Thursday 9 April 2015

ಪುಟ್ಕತೆ:

ಚಿಕ್ಕಂದಿನಲ್ಲಿ ಆ ಹುಡುಗನಿಗೆ ತರಹೇವಾರಿ ಆಸೆಗಳು..
ಮುಂದೆ ಬೆಳೆದು ದೊಡ್ಡವನಾದಮೇಲೆ ಏನಾಗ್ತೀಯಪ್ಪಾ ಅಂತ ಕೇಳಿದ್ರೆ ಕೂಡಲೆ ಉತ್ತರಿಸೋಕ್ಕಾಗದಷ್ಟು ಆಯ್ಕೆಗಳು ಆತನ ಮುಂದಿದ್ವು..
***
ಅಡುಗೆ ಭಟ್ಟನಾದ್ರೆ ರುಚಿ ರುಚಿಯಾದ ಅಡುಗೆಗಳನ್ನು ಖಾದ್ಯಗಳನ್ನು ಮಾಡಿ ತಿನ್ನಬಹುದು..
ತೋಟದ ಕಾವಲುಗಾರನಾದ್ರೆ ತೋಟದಲ್ಲಿರುವ ಸೀಬೆ, ಕಿತ್ತಳೆ, ಬಾಳೆ, ಮಾವು ಹಲಸು ಹಣ್ಣುಗಳನ್ನು ಬೇಕಾದಾಗೆಲ್ಲಾ ತಿನ್ನಬಹುದು..
ಐಸ್ ಕ್ಯಾಂಡಿ ಮಾರುವವನಾದ್ರೆ ದಿನವೂ ಐಸ್ಕ್ಯಾಂಡಿ ಚೀಪಬಹುದು..
ಬಸ್ ಕಂಡಕ್ಟರ್ ಆದ್ರೆ ದಿನವೂ ಬೇರೆ ಬೇರೆ ಊರುಗಳನ್ನು ಸುತ್ತಬಹುದು..
ಪಾನಿಪುರಿ ಅಂಗಡಿ ಇಟ್ಟರೆ..? ಬೊಂಬಾಯಿ ಮಿಠಾಯಿವಾಲಾ ಆದ್ರೆ..? ಬೆಲೂನು ಮಾರೋನಾದ್ರೆ..? ಜಾತ್ರೆಯಲ್ಲಿ ಆಟದ ಸಾಮಾನುಗಳ ಅಂಗಡಿ ಮಾಲೀಕನಾದ್ರೆ..?
***
ಕೊಂಚ ಬೆಳೆದು ದೊಡ್ಡವನಾದ ಮೇಲೆ ಆಯ್ಕೆಗಳು ಬೇರೆ ತರಹದ್ದಾಯ್ತು..
ಮಾಸ್ಟರ್ ಆದ್ರೆ ಹುಡುಗ್ರಿಗೆ ಬೆತ್ತ ತೋರಿಸಿ ದರ್ಪ ಮೆರೆಯಬಹುದು...
ಪೊಲೀಸ್ ಆದ್ರೆ ಫೈಟಿಂಗ್ ಮಾಡಬಹುದು, ಶೂಟ್ ಮಾಡಬಹುದು...
ಡಾಕ್ಟರ್ ಆದ್ರೆ ಆಪರೇಷನ್ ಮಾಡಬಹುದು...
ಎಂಜಿನಿಯರ್ ಆದ್ರೆ ಅಪ್ಪ ಕಟ್ಟಿದ ಮನೆಗಿಂತ ದೊಡ್ಡ ಮನೆ ಕಟ್ಟಬಹುದು...
***
ಹುಡುಗ ಕಾಲೇಜು ಸೇರಿದ.. ಸುಂದರಿ ಒಬ್ಬಳ ಪ್ರೇಮದ ಪಾಶದಲ್ಲಿ ಬಂಧಿಯಾದ..
ಅವನ ಚಿತ್ತವೆಲ್ಲಾ ಅವಳ ಸೆಳೆಯುವ ಸುತ್ತಲೇ ಓಡಾಡಿತು...
ಅವಳ ಗುಂಗಲ್ಲಿ ಅವನ ಹಳೆಯ ಕನಸುಗಳಲ್ಲೇ ಮರೆಯಾಯ್ತು...
ಕೆಲವು ಕಾಲದ ಬಳಿಕ ಅವಳಿಗೆ ಬೇರೆ ಗಂಡಿನೊಂದಿಗೆ ಮದುವೆಯಾಯ್ತು.. ಅವಳು ದೇಶ ಬಿಟ್ಟಳು; ಇವನು ಬಾರು ಸೇರಿದ...ಬಹಳಷ್ಟು ವರ್ಷ ಅವಳ ನೆನಪಲ್ಲಿ ಗಡ್ಡ ಬಿಟ್ಟು ಹೆಂಡದಂಗಡಿಯ ಖಾಯಂ ನೌಕರನಂತಾದ..
ಕೊನೆಗೆ ಮನೆಯವರೆಲ್ಲಾ ಮದ್ದು ಮಂತ್ರ ಮಾಡಿಸಿ ಕುಡಿತ ಬಿಡಿಸಿದ್ರು.. ಮಂತ್ರ ಹಾಕಿ ಮದ್ದು ಕೊಟ್ಟ ಆಶ್ರಮದಲ್ಲಿ ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ವಹಿಸಿದ..
***
ಈಗವನು ಖಾದಿ ತೊಟ್ಟಿದ್ದಾನೆ.. ಆ ಮಠದ ಕಿರಿಯ ಸ್ವಾಮಿಯಾಗಿ ಪಟ್ಟ ಕಟ್ಟಲಾಗಿದೆ..
ಪ್ರತಿ ನಿತ್ಯ ಪ್ರವಚನಗಳಲ್ಲಿ ಜೀವನ ನಶ್ವರ.. ಆಸೆಯೇ ದುಃಖಕ್ಕೆ ಮೂಲ ಅನ್ನುವ ದಿವ್ಯವಾಣಿ ಉಪದೇಶಿಸುತ್ತಾನೆ.. ನೆರೆತ ಮುಖದ ಮುದುರಗಳ ಹಿಂದೆ ಕಂಡೂ ಕಾಣಿಸದ ವೇದನೆ ಇದೆ..
***
ಏನೋ ಇತ್ತೀಚೆಗೆ ಸನ್ಯಾಸತ್ವ ಬಿಟ್ಟು ಲೌಕಿಕ ಬದುಕು ನಡೆಸುತ್ತೀನಿ ಅನ್ನುವ ಮಾತುಗಳು ಶ್ರೀ ಶ್ರೀ ಶ್ರೀ.. ಯವರ ಬಾಯಲ್ಲಿ ಕೇಳಿ ಬರ್ತಿದೆಯಂತೆ..
ಯಾಕಂದರೆ, ಅವರ ಪೂರ್ವಾಶ್ರಮ ಯೌವನ ಕಾಲದ ಸ್ವಪ್ನ ಸುಂದರಿ, ತನ್ನ ಜೀವನದಲ್ಲಿ ಜಿಗುಪ್ಸೆ ಹೊಂದಿ ಈಗ ಅವನ ಆಶ್ರಮ ಸೇರಿಕೊಂಡಿದ್ದಾಳಂತೆ..
ಮತ್ತೆ ಸಣ್ಣಗೆ ಪ್ರೇಮಾಲಾಪ ಶೃತಿಯಾಗುತ್ತಿದೆ..
-ವಿಶ್ವಾಸ್ ಭಾರದ್ವಾಜ್

No comments:

Post a Comment