್ರು. ಕೈನಲ್ಲಿ ಸಮುದ್ರ ಕಡಿಯೋದಕ್ಕೆ ಆಗಲ್ವಲ್ಲ ಅದಕ್ಕೆ ಆದಿ ಶೇಷನನ್ನು ಹಗ್ಗದ ಥರ ಮಂದಾರ ಪರ್ವತಕ್ಕೆ ಸುತ್ತಿದ್ರು. ಹಾವಿನ ತಲೆಯ ಭಾಗವನ್ನು ದೇವತೆಗಳು ಇಟ್ಕೊಂಡ್ರು. ಬಾಲವನ್ನು ರಾಕ್ಷಸರು ಇಟ್ಕೊಂಡ್ರು. ಹಾಗೆ ಕಡಿಯುವಾಗ ಮಂದಾರ ಪರ್ವತ ಕುಸಿಯೋಕೆ ಶುರು ಆಯ್ತು. ಆಗ ವಿಷ್ಣು ದೇವ ಆಮೆಯ ರೂಪದಲ್ಲಿ ಮಂದಾರ ಪರ್ವತದ ಕೆಳಗೆ ಸ್ಟಾಂಡ್ ಕೊಟ್ಟ. ಮತ್ತೆ ಕಡಿಯೋದನ್ನು ಮುಂದುವರೆಸಿದ್ರು. ಆವಾಗ ಸಮುದ್ರದ ಕೆಳಗಿಂದ ಭಯಂಕರ ವಿಷ ಬಂತು. ದೇವತೆಗಳಿಗೆ ರಾಕ್ಷಸರಿಗೆ ಭಯ ಆಯ್ತು. ಆ ತೊಂದರೆಯನ್ನು ಬಗೆ ಹರಿಸೋಕೆ ಪರಮೇಶ್ವರನ್ನ ಕೇಳಿಕೊಂಡ್ರು.. ಕೂಡಲೇ ಪ್ರತ್ಯಕ್ಷ ಆದ ಶಿವ ಆ ವಿಷವನ್ನು ಗಟಗಟ ಅಂತ ಕುಡಿದುಬಿಟ್ಟ. ಗಂಡ ವಿಷ ಕುಡಿದ್ರೆ ಏನಾದ್ರೂ ಹೆಚ್ಚು ಕಮ್ಮಿ ಆಗಿಬಿಡುತ್ತೆ ಅಂತ ಭಯ ಪಟ್ಟ ಹೆಂಡತಿ ಪಾರ್ವತಿ, ವಿಷ ಗಂಟಲಿನಿಂದ ಕೆಳಗೆ ಇಳಿಯದಂತೆ ಕುತ್ತಿಗೆ ಹಿಡಿದುಬಿಟ್ಳು. ಹಾಗಾಗಿ ವಿಷ ಕುತ್ತಿಗೇಲಿ ಸ್ಟಾಕ್ ಆಯ್ತು. ಅದಕ್ಕೆ ಶಿವನ ಕುತ್ತಿಗೆ ನೀಲಿ ಕಲರ್ ಆಗಿದ್ದು.. ಹಾಗಾಗಿ ಶಿವನಿಗೆ ನೀಲಕಂಠ ಅನ್ನೋ ಹೆಸರು ಬಂದಿದ್ದು..
ಹೂಂ! ಆಮೇಲೇನಾಯ್ತು..?  ಕೇಳಿದ್ಳು ಸಾನಿ
ಆಮೇಲೆ, ಮತ್ತೆ ಸಮುದ್ರ ಕಡಿಯೋದನ್ನು ಕಂಟಿನ್ಯೂ ಮಾಡಿದ್ರು. ಆಗ ಅದ್ರಿಂದ ಅಮೃತ ಬಂತು.. ಅಮೃತ ಅಂದ್ರೆ ಏನು ಗೊತ್ತಾ ಪುಟ್ಟಿ..? ಮಮ್ಮಿ ನಿಂಗೆ ಹುಷಾರಿಲ್ಲದಿದ್ದಾಗ ಮಾಡಿಕೊಡ್ತಾಳಲ್ವಾ ಆ ತರದ ಕಷಾಯ. ಅದನ್ನು ಯಾರೇ ಕುಡಿದ್ರು ಅವ್ರು ಸಾಯೋದೇ ಇಲ್ಲ ಗೊತ್ತಾ..?
ಅದು ಈಗಲೂ ಸಿಗುತ್ತಾ ಪಪ್ಪ?
ಸಿಗತ್ತೇ ಮಗಳೇ, ನಿಂಗೆ ಕೆಮ್ಮು ಬಂದಾಗ, ಮಮ್ಮಿ ಫೋರ್ಸ್ಮಾಡಿ ಕುಡಿಸ್ತಾಳಲ್ಲ ಅದೇ ಅಮೃತ..
ಹೌದಾ ಪಪ್ಪ? ಹಾಗಿದ್ರೆ ಇನ್ಮೇಲೆ ನಾನ್ ದಿನ ಮಮ್ಮಿಗೆ ಹೇಳಿ ಕಷಾಯ ಕುಡಿತೀನಿ. ಮುಂದೆ ಹೇಳು ಪಪ್ಪ ಏನಾಯ್ತು ಅಂತ? ಒತ್ತಾಯಿಸಿದಳು ಸಾನಿ.
ಮುಂದೆ.. ದೇವತೆಗಳು ಅಮೃತ ನಮಗೆ ಬೇಕು ಅಂತ, ರಾಕ್ಷಸರು ನಮಗೆ ಬೇಕು ಅಂತ ಜಗಳ ಶುರುಮಾಡಿಕೊಂಡ್ರು.. ಕೊನೆಗೆ ಎರಡೂ ಟೀಂ ಮಧ್ಯೆ ವಾರ್ ಆಯ್ತು..
ಹೌದಾ! ಯಾರು ವಿನ್ ಆದ್ರು ವಾರ್ನಲ್ಲಿ..? ಸಾನಿ ಕಣ್ಣಲ್ಲಿ ಕುತೂಹಲ ಮನೆಮಾಡಿತ್ತು.
ಇಲ್ಲ ಪುಟ್ಟಿ ವಾರ್ಸ್ಟಾರ್ಟ್ ಆಗಿತ್ತು ಅಷ್ಟೇ. ಆಗ ಮಧ್ಯೆ ಭಗವಾನ್ ಇಂಟರ್ಫಿಯರ್ ಆಗಿ ವಿಷ್ಣು ಮೋಹಿನಿ ವೇಷದಲ್ಲಿ ಎಂಟ್ರಿ ಆದ. ಮೋಹಿನಿ ಅಂದ್ರೆ ವೆರಿ ಬ್ಯೂಟಿಫುಲ್ ಲೇಡಿ..
ನಮ್ ಇಂಗ್ಲೀಷ್ ಮ್ಯಾಮ್ಗಿಂತ ಬ್ಯೂಟಿಫುಲ್ಲಾ..? ಪ್ರಶ್ನಿಸಿದ್ಳು ಸಾನಿ.
ಹಾಂ! ಸಾನಿ ನಿಮ್ಮ ಮೇಡಂಗಿಂತ ಬ್ಯೂಟಿಫುಲ್.. ವಿಷ್ಣು ಮೋಹಿನಿ ವೇಷ ಹಾಕಿದ್ದು ದೇವತೆಗಳಿಗೆ ಗೊತ್ತಿತ್ತು.. ರಾಕ್ಷಸರಿಗೆ ಮಾತ್ರ ಗೊತ್ತಿರಲಿಲ್ಲ. ಕೊನೆಗೆ ಮೋಹಿನಿ ದೇವತೆಗಳಿಗೆ ಅಮೃತ ಕುಡಿಸಿದ್ಳು, ರಾಕ್ಷಸರಿಗೆ ಮೋಸ ಮಾಡಿ ನೀರು ಕುಡಿಸಿದ್ಳು..
ಇದು ಗೊತ್ತಾದ ಮೇಲೆ ರಾಕ್ಷಸರು ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳೋಕೆ ಭಸ್ಮಾಸುರನ ಕರಕೊಂಡು ಬಂದ್ರು.
ಪಪ್ಪ ಭಸ್ಮಾಸುರ ಯಾರು..?
ಭಸ್ಮಾಸುರ ಶಿವನ ಜಟೆಯಿಂದ ಹುಟ್ಟಿದ ರಾಕ್ಷಸ. ಅವನು ಯಾರ ತಲೆ ಮೇಲೆ ಕೈ ಇಡ್ತಾನೋ ಅವರು ಸುಟ್ಟು ಹೋಗ್ತಿದ್ರು.. ಆಗ ದೇವತೆಗಳು ಹೆದರಿ ಮತ್ತೆ ಮೋಹಿನಿಯನ್ನು ಕರೆಸಿದ್ರು.. ಮೋಹಿನಿ ಡ್ಯಾನ್ಸ್ ಮಾಡಿ ಭಸ್ಮಾಸುರ ಅದನ್ನು ಕಾಪಿ ಮಾಡೋ ಹಾಗೆ ಮಾಡಿದ್ಳು.. ಭಸ್ಮಾಸುರ ಕೂಡಾ ಮೋಹಿನಿ ಡ್ಯಾನ್ಸ್ ಮಾಡಿದ ಹಾಗೆ ಮಾಡಿದ. ಕೊನೆಗೆ ಮೋಹಿನಿ ತನ್ನ ತಲೆಯ ಮೇಲೆ ಕೈ ಇಟ್ಳು.. ಭಸ್ಮಾಸುರ ಕೂಡಾ ಅವನ ತಲೇ ಮೇಲೆ ಕೈ ಇಟ್ಟುಬಿಟ್ಟ. ಅವನು ಯಾರ ತಲೇ ಮೇಲೆ ಕೈ ಇಟ್ರೂ ಸುಟ್ಟು ಹೋಗ್ತಿದ್ರಲ್ವಾ..? ಹಾಗೆ ಅವನೂ ಸುಟ್ಟುಹೋದ.. ಅವನ ವರವೇ ಅವನಿಗೆ ಶಾಪ ಆಯ್ತು..
ಹೌದಾ ಪಪ್ಪ! ಇದೇ ಕ್ಲೈಮ್ಯಾಕ್ಸಾ?ನಿರಾಸೆಯಿಂದ ಕೇಳಿದ್ಳು ಸಾನಿ.
ಇಲ್ಲ ಕೇಳು ಕಥೇಲಿ ಮತ್ತೊಂದು ಟ್ವಿಸ್ಟ್ ಇದೆ..! ಭಸ್ಮಾಸುರ ಸುಟ್ಟು ಭಸ್ಮ ಆಗ್ತಾನಲ್ವಾ, ಅದನ್ನು ಶುಕ್ಲಾಚಾರ್ಯ ಬುಟ್ಟಿನಲ್ಲಿ ತುಂಬಿಕೊಂಡು ಹೋಗ್ತಾನೆ.. ಶುಕ್ಲಾಚಾರ್ಯ ಯಾರ್ ಗೊತ್ತಾ? ಅವನು ರಾಕ್ಷಸರ ಮಾಸ್ಟರ್.
ಆಮೇಲೇನಾಯ್ತು..?
ಶುಕ್ಲಾಚಾರ್ಯ ಆ ಭಸ್ಮದಿಂದ ಮತ್ತೊಂದು ದೇಹ ಸೃಷ್ಟಿ ಮಾಡ್ತಾನೆ. ಅದಕ್ಕೆ ಅವನ ತಪಸ್ಸು ಮಾಡಿದ ಶಕ್ತಿಯಿಂದ ಜೀವ ಕೊಟ್ಟ. ಅವನಿಗೆ ವಿಭೂತಸುರ ಅನ್ನುವ ಹೆಸರಿಟ್ಟ.. ವಿಭೂತಿ ಅಂದ್ರೆ ಸುಟ್ಟ ಭಸ್ಮ ಅಂತ ಅರ್ಥ ಅಲ್ವಾ. ಹಾಗಂದ್ರೆ ವಿಭೂತಿಯಿಂದ ಹುಟ್ಟಿದವನು ಅಂತ ಅರ್ಥ. ಸರಿ ವಿಭೂತಸುರ ದೇವತೆಗಳ ಮೇಲೆ ಸೇಡು ತೀರಿಸಕೊಳ್ಳೋಕೆ ಅಂತ ಶಿವನ ತಪಸ್ಸು ಮಾಡ್ತಾನೆ. ಶಿವ ಪ್ರತ್ಯಕ್ಷ ಆಗಿ ಏನು ವರಬೇಕೋ ಕೇಳು ಅಂತಾನೆ. ಅದಕ್ಕೆ ವಿಭೂತಸುರ, ದೇವತೆ ಅಂಶವಿರುವ ಆದ್ರೆ ದೇವತೆಗಳು ಅಲ್ಲದವರಿಂದ ಮಾತ್ರ ತನಗೆ ಸಾವು ಕೊಡು ಅಂತ ವರ ಕೇಳ್ತಾನೆ.. ರೈಟ್ ತಥಾಸ್ತು ಅಂತ ವರ ಕೊಡ್ತಾನೆ.
ಆಮೇಲೆನಾಯ್ತು..? ವಿಭೂತಸುರ ದೇವತೆಗಳನ್ನು ಡಿಫೀಟ್ ಮಾಡ್ತಾನಾ..? ಹೇಗೆ ಸಾಯ್ತಾನೆ?
ವಿಭೂತಸುರ ದೇವಲೋಕಕ್ಕೆ ದಿಗ್ವಿಜಯಕ್ಕೆ ಹೋಗ್ತಾನೆ. ಇಂದ್ರ, ಅಗ್ನಿ, ವಾಯು, ವರುಣ ಎಲ್ಲರನ್ನೂ ಸೋಲಿಸಿ, ಸ್ವರ್ಗದಿಂದ ಓಡಿಸಿಬಿಡ್ತಾನೆ. ಆಗ ವಿಭೂತಸುರನಿಗೆ ಹೆದರಿ ಓಡುವ ದೇವತೆಗಳಿಗೆ ವಿಷ್ಣು ಒಂದು ಐಡಿಯಾ ಕೊಡ್ತಾನೆ. ಹಿಂದೆ ಶಿವ ಗಣಪತಿ ತಲೆ ಕತ್ತರಿಸಿ, ಆನೆ ತಲೆ ಜೋಡಿಸಿದ್ದನಲ್ವ? ಅಲ್ಲಿ ಗಣಪತಿಯ ಹಿಂದಿನ ಮನುಷ್ಯ ತಲೆ ಬಿದ್ದಿರುತ್ತೆ. ಅದನ್ನು ತರಲಿಕ್ಕೆ ದೇವತೆಗಳಿಗೆ ಹೇಳ್ತಾನೆ. ಕೂಡಲೇ ದೇವತೆಗಳು ಶಿವ ಹಾಗೂ ಗಣೇಶನಿಗೆ ಯುದ್ಧ ಆದ ಪ್ಲೇಸ್ಗೆ ಹೋಗಿ ಅಲ್ಲೇ ಬಿದ್ದಿದ್ದ ಮನುಷ್ಯ ತಲೆ ತಗೊಂಡು ಬರ್ತಾರೆ.
ಅದ್ರಿಂದ ಏನ್ ಪ್ರಯೋಜನ? ಅದ್ಯಾಕೆ ಬೇಕಿತ್ತು ವಿಷ್ಣುಗೆ..? ಮತ್ತೆ ಸಾನಿ ಪ್ರಶ್ನೆ ತೂರಿ ಬಂತು.
ವಿಭೂತಸುರ ಏನಂತ ವರ ಕೇಳಿದ್ದು ಹೇಳು..? ದೇವತೆಗಳ ಅಂಶ ಇರುವ ಆದ್ರೆ ದೇವತೆಗಳು ಅಲ್ಲದವರಿಂದ ಮಾತ್ರ ಸಾವು ಅಂತ ಅಲ್ವಾ..? ಗಣಪತಿಯ ಹಿಂದಿನ ಮನುಷ್ಯ ತಲೆಯಲ್ಲಿ ದೇವತೆಗಳ ಅಂಶ ಇರುತ್ತೆ ಆದ್ರೆ ಅದು ಈಗ ದೇವತೆ ಅಲ್ಲ. ಹೌದು ತಾನೆ?
ಹಾಂ! ಆಮೇಲೆ? ತಲೆಯಾಡಿಸಿ ಕೇಳಿದ್ಳು ಸಾನಿ.
ಆ ತಲೆಗೆ ಬೇರೆ ಬಾಡಿ ಹಾಕಿ ವಿಷ್ಣು ಮನುಷ್ಯ ರೂಪ ಸೃಷ್ಟಿಸ್ತಾನೆ. ಅದಕ್ಕೆ ರುಂಡಪತಿ ಅನ್ನುವ ಹೆಸರು ಕೊಡ್ತಾನೆ. ಆಮೇಲೆ ವಿಭೂತಸುರನ ಹತ್ರ ಯುದ್ಧಕ್ಕೆ ಕಳಿಸ್ತಾನೆ. ವಿಭೂತಸುರನಿಗೂ ರುಂಡದೇವನಿಗೂ ಡೆಡ್ಲೀ ವಾರ್ಆಗುತ್ತೆ.. ಫೈನಲಿ ರುಂಡದೇವ ವಿಭೂತಸುರನ್ನ ಕೊಂದು ದೇವತೆಗಳಿಗೆ ಸ್ವರ್ಗ ಕೊಡಿಸ್ತಾನೆ..
ಕ್ಲೈ...ಮ್ಯಾ...ಕ್ಸಾ ಪಪ್ಪಾ..? ಆಕಳಿಸತೊಡಗಿದ್ಳು ಸಾನಿ.
ಹುಂ ಪುಟ್ಟಾ ಕ್ಲೈಮ್ಯಾಕ್ಸ್..! ಮಗಳಿಗೆ ಗುಡ್ನೈಟ್ ಹೇಳಿ ಮಲಗಿಸಿದ ಸಚ್ಚಿದಾನಂದ..
-ವಿಶ್ವಾಸ್ ಭಾರದ್ವಾಜ್ (ವಿಪ್ರವಿಶ್ವತ್)
-----------------------------------

No comments:

Post a Comment