Wednesday 10 December 2014

ಮೂಷಿಕ ಮಹಿಮೆ



ಮೂಷಿಕ ಮಹಿಮೆ:
 ಹಾಗೆಲ್ಲ ಒಂದು ಸಾರಿ ನಿದ್ದೆಗೆ ಜಾರಿದ ಮೇಲೆ ಎದ್ದ ದಾಖಲೆಯೇ ಇಲ್ಲ ನನ್ನದು. ಅಂತದರಲ್ಲಿ ಬಡಿದೆಬ್ಬಿಸಿದಂತೆ ಎಚ್ಚರವಾಗಿ ಹೋಯಿತು. ಎಲ್ಲಿಂದಲೋ ಸರ-ಸರ, ಪರ-ಪರ, ಚರ-ಚರ ಸದ್ದು, ಅವ್ಯಾಹತವಾಗಿ ಕೇಳಿಬರುತ್ತಲೇ ಇದೆ. ಎಲ್ಲಿಂದ ತಿಳಿಯುತ್ತಿಲ್ಲ. ಉಹುಂ! ಪಟಪಟನೆ ತಲೆ ಕೆಡವಿಕೊಂಡೆ.. ಮತ್ತೆ ನಿದ್ದೆಗೆ ಜಾರುವ ಮನಸಾಗುತ್ತಿದೆ. ಕಣ್ಣುಗಳಲ್ಲಿ ಅದೇ ಮಂಜು-ಮಂಜು ತೂಕಡಿಕೆ. ಸದ್ದು ಈಗ ತಲೆಯೊಳಗೂ ಸೇರಿಕೊಂಡು ಕೊರೆಯತೊಡಗಿತು. ಎಲ್ಲಿಂದ ಬರುತ್ತಿದೆ ಸುಡುಗಾಡು ಶಭ್ದ. ಪಾಂಡವರು ವನವಾಸದ ಸಂದರ್ಭದಲ್ಲಿ ಕೌರವರು ಕುತಂತ್ರ ಮಾಡಿ ಅರಗಿನ ಮನೆಯಲ್ಲಿ ದಾಯಾದಿಗಳನ್ನು ಕೊಲ್ಲುವ ಸಂಚು ಮಾಡಿದ್ದಾಗ ಅಲ್ಲಿಂದ ತಪ್ಪಸಿಕೊಳ್ಳಲು ಸುರಂಗ ಕೊರೆಯುತ್ತಿದ್ದ ಸನಿವೇಶ ಕಣ್ಮುಂದೆ ಬರುತ್ತಿದೆ. ಎಷ್ಟೇ ಆದರೂ ನಿದ್ದೆಗಣ್ಣು, ಕನಸುಗಳಿಗೇನಂತೆ ಏಕಾಏಕಿ ದಾಳಿಮಾಡಿಬಿಡುತ್ತವೆ.
            ಅರೆ ಎಲ್ಲಿಂದ ಬರುತ್ತಿದೆ ಹಾಳು ಸದ್ದು..? ನಡುರಾತ್ರಿಯ ಸರಹೊತ್ತಿನಲ್ಲಿ,,! ಹೇಳಿಕೇಳಿ ನಮ್ಮದು ಒಂಟಿಮನೆ ಬೇರೆ. ಯಾರಾದರೂ ಕಳ್ಳ ಹೊಕ್ಕುಬಿಟ್ಟನೆ? ಅಥವಾ ದೆವ್ವಗಳು, ಪಿಶಾಚಿ, ಮೋಹಿನಿ ಇರಬಹುದಾ? ವಾಸ್ತವಕ್ಕೆ ಮರಳಿದೆ. ತಲೆಯಲ್ಲಿ ಅಲೋಚನೆಗಳು ನೂರಾರು ಕವಲುಗಳಾಗಿ ಅರ್ಥವಿಲ್ಲದೆ, ದ್ವಂದ್ವಗಳಾಗಿ ಸುರುಳಿ ಸುತ್ತುತಿವೆ ಯಾವುದೂ ಸ್ಪಷ್ಟವಿಲ್ಲ, ಎನೆನೋ ತರಹೇವಾರಿ ಕಲ್ಪನೆಗಳ ನಡುವೆ ಮತ್ತೆ ಉದ್ಭವಗೊಳ್ಳುವ ಪ್ರಶ್ನೆ ಎಲ್ಲಿಂದ ಬರುತ್ತಿದೆ ದರಿದ್ರದ ಸದ್ದು? ಏನಾದರಾಗಲಿ ನೋಡೆ ಬಿಡುವ ಎಂದು ಹೊದ್ದಿದ್ದ ಚಾದರ ಎಸೆದು ಕುಳಿತೆ. ಕೈಗೆಟಕುವಷ್ಟು ಸನಿಹದಲ್ಲೆ ಸ್ವಿಚ್ಚಿತ್ತು. ಲೈಟ್ ಆನ್ ಮಾಡಿದೆ ದಿಗ್ಗನೆ ಪ್ರಕಾಶ ಬೆಳಗಿತು. ಸುತ್ತಲಿನ ಪರಿಸರಕ್ಕೆ ಕಣ್ಣು ಹೊಂದಿಕೊಳ್ಳಲು ಸುದೀರ್ಘ ಎರಡು ನಿಮಿಷ ಹಿಡಿಯಿತು. ಆಗಲೇ ಸದ್ದು ಹೆಚ್ಚಾಗಿದ್ದು. ಈಗ ಮೊದಲಿಗಿಂತಲೂ ಜೋರಾಗಿ ಕೇಳುತ್ತಿದೆ. ಬಹುಷಃ ಬೆಳಕಾದ್ದರಿಂದಲೇನೋ ಕಾರ್ಯಾಚರಣೆ ಚುರುಕಾಗಿದೆ. ಸರಿ ಯಾರ ಕಾರ್ಯಾಚರಣೆ? ಕಳ್ಳನದ್ದೋ? ದೆವ್ವಗಳದ್ದೋ? ಇಲ್ಲ ಇಲ್ಲ ಕಳ್ಳನಾಗಿರಲು ಸಾಧ್ಯವಿಲ್ಲ ಬಹುಷಃ ಅದೇ ಇರಬೇಕು. ಚಿಕ್ಕಂದಿನಲ್ಲಿ ಅಮ್ಮ, ಅಜ್ಜ, ಅಜ್ಜಿ ಹೇಳಿದ ದೆವ್ವಗಳ ಪುಂಖಾನುಪುಂಖ ಕಥೆಗಳು, ಪಾತ್ರಗಳು ಬೇಡವೆಂದರೂ ನೆನಪಾಗತೊಡಗಿದವು. ಯಾವ ದಿನ ಇಂದು? ಅಮವಾಸ್ಯೆಯಾ? ಹುಣ್ಣಿಮೆಯಾ? ತಥ್ಥೆರಿಕೆ ವಾರ,ತಿಥಿ, ಮಾಸ, ನಕ್ಷತ್ರ ಯಾವುದೂ ನೆನಪಿಲ್ಲ. ಹೇಳಿಕೊಳ್ಳಲು ಬ್ರಾಹ್ಮಣರ ಜಾತಿಯಾದರೂ ಸಂಧ್ಯಾವಂಧನೆ ಮಂತ್ರಗಳೆ ಮರೆತುಹೋಗಿದೆ. ಇನ್ನು ವಾರ-ತಿಥಿಗಳು ಎಲ್ಲಿಂದ ನೆನಪಿರಬೇಕು. ಬ್ರಾಹ್ಮಣರ ಜಾತಿ ಎಂಬ ಪ್ರಸ್ಥಾಪ ಮನಸಿಗೆ ಬರುತ್ತಲೇ ಎದೆಯ ಮೇಲಿನ ಜನಿವಾರ ತಡಕಾಡಿದೆ. ಸಿಕ್ಕಿತು, ಗಾಯಿತ್ರಿ ಗಂಟನ್ನು ಹಿಡಿದುಕೊಂಡು ಧೈರ್ಯ ತಂದುಕೊಳ್ಳುವ ಯತ್ನ ಮಾಡಿದೆ. ಅಬ್ಬಾ! ಇನ್ಮೇಲಾದರೂ ವಾರಕ್ಕೊಂದು ಸಲ ಜಪ ಮಾಡಬೇಕು. ಪಂಚಾಂಗ ಪಾರಾಯಣ ಮಾಡುವ ಅಭ್ಯಾಸ ರೂಡಿಸಿಕೊಳ್ಳಬೇಕು. ಕೊನೆಗೆ ಏನಿಲ್ಲವೆಂದರೂ ವಾರ-ತಿಥಿಗಳು ನೆನಪಿನಲ್ಲಿ ಉಳಿಯುತ್ತವೆ.
        ಚರಚರ ಸದ್ದು ಹೆಚ್ಚುತ್ತಲೇ ಇದೆ. ಮೈ ನಿಧಾನವಾಗಿ ಬೆವರಿನ ಮಯವಾಗುತ್ತಿದೆ. ನನ್ನದು ಮೇಲಿನ ಅಟ್ಟದ ಮೆತ್ತಿಯ ಮೇಲಿನ ವಾಸ್ತವ್ಯ. ಅಲ್ಲಿನ ಪ್ರತಿ ಹರಡಾಗಳೂ ನನ್ನವೇ. ತೀರ ಹೆಂಗಸರಂತೆ ನೀಟಾಗಿ ಜೋಡಿಸಿಕೊಳ್ಳದಿದ್ದರೂ, ಒಂದು ರೀತಿಯಲ್ಲಿ ಸುಸಜ್ಜಿತವಾಗಿ, ವ್ಯವಸ್ಥಿತವಾಗಿ  ನನಗೆ ತೃಪ್ತಿ ನೀಡುವ ರೀತಿಯಲ್ಲಿ ವಸ್ತುಗಳನ್ನು ಇಟ್ಟುಕೊಂಡಿದ್ದೆ. ಚಿಕ್ಕಪುಟ್ಟ ವಸ್ತುಗಳಲ್ಲಿ ಚಿಕ್ಕಪುಟ್ಟ ನೆನಪುಗಳನ್ನು ಶೇಖರಿಸಿಡುವ ನಾನು, ಹರಿದು ಚಿಂದಿಯಾದರೂ ಬಸ್ ಟಿಕೇಟನ್ನು ಎಸೆಯುವುದಿಲ್ಲ. ಹುಟ್ಟಿನಿಂದ ಬಂದ ಅಭ್ಯಾಸವದು. ಎಲ್ಲಿಗೆ ಹೋಗಿ ಬಂದರೂ, ಬಸ್ ಟಿಕೆಟ್ ಮೇಲೆ ಅಂದಿನ ದಿನಾಂಕ ಮತ್ತು ಹೋದ ಸ್ಥಳದ ಹೆಸರು ಬರೆದಿಟ್ಟುಕೊಳ್ಳುವುದು ವ್ಯರ್ಥವಾದರೂ ನೆಚ್ಚಿನ ಹವ್ಯಸ. ಇದರಿಂದ ಪಾಯಿದೆ ಎನಿಲ್ಲದಿದ್ದರೂ ಒಂದಷ್ಟು ಇರುವೆ ಮತ್ತು ಜಿರಲೆಗಳಿಗೆ ಆಶ್ರಯ ಕಲ್ಪಿಸಿದ್ದ ಸುಕೃತ ನನ್ನದಾಗಿತ್ತು.
ಸದ್ದು ನಿರಂತರವಾಗಿ ಕೇಳಿಸುತ್ತಲೇ ಇತ್ತು. ಎಲ್ಲಿಂದಲೋ ಕೊಂಚ ಧೈರ್ಯ ಸಂಪಾದಿಸಿಕೊಂಡೆ. ಮನಸಿನಲ್ಲಿ ಅದಾಗಲೇ ಇಷ್ಟದೈವ ಜಗನ್ಮಾತೆಯ ಪಠಣವಾಗತೊಡಗಿತ್ತು. ಜನನಿಯ ನಾನಾ ಅವತಾರ ಮತ್ತು ಸ್ವರೂಪಗಳು ಸ್ಮರಣೆಗೆ ಬರತೊಡಗಿತ್ತು. ಮಾರಮ್ಮ, ಮಂಚಾಲಮ್ಮ, ಮಾಸ್ತಮ್ಮ, ಮಂಕಾಳಮ್ಮ, ಚೌಡಮ್ಮ, ದೇವಿರಮ್ಮ, ಕಪಾಳಮ್ಮ, ಹೆಣ್ಣು ದೇವರುಗಳ ಹೆಸರೇ ನೆನಪಾಗುತ್ತಿದೆ. ಇಷ್ಟಕ್ಕೂ ದೆವ್ವಗಳು ಹೆದರುವುದು ಆಂಜನೇಯನಿಗಲ್ಲವೇ, ಸರಿ ಸರಿ ಅವನ ನಾಮ ಸ್ಮರಣೆಯೇ ಸರಿ. ಅರ್ಧಂಬರ್ಧ ಬರುತ್ತಿದ್ದ ಹನುಮ ಚಾಲೀಸು ನಾಲಿಗೆಯ ಮೇಲೆ ಹರಿದಾಡತೊಡಗಿತು.
        ನಡುಕ ಹೆಚ್ಚಿಸುವ ಕೊರೆಯುವ ಚಳಿ ಬೇರೆ. ವಿಧಿಯಿಲ್ಲದೆ ಎದ್ದೆ. ಸದ್ದು ನಿಚ್ಚಳವಾಗಿ ಕೇಳಿ ಬರುತ್ತಿರುವದು ಮೂಲೆಯ  ಕಪಾಟಿನಿಂ. ಅಲ್ಲಿ ತನ್ನ ಪುಸ್ತಕ ಭಂಡಾರವಿದೆ. ಓದುವ ಹವ್ಯಾಸವಿದ್ದ ನಾನು ಅತಿ ಜತನದಿಂದ ಜೋಪಾನ ಮಾಡಿ ಸಂಗ್ರಹಿಸಿದ ಕವಿತೆಗಳ ಸಂಗ್ರಹವಿದೆ, ಕಥಾ ಸಂಕಲನಗಳಿವೆ, ದೊಡ್ಡ-ದೊಡ್ಡ ಕಾದಂಬರಿಗಳಿವೆ. ಯಂಡಮೂರಿಯಿದ್ದಾರೆ, ಬೈರಪ್ಪರಿದ್ದಾರೆ, ತರಾಸು, ಬಿ.ಎಂ.ಶ್ರೀ, ಗಳ ಜೊತೆ ಅಡಿಗರು, ಬೇಂದ್ರೆ, ಕುವೆಂಪು, ಕಂಬಾರರಂತಹ ಶತಮಾನದ ಕವಿಗಳಿದ್ದಾರೆ. ಮಾರ್ಕ್ಸ್, ಮಾವೂವಾದದ ಸಾಕ್ಷ ದಾಖಲೆಗಳಿವೆ. ಸಾಕ್ರಟಿಸ್, ಶೇಕ್ಸ್ಪಿಯರ್, ಯೇಟ್ಸ್ ಸಂಗಡ ನವ್ಯ ಆಂಗ್ಲ ಕಾದಂಬರಿಕಾರರಾದ ಚೇತನ್ ಭಗತ್, ಸಿಡ್ನಿ ಶೆಲ್ಡೋನ್, ಅರವಿಂದ ಅಡಿಗ ಸ್ಥಾನ ಹಂಚಿಕೊಂಡಿದ್ದಾರೆ. ವಿವಾದಾತ್ಮಕ ಬರಹಗಾರರಾದ ಅರುಂದತಿ ರಾಯ್, ಸಲ್ಮಾನ್ ರಶ್ದಿ ಸಹ ಅಲ್ಲಿದ್ದಾರೆ. ಎಡಪಂಥೀಯ ಮತ್ತು ಬಲಪಂಥಿಯ ಬರಹಗಾರರು ಅಲ್ಲಿ ಕುಳಿತೇ ತಮ್ಮ ವಿತಂಡವಾದ ಮಂಡಿಸುತ್ತಿದ್ದಾರೆ. ನಾಟಕ ಸಾಹಿತ್ಯ ಇವುಗಳ ಮಧ್ಯೆ ಮುಗಮ್ಮಗಿ ಕುಳಿತಿದೆ. ಲಂಕೇಶರು ಆರ್ಭಟಿಸುತ್ತಿದ್ದಾರೆ. ತೇಜಸ್ವಿ ಅಚ್ಚರಿ ಮೂಡಿಸುವ ಹೊಸ-ಹೊಸ ವಿಷಯಗಳನ್ನು ತುಂಬಿಸುತ್ತಿದ್ದಾರೆ, ಅನಂತಮೂರ್ತಿಗಳು ಮತ್ತೆ ಮತ್ತೆ ವಿವಾದ ಸೃಷ್ಠಿ ಮಾಡುತ್ತಲೇ ಇದ್ದಾರೆ. ಕಿ.ರಂ ನಾಗರಾಜರ ವಿಮರ್ಷೆಗಳು ಚಾಲ್ತಿಗೆ ಬರುತ್ತಿದೆ. ಕೆಲ ಹಿರಿ-ಕಿರಿ ಸಾಹಿತಿಗಳ ವಿಡಂಭನೆಗಳು, ಪ್ರಸ್ತುತತೆಯ ಕುರಿತಾದ ಬರಹಗಳು ಕಪಾಟಿನ ಸ್ಥಳವನ್ನು ಇನ್ನಿಲ್ಲದಂತೆ ತುಂಬಿಸಿಬಿಟ್ಟಿದೆ. ಅಂತಹ ನನ್ನ ಮಹಾ ಸಾಹಿತ್ಯದ ಕಿರು ಪೆಟ್ಟಿಗೆಯೊಳಗೆ ದೆವ್ವ ಹೊಕ್ಕಿ ಏನು ಮಾಡುತ್ತಿದೆ?  ಒಂದು ವೇಳೆ ಎಡ ಮತ್ತು ಬಲಭಾಗಗಳ, ಪಂಥವಾದಗಳ ರಾಜಿ ಪಂಚಾಯತಿಕೆಯ ಸಂಧಾನ ಮಾಡಿಸುತ್ತಿರಬಹುದೇ? ಅಥವಾ ಎಡಪಂಥೀಯರನ್ನು ಬಲಪಂಥೀಯರನ್ನಾಗಿ, ಬಲಪಂಥೀಯರನ್ನು ಎಡಪಂಥೀಯರನ್ನಾಗಿ ಬದಲಾಯಿಸುತ್ತಿರಬಹುದೇ? ಛೆ,ಛೆ ಹಾಗಾಗಿರಲು ಸಾಧ್ಯವೇ ಇಲ್ಲ. ಒಂದು ವೇಳೆ ಮೂರ್ಖ ಪ್ರಯತ್ನ ಮಾಡಿದರೆ ದೆವ್ವವೆಂಬ ದೆವ್ವ ತನ್ನ ಅಸ್ಥಿತ್ವವನ್ನೆ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ನನ್ನ ತರ್ಕ ನನಗೆ ನಗು ತರಿಸಿತು.
             ಹತ್ತಿರ ಹೋಗುತ್ತಲೇ ದಢಾರ್ ಎಂಬ ಶಭ್ದದೊಂದಿಗೆ ಭಾಗಿಲು ತೆರೆದುಕೊಂಡಿತು. ಇದ್ದ ಭಯ ಇಮ್ಮಡಿಯಾಯಿತು. ಎಲ್ಲಿ ನೀರು ಸೋರುತ್ತಿದೆ ತಿಳಿಯುತ್ತಿಲ್ಲ, ಒದ್ದೆಯಾಗಿರುವುದಂತೂ ನಿಜ. ಓಂ ಭೂರ್ಭುವಸ್ಸುವಃ ತತ್ಸ ವಿತುರ್ವವರೇಣ್ಯಂ............. ತನ್ನಿಂತಾನೆ ಗಾಯಿತ್ರಿ ಮಂತ್ರ ಉಚ್ಛಾರಣೆಯಾಗುತ್ತಿದೆ.

ದೊಡ್ಡ ಧೈರ್ಯ ಮಾಡಿ ಒಳಗೆ ಇಣುಕಿದೆ. ಆಗ ಹೊರಬಂದಿತು. ಮೊದಲು ಸಣ್ಣದು, ಆಮೆಲೆ ಅದರ ಚಿಕ್ಕಮ್ಮ ಇರಬೇಕು (ಅದು ಚಿಕ್ಕಪ್ಪನೇ ಆಗಿದ್ದರೆ ನನ್ನನ್ನು ಲಿಂಗ ತಾರತಮ್ಯ ಮಾಡಿದ್ದೇನೆ ಎಂದು ನ್ಯಾಯಾಲಯದ ಮೊರೆ ಹೋಗದಿರಲಿ ) ಹಿಂದೆಯೇ ದೊಢೂತಿ ಕಾಯದ ಮತ್ತೊಂದು. ಬಹುಷಃ ಒಳಗೆ, ಯಾರು ಮೊದಲು ಹೊರಹೋಗಿ ನನಗೆ ದರ್ಶನ ನೀಡಬೇಕೆಂಬ ಚರ್ಚೆಯಾಗಿರಬೇಕು. ಆಗ ಬಿಸಿರಕ್ತದ ಯುವನಾಯಕ ಮುಂದೆ ಬಂದು ಮಾರ್ಗದರ್ಶನ ನೀಡಿರಬೇಕು. ಇಷ್ಟು ಹೊತ್ತು ಸುಮ್ಮನೆ ಗಾಬರಿಯಾಗಿ, ತರಹೇವಾರಿ ಕಲ್ಪನೆಗಳನ್ನು ಮಾಡಿಕೊಳ್ಳತ್ತಾ ಮೈ ಚಂಡಿ ಮಾಡಿಕೊಂಡ ನನ್ನ ಮೂರ್ಖತನ ನೆನೆದು ತುಟಿಯಲ್ಲಿ ನಗು ಹುಟ್ಟಿತು. ಒಂದು ಕ್ಷಣಕ್ಕೆ ಮೂಷಿಕ ಮಹಿಮೆಯನ್ನು ಶ್ಲಾಘಿಸುವ ಮನಸ್ಸಾಯಿತು. ಆನಂತರ ಮತ್ತೆ ವಾಸ್ತವಕ್ಕೆ ಮರಳಿದೆ. ಕಂಡಿದ್ದು ಒಂದಲ್ಲ, ಎರಡಲ್ಲ ಮೂರು ಮೂರು ಇಲಿಗಳು. ಒಳಗೆ ಅವುಗಳ ವಂಶವಾಹಿನಿಯ ಸಂತಾನಗಳು ಅವೆಷ್ಟಿವೆಯೋ? ನನ್ನ ಪುಸ್ತಕ ಭಂಡಾರ ಉಳಿದಿರುವುದೆಂಬ ಆಶಾ ಭಾವನೆ ನಶಿಸಿಹೋಗತೊಡಗಿತು. ಶೀತಲ ವಾತಾವರಣದ ಘೋರ ಚಳಿಯನ್ನು ಲೆಕ್ಕಿಸದೆ ಉಟ್ಟ ಪಂಚೆಯನ್ನು ಎತ್ತಿ ಕಟ್ಟಿ ಪುಸ್ತಕಗಳ ರಕ್ಷಣೆಗೆ ನಿಂತು ಬಿಟ್ಟೆ.
           ಪುಣ್ಯಕ್ಕೆ ಪುಸ್ತಕಗಳಿಗೇನೂ ಹೆಚ್ಚಿನ ಹಾನಿಯಾಗಿರಲಿಲ್ಲ. ಕೆಳ ಸಾಲಿನಲ್ಲಿ ಇಟ್ಟಿದ್ದ ದಿನ ಪತ್ರಿಕೆಗಳನ್ನು ಮಾತ್ರ ಹರಿದು ತುಂಡು-ತುಂಡು ಮಾಡಿ ಒಂದು ದಿನದ ಉರವಲಿಗಾಗುವಷ್ಟು ಸರಕಾಗಿ ಮಾಡಿದ್ದವು. ಸಿಡಿಮಿಡಿಗೊಳ್ಳುತ್ತಲೆ ಚೂರುಗಳನ್ನು ಒಟ್ಟುಗೂಡಿಸತೊಡಗಿದೆ. ಪುಸ್ತಕಕ್ಕೇನೂ ಹಾನಿಯಾಗಿಲ್ಲವೆಂದುಕೊಂಡಿದ್ದರು, ಅನಂತಮೂರ್ತಿಗಳ ಯಾವುದೋ ಸಂಪ್ರಧಾಯವಾದಿತ್ವವನ್ನು ವಿರೋಧಿಸಿ ಬರೆದಿದ್ದ ಕಾದಂಬರಿಯನ್ನು, ಚೊಕ್ಕಮಾಡಿ ತಿಂದುಬಿಟ್ಟಿದ್ದವು. ಅಹಾ! ಬಹುಷಃ ಇಲಿಗಳು ಬಲಪಂಥೀಯ ಧೋರಣೆಯನ್ನು ತಳೆದಿರಬೇಕು. ಇಲಿಗಳ ವಾಸ್ತವ ಹೂಡಿರುವ ವಿಷಯ ಮೊದಲೇ ತಿಳಿದಿತ್ತಾದರೂ, ಪ್ರಾಣಿಹಿಂಸೆ ಮಾಡಬಾರೆದೆಂಬ ಕಾರಣಕ್ಕೆ ಇಲಿ ಬೋನನ್ನಿಟ್ಟಿರಲಿಲ್ಲ. ಅವುಗಳು ಸಿಂಪಥಿ ಹುಟ್ಟಿಸುವುದಕ್ಕಿಂಥ ಅಸಹ್ಯ ಹುಟ್ಟಿಸುತ್ತಿತ್ತು. ಅದೇ ಕಾರಣಕ್ಕೆ ಕೊಲ್ಲದೆ ಬಿಟ್ಟಿದ್ದು ಮಹಾಪರಾಧವಾಯಿತೇನೋ ಅನ್ನಿಸತೊಡಗಿತು. ಹರಹರ ಮಹಾದೇವ್! ಇನ್ಮುಂದೆ ಎಲ್ಲಾದರೂ ಇಲಿಗಳು ಕಂಡರೆ ಸಂತತಿಯನ್ನೆ ಧಮನ ಮಾಡಿ ಬಿಡಬೇಕು. ರಕ್ತದೋಕುಳಿಯಾಡುವಷ್ಟರ ಮಟ್ಟಿಗೆ ಆಕ್ರೋಷ ಉಕ್ಕಿತು. ಬಹುಷಃ ಜನಮೇಜಯ ಹಾವುಗಳ ಸಂತತಿ ನಿರ್ನಾಮ ಮಾಡುವ ಯೋಚನೆ ಮಾಡಿ, ಸರ್ಪಯಾಗ ಮಾಡಿದಾಗ ಅವನ ಚಿತ್ತದಲ್ಲೂ ಇಷ್ಟೇ ಕ್ರೋಧಾಗ್ನಿ ಮಡುಗಟ್ಟಿತ್ತಿರಬೇಕು. ಆದರೆ ಕಲಿಯುಗದಲ್ಲಿ ಸರ್ಪಯಾಗದಂತೆ ಮಹಾಯಜ್ಞ ಮಾಡಬಹುದೆ? ಉಹುಂ ವಾಸ್ತವಿಕವಾಗಿ ಯೋಚಿಸಿದರು ಇಲಿಗಳ ಸಂತತಿಯನ್ನು ಕೊನೆ ಪಕ್ಷ ನನ್ನ ಮನೆಯಲ್ಲಾದರೂ ಅಳಿಸಹಾಕದಿದ್ದರೆ.... ಬದಲಾಯಿಸಿ ಯಾವ ಹೆಸರಿಟ್ಟುಕೊಳ್ಳಲಿ ಅಂತ ತೋಚದ ಕಾರಣ ಭೀಷ್ಮ ಪ್ರತಿಜ್ಞೆ ಮಾಡಲು ಹೋಗಲಿಲ್ಲ? ನಡು ರಾತ್ರಿ 3 ಗಂಟೆಯ ತನಕ ಸ್ವಚ್ಚತಾ ಕಾರ್ಯ ಸಾಗಿತು. ಬಡಬಡಿಸುತ್ತಲೆ ನಿದ್ದೆಗೆ ಜಾರಿದೆ.
        ಆನಂತರ ಪ್ರತೀ ರಾತ್ರಿ ದೀಪವನ್ನು ಆರಿಸುವಂತಯೇ ಇರಲಿಲ್ಲ. ಬೆಳಕಿನ ಪ್ರಕಾಶವಿದ್ದರೂ ಇಲಿಗಳು ರಾಜಾರೋಷವಾಗಿ ತಮ್ಮದೆ ಸರ್ವಸಾಮ್ರಾಜ್ಯವೇನೋ ಎಂಬಂತೆ ಪಥಸಂಚಲನ ಮಾಡತೊಡಗಿದ್ದವು. ಏನು ಮಾಡಲಿ ಇವುಗಳನ್ನು? ಅಲ್ಪ ಬುದ್ದಿಯನ್ನು ಪೂರ್ತಿಯಾಗಿ ಬಳಸಿ ಶೀರ್ಷಾಸನ ಹಾಕಿ ಯೋಚಿಸಿದರು ಪರಿಹಾರೋಪಾಯ ಕಾಣುತ್ತಿಲ್ಲ. ಬೆಕ್ಕು ತಂದು ಸಾಕೋಣವೆಂದರೆ, ನಮ್ಮ ಮನೆಯ ವಾಸ್ತುವೇ ಸರಿಯಿಲ್ಲ. ಹಿಂದೆ ತಂದಿದ್ದ ಮೂರು ಬೆಕ್ಕಿನ ಮರಿಗಳ ಪಾಡು ಸತ್ಯನಾಶವಾಗಿತ್ತು. ಮತ್ತೆ-ಮತ್ತೆ ಬೋನಿಡುವ ಅಲೋಚನೆ ಬರುತ್ತಿದ್ದರೂ, ಎಷ್ಟೇ ಆದರೂ ತಿಳುವಳಿಕೆಯಿರದ ಜೀವವಲ್ಲವೆ. ಎಲ್ಲ ಅರಿತಿರುವ ಮಾನವ ಜೀವಿಯೇ ಇಷ್ಟೆಲ್ಲಾ ತಪ್ಪು ಮಾಡುತ್ತಾನೆಂದರೆ, ಇಲಿಗಳು ಹಾಗೆ ಮಾಡುವುದರಲ್ಲಿ ತೀರ ಮಹಾಪರಾಧವೇನಲ್ಲ. ನಾನೆ ಅವುಗಳು ನುಸುಳಿ ಬರದಂತೆ ತಡೆದು ಬಿಟ್ಟರೆ? ಮಾರನೆಯ ದಿನವೆ ಕಾರ್ಯೋನ್ಮುಖನಾದೆ. ಶುದ್ದ ಸೂಮಾರಿಯಾದ ನಾನು ಏಣಿ ಇಟ್ಟು ಹಂಚನ್ನೇರಿ, ಗೋಡೆಯ ಸಾಲಿನ ಅಷ್ಟೂ ಹೆಂಚುಗಳನ್ನು ತೆಗೆದು ಗೋಡೆಯ ತೂತುಗಳಿಗೆ ಸಿಮೆಂಟ್ ಕಲೆಸಿ ಮೆತ್ತಿದೆ. ಹಾಗೆ ಸಿಮೆಂಟ್ ತುಂಬುವಾಗ ಅಲ್ಲಿ ನಿರ್ಮಾಣವಾಗಿದ್ದ ಇಲಿಗಳ ಚೆಂದನೆಯ ಗೂಡು ತೆಗೆಯುವಾಗ ಮನಸಿನ ಮೂಲೆಯಲ್ಲಿ, ಅವುಗಳ ನೆಲೆಗೆ ಭಂಗ ತಂದು ಎಂಥಹ ಅಪರಾಧ ಮಾಡುತ್ತಿದ್ದೇನಲ್ಲ ಎನ್ನಿಸಿತು. ಎರಡೂ ಸಾಲಿನ ಹೆಂಚುಗಳ ಸಂದಿಗೊಂದಿಗೆ ಪಾನಿಡುವ ಹೊತ್ತಿಗೆ ಮೈ ಹಣ್ಣಾಗಿತ್ತು.
        ಎಲ್ಲಾ ಸರಿಯಾಯಿತು. ಇನ್ನು ಇಲಿಗಳು ನನ್ನ ಕೋಟೆಗೆ ಲಗ್ಗೆಯಿಡಲಾರವು ಎಂದುಕೊಂಡು ನೆಮ್ಮದಿಯಾಗಿ ಮಲಗಿದೆ. ಒಂದು ಕಡೆ ಇಲಿಗಳ ಆಶ್ರಯ ಹಾಳುಮಾಡಿದ ಭಾವನೆ ತುಯ್ದಾಡುತ್ತಿದ್ದರೂ, ಉಳಿದಂತೆ ಮನಸ್ಸು ಪ್ರಶಾಂತವಾಗಿತ್ತು. ನಡುರಾತ್ರಿ ಸಟ್ಟ ಸರಹೊತ್ತು ಮತ್ತೆ ಎಲ್ಲಿಂದಲೋ ಸರ-ಸರ, ಚರ-ಚರ, ಪರ-ಪರ ಸದ್ದು, ಇಲಿಗಳ ಕಾಟ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಈಗ ಮತ್ತೆ ಆರಂಭವಾಯಿತು. ಬಾರಿ ನಿಜಕ್ಕೂ ಕಳ್ಳ ಹೊಕ್ಕಿರಬಹುದಾ? ಅಥವಾ ದೆವ್ವ? ಎದ್ದು ಮತ್ತೆ ದೀಪ ಬೆಳಗಿಸಿದೆ ಮತ್ತದೆ ದ್ವಿಗುಣಗೊಳ್ಳುವ ಸದ್ದು,  ರ್ಯಾಕ್ ಬಾಗಿಲು ತೆರೆದರೆ ದಢಾರ್ ಶಭ್ದ, ಮತ್ತೆ ಮುಂದೆ ಬಂದು ನಿಂತುಕೊಂಡ ತರುಣ ನಾಯಕ, ಹಿಂದೆ ಕುಟುಂಬ ಅಥವಾ ಸೈನ್ಯ. ಬಾರಿ ಇಲಿಗಳ ಟಾರ್ಗೆಟ್ ಬೈರಪ್ಪ ಇರಬಹುದಾ?
                                                                                                                                -ವಿಪ್ರವಿಶ್ವತ್ (ವಿಶ್ವಾಸ್ ಭಾರದ್ವಾಜ್)
                                         ಸಾಗರ. 

No comments:

Post a Comment